ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರೆಲ್ಲರೂ ಎಲ್ಲಿರುವರೋ? ಹೇಗಿರುವರೋ?!

ನಾಳೆಗಳಿಗಾಗಿ

ಶ್ಯಾಮಲಾ ಮಾಧವ, ಮುಂಬೈ.

Ghatkopar is at high risk ಎಂದು ಬಂದ ಪೋಸ್ಟ್ ಕಳಿಸಿ, Don’t go out, Doddama, ಎಂದು ಬರೆದಳು, ಸುಬರ್ಣಾ.

ಸಾಹಿತ್ಯಿಕ ಕಾರ್ಯಕ್ರಮಗಳಿಗಾಗಿ, ಅನಿವಾರ್ಯ ಕೌಟುಂಬಿಕ ಭೇಟಿಗಳಿಗಾಗಿ ಹೊರತು, ಎಲ್ಲರೂ ನೆಚ್ಚುವ ವಾಕಿಂಗ್ ಗಾಗಿಯೂ ಮನೆಯಿಂದ ಹೊರಗಿಳಿಯದೆ ನನ್ನ ಬರಹಗಳಲ್ಲೇ ಮುಳುಗಿರುವವಳು, ನಾನು. ಪಾರ್ಕ್ ನ ರೆಂಜೆಮರ, ರಸ್ತೆಯ ಅತ್ತಿ, ನಾಗಸಂಪಿಗೆ ಮರಗಳು ಕರೆದರೂ, ಕೆಳಗಿಳಿಯದವಳು.

ಮಾರ್ಚ್ ತಿಂಗಳು ಬಂದಿದೆ, ಯುಗಾದಿ ಸಮೀಪಿಸಿದೆ, ನನ್ನ ಸುರಗಿ ಹೂ ಬಿಡುವ ಕಾಲ, ಚೆಂಬೂರ್ ಸ್ಟೇಶನ್ ಸಮೀಪ  ನನ್ನ ಹೂವಾಡಗಿತ್ತಿಯ ಬಳಿಗೆ ಹೋಗಬೇಕು. ಕಳೆದ  ವರ್ಷ ಸುರಗಿ ಸಿಕ್ಕಿರಲಿಲ್ಲ. ಕಳೆದ ವಾರ ಹೋದಾಗ, ಈ ಬಾರಿಯಾದರೂ ಸಿಕ್ಕೀತೇ ಎಂದು ಕೇಳಿದಾಗ, ‘ಆವೋ, ಮಿಲೇಗಾ, ಕಿತ್ನಾ ಭೀ ಮೆಹಂಗಾ ಹೋ,  ತುಮ್ಹಾರೇ ಲಿಯೇ  ಲೇಕೇ ಆಯೇಗಾ’ ಎಂದಿದ್ದಳು. ಅವಳ ಪಕ್ಕವೇ ಇರುವ ಪೇಪರ್ ಸ್ಟಾಲ್ ನವನು
ನಾನು ಮುಖ ನೋಡಿದೊಡನೆ, ‘ಯುಗಾದಿ ಸ್ಪೆಶಲ್ ಲೇಕೇ ರಖೇಗಾ ಮಾಮಿ, ಅಗಲೇ ಹಫ್ತೇ ಆ ಜಾನಾ’, ಅಂದಿದ್ದ.

ಅತ್ತ ಬಾಳೆಲೆಯವನ  ಬಳಿಗೆ ಬಾಳೆ ದಿಂಡಿಗಾಗಿ ಹೋದಾಗ, ವಣಕ್ಕಮ್ ಮಾಮೀ ಎಂದವನು, ಏನು ಕಾಣಿಸುತ್ತಿಲ್ಲ? ನೀವು ಬರುತ್ತಿರಬೇಕು. ನಿಮ್ಮನ್ನು ನೋಡಿದರೆ ನಮಗೆ ಒಳ್ಳೆಯದಾಗುತ್ತದೆ. ಹೀಗೆ ಇಷ್ಟು ಸಮಯ ಬರದಿರಬೇಡಿ, ಎಂದಿದ್ದ ತಮಿಳಿನಲ್ಲಿ.. ಫ್ಲೈ ಓವರ್ ಕೆಳಗೆ ಕುಳಿತ ಹಲಸಿನ ಹಣ್ಣಿನವ, ವಾಂಗೋ, ವಾಂಗೋ ಮಾಮಿ, ಎನ್ನುತ್ತಾ ಸೊಳೆ ಕಿತ್ತು ಕೈಗಿತ್ತ..ಪಾವ್ ಕಿಲೋ ಎಂದವಳು, ರುಚಿಗೆ ಮನಸೋತು, ಆಧಾ ಕಿಲೋ ಇರಲೆಂದೆ. ಕಳೆದ ಸಲ ಬಂದು, “ಮಾಯಾಲು (ಬಸಳೆ ) ನಹೀಂ ಹೆ ಕ್ಯಾ?” ಎಂದು ಕೇಳಿದಾಗ, “ಮಾಯಾಲು ಗೇಲಾ ಗಾಂವಾಲಾ”  ಎಂದು ಛೇಡಿಸಿದ್ದ ಸೊಪ್ಪಿನವಳು, ಈಗ ಇಷ್ಟಗಲ ನಗುತ್ತಾ ಸೊಂಪಾಗಿ ಕಾಣಿಸುತ್ತಿದ್ದ ಬಸಳೆ ಕಟ್ಟು ಸುತ್ತಿ ಕೊಟ್ಟಳು.

ನಮ್ಮ ಘಾಟ್ ಕೋಪರ್ ಬಾಜಿಗಲ್ಲಿಯ ತರಕಾರಿಯವರು, ‘ಕ್ಯೋಂ ಭಾಭೀ, ದಿಖತೇ ನಹೀಂ?  ಮುಲುಕ್ ಗಯೇ ಥೇ ಕ್ಯಾ?  ಲೇ ಲೋ ಲೇ ಲೋ’ ಎಂದು ಚೀಲ ತುಂಬಿಸಿದ್ದರು. ಶೇವ್ ಪುರಿಯಾತ, ‘ಆವೋ ಭಾಭೀ,  ಬಿನಾ ಕಾಂದಾ ನಾ ? ಕ್ಯಾ ಆಪ್ ಆತೇ ನಹೀಂ?’ ಎಂದಿದ್ದ. ತನ್ನ ತಾತ್ಕಾಲಿಕ ಶೆಡ್ ಹಾಕುತ್ತಿದ್ದ  ಮಾವಿನ ಭಯ್ಯಾನನ್ನು  ಕಂಡು, ‘ಕ್ಯಾ ಆ ಗಯಾ ಕ್ಯಾ ಆಮ್?’ ಎಂದು ನಗುವರಳಿ ಕೇಳಿದಾಗ,  ‘ಬಸ್, ದೋ ತೀನ್ ದಿನ್ ಮೇ, ಭಾಭೀ’ ಎಂದಿದ್ದ, ನಗುತ್ತಾ.

ಎಲ್ಲರೂ ಇಂದು ನೆನಪಾಗುತ್ತಿದ್ದಾರೆ. ಹೌದು, ಪ್ರೀತಿಯಿಂದ ಮಾತನಾಡಿಸುವ, ಸ್ವಲ್ಪ ಹೆಚ್ಚೇ ಹಾಕಿ ಕೊಡುವ ಅವರ ಬಳಿಗೆ ಆಗಾಗ ಹೋಗಬಹುದಿತ್ತು. ಬರಹದಲ್ಲಿ ತಾದಾತ್ಮ್ಯ ಮತ್ತು ಹೊರಹೊರಡಲು ಸ್ವಲ್ಪ ಮಟ್ಟಿನ ಆಲಸ್ಯ ನನ್ನನ್ನು ಹೋಗದಂತೆ ತಡೆಯಿತು. ಈಗ ಹಲವರಂತೆ  ನಾನಿಲ್ಲಿ ಮನೆಯೊಳಗೆ ಬಂಧಿ. ಅವರೆಲ್ಲರೂ ಎಲ್ಲಿರುವರೋ? ಹೇಗಿರುವರೋ?! ಪುನಃ ಕಾಣಲಿರುವೆವೇ?)

‍ಲೇಖಕರು avadhi

24 March, 2020

6 Comments

  1. Deepak Uchil

    ತುಂಬಾ ಚೆನ್ನಾಗಿ ಭಾವನೆಗಳನ್ನು ಚಿತ್ರಿಸಿದ್ದೀರಿ. ಎಲ್ಲರ ಮನಸ್ಸಿನ ದುಗುಡವೂ ಇದೇ..
    ಆದಷ್ಟು ಬೇಗ ಈ ಭಯದ ಕಾಳಮವಾಸ್ಯೆ ಕಳೆದು ಅರೋಗ್ಯದ ಬೆಳಕು ಬೀರಲಿ..!

    • Shyamala Madhav

      ಥ್ಯಾಂಕ್ಸ್ ದೀಪೂ.

  2. Vasudeva Uchil

    ವಾಸುದೇವ ಉಚ್ಚಿಲ : ‌ ‘ಅವಧಿ’ಯನ್ನು ಕಂಡುದೇ ಇದು ಮೊದಲು. ಅಕ್ಕನ ಬರಹ ಇದೆ ಎಂದು . ನಿಮ್ಮ ಮುಂಬಯಿ ಬಗ್ಗೆ ಬರಹಗಳು ಯಾವಾಗಲೂ ಚೆನ್ನಾಗಿರುತ್ತದೆ . ಇದೂ ಕೂಡಾ.

  3. Shyamala Madhav

    ಥ್ಯಾಂಕ್ಯೂ ವಾಸೂ.

  4. Jayalaxmi Patil

    ನಮ್ಮನೆ ಎದುರು ನಿತ್ಯವೂ ಸೈಕಲ್ಲಿನ ಮೇಲೆ ತರಾವರಿ ಸೊಪ್ಪುಗಳು ತುಂಬಿದ ದೊಡ್ಡದೊಂದು ಬುಟ್ಟಿ, ಅದರ ಎರಡೂ ಹ್ಯಾಂಡಲ್ ಗಳಿಗೆ ನಿಂಬೆಹಣ್ಣು, ಅಲ್ಲಾ (ಹಸಿ ಶುಂಠಿ) ಹಾಕಿರುವ ಚೀಲ ಹಾಕಿ ಮಾರಲು ಬರುತ್ತಿದ್ದ ಆ ಅಣ್ಣನನ್ನು ನಾನೂ ನೆನೆಯುತ್ತಿರುವೆ ಶ್ಯಾಮಲಾ. ಹೇಗಿರುವನೋ ಏನೋ ಎಂದು. ಏರಿಯ ಮೇಲಿರುವ ನಮ್ಮ ಏರಿಯಾಕ್ಕೆ ಆ ಭಾರ ಹೊತ್ತ ಸೈಕಲ್ಲನ್ನು ತಳ್ಳುತ್ತಾ ಆ ಬಡಕಲು ದೇಹದ ಮನುಷ್ಯ ಬರುವುದೇ ಆತನ ಅನಿವಾರ್ಯತೆಯನ್ನು ಸಾರುತ್ತಿತ್ತು. ಈಗ ಏನು ಮಾಡಬಹದು ಅವನು…?

  5. Shyamala Madhav

    ಹೌದು, ಜಯಲಕ್ಷ್ಮೀ, ಕೊರೋನಾ ಈಗಿಂದೀಗಲೇ ಲೋಕದಿಂದ ಲೇ ತೊಲಗಿ ಎಲ್ಲೆಡೆ ಸೌಖ್ಯವಿರಲಿ ಎಂದೇ ಹಾರೈಕೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading