ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು ಪಿಸುಮಾತಿನಲ್ಲಿ ಹೇಳಿದಳು..

ಸೌಮ್ಯ ಭಾಗವತ್ 

ನನ್ನ ಪರಿಚಯದವರ ಮಗ ‘ವಿನೀತ್’, ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಮನೆಯಲ್ಲಿ ಒಬ್ಬನೇ ಮಗ ! ಕನ್ನಡವೆಂದರೆ ಅಲರ್ಜಿ, ಅಸಡ್ಡೆ. ವಯಸ್ಸಿಗೆ ಮೀರಿದ ಬುದ್ಧಿವಂತಿಕೆ ಆತನದು. ಅಪ್ಪನಿಗೆ ಮಗನೆಂದರೆ ಅತಿಮುದ್ದು. ವಿಷಯಗಳನ್ನು ಹೆಂಡತಿಯ ಹತ್ತಿರ ಚರ್ಚಿಸುವ ಬದಲು ಮಗನ ಬಳಿ ಚರ್ಚಿಸುವ ಅಪ್ಪ! ಮಗ ಅಮ್ಮನಿಗೆ ಬೈದರೆ ನಡೆದೀತು, ಆದರೆ ಅಮ್ಮ ಮಗನಿಗೆ ಬೈಯ್ಯಬಾರದು ಎನ್ನುವ ಅಪ್ಪ!

girl child on chairಒಮ್ಮೆ ನನ್ನ ಬಳಿ ಕನ್ನಡ ಕಲಿಸುವಂತೆ ಕೇಳಿಕೊಂಡರು. ‘ಸರಿ’ ಎಂದು ಒಪ್ಪಿದೆ. ಬಹಳ ಮಕ್ಕಳಂತೆ ಈ ಹುಡುಗನಿಗೂ ‘ಅ’ ಕಾರ ಮತ್ತು ‘ಆ’ ಕಾರದ ನಡುವಣ ವ್ಯತ್ಯಾಸ ತಿಳಿದಿರಲಿಲ್ಲ. ಕಲಿಕೆಗಿಂತ ಆಸಕ್ತಿ ಉಳಿದ ವಿಷಯದಲ್ಲಿ. ಮಾತೆತ್ತಿದರೆ ಲೋಕ್ಲಾಸ್ ಪೀಪಲ್, ಬ್ರಾಂಡೆಡ್ ವಸ್ತುಗಳು, ಅವನ ಹೊಸ ಟ್ಯಾಬ್ಲೆಟ್, ಫಾರಿನ್ ಟ್ರಿಪ್ ಎಂದು ಮಾತನಾಡುತ್ತಿದ್ದ. ಅವನಿಗೆ ಬರೆಯಲು ‘ಪಾರ್ಕರ್’ ಪೆನ್ನುಗಳೇ ಬೇಕು! ನನಗೆ ಇನ್ನೂ ಪೆನ್ ಅಂದರೆ ನೆನಪಾಗುವುದು Renold’s ನೀಲಿ ಬಿಳಿಯ ಪೆನ್ನುಗಳೇ.

ನನಗಂತೂ ಅವನ ವಯಸ್ಸಿಗೆ ಮೀರಿದ ಮಾತುಗಳು ಬೇಸರ ತರಿಸುತ್ತಿದ್ದವು. ಒಮ್ಮೆ ” ನಿಮ್ಮ ವಾಚು ಯಾವುದು ?” ಎಂಬ ಪ್ರಶ್ನೆ ತೂರಿಬಂದಿತ್ತು ಅವನಿಂದ. “ಟೈಟಾನ್” ಎಂದೆ. ” ನಿನ್ನೆ ನನ್ನಪ್ಪ ನನಗೆ ಒಂದುವರೆಲಕ್ಷದ Tissot ತೆಗೆಸಿ ಕೊಟ್ಟಿದ್ದಾರೆ why can’t you buy a Tissot or Fossil?” ಎಂದ. “ಆ ವಾಚುಗಳನ್ನು ಕಟ್ಟಿಕೊಂಡರೆ ನನಗೆ extra ಟೈಮ್ ಸಿಗುತ್ತದೆಯೋ? ಅಥವಾ ಆ ವಾಚುಗಳು ಬೇರೆ ಸಮಯವನ್ನು ತೋರಿಸುತ್ತದೆಯೋ ? ” ಎಂದು ಮರುಪ್ರಶ್ನಿಸಿದೆ. ಸುಮ್ಮನಾದ ವಿನೀತ’!

ಬಾಲ್ಯ, ಮುಗ್ಧತೆ , generation gap ಇವೆಲ್ಲ ಶಬ್ದಗಳ ಜೊತೆಗೆ ಅತಿಯಾಗಿ ಕಾಡಿದ್ದು ಜಯಶ್ರೀಯ ನೆನಪು !

ನಾನಾಗ ಮೂರನೆಯದೋ ನಾಲ್ಕನೆಯದೋ ತರಗತಿಯಲ್ಲಿದ್ದೆ, ಅವಳು ನನಗಿಂತ ಒಂದು ಕ್ಲಾಸು ಹೆಚ್ಚು ಕಲಿಯುತ್ತಿದ್ದಳು. ಹೆಸರು ಜಯಶ್ರೀ ! ನಮ್ಮ ಮನೆಯ ಕಣ್ಣಳತೆಯಲ್ಲಿದ್ದ ಕನ್ನಡಶಾಲೆಯಲ್ಲಿ ಶುರುವಾಗಿತ್ತು ನಮ್ಮ ಗೆಳೆತನ. ಒಳಗೆ ಚಮಚೆ, ಹುಟ್ಟು, ಪ್ಲೇಟುಗಳ ಬೀಜಗಳಿರುವ ಕುಸುಮಾಲೆ ಹಣ್ಣು, ಬಟರ್ ಫ್ರೂಟ್ ಹಣ್ಣಿನ ತಮ್ಮ ಬಿಳೇ ಮುಳ್ಳಣ್ಣು, ಹಸೀ ಗೇರುಬೀಜ, ಹಳಚಾರೆ ಹಣ್ಣು ನನಗೆ ಇವೆಲ್ಲದರ ರುಚಿ ಹತ್ತಿಸಿದವಳು ಇವಳೇ ! ಕಲ್ಲರೆಗೆ (ಮನೆ ಕಟ್ಟುವ ಕೆಂಪು ಕಲ್ಲು ತೆಗೆಯುವ ಕೆಲಸ) ಹೋಗುತ್ತಿದ್ದ ಅಪ್ಪ, ಗೇರುಬೀಜದ ಫ್ಯಾಕ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನಿಗೆ ಮನೆಗೆಲಸದಲ್ಲಿ ಇವಳೇ ಆಸರೆ. ಜೊತೆಗೆ ಬೆನ್ನಿಗೆ ಬಂದ ತಂಗಿ ತಮ್ಮಂದಿರ ಜವಾಬ್ದಾರಿ ಬೇರೆ! ನನ್ನ ಹಳೆಯ ಅಂಗಿಗಳೆಲ್ಲ ಅವಳ ತಂಗಿಯರ ಕುಮಟೆಗೆ ಹೋಗುವಾಗ ತೊಡುವ ಅಂಗಿಗಳಾಗಿದ್ದವು !

ಅವಳ ಅಪ್ಪನಿಗೆ ಗಾಯವಾದ ವಿಷಯ, ದೊಡ್ಡಮ್ಮನ ಮಗಳು ಬೊಂಬಾಯಿಯಿಂದ ಬರುವಾಗ ಚೂಡಿದಾರ್ ತಂದ ವಿಷಯ, ಅಮ್ಮನಿಗೆ ಬೊನಸ್ ಕೊಟ್ಟ ವಿಷಯ, ಮಾವ ಬಂದಾಗ ಐವತ್ತು ರೂಪಾಯಿ ಕೊಟ್ಟ ವಿಷಯ , ನವೆಂಬರ್ ಡಿಸೆಂಬರಿನಲ್ಲಿ ಬಿಡುವ ಕರೀ ಸೂಜಿ ಹಣ್ಣಿನ ವಿಷಯ ಇಂಥವುಗಳನ್ನೆಲ್ಲ ನನ್ನಲ್ಲಿ ಹೇಳಿಕೊಳ್ಳುತ್ತಿದ್ದಳು.

ಒಂದು ಸಂಜೆಯ ನಾಲ್ಕುವರೆಯ ಆಟದ ಸಮಯದಲ್ಲಿ, ನನ್ನ ಬಳಿ ಬಂದವಳೇ ನನ್ನ ಕೈಹಿಡಿದು ಧ್ವಜದ ಕಟ್ಟೆಯ ಬಳಿ ಕರೆದೊಯ್ದಳು. ಅದು ನಾವಿಬ್ಬರೂ ಕೂತು ಮಾತನಾಡುವ ಮಾಮೂಲಿ ಜಾಗ. ಹೋದವಳೇ “ಸೌಮ್ಯಾ, ನಾನೇನೋ ಹೇಳಬೇಕು.‌ ಯಾರಿಗೂ ಹೇಳುವುದಿಲ್ಲವೆಂದು ಭಾಷೆಕೊಡು” ಎಂದಳು.‌ ನಾನು ಅನುಮಾನಿಸುತ್ತಲೇ ಅವಳ ಅಂಗೈ ಮೇಲೆ ನನ್ನ ಕೈ ಇಟ್ಟೆ.

ನನ್ನ ಕಿವಿಯ ಹತ್ತಿರ ಬಂದು ” ನಮ್ಮನೆಯಲ್ಲಿ ಗಡಿಯಾರ ತಂದಾರೆ, ಚಂದ ಉಂಟು! ಯಾರಿಗೂ ಹೇಳ್ಬೇಡ ಹಾಂ..” ಎಂದಳು.‌ ಪಡುವಣ ರವಿಯ ಬಣ್ಣದ ಅಂಗಿಯಲ್ಲಿ ಅವಳ ಆ ಪರಮ ಸಂತೋಷದ ಮುಖ ಸೂರ್ಯನಂತೆ ಬೆಳಗುತ್ತಿದ್ದದ್ದು ಈಗಲೂ ನನ್ನ ಮನದಲ್ಲಿ ಅಚ್ಚೊತ್ತಿದೆ! ಇನ್ನೂ ಹುಡುಕುತ್ತಲೇ ಇದ್ದೇನೆ ಅಷ್ಟು ಖುಷಿಯ ಸೂರ್ಯಕಾಂತಿಯ ಮುಖಗಳಿಗೆ!

ಬಾಲ್ಯ ಬುದ್ಧಿವಂತವಾಗಿರದಿದ್ದರೂ ಅಡ್ಡಿಯಿಲ್ಲ, ಮುಗ್ಧವಾಗಿಯಂತೂ ಇರಲೇಬೇಕು!

‍ಲೇಖಕರು Admin

12 December, 2016

1 Comment

  1. Sarojini Padasalagi

    ತುಂಬಾ ಸುಂದರ ಬರಹ ಸೌಮ್ಯಾ ಅವರೇ. ನಾನೂ ಆ ಮುಗ್ಧ ಬಾಲ್ಯದ ಹುಡುಕಾಟದಲ್ಲಿದೀನಿ. ಎಲ್ಹೋದವು ಆ ದಿನಗಳು ? ಈ ಅತೀ ಸುಧಾರಿತ , ಶ್ರೀಮಂತರ ಸಮಾಜದಲ್ಲಿ ಎಲ್ಲೋ ಅದು ಕಳೆದು ಹೋಗಿದೆ. ಯಾರಿಗಾದರೂ ಅದು ಸಿಕ್ಕಿದರೆ ನನ್ನತ್ತ ಕಳಿಸ್ತೀರಾ ಎಂದು ಕೇಳುವಾಸೆ ಈ ಉಸಿರುಗಟ್ಟಿಸುವ ವಾತಾವರಣದಲ್ಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading