ಗೋಪಾಲ ವಾಜಪೇಯಿ ಕಾಲಂ : ಸರಳ ವಿರಳ ಕಾರಂತರು…

ಸುಮ್ಮನೇ ನೆನಪುಗಳು  – 42

ಆವತ್ತು ನಮ್ಮ ಶಿಬಿರ ಸಮಾರೋಪದ ಮುಖ್ಯ ಅತಿಥಿಗಳಾಗಿದ್ದರಲ್ಲ ಸಚಿವ ಸಚಿವ ಎಂ. ಪಿ. ಪ್ರಕಾಶ್… ಅಂದು ಸಂಜೆ ಶಿಬಿರಾರ್ಥಿಗಳಿಂದ ‘ನಂದಭೂಪತಿ’ ನಾಟಕ ಪ್ರದರ್ಶನ ಅಂತ ಗೊತ್ತಾಗಿ, ಆ ಸಮಯದ ತಮ್ಮ ರಾಜಕೀಯ ಕಾರ್ಯಕ್ರಮಗಳನ್ನು ರದ್ದು ಮಾಡಿ ‘ಸವಾಯಿ ಗಂಧರ್ವ ಕಲಾಮಂದಿರ’ಕ್ಕೆ ಧಾವಿಸಿದ್ದಾರೆ. ತಾವು ಟಿಕೆಟ್ ಖರೀದಿಸಿದ್ದಲ್ಲದೆ, ತಮ್ಮೊಂದಿಗೆ ಬಂದಿದ್ದ ರಾಜಕೀಯದ ಮಂದಿಗೂ, ”ಟಿಕೆಟ್ಟು ಖರೀದಿಸಿ ನಾಟಕ ನೋಡ್ರಿ,” ಅಂತ ತಾಕೀತು ಮಾಡಿದ್ದಾರೆ. ತಾನೊಬ್ಬ ಸಚಿವ ಎಂಬ ಹಮ್ಮು ಬಿಮ್ಮು ತೋರದೇ, ಉಳಿದವರೊಂದಿಗೆ ಕೂತು ನಾಟಕ ನೋಡಿದ್ದಾರೆ. ಅವರು ಬರಬಹುದೆಂಬ ನಿರೀಕ್ಷೆಯಿತ್ತಾದ್ದರಿಂದ ನಾವು ಮುಂದಿನ ಸಾಲಿನಲ್ಲಿ ಒಂದಷ್ಟು ಸೀಟುಗಳನ್ನು ಕಾದಿರಿಸಿದ್ದೆವು.
ಪ್ರಕಾಶ್ ಅವರು ಹಾಗೆಯೇ. ತಮ್ಮ ಸಾಂಸ್ಕೃತಿಕ ಬದುಕಿಗೂ ರಾಜಕೀಯ ಜೀವನಕ್ಕೂ ಒಂದು ಅಂತರವನ್ನು ಇಟ್ಟುಕೊಂಡೇ ಮುಂದುವರಿದವರು. ರಂಗಮಂದಿರದ ಹೊಸ್ತಿಲಿಗೆ ಬರುವ ತನಕವೂ ರಾಜಕೀಯ ಚರ್ಚೆಯಲ್ಲಿ ಮಗ್ನರಾಗಿರುತ್ತಿದ್ದ ಅವರು, ಹೊಸ್ತಿಲು ದಾಟಿ ಒಳಗೆ ಕಾಲಿರಿಸುತ್ತಿದ್ದಂತೆಯೇ ಅಲ್ಲಿ ನಡೆದಿರುತ್ತಿದ್ದ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಒಳ್ಳೆಯ ವಾಗ್ಮಿಗಳೂ, ಲೇಖಕರೂ, ರಂಗಭೂಮಿ ಮುಂತಾಗಿ ಸಂಸ್ಕೃತಿ ವಿಷಯಗಳಲ್ಲಿ ಅಪಾರ ಜ್ಞಾನವುಳ್ಳವರೂ ಆಗಿದ್ದ ಅವರು ಏನೇ ಮಾತಾಡಿದರೂ ಅದು ‘ಅಧಿಕಾರವಾಣಿ’.
1983ರಲ್ಲಿರಬೇಕು. ಕರ್ನಾಟಕ ನಾಟಕ ಅಕಾಡೆಮಿ ಆಗ ಹೂವಿನ ಹಡಗಲಿಯಲ್ಲಿ ಹತ್ತು ದಿನಗಳ ‘ಜಾನಪದ ರಂಗತಂತ್ರಗಳ ಅಧ್ಯಯನ ಶಿಬಿರ’ವನ್ನು ಏರ್ಪಡಿಸಿತ್ತು. ಜಾನಪದ ವಿದ್ವಾಂಸ ಡಾ. ಬಸವರಾಜ ಮಲಶೆಟ್ಟಿ ಆ ಶಿಬಿರದ ನಿರ್ದೇಶಕರು. ನಾನು ಅಲ್ಲಿ ‘ವಿಶೇಷ ಆಹ್ವಾನಿತ ಶಿಬಿರಾರ್ಥಿ’ಗಳಲ್ಲೊಬ್ಬ. ನಮಗೆ ಕರ್ನಾಟಕದ ಜಾನಪದ ರಂಗಪ್ರಕಾರಗಳ ಪರಿಚಯವಾದದ್ದೇ ಆ ಶಿಬಿರದಲ್ಲಿ. ಒಂದಕ್ಕಿಂತ ಒಂದು ಅದ್ಭುತ. ಈ ನೆಲದ ಮಣ್ಣಿನಿಂದಲೇ ಹುಟ್ಟಿದ ಅವು ಬೆಳೆದದ್ದು ಜನಾಶ್ರಯದಲ್ಲಿ. ಆ ‘ಜೋಗೇರಾಟ,’ ಆ ‘ಮೂಡಲಪಾಯ ದೊಡ್ಡಾಟ’, ಆ ‘ತೊಗಲು ಬೊಂಬೆಯಾಟ’, ಆ ಕೀಲು ಗೊಂಬೆಯಾಟ’, ಆ ‘ಸೂತ್ರದ ಗೊಂಬೆಯಾಟ’, ಆ ‘ಗೊಂದಲಿಗರಾಟ’… ಅಬ್ಬಾ, ನಾವು ಬೆಕ್ಕಸಬೆರಗಾದದ್ದಂತೂ ನಿಜ. ಶಿಬಿರದಲ್ಲಿ ಇದ್ದ ಹಿರಿಯ ‘ಜಾನಪದ ಜಂಗಮ’ ಮುದೇನೂರ ಸಂಗಣ್ಣ ನಮ್ಮ ಪಾಲಿನ ‘ಜೀವಂತ ಜ್ಞಾನಕೋಶ’.
ಆ ಸಂದರ್ಭದಲ್ಲಿ ತಮ್ಮ ಕ್ಷೇತ್ರಕ್ಕೆ ಬಂದ ಪ್ರಕಾಶ್ ತಮ್ಮ ಊರಲ್ಲಿಯೇ ನಡೆದಿರುವ ಈ ಶಿಬಿರಕ್ಕೆ ಬಾರದಿರುತ್ತಾರೆಯೇ? ಅದೊಂದು ಬೆಳಗಿನ ಅವಧಿಯಲ್ಲಿ ವೇದಿಕೆಯಲ್ಲಿ ಬೆಳಗಲ್ ವೀರಣ್ಣ (ಇವರಿಗೆ 2011ನೆಯ ವರ್ಷದ ಕೇಂದ್ರ ‘ಸಂಗೀತ ನಾಟಕ ಅಕಾಡೆಮಿ’ ಪ್ರಶಸ್ತಿ ದೊರೆಯಿತು) ತಮ್ಮ ತೊಗಲು ಬೊಂಬೆಯಾಟದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಆಗ ಚಿತ್ತೈಸಿತು ಸಚಿವರ ಸವಾರಿ. ಅವರ ಹಿಂದೆ ಕನಿಷ್ಠ ಐವತ್ತು ಜನ. ಪ್ರಕಾಶ್ ಎಲ್ಲರಿಗೂ ಸುಮ್ಮನಿರುವಂತೆ ಸನ್ನೆ ಮಾಡಿ, ತಾವು ಮುಂದಿನ ಸಾಲಿನಲ್ಲಿ ಕೂತರು. ಬೆಳಗಲ್ ವೀರಣ್ಣ ಒಂದು ಕ್ಷಣ ಅವಾಕ್ಕಾದರು. ಅವರ ಮಾತು ನಿಂತಿತು. ಆ ನಂತರ ಅವರಿಗೆ ಮಾತಾಡಲು ಏನೋ ಒಂದು ರೀತಿ ಮುಜುಗರ. ಪ್ರಕಾಶ್ ಅವರಂಥ ತಿಳಿದವರ ಮುಂದೆ ತಾನು ಬಾಯಿ ಬಿಡುವುದು ಸಲ್ಲದೆಂಬ ಭಾವನೆಯೋ ಏನೋ. ಅವರು ಕೈ ಮುಗಿದು ಕೂತುಬಿಟ್ಟರು. ಅಷ್ಟರಲ್ಲೇ ಅವರು ಏನು ಮಾತಾಡುತ್ತಿದ್ದರು ಎಂಬುದನ್ನು ಗ್ರಹಿಸಿದ್ದ ಪ್ರಕಾಶ್ ಎದ್ದು ನಿಂತು ತೊಗಲು ಗೊಂಬೆ ಆಟದ ವಿಚಾರವಾಗಿ ಮಾಡಿದ ಭಾಷಣವಿದೆಯಲ್ಲ, ಅದು ‘ಭಾಷಣ’ವಲ್ಲ ; ‘ಉಪನ್ಯಾಸ’. ಅಷ್ಟು ಪ್ರೌಢವಾಗಿತ್ತು ಅವರ ವಿಚಾರ ಮಂಡನೆ.
ಅಂಥ ‘ಕಲಾಪ್ರೇಮಿ’ ಪ್ರಕಾಶ್ ಬಂದು ಕೂತರಲ್ಲ ಅವತ್ತು ನಮ್ಮ ಶಿಬಿರಾರ್ಥಿಗಳ ‘ನಂದಭೂಪತಿ’ ನಾಟಕ ನೋಡಲು… ನಮ್ಮವರ ಪೈಕಿ ಒಬ್ಬರು ಅವರೊಂದಿಗೆ ಔಪಚಾರಿಕವಾಗಿ ಮಾತಾಡುತ್ತ ನಿಂತಿದ್ದ ಹಾಗೆಯೇ ಪ್ರಕಾಶ್ ರಂಗದ ವಿಂಗಿನೆಡೆ ನೋಡಿದ್ದಾರೆ. ಅಲ್ಲಿ ಅವರಿಗೆ ‘ರಂಗಜಂಗಮ’ರು ನಿಂತಿದ್ದು ಕಂಡಿದೆ. ಪ್ರಕಾಶ್ ಕೂತಲ್ಲಿಂದ ಎದ್ದಿದ್ದಾರೆ. ವೇದಿಕೆಯ ಬದಿಯ ಮೆಟ್ಟಿಲುಗಳನ್ನು ಏರಿದ್ದಾರೆ. ಅಲ್ಲಿ ನಿಂತಿದ್ದ ಕಾರಂತರನ್ನು ಕೈ ಹಿಡಿದು ಕರೆದುಕೊಂಡು ಕೆಳಕ್ಕೆ ಬಂದಿದ್ದಾರೆ. ತಮ್ಮ ಪಕ್ಕವೇ ಕೂರಿಸಿಕೊಂಡು ಇಡೀ ನಾಟಕವನ್ನು ನೋಡಿದ್ದಾರೆ.
ನಾಟಕ ಮುಗಿದ ಮೇಲೆ, ಎರಡನೆಯ ಪ್ರಯೋಗದ ಮುನ್ನ ಕಲಾವಿದರಿಗೆ ಒಂದಿಷ್ಟು ತಿಂಡಿಯ ವ್ಯವಸ್ಥೆಯ ಗಡಿಬಿಡಿಯಲ್ಲಿದ್ದ ನಾನು ಹೊರಗೆ ಬಂದರೆ ಅಲ್ಲಿ ಸಚಿವ ಪ್ರಕಾಶ್ ಅವರು…! ಜತೆಗೆ ಕಾರಂತರು. ಅವರಿನ್ನು ಹೊರಡುವ ತಜಿವಿಜಿಯಲ್ಲಿರಬೇಕು ಎಂದುಕೊಂಡ ನಾನು ಸಚಿವರ ಬಳಿ ಹೋದೆ. ಅವರು ನನ್ನ ಕೈ ಕುಲುಕುತ್ತ, ”ಇಂಥಾ ನಾಟಕಗಳ ಅವಶ್ಯಕತೆ ಬಹಳ ಇದೆ… ನನಗೆ ಒಂದು ನಾಟ್ಕ ಬರೆದುಕೊಡ್ರಿ… ನಮ್ಮ ‘ರಂಗಭಾರತಿ’ಯಿಂದ ಮಾಡಸೂಣು…” ಅಂತ ಹೇಳುತ್ತಿದ್ದರೆ ನನ್ನ ಕಾಲು ನೆಲದಿಂದ ಒಂದಡಿ ಮೇಲೆ ಏರಿದಂತೆ ಭಾಸ. ನನ್ನ ‘ದೊಡ್ಡಪ್ಪ’ ನಾಟಕವನ್ನು ತಮ್ಮ ‘ರಂಗಭಾರತಿ’ ತಂಡದಿಂದ ಮಾಡಿಸುವ ಪ್ರಯತ್ನಕ್ಕೆ ಅವರು ಹಿಂದೊಮ್ಮೆ ಕೈಹಾಕಿದ್ದರು.

-೦-೦-೦-೦-೦-

1985ರ ಮೇ 13. ‘ಸವಾಯಿ ಗಂಧರ್ವ ಕಲಾಮಂದಿರ’ ಮದುವೆಯ ಮರುದಿನದ ಮನೆಯ ಹಾಗೆ ಬಿಕೋ ಎನ್ನುತ್ತಿತ್ತು. ಮದುವೆ ಮುಗಿದರೇನಂತೆ? ಹುಡುಗಿಯ ಅಪ್ಪ-ಅಣ್ಣಂದಿರ ಜವಾಬ್ದಾರಿಗೆಲ್ಲಿಯ ಕೊನೆ? ನಾವು ಸಂಘಟಕರು ಈಗ ಕೆಲವು ಕೆಲಸಗಳನ್ನು ಮುಗಿಸಬೇಕಿತ್ತು. ಕಾರಂತರು ಅವತ್ತು ವಾಪಸ್ ಹೋಗಬೇಕು. ಅವರನ್ನು ಬೆಳಗಾವಿಯ (ಸಾಂಬ್ರಾ) ತನಕ ಕಳಿಸುವ ಏರ್ಪಾಟು ಆಗಬೇಕು.
”ಎಷ್ಟು ಗಂಟೆಗೆ ಟ್ಯಾಕ್ಸಿ ಹೇಳಬೇಕು ಸರ್?” ಅಂತ ನಾನು.
”ಟ್ಯಾಕ್ಸಿನಾ? ಯಾಕೆ?” ಅಂತ ಅವರು.
”ಸರ್, ಬೆಳಗಾವಿಗೆ ಹೋಗಬೇಕಲ್ಲ ನೀವು…”
”ಬಸ್ನಲ್ಲೇ ಹೋಗ್ತೇನೆ. ಟ್ಯಾಕ್ಸಿಗ್ಯಾಕೆ ಖರ್ಚು ಮಾಡ್ತೀರಿ? ನನ್ನ ಫ್ಲೈಟ್ ಇರೋದು ಮಧ್ಯಾಹ್ನ ನಾಲ್ಕಕ್ಕೆ…”
”ಸರ್… ನೀವು… ಬಸ್ನಲ್ಲಿ? ಇಲ್ಲ ಸರ್… ನಿಮ್ಮನ್ನ ಬಸ್ನಲ್ಲಿ ಕಳಿಸೋಲ್ಲ…”
”ನಾನು ಬಸ್ನಲ್ಲೇ ಹೋಗೋದು… ಇಲ್ಲಿಯ ಜನರ ಮಾತು ಕೇಳ್ತಾ, ಅದರಲ್ಲಿರೋ ಸವಿಯನ್ನ ಅನುಭವಿಸ್ತಾ ಹೋಗೋದಕ್ಕೆ ಇದೊಳ್ಳೆ ಅವಕಾಶ ಅಲ್ವಾ…? ನಾಟಕದವ್ರು ಜನರ ನಡುವೆ ಬದುಕಬೇಕ್ರೀ…”
ಅಂತಾರಾಷ್ಟ್ರೀಯ ಖ್ಯಾತಿ ಪಡೆದ, ಪದ್ಮಶ್ರೀ ಬಿರುದಾಂಕಿತರಾದ ಇನ್ನೂ ಕೆಲವರನ್ನು ನಾನು ನೋಡಿದ್ದೆ. ತಾವು ಶ್ರೇಷ್ಠ ಎಂಬ ಘಮಿಂಡಿಯಲ್ಲೇ ಜನರಿಂದ ದೂರವೇ ತಿರುಗಾಡುವಂಥವರು. ತಮ್ಮನ್ನೇ ತಾವು ‘ದೊಡ್ಡವರು’ ಎಂದು ಭಾವಿಸಿಕೊಂಡವರು.
ಹುಬ್ಬಳ್ಳಿಯಿಂದ ಬೆಳಗಾವಿಗೆ ಅರ್ಧ ಗಂಟೆಗೊಂದು ಬಸ್ಸು. ಆ ಕಾಲದಲ್ಲಿ ಅಲ್ಲಿಂದ ಎರಡು ತಾಸುಗಳ ಪ್ರಯಾಣ. ಕನಿಷ್ಠ ಪಕ್ಷ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಅವರು ಬೆಳಗಾವಿ ತಲಪಬೇಕು. ಅಲ್ಲಿಂದ ಸಾಂಬ್ರಾಕ್ಕೆ ಹೋಗಬೇಕಲ್ಲ…
ಸರಿ. ಅವರನ್ನು ಬಸ್ ನಿಲ್ದಾಣಕ್ಕೆ ಕರೆದೊಯ್ಯುತ್ತಿರುವಾಗ ಮೆಲ್ಲನೆ ಕೇಳಿದೆ :
”ಸರ್… ಮತ್ತೆ ನಿಮ್ಮ ಫೀ ಎಷ್ಟು ಅಂತ…”
ಅವರು ನನ್ನನ್ನೇ ನೋಡಿದರು. ಪಕ್ಕದಲ್ಲೇ ಕೂತಿದ್ದೆನಲ್ಲ, ನಸು ನಗುತ್ತ ನನ್ನ ತೊಡೆಯನ್ನು ತಟ್ಟಿದರು.
”ನೀವು ಒಂದು ಸಂಸ್ಥೆಯನ್ನ ನಡೆಸುತ್ತಿದ್ದೀರಿ ಅಲ್ವಾ…? ಹವ್ಯಾಸಿ ನಾಟಕ ಸಂಸ್ಥೆಯನ್ನ… ವಾಜಪೇಯಿ, ಒಂದು ದೊಡ್ಡ ವರ್ಕ್ ಶಾಪ್ ಮಾಡಿದ್ದೀರಿ. ಒಂದು ಒಳ್ಳೆಯ ನಾಟಕ ಕೊಟ್ಟಿದ್ದೀರಿ… ನಾನು ಇಲ್ಲಿಗೆ ಬಂದದ್ದು ನಾನಾಗೇ ಇಷ್ಟಪಟ್ಟು. ನಿಮ್ಮ ನಾಟಕದ ಭಾಷೆಯನ್ನ ಎಂಜಾಯ್ ಮಾಡೋದಕ್ಕೆ…” ಅಂತ ಸುಮ್ಮನಾದರು.
”ಆದರೂ ಸರ್… ನಮ್ಮ ಕಡೆಯಿಂದ ಒಂದು ಚಿಕ್ಕ ಮೊತ್ತವನ್ನಾದರೂ…”
”ನೋ… ನನ್ನ ಖರ್ಚನ್ನ ಸರಕಾರ ನೋಡಿಕೊಳ್ತದೆ… ”
ಬಸ್ ನಿಲ್ದಾಣಕ್ಕೆ ತಲಪಿದರೆ ರೆಡಿಯಾಗಿ ನಿಂತದ್ದು ಒಂದು ಆರ್ಡಿನರಿ ಬಸ್ಸು. ಎಕ್ಸ್ ಪ್ರೆಸ್ ಬಸ್ಸು ಆಗಷ್ಟೇ ಹೋಗಿತ್ತು. ಮತ್ತೊಂದು ಬಸ್ ಬರುವ ತನಕ ಕಾಯಲಾಗದು. ಕಾರಂತರು ಆ ಬಸ್ಸನ್ನೇ ಏರಿದರು. ಯಾರೋ ಒಬ್ಬ ಗೊರವಪ್ಪನ ಪಕ್ಕದಲ್ಲಿ ಕಿಟಕಿಯ ಬದಿಯ ಸೀಟಿನಲ್ಲಿ ಕೂತರು. ನನ್ನತ್ತ ನೋಡಿ,
”… ‘ನಂದಭೂಪತಿ’ಯಂಥ ನಾಟಕಗಳನ್ನ ಬರೀತಾ ಇರಿ… ಆ ಮೂಲಕವಾದರೂ ನಿಮ್ಮ ಭಾಷೆ ಜೀವಂತವಾಗಿರಲಿ…” ಅಂತ ಅವರು ಹೇಳುತ್ತಿರುವ ಹಾಗೆಯೇ ಕಂಡಕ್ಟರ್ ವಿಜಲ್ ಹಾಕಿದ.

-೦-೦-೦-೦-೦-

ಇಂಥ ಸಂತನಂಥ ಕಾರಂತರು ಮುಂದೆ ಕೆಲವೇ ತಿಂಗಳುಗಳಲ್ಲಿ ಅಲ್ಲಿ, ಆ ಭೋಪಾಲದಲ್ಲಿ, ಅಂಥ ಘೋರ ಆಪಾದನೆಯನ್ನು ಎದುರಿಸುವಂತಾಯಿತಲ್ಲ… ಮಾಡದ ತಪ್ಪಿಗಾಗಿ ಸೆರೆವಾಸವನ್ನು ಅನುಭವಿಸುವಂತಾಯಿತಲ್ಲ… ‘ಅಗ್ನಿದಿವ್ಯ’ವನ್ನು ಎದುರಿಸುವ ಹಾಗಾಯಿತಲ್ಲ…
ನಮ್ಮ ರಂಗಭೂಮಿ ಇತಿಹಾಸದಲ್ಲಿ ಅದೊಂದು ಕರಾಳ ಅಧ್ಯಾಯ.
‘ನಿರ್ದೋಷಿ’ ಎಂದು ಸಾಬೀತಾಗುವವರೆಗೆ ಆ ಮನುಷ್ಯ ಏನೆಲ್ಲವನ್ನೂ ಅನುಭವಿಸಿರಬೇಕು…!
ಆಕೆ, ಆ ವಿಭಾ ಮಿಶ್ರಾ, ವಸ್ತುಸ್ಥಿತಿಯನ್ನು ಸರಿಯಾಗಿ ಬಿಂಬಿಸದೆ ಹೋಗಿದ್ದರೆ ಕಾರಂತರ ಸ್ಥಿತಿ ಏನಾಗಿರುತ್ತಿತ್ತೋ…!
ವಿಭಾ ಮಿಶ್ರಾ… ಭೋಪಾಲ ‘ರಂಗಮಂಡಲ’ದ ನಾಟಕಗಳಲ್ಲಿ ಎಲ್ಲರ ಗಮನ ಸೆಳೆದಿದ್ದ ಗುಳ್ಳಗಣ್ಣಿನ ಕುಳ್ಳ ಹುಡುಗಿ ವಿಭಾ… ಎಲ್ಲದರಲ್ಲೂ ಕೈ ಮುಂದು. ಪಾದರಸದಂಥವಳು. ‘ಹಯವದನ’ದಲ್ಲಿ ಪದ್ಮಿನಿ, ‘ಇನ್ಸಾಫ್ ಕಾ ಘೇರಾ’ (Chalk Circle)ದಲ್ಲಿ ಗ್ರೂಷಾ ಮುಂತಾದ ಪಾತ್ರಗಳಲ್ಲಿ ಮಿಂಚಿದಾಕೆ. ಬುಂದೇಲಖಂಡಿ ಭಾಷೆಯಲ್ಲಿ ರೂಪಾಂತರಿಸಲಾಗಿದ್ದ ‘ಇನ್ಸಾಫ್ ಕಾ ಘೇರಾ’ ನಾಟಕವನ್ನು ಕಾರಂತರು ನಿರ್ದೇಶಿಸಿದ್ದರು. ಸಂಗೀತವೂ ಅವರದೇ.
‘ರಂಗಮಂಡಲ’ದ ಹುಬ್ಬಳ್ಳಿಯ ಪ್ರಯೋಗಗಳ ಸಂದರ್ಭದಲ್ಲಿ ಪತ್ರಿಕೆಗಳಿಗೆ ಬೇಕಾದ ಮಾಹಿತಿಯನ್ನು ನೀಡುತ್ತಿದ್ದವಳೇ ಈ ವಿಭಾ. ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಜಯತೀರ್ಥ ಜೋಶಿಗಿಂತ ಒಂದು ವರ್ಷ ಹಿಂದೆ ಇದ್ದವಳು. ಹೀಗಾಗಿ, ನಮ್ಮ ರಂಗ ಶಿಬಿರದಲ್ಲಿ ವಿಭಾ ಉಪನ್ಯಾಸಗಳನ್ನೂ ನೀಡಿದ್ದಳು.
1999ರ ಡಿಸೆಂಬರಿನಲ್ಲಿ ನಾನು ಪತ್ರಿಕೋದ್ಯಮವನ್ನು ಬಿಟ್ಟು ಈಟೀವಿ ಬಳಗವನ್ನು ಸೇರಿದೆ. ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ನಮ್ಮ ಕಚೇರಿ. ಅಲ್ಲಿ ಐದಾರು ಭಾಷೆಗಳ ಚಾನೆಲ್ಲುಗಳು ಕೆಲಸ ಮಾಡುತ್ತಿದ್ದವು. ‘ವಿನಯಮೂರ್ತಿ’ ಪವನಕುಮಾರ ಮಾನ್ವಿ ಈ ಚಾನೆಲ್ಲುಗಳಿಗೆ ಪ್ರಧಾನ ನಿರ್ಮಾಪಕರು. ಸೂರಿ (ಎಸ್. ಸುರೇಂದ್ರನಾಥ್) ಪ್ರಭಾತ ಕಲಾವಿದರು ಬಳಗದ ಟಿ. ಜಿ. ಬಾಲಕೃಷ್ಣ ಕನ್ನಡ ವಿಭಾಗದ ಹಿರಿಯ ನಿರ್ಮಾಪಕರು. ತಿಂಗಳಿಗೊಮ್ಮೆ ಚೇರ್ಮನ್ ರಾಮೋಜಿರಾಯರ ಜೊತೆ ಎಲ್ಲ ಚಾನೆಲ್ಲುಗಳ ಹಿರಿಯ ಸಿಬ್ಬಂದಿಯ ಸಭೆ ನಡೆಯುತ್ತಿತ್ತು.
2002ರ ಮಾರ್ಚ್ 25ರಂದು ಮಧ್ಯಾಹ್ನ ಅಂಥದೊಂದು ಸಭೆ. ಬೆಂಗಳೂರಿನ ಈಟೀವಿ ಕಚೇರಿಯಿಂದ ಸೂರಿಗೊಂದು ಫೋನು. ಆಗಿನ್ನೂ ಮೊಬೈಲುಗಳ ಬಳಕೆ ವ್ಯಾಪಕವಾಗಿರಲಿಲ್ಲ. ನಾನೇ ಫೋನೆತ್ತಿಕೊಂಡೆ. ಆ ಕಡೆಯಿಂದ ಹಿರಿಯ ನಟ ಜಿ.ವಿ. ಶಿವಾನಂದ್ ನಿಧನರಾದರೆಂಬ ವಾರ್ತೆ. ಗುಬ್ಬಿ ವೀರಣ್ಣನವರ ಮೂರನೆಯ ಮಗ ಈ ಶಿವಾನಂದ್. ಅವರು ‘National School of Drama and Asian Theatre Institute’ನ ಮೊದಲ ವರ್ಷದ ವಿದ್ಯಾರ್ಥಿ. ಅಲ್ಲಿ ಕಾರಂತ, ವಿ. ರಾಮಮೂರ್ತಿಗಳ ಸಹಪಾಠಿ. ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಪ್ರಪಂಚಕ್ಕೆ ತಮ್ಮದೇ ಆದ ಕೊಡುಗೆ ಇತ್ತವರು. ಸೂರಿ (ಎಸ್. ಸುರೇಂದ್ರನಾಥ್) ಈ ಶಿವಾನಂದರ ಅಳಿಯ. ಕೂಡಲೆ ಸುದ್ದಿ ತಿಳಿಸಬೇಕು ಸೂರಿಗೆ.
ರಾಮೋಜಿರಾಯರ ಮೀಟಿಂಗುಗಳು ನಡೆಯುತ್ತಿದ್ದದ್ದು ಪಕ್ಕದ ಬಿಲ್ದಿಂಗಿನಲ್ಲಿ. ಭದ್ರಕೋಟೆಯಂತಿರುವ ಅವರ ಚೇಂಬರಿನಲ್ಲಿ. ‘ಗನ್ ಧಾರಿ’ ದಾಂಡಿಗರ ಅಜ್ಜಗಾವಲಿರುವ ಅಲ್ಲಿ ಗಾಳಿ ಕೂಡ ಹೆದರಿಕೊಂಡೇ ಸುಳಿಯಬೇಕು. ಅಂಥದರಲ್ಲಿ ಸೂರಿಗೆ ಸುದ್ದಿ ಮುಟ್ಟಿಸುವುದು ಹೇಗೆ?
ನಮ್ಮ ಹಾಲಿನ ಒಂದೆಡೆ ಮಾನ್ವಿಯವರ ಚೇಂಬರು. ಅವರ ಆಪ್ತ ಸಹಾಯಕನ ಮೂಲಕ ಚೇರ್ಮನ್ ಆಫೀಸಿಗೆ ಮಾತಾಡಬಹುದು; ಚೇರ್ಮನ್ನರ ಸೆಕ್ರೆಟರಿಯ ಮೂಲಕ ಸುದ್ದಿಯನ್ನು ಸೂರಿಗೆ ತಲಪಿಸಬಹುದು ಎಂಬ ಆಲೋಚನೆ ಬಂದದ್ದೆ ತಡ ಮಾನ್ವಿ ಸಾಹೇಬರ ಚೇಂಬರಿನತ್ತ ಧಾವಿಸಿದೆ.
ನನಗೆ ತೆಲುಗು ಬಾರದು. ಅವರಿಗೆ ಕನ್ನಡ ತಿಳಿಯದು. ಹೀಗಾಗಿ ಅಲ್ಲಿ ಸಾಮಾನ್ಯವಾಗಿ ಅವರಿಗೆ ‘ತಿಳಿ’ಯುವಂತೆ ಹಿಂದಿಯಲ್ಲಿ ಹೇಳಬೇಕು.
”ಏಕ್ ಡೆತ್ ನ್ಯೂಜ್ ಹೈ… ಜರಾ ಸೂರಿ ಜಿ ಸೆ ಬಾತ್ ಕರನೀ ಹೈ. ಚೇರ್ಮನ್ ಸಾಬ್ ಕೆ ಸೆಕ್ರೆಟರಿ ಕೊ ಫೋನ್ ಕನೆಕ್ಟ್ ಕರೋ…”
ಆತ ಸಂಪರ್ಕ ಕಲ್ಪಿಸಿದ.
”ಸೂರಿ ಜಿ ಕೊ ಬುಲಾಯಿಯೇ. ಏಕ್ ಡೆತ್ ನ್ಯೂಜ್ ಹೈ… ಉನ್ ಕೆ ಫಾದರ್ ಇನ್ ಲಾ ಮರ್ ಗಯೇ ಹೈಂ…” ನಾನು ಹೇಳುತ್ತಿರುವಂತೆಯೇ ಅಲ್ಲಿಯೇ ಕೂತಿದ್ದ ಒಬ್ಬ ಹೆಂಗಸು, ”ಕ್ಯಾ…? ಶಿವಾನಂದಜಿ ಮರ್ ಗಯೇ?! ಅರೆರೆ…” ಅಂತ ಲೊಚಗುಟ್ಟಿದಳು.
ಅಚ್ಚರಿಯಿಂದ ಆಕೆಯೆಡೆ ನೋಡುತ್ತ ಹೌದೆಂದು ತಲೆಯಾಡಿಸಿದೆ.
”ಕ್ಯಾ ಆಪ್ ಬೆಂಗಲೋರ್ ಕೆ ಹೈಂ…?” ಅಂತ ಆಕೆ.
”ನಹಿ… ಮೈ ನಾರ್ಥ್ ಕರ್ನಾಟಕ ಕಾ ಶಹರ್ ಹುಬ್ಳಿವಾಲಾ ಹೂಂ…”
”ಆಪ್ ಹುಬ್ಳಿವಾಲೆ?!” ಎಂದು ಅಚ್ಚರಿ ವ್ಯಕ್ತಪಡಿಸಿದ ಆಕೆ ”ಹಮ್ ಆಯೆ ಥೇ ವಹಾಂ… ತಬ್ ಏಕ್ ಥೇಟರ್ ವರ್ಕ್ ಶಾಪ್ ಭೀ ಚಲ್ ರಹಾ ಥಾ ಜಯತೀರ್ಥ ಜೋಶಿ ಕಾ…” ಎಂದಳು.
ನಾನು ಆ ವರ್ಕ್ ಶಾಪಿನ ಸಂಘಟಕರಲ್ಲೊಬ್ಬ ಎಂದು ಹೇಳಿ, ಆಕೆಯ ಹೆಸರು ಕೇಳಿದೆ.
”ಮೈ ವಿಭಾ ಮಿಶ್ರಾ…”
ಆಂ…! ಇವಳು ಅವಳೇನಾ…?! ಕೆಂಡಸಂಪಿಗೆಯಂತಿದ್ದ ಆ ಹುಡುಗಿ ಇದೀಗ ನೀರು ಚಿಮುಕಿಸಿದ ಕೆಂಡದ ಹಾಗೆ ನನ್ನೆದುರು ಕೂತಿದ್ದಾಳೆ… ಜಾಜಿಮಲ್ಲಿಗೆಯ ಬಳ್ಳಿಯಂತಿದ್ದ ವಿಭಾ ಈಗ ಜಾಲಿಯ ಕೊರಡಿನಂತಾಗಿದ್ದಾಳೆ…!
ಆ ದುರಂತದಲ್ಲಿ ಆಕೆಗೆ ಶೇಕಡಾ 80ರಷ್ಟು ಮೈ ಸುಟ್ಟಿತ್ತು ಅಂತ ಓದಿದ್ದೆ ಪತ್ರಿಕೆಗಳಲ್ಲಿ. ಈಗ ಮುಖವೊಂದನ್ನುಳಿದು ಮೈಯನ್ನೆಲ್ಲ ಮುಚ್ಚಿಕೊಂಡು ಕೂತಿದ್ದಳು. ಗದ್ದದವರೆಗೂ ಬಿಗಿಯಾಗಿ ಸುತ್ತಿಕೊಂಡ ಮಫ್ಲರು. ಮಣಿಕಟ್ಟಿನ ವರೆಗೆ ಮುಚ್ಚುವ ತೋಳುಗಳ ಕಮೀಜ್, ಎರಡೂ ಕೈಗಳಿಗೆ ಗವಸುಗಳು. ಪಾದದ ವರೆಗೆ ಬಿಗಿದಪ್ಪಿದ ಸಲ್ವಾರ್. ಪಾದಗಳಿಗೆ ಕಾಲುಚೀಲಗಳು. ತಲೆಯ ಮೇಲೆ ಮುಳ್ಳಿನ ಕಿರೀಟವಿಟ್ಟಂತೆ ಬಿರುಸುಗೂದಲ ವಿಗ್ಗು. ಮುಖದಲ್ಲಿ ಕಾಣುತ್ತಿದ್ದದ್ದು ಎರಡು ಬಿಳಿ ಬಿಳಿ ಪಿಳಿ ಪಿಳಿ ಕಣ್ಣುಗಳು, ಹಾಗೂ ಬಾಯಿ ತೆರೆದರೆ ಹೊಳೆವ ಶುಭ್ರ ದಂತಪಂಕ್ತಿ.
ಅಷ್ಟೆಲ್ಲ ಸುಟ್ಟುಕೊಂಡು ಮರಣಶಯ್ಯೆಯಲ್ಲಿ ಮಲಗಿದ್ದರೂ ಅಗಾಧ ಛಲದಿಂದ ಬದುಕಿ ಬಂದಾಕೆ ವಿಭಾ… ತಾನೂ ಬದುಕಿ, ‘ಕಾರಂತರು ನಿರ್ದೋಷಿ’ ಎಂಬ ಹೇಳಿಕೆ ನೀಡಿ ಅವರನ್ನೂ ಬದುಕಿಸಿದ ಹುಡುಗಿ ವಿಭಾ… ಆ ಘಟನೆಯ ನಂತರವೂ ಭೋಪಾಲದಲ್ಲಿಯೇ ಉಳಿದು, ರಂಗಚಟುವಟಿಕೆಗಳಲ್ಲಿ ತೊಡಗಿದಾಕೆ. ಮುಖ್ಯವಾಗಿ ಮಕ್ಕಳ ರಂಗಭೂಮಿಯಲ್ಲಿ ತೊಡಗಿಕೊಂಡು ತನ್ನ ಕಷ್ಟವನ್ನು ಮರೆತಾಕೆ.
ಆಕೆ ಹೈದರಾಬಾದಿಗೆ ಬಂದಿದ್ದುದಕ್ಕೆ ಕಾರಣ ಆಮೇಲೆ ತಿಳಿಯಿತು. ರಾಮೋಜಿರಾಯರಿಗೆ ಒಂದು ಅಭಿನಯ ಶಾಲೆಯನ್ನು ಆರಂಭಿಸುವ ಹುಕಿ ಹೊಕ್ಕುಬಿಟ್ಟಿತು. ಅದರ ಕರ್ಣಧಾರತ್ವ ವಹಿಸಲು ಸೂಕ್ತರಾದವರಲ್ಲಿ ನಮ್ಮ ಸಿ. ಬಸವಲಿಂಗಯ್ಯ ಸೇರಿದಂತೆ ಅನೇಕ NSD ಪದವೀಧರ ನಿರ್ದೇಶಕರುಗಳ ಹೆಸರುಗಳು ಪಟ್ಟಿ ಮಾಡಲ್ಪಟ್ಟವು. ಆದರೆ, ಯಾಕೋ ಭೋಪಾಲ್ ಬೇಸರವಾಯಿತೇನೋ ಎಂಬಂತೆ, ಈ ಕೆಲಸವನ್ನು ಒಪ್ಪಿ ಬಂದಾಕೆ ವಿಭಾ. ಯಾರೊಂದಿಗೂ ಬೆರೆಯದೆ, ತನ್ನ ಪಾಡಿಗೆ ತಾನು ಒಂದು ಮೂಲೆಯಲ್ಲಿ ಕೂತು ಅದೇನೇನೋ ಯೋಜನೆಗಳನ್ನು ರೂಪಿಸುತ್ತಿದ್ದಳು. ಆಕೆಗೆ ಅಲ್ಲಿ ಪರಿಚಯವಿದ್ದವರು ಮಾನ್ವಿ ಸಾಹೇಬರು ಮತ್ತು ಸೂರಿ ಇಬ್ಬರೇ.
ಮುಂದೊಮ್ಮೆ ಭೇಟಿಯಾದಾಗ ಭೋಪಾಲ್ ‘ರಂಗಮಂಡಲ’ದ ಬೆಂಗಳೂರು ಪ್ರಯೋಗಗಳ ಸಂದರ್ಭದಲ್ಲಿ ಶಿವಾನಂದ್ ಅದೆಷ್ಟು ಸಹಕರಿಸಿದರು ಎಂದೆಲ್ಲ ನೆನಪಿಸಿಕೊಂಡಿದ್ದಳು. ಆ ಸಂದರ್ಭದಲ್ಲಿ ಒಮ್ಮೆ ತಂಡದ ಕಚೇರಿಯಲ್ಲಿ (ಮಿನರ್ವದಿಂದ ಆರ್.ವಿ. ಕಾಲೇಜು ರಸ್ತೆ) ‘ಬೆನಕ’ ಕಲಾವಿದರು ಭೋಪಾಲ್ ಕಲಾವಿದರಿಗೆ ಒಂದು ಚಹಾ ಕೂಟ ಏರ್ಪಡಿಸಿದ್ದ ವಿಷಯವನ್ನು ನಾನು ನೆನಪಿಸಿದ್ದೆ.
ಹೈದರಾಬಾದಿನ ವಾತಾವರಣ ಆಕೆಗೆ ಹಿಡಿಸಲಿಲ್ಲ. ತಿಂಗಳೊಪ್ಪತ್ತಿನಲ್ಲಿ ವಿಭಾ ಮತ್ತೆ ಭೋಪಾಲ್ ಟ್ರೇನು ಹತ್ತಿದ್ದಳು.
ಅಲ್ಲಿ ಮತ್ತೆ ರಂಗಭೂಮಿ, ಮತ್ತೆ ಸಾಕ್ಷ್ಯ ಚಿತ್ರಗಳ ತಯಾರಿ ಅಂತೆಲ್ಲ ತೊಡಗಿಕೊಂಡವಳು ವಿಭಾ (ಗುರು ಕಾರಂತರ ಬಗ್ಗೆ ಒಂದು ವಿಭಿನ್ನವಾದ ಡಾಕ್ಯುಮೆಂಟರಿ ತಯಾರಿಸಿದಳು). ಅಂಥದರಲ್ಲೂ ಒಂಟಿತನವನ್ನು ಅನುಭವಿಸುತ್ತ ಒಳಗೊಳಗೇ ಕೊರಗುತ್ತ ಕುಡಿತಕ್ಕೆ ಶರಣಾದಾಕೆ ವಿಭಾ. ಕುಡಿ ಕುಡಿದು ಕರುಳನ್ನು ಹಾಳು ಮಾಡಿಕೊಂಡಳು. ಲಿವರ್ ನಿಷ್ಕ್ರಿಯವಾಗಿ ಅರಿವು ಅಳಿದು ಆಸ್ಪತ್ರೆಗೆ ಸೇರಿಸಲ್ಪಟ್ಟಳು. ಅಲ್ಲಿಯ ಸರಕಾರ ಆಕೆಯ ಖರ್ಚಿನ ಭಾರವನ್ನು ಹೊತ್ತು ಬದುಕಿಸಿಕೊಳ್ಳಲು ಪ್ರಯತ್ನಿಸಿತು. ಊಹೂಂ… 2007ರ ಜನವರಿ ಮೊದಲ ವಾರದಲ್ಲಿ ಹೆಚ್ಚಿನ ಚಿಕಿತ್ಸೆಗೆ ದಿಲ್ಲಿಗೆ ಸಾಗಿಸಲ್ಪಟ್ಟ ವಿಭಾ ತಿಂಗಳು ಉರುಳುವುದರೊಳಗೆ ಪರಲೋಕ ಯಾತ್ರೆಗೆ ತೆರಳಿಬಿಟ್ಟಳು.
ಭೋಪಾಲದ ಒಂದು ತಂಡ ಈ ಕಲಾವಿದೆಯ ನೆನಪಿಗಾಗಿ ಪ್ರತಿವರ್ಷ ‘ವಿಭಾ ಮಿಶ್ರಾ ಸಂಗೀತ ಸಮ್ಮಾನ್,’ ‘ವಿಭಾ ಮಿಶ್ರಾ ಅಭಿನಯ ಸಮ್ಮಾನ್,’ ಮತ್ತು ‘ವಿಭಾ ಮಿಶ್ರಾ ರಂಗಮಿತ್ರ ಸಮ್ಮಾನ್’ ಎಂಬ ಪ್ರಶಸ್ತಿಗಳನ್ನು ಆಯಾ ವಿಭಾಗದ ಶ್ರೇಷ್ಠರಿಗೆ ನೀಡಿ ಗೌರವಿಸುತ್ತಿದೆ.

-೦-೦-೦-೦-೦-

1987ರಿಂದ 1990ರ ಅವಧಿಗೆ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರಲ್ಲ ಬಿ.ವಿ. ವೈಕುಂಠರಾಜು ಆಗ ನಾನು ಧಾರವಾಡ ಜಿಲ್ಲೆಯ ಸದಸ್ಯ. ಆ ವರ್ಷ ನಾಲ್ಕು ವಿಭಾಗಗಳಲ್ಲಿ ನಾಟಕೋತ್ಸವ ಏರ್ಪಡಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು. ‘ಬೆಳಗಾವಿ ವಿಭಾಗದ ನಾಟಕೋತ್ಸವ’ ಬಾಗಲಕೋಟೆಯಲ್ಲಿ ನಡೆಯಬೇಕು ಮತ್ತು ನಾನು (ಗೋಪಾಲ ವಾಜಪೇಯಿ) ಮತ್ತು ಇಳಕಲ್ಲಿನ ವಿಶ್ವನಾಥ ವಂಶಾಕೃತಮಠ ಆ ನಾಟಕೋತ್ಸವದ ಸಂಚಾಲಕರಾಗಿ ಕೆಲಸ ಮಾಡಬೇಕೆಂಬುದು ಇನ್ನೊಂದು ನಿರ್ಣಯ.
ಆಗಷ್ಟೇ ಕಾರಂತರು ಮತ್ತೆ ಕರ್ನಾಟಕಕ್ಕೆ ಮರಳಿದ್ದರು. ಕಾರಂತರನ್ನು ಮತ್ತೆ ಚಟುವಟಿಕೆಗಳಲ್ಲಿ ತೊಡಗಿಸಬೇಕು ಹಾಗೂ ಆ ಮೂಲಕ ಅವರ ಸೇವೆಯನ್ನು ನಾಡು ಪಡೆದುಕೊಳ್ಳಬೇಕು ಎಂಬುದು ಆಗ ಸಾಂಸ್ಕೃತಿಕ ಲೋಕದ ಹಿತೈಷಿಗಳ ಅಭಿಪ್ರಾಯ. ಆ ಕಡೆ ಸರಕಾರದ ಮಟ್ಟದಲ್ಲಿ ರಂಗಾಯಣದ ರೂಪುರೇಷೆಯ ಕೆಲಸ ಆಗಷ್ಟೇ ನಡೆದಿತ್ತು. ನಾಟಕ ಅಕಾಡೆಮಿಯ ಅಧ್ಯಕ್ಷ ನಾತೆಯಲ್ಲಿ ವೈಕುಂಠರಾಜು ಆ ದಿಶೆಯಲ್ಲಿ ವಿಶೇಷ ಮುತುವರ್ಜಿ ವಹಿಸಿದರು. ಅಷ್ಟೇ ಅಲ್ಲ, ಬಾಗಲಕೋಟೆ ನಾಟಕೋತ್ಸವದ ಉದ್ಘಾಟಕರಾಗಿ ಕಾರಂತರನ್ನು ಒಪ್ಪಿಸಿಬಿಟ್ಟರು.
ಭೋಪಾಲ್ ‘ಅಗ್ನಿದಿವ್ಯ’ದ ನಂತರ ಅದು ಕಾರಂತರ ಮೊಟ್ಟಮೊದಲ ಸಾರ್ವಜನಿಕ ಕಾರ್ಯಕ್ರಮ. ಆ ಬಯಲಿನಲ್ಲಿ ಸೇರಿದ್ದ ನಾಲ್ಕಾರು ಸಾವಿರ ಜನರೆದುರು ಈ ರಂಗಜಂಗಮ ಅಖಂಡ 45 ನಿಮಿಷ ವಾಗ್ಝರಿಯನ್ನೇ ಹರಿಸಿದರು. ಆ ಭಾಷಣ ಮುಗಿಸಿ ಕೂತರಲ್ಲ ಆಗ ಒಂಥರಾ ಫ್ರೆಶ್ನೆಸ್ ಕಂಡಿತು ಅವರ ಮುಖದಲ್ಲಿ.
ನಂತರದ ದಿನಗಳಲ್ಲಿ ಅವರು ಮೈಸೂರಿಗೆ ಶಿಫ್ಟಾದರು. ರಂಗಾಯಣದ ಕೆಲಸದಲ್ಲಿ ತಮ್ಮನ್ನೇ ಮರೆತರು.
1988ರಲ್ಲಿ ರಾಮಕೃಷ್ಣ ಹೆಗಡೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಇತ್ತರಲ್ಲ… ಕೂಡಲೇ ವೈಕುಂಠರಾಜು ನಾಟಕ ಅಕಾಡೆಮಿಯ ಅಧ್ಯಕ್ಷಸ್ಥಾನವನ್ನು ತ್ಯಜಿಸಿದರು. ಅವರ ಭೇಟಿಗೆಂದು ಆ ಸಂಜೆ ಶ್ರೀರಾಮಪುರದಲ್ಲಿದ್ದ ಅವರ ಮನೆಗೆ ಹೋದೆ. ಅವರೊಂದಿಗೆ ಮಾತಾಡುತ್ತ ಕೂತ ಹೊತ್ತಿನಲ್ಲಿಯೇ ಅಲ್ಲಿಗೆ ಕಾರಂತರು ಬಂದರು. ನಾನು ಅವರಿಬ್ಬರ ಮಾತು ಕೇಳುತ್ತ ಕೂತುಬಿಟ್ಟೆ.

-೦-೦-೦-೦-೦-

1996-97ರ ತನಕ ಮತ್ತವರ ದರ್ಶನವಾಗಿರಲಿಲ್ಲ. ಅಷ್ಟರಲ್ಲಾಗಲೇ ಅವರ ಕಲ್ಪನೆಯ ಕೂಸು ‘ರಂಗಾಯಣ’ ತನ್ನ ಕಾಲ ಮೇಲೆ ತಾನು ನಿಲ್ಲುವಷ್ಟು ಸಶಕ್ತವಾಗಿತ್ತು. ನಾನು ಕೆಲಸ ಮಾಡುತ್ತಿದ್ದ ‘ಸಂಯುಕ್ತ ಕರ್ನಾಟಕ’ದಲ್ಲಿ ಗ್ರೀಷ್ಮದ ಭೀಕರತೆ ವಿಪರೀತವೆಂಬಷ್ಟು ಜಾಸ್ತಿಯಾಗಿದ್ದ ಕಾಲ ಅದು. ಆಗೊಮ್ಮೆ ಹುಬ್ಬಳ್ಳಿಗೆ ಬಂದಿದ್ದ ಕೆ. ಶ್ಯಾಮರಾಯರು ”ಹುಬ್ಬಳ್ಯಾಗೆ ಸೆಕೆ ಜಾಸ್ತಿ. ಬಾ ಬೆಂಗಳೂರಿಗೆ. ಅದು ಉದ್ಯಾನ ನಗರಿ. ಲಾಲ್ ಬಾಗ್ ಇದೆ, ಕಬ್ಬನ್ ಪಾರ್ಕ್ ಇದೆ ಅಲಸೂರು ಕೆರೆ ಇದೆ… ಆರಾಮಾಗಿ ಓಡಾಡಿಕೊಂಡು ಇರಬಹುದು,” ಅಂತ ಒಮ್ಮೆ ನಕ್ಕರು.
ಅದು ಶ್ಯಾಮರಾಯರ ರೀತಿ. ಹಾಗೆ ನಕ್ಕರೆಂದರೆ ಅವರು ಅದಾಗಲೇ ವರ್ಗಾವಣೆ ಆಜ್ಞೆಯನ್ನು ಹೊರಡಿಸಿಯೇ ಇಲ್ಲಿಗೆ ಬಂದಿದ್ದಾರೆಂದು ಅರ್ಥ. ಒಮ್ಮೊಮ್ಮೆ ಅವರು, ”ಏನಪಾ… ಅಲ್ಲೆ ಬೆಂಗಳೂರಾಗ ನಿನ್ನ ನಾಟಕಾ ಸಿನೆಮಾದ ಗೆಳ್ಯಾರು ಭಾಳ ಕೇಳ್ಳಿಕತ್ತಾರ… ಬಂದು ಬಿಡು,” ಎಂದು ಇನ್ನೊಂದು ರೀತಿಯಿಂದ ವರ್ಗಾವಣೆಯ ಸೂಚನೆ ಕೊಡುತ್ತಿದ್ದದ್ದೂ ಉಂಟು. ಒಂದು ಸಲ ಅವರು ಹಾಗೆ ಹೇಳಿದ ಸಂಜೆಯೇ ಆಜ್ಞೆ ಕೈಸೇರಿರುತ್ತಿತ್ತು. ‘ಈಗಿಂದೀಗಲೇ ನಿಮ್ಮನ್ನು ಬಿಡುಗಡೆ ಮಾಡಲಾಗಿದೆ. ನೀವು ನಾಳೆ ಬೆಳಿಗ್ಗೆ ಬೆಂಗಳೂರಿನ ಕಚೇರಿಯಲ್ಲಿ ಕೆಲಸಕ್ಕೆ ಹಾಜರಾಗತಕ್ಕದ್ದು’ ಎಂಬ ರಿಲೀವಿಂಗ್ ಆರ್ಡರೂ ಜೊತೆಗಿತ್ತು.
ಮತ್ತೆ ಶುರು ವನವಾಸ. ನಮ್ಮ ಮನೆಯವರೆಲ್ಲ ಹುಬ್ಬಳ್ಳಿಯಲ್ಲಿ ಕೂತು ‘ನಾವೊಂದು ತೀರ, ನೀವೊಂದು ತೀರ…’ ಅಂತ ಹಾಡಿದ್ದೇ ಬಂತು. ಸದಾ ನಮ್ಮ ಮೇಲೆ ಶ್ಯಾಮರಾಯರ ಹಸ್ತಕರ ಕಣ್ಣುಗಳು ನೆಟ್ಟಿರುತ್ತಿದ್ದವು. ಅಂಥದರಲ್ಲೇ ಕಣ್ಣು ತಪ್ಪಿಸಿ ನಾಟಕ, ಸಂಗೀತ ಅಂತ ಹೋಗಬೇಕು.
ಆ ಸಂದರ್ಭದಲ್ಲೇ, ಕಾರಂತರು ಸಂಗೀತ ಸಂಯೋಜಿಸಿದ ‘ಇಸ್ಪಿಟ್ ರಾಜ್ಯ’ ನಾಟಕದ ರಂಗಗೀತೆಗಳ ಧ್ವನಿ ಸುರುಳಿ ಗಾಯನ ಸಮಾಜದಲ್ಲಿ ಬಿಡುಗಡೆಯಾದದ್ದು. ಸಿ. ಅಶ್ವಥ್ ಜತೆ ಕಾರ್ಯಕ್ರಮಕ್ಕೆ ಹೋದೆ. ಹೊರಗೆ ನಿಂತಿದ್ದ ಕಾರಂತರು ಮುಗುಳ್ನಕ್ಕರು. ”ಬನ್ನಿ ವಾಜಪೇಯಿ,” ಗಟ್ಟಿಯಾಗಿ ಕೈ ಹಿಡಿದುಕೊಂಡರು. ಆ ಮೇಲೆ ಪಕ್ಕದಲ್ಲಿದ್ದ ಕವಿ ಲಕ್ಷ್ಮೀನಾರಾಯಣ ಭಟ್ಟರಿಗೆ ನನ್ನನ್ನು ಪರಿಚಯಿಸುತ್ತ, ”… ನೀವು ನೋಡಿದ್ದೀರಲ್ಲ, ‘ಮುಂದೇನ ಸಖಿ…’ ಎಂದವರು ಮುಂದುವರಿಯುತ್ತಿರುವಂತೆಯೇ, ”ಸರ್… ಅದು ವ್ಯಾಸ ದೇಶಪಾಂಡೆ ಬರೆದದ್ದು..” ಅಂತ ತಿದ್ದಿದೆ. ಅಷ್ಟರಲ್ಲೇ ಧ್ವನಿಸುರುಳಿ ಬಿಡುಗಡೆ ಮಾಡಬೇಕಿದ್ದ ನ್ಯಾ. ಎ. ಜೆ. ಸದಾಶಿವ ಅವರು ಬಂದಿದ್ದರಿಂದ ಅವರೆಲ್ಲ ಅತ್ತ ಧಾವಿಸಿದರು.

-೦-೦-೦-೦-೦-

ಅದೇ ಕೊನೆ ನಾನು ಕಾರಂತರನ್ನು ಕಂಡು ಮಾತಾಡಿದ್ದು. ಆ ಮೇಲೆ ಸಂಯುಕ್ತ ಕರ್ನಾಟಕದ ‘ಧಗೆ’ ತಾಳಲಾರದೆ, ಕೆಲಸಕ್ಕೆ ರಾಜೀನಾಮೆಯಿತ್ತು, ಹೈದರಾಬಾದಿನ ಬಸ್ಸು ಹತ್ತಿದೆ. ಇನ್ನೂ ಶುರುವಾಗಬೇಕಿದ್ದ ಈಟಿವಿ ಕನ್ನಡ ವಾಹಿನಿಯಲ್ಲಿ ಕೆಲಸ ಖಾಲಿ ಇತ್ತು.
ಆಮೇಲಾಮೇಲೆ ಕಾರಂತರ ಅನಾರೋಗ್ಯದ ಕುರಿತ ಸುದ್ದಿಗಳು. ಆಸ್ಪತ್ರೆಗೆ ಸೇರಿಸಿದ್ದಾರೆಂಬ ವಾರ್ತೆ. ತೀರ ಗಂಭೀರ ಸ್ಥಿತಿ ತಲಪಿದ್ದಾರೆಂಬ ಕಳವಳದ ವರ್ತಮಾನ. ಅವರನ್ನು ನೋಡಲು ಜೀವ ಚಡಪಡಿಸುತ್ತಿತ್ತು.
ಆಸ್ಪತ್ರೆ ಸೇರಿದವರ ಸ್ಥಿತಿ ಗಾಳಿಗೊಡ್ಡಿದ ಸೊಡರಿನಂತೆ. ಮೂರು ತಿಂಗಳು ಮುಂಚೆಯೇ ಕಾರಂತರ ಕುರಿತು ಎಲ್ಲ ಮಾಹಿತಿಗಳನ್ನು ಕಲೆ ಹಾಕಿಕೊಂಡು ಕೂತೆವು.

ಅಂಥದರಲ್ಲೇ ಡಾ. ಚಂದ್ರಶೇಖರ ಕಂಬಾರರ ‘ಸಿಂಗಾರೆವ್ವ ಮತ್ತು ಅರಮನೆ’ ಕಾದಂಬರಿಯನ್ನು ಗೆಳೆಯ ನಾಗಾಭರಣ ಸಿನಿಮಾ ಮಾಡಲು ಮುಂದಾಗಿ, ನನ್ನನ್ನು ಹಾಡು-ಸಂಭಾಷಣೆಗಳನ್ನು ಬರೆಯಲು ಕರೆದದ್ದು. ಯಥಾಪ್ರಕಾರ ಸಿ. ಅಶ್ವಥ್ ಸಂಗೀತ.
ಮೈಸೂರಿನ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಪಕರು. ಚಿತ್ರದ ಹಾಡುಗಳ ಕಂಪೋಜಿಂಗ್ ತಮ್ಮ ‘ಸಂದೇಶ್’ ಹೋಟಲಿನಲ್ಲಿಯೇ ಆದರೆ ಯಶಸ್ಸು ಗ್ಯಾರಂಟಿ ಎಂಬ ಸೆಂಟಿಮೆಂಟು ಅವರದು.
ನಾನು ಹೈದರಾಬಾದಿನಿಂದ ಮೈಸೂರಿನ ಬಸ್ಸು ಹತ್ತಿದೆ. ನಿದ್ದೆಗೇಡಿನ ಎಂಟನೂರೈವತ್ತು ಚಿಲ್ಲರೆ ಕಿಲೋಮೀಟರುಗಳ ಅಂತರದ ಪ್ರಯಾಣ.
ಬೆಳಿಗ್ಗೆ ಮೈಸೂರಿನ ಬಸ್ ನಿಲ್ದಾಣದಲ್ಲಿಳಿದಾಗ ಸ್ಟಾಲುಗಳಲ್ಲಿ ಕಣ್ಣಿಗೆ ಬಿದ್ದ ಪತ್ರಿಕೆಗಳು ‘ರಂಗಜಂಗಮ’ನ ಅಂತ್ಯದ ವಾರ್ತೆಯನ್ನು ಹೊತ್ತು ನಿಂತಿದ್ದವು.
ನಾನಲ್ಲಿ ಹೈದರಾಬಾದು ದಾಟಿ ಎರಡು ಮೂರು ಗಂಟೆಗಳಲ್ಲಿಯೇ ಕಾರಂತರು ಬೆಂಗಳೂರಲ್ಲಿ ಕೊನೆಯುಸಿರೆಳೆದಿದ್ದರು. ಅಂದು 2002ರ ಸೆಪ್ಟೆಂಬರ್ 1.
ಮನಸ್ಸು ಖಿನ್ನವಾಯಿತು.
ಅವರ ನಾಟಕಗಳು, ಅವರ ಪಾತ್ರಗಳು, ಅವರ ಹಾಡುಗಳು…
ಅವರ ನಗೆ, ಅವರ ಕುತೂಹಲದ ನೋಟ, ಅವರ ಸಿಟ್ಟು-ಸೆಡವು ಇತ್ಯಾದಿ ಇತ್ಯಾದಿ…
ಕಣ್ಣೆದುರು ಅವರ ಚಿತ್ರಗಳೇ ಕಟ್ಟತೊಡಗಿದವು.
 

‍ಲೇಖಕರು avadhi

April 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ತ್ರಿಲೋಚನ

    ಮೊದಮೊದಲು ನನಗೆ ಏನಿದು ಎಂ ಪಿ ಪ್ರಕಾಶ್ ಬಗ್ಗೆನ ಇದು ಅನಿಸಿತು. ತುಂಬಾ ಚೆನ್ನಾಗಿದೆ. ನನಗೆ ಬಿ ವಿ ಕಾರಂತರ ಬಗ್ಗೆ ಸ್ವಲ್ಪವೇ ಸ್ವಲ್ಪ ಸ್ನೇಹಿತರ ಬಾಯಿಂದ ಕೇಳಿ ತಿಳಿದಿದ್ದೆ. ಇಂದು ಮತ್ತಷ್ಟು ತಿಳಿಸಿದ್ದಿರಿ!ಬಹಳಷ್ಟು ಹೊಸ ವಿಷಯಗಳು. ಧನ್ಯವಾದಗಳು:)

    ಪ್ರತಿಕ್ರಿಯೆ
  2. umesh desai

    ನೆನಪಿನ ಪೆಟಾರಿ ತಗದು ಕಾರಂತರ ಪರಿಚಯ ಮಾಡಿಕೊಟ್ರಿ..
    ಅವರು ಹೇಳಿದಂಗ ನಮ್ಮ ಭಾಷಾದಾಗ ನಾವು ಬರೀಬೇಕು..ಏನಂತೀರಿ..??

    ಪ್ರತಿಕ್ರಿಯೆ
  3. hipparagi Siddaram

    ಸರ್,……ಅಂತಾರಾಷ್ಟ್ರೀಯ ಖ್ಯಾತಿ ಪಡೆದ, ಪದ್ಮಶ್ರೀ ಬಿರುದಾಂಕಿತರಾದ ಇನ್ನೂ ಕೆಲವರನ್ನು ನಾನು ನೋಡಿದ್ದೆ. ತಾವು ಶ್ರೇಷ್ಠ ಎಂಬ ಘಮಿಂಡಿಯಲ್ಲೇ ಜನರಿಂದ ದೂರವೇ ತಿರುಗಾಡುವಂಥವರು. ತಮ್ಮನ್ನೇ ತಾವು ‘ದೊಡ್ಡವರು’ ಎಂದು ಭಾವಿಸಿಕೊಂಡವರು……ಇಂಥವರ ನಡುವೆ ಅಪರೂಪದವರು….ಈ ರಂಗಜಂಗಮರು….ಅವರಿಗೆ ನುಡಿನಮನಗಳು…

    ಪ್ರತಿಕ್ರಿಯೆ
  4. ಶಿವು ಮೋರಿಗೇರಿ

    ಸರಾ… ನೀವು ನಮ್ಮ ಹುಲಿಗುಡ್ಡದ ಹುಲಿ, ಹಂಪಿ ಉತ್ಸವದ ರುವಾರಿ ಎಂ ಪಿ (ಹಂಪಿ) ಪ್ರಕಾಶ್ ಸಾಹೇಬ್ರನ್ನ ನೆನಪುಮಾಡಿಕೊಂಡಿದ್ದು ನನಿಗ್ಯ ಬಾಳ ಬಾಳ ಖುಷಿ ಆತು ನೋಡ್ರೀ ಸರಾ…

    ಪ್ರತಿಕ್ರಿಯೆ
  5. Balasubrahmanya Nimmolagobba Balu

    ನಿಮ್ಮ ಬರವಣಿಗೆಯಲ್ಲಿ ನನಗೆ ಹೊಸ ಪ್ರಪಂಚ ಸಿಕ್ಕಿದೆ, ಎಷ್ಟೊಂದು ಅಮೂಲ್ಯ ವಿಚಾರಗಳನ್ನು ತಾವು ಬರೆದಿದ್ದೀರ, ದಯಮಾಡಿ ಇವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದಲ್ಲಿ ಬಹಳ ಜನರಿಗೆ ಒಳ್ಳೆಯ ಮಾಹಿತಿ ಸಿಗುತ್ತದೆ. ನಮಗೆ ಗೊತ್ತಿಲ್ಲದ ಎಷ್ಟೋ ಒಳ್ಳೆಯ ವಿಚಾರಗಳು ನಿಮ್ಮ ಬತ್ತಳಿಕೆಯಲ್ಲಿವೆ. ಹಿರಿಯರ ಬಗ್ಗೆ ಏನು ಹೇಳಲಿ ನಿಮ್ಮ ಜ್ಞಾನಕ್ಕೆ ಶರಣು.

    ಪ್ರತಿಕ್ರಿಯೆ
  6. Jayalaxmi Patil

    ವಿಭಾ ಮಿಶ್ರಾರಿಗಾದ ದುರ್ಘಟನೆಯ ನಂತರದ ಅವರ (ವಿಭಾ) ಮನೋಸ್ಥೈರ್ಯ, ಹೊರಜಗತ್ತಿನ ಜೊತೆಗಲ್ಲದೇ ತನ್ನೊಂದಿಗೇ ಹೋರಾಡುವುದಿದೆಯಲ್ಲ ಅದನ್ನೆಲ್ಲ ಅವರು ಹೇಗೆ ಎದುರಿಸಿರಬೇಕು ಎಂದು ಯೋಚಿಸಿದರೇ ದಿಗಿಲಾಗುತ್ತದೆ.
    ಕಾಕಾ, ನಿಮ್ಮ ಈ ಲೇಖನ ಮಾಲಿಕೆ ರಂಗಾಸಕ್ತರಿಗೊಂದು ಅಮೂಲ್ಯ ವಿವರಗಳ ಆಸ್ತಿ.

    ಪ್ರತಿಕ್ರಿಯೆ
  7. Mohan V Kollegal

    ನಿಮ್ಮ ನೆನಪಿನ ಸರಣಿಗಳು ನಿಜಕ್ಕೂ ಸರಾಗವಾಗಿ ಓದಿಸಿಕೊಳ್ಳುತ್ತವೆ. ಕಾರಂತರ ಜೊತೆಗೆ ಎಂ.ಪಿ.ಪಿ ಯವರ ಬಗ್ಗೆಯೂ ಸ್ವಲ್ಪ ತಿಳಿದುಕೊಂಡಂತಾಯಿತು… ಧನ್ಯವಾದಗಳು… 🙂

    ಪ್ರತಿಕ್ರಿಯೆ
  8. na.damodara shetty

    kaaranthara koneya dinagalli naanuu vinaayak aaspatreya eduru kuutiruttfiddE. aa dinagalella mattomme nenapige banduvu, indu avara hesaru hididu, chitra hididu avarANNE APAARTHAKKE EDEMAADUVUDU KANDAAGA NIJAKKUU ALU BARUTTE.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: