ಶ್ರೀದೇವಿ ಕೆರೆಮನೆ
ಬಯಸಿ ಬಯಸಿ ಎಲ್ಲವನ್ನೂ ಬಿಟ್ಟು
ಸಂದಿಗೊಂದಿಗಳಲ್ಲೆಲ್ಲ ತಡುಕಿ
ಯಾವುದೋ ಪಾಳು ಶಿವಾಲಯದಲ್ಲಿ
ತನ್ನನ್ನೇ ಮರೆತು ಡಮರುಗದ
ನಾದದಲ್ಲಿ ತಲ್ಲೀನನಾದ ಅಲ್ಲಮನನ್ನು
ಹುಡುಕಿ ಹೊರಟಳು ಮಾಯೆ.
ಮುಖದಲ್ಲಿಷ್ಟು ಸಿಡುಕು
ಕಣ್ಣಲ್ಲಿ ನಿಗಿನಿಗಿಸುವ ಕೆಂಡ
ಬಯಸಿ ಬಂದ ಮಾಯೆಯ ಎದೆಯೊಳಗೆ
ಹೇಳಿಕೊಳ್ಳಲಾಗದ ಉಮ್ಮಳ
ಮನದ ಬಯಕೆ ಅರುಹಲಾಗದ ಒತ್ತಡ
ಹೇಳಿಕೊಳ್ಳಲೆಂದು ಬಳಿಸಾಗಿದರೆ
ಅಲ್ಲಮನ ಡಮರುಗದ ಸದ್ದೀಗ
ರಣಚಂಡೆಯಾಗಿ ಎದೆ ನಡುಗಿಸುತ್ತಿದೆ
ಮನದಾಳದ ಮಾತನ್ನು
ಅಲ್ಲೇ ಹುದುಗಿಸಿಕೊಂಡರೆ
ಮೈ ಕಿಚ್ಚೆದ್ದ ಬೆಂಕಿ
ಸುಡುವ ಬೆಂಕಿಯ ಉಡಿಯಲ್ಲಿ
ಅಡಗಿಸಿಟ್ಟುಕೊಂಡ ಯಾತನೆ
ಒಡಲೆಲ್ಲ ಬೆಂದು ಎದ್ದ ನೀರಗುಳ್ಳೆ
ಟಪಟಪನೆ ಒಡೆದು ಕೀವು ಸೋರುತ್ತ
ನರಕ ಯಾತನೆಯ ಅನುಭವ
ಕಣ್ಣೆದುರಿಗಿರುವ ಅಲ್ಲಮನನ್ನು
ಬೆರಳ ತುದಿಯಲ್ಲಾದರೂ
ಒಮ್ಮೆ ಸೋಕಬೇಕೆಂಬ ಆಸೆಗೆ
ಕಟ್ಟು ಹಾಕಲಾಗದೇ ಗುಡಿಯಲ್ಲಿ
ತುಂಬಿರುವ ಜನಜಂಗುಳಿಯಲ್ಲಿ
ಒಮ್ಮೆ ಮುಟ್ಟಲು ಹೋದರೆ
ಎಲ್ಲವೂ ಬಟಾಬಯಲು
ಅಲ್ಲಮನೆಂಬ ಮಾಯೆ
ಈ ಮಾಯೆಗೆ ಯಾವಾಗಲೂ ಮಾಯೆಯೇ.






ಕವಿತೆ ತುಂಬಾ ಹಿಡಿಸಿತು… ಮಾಯೆಗೆ ಯಾವಾಗಲು ಮಾಯೆ ಎಂಬ ಸಾಲು… ಹಿಡಿದಿಡಲಾಗದ ಚೌಕಟ್ಟಿನಾಚೆಗೆ ನಿಂತು ನೋಡಿದಾಗ ನಾನು ನೀನು ಎಲ್ಲವೂ ಮಾಯೆಯಾಗಿ ತೋರುವುದನ್ನು ಹೇಳುವ ಕವಯಿತ್ರಿ ಕವಿತೆಯನ್ನು ಬೇಗ ಮುಗಿಸುತ್ತಾರೆ. ತಾವು ಮಾಯವಾಗಿ ನಮ್ಮನ್ನು ಮಾಯೆಯ ಮಂದಿರದೊಳಗೆ ತಂದು ನಿಲ್ಲಿಸಿ ಜನಜಂಗುಳಿ ಯಲ್ಲಿ ಅಲ್ಲಮನ ಕಾಣಿಸುವ ಮಂದಿರದೊಳಗೆ ಇಲ್ಲವಾಗಿಸುವ ಮಂಟಪ ಪ್ರಜ್ಞೆಗೆ ಕವಿತೆ ಸಾಗುತ್ತದೆ….
ರಮೇಶ ಗಬ್ಬೂರ್
Prema Naduvinamani
Nnice poem Shreedevi
ಚಂದದ ಕವನ
ಅರ್ಥಪೂರ್ಣ ಕವಿತೆ
ಚೆಂದದ ಪದಪುಂಜಗಳಲ್ಲಿ ಚೆನ್ನಾಗಿ ಹೆಣೆದಿದ್ದೀರಿ
ಶ್ರೀ ಮೇಡಂ
ಕವನ ಚೆನ್ನಾಗಿದೆ.
ಮಾಯೆ ಅಲ್ಲಮ…ಕವಿತೆ ಎರಡೆರಡುಸಲ ಓದಿಸಿಕೊಂಡಿತು
ಅಲ್ಲಮನೆಂಬ ಮಾಯೆಗೆ ಈ ಮಾಯೆ ಮುಟ್ಟಲಾಗದು.ಅಲ್ಲಮನೆಂಬ ಮಾಯೆ ಬಟಾಬಯಲು..
ನಿಜ ಶ್ರೀದೇವಿ ಮೇಡಮ್, ಯಾರಿಗೂ ದಕ್ಕದ ಬಟಾಬಯಲಿನ ಅಲ್ಲಮನ ವ್ಯಕ್ತಿತ್ವ ಮಾತ್ರವಲ್ಲಾ ಅವನ ವಚನಗಳೂ ಕೂಡ ಒಂದೇ ಓದಿಗೆ ಸಿಗದ ಮಾಯೆ.
ಕವಿತೆ ಚನ್ನಾಗಿದೆ..ಬಯಸಿ ಬಂದ ಮಾಯೆಯ ತಳಮಳ ..ಮುಟ್ಟುವ ಬಯಕೆಯ ತೀವ್ರತೆ ಮತ್ತು ಅಲ್ಲಮನ ತಲ್ಲೀನತೆಯ ಡಮರುಗದ ಸದ್ದು…ಒಮ್ಮೆಗೆ ಬಟಾಬಯಲು..
ಅಲ್ಲಮನನ್ನು ಆಳವಾಗಿ ಅರಿತವರು ಮಾತ್ರ ಇಂತಹ ಸುಂದರ ಕಾವ್ಯವನ್ನು ರಚಿಸಬಲ್ಲರು. ಕವಿತೆ ತುಂಬಾ ಚೆನ್ನಾಗಿದೆ. ಅಲ್ಲಮನ ಸಿದ್ದಿಕ್ಷೇತ್ರವಾದ ಬನವಾಸಿಯವನಾದ ನನಗೆ ಈ ಕವಿತೆ ಆಪ್ತವಾಯಿತು.
ಇತಿ
ಶ್ರೀಧರ ಬನವಾಸಿ
Sridevi
Illi Allma endare Shivane ?
Salugalu Chennagiddaroo taleyaguttilla..Gojalu annisitu..
Nutana
ಮಾಯೆಯ ತುಡಿತ ಎಷ್ಟು ಚೆನ್ನಾಗಿ ಪಳಗಿಸಿದ್ದೀರಿ ಕವನದಲ್ಲಿ!!!
ಪದಪುಂಜದ ಮಾಲೆ ಅಲ್ಲಮನ ಬಗ್ಗೆ ಚೆನ್ನಾಗಿತ್ತು .