‘ಅವರು ಬೆಳಸಿದ ಗಿಡಗಳು’- ಎಂಬುದು ನಾನು ಶ್ರೀನಿವಾಸ ರಾಜು ಅವರನ್ನು ಕಾಣಲು ಕಾರಣವಾದ ಪುಸ್ತಕ. ಸಿ. ಪಿ. ರವಿಕುಮಾರ್ ನನ್ನ ಅಣ್ಣನ ಫ್ರೆಂಡ್. ಕ್ರೈಸ್ಟ್ ಕಾಲೇಜಿನ ಮೂಲಕ ಆಗ ತಾನೆ ಸರ್ ಈ ಯುವ ಪೀಳಿಗೆಯ ಜೊತೆ ಒಡನಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಹಾಗೆ ಹೊಸ ಪೀಳಿಗೆಯ ಕವಿಗಳ ನವಿರಾದ ಕವಿತೆಗಳನ್ನು ಒಟ್ಟು ಮಾಡಿ ಅವರು ತಂದ ಸಂಕಲನದ ಹೆಸರೇ- ಅವರು ಬೆಳಸಿದ ಗಿಡಗಳು. ಈಗ ನೋಡಿದರೆ ಆ ಹೆಸರು ಮೇಷ್ಟ್ರ ಆತ್ಮ ಕಥೆಯಂತೆ ಇದೆ.
ಈ ಜಗತ್ತು ಅವರು ಬೆಳಸಿದ ಗಿಡಗಳಿಂದ ತುಂಬಿದೆ. ನಾವು ಕ್ರೈಸ್ತ ಕಾಲೇಜ್ ಕವಿಗಳು ಎಂದೇ ಗುರುತಿಸಿಕೊಳ್ಳುವ ಬಳಗವಿದೆ. ಅದು ನಮಗೆ ಹೆಮ್ಮೆ ಸಹಾ. ನಮ್ಮ ಹಳೆಯ ನೆನಪುಗಳನ್ನು ಒಟ್ಟು ಮಾಡುತ್ತಾ ತುರುಬು ನೆನೆಸಿಕೊಳ್ಳುತ್ತಾ ಕೂರುವುದು. ಇವತ್ತು ಕ್ರೈಸ್ಟ್ ಮೂಲಕವೇ ಪರಿಚಯವಾದ ನಟರಾಜ್ ಹುಳಿಯಾರ್, ಗಂಗಾಧರಯ್ಯ , ಕೃಷ್ಣಮೂರ್ತಿ ಬಿಳಿಗೆರೆ ಒಟ್ಟಿಗೆ ಇರುವಾಗಲೇ ಈ ಸುದ್ದಿ ಬರಬೇಕೇ? ಬಿಳಿಗೆರೆ ತಂಬೂರಿ ಮೀಟುತ್ತ ‘ಎನ್ನ ಮನಕೊಂದು ಮಾತನು ಹೇಳದೆ ಹೋದೆಯಾ ಹಂಸೆ? ‘ ಎಂದು ನೆನಸುತ್ತಿರುವಾಗಲೇ, ನಮ್ಮನ್ನು ಕಣ್ಣೀರಿಗೆ ತಳ್ಳುತ್ತಿರುವಾಗಲೇ ಈ ಸುದ್ದಿ!
ಕವಿತಾ ರೈ ಎಸ್ ಎಂ ಎಸ್ ಮೂಲಕ ಕಂಬನಿ ಮಿಡಿದ ರೀತಿ ನನ್ನನ್ನೂ ನಿಧಾನಕ್ಕೆ ದುಃಖದ ಸುಳಿಯೊಳಗೆ ಎಳೆದುಕೊಳ್ಳುತ್ತಾ ಹೋಯಿತು. ಮಾಧ್ಯಮದಲ್ಲಿರುವವರಿಗೆ ಸಾವಿನ ನೋವು ಆವರಿಸಿಕೊಳ್ಳುವುದು ತೀರಾ ತೀರಾ ನಿಧಾನ. ಅವರಿಗೆ ಸಾವು ಮೊದಲು ಸುದ್ದಿ ಮಾತ್ರ. ಅದರ ನೋವು ಅವರ ಪ್ರಜ್ಞೆಗೆ ಇಳಿಯುವುದು ಸುದ್ದಿಯ ಅಟ್ಟಹಾಸ ಮುಗಿದ ನಂತರವೇ. ಆದರೆ ಶ್ರೀನಿವಾಸರಾಜು ಸಾವಿನ ಸುದ್ದಿ ಎದೆಯಾಳಕ್ಕೆ ಇಳಿದು ಹೋಯಿತು.
ಶ್ರೀನಿವಾಸ ರಾಜು ಬರಹಗಳ ಮೂಲಕ ನಮ್ಮನ್ನು ತಾಕಿದ್ದಾರ? ಇಲ್ಲ , ಅದಕ್ಕಿಂತ ಹೆಚ್ಚಾಗಿ ಅವರು ನನ್ನನ್ನು ತಾಕಿರುವುದು ಅವರ ವಿನಾಕಾರಣ ಪ್ರೀತಿಗಾಗಿ. ಇಂದಿನ ಸಂಬಂಧಗಳು ಜಗತ್ತು ಎಂದರೆ ಇದೇನಾ ಎನಿಸುವಂತೆ ಮಾಡಿರುವಾಗ ಕಾರಣವಿಲ್ಲದೆ ಪ್ರೀತಿಸುವುದು ಕಲಿಸಿದರಲ್ಲ, ಅದು ಮುಖ್ಯ ಎನಿಸುತ್ತದೆ. ಮಕ್ಕಳೊಡನೆ ಆಡುವುದನ್ನು, ಜಗತ್ತು ತೆರೆದು ತೋರಿಸುವುದನ್ನು ನಾನು ಅಣ್ಣನಿಂದ ಕಲಿತುಕೊಂಡೆ. ಕಾರಣವಿಲ್ಲದೆ ಪ್ರೀತಿಸುವುದನ್ನು ಮೇಷ್ಟ್ರಿಂದ ಕಲಿತುಕೊಂಡೆ.
ಪ್ರೀತಿ ಮಾಡುವ ವಿಧಾನ ಕಲಿಸಿದ ಗುರುವೇ ನಿನಗೆ ನಮನ….
-ಜಿ ಎನ್ ಮೋಹನ್





0 Comments