ಎಂ ಆರ್ ಕಮಲ
*
ಮೂಲೆಗೆ ಕೂರಿಸಿದ್ದ ಮುದುಕಿಗೆ
ಮನೆಯ ಗಲಗಲ ಅಚ್ಚರಿಯಾದರೂ
ಅವಳ ದಿನಚರಿ ಮಾತ್ರ ಬದಲಾಗಿಲ್ಲ
ಯಥಾಪ್ರಕಾರ ಊಟದ ತಟ್ಟೆಯನ್ನು
ಯಾರೋ ತಂದು ಮುಂದೆ ಕುಕ್ಕುತ್ತಾರೆ
ಎರಡೇ ಮಾತಾಡಿ ಕೈತೊಳೆದುಕೊಳ್ಳುತ್ತಾರೆ
ಮುಟ್ಟಬಾರದ, ಮುಟ್ಟಿಸಿಕೊಳ್ಳದ ದಿನ!
*
ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ಅಡುಗೆಗೆ ಏನು,
ಏನು ಎಂದಲ್ಲೊಬ್ಬಳು ಯೋಚಿಸುತ್ತಿದ್ದಾಳೆ
ಥೈ ತಕ ಕುಣಿವ ಚಿಳ್ಳೆಗಳ ಸಂಭಾಳಿಸಬೇಕು
ಪಾತ್ರೆ, ಬಟ್ಟೆ, ಕಸ.. ಮುಗಿಯದ ನೂರು ಹೊರೆ
ಕೆಲಸದವಳಿಗೆ ಬರಬಾರದೆಂದು ಹೇಳಿಯಾಗಿದೆ
ಮುಟ್ಟಬಾರದ, ಮುಟ್ಟಿಸಿಕೊಳ್ಳದ ದಿನ
*
ಮನೆಯಲ್ಲೆಂದೂ ಕೂರದವನು ರೇಗುತ್ತಾನೆ,
ಸಣ್ಣದಕ್ಕೂ ಕಿಡಿಕಿಡಿಯಾಗುತ್ತಾನೆ
ಬಿದ್ದ ಅಷ್ಟೂ ಕೆಲಸಗಳ ಮುಗಿಸುವುದು ಹೇಗೆ?
ಯಾರು ಯಾವುದನ್ನು ತನ್ನ ತಲೆಗೆ ಕಟ್ಟುವರೋ
ಕಚೇರಿಯವರು ಬರುವುದೇ ಬೇಡವೆಂದಿದ್ದಾರೆ
ಮುಟ್ಟಬಾರದ, ಮುಟ್ಟಿಸಿಕೊಳ್ಳದ ದಿನ
*
ಹದಿಹರೆಯದ ಹುಡುಗ- ಹುಡುಗಿ ಮೊಬೈಲ್ನಲ್ಲಿ
ಹುಡುಕಿದರೂ ಸಿಕ್ಕದಂತೆ ಕಳೆದುಹೋಗಿದ್ದಾರೆ
ಕೋಣೆಯಿಂದಾಚೆ ಕಾಲಿಡುವುದಕ್ಕೇನಿದೆ!
ಕ್ವಾರಂಟೈನ್ ಆಗಿ ಎಷ್ಟು ಕಾಲವಾಯಿತೋ
ಈಗಂತೂ ಮುಟ್ಟಬಾರದ, ಮುಟ್ಟಿಸಿಕೊಳ್ಳದ ದಿನ
*
ಕವಿತೆಯನ್ನೇ ಹೊತ್ತು ತಿರುಗುತ್ತಿದ್ದವಳಿಗೆ
ಸಂಕಟಗಳ ಮುಕ್ಕದ, ಕಕ್ಕದ ಒದ್ದಾಟ
ಅವಳ ಕವಿತೆ ಕ್ವಾರಂಟೈನ್ ಆಗಿದೆ!






ಚೆನ್ನಾಗಿದೆ ಮೇಡಂ
ಚೆನ್ನಗಿದೆ ಕಮಲಾ ಮೇಡಂ… ಹೆಣ್ಣಿಗಷ್ಟೆ ಸೀಮಿತವಿದ್ದ ಮೈಲಿಗೆ ಈಗ ಎಲ್ಲರ ಪಾಲು..
good