ಅರಬಗಟ್ಟೆ ಅಣ್ಣಪ್ಪ ಹೊಸ ಕವಿತೆ- ಒಮ್ಮೆ ಹೀಗೆ..

ಅರಬಗಟ್ಟೆ ಅಣ್ಣಪ್ಪ

**

ಹಲವು ಬಾರಿ ಬಳಸುತ್ತಿದ್ದ

ತುಂಬ ಪರಿಚಿತ ಪದವೊಂದು

ಆತ್ಮಹತ್ಯೆಗೆ ಯತ್ನಿಸುತ್ತಿತ್ತು

ಬಹುದೊಡ್ಡದಾದ ನನ್ನ ಕವಿತಾಗಾರದಲ್ಲಿ

ದೂರದಲ್ಲಿ ಸ್ಪಷ್ಟಾಸ್ಪಷ್ಟವಾಗಿ

ಅದೊಂದು ಮಾತ್ರ, ದೂರದಲ್ಲಿದ್ದರೂ

ದಿಟವಾಗಿ ಕಾಣುತ್ತಿತ್ತು

‘ಛೇ, ತಪ್ಪಿದು. ಹೀಗೆಲ್ಲ ಪದಹತ್ಯೆಗಳಾದರೆ

ನನ್ನ ಕತೆಯೇನು…?’

ಕೂಗಿ ಕರೆದು ಎಚ್ಚರಿಸೋಣವೆಂದೆ

ಹೌದು! ಆ ಪದದ ಹೆಸರೇನು?

ಅರ್ಥ ಗೊತ್ತಾದರೆ ಕೂಗಿ ತಡೆಯಬಹುದಿತ್ತು

ಅದರ ಆಕಾರ ಒತ್ತು ಇಳಿ ದೀರ್ಘ

ಎಲ್ಲವೂ ಸ್ಪಷ್ಟ! ಅದರ ಹೆಸರೇನು!?

ಸ್ ಕಿಳಿ, ಹ್ ಗುಡಿಸು, ತ್ ಗುಡಿಸು ಎಂದೆನ್ನಲೆ?

ಬೇಡ! ಮೊದಲೇ ಅದು ಬೇಜಾರಲ್ಲಿದೆ

ಹೌದು, ಇದು ನನ್ನದೇ ಕವಿತೆ ತಾನೆ

ಹೌದು ಮತ್ತೆ! ಇಷ್ಟೊಂದು ಬರೆದು

ಚಚ್ಚಿ ಬಿಸಾಡುವ ಧೈರ್ಯ ನನಗಲ್ಲದೆ

ಮತ್ತಾರಿಗೆ ಇದ್ದೀತು?

ಇದರ ಆಕಾರ ನೋಡುತ್ತಿದ್ದರೆ

ಬಹುಶಃ ನಾನಿದನ್ನು ತುಂಬಾ ಸಲ ಬಳಸಿದ್ದೇನೆ 

ಬಹು ಪರಿಚಿತ ಪದ

‘ಹೇ ಪರಿಚಿತ ಪದವೆ ನಿಲ್ಲು

ಹೀಗೆಲ್ಲೆ ಪದಹತ್ಯೆಯಾದರೆ

ನಾನೇನು ಮಾಡಲಿ, ಇಗೋ ಬಂದೆ ನಿಲ್ಲು ಸ್ವಲ್ಪ’

‘ಯಾವ ಪುರುಷಾರ್ಥಕ್ಕಾಗಿ ಬದುಕಲಿ ಸ್ವಾಮಿ

ನನ್ನ ಅರ್ಥಹತ್ಯೆಯೇ ನಡೆದು ಹೋಗಿದೆ 

ನಾನಿನ್ನು ಬದುಕಿದ್ದೂ ಏನು ಪ್ರಯೋಜನ?

ನೋಡು ನೋಡು ನಿನಗೆ ನನ್ನ ಹೆಸರೇ ತಿಳಿದಿಲ್ಲ’

ಹಾಗೆಲ್ಲ ಬೇಸರಿಸಬೇಡ 

ನನ್ನ ಪದ್ಯಾಗಾರ ವಿಶಾಲವಾದದ್ದು

ಯಾವುದೆಂದು ಎಷ್ಟೆಂದು ನೆನಪಿಡಲಿ

ಇರು ಇರು ನಿನ್ನ ಅಕ್ಕಪಕ್ಕದವರನ್ನು

ನೋಡಿ ತಿಳಿಯುತ್ತೇನೆ

ಆಗ ಖಂಡಿತ ಹೊಳೆಯುತ್ತದೆ’

‘ಹುಡುಕು ಹುಡುಕು ಈ ಶವಾಗಾರದಲ್ಲಿ

ಅದ್ಯಾವ ಅರ್ಥಾಮೃತ ಸುರಿಯುವುದೋ ನೋಡುವೆ

ಪದ್ಯಾಗಾರವೇನು? ಶವಾಗಾರವೇನು?’

‘ಹೇ… ಏಳಿ ಏಳಿ ಸ್ವಲ್ಪ ಮೇಲೇಳಿ

ಆತನನ್ನು ಬದುಕಿಸಿಕೊಳ್ಳಬೇಕು

ಅರೆ, ಇದೇನಿದು ಎಲ್ಲ ಪದಗಳು

ಹತ್ಯೆಯಾಗಿವೆ! ಅಯ್ಯೋ… ಇದೇನಿದು

ಇದೊಂದು ಪದವುಳಿದು ಎಲ್ಲವೂ ಸತ್ತಿವೆ

ಛೇ…ನಾನೆಂಥ ಕಟುಕ!’

‘ಜನಪದರ ಸೊಂಪಾಗಿದ್ದ ಸ್ವರ;

ಪ್ರಕೃತಿಯಲಿ ಇಂಪಾಗಿದ್ದ ದನಿ;

ಖಗಮೃಗಕೀಟಗಳಲಿದ್ದ ಚಿಲಿಪಿಲಿ;

ಗಿರಿತೊರೆಝರಿಗಳಲಿದ್ದ ನಿನಾದ;

ನಲ್ಲ ನಲ್ಲೆಯರ ಪಿಸುಮಾತು;

ಹಸುಳೆಗಳ ಅಳುನಗುವಿನ ತೊದಲು;

ಕವಿಪುಂಗವರ ಕೈಚಳಕದ ಮೇರುಗಣಿ;

ಅರ್ಥವಿಲ್ಲದೆ ತಂದು ತುಂಬಿಟ್ಟು

ಶವಾಗಾರವಾಯಿತಲ್ಲ….

ನಿಲ್ಲು, ದಯವಿಟ್ಟು ನಿಲ್ಲು

ನಾನಿನ್ನು ಕವಿತೆ ಬರೆಯಲಾರೆ…

ಕ್ಷಮಿಸು

‘ನಾನಿನ್ನು ಬರೆಯಲಾರೆ’.

‍ಲೇಖಕರು Admin MM

February 21, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: