ಆರ್ ಎನ್ ದರ್ಗಾದವರ
ಲೋಕಾಂತವಾಗಿ ಪುಟಗಟ್ಟಲೇ ದಾಖಲಾಗಿಬಿಡುವ ಅವಳು
ತೋರ್ಬೆರಳು ಎಚ್ಚರವಾದಾಗ ಪಕ್ಕನೆ ಅವಿತು ಬಿಡುತ್ತಾಳೆ
ಥೇಟ್ ಹಾಲು ಕುಡಿಯುವಾಗ ಸಿಕ್ಕುಬಿದ್ದ ಬೆಕ್ಕಿನಂತೆ
ಇಳಿಸಂಜೆಯಲಿ ಹೊಸ್ತಿಲ ಬಳಿ ಪ್ರವೇಶಕ್ಕೆ
ಹಾತೊರೆಯುವ ಕತ್ತಲಿಗೆ ಮೂತಿ ತಿವಿದು
ಬೆಳಕಿನ ಬುಗ್ಗೆ ಹರಿಬಿಡುವ ಅವಳು
ಕತ್ತಲನ್ನೇ ಹೊತ್ತು ತಿರುಗುತ್ತಾಳೆ
ನವಿಲಿನ ಕುಣಿತದೊಂದಿಗೆ ಹೋಲಿಕೆಗೆ ಸಲ್ಲುವವಳು
ಸದಾ ಕುಂಟು ನೆಪ ಹೂಡುತ್ತಾಳೆ
ಮೃದುಗಾಳಿಗೆ ಹದನಾಗುವ ಅವಳಲ್ಲಿ ಬಿರುಗಾಳಿಯ ಪ್ರಚಂಡಶಕ್ತಿ
ಹುಡಿಯಾಡುವ ಬೀದಿ ತುಂಬ ಈಗ
ಅವಳದೇ ಮಾತು
ರಾತ್ರಿಯಲ್ಲಿ ನಕ್ಷತ್ರಗಳನು ಮೋಹಿಸುವ ಆಕೆ
ಹಗಲಿನಲ್ಲೇ ಆಕಾಶ ನೋಡುತ್ತಾಳೆ

ತಪ್ಪಿಯಾದರೂ ಒಂದಾದರೂ ಸಿಗಬಾರದೇ
ಗುಲಾಬಿಯಂದು ತಿಳಿದ ಅವಳು ಮಲ್ಲಿಗೆಯಂತವಳು
ರಕ್ತದಲ್ಲಿ ಮಿಂದೆದ್ದಿದ್ದಾಳೆ
ತೆರದ ಬಾಗಿಲಿನ ಕೋಣೆಯಲಿ ಬಂದಿಯಾಗಿರುವ ಆಕೆ
ಮುಕ್ತವಾಗಿ ಹಂಚಿ ಹೋದ ಬಟಾಬಯಲು
ಕ್ಯಾಮರಾಗಣ್ಣಿಗೆ ಅವಿತುಬಿಡುವ ಆಕೆ
ಎತ್ತೆತ್ತಲೋ ಆಂತರಿಕ ಸುಳಿಯಾಗಿ ಹರಿಯುವ ಗುಪ್ತಗಾಮಿನಿ
ಮುದುಡಿಯಾದ ಹಾಸಿಗೆಯ ಮಡಿಕೆಯೊಡಲಲಿ
ಕನಸುಗಳ ಸಂಗ್ರಹಿಸಿಟ್ಟ ಅವಳು
ಹೊರಬರದಂತೆ ಕಟ್ಟಪ್ಪಣೆ ಹೊರಡಿಸಿದ್ದಾಳೆ
ತಾನಾಯಿತು ಇನ್ನು ಕನಸಾಯಿತು….






0 Comments