ಚಳ್ಳಕೆರೆಯಿಂದ ನಾಯಕನಹಟ್ಟಿಯನ್ನು ಹಾದು ಪ್ರಯಾಣಿಸುವಾಗ ರಸ್ತೆ ಬದಿಯ ಹಳ್ಳಿ ನೇರಲಗುಂಟೆಯಲ್ಲಿ ಕಂಬಳಿ ನೇಯ್ಗೆಯ ಚಿತ್ರಗಳು ಕಾಣುತ್ತವೆ. ರಾಟೆ ತಿರುಗಿಸುತ್ತಾ ನೂಲನ್ನು ಸಿದ್ಧಪಡಿಸುವ ಅಜ್ಜಿಯರು, ಕಂಬಳಿ ನೇಯುವುದರಲ್ಲಿ ತನ್ಮಯತೆಯಿಂದ ತೊಡಗಿದ ನಡು ವಯಸ್ಸಿನ ಯಜಮಾನರು, ಕರಿಕಟ್ ಮಾಡುವ ಮಕ್ಕಳು ಹೀಗೆ ಕಂಬಳಿಯ ನೇಯ್ಗೆಯನ್ನಾಧರಿಸಿದ ದೇಸಿ ಕಸಬಿನ ಚಿತ್ರಗಳು `ಬ್ಲಾಕ್ ಅಂಡ್ ವೈಟ್’ ಫೋಟೋದಂತೆ ಕಾಣುತ್ತವೆ. ರಸ್ತೆಬದಿಯ ಮನೆಗಳ ಮುಂಬಾಗದಲ್ಲಿ ಒಟ್ಟಿದ ಕುರಿ ಹುಣ್ಣೆಯ ಚೀಲಗಳು ಕಂಬಳಿಯಾಗಿ ಯಾರೋ ಹೊದ್ದು ಮಲಗಿದಂತೆ ಕನಸು ಕಾಣುತ್ತವೆ.
ಈಚೆಗೆ ನೇರ್ಲಗುಂಟೆಯ ಕಂಬಳಿ ನೇಯುವ ಕೆಲವು ಕುಟುಂಬಗಳ ಜತೆ ಒಡನಾಡಲು, ಕಂಬಳಿ ಕಸುಬಿನ ಸುಖ ದುಃಖಗಳನ್ನು ಮಾತನಾಡಲು ಸಾಧ್ಯವಾಯಿತು. ಬಸ್ಸಿನಲ್ಲಿ ಹಾದು ಹೋಗುವಾಗ ನೋಡಿದ ಈ ಕಂಬಳಿ ನೇಯ್ಗೆ ಚಟುವಟಿಕೆಗಳ ಜೀವನಾಡಿಯ ತುಡಿತಗಳು, ನೇಯ್ಗೆ ಸಮುದಾಯವನ್ನು ಸ್ವತಃ ಬೇಟಿಮಾಡಿದಾಗ ಮನಸ್ಸಿಗೆ ಹತ್ತಿರವಾದವು. ಕಲ್ಪಿಸಿಕೊಂಡ ಹಲವು ಯೋಚನೆಗಳಿಗೆ ವಾಸ್ತವದ ತೆರೆ ಬಿದ್ದಿತು. ಕಂಬಳಿಯ ಕಸುಬು ಬೆಳಗಿನ ಜಾವದ ನಾಲ್ಕರಿಂದ ಆರಂಭವಾಗುತ್ತದೆ. ಕೂಗುವ ಕೋಳಿಗಳು ಮಗ್ಗದ ಸದ್ದು ಕೇಳಿಯೇ ಕ್ಕೊಕ್ಕೊಕ್ಕೋ..ಕ್ಕೋ ಎಂದು ಕೂಗಲು ಆರಂಭಿಸುತ್ತವೆ. ದಿನದ ಸೂರ್ಯ ಸಹ ಈ ನೇಯ್ಗೆ ಸದ್ದು ಕೇಳುತ್ತಲೇ ಆಕಳಿಸುತ್ತಾ ಈ ಊರಿನ ಪಾಲಿಗೆ ತನ್ನ ದಿನಚರಿಯನ್ನು ಆರಂಭಿಸುತ್ತಾನೆ.
ಇದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನೀರ್ಲಗುಂಟೆಯಂತಹ ಒಂದು ಹಳ್ಳಿಯ ಚಿತ್ರಣ ಮಾತ್ರವಲ್ಲ. ಪಶುಪಾಲನೆ, ಕುರಿ ಸಾಕಣೆ ಹೆಚ್ಚಿರುವ ಈ ಭಾಗದ ಸುಮಾರು ಐವತ್ತಕ್ಕೂ ಹೆಚ್ಚಿನ ಹಳ್ಳಿಗಳ ದಿನಚರಿಯೂ ಹೀಗೆ ಆರಂಭವಾಗುತ್ತದೆ ಎಂದರೆ ನೀವು ನಂಬಲೇಬೇಕು. ಕುರಿಯ ಮೈಮೇಲೆ ಹುಣ್ಣೆ ಹೆಚ್ಚಾದಾಗ ಕುರಿಗಳನ್ನು ಹಳ್ಳಕ್ಕೋ, ಬೋರ್ವೆಲ್ ನೀರಿಗೋ ಹಿಡಿದು ಮೈತೊಳೆಸುತ್ತಾರೆ. ಆಗ ಕುರಿ ಫ್ರೆಶ್ ಆಗುತ್ತದೆ. ಹೀಗೆ ಸ್ನಾನ ಮಾಡಿದ ಕುರಿಯ ಕೂದಲು ಒಣಗಿ ಗರಿಗರಿಯಾಗುತ್ತಲೂ ಕಟಿಂಗ್ ಕೆಲಸ ಶುರುವಾಗುತ್ತದೆ. ಆಗ ಕಟಿಂಗ್ ಶೇವಿಂಗ್ ಮಾಡಿಕೊಂಡ ಸುಂದರ ಯುವಕರಂತೆ ಕುರಿಗಳು ಕಾಣತೊಡಗುತ್ತವೆ. ಹೀಗೆ ಕಟಿಂಗ್ ಮಾಡಿದ ಕೂದಲನ್ನು ಕೂದಲಿನ ಬಣ್ಣ, ಕುರಿಯ ವಯಸ್ಸನ್ನು ಆಧರಿಸಿ ವಿಂಗಡಿಸಲಾಗುತ್ತದೆ.
ಹಾಗಾಗಿ ಕುರಿ ಹುಣ್ಣೆಯಲ್ಲಿ ಹಲವು ವಿಧಗಳಿವೆ. ಮುದಿ ಕುರಿಯ ಹುಣ್ಣೆಯನ್ನು ನೆರೆಂಜಿ ಎನ್ನುವರು. ಅಂತೆಯೇ ಮಬ್ಬು, ಕಗ್ಗು, ಕೆಂಗುರು, ಕರಿದು, ಬಿಳಿದು ಈ ಬಣ್ಣಗಳನ್ನು ಆಧರಿಸಿ ನೇಯುವ ಕಂಬಳಿಗಳಿಗೂ ಆಯಾ ಬೇರೆ ಬೇರೆ ಹೆಸರಿರುತ್ತದೆ. ಹೀಗೆ ಕಟ್ ಮಾಡಿದ ಹುಣ್ಣೆಯನ್ನು ಜಿನ್ನಿಗೆ ಹಾಕುತ್ತಾರೆ. ಜಿನ್ನಿಗೆ ಹಾಕುವುದರಿಂದ ಕೂದಲು ನೂಲು ತೆಗೆಯುವ ಹದಕ್ಕೆ ಬರುತ್ತದೆ ಎನ್ನುವುದು ತಿಪ್ಪಯ್ಯನವರ ಅಭಿಪ್ರಾಯ.
ಜಿನ್ನಿಗೆ ಹಾಕಿ ಹದವಾದ ಹುಣ್ಣೆಯನ್ನು ರಾಟೆಯಲ್ಲಿ ತಿರುಗಿಸಿ ನೂಲು ಮಾಡುತ್ತಾರೆ. ಇಂತಹ ರಾಟೆಗಳಲ್ಲಿ ಗುಂಬದ ರಾಟೆ, ಎಲೆ ರಾಟೆ ಎಂದು ಎರಡು ವಿಧಗಳಿವೆ. ಈ ರಾಟೆಗಳನ್ನು ಆಯಾ ಊರುಗಳ ಬಡಿಗೇರರು ಮಾಡುತ್ತಾರೆ. ಇಂತಹ ರಾಟೆಗಳು ತಿರುಗುವ ಸದ್ದು ಈ ಭಾಗದ ಹಳ್ಳಿಗಳಲ್ಲಿ ಮನೆ ಮನೆಯಲ್ಲೂ ಕೇಳುತ್ತದೆ. ಈ ರಾಟೆ ತಿರುಗಿಸುವುದನ್ನು ನೋಡಿದರೆ, ಮಹಾತ್ಮ ಗಾಂಧಿ ತಿರುಗಿಸುವ ಚರಕದ ಚಿತ್ರವೇ ಕಣ್ಮುಂದೆ ಬರುತ್ತದೆ. ಈ ಊರುಗಳಲ್ಲಿ ಗಾಂಧಿ ಕನಸಿನ ಗುಡಿ ಕೈಗಾರಿಕೆ ಕಂಬಳಿ ನೇಯ್ಗೆಯ ಹೆಸರಲ್ಲಿ ಹುಸಿರಾಡುತ್ತಿವೆ.

ಹುಣಸೆ ಬೀಜದ ಪುಡಿಯನ್ನು ಕುದಿಸಿ ಮಾಡಿದ ಸೆರೆಯಲ್ಲಿ ನೂಲನ್ನು ಹದಮಾಡಿಕೊಂಡು ಮಗ್ಗಕ್ಕೆ ನೇಯ್ಗೆಯ ಸಾಲು ಕಟ್ಟಿಕೊಳ್ಳುತ್ತಾರೆ. ಬೇವು, ಸೇಡು, ಲಾಳಿ, ಸೆಲೆಗೋಲು, ಒಳಕೋಲು, ಬೆದಗೋಲು(ಬೆದ), ಅಣಿ, ಬರ್ಲು, ಹಮಿತಿಗಿ, ಕುಂಚೆ, ಕರಗೋಲು-ಉಡುಗೋಲು, ನೇಯ್ಗೆ ಹಗ್ಗ, ಸಾಲ್ ನೀರು ಎಲ್ಲವೂ ಕಂಬಳಿ ನೇಯಲು ತಯಾರಾಗುತ್ತವೆ. ಈ ಒಂದೊಂದು ಪರಿಕರವೂ ಒಂದೊಂದು ಕೆಲಸವನ್ನು ಹಂಚಿಕೊಂಡು ಮಗ್ಗ ನೇಯುವವರ ಕೈಯಲ್ಲಾಡುತ್ತವೆ. ನೇಯ್ಗೆ ಕೆಲಸ ಒಂದು ಬೆಳಗ್ಗೆ ಐದಕ್ಕೆ ಶುರುವಾದರೆ ಮೂರುದಿನದಲ್ಲಿ ಒಂದು ಕಂಬಳಿ ಸಿದ್ಧವಾಗುತ್ತದೆ. ಹೀಗೆ ಸಿದ್ದಗೊಂಡ ಕಂಬಳಿಯ ಗುಣಮಟ್ಟವನ್ನು ಆಧರಿಸಿ ಒಂದೊಂದು ರೇಟು ನಿಗಧಿಯಾಗುತ್ತದೆ. ಕನಿಷ್ಠ ಆರು ನೂರು ರೂಗಳಿಂದ ಆರಂಭವಾಗಿ ಎರಡು ಸಾವಿರದವರೆಗೂ ಈ ಬೆಲೆ ಇರುತ್ತದೆ. ಹೀಗೆ ನೇಯ್ದ ಕಂಬಳಿಯನ್ನು ಭಾನುವಾದರ ಕಂಬಳಿ ಸಂತೆಗೆ ಚಳ್ಳಕೆರೆಗೆ ಬಂದು ಮಾರುತ್ತಾರೆ.

ಒಬ್ಬ ಗಂಡುಮಗ, ಒಬ್ಬ ಹೆಣ್ಣುಮಗಳು ಆರು ದಿನ ಕಂಬಳಿ ನೇಯ್ದರೆ 2 ಕಂಬಳಿ ನೇಯಬಹುದು. ಹೆಣ್ಣು ಮಕ್ಕಳು ರಾಟೆ ಸುತ್ತುತ್ತಾ ದಾರ ತೆಗೆಯುತ್ತಾರೆ. ಗಂಡು ಮಕ್ಕಳು ಹುಣಸೆ ಅಂಟು ಅಚ್ಚಿ ಹದ ಮಾಡಿಕೊಂಡು, ಮಗ್ಗ ನೇಯುತ್ತಾರೆ. ಮಕ್ಕಳು, ಅಜ್ಜ ಅಜ್ಜಿಯರು, ಮಹಿಳೆಯರು ಕರಿಕಟ್ ಮಾಡುವ ಕೆಲಸ ಮಾಡುತ್ತಾರೆ. ಭೂಕಂಪ, ನೆರೆಹಾವಳಿ ಮುಂತಾದ ಘಟನೆಗಳು ಸಂಭವಿಸಿದಾಗ ಸರಕಾರ ಸಾವಿರಾರು ಕಂಬಳಿಗಳನ್ನು ಕೊಂಡು ಕೊಡುವುದಿದೆಯಂತೆ. ಮಲೆನಾಡಿನ ಕಡೆ ಹೆಚ್ಚಾಗಿ ಕಂಬಳಿ ಕೊಳ್ಳುತ್ತಾರೆ ಎಂಬುದು ಇಲ್ಲಿಯ ಜನರ ಅಭಿಮತ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚುತ್ತಿರುವುದರಿಂದ ಮೊದಲಿನಂತೆ ವಿಪರೀತ ಚಳಿ ಈಗ ಕಡಿಮೆಯಾಗಿದೆ. ಮೊದಲಿನ ಕೊರೆವ ಚಳಿ ಈಗ ಇರುವುದಿಲ್ಲ. ಹಾಗಾಗಿ ಕಂಬಳಿ ಕೊಳ್ಳುವ, ಹೊದ್ದುಕೊಳ್ಳುವುದು ಗ್ರಾಮೀಣ ಪ್ರದೇಶದಲ್ಲಿ ಕಡಿಮೆಯಾಗುತ್ತಿದೆ ಎನ್ನುವುದು ಈ ಹಳ್ಳಿ ಜನರ ಅಳಲು.

ಚಳ್ಳಕೆರೆಯ ಸಂತೆಪೇಟೆಯ ಕಂಬಳಿಕಟ್ಟೆ ಎನ್ನುವ ಪ್ರದೇಶದಲ್ಲಿ ಪ್ರತಿ ಭಾನುವಾರ ಕಂಬಳಿಸಂತೆ ನಡೆಯುತ್ತದೆ. ಆ ದಿನ ಕಂಬಳಿ ಅಂಡಿಗೆಗಳು ಬಂದು ಇಳಿಯುತ್ತವೆ. ಒಂದೆರಡು ಕಂಬಳಿಗಳನ್ನು ನೇಯ್ದು ವಾರದ ಮನೆ ಕರ್ಚಿಗೆಂದು ಮಾರಲು ಬಂದ ಬಿಡಿ ಕಂಬಳಿದಾರರೂ ಇರುತ್ತಾರೆ. ಇಲ್ಲಿ ಸುತ್ತಮುತ್ತಲ ಹಳ್ಳಿಗಳ ಕುರಿಗಾರರು, ರೈತರು, ನೇಕಾರರು ತಾವು ನೇಯ್ದು ತಂದ ಕಂಬಳಿಗಳನ್ನು ಮಾರಾಟ ಮಾಡುತ್ತಾರೆ. ಕಂಬಳಿಯನ್ನು ಕೊಳ್ಳಲು ಆಂದ್ರ, ಮಹಾರಾಷ್ಟ್ರ, ಹಿಮಾಲಯ, ಕಾಶ್ಮೀರ, ಅಂಡಮಾನ್ ನಿಕೋಬರ್ ಭಾಗಗಳಿಂದಲೂ ವ್ಯಾಪಾರಸ್ತರು ಬರುತ್ತಾರೆ. ವಿಪರ್ಯಾಸ ಅಂದರೆ ಕಂಬಳಿಯ ಬಳಕೆ ಈ ಭಾಗದಲ್ಲಿಯೇ ಕಡಿಮೆಯಾಗಿದೆ. ಹಿಮಾಲಯ ಕಾಶ್ಮೀರ ಮುಂತಾದ ಹಿಮ ಚಳಿ ಹೆಚ್ಚಿರುವ ಉತ್ತರ ಬಾರತದಲ್ಲಿ ಕಂಬಳಿಗೆ ದೊಡ್ಡ ಬೇಡಿಕೆ ಇದೆ. ಈ ಬೇಡಿಕೆಯನ್ನು ಆಧರಿಸಿಯೇ ಇಲ್ಲಿ ಕಂಬಳಿ ಸಂತೆ ಈಗಲೂ ಕಳೆಗಟ್ಟುತ್ತಿರುವುದು. ಉತ್ತರ ಭಾರತದ ರಾಜ್ಯಗಳ ಜನರು ಬೆಚ್ಚಗಿರಲು ಚಳ್ಳಕೆರೆ ಭಾಗದ ಕಂಬಳಿಯನ್ನು ನೆಚ್ಚಿದ್ದರಿಂದ ಕಂಬಳಿ ನೇಯ್ಗೆಯನ್ನು ನಂಬಿದ ಸಮುದಾಯಗಳ ಹೊಟ್ಟೆ ತಣ್ಣಗಿದೆ.

ಇಲ್ಲಿಗೆ ನೀರ್ಲಗುಂಟೆ ಒಳಗೊಂಡಂತೆ ಚಳ್ಳಕೆರೆ ಸುತ್ತಮುತ್ತಲ ಗೊರ್ಲಕಟ್ಟಿ, ಕೊಂಡ್ಲಳ್ಳಿ, ಚೌಳೂರು, ಕುರುಬರ ಹಟ್ಟಿ, ತರಗಲಬಂಡೆ, ಕಾಮ ಸಮುದ್ರ, ದೊಡ್ಡುಳ್ಳಾರ್ತಿ, ಗಟ್ಟಪರ್ತಿ, ಓಬಳಾಪುರ, ಮೊಗಲಹಳ್ಳಿ, ತಾಯಕನಹಳ್ಳಿ, ಸೂರನಹಳ್ಳಿ, ಚಿಕ್ಕಮ್ಮನಹಳ್ಳಿ, ಉಡೇಂ, ಪರೆಕೋಲಮ್ಮನಹಳ್ಳಿ ಮುಂತಾದ ಹಳ್ಳಿಗಳು ಈ ಸಂತೆಯಲ್ಲಿ ಭಾಗಿಯಾಗುತ್ತವೆ.
`ಕಂಬಳಿ ನೇಯ್ಗೆಯೆನ್ನೋದು ಮಕ್ಕಳಿಂದ ಮುದುಕರ ವರೆಗೆ, ಕುರುಡ ಕುಂಟ ಎಲ್ಲರಿಗೂ ಕೆಲಸವಿದೆ, ಇದು ಎಲ್ಲರಿಗೂ ಕೆಲಸ ಕೊಡುತ್ತೆ. ಆದ್ರೂ ಇದು ಕಷ್ಟದ ತಲುಬು, ಇದನ್ನ ಈಗಿನ ಹುಡುಗ್ರು ಮಾಡಾಕೆ ಇಷ್ಟಪಡಲ್ಲ ಸಾರ್, ಯಾಕಂದ್ರ ಈಗ ಕಷ್ಟ ಮಾಡದೆ, ಅರಾಮಾಗಿ ಕೈಗೆ ಹಣ ಬರ್ಬೇಕು. ಅದಕ್ಕೆ ಶೋಕಿಮಾಡಾಕ ಹರೇದ ಹುಡುಗ್ರು ಬೆಂಗಳೂರು ಕಡೆ ದುಡಿಯೋಕೆ ಹೋಗ್ತಾರೆ’ ಎಂದು ತಿಪ್ಪಮ್ಮ ಹೇಳುತ್ತಾರೆ.
`ಬೇಸಿ ನೇಯ್ಗೆ ಮಾಡಿದ್ರೆ ನಮಗೇನು ಬಡತನ ಇಲ್ಲ ಸಾರ್. ಈಗ ಕುರಿ ಸಾಕಣೆ ಚೂರು ಕಡಿಮೆಯಾಗಿ, ಕುರಿ ಹುಣ್ಣೆ ತುಂಬಾ ರೇಟಾಗಿದೆ. ಈಗಿನ ಹುಡುಗ್ರು ಕಂಬಳಿ ನೇಯಾಕೆ ಮುಂದೆ ಬತರ್ಿಲ್ಲ. ಅದರಾಗೆ ನಮ್ಮ ಭಾಗದ ಕಾವಲು ಜಾಗನ ಗೋರ್ಮೆಂಟ್ ಇಮಾನ ಮಾಡೋ ಕಂಪನಿಗೆ ಕೊಟ್ಟಾತಿ, ಹಂಗಾರೆ ನಾವು ಕುರಿ ಸಾಕೋದೆ ಕಷ್ಟ ಅಕ್ಕಾತಿ ಆಗ ಕಂಬಳಿ ನೇಯೋದು ಇನ್ನು ಕಷ್ಟ ಸಾರ್. ಎಂದು ತಿಪ್ಪೇರುದ್ರಪ್ಪ-ಲಕ್ಷ್ಮಿದೇವಿ ದಂಪತಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಕುರಿ ಸಾಕಣೆಗೆ ಈ ಭಾಗದ ಹುಲ್ಲುಗಾವಲು ಪ್ರಶಸ್ತವಾಗಿದೆ. ಹಾಗಾಗಿ ಕುರಿ ದನ ಸಾಕಣೆಯ ಕಾರಣಕ್ಕೆ ಅಮೃತಹಮಲ್ ಕಾವಲು, ವರವು ಕಾವಲು ಮುಂತಾದ ಕಾವಲಿನ ಸುಮಾರು ಹತ್ತು ಸಾವಿರ ಎಕರೆ ಭೂಮಿಯನ್ನು ಮೀಸಲಿಡಲಾಗಿತ್ತು. ಆದರೆ ಚಳ್ಳಕೆರೆ ಭಾಗದ ಈ ಭೂಮಿಯನ್ನು ಸರಕಾರ ಬಾಬಾ ಅಣುವಿಧ್ಯುತ್ ಕೇಂದ್ರ, ಡಿ.ಆರ್.ಡಿ.ಓ, ಇಸ್ರೋ ಮುಂತಾದ ಸಂಸ್ಥೆಗಳಿಗೆ ನೀಡಿದೆ. ಈ ಭಾಗದಲ್ಲಿ ಆಯಾ ಸಂಸ್ಥೆಗಳು ಭೂಮಿಯನ್ನು ಆಕ್ರಮಿಸಿಕೊಂಡು ಸುತ್ತುಗೋಡೆಯನ್ನು ಕಟ್ಟಿಕೊಳ್ಳುವ ತಯಾರಿಯಲ್ಲಿವೆ.
ಈ ಸಂಸ್ಥೆಗಳು ಆರಂಭವಾದಲ್ಲಿ ಈ ಭಾಗದ ಜನರು ತಮ್ಮ ನೆಲದಲ್ಲಿ ತಾವೇ ಅನಾಥರಾಗುವ ಸಂಭವವಿದೆ. ಕುರಿ ಪಶು ಸಾಕಣೆಯನ್ನು ಬಿಡಬೇಕಾಗುತ್ತದೆ. ಮುಖ್ಯವಾಗಿ ಈ ಭಾಗದಲ್ಲಿ ಕುರುಬರು, ಬೇಡರು, ಗೊಲ್ಲರು, ಜೋಗಿಗಳು ಮುಂತಾದ ಬುಡಕಟ್ಟುಗಳಿವೆ. ಈ ಬುಡಕಟ್ಟುಗಳು ಪಶುಪಾಲನೆಯನ್ನೇ ಆಶ್ರಯಿಸಿವೆ. ಈ ಕಾರಣಕ್ಕೆ ಸಹಜವಾಗಿ ಈ ಭಾಗದ ಜನರು ಭೂಕಬಳಿಕೆಯನ್ನು ವಿರೋಧಿಸಿ ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಅವರ ಹೋರಾಟಕ್ಕೆ ಜಯ ಸಿಗಲಿ. ಕಂಬಳಿ ನೇಯ್ಗೆಯಂತ ದೇಸಿ ಕಸಬು ಜೀವಂತಿಕೆಯಿಂದ ಹುಸಿರಾಡಲಿ. ಇಲ್ಲಿನ ಕುರಿ ದನಕರುಗಳು ತಮಗಾಗಿ ಮೀಸಲಿಟ್ಟ ಅಮೃತಮಹಲು ಕಾವಲಿನಲ್ಲಿ ನಿರಾಳವಾಗಿ ಹುಲ್ಲು ಮೇಯುವಂತಾಗಲಿ. ಗಾಂಧಿಯ ಚರಕವು ಈ ಹಳ್ಳಿಗಳಲ್ಲಿ ಸದಾ ತಿರುಗುತ್ತಿರಲಿ.
ಕಂಬಳಿ ನೇಯ್ಗೆಯ ಚಂದ ನೋಡಲು ಇಲ್ಲಿ ಕ್ಲಿಕ್ಕಿಸಿ :
ಅರುಣ್ ಜೋಳದ ಕೂಡ್ಲಿಗಿ ಕಾಲಂ : ಕಂಬಳಿ ನೇಯ್ಗೆಯ ನೇರ್ಲಗುಂಟೆ
ನಿಮಗೆ ಇವೂ ಇಷ್ಟವಾಗಬಹುದು…




ಬ್ರದರ್, ನಮ್ಮ ಭಾಗದ ನೇರಲಗುಂಟೆ ಬಗ್ಗೆ ಓದಿ ತುಂಬಾ ಖುಷಿ ಆಯಿತು. ನಾನು ಚಿಕ್ಕವನಾಗಿದ್ದಾಗ ಇದ್ದಷ್ಟು ಕುರಿಗಳು ಈಗ ಇಲ್ಲ. ಆದರೂ ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗದ ಭಾಗದಲ್ಲಿ ಹೆಚ್ಚು ಕುರಿಸಾಕಣೆ ಇದೆ. ಕೊನೆಗೆ ನೀವೆ ಹೇಳಿದಂತೆ ಈ ಭಾಗದ ದನಕುರಿಗಳು ಮೇಯುವ ಕಾವಲು ಭೂಮಿಯನ್ನು ವಶಕ್ಕೆ ತೆಗೆದುಕೊಂಡು ದೇಶದ ಗಡಿಗೆ ಕಟ್ಟಿದಂತೆ ಗೋಡೆ ಕಟ್ಟಿಕೊಂಡು ಬೇಲಿ ಹಾಕಿಕೊಂಡಿದ್ದಾರೆ. ಈ ಭೂಮಿಯಲ್ಲಿ ಇನ್ನುಮುಂದೆ ದನಕುರಿ ಮೇಯಿಸುವುದು ಕನಸಿನ ಮಾತು.ಮುಂದೆ ನಿಧಾನಕ್ಕೆ ಕಂಬಳಿ ನೇಯ್ಗೆಯೂ ಇತಿಹಾಸದ ಪುಟ ಸೇರಲಿದೆ ಅನ್ನಿಸುತ್ತದೆ.
olleya lekhana,namma koppala talookina Bisaralliyalliyoo intaha chatuvatike ide bahala hinde nanoo aa bagge story maadidde
vidiO haakiddu chennagide. Mundina lekhanagalalli sadyavadare vidio haaki.
ಕಂಬಳಿ ನೇಕಾರರ ಜೀವನದ ಚಿತ್ರಣ ಚೆನ್ನಾಗಿದೆ