ಜಿ ಎನ್ ಮೋಹನ್
ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ

ಒಂದಿಷ್ಟು ಪ್ರಶ್ನೆ ಕೇಳಬೇಕಾಗಿದೆ
ಇನ್ನಾರಿಗೂ ಅಲ್ಲ ನೇರ ಷೇಕ್ಸ್ ಪಿಯರನಿಗೇ:
ಏಕೆ ಹಾಗಾಯಿತು
ಒಬ್ಬೊಬ್ಬರದೂ ಒಂದೊಂದು ರೀತಿಯ ಅಂತ್ಯ ?
ಕತ್ತಿ ಸೆಣಸಿ ರಾಜನಿಗಾಗಿ ಯುದ್ಧ
ಗೆಲ್ಲುವುದೊಂದೇ ಮುಖ್ಯ ಎಂದುಕೊಂಡಿದ್ದ
ಮ್ಯಾಕ್ ಬೆತ್ ನಿಗೆ ಏಕೆ ಮುಖಾಮುಖಿಯಾಗಿಸಿದೆ
ಆ ಮೂರು ಜಕ್ಕಿಣಿಯರನ್ನು?
ಜೋಡಿಯಾಗಿಸಿದೆ ಇನ್ನಷ್ಟು ಮತ್ತಷ್ಟು
ಆಕಾಂಕ್ಷೆಗಳ ನೀರೆರೆವ ಆ ಲೇಡಿ ಮ್ಯಾಕ್ ಬೆತ್ ಳನ್ನು?
ಒಥೆಲೊ ಡೆಸ್ದಮೋನಾಳ ಮಧ್ಯೆ
ಬೇಕಿತ್ತೆ ಆ ಕರವಸ್ತ್ರ
ಸಂಶಯದ ಸುಳಿ ಬಿತ್ತಬೇಕಿತ್ತು
ಎಂಬುದೇ ನಿನ್ನ ಆಸೆಯಾಗಿದ್ದಿದ್ದರೆ
ನೇರ ಎರಡು ಸ್ವಗತದಲ್ಲೋ ಇಲ್ಲಾ
ಮೂರು ಅಂಕದಲ್ಲೋ ಇಬ್ಬರನ್ನೂ
ಎದುರು ಬದುರಾಗಿಸಿ ಮಾತಿಗೆ
ಮಾತು ಹೆಣೆದು ಸಲೀಸಾಗಿ
ಸೋಡಾ ಚೀಟಿ ಕೊಡಿಸಿಬಿಡಬಹುದಿತ್ತಲ್ಲ?
ಏಕೆ ಬೇಕಿತ್ತು ಸಂಶಯಗಳನ್ನು
ಬಿತ್ತುವ ಹಗಲಿರುಳೂ ನಿದ್ದೆ
ಇಲ್ಲದಂತೆ ಮಾಡುವ
ಕೊನೆಗೆ ಅವರೂ ನೀನೂ ಜೊತೆಗೆ ನಾವೂ
ಹೊರಳಾಡುವಂತೆ ಮಾಡುವ
ಆ ಕರವಸ್ತ್ರದ ಕಥೆ ?
ಪ್ರಶ್ನೆ ಇರುವುದು ಷೇಕ್ಸ್ ಪಿಯರನಿಗೆ :
ಇರಳೆಲೇ ಇಲ್ಲದೇ ಇರಲೆ ಎನ್ನುವ
ರಾಜಕುಮಾರನನ್ನು ಸೃಷ್ಟಿ ಮಾಡಿದವನಿಗೆ
ಗತ್ತಿನಲ್ಲಿ ಹಾರುತ್ತಿದ್ದ ಹಕ್ಕಿಯನ್ನು
ಒಂದು ಸಾಮಾನ್ಯ ಗೂಗೆಯಿಂದ
ಹೊಡೆದು ಕೊಂದವನಿಗೆ
ಬರ್ನಂ ವನಕ್ಕೂ ಕೈಕಾಲು ಬರಿಸಿದವನಿಗೆ
ಊಟದ ಬಟ್ಟಲುಗಳ ನಡುವೆ
ಎದ್ದು ನಿಲ್ಲುವ ಪ್ರೇತಗಳನ್ನು ಸೃಷ್ಟಿ ಮಾಡಿದವನಿಗೆ
ಕಪ್ಪಿಗೂ ಬಿಳುಪಿಗೂ ನಡುವೆ
ಒಂದು ಗೋಡೆ ಎಬ್ಬಿಸಿದವನಿಗೆ
ಸುಂದರ ಕನಸುಗಳ ಮಧ್ಯೆಯೂ
ಒಂದೊಂದು ನಿಟ್ಟುಸಿರು ಹೆಣೆದವನಿಗೆ

ಜಕ್ಕಿಣಿಯರ ಮುಂದೆ ಮ್ಯಾಕ್ ಬೆತ್
ದಿಢೀರನೆ ಎದುರಾಗಿದ್ದಾರೆ
ಜಕ್ಕಿಣಿಯರು
ಭವಿಷ್ಯ ನುಡಿಯುತ್ತಿದ್ದಾರೆ
ಕೇಕೆ ಹಾಕಿ ಗಹಗಹಿಸುತ್ತಿದ್ದಾರೆ
ಗೊತ್ತಿಲ್ಲದ ಮಂತ್ರಗಳ
ಪಟಪಟ ಉದುರಿಸುತ್ತಿದ್ದಾರೆ
ಕಣ್ಣಲ್ಲಿ ಕಣ್ಣುನೆಟ್ಟು ಮನಕ್ಕೆ
ತಟ್ಟುವಂತೆ ಹೇಳುತ್ತಿದ್ದಾರೆ
ಮುನ್ನುಗ್ಗು ಒಂದಲ್ಲ ಎರಡಲ್ಲ
ಮೂರು ಹೆಜ್ಜೆ ಸಾಕು
ಗತ್ತು ಗಮ್ಮತ್ತು ನಿನ್ನದು
ರಾಜ್ಯ ಸಾಮ್ರಾಜ್ಯ ನಿನ್ನದು
ಕತ್ತಿ ಕಿರೀಟ ಎಂದೆಂದೂ ನಿನ್ನದು
ಬಗ್ಗಬೇಡ ನುಗ್ಗು.
ಕಾರಿರುಳಲ್ಲಿ ಕುದುರೆ ಏರಿ
ಹೊರಟ ನಾನು
ತಬ್ಬಿಬ್ಬಾಗಿ ನಿಂತಿದ್ದೇನೆ
ಮೂರು ಹೆಜ್ಜೆ ಮುಂದಿಡಲೇ
ಇಲ್ಲ ಒಂದು ಹೆಜ್ಜೆ ಹಿಂದಿಟ್ಟು
ಮೊಣಕಾಲೂರಿ ಬಿಡಲೆ
ಗೆಲ್ಲಬೇಕೆ ಮೂರು ಹೆಜ್ಜೆ
ಇಲ್ಲ ನಿಲ್ಲಬೇಕೆ ಇದ್ದಲ್ಲೆ.
ಜಕ್ಕಿಣಿಯರಿಗೆ ತಾಳ್ಮೆಯಿಲ್ಲ
ಗುಡ್ಡ ಜರುಗಿ ನಿನ್ನ ಬಳಿ
ಬರುವುದು ಸಾಧ್ಯವಿಲ್ಲ
ಅರಣ್ಯದ ಎಲೆಗಳಿಗೆ
ನಡೆದಾಡಲು ಬರುವುದಿಲ್ಲ
ನೀನೇ ನುಗ್ಗು
ಗೆಲ್ಲು ಸೂರ್ಯ ಮುಳುಗದ
ಸಾಮ್ರಾಜ್ಯವನ್ನು.
ಕುದುರೆಯ ಮೇಲೆ ಕುಳಿತಿದ್ದೇನೆ
ಹಿಡಿದ ಲಗಾಮು ಬಿಡಲೆ
ಇಲ್ಲಾ ಬಿಗಿ ಮಾಡಲೆ
ಕೈಯಲ್ಲಿ ಕತ್ತಿ ಹಿಡಿಯಲೆ
ಇಲ್ಲ ಒಂದೇ ಗುಕ್ಕಿಗೆ ಜೀವ ತೆಗೆಯುವ
ವಿಷದ ಬಟ್ಟಲು ಹಿಡಿಯಲೆ.
ಜನರ ಮನಸ್ಸು ಗೆಲ್ಲಲೆ
ಇಲ್ಲಾ ಅವರನ್ನು ತರಿದು ಕೊಲ್ಲಲೇ?
ಜಕ್ಕಿಣಿಯರಿಗೆ ಈಗ
ಅವಸರದ ಅಗತ್ಯವಿಲ್ಲ
ಏಕೆಂದರೆ ಹೇಳಬೇಕಾದದ್ದು
ಹೇಳಿ ಮುಗಿದಿದೆಯಲ್ಲ; ಬಟ್ಟಲು
ವಿಷದ ವಿಳಾಸ ಹುಡುಕುತ್ತಿದೆಯಲ್ಲ.





ಇನ್ನ ಕೆಲ ಪ್ರಶ್ನೆಗಳು ಶೇಕ್ಸಪಿಯರನಿಗೆ….
ಬೇಕಿತ್ತೇನು ಇರುಳುಗಾವಳದ ಆ ರಾತ್ರಿಯ ಅನುಮಾನದ ಆಟ
ಡಾಲ್ಫಿನೋತ್ಸಾಹಿ ಆಂಟನಿಗೆ ಅಂಟಿದ ಸ್ವಹತ್ಯೆಯ ತಾಪ
ಬೇಕಿತ್ತೇನು ಸೊಬಗಿನ ಈಜಿಪ್ತಿಗೆ ಅಪವಾದ, ಸಮುದ್ರದಗುಂಟಾ ರಕ್ತದೋಕುಳಿ
ಪ್ರಿಯವಾದ ಸಿಹಿಸರ್ಪಗಳೇ ಪ್ರಿಯನೆಡೆಗೆ ಎಳೆದೊಯ್ಯಿರೆಂಬ ವಿರಹದುರಿ ಪರಿತಾಪ
ಆಳಬಯಸಿದ್ದೇಕೆ ಹೆಣ್ಣುಗಂಡು ಆ ಈ ನೆಲ..?
ಸಾಕಿತ್ತಲ್ಲ ಒಬ್ಬರೊಳಗೊಬ್ಬರ ಬಾಹುಬಂಧನದ ಮಹಾಸಾಮ್ರಾಜ್ಯ..
ಕಣ್ಮಚ್ಚಿ ಆಡಬಹುದಿತ್ತು ರಾಜರಾಣಿಯಾಟ..ಶೇಕ್ಸಪಿಯರನೆ..
ನಿನ್ನಂಥ ತೀರ್ಪುಗಾರನ ಕಾಣೆನೆ…!!
ಹದಿಮೂರರ ಹುಡುಗಿ, ಹದಿನೆಂಟರ ಹುಡುಗ…ಏಕಷ್ಟು ಸುಮ್ಮಾನ, ದುಗುಡ
ಅವಳ ಬಿಟ್ಟು ಇವಳ ಹಿಡಿದ..ಪ್ರೇಮದ ರುಚಿಗೆ ರುಧಿರಧಾರೆಯೇ, ಕವಿಯೇ
ನೀನೆಂಥಾ ನಿಷ್ಕರುಣಿಯೇ..
ಸಾವಿನಲಿ ಆರಂಭವೇ ಎಳೆಪ್ರೇಮದ ಆರಾಧನೆ..?
ಎದೆಯೊಡೆಯುವ ರೋದನವೇ ಉಳಿಯಿತೇ, ಕೊನೆಗೂ
ಬಟ್ಟಲು ವಿಷವಿಳಾಸ ತಲುಪಿಯಾಯಿತೇ..ಕೊನೆಗೂ..
ಎಳೆದೆಳೆದು ಓದಲು ಹಚ್ಚುವಿಯೇನು…ಎಲ್ಲೆಲ್ಲೂ ಮರಣವೇ ಮಹಾನವಮಿ
ಪ್ರತಿಕೃತಿಯನ್ನೂ ವಿಮರ್ಶೆಯ ಹೆಸರಿನಲಿ ಜಗಿದುಗುಳಿಯೇ ತೀರುವೆನು
ಇಷ್ಟಕ್ಕೂ
ನಾ ನಿನ್ನ ಕಡು ಅಭಿಮಾನಿ.
“ಸುಂದರ ಕನಸುಗಳ ಮಧ್ಯೆಯೂ
ಒಂದೊಂದು ನಿಟ್ಟುಸಿರು ಹೆಣೆದವನಿಗೆ”
ಶೇಕ್ಸಪಿಯರನ ಕಾಲದಿಂದ ಇವತ್ತಿನವೆರಗೂ ಹೀಗೇಕೆ ?
ಪ್ರತಿ ಸುಂದರ ಕನಸಿನ ನಡುವೆಯೂ ಅದೆಷ್ಟು ನಿಟ್ಟುಸಿರು ಯಾಕೆ ?
ಇದು ನನ್ನ ಪ್ರಶ್ನೆ .. ನನ್ನೊಳಗಿನ ಪ್ರಶ್ನೆ.. ಸದಾ ಉತ್ತರ ಹುಡುಕುತ್ತಿರುವ ಪ್ರಶ್ನೆ