ಅಲೆಗಳು ಶಾಂತವಾಗುವುದಿಲ್ಲ…

ಸುಧಾ ಆಡುಕಳ

ಅವರ ನೆನಪಿಗೆಂದು ನಾವೆಲ್ಲರೂ ಸೇರುವ ಮೊದಲ ದಿನವೇ ಅನಿರೀಕ್ಷಿತ ಮಳೆ ಬಂದು ನೆಲ ತೇವಗೊಂಡಿತ್ತು, ಅಲ್ಲಿ ನೆರೆದ ಎಲ್ಲರ ಮನಸ್ಸಿನಂತೆ. ಹೌದು, ವಿಠ್ಠಲ ಭಂಡಾರಿ ಎಂಬ ತಾಯ ಮಮತೆಯ ಜೀವ ಸರಿದುಹೋಗಿ ವರ್ಷವೇ ಆಗಿಹೋಯಿತು. ವಿಶೇಷ ಕರೆಗಳಿಲ್ಲದೆಯೂ ನಾಡಿನ ಮೂಲೆಮೂಲೆಗಳಿಂದ ಗೆಳೆಯರು, ಹಿತೈಷಿಗಳು, ವಿದ್ಯಾರ್ಥಿಗಳು, ಚಳುವಳಿಯ ಜತೆಗಾರರು ಕೆರೆಕೋಣವೆಂಬ ಅವರ ಹಳ್ಳಿಯನ್ನು ಹುಡುಕಿಕೊಂಡು ಬಂದರು.

ಅಮೂಲ್ಯವಾದ ಭಿತ್ತವೊಂದನ್ನು ಬಿತ್ತಿರುವೆವೋ ಎಂಬಷ್ಟು ಅಕ್ಕರೆಯಿಂದ ಅವರನ್ನು ಮಲಗಿಸಿದ ತಾವಿನ ಸುತ್ತ ನೆರೆದರು. ಪುಟ್ಟ ಮಗುವೊಂದು ಬಿಕ್ಕಳಿಸಿ ಅತ್ತದ್ದೇ ನೆಪವಾಗಿ ಎಲ್ಲರ ದುಃಖದ ಕಟ್ಟೆಯೊಡೆಯಿತು. ನೆರೆದವರೆಲ್ಲ ತಡೆತಡೆದು ಉಸಿರು ಬಿಡುತ್ತಿದ್ದುದು ನಾಲ್ಕಾರು ಮೆಟ್ಟಿಲೇರಿದ ಆಯಾಸಕ್ಕಂತೂ ಇರಲಿಕ್ಕಿಲ್ಲ. ಅಲ್ಲಿ ಚಿರನಿದ್ದೆಯಲಿ ಮಲಗಿದ ಜೀವವೇ ಹಾಗಿತ್ತು. ಸದಾ ಮುಖದ ತುಂಬ ನಗು, ಕನಸು ತುಂಬಿದ ಕಂಗಳು, ಮಮತೆಭರಿತ ನೋಟ, ಆರಡಿಯ ಸುರಸುಂದರಾಂಗ ಆಳು ಅವರು.

ಕೊರೊನಾದ ಅಲೆಗೆ ಬಲಿಯಾದಾಗ ಕುಟುಂಬದವರ ಹೆಗಲು ನೇವರಿಸುವ ಅವಕಾಶವೂ ಇರಲಿಲ್ಲ. ಹಾಗಾಗಿ ಒದ್ದೆ ಮನಸ್ಸಿನೊಂದಿಗೆ ಎಲ್ಲರೂ ತೇವಗೊಂಡ ಅವರ ಸಮಾಧಿಯ ಬಳಿ ಸೇರಿದ್ದರು. ಚಿಗುರೊಡೆದು ನಿಂತ ಪಾರಿಜಾತ ಇದ್ಯಾವುದರ ಗೊಡವೆಯಿಲ್ಲದೇ ತಲೆಯಲ್ಲಾಡಿಸುತ್ತಿತ್ತು.

ನಾನು ಎಷ್ಟೊಂದು ಜನರ ವಿದಾಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವೆ. ಆದರೆ ಈ ರೀತಿಯ ಆಪ್ತ, ಆರ್ದೃ ಕಾರ್ಯಕ್ರಮವನ್ನು ನೋಡಿಲ್ಲ. ಬೆಳಗಿನಿಂದ ಎಲ್ಲರ ಮಾತುಗಳನ್ನು ಕೇಳಿ ತೇವಗೊಂಡಿರುವೆ. ಓರ್ವ ಅಧ್ಯಾಪಕನಾಗಿ ಇಷ್ಟೆಲ್ಲವನ್ನೂ ಮಾಡಬಹುದೆನ್ನುವ ವಿಚಾರ ಅಧ್ಯಾಪಕನಾದ ನನ್ನನ್ನೂ ನಾಚುವಂತೆ ಮಾಡುತ್ತಿದ್ದೆ. ನನ್ನೊಂದಿಗೆ ನಾಡು, ಕಾಡು ಎಂದು ಸುತ್ತುತ್ತಿದ್ದ ಈ ಹುಡುಗ ಹೀಗೆಲ್ಲಾ ಇದ್ದನೆ? ಎಂದು ಕಣ್ಣರಳಿಸುತ್ತಲೇ ಕಣ್ಣೊರೆಸಿಕೊಂಡರು ರಹಮತ್ ತರಿಕೆರೆಯವರು.

ಗಾಂಧಿಯಂತವರನ್ನು ಮನೆಮನೆಗೆ ಕೊಂಡೊಯ್ದು ರಾಷ್ಟ್ರೀಯ ನಾಯಕರನ್ನಾಗಿ ರೂಪಿಸಿದವರು ಸಾಮಾಜಿಕ ಕಾರ್ಯಕರ್ತರು. ಸಣ್ಣ ಗುಂಪುಗಳಲ್ಲಿ ಮೂಡಿಸುವ ಅರಿವು ಮಾತ್ರವೇ ದೊಡ್ಡ ಬದಲಾವಣೆಯನ್ನು ತರಬಲ್ಲುದು. ಅಂಥದೊಂದು ಕಾರ್ಯವನ್ನು ದಣಿವರಿಯದೇ ಮಾಡುತ್ತಿದ್ದವರು ವಿಠ್ಠಲ ಎಂದವರು ರಾಜೇಂದ್ರ ಚೆನ್ನಿಯವರು. ನಿಂತ ನೆಲದಲ್ಲಿ ಬೇರುಬಿಟ್ಟು ತನ್ನ ಸುತ್ತಲಿನವರನ್ನು ಪ್ರಭಾವಿಸುತ್ತಲೇ ಜಗದ ಆಗುಹೋಗುಗಳಿಗೆ ಸ್ಪಂದಿಸುವ ಕೆಲವೇ ಮಾದರಿಗಳು ನಮ್ಮಲ್ಲಿವೆ. ಆರ್. ವಿ. ಯವರಿಂದ ಆರಂಭಗೊಂಡು, ವಿಠಲನಿಂದ ಮುಂದುವರೆದ ಈ ವಿಶೇಷ ಮಾದರಿಯನ್ನು ‘ಕೆರೆಕೋಣ ಮಾದರಿ’ ಎಂದು ಹೆಸರಿಸಿದವರು ವಸಂತರಾಜ್ ಅವರು.

ಆರ್. ವಿ. ಯವರೊಂದಿಗೆ ಗಹನವಾದ ವಿಷಯಗಳನ್ನು ಚರ್ಚಿಸುತ್ತಿದ್ದಾಗ ಬದಿಯಲ್ಲಿ ನಿಂತು ಕೇಳುತ್ತಿದ್ದ ಈ ವಿಠ್ಠಲನೆಂಬ ಹುಡುಗ ಮುಂದೆ ಸಾಮಾಜಿಕ ಕಾರ್ಯಕರ್ತನಾಗಿ ಬೆಳೆದನಲ್ಲದೇ ಯಾವುದೇ ವಿದ್ಯಮಾನಗಳಿಗೂ ಬೈಸೈಡರ್ ಆಗಲು ಸಂಪೂರ್ಣ ನಿರಾಕರಿಸಿ ಬೆರಗು ಹುಟ್ಟಿಸಿದ. ಜಗದ ಆಗುಹೋಗುಗಳಿಗೆ ಆ ಗಳಿಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದ ವಿಠ್ಠಲ ತನ್ನ ಸಣ್ಣ ತುಂಟತನದಿಂದ ಎಂಥವರನ್ನೂ ನಿಭಾಯಿಸುತ್ತಿದ್ದ ಎಂದು ನೆನಪಿಸಿಕೊಂಡವರು ಡಾ. ಎಂ. ಜಿ. ಹೆಗಡೆಯವರು. 

ಎಷ್ಟೊಂದು ಅಕ್ಕರೆಯ, ಪ್ರೀತಿಯ, ಹೆಮ್ಮೆಯ ನುಡಿಗಳು ಅವರ ಬಗ್ಗೆ. ಎಲ್ಲವನ್ನೂ ಸೇರಿಸಿ ಪ್ರೀತಿ ಪದಗಳ ಸಹಯಾನಿ ವಿಠ್ಠಲ ಎಂಬ ಪುಸ್ತಕ ರೂಪುಗೊಂಡ ಬಗೆಯನ್ನು ಬಿಚ್ಚಿಟ್ಟರು ಸಂಪಾದಕ ಮಂಡಲಿಯ ಮೀನಾಕ್ಷಿ ಬಾಳಿಯವರು. ಸೇರಿದ ಎಲ್ಲರದ್ದೂ ಒಂದೇ ಮಾತು, ವಿಠ್ಠಲ ನನ್ನನ್ನು ಮಾತ್ರವೇ ಅಷ್ಟೊಂದು ಹಚ್ಚಿಕೊಂಡಿದ್ದ ಎಂದೇ ನಾನು ತಿಳಿದಿದ್ದೆ ಎಂದು. ತನ್ನ ಸ್ನೇಹವಲಯಕ್ಕೆ ಬಂದವರನ್ನೆಲ್ಲಾ ಚುಂಬಕದಂತೆ ಅಂಟಿಕೊಳ್ಳುವ ಗುಣ ಅವರಿಗೆ ಜನ್ಮದಾತವೇನೊ? ಎಷ್ಟಾದರೂ ಪ್ರೀತಿಯ ಕಾಳನು ಹಂಚ ಬಯಸುವೆವು, ಜಾಗ ಕೊಡುವಿರೇನು? ಎಂದ ತಂದೆಯ ಮಗನಲ್ಲವೆ ಅವರು? ಬದುಕಿನ ಅರ್ಧ ದಾರಿಯನ್ನಷ್ಟೇ ನಡೆದಿದ್ದರು, ಎಲ್ಲ ಕೆಲಸಗಳೂ ಅರ್ಧದಲ್ಲೇ ನಿಂತಿದ್ದವು. ಇದ್ದಷ್ಟನ್ನು ಒಟ್ಟುಗೂಡಿಸಿ, ಒಪ್ಪವಾಗಿಸಿ ಮತ್ತೆರಡು ಪುಸ್ತಕಗಳನ್ನು ತಂದೇಬಿಟ್ಡರು ಸಂಗಾತಿ ಯಮುನಾ.

ಇನ್ನೂ ಎಷ್ಟೋ ಪುಸ್ತಕಗಳಿಗಾಗುವಷ್ಟು ಚರಮಗೀತೆಗಳು ಬರುತ್ತಲೇ ಇವೆಯೆಂದು ಹನಿಗಣ್ಣಾದರು ಮನೆಯವರು. ಅವರೇ ಬರೆದ ಅಣ್ಣನ ನೆನಪುಗಳನ್ನು ಮತ್ತೆ, ಮತ್ತೆ ಮೆಲುಕಾಡಿದರು. ಹೌದು, ಇದ್ದಾಗ ಇರವೇ ಅರಿವಾಗದಂತೆ ತೆರೆಮರೆಯಲ್ಲಿಯೇ ಕೆಲಸ ಮಾಡಿದ ಭಂಡಾರಿಯವರ ಅಗಲಿಕೆ ಸೃಷ್ಟಿಸಿದ ಶೂನ್ಯ ಬಹಳ ವಿಸ್ತಾರವಾದದ್ದು. ಅವರನ್ನು ಮನೆಯವರಿಗೆ ಮಾತ್ರ ಬಿಡದೇ ಬೇರೆ ಬೇರೆ ಪ್ರದೇಶ ಮತ್ತು ಸಂಘಟನೆಯವರು ಅಡಾಪ್ಟ್ ಮಾಡಿಕೊಂಡು ಅವರ ಹೆಸರಿನಲ್ಲಿ ಮತ್ತೆ, ಮತ್ತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇದ್ದಾರೆ. ವಿಠ್ಠಲ್ ಇದ್ದುದೇ ಹಾಗೆ, ಸ್ವಂತದ ಮನೆಯನ್ನು ಎಲ್ಲರ ಮನೆಯಾಗಿಸುವ ಪಯಣ ಅವರದ್ದು. ಆರ್. ವಿ.ಯವರ ಮನೆ ಮಹಾಮನೆಯಾದ ಕಥೆಯಿದು. ಕಲ್ಯಾಣದೆಡೆಗಿನ ಪಯಣ ನನ್ನ ಗೆಳೆಯನದು ಎಂದವರು ಡಾ. ಶ್ರೀಪಾದ ಭಟ್.

ವೈಚಾರಿಕತೆಯನ್ನು ಪ್ರತಿಪಾದಿಸುವ ಮೇಸ್ಟ್ರುಗಳ ಬಳಿ ವಿದ್ಯಾರ್ಥಿಗಳೇ ಸುಳಿಯದ ಮತ್ತು ವಿದ್ಯಾರ್ಥಿಗಳ ಧಾಳಿಯಿಂದ ಅವರನ್ನು ಪಾರುಮಾಡಲು ಚಳುವಳಿಕಾರರೇ ಧಾವಿಸಬೇಕಾದ ಕಾಲದಲ್ಲಿ ತನ್ನ ಸುತ್ತ ಸದಾ ವಿದ್ಯಾರ್ಥಿಗಳ ದಂಡನ್ನೇ ಇಟ್ಟುಕೊಳ್ಳುತ್ತಿದ್ದ ವಿಠ್ಠಲ ಈ ಕಾಲದ ಅಚ್ಛರಿ ಎಂದವರು ಗೆಳೆಯ ಮುನೀರ್ ಕಾಟಿಪಳ್ಳ. ಸರ್ ಗೆ ನಾವು ವಿದ್ಯಾರ್ಥಿಗಳು ಮಾತ್ರವಲ್ಲ, ಮಕ್ಕಳೂ ಹೌದು. ಅವರ ಪ್ರೀತಿ ಮರೆಯಲಾಗದ್ದು ಎಂದು ದನಿಗೂಡಿಸಿದವರು ಚಿಗುರು ಬಳಗದ ಅವಿನಾಶ್. ರಂಗಕರ್ಮಿಗಳು, ಚಳುವಳಿಯ ಸಂಗಾತಿಗಳು, ಪ್ರಾದ್ಯಾಪಕ ಮಿತ್ರರು, ಸಮುದಾಯದ ಗೆಳೆಯ, ಗೆಳತಿಯರು ಎಲ್ಲರದ್ದೂ ಒಂದೇ ಮಾತು. ವಿಠ್ಠಲ ದಣಿವರಿಯದ ಸಂಘಟಕ, ಎಂಥಹ ಕಠಿಣ ಸನ್ನಿವೇಶದಲ್ಲೂ ಸಹನೆಯನ್ನು ಕಳಕೊಳ್ಳದ ಸಹಿಷ್ಣು, ಚಂದದ ವೇದಿಕೆಯನ್ನು ಸ್ನೇಹಿತರಿಗೆ ಬಿಟ್ಟು, ಚಿತ್ರ ಸೆರೆಹಿಡಿವ ಕುತೂಹಲದ ಕಣ್ಣಿನ ಮಗು.

ಅಂದೂ ತೋಟದ ತುಂಬಾ ಅರಳಿದ ಹೂವುಗಳು, ಮೈತುಂಬಾ ಹಣ್ಣೇರಿಸಿಕೊಂಡು ಕೆಂಪಾದ ನಕ್ಷತ್ರ ಹಣ್ಣಿನ ಮರ, ಅಲಂಕೃತಗೊಂಡ ಸಭಾಮಂಟಪ, ಸ್ವಾಗತ ಕೋರುವ ಪುಸ್ತಕದಂಗಡಿ… ಎಲ್ಲವೂ ವರ್ಷದಂತೆಯೆ ಇದ್ದವು. ಆದರೆ ಅಲ್ಲಿಂದಿಲ್ಲಿಗೆ ಲುಂಗಿಯುಟ್ಟು ದಾಪುಗಾಲಿನಲ್ಲಿ ಓಡುವ, ಚಹಾ, ಊಟ, ವೇದಿಕೆ, ಹಾಡು, ಸ್ವಾಗತ ಎಂದು ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವ, ಇಷ್ಟೆಲ್ಲದರ ನಡುವೆಯೂ ಅಲ್ಲಿದ್ದ ಪುಟ್ಟ ಮಕ್ಕಳೊಡನೆ ಚೇಷ್ಟೆಯಾಡುವ, ಬಾಚದ ಕೂದಲನ್ನು ಒಂದಿಷ್ಟು ಸವರುವ ತನ್ನ ಸಂಗಾತಿಯೆಡೆಗೊಂದು ಪ್ರೇಮದ ನೋಟ ಬೀರುವ ಅವರ ಅನುಪಸ್ಥಿತಿ ಎಲ್ಲರ ಒಡಲನ್ನು ಬಿಸಿಯಾಗಿಸಿತ್ತು. ಎಲ್ಲವೂ ಒಪ್ಪ ಓರಣವಾಗಿ ನಡೆಯಿತು. ಊಟ, ತಿಂಡಿ, ಭಾಷಣ, ಸನ್ಮಾನ, ಹಾಡು…. ಎಲ್ಲದಕ್ಕೂ ಪುಟವಿಟ್ಟಂತೆ ದಿನದ ಕೊನೆಯಲ್ಲೊಂದು ತಾಳಮದ್ದಲೆ.

ಮನೆಯವರು, ಸ್ನೇಹಿತರು ಅವರ ನೆನಪಿಗೆಂದು ತಾವೇ ಕುಳಿತು ಅರ್ಥ ಹೇಳಿದರು. ಚಿಂತನದ ಕಲಾವಿದರು ವಾರವೊಂದರಲ್ಲಿ ಚಂದದ ನಾಟಕ ಕಟ್ಟಿ ಆಡಿದರು. ಎಲ್ಲರಿಗೂ ಅವರು ತಮ್ಮೊಳಗಿದ್ದಾರೆಂದು ಸಾಬೀತುಪಡಿಸಿಕೊಳ್ಳುವ ತುಡಿತ…

ಟೆರಿ ಪ್ರೆಚೆಟ್ ಹೇಳುತ್ತಾರೆ, ವ್ಯಕ್ತಿಯೊಬ್ಬ ಹುಟ್ಟುಹಾಕಿದ ಅಲೆಗಳು ಶಾಂತವಾಗುವವರೆಗೂ ಅವನಿಗೆ ಸಾವಿಲ್ಲ. ನಾವು ಹೇಳುತ್ತೇವೆ, ಸರ್, ನೀವು ನಮ್ಮೊಳಗೆ ಹುಟ್ಟುಹಾಕಿದ ಅಲೆಗಳು ಎಂದಿಗೂ ಶಾಂತವಾಗುವುದಿಲ್ಲ.
ಸಹಯಾನದ ಅಂಗಳದಲ್ಲಿ ಆಡಿ, ಬೆಳೆದ ಕಿಶೋರನೊಬ್ಬನ ಎದೆಯಾಳದ ಮಾತು ಇದು. ನಮ್ಮೆಲ್ಲರದೂ ಹೌದು… ಅವರೊಂದು ಪ್ರೀತಿಯ ಕೊಳ. ಆವಿಯಾಗುತ್ತಲೇ ಇರುತ್ತಾರೆ, ಮತ್ತೆ ಮಳೆಯಾಗಿ ಸುರಿಯುತ್ತಾರೆ. ತೇವಗೊಳ್ಳುತ್ತೇವೆ ಪ್ರತಿ ಮಳೆಗೂ ನಾವು..

‍ಲೇಖಕರು Admin

May 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: