ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲೆಕ್ಸಾಂಡರ್ ಮಾತಾಡಿಸಿದ ಮರ

ಜಿ ಪಿ ಬಸವರಾಜು

ದಟ್ಟ ಕಾಡುಗಳ ದಾಟಿ, ಗುಡ್ಡ ಬೆಟ್ಟಗಳ
ಹತ್ತಿಳಿದು, ಕಣಿವೆಯಾಳಗಳ ಅಳೆದು,
ಬಟಾ ಬಯಲಲ್ಲಿ ಒಂಟಿ ನಿಂತಿದ್ದ ನನ್ನ ಬಳಿಗೆ
ಬಂದನವನು, ಎಲ್ಲರಂತೆ ಇವನೂ ಎಂದುಕೊಂಡು
ಕಡೆಗಣಲ್ಲಿ ನೋಡಿದೆ ಇವನನ್ನು, ಮಹಾ ಮೈ-
ಕಟ್ಟಿನವನನ್ನು, ಇನ್ನೊಬ್ಬನಿದ್ದ ಜೊತೆಯಲ್ಲಿ, ಇವನ
ಹಾಗೆಯೇ ಗಟ್ಟಿಮುಟ್ಟಾದವನು, ದಿಟ್ಟತನದವನು;

ಈ ಬಯಲಲ್ಲಿ, ಮೊರೆವ ಗಾಳಿಯಲ್ಲಿ ಮೌನ-
ವನ್ನು ಮುರಿದಿರಲಿಲ್ಲ ನಾನೆಂದೂ, ಮಾತನಾಡಲು
ಏನಿತ್ತು ಈ ಕಾಲಾಂತರದ ಶತಮಾನಗಳಲ್ಲಿ, ಎಲ್ಲ
ಮರೆತಂತೆ, ತಾವೇ ತಾವೆಂದು ಮೆರವವರ ನಡುವೆ;

ಹತ್ತಿರ ಬಂದ ಇವನು ಯಾವ ಬಿಗುಮಾನವೂ
ಇಲ್ಲದೆ, ಇನ್ನೂ ಇನ್ನೂ ಹತ್ತಿರ ಬಂದ, ಪ್ರೀತಿಯಿಂದ
ಮುಟ್ಟಿದ, ಮೈದಡವಿದ, ಆಪ್ತ ದನಿಯಲ್ಲಿ ಮಾತಾಡಿಸಿದ;

ನನ್ನ ಮೈ ನಿಮಿರಿತು, ತುಟಿ ಅದುರಿತು, ಮಾತು ಝರಿ-
ಯಾಗಿ ಹರಿಯಿತು, ಜೀವಕ್ಕೆ ಜೀವ ಕೊಟ್ಟಂತೆ ಅವನು
ಒಡನಾಡಿದ; ತನ್ನ ಹೆಸರು ಅಲೆಕ್ಸಾಂಡರ್ ಎಂದ; ನಾನೇನು
ಹೇಳಲಿ? ಯಾರೂ ನನಗೆ ಹೆಸರು ಕೊಟ್ಟಿರಲಿಲ್ಲ, ಹೆಸರು
ಹಿಡಿದು ಕರೆದಿರಲಿಲ್ಲ; ಅವನೇನೂ ಹೆಸರನ್ನು ದೊಡ್ಡ ಸಂಗತಿ
ಮಾಡಲಿಲ್ಲ, ಊರು ಕೇರಿ ಕುಲ ಗೋತ್ರ ಮತ ಧರ್ಮ ಜಾತಿ
ಯಾವುದನ್ನೂ ಕೇಳಲಿಲ್ಲ; ಹತ್ತಿರದ ಬಂಧುವಿನಂತೆ, ಬಹುಕಾಲ
ದೂರವಿದ್ದ ಗೆಳೆಯನಂತೆ ಕಂಡು ಹುರುಪಿನಿಂದ ಮಾತಾಡಿದ;

ತಾನು ಕೈಗೊಂಡ ದಂಡಯಾತ್ರೆಯನ್ನವನು ಹೇಳಿಕೊಂಡ;
ಇಲ್ಲಿAದ ಮುಂದಿನ ದಾರಿ ಹೇಗೆಂದ; ಮತ್ತೆ ಬರುತ್ತೇನೆ ಎಂದ;
ಅಷ್ಟಕ್ಕೇ ನಿಲ್ಲದೆ ತನ್ನ ಸೈನಿಕರನ್ನೆಲ್ಲ ಕರೆದು ತೋರಿಸಿದ; ತನ್ನ
ಬಲ ಇಷ್ಟೇ ಎಂದ, ಇದರಿಂದಲೇ ಗೆಲ್ಲಬಹುದೇ ಹೇಳು ಗೆಳೆಯ
ಈ ಜಗತ್ತನ್ನು ಎಂದ, ಅವನಲ್ಲಿ ಅಖಂಡ ಆತ್ಮವಿಶ್ವಾಸ ತುಂಬಿ
ತುಳುಕುತ್ತಿತ್ತು, ಗೆಲ್ಲುವ ಹಂಬಲ ಕಣ್ಣಲ್ಲಿ ಫಳಫಳ ಹೊಳೆಯುತ್ತಿತ್ತು;

ನಾನು ಶತಮಾನಗಳ ಕಾಲ ಇಲ್ಲೆ ಬೇರುಬಿಟ್ಟವನು, ಹೆಂಡತಿ
ಮಕ್ಕಳು ಮರಿ ಸಂಸಾರ, ಪಶು ಪಕ್ಷಿ ಸಕಲ ಜೀವಸಂಕುಲ ಎಲ್ಲ
ಇಲ್ಲಿಯೇ-ಕೈ ಅಳತೆಯಲ್ಲಿಯೇ, ಇದರಾಚೆ ನಾಕು ಹೆಜ್ಜೆ
ಹೋದವನಲ್ಲ, ದೇಶ ಸುತ್ತಿದವನಲ್ಲ, ಭಾಷೆ ತಿಳಿದವನಲ್ಲ;
ಅಷ್ಟೇಕೆ ಎಂದೂ ತುಟಿ ಬಿಚ್ಚಿದವನಲ್ಲ; ಅಲೆಕ್ಸಾಂಡರ್ ಎಂಥ
ಮಾಯಾವಿ, ಮುಟ್ಟಿ ಮುಟ್ಟಿ ಕೇಳಿದ, ಮತ್ತೆ ಮತ್ತೆ ಮಾತನಾಡಿಸಿದ;

ಇಂಥ ಗಳಿಗೆಯನ್ನೆಂದೂ ಕಂಡಿರಲಿಲ್ಲ ನಾನು; ಕಾಲಗಳು ಕೂಡಿದ
ಗಳಿಗೆ ಅದು, ದೇಶ-ಕಾಲಗಳ ಮೀರಿದ ಗಳಿಗೆ ಅದು, ಆನಂದದ ತುಟ್ಟ
ತುದಿಯಲ್ಲಿ ನಿಂತ ಗಳಿಗೆ ಅದು, ಉಮೇದು ಉಕ್ಕಿ ಹರಿದು ಬಡಬಡ
ಒದರಿದೆ-ಭಾಷೆ ಬೆದರುವಂತೆ, ಎದೆಯ ಗುಟ್ಟುಗಳನೆಲ್ಲ ಸುರಿದೆ ಅವನ
ಮಡಿಲಿಗೆ, ಪ್ರೀತಿಯನ್ನೇ ತುಂಬಿ ತುಂಬಿ ಸುರಿದಂತೆ; ಅಲೆಕ್ಸಾಂಡರ್
ಗಳಗಳ ಅತ್ತುಬಿಟ್ಟ, ತನ್ನೊಳಗನ್ನು ತೆರೆದಿಟ್ಟಂತೆ, ಬೆಚ್ಚಗಿನ ಬಾಹುಗಳ
ಚಾಚಿ ಇಡಿಯಾಗಿ ನನ್ನನ್ನು ತಬ್ಬಿಕೊಂಡ, ನಾನು ಕರಗಿ ನೀರಾದೆ;
ಎಷ್ಟೋ ಹೊತ್ತು ಮಾತುಗಳೇ ಇಲ್ಲದೆ ಕ್ಷಣಗಳು ಜಾರಿದವು;

ಕೊನೆಯಲ್ಲದ ಕೊನೆಯ ಕ್ಷಣದಲ್ಲಿ ಮಹಾವೀರ ಅಲೆಕ್ಸಾಂಡರ್, ‘ಇನ್ನೊಂದು
ಮಾತು’ ಎಂದು ತಡವರಿಸಿದ, ‘ಹೇಳು ಮಿತ್ರ’ ಎಂದೆ ಅವನ ಪ್ರೀತಿಯಲ್ಲಿ
ಅದ್ದಿಹೋದಂತೆ; ತಡೆತಡೆದು ಅವನು ಕೇಳಿದ: ‘ಈ ಜಗವ ಗೆದ್ದು ನಾನು
ನನ್ನೂರಿಗೆ ಮರಳುತ್ತೇನೆಯೇ?’ ನಾನು ಕಣ್ಣುಮುಚ್ಚಿದೆ, ಒಳಗಿನ ಕತ್ತಲೆಯ
ದಾಟಿ ಬೆಳಕನ್ನು ಕಂಡೆ; ಕನಸಲ್ಲ, ನಿಜದ ನಿಜ, ಗಂಟಲು ಕಟ್ಟಿಸಿತು- ನಿಜ,
ನಿಟ್ಟುಸಿರಿಟ್ಟು, ನೀರಾರಿದ ಗಂಟಲಲ್ಲೇ ಹೇಳಿದೆ: ‘ಕಂಡದ್ದು ಹೇಳುತ್ತೇನೆ ಗೆಳೆಯ
ಕಂಗೆಡಬೇಡ, ಗೆಲ್ಲುತ್ತೀಯ ನೀನು, ಹೆಜ್ಜೆಯಿಟ್ಟ ನೆಲವೆಲ್ಲ ನಿನ್ನದೇ, ಅನುಮಾನ
ಬೇಡ,’ ಅವನು ಮಾತಿಲ್ಲದೆ ನನ್ನ ದಿಟ್ಟಿಸಿದ, ನನ್ನೊಳಗನ್ನು ಬಗೆದು ನೋಡುವಂತೆ;

‘ಮನ್ನಿಸು ಮಿತ್ರ, ಗೆಲುವು ನಿನ್ನದೇ, ಗೆದ್ದ ಮೇಲೆ ನಿನ್ನೂರಿಗೆ ಮರಳಲಾರೆ’ ಎಂದೆ,
ಮಾತಿಲ್ಲ, ನಕ್ಕನವನು ಹಗುರಾಗಿ, ಮತ್ತೆ ತಬ್ಬಿಕೊಂಡ ಬಿಗಿಯಾಗಿ, ನಿಧಾನಕ್ಕೆ
ಹೋಗಲಾರದವನಂತೆ ಹೊರಟೇ ಹೋದ, ಭಾರ ಹೆಜ್ಜೆಗಳ ಊರುತ್ತ;

ಮತ್ತವನ ಕಾಣಲಿಲ್ಲ ನಾನು; ಅವನ ನೂರಾರು ಸಾಹಸದ ಕತೆಗಳನ್ನು,
ಅವರಿವರು ಮಾತಾಡುತ್ತ ಹೋಗುವುದನ್ನು, ಕೇಳಿಸಿಕೊಂಡೆ ಮೌನವಾಗಿ

 

‍ಲೇಖಕರು avadhi

23 April, 2020

4 Comments

  1. ಕಲ್ಲೇಶ್ ಕುಂಬಾರ್

    ಜಿ ಪಿ ಬಸವರಾಜು ಅವರ, ‘ಅಲೆಕ್ಸಾಂಡರ್ ಮಾತಾಡಿಸಿದ ಮರ’ ಪದ್ಯ, ಬುದ್ಧನು ಬೋಧಿಸಿದ ‘ಆಶೆಯೇ ದುಃಖಕ್ಕೆ ಮೂಲ’ ಎಂಬ ತತ್ವದ ಹಿನ್ನೆಲೆಯಲ್ಲಿ ವರ್ತಮಾನ ಸಂದರ್ಭದಲ್ಲಿ ಮನುಷ್ಯ ಬದುಕು ಆಶೆ ಕಾರಣವಾಗಿ ರೌರವ ನರಕವಾಗಿ ರೂಪುಗೊಂಡಿರುವ ಬಗೆಯನ್ನು ಅನಾವರಣ ಮಾಡುತ್ತದೆ! ಮತ್ತು, ಯಾವುದೂ ಶಾಶ್ವತವಲ್ಲದ ಈ ಲೋಕವನ್ನು ಆಶೆಯೇ ಮುನ್ನಡೆಸುತ್ತಿರುವುದು; ಲೋಕದ ಈ ಮುಂಚಲನೆಯೇ ಮನುಷ್ಯ ಬದುಕನ್ನು ಹೇಗೆಲ್ಲ ಮುರಿದು ಕಟ್ಟುತ್ತ ನಡೆದಿದೆ ಎಂಬ ವಿಚಾರವನ್ನು ಓದುಗನ ಅರಿವಿಗೆ ತರುತ್ತದೆ!
    ಕವಿತೆಯ ಪ್ರಾರಂಭದಲ್ಲಿ ಬರುವ ‘ದಟ್ಟ ಕಾಡುಗಳ ನಡುವೆ, ಗುಡ್ಡ ಬೆಟ್ಟಗಳ ಹತ್ತಿಳಿದು..’ ಎಂಬ ಸಾಲುಗಳ ಮೂಲಕ ನಮ್ಮ ಸ್ಮೃತಿ ಪಟಲದ ಮೇಲೆ ಮರ ಬದುಕಿನ ವ್ಯಾಮೋಹಕ್ಕೆ ಕಾರಣವಾದ ಅರಮನೆಯನ್ನು ತೊರೆದು, ಆಶೆಯಿಂದ ಕಳಚಿಕೊಳ್ಳಲು ಸ್ವಯಂ ತನ್ನನ್ನು ತಾನೇ ಕಠಿಣ ನಿಯಮಗಳಿಗೆ ಅಳವಡಿಸಿಕೊಳ್ಳಲು ಪ್ರಯತ್ನಿಸಿದ ಬುದ್ಧನಿಗೆ ಪ್ರತಿಮೆಯಂತಿದೆ. ಅದು ನಮ್ಮೆಲ್ಲರ ಮನದ ಕೊಳಕನ್ನು ತೊಳೆದು ಹಸನು ಮಾಡುವ ಬೋಧಿ ವೃಕ್ಷವೂ ಹೌದು; ಬುದ್ಧನೂ ಹೌದು. ಇನ್ನು, ಆಶೆಯನ್ನು ಪ್ರತಿನಿಧಿಸುವ ಅಲೆಕ್ಸಾಂಡರ್, ಮರವನ್ನು ಅಪ್ಪಿಕೊಳ್ಳುವ ಮೂಲಕ ಬುದ್ಧನನ್ನು ಮತ್ತೊಮ್ಮೆ ಮುಖಾಮುಖಿಯಾಗುವದು ಅದರ ಪ್ರಖರತೆ ಎಂಥದ್ದು ಎಂಬುದನ್ನು ಅರಿವಿಗೆ ತರುತ್ತದೆ.
    ಊರು ಕೇರಿ, ಜಾತಿ, ಕುಲ ಗೋತ್ರ, ಧರ್ಮಗಳೆಂಬ ಬೇಧವಿಲ್ಲದೆ ಮನುಷ್ಯನನ್ನು ಆವರಿಸುತ್ತದೆ. ತನ್ನ ಪ್ರವರವನ್ನು ಹೇಳಿಕೊಳ್ಳುತ್ತ ತನ್ನನ್ನು ಹಿಂಬಾಲಿಸಲು ಉತ್ತೇಜಿಸುತ್ತದೆ. ಕಡೆಗೂ ಗೆಲ್ಲುವ ಹಂಬಲವನ್ನು , ಆತ್ಮ ವಿಶ್ವಾಸವನ್ನು ತುಂಬಿ, ಆತನ ದುಃಖಕ್ಕೆ ಕಾರಣವಾಗುತ್ತದೆ. ಕಟ್ಟಕಡೆಗೆ ಅದೇ ದುಃಖದಲ್ಲಿ ಮನುಷ್ಯ, ಗೆದ್ದ ಸಾಮ್ರಾಜ್ಯವನ್ನು ಇಲ್ಲೇ ಬಿಟ್ಟು ಹೊರಟು ಹೋಗುವುದು ಇದೆಯಲ್ಲ.. ಅದು ಮಾತ್ರ ವಿಪರ್ಯಾಸದ ಸಂಗತಿ ಎನ್ನಬೇಕು!
    ಈ ಕವಿತೆ, ಆಳವಾಗಿ ಚಿಂತನೆಗೀಡುಮಾಡುತ್ತದೆ. ಅದರ ಆಳಕ್ಕೆ ಇಳಿದಂತೆ ವಿಭಿನ್ನ ಅರ್ಥದಲ್ಲಿ ದಕ್ಕುತ್ತ ಹೋಗುತ್ತದೆ.
    -ಕಲ್ಲೇಶ್ ಕುಂಬಾರ್, ಹಾರೂಗೇರಿ

    • BASAVARAJU G P

      Thanks to kallesh .

  2. Vijayaraghavan

    ಜಿಪಿಬಿ ಹೊಸ ಚೈತನ್ಯ ತುಂಬಿ ಬರೆಯುತ್ತಿದ್ದಾರೆ. ಕಾವ್ಯಕರ್ಮದಲ್ಲಿ ಅವರ ಹಾದಿ ಅಭ್ಯಾಸಯೋಗ್ಯವಾಗಿದೆ.

  3. BASAVARAJU G P

    Thank you vijayaraghavan for your inspiring words.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading