ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನೂ ಹೀಗೆ ಮುನ್ಸೂಚನೆಯಾಗಿದ್ದ..

ಕ್ಷಮೆಯಿರಲಿ ಪ್ರಿಯತಮರೇ

ಹೇಮಲತಾ 

ಅಜನಬಿ ಹುಡುಗರೆ,
ನಿಮ್ಮ ಪ್ರೇಮದ ಮಾತು,ನಿವೇದನೆ,
ತಲ್ಲಣ ಇವ್ಯಾವುವು ಈಗೀಗ
ನನ್ನ ತಾಕುತ್ತಲೇ ಇಲ್ಲಾ..
ಕಂಗಾಲಾಗಿದ್ದೇನೆ ನಾನೂ
ನಿಮಗಿಂತ ತುಸು ಹೆಚ್ಚೇ..

ಒಂದು ಮಾತು ಎಂದು ಅಲ್ಲೇ ತಡೆದು
ಹೇಳಲಾ ಎಂದು ನೀವು ರಾಗ ಎಳೆದು
ಪೀಠಿಕೆ ಹಾಕಿದಾಗಲೇ
ಒಂದಷ್ಟು ಆತಂಕ,ಕೌತುಕ,ಸಿಹಿ ಯಾತನೆ
ಕಿವಿಗಡಿಚ್ಚುವ ಎದೆ ನಗಾರಿ
ರೋಮಾಂಚನದಂತದ್ದೊಂದು
ಅನುಭವಕ್ಕೆ ಬರಬೇಕಿತ್ತು
ನೈಸರ್ಗಿಕ ಕಾನೂನಿನ ಅನ್ವಯ
ಮಳೆಯ ಬರುವಿಕೆಯ ಮುಂಚೆ
ತಂತಾನೆ ಮಿಂಚು ಹರಿಯುತ್ತದೆ

ಆದರೆ ಕ್ಷಮೆಯಿರಲಿ ಪ್ರಿಯತಮರೇ,
ನಿಮಗೆ ಗೊತ್ತಿರದ ಘಳಿಗೆಯೊಂದಿದೆ
ನಾನು ಮತ್ತೆ ಮತ್ತೆ ಆ ಒಂದು ದಿನದ ಹಂಗಿಗೆ ಜೀವನ ಪೂರ್ತಿ ಒಳಗಾಗಿದ್ದೇನೆ …
ಅವನೂ ಹೀಗೆ ಮುನ್ಸೂಚನೆಯಾಗಿದ್ದ
ಮಳೆಯ ಕನಸನ್ನು ಕಂಡಿದ್ದೆನಾ ಎಂದರೆ
ಉತ್ತರ ಸರಿಯಾಗಿ ಗೊತ್ತಿಲ್ಲ
ಆದ್ರೆ ಅವನು ಅಕಾರಣ ಸಿಡಿಲಾದ
ಕನಿಷ್ಠ ಸ್ನೇಹಕ್ಕಾದರೂ  ಪ್ರತಿಷ್ಠೆ ಅಡ್ಡ ಬರಹುದೆ
ಸಂಕಟದ ಚಂಡಮಾರುತ
ಇಲ್ಲಿ ಕೊರತೆಗಳಿರದೆ ಇರಬಹುದು , ಆದರೆ ಅಲ್ಲಿನ ಅಗತ್ಯಗಳು ಏನೋ !
ತಿರಸ್ಕಾರದ ನೋವು ಮೊನಚು

ನಂತರ ಅದೆಷ್ಟು  ಮಿಂಚುಗಳು ಸುಮ್ಮನೆ ಮಿನುಗಿ
ಮರೆಯಾಗಲೆಂದೆ ಬಂದವು ಹೋದವು  ,
ಭೂಮಿಗೆ ಬದುಕುಪೂರ ಒಂದೇ ಮಳೆಯಾಗುವುದಿಲ್ಲ
ಕಾಯಬಾರದು ಹೃದಯ ಹಾಸಿ ಶಾಪ ಹೊತ್ತಂತೆ
ಹೌದು ,
ನನಗೀಗ   ಜ್ಞಾನೋದಯವಾಗಿದೆ
ಅಷ್ಟಕ್ಕಾದರೂ ಮಿಂಚಿದೆಲ್ಲಾ
ಸುರಿಯಬೇಕೆಂದಿಲ್ಲಾ
ಗುಡುಗಿಗೂ ಮುನ್ನವೂ ಬೆಳಗುತ್ತದೆ
ಹನಿ ಕಾದಿದ್ದು ದಗೆಯಲ್ಲೇ ಮುಗಿದಾಗ
ಸುಟ್ಟ ನೆಲ ಬೆಂಗಾಡು,ಅಷ್ಟೇ

ನಿರ್ಭಾವುಕ ಜನರು ,
ವಂಚನೆಯ ತಿರುಳನ್ನು
ನುಣುಪಾದ ಜರ್ಮದಲ್ಲಿ ಹುದುಗಿಸಿರುತ್ತಾರೆ
ಓ ಮನ್ನಿಸಿ ಇದೆಲ್ಲಾ ನಿಮಗೆ ಅರ್ಥವಾಗುವುದಿಲ್ಲ
ಗಂಡಸರೆಲ್ಲಾ ಮೋಸಗಾರರೇ
ಅಂತ ನಾನನ್ನುವುದು
ಎಲ್ಲರೂ ಹಾಗಿರೋಲ್ಲ
ಅಂತ ನೀವು ತಿದ್ದುವುದು ಬಹಳಷ್ಟು ಬಾರಿ
ಪುನರಾವರ್ತಿಸಿದೆ,…

ಇಷ್ಟಾದ ಮೇಲೆ ಪರ ಊರಿನ
ಮೌನಿ ಎದೆಯ ಕಂಪನಗಳು ಸತ್ಯವಿದ್ದರೂ
ನಾನೀಗ ಕ್ರೂರಿ…
ನನ್ನ ನಾ ಕ್ಷಮಿಸಿಕೊಳ್ಳಲು
ನೂರು ಸುಳ್ಳಿನ ಹೆಣಗಳನ್ನು
ಸತ್ಯದ ಮೊನೆಗಳಿಂದ ಕೂಯ್ದು
ನೋವಾಗದಂತೆ ಒಲೆದು
ನಂಬಿಕೆಯ ತೇಪೆ ಲಗತ್ತಿಸಿ
ನನ್ನ ನಾನೇ ಹೊಲೆದುಕೊಂಡಿದ್ದೇನೆ
ಸತ್ತ ಹೃದಯಕ್ಕೆ ಮಣ್ಣು ಹೂಯ್ದಾಗಿದೆ
ಸತ್ತದ್ದು ಎಂದಾದರೂ ಮತ್ತೆ
ಚಿಗುರಿದೆ ಪ್ರತೀತಿ ಇದೆಯೇ

‍ಲೇಖಕರು admin

27 December, 2016

1 Comment

  1. ಲಲಿತಾ ಸಿದ್ಧಬಸವಯ್ಯ

    ಕವನ ಬಹಳ ಚೆನ್ನಾಗಿದೆ. ಮತ್ತೆ ಓದುವಂತಿದೆ. ಹೊಸತನವಿದೆ ಹಳೆಯ ವಸ್ತುವಿನ ಮಂಡನೆಯಲ್ಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading