ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ಪ್ರಾಣ್ ಗೆ ಪ್ರಶಸ್ತಿ ಸುದ್ದಿ ತಿಳಿದು ತುಂಬ ಖುಷ್ ಆಗಿದ್ದಾರೆ..

ದಿಲಾವರ್ ರಾಮದುರ್ಗ

ಹೀರ್-ರಾಂಜಾ…. ಪಂಜಾಬಿ ಮೂಲದ ಪ್ರೀತಿ-ಪ್ರೇಮದ ದಂತಕಥೆ. ಪ್ರೀತಿ ಜೋಡಿ ಹೀರ್ ರಾಂಜಾ ಇಬ್ಬರನ್ನು ಬೇರೆ ಮಾಡುವಲ್ಲಿ ಹೀರ್ ಸಂಬಂಧಿ ಛೋಟೆ ಚೌಧರಿ ಮಾಡುವ ಮಸಲತ್ತುಗಳು ಅಷ್ಟಿಷ್ಟಲ್ಲ. ಹೀರ್ ನನ್ನು ಅವಳ ಕುಟುಂಬದಷ್ಟೇ ಅಗರ್ಭ ಶ್ರೀಮಂತನಿಗೆ ಮದುವೆ ಮಾಡಿ ಕೊಡುವಲ್ಲಿ ಇವನೇ ಮುಖ್ಯ ಪಾತ್ರ ವಹಿಸಿರುತ್ತಾನೆ. ಅದಕ್ಕೆ ಬಹುದೊಡ್ಡ ರಕಮ್ಮು ಕೂಡ ದಕ್ಕಿರುತ್ತದೆ. ಕಡೆಗೆ ಹೇಗೂ ಪ್ರೇಮಿಗಳ ಪುನರ್ ಮಿಲನವಾಗುತ್ತದೆ. ಮದುವೆಯಾಗುವುದಕ್ಕೆ ಅಂತಸ್ತಿನ ಅಡ್ಡಗೋಡೆ ಕುಸಿದುಬೀಳುತ್ತದೆ. ಮದುವೆಗೆ ಹೀರ್ ಕುಟುಂಬವೂ ಒಪ್ಪಿಕೊಳ್ಳುತ್ತದೆ. ಆದರೆ, ಛೋಟೆ ಚೌಧರಿ ತನ್ನ ಸೇಡನ್ನು ತೀರಿಸಿಕೊಂಡೇ ಬಿಡುತ್ತಾನೆ. ಕಡೆಯ ದೃಶ್ಯದಲ್ಲಿ ಹೀರ್ ಮದುಮಗಳಾಗಿ ಢೋಲಿ ಹತ್ತುವಾಗ ಛೋಟೆ ಚೌಧರಿ ಮಿಠಾಯಿಯಲ್ಲಿ ವಿಷ ಬೆರೆಸಿ ಕೊಲ್ಲುವ ಆ ಹೃದಯ ಹಿಂಡುವ ದೃಶ್ಯ, ಕಣ್ಣಾಲಿಗಳಲ್ಲಿ ನೀರುಕ್ಕಿಸಿತ್ತು. ಲಂಗಡಾ ಛೋಟೆ ಚೌಧರಿ ಪಾತ್ರದಲ್ಲಿ ಪ್ರಾಣ್ ನೀಡಿದ ಪಾಪಿ ಚಿತ್ರಣ… ಥೂ ಪಾಪಿ ನನ್ಮಗಾ…. ಆಯಾ ದೇಖೋ ಕುತ್ತಾ… ಎಂದು ಹೆಂಗಳೆಯರು ಲಟಕಿ ಮುರಿಯುವಂತಾಗುತ್ತಿತ್ತು.
ಪ್ರಾಣ್ ನ ವಿಲನ್ ಪರಪಂಚ ಮುಂದೆ ದೊಡ್ಡ ಹರವನ್ನೇ ಕಂಡಿತು.

* * *
ಶೇರ್ ಕಾನ್ ಕಾಲೇ ಕಾ ದಂಧಾ ಕರತಾ ಹೈ, ಲೇಕಿನ್ ಇಮಾನ್ದಾರಿ ಸೇ…
ಇಸ್ ಇಲಾಖೇ ಮೆ ನಯೇ ನಯೇ ಆಯೇ ಹೋ ಸಾಬ್? ವರ್ನಾ ಶೇರ್ ಖಾನ್ ಕೋ ಕೌನ್ ನಹೀ ಜಾನ್ ತಾ..
ಚಿಲ್ಲಾವೋ ನಹೀ ಸಾಬ್, ಗಲಾ ಖರಾಬ್ ಹೋ ಜಾಯೇಗಾ…
ಶೇರ್ ಖಾನ್ ನೆ ಶಾದೀ ನಹೀ ಕೀ ತೊ ಕ್ಯಾ ಹುವಾ, ಲೇಕಿನ್ ಬಾರಾತೆ ಬಹುತ್ ದೇಖೀ ಹೈ
ಆಜ್ ಜಿಂದಗೀ ಮೆ ಪೆಹಲೀ ಬಾರ್, ಶೇರ್ ಖಾನ್ ಕೀ ಶೇರ್ ಸೇ ಟಕ್ಕರ್ ಹುಯೀ ಹೈ…
ಜೋ ಹಾಥ್ ಅಂಗಾರೇ ಕೋ ಛುಪಾಯೆ, ಅಂಗಾರಾ ಉಸೀ ಹಾಥ್ ಕೊ ಜಲಾ ದೇತಾ ಹೈ
ಬಾರಾಹ ಜಂಗಲೀ ಕುತ್ತೆ ಮಿಲ್ ಕೆ ಶೇರ್ ಕೊ ಮಾರ್ ಡಾಲ್ತೆ ಹೈ…
ಈ ಡೈಲಾಗ್ ಗಳನ್ನು ಕೇಳಿ ಸಿಳ್ಳೆ ಹಾಕದವರೇ ಇಲ್ಲ. ಝಂಝೀರ್ ಚಿತ್ರದ ಪಠಾಣ್ ಶೇರ್ ಖಾನ್ ಪಾತ್ರದಲ್ಲಿ ಪ್ರಾಣ್ ನೀಡಿದ ಗೆಟಪ್ಪೇ ಬೇರೆ. ಕಾಲಾ ಧಂಧಾ ಮಾಡುವ ಪಾತ್ರದಲ್ಲಿ ಶೇರ್ ಖಾನ್ ವಿಲನ್ ನಂತೆ ಅನಿಸುತ್ತಾನಾದರೂ ಮುಂದೆ ಇನಸ್ಪೆಕ್ಟರ್ ವಿಜಯ್ (ಬಚ್ಚನ್) ಜತೆ ದೋಸ್ತಿ ಬೆಳೆದು ನಿಂತಾಗ ಆತ ಪರಿವರ್ತನೆಗೊಳ್ಳುತ್ತಾನೆ.
ಮುಂದೆ ವ್ಯವಸ್ಥೆಯ ಕಪಿಮುಷ್ಠಿಯಿಂದಾಗಿ ಇನಸ್ಪೆಕ್ಟರ್ ವಿಜಯ್ ಕೆಲಸ ಕಳೆದುಕೊಂಡಾಗ, ತೇಜಾ ಎನ್ನುವ ವಿಲನ್ ಇದರ ಹಿಂದಿನ ಅಸಲಿ ಮಾಸ್ಟರ್ ಮೈಂಡ್ ಎಂದು ತಿಳಿದಾಗ. ಇದೇ ತೇಜಾ ವಿಜಯ್ ನ ಕುಟುಂಬವನ್ನೂ ಮುಗಿಸಿದ್ದು ಎನ್ನುವುದು ಗೊತ್ತಾದಾಗ… ದುಷ್ಟಕೂಟಕ್ಕೆ ಬುದ್ಧಿ ಕಲಿಸುವಲ್ಲಿ ವಿಜಯ್ ಗೆ ಶೇರ್ ಖಾನ್ ಸಾಥ್ ನೀಡುವ ಪರಿಯೇ ಅತ್ಯಂತ ಮನೋಜ್ಞ ಚಿತ್ರಣ. ಪಠಾಣ್ ಪಾತ್ರ ಪೋಷಣೆಯಲ್ಲಿ ಪ್ರಾಣ್ ಎಲ್ಲರ ಮೆಚ್ಚಿನ ಭಾಯ್ ಆಗುವಷ್ಟು ಪ್ರಭಾವಿ ನಟನಾಗಿ ಹೊರಹೊಮ್ಮುತ್ತಾನೆ.
ಇವೆರಡೂ ಪ್ರಾಣ್ ಎಂಥ ವರ್ಸಟೈಲ್ ನಟ ಎನ್ನುವುದನ್ನು ನಿರೂಪಿಸುವುದಿಲ್ಲವೇ? ಇಂಥ ಪ್ರಾಣ್ ಗೆ “ದಾದಾ ಸಾಹೇಬ್ ಫಾಲ್ಕೆ” ಪ್ರಶಸ್ತಿ ಘೋಷಣೆಯಾಗಿದೆ. ಕ್ಯಾ ಬಾತ್ ಹೈ ಶೇರ್ ಖಾನ್ ಸಾಬ್. ಬಧಾಯಿ ಹೋ.
* * *
ಒಂದು ಸಣ್ಣ ಮಾಹಿತಿ:
ನನ್ನ ದೊಡ್ಡ ಮಾಮಾ (ನನ್ನ ತಾಯಿಯ ಅಣ್ಣ) ಮಾಸ್ಟರ್ ಮೊಹಮ್ಮದ್ ಆಲೀ (ಈಗಲೂ ಬಿಜಾಪುರದಲ್ಲಿದ್ದಾರೆ) ಅವರು ಪ್ರಾಣ್ ಗೆ ಪ್ರಶಸ್ತಿ ಘೋಷಣೆಯಾದ ಸುದ್ದಿ ತಿಳಿದು ತುಂಬ ಖುಷ್ ಆಗಿದ್ದಾರೆ. ಅವರಿಗೇನು ಅಷ್ಟು ಖುಷಿ?
ಪ್ರಾಣ್, ರೆಹಮಾನ್ (ಸಾಹೇಬ್ ಬೀವಿ ಔರ್ ಗುಲಾಮ್ ಚಿತ್ರದ ಹೀರೋ) ಮತ್ತು ನನ್ನ ಮಾಮ ಮೊಹಮ್ಮದ್ ಅಲೀ ಗಳಸ್ಯ ಕಂಠಸ್ಯ ಗೆಳೆಯರಾಗಿದ್ದರಂತೆ. 60 ರ ದಶಕದಲ್ಲಿ ಇವರನ್ನು ತ್ರಿಮೂರ್ತಿಗಳೆಂದೇ ಸಿನಿಮಾ ರಂಗದ ಅವರ ಆಪ್ತ ಗೆಳೆಯರು ಕರೆಯುತ್ತಿದ್ದರಂತೆ. 87 ವರ್ಷ ವಯಸ್ಸಿನ ಮೊಹಮ್ಮದ್ ಅಲೀ ಅವರಿಗೆ ಈಗ ನೆನಪಿನ ಶಕ್ತಿಯ ಜತೆಗೆ ಮಾತನಾಡುವ ತ್ರಾಣವೂ ಕಮ್ಮಿಯೇ. ಆದರೂ ಸಿನಿಮಾ ಮಾತು ಬಂದಾಗೆಲ್ಲ ಅವರ ಒಡನಾಡಿ ಪ್ರಾಣ್, ರೆಹಮಾನ್, ರಾಜಕಪೂರ್, ರಫೀ, ಮುಕೇಶ್… ಇತರರನ್ನು ತುಂಬ ನೆನಪಿಸಿಕೊಳ್ಳುತ್ತಾರೆ.

‍ಲೇಖಕರು G

14 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading