ಆತ್ಮ ದೇಹವನಗಲಿದ ಹೊತ್ತು
ಅಕ್ಷಯ ಆರ್ ಶೆಟ್ಟಿ
–
ಒಂದೇ ಕ್ಷಣ…
ಕಸಿದದ್ದು… ಚಲನೆಯನ್ನು…
ದಕ್ಕಿಸಿದ್ದು… ನಿಶ್ಚಲತೆಯನ್ನು!!!!
ಸ್ಕೂಟಿಯ ಚಲನೆಯೊಳಗೆ ಸಿಕ್ಕ ಮನಸೊಳಗೆ-
ಆಫೀಸಿನ ರಕ್ತದ ಬಾಟಲಿಗಳ ದಾಖಲಾತಿ ಇದ್ದಿರಬಹುದು…
ಮನೆಯಲ್ಲಿ ಸಂಜೆಗೆ ಕಡೆದಿಟ್ಟ ಹಿಟ್ಟು
ಬಸಿದಿಟ್ಟ ಅನ್ನ,
ಸಿಂಕಿನಲ್ಲಿ ಬಾಕಿಯಾದ ಪಾತ್ರೆ
ತೊಳೆಯಲು ನೆನೆಸಿಟ್ಟ ಬಟ್ಟೆ
ಗಾಳಿಗೆ ಸಿಕ್ಕ ಕೂದಲಿನಂತೆ,
ಮನ: ಪಟಲದಲಿ ಹಾರುತ್ತಿರಬಹುದು…
ಮಗುವಿನ ಪರೀಕ್ಷೆಯ ತಯಾರಿಯ ವೇಳಾಪಟ್ಟಿ
ಕೊಡಬೇಕಾದ ಹಾಲು ಮತ್ತು ಪೇಪರಿನ ಹಣ
ಸಂಜೆಗೆ ಕೊಂಡೊಯ್ಯಬೇಕಾದ ತರಕಾರಿ-
ಕೈಯಡುಗೆ ಉಂಡ ಗಂಡನ ಹಸನ್ಮುಖ
….ಸುಳಿದೂ ಸುಳಿದು ಒಂದು ತೆಳು ನಗು
ಹೆಲ್ಮೆಟ್ ಒಳಗಿಂದಲೇ ಹರಡಿರಬಹುದು..
ಎಂದಿಗಿಂತ ಬೇಗ ಎದ್ದರೂ ಮತ್ತೂ ಕೈಕೊಟ್ಟ ಸಮಯ,
ನಾಳೆಯನು ವೇಗವಾಗಿ ಹೆಣೆಯಬೇಕೆಂಬ ನಿರ್ಧಾರ ಪೋಣಿಸಿರಬಹುದು…

ಹೀಗೆ ಹತ್ತು ಹಲವು ಎಣಿಕೆಗಳ ಬದಿಗೆ ತಳ್ಳಿದ
ಆ ಒಂದು ಕುಣಿಕೆ,
ನಿರ್ಜೀವಗೊಳಿಸಿತ್ತು-
ಹೊರಡುವ ತರಾತುರಿಯಲ್ಲಿ
ಕಳಚಿ ಬಿಸಾಡಿದ ಬಟ್ಟೆಯಂತೆ…!
ಕಟ್ಟಿದ ಮನೆ
ಅರ್ಧಕ್ಕೆ ಉಳಿದ ಕನಸು,
ಇನ್ನೂ ಅದೆಷ್ಟೋ ಸಂಗತಿಗಳು…
ಕಾಯುತ್ತಿರಬಹುದು ಮುಕ್ತಿಗಾಗಿ…
……
ಆತ್ಮವನಗಲಿದ … ದೇಹದ ಸುತ್ತ!!!






ಬಹಳಷ್ಟು ಮುಟ್ಟುವ, ತಟ್ಟುವ ಪದಗಳು