ದಾದಾಪೀರ್ ಜೈಮನ್
**
ಅಮ್ಮ ಹೂ ಕಟ್ಟುತ್ತಿದ್ದಳು
ಮಲ್ಲಿಗೆ ಕನಕಾಂಬರ
ಅದರ ನಡುವೆ ಕಾಮಕಸ್ತೂರಿ
ಆಗೊಮ್ಮೆ ಈಗೊಮ್ಮೆ ಸಂಪಿಗೆ
ದೀಪಾವಳಿ ಹೊತ್ತಲ್ಲಿ ಬೆಳಕಿನ ಬಣ್ಣದ ಚೆಂಡು ಹೂ ಸೇವಂತಿಗೆ
ಕಪ್ಪು ಇರುಳುಗಳಲ್ಲಿ
ಗುಡಿಸಲ ಬಾಗಿಲಿಗೆ ಗಂಧವನ್ನೇ ಆವಾಹಿಸುವ ಹಾಗೆ
ಅಮ್ಮ ಘಮಲನ್ನು ಕಟ್ಟುತ್ತಿದ್ದಳು
ತನ್ನೆರಡು ಕೈಯಿಂದಲೇ ಲೋಕ ಕಟ್ಟಿಕೊಳ್ಳುತ್ತಿದೆ
ಯೆನ್ನುವ ಶ್ರದ್ದೆಯಲ್ಲಿ
ಅಮ್ಮ ಹೂ ಕಟ್ಟುತ್ತಿದ್ದಳು
ನಾನು ಜೋಡಿಸಿಡುತ್ತಿದ್ದೆ
ಗಂಧದ ದೇವರ ನಿದ್ದೆಯಿಂದ ಎಬ್ಬಿಸುವ ಹಾಗೆ
ಹೂಗಳ ಮೇಲೆ ನೀರು ಚಿಮುಕಿಸಿ
ಅಂಗಳಕ್ಕೆ ನೀರು ಚೆಲ್ಲಿದ ಹಾಗೆ
ದಾರವನ್ನು ತೇವಗೊಳಿಸಿ
ಒಂದು ಕೈಬೆರಳಲ್ಲಿ ಜೋಡಿಹೂಗಳ ಹಿಡಿದು
ಮತ್ತೊಂದು ಕೈಯ ಬೆರಳುಗಳಲ್ಲಿ
ಪ್ರತಿ ಮದುಮಕ್ಕಳಿಗೂ
ದೃಷ್ಟಿ ತೆಗೆದು ಆಶೀರ್ವಾದ ಮಾಡುವಂತೆ
ಅಮ್ಮ ಹೂ ಕಟ್ಟುತ್ತಿದ್ದಳು
ನಾನವಳನ್ನೇ ನೋಡುತ್ತಿದ್ದೆ
ಅಮ್ಮ ಬೀಡಿಯನ್ನೂ ಕಟ್ಟುತ್ತಿದ್ದಳು
ಲೋಕದ ನಶೆಯ ಮಾಯೆ
ತಾನೇ ಎನ್ನುವ ಗತ್ತಿನಲ್ಲಿ
ಶ್ವಾಸಕ್ಕೂ ಮೆದುಳಿಗೂ ನಶೆಯ ನಂಟು
ಬೆಸೆವ ನಿಧಿಯನ್ನೇ ತುಂಬುವಂತೆ
ತಂಬಾಕು ಸುರಿದು
ಅದರ ನೆತ್ತಿಯ ಮೇಲೆ ಮೊಟಕುವಂತೆ ಮುಚ್ಚಿ
ಬಿದಿರ ಮರದ ಮೇಲೆ ಜೋಡಿಸಿಡುತ್ತಿದ್ದಳು
ನಾನು ಮುಟ್ಟಲು ಹೋದರೆ
ಕೈಗೆ ಸಿಗದೇ ಹೋಗುವಂತೆ
ಅವಳೆ ಕಟ್ಟಿದ ಬೀಡಿಯನ್ನು
ಎತ್ತಿಡುತ್ತಿದ್ದಳು ಅಟ್ಟದ ಮೇಲೆ
ಅಮ್ಮ ಕಸೂತಿ ಹಾಕುತ್ತಿದ್ದಳು
ಬಣ್ಣ ಬಣ್ಣದ ವುಲ್ಲನ್ ದಾರಗಳು
ಅವಳ ಚಮತ್ಕಾರದ ಕೈಗಳಲ್ಲಿ
ಬಾಗಿಲ ತೋರಣವಾಗುತ್ತಿದ್ದವು
ತನಗೆ ತೋಚಿದ ಹಾಗೆ
ಸೊಟ್ಟಂಬಟ್ಟ
ಚಂದ್ರ, ನಕ್ಷತ್ರ, ಐದು ದಳದ ಹೂಗಳು
ಅಂಚಿಗೆ ಬಿಡಿಸಿಡುತ್ತಿದ್ದಳು
ನಾನೀಗ ಅಮ್ಮನ ನೆನಪಾದಾಗಲೆಲ್ಲ
ತಾರಸಿಯ ಮೇಲೆ ಅಂಗಾತ ಮಲಗಿ
ಆಕಾಶ ನೋಡಿದಾಗ
ಕಾಣುವುದು
ಅಮ್ಮ ಬಿಡಿಸಿದ ಚಂದ್ರ
ಅಮ್ಮ ಬಿಡಿಸಿದ ನಕ್ಷತ್ರ
ಅಮ್ಮ ತನ್ನ ಹಳೆ ಸೀರೆಯ ಸೀಳಿ
ಕಾಲೊರೆಸುವ ಮ್ಯಾಟ್ ಮಾಡುತ್ತಿದ್ದಳು
ಬಡತನ ಬೋರಾದಾಗ
ಗೋಣಿಚೀಲವ ಚರಂಡಿಗೆಸೆದು
ಅಮ್ಮನ ಸೀರೆಯ ಮ್ಯಾಟ್
ಹೊಸ್ತಿಲ ಈಚೆಗೆ ಸೀರೆ ಸೂರ್ಯನಂತೆ
ಸಗಣಿ ಸಾರಿಸಿದ ಅಂಗಳದೊಳಗೆ
ಹಾಯಾಗಿ ಹೊಳೆಯುತ್ತಿತ್ತು
ಊರಿಗೆ ಹೋಗುವ ಮುಂಚೆ
ಕೇಳುತ್ತಾಳೆ
ಏನ ಮಾಡಲಿ ಎಂದು?
‘ಈಗಲೂ ನಂಬಿಸು
ಬೇಯಿಸಿದ ಆಲೂಗಡ್ಡೆಯನ್ನೇ ಚಿಕನ್ನೆಂದು’
ಆಡಿದರೆ ಹಾಡುತ್ತಾಳೆ
ಹೊಗಳಿದರೆ ತಿವಿಯುತ್ತಾಳೆ
ಅಮ್ಮ ಮತ್ತು ಅನ್ನ
ನಂಬಿದರೆ ಮೋಸವಿಲ್ಲ ಮಗನೆ
ತನ್ನ ಕೈಯನ್ನೆ ಬಳಸಿ
ಮಾಡುತ್ತಾಳೆ ಆಶೀರ್ವಾದ ಅನ್ನಪೂರ್ಣೇಯ ಹಾಗೆ
ಅಮ್ಮ ಕಟ್ಟಿದಳು
ಕಟ್ಟುತ್ತಲೇ ಇರುವಳು
ತನಗೆ ತೋಚಿದ ಹಾಗೆ
ಹೂವನ್ನು, ಬದುಕಿಸುವ ನಶೆಯನ್ನು
ಕಾಲೊರೆಸುವ ನೆಲವನ್ನು
ಅಮ್ಮ ಓದಿದ್ದರೆ
ಈಗ ಕವಿತೆಯನ್ನೂ ಕಟ್ಟುತ್ತಿದ್ದಳು
ಅನಿವಾರ್ಯತೆಗಳಿಗೆ ಅಂಜುವಾಗ
ಅಮ್ಮ ನೆನಪಾಗುತ್ತಾಳೆ
ಏನನ್ನಾದರೂ ಕಟ್ಟುತ್ತಲೇ ಬದುಕಿದ
ಅವಳ ಕೈಬೆರಳುಗಳ ನೇವರಿಸಿದಂತಾಗುತ್ತದೆ
ಪ್ರತಿ ಮದುಮಕ್ಕಳಿಗೂ
ದೃಷ್ಟಿ ತೆಗೆದು ಆಶೀರ್ವಾದ ಮಾಡುವಂತೆ
ಅಮ್ಮ ಹೂ ಕಟ್ಟುತ್ತಿದ್ದಳು
ಸೊಗಸಾದ ಕಲ್ಪನೆ
ವಾಹ್! ಬಹಳ ಸೊಗಸಾಗಿದೆ.
ದಾದಾ ನಾನು ನಿನಗೆ ಫಿದಾ…….