
ಸಂವರ್ತಾ ’ಸಾಹಿಲ್’
ಟೀಚರ್ ಆಗಿ ೨೪ ವರ್ಷ ಕೆಲಸ ಮಾಡಿದ ನನ್ನ ಅಮ್ಮ ಯಶೋಧ ಎ ಆಚಾರ್ ಇಂದು ತಮ್ಮ ಕೆಲಸದಿಂದ ನಿವೃತ್ತರಾಗುತ್ತಿದ್ದಾರೆ.
ಕರಾವಳಿ ಕರ್ನಾಟಕದ ಒಂದು ಪುಟ್ಟ ಊರಿನಲ್ಲಿ ಹುಟ್ಟಿದ ನನ್ನ ಅಮ್ಮ ತಮ್ಮ ಏಳನೇ ತರಗತಿಗೇ ಶಾಲೆಗೆ ಹೋಗುವುದನ್ನು ನಿಲ್ಲಿಸಬೇಕಾಯಿತು. ಅಜ್ಜ ಅವರನ್ನು ಶಾಲೆಗೆ ಕಳಿಸಿ ಓದಿಸುವ ಶಕ್ತಿ ಇರಲಿಲ್ಲ. ಅಲ್ಲದೆ ಆ ಕಾಲದಲ್ಲಿ ಹೆಣ್ಣುಮಕ್ಕಳನ್ನು ಹೈಸ್ಕೂಲಿಗೆ ಕಳಿಸುವುದು ಸಾಧಾರಣ ವಿಷಯವೂ ಆಗಿರಲಿಲ್ಲ. ಆದರೆ ಅಮ್ಮ ಶಾಲೆ ಬಿಟ್ಟ ಒಂದು ವರ್ಷದಲ್ಲಿ ಬೈಂದೂರಿನಲ್ಲಿ ಮನೆ ಎದುರಿನಲ್ಲಿಯೇ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಪ್ರಾರಂಭವಾಯಿತು.
ಶಾಲೆಯ ಹೆಡ್ ಮಾಸ್ಟರು ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಮನೆ ಮನೆಗೆ ಹೋಗಿ ಕೇಳುತ್ತಿದ್ದರು. ಅವರು ಹೀಗೆ ಮತ್ತೆ ಮತ್ತೆ ಕೇಳಿದ ಮೇಲೆ ಅಜ್ಜ ಅಮ್ಮನನ್ನು ಮತ್ತೆ ಶಾಲೆಗೆ ಕಳಿಸಲು ಒಪ್ಪಿದರು. ಆದರೆ ಅಪ್ಪನಿಗೆ ಅದು ಹೊರೆಯಾಗಬಹುದು ಎನ್ನುವ ಆತಂಕದಲ್ಲಿ ಅಮ್ಮ ಮತ್ತೆ ಶಾಲೆಗೆ ಹೋಗಲು ಹಿಂಜರೆದರಂತೆ.
ಹೇಗೋ ಶಾಲೆಗೆ ಸೇರಿದಾಗ ಅಮ್ಮನ ಬಳಿ ಇದ್ದದ್ದು ಒಂದೇ ಜೊತೆ ಯೂನಿಫಾರ್ಮ್. ವಾರ ಇಡೀ ಅದನ್ನೇ ಹಾಕಿಕೊಳ್ಳುತ್ತಿದ್ದ ಅಮ್ಮ, ಭಾನುವಾರ ಅದನ್ನು ಒಗೆದು ಹಾಕುತ್ತಿದ್ದರಂತೆ. ಮಳೆಗಾಲದಲ್ಲಿ ಬಟ್ಟೆ ಒಣಗದಿದ್ದಾಗ ನೀರೊಲೆಯ ಎದುರು ಬಟ್ಟೆ ಹಿಡಿದು ಅದನ್ನು ಒಣಗಿಸಿಕೊಳ್ಳುತ್ತಿದ್ದರಂತೆ. ಹೊಸ ಪುಸ್ತಕ ತೆಗೆದುಕೊಳ್ಳುವ ಹಣ ಉಳಿಸಲೆಂದು ಖಾಲಿ ಹಾಳೆಯ ಮೇಲೆ ಪೆನ್ಸಿಲ್ ನಲ್ಲಿ ಬರೆದು ಮತ್ತೆ ಅದೇ ಹಾಳೆಗಳ ಮೇಲೆ ಬರೆಯುತ್ತಿದ್ದರಂತೆ.
ಹಾಗೂ ಹೀಗೂ ಅಮ್ಮನ ಎಸ್ ಎಸ್ ಎಲ್ ಸಿ ಮುಗೀತು. ಹತ್ತನೆಯ ತರಗತಿ ಪರೀಕ್ಷೆ ಮುಗಿದ ದಿನ ಶಾಲೆಯ ಹುಡುಗಿಯರೆಲ್ಲಾ ಸೇರಿ ಐಸ್ ಕ್ಯಾಂಡಿ ತಿನ್ನುವ ಕಾರ್ಯಕ್ರಮ ಇತ್ತಂತೆ. ಆದರೆ ಐಸ್ ಕ್ಯಾಂಡಿಗೆ ಅಪ್ಪನಲ್ಲಿ ಹಣ ಕೇಳಲಾಗದೆ ಅಮ್ಮ ಸದ್ದಿಲ್ಲದೆ ಮನೆಯತ್ತ ಹೆಜ್ಜೆ ಹಾಕಿದ್ದರಂತೆ. ಶಾಲೆಗೆ ೧೦೦% ಹಾಜರಾತಿ ಇದ್ದದ್ದಕ್ಕೆ ಅಮ್ಮನಿಗೆ ಬಹುಮಾನ ಸಿಕ್ಕಿತಂತೆ, ಒಂದು ಬೆಂಕಿಪಟ್ಟಣ… ಹೆಮ್ಮೆಯಿಂದಲ್ಲ, ತೃಪ್ತಿಯಿಂದ ಅಮ್ಮ ಅದನ್ನು ಅಜ್ಜಿ ಕೈಲಿ ಕೊಟ್ಟರಂತೆ.
ಎಷ್ಟೋ ವರ್ಷಗಳಾದ ಮೇಲೆ ಅಮ್ಮ ಅಪ್ಪನನ್ನು ಮದುವೆ ಆದರು. ಅಪ್ಪ ಬಲವಂತ ಮಾಡಿ ಅವರನ್ನು ಟೀಚರ್ಸ್ ಟ್ರೇನಿಂಗ್ ಗೆ ಸೇರಿಸಿದರು. ಹಿಂಜರಿಯುತ್ತಲೇ ಆಕೆ ಅದನ್ನು ಪೂರೈಸಿದರು. ಆಕೆಯ ಕೈಗೆ ಕೆಲಸದ ಆರ್ಡರ್ ಬರುವಷ್ಟರಲ್ಲಿ ನಾನು ಅವರ ಮಡಿಲಲ್ಲಿದ್ದೆ. ಆಕೆ ಕೈಗೆ ಬಂದ ಸರ್ಕಾರಿ ಕೆಲಸವನ್ನು ನಿರಾಕರಿಸಿದರು. ನಾನು ಸ್ವಲ್ಪ ದೊಡ್ಡವನಾದ ಮೇಲೆ ಮಣಿಪಾಲದ ಅಕಾಡೆಮಿ ಶಾಲೆಯಲ್ಲಿ ಕೆಲಸಕ್ಕೆ ಸೇರಿಕೊಂಡರು, ಒಂದೆರಡು ವರ್ಷಗಳ ನಂತರ ಸರ್ಕಾರಿ ಕೆಲಸ ಮತ್ತೆ ಅವರನ್ನು ಹುಡುಕಿಕೊಂಡು ಬಂತು ಮತ್ತು ಅವರು ಅದನ್ನು ಸ್ವೀಕರಿಸಿದರು.

ಅಮ್ಮ ಅಕಾಡಮಿ ಶಾಲೆಯಲ್ಲಿ ಪಾಠ ಹೇಳುತ್ತಿದ್ದಾಗ ನಾನು ಹತ್ತಿರದಲ್ಲೇ ಇದ್ದ ಮಾಧವ ಕೃಪ ಇಂಗ್ಲಿಷ್ ಶಾಲೆಯಲ್ಲಿ ಓದುತ್ತಿದ್ದೆ. ಅಮ್ಮ ನಮ್ಮನ್ನು ಕನ್ನಡ ಮಾಧ್ಯಮಕ್ಕೇ ಸೇರಿಸಬೇಕೆಂದಿದ್ದರೂ ನಮ್ಮ ನೆರೆ ಹೊರೆಯ ಮಕ್ಕಳೆಲ್ಲರೂ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದರಿಂದ ಅದು ನಮ್ಮಲ್ಲಿ ಕೀಳರಿಮೆ ಹುಟ್ಟಿಸಬಾರದೆಂದು ನಮ್ಮನ್ನೂ ಅಲ್ಲಿಗೇ ಸೇರಿಸಿದ್ದರು. ನಮ್ಮ ಶಾಲೆ ಮುಗಿದ ಮೇಲೆ ನಾನೂ ಅಕ್ಕ ಅಮ್ಮನ ಶಾಲೆಗೆ ಹೋಗಿ, ಅವರ ಶಾಲೆ ಮುಗಿದ ಮೇಲೆ ಒಟ್ಟಿಗೆ ಮನೆಗೆ ಹೋಗುತ್ತಿದ್ದೆವು.
ಹಾಗೆ ಪ್ರತಿದಿನ ಅಮ್ಮ ಕಲಿಸುತ್ತಿದ್ದ ಶಾಲೆಗೆ ಹೋಗುತ್ತಿದ್ದಿದ್ದರಿಂದ ಒಂದು ಅನುಕೂಲ ಆಯ್ತು. ಅದರ ಮಹತ್ವ ನನಗೆ ಆಗ ಅರಿವಾಗದಿದ್ದರೂ ಅಮೇಲೆ ಗೊತ್ತಾಯಿತು. ಅಕಾಡೆಮಿ ಶಾಲೆಯಲ್ಲಿ ಕಲಿಯಲು ಬರುತ್ತಿದ್ದ ವಿದ್ಯಾರ್ಥಿಗಳು ಬೇರೆ ಬೇರೆ ಜಾತಿ ಮತ್ತು ಬೇರೆ ಬೇರೆ ವರ್ಗಗಳಿಗೆ ಸೇರಿದವರು. ಹಾಗಾಗಿ ನನಗೆ ನನ್ನ ಪ್ರಪಂಚದ ಹೊರಗೆ ಇನ್ನೊಂದು ಪ್ರಪಂಚ ಇರುವುದು ಗೊತ್ತಾಯಿತು, ಮಣಿಪಾಲದಲ್ಲಿ ಇನ್ನೊಂದು ಮಣಿಪಾಲ ಇರುವುದು ಗೊತ್ತಾಯಿತು. ವರ್ಗ ಬೇಧ ಇರುವುದು ಗೊತ್ತಾಯಿತು, ಭಿನ್ನ ಅನುಭವಗಳು ಇರುವುದು ಗೊತ್ತಾಯಿತು.
ನನಗೆ ಅಲ್ಲಿನ ಬಹುತೇಕ ವಿದ್ಯಾರ್ಥಿಗಳ ಪರಿಚಯ ಇತ್ತು, ಅವರಿಗೂ ನನ್ನ ಪರಿಚಯ ಇತ್ತು. ವಯಸ್ಸಿನಲ್ಲಿ ಅವರು ನನಗಿಂತ ದೊಡ್ಡವರಾಗಿದ್ದರೂ ಅದು ನಮ್ಮ ಒಡನಾಟಕ್ಕೇನೂ ಅಡ್ಡಿ ಮಾಡಲಿಲ್ಲ. ನನಗೆ ನೆನಪಿದ್ದ ಹಾಗೆ ಅವರೆಲ್ಲರೂ ಜಾಣರಾಗಿದ್ದರು, ಓದುವುದರಲ್ಲಿ ಆಸಕ್ತಿ ಇಟ್ಟುಕೊಂಡಿದ್ದವರು. ಅವರೆಲ್ಲರೂ ಆರ್ಥಿಕವಾಗಿ ಹಿಂದುಳಿದ ಮನೆಗಳಿಂದ ಬಂದವರು. ಬೆಳೆಯುತ್ತಾ ಹೋದ ಹಾಗೆ ನಾನು ನನ್ನ ಜಗತ್ತಿನಲ್ಲಿ ಮುಳುಗಿಹೋದೆ. ಅಮ್ಮನಿಗೂ ಸರ್ಕಾರಿ ಕೆಲಸ ಸಿಕ್ಕಿ ಆಕೆ ಬೇರೆ ಶಾಲೆಗೆ ಹೋಗಲು ಪ್ರಾರಂಭಿಸಿದ್ದರು. ನಾನು ಅಕಾಡಮಿ ಶಾಲೆಯ ವಿದ್ಯಾರ್ಥಿಗಳನ್ನು ಭೇಟಿಯಾಗುವುದು ನಿಂತು ಹೋಯಿತು. ಆದರೆ ಅಮ್ಮ ಆಗೀಗ ತಮ್ಮ ಹಳೆಯ ವಿದ್ಯಾರ್ಥಿಗಳನ್ನು ನೆನೆಸಿಕೊಳ್ಳುತ್ತಲೇ ಇದ್ದರು. ಅಷ್ಟು ಜಾಣತನ, ಕಲಿಯುವ ಆಸಕ್ತಿ ಇದ್ದರೂ ಅವರು ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಕಷ್ಟವಾಗುತ್ತದೆ ಎಂದು ಬೇಸರ ಮಾಡಿಕೊಳ್ಳುತ್ತಿದ್ದರು. ಅಮ್ಮ ಹೇಳುತ್ತಿದ್ದ ಆ ಮಾತುಗಳು ಆ ಇನ್ನೊಂದು ಪ್ರಪಂಚವನ್ನು ನಾನು ಮರೆಯದ ಹಾಗೆ ನೋಡಿಕೊಂಡವು.
ಅಮ್ಮ ಅಕಾಡಮಿ ಶಾಲೆ ಬಿಟ್ಟು ನಂತರ ಹೆಬ್ರಿ, ಅತ್ರಾಡಿ, ಅಲೆವೂರುಗಳಲ್ಲಿ ಕೆಲಸ ಮಾಡುತ್ತಿದ್ದಾಗಲೂ ಅವರ ಶಾಲೆಗೆ ಬರುತ್ತಿದ್ದ ಹೆಚ್ಚಿನಂಶ ವಿದ್ಯಾರ್ಥಿಗಳು ಹಾಗೇ ಇರುತ್ತಿದ್ದರು. ಆಗೀಗ ಅಮ್ಮ ತನ್ನ ವಿದ್ಯಾರ್ಥಿಗಳ ಬಗ್ಗೆ, ಅವರ ಕಷ್ಟ ಸಂಕಷ್ಟಗಳ ಬಗ್ಗೆ ಹೇಳುತ್ತಿದ್ದರು. ಆಗಿನ ಕಾಲಕ್ಕೆ ಅವು ಕೇವಲ ಅಮ್ಮನ ಶಾಲೆಯ ಕಥೆಗಳು ಮಾತ್ರ ಆಗಿದ್ದರೂ ಅವು ಸದ್ದೇ ಇಲ್ಲದೆ ನನ್ನ ಪ್ರಪಂಚವನ್ನೂ, ಆಲೋಚನಾ ವಿಧಾನವನ್ನೂ, ನೋಟವನ್ನೂ ರೂಪಿಸುತ್ತಿದ್ದವು. ಅಪ್ಪ ಅಮ್ಮ ವಲಸೆ ಕೂಲಿಕಾರರಾಗಿದ್ದರಿಂಡ ಶಾಲೆ ಬಿಡಬೇಕಾಗಿ ಬಂದ ಹುಡುಗ ಒಬ್ಬ, ಅಪ್ಪ ಅಮ್ಮ ಮನೆಯಲ್ಲಿ ಜಗಳ ಆಡುತ್ತಿದ್ದರಿಂದ ಹೋಮ್ ವರ್ಕ್ ಮಾಡಲಾಗಲಿಲ್ಲ ಎಂದ ಹುಡುಗ ಇನ್ನೊಬ್ಬ, ನಿನ್ನ ಹೆಸರೇನು ಎಂದು ಕೇಳಿದಾಗ, ನಿಮ್ಮ ಹೆಸರೇನು ಎಂದು ಕೇಳಿದ ಆ ಹುಡುಗಿ, ಬೇಸಿಗೆ ರಜೆಯಲ್ಲಿ ಹೋಟಲಿನಲ್ಲಿ ಕೆಲಸ ಮಾಡುತ್ತಿದ್ದ ಹುಡುಗರು, ನೋಟ್ ಬುಕ್, ಪೆನ್ಸಿಲ್, ಬ್ಯಾಗ್ ಕೊಳ್ಳಲೆಂದು ಶಾಲೆ ಮುಗಿದ ಮೇಲೆ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗರು, ಮನೆಯಲ್ಲಿ ಹುಟ್ಟಿದ ಪುಟ್ಟಮಗುವನ್ನು ನೋಡಿಕೊಳ್ಳಲೆಂದು ಶಾಲೆ ಬಿಟ್ಟ ಹುಡುಗಿ, ಕನ್ನಡವನ್ನು ಲೋಕ ನಿಷ್ಕರ್ಸಿದ ರೀತಿಯಲ್ಲಿ ಹೇಳಲು ಬರದೆ ತನ್ನದೇ ಧಾಟಿಯಲ್ಲಿ ಉಚ್ಛರಿಸುತ್ತಿದ್ದ ಹುಡುಗಿ, ಶಾಲೆಯಲ್ಲಿ ನೃತ್ಯ ಕಾರ್ಯಕ್ರಮ ಇದ್ದಾಗ ಹೊಸಬಳೆ ತೆಗೆದುಕೊಳ್ಳಲು ಹಣವಿಲ್ಲದೆ ಆ ದಿನ ಶಾಲೆಗೆ ಬರದೆ ತಪ್ಪಿಸುತ್ತಿದ್ದ ಹುಡುಗಿಯರು, ಮನೆಯಲ್ಲಿ ತಾಂಡವವಾಡುತ್ತಿದ್ದ ಬಡತನದ ಬಗ್ಗೆ ಮಾತನಾಡುತ್ತಲೇ ಶಾಲೆಯಲ್ಲಿ ಕೊಡುತ್ತಿದ್ದ ಮಧ್ಯಾಹ್ನದ ಊಟದ ಕನಸನ್ನು ಕಾಣುತ್ತಿದ್ದ ಹುಡುಗರು, ಸ್ಪೋರ್ಟ್ಸ್ ಡೇ ಗೆದ್ದ ಮೆಡಲ್ ಅನ್ನು ಪ್ರತಿ ದಿನ ಶಾಲೆಗೆ ಧರಿಸಿಕೊಂಡು ಬರುತ್ತಿದ್ದ ಹುಡುಗರು, ತಮ್ಮ ಮಕ್ಕಳು ಬದುಕಿನಲ್ಲಿ ತಮಗಿಂತ ಒಳ್ಳೆಯ ಹಂತ ಮುಟ್ತುವಹಾಗೆ ಕಲಿಸಬೇಕೆಂದು ಶಾಲೆಗೆ ಬಂದು ಅಂಗಲಾಚುತ್ತಿದ್ದ ಪೋಷಕರು, ಬದುಕಿನ ಬಂಡಿ ಎಳೆಯುವುದರಲ್ಲಿ ಹೆಣಗುತ್ತಾ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ತಲೆಕೆಡಿಸಿಕೊಳ್ಳದ ಪೋಷಕರು … ಅಮ್ಮನ ಬಾಯಲ್ಲಿ ಈ ಕಥೆಗಳನ್ನು ಕೇಳುತ್ತಲೇ ನನಗೆ ಬದುಕು ಕೆಲವರಿಗೆ ಮಾತ್ರ ಕೊಡುವ ಅನುಕೂಲಗಳ ಅರಿವಾಯಿತು, ಸಾಂಸ್ಕೃತಿಕ, ಸಾಮಾಜಿಕ ಭಿನ್ನತೆಯ ಅರಿವಾಯಿತು, ಆರ್ಥಿಕ ಅಸಮಾನತೆಗಳ ಅರಿವಾಯಿತು, ಜಾತಿ ಪದ್ಧತಿಯ ಇರುವಿಕೆಯ ಅರಿವಾಯಿತು. ಇವೆಲ್ಲಾ ಇಲ್ಲದಿದ್ದರೆ ಬದುಕು ನನಗೆ ಕೇವಲ ಪುಸ್ತಕಗಳ ಮೂಲಕ ಒದಗಿಬಂದ ಮಿತಿಯಲ್ಲಿಯೇ ಇರುತ್ತಿತ್ತು ಅನ್ನಿಸುತ್ತದೆ.
ನನ್ನಮ್ಮನ ಶಾಲೆಯ ಅನುಭವಗಳು ನನಗೆ ಮಾನವೀಯ ಬದುಕನ್ನು ಕಲಿಸಿಕೊಟ್ಟವು, ಅದೂ ಯಾವುದೇ ಎರವಲು ಗ್ರಾಂಥಿಕ ಪದಗಳನ್ನು ಬಳಸದೆ, ಥಿಯರಿಗಳ ಚೌಕಟ್ಟಿನಲ್ಲಿ ಬಂಧಿಸದೆ.
ಅಮ್ಮ ಯಾವುದೇ ಹೊಸ ಹಾಡನ್ನು ಕೇಳಿದರೂ, ಹೊಸ ನಾಟಕವನ್ನು ನೋಡಿದರೂ ಕೂಡಲೇ ’ಇದನ್ನು ನನ್ನ ವಿದ್ಯಾರ್ಥಿಗಳಿಗೆ ಕಲಿಸಬೇಕು’ ಅನ್ನುತ್ತಿದ್ದರು. ಜನಗಳೊಡನೆ ಬೆರೆಯಲು ಯಾವಾಗಲೂ ಹಿಂಜರಿಯುತ್ತಿದ್ದ ಅಮ್ಮ ಇಂತಹ ಸಂದರ್ಭಗಳಲ್ಲಿ ಮಾತ್ರ ಆ ನಾಟಕ ಬರೆದವರನ್ನೂ, ಹಾಡುಗಾರರನ್ನೋ ಹುಡುಕಿಕೊಂಡು ಹೋಗಿ ಆ ನಾಟಕದ / ಹಾಡಿನ ಪ್ರತಿಯನ್ನು ಕೇಳಿತರುತ್ತಿದ್ದರು. ಅದನ್ನು ಮಕ್ಕಳಿಗೆ ಕಲಿಸುತ್ತಿದ್ದರು. ತಮ್ಮ ಕೆಲಸದ ಬಗೆಗಿನ ಅವರ ಶೃದ್ಧೆಯ ಬಗ್ಗೆ ಇನ್ನೊಂದು ಮಾತಿಲ್ಲ. ಕೆಲವು ದಿನಗಳ ಮೊದಲು ಮೂತ್ರಕೋಶದಲ್ಲಿ ಕಲ್ಲಿದ್ದರಿಂದ ಆಪರೇಶನ್ ಆಗಬೇಕೆಂದು ವೈದ್ಯರು ಹೇಳಿದಾಗ, ’ಹೇಗೂ ನಾನು ಮ್ ನಲ್ಲಿ ರಿಟೈರ್ ಆಗುತ್ತಿದ್ದೇನೆ. ಆಗಲೇ ನಾನು ಆಪರೇಶನ್ ಮಾಡಿಸಿಕೊಳ್ಳುತ್ತೇನೆ, ಈಗ ರಜೆ ಹಾಕಿದರೆ ಮಕ್ಕಳಿಗೆ ಸುಮ್ಮನೆ ತೊಂದರೆ ಆಗುತ್ತದೆ’ ಅಂದಿದ್ದರು. ವೈದ್ಯರು ಅದಕ್ಕೆ ಒಪ್ಪಲಿಲ್ಲ, ಆಪರೇಶನ್ ಆಯಿತು. ಅದರ ಹೊಲಿಗೆ ಬಿಚ್ಚುವ ಮೊದಲೇ ಆಕೆ ಕೆಲಸಕ್ಕೆ ವಾಪಸ್ಸಾಗಲು ಕಾಯುತ್ತಿದ್ದರು. ವೈದ್ಯರು ಹೊಲಿಗೆ ಬಿಚ್ಚಿದ ತಕ್ಷಣ ಆಕೆ ಕೇಳಿದ ಮೊದಲ ಪ್ರಶ್ನೆ ’ ಈಗ ನಾನು ಮತ್ತೆ ಶಾಲೆಗೆ ಹೋಗಬಹುದೆ?’. ಡಾಕ್ಟರು ಹುಅಂದ ಮೇಲೆ ನಾನು ಬಸ್ ನಲ್ಲಿ ಪ್ರಯಾಣಿಸಬಹುದೇ ಎಂದು ಕೇಳಿದರು. ಡಾಕ್ಟರು ಓಕೆ ಎಂದರು. ಡಾಕ್ಟರಿಗೆ ವಂದಿಸಿ ನಾವು ಆಸ್ಪತ್ರೆಯಿಂದ ಹೊರಗೆ ಬಂದೆವು. ಸ್ವಲ್ಪ ದೂರ ನಡೆದ ಮೇಲೆ ’ಅಯ್ಯೋ ಮಾತ್ರೆಗಳನ್ನು ಮುಂದುವರಿಸಬೇಕೆ ಎಂದು ಡಾಕ್ಟರನ್ನು ಕೇಳಬೇಕಾಗಿತ್ತು’ ಎಂದು ವಾಪಸ್ ಓಡಿದರು. ಅವರಿಗೆ ಮುಖ್ಯವಾಗಿದ್ದು ಶಾಲೆ ಮತ್ತು ಅವರ ಕರ್ತವ್ಯವೇ ಹೊರತು ಮಾತ್ರೆ, ಆರೋಗ್ಯ ಅಲ್ಲ.
ಅಮ್ಮ ಮೂರನೇ ಕ್ಲಾಸಿಗೆ ಟೀಚರ್ ಆಗಿದ್ದಾಗ ನಾನು, ನನ್ನ ಅಕ್ಕ ಅಮ್ಮನನ್ನು ’ಥರ್ಡ್ ಕ್ಲಾಸ್ ಟೀಚರ್’ ಎಂದು ರೇಗಿಸುತ್ತಿದ್ದೆವು. ಆದರೆ ನಿಜಕ್ಕೂ ಅವರು ಫಸ್ಟ್ ಕ್ಲಾಸ್ ಟೀಚರ್. ಅವರ ವಿದ್ಯಾರ್ಥಿಗಳಲ್ಲಿ ಹಲವರು ತಮ್ಮ ಬಡತನದ ಕಾರಣದಿಂಡ ವಿದ್ಯಾಭ್ಯಾಸ ಮುಂದುವರಿಸಲಾಗದೆ ಬಸ್ ಕಂಡಕ್ಟರ್ಗಳು, ಲಾರಿ ಕ್ಲೀನರ್ ಗಳು, ಆಸ್ಪತ್ರೆಯಲ್ಲಿ ಸಹಾಯಕರು ಆಗಿದ್ದಾರೆ. ಅಮ್ಮನನ್ನು ಕಂಡಾಗಲೆಲ್ಲ ಬಂದು ಪ್ರೀತಿ ವಿಶ್ವಾಸದಿಂಡ ಮಾತನಾಡಿಸುತ್ತಾರೆ. ಅಕ್ಕನಿಗೆ ಮದುವೆ ನಿಶ್ಚಯವಾಗಿತ್ತು. ಅಮ್ಮನ ವಿದ್ಯಾರ್ಥಿ ಒಬ್ಬರು ತಾವಾಗೇ ಬಂದು, ’ಏನಾದರೂ ಕೆಲಸ ಇದ್ದರೆ ಹೇಳಿ’ ಅಂದದ್ದು ನನಗಿನ್ನೂ ನೆನಪಿದೆ.
ನನ್ನ ವಿದ್ಯಾರ್ಥಿಯೊಬ್ಬ ಒಮ್ಮೆ ನನ್ನನ್ನು ಐಸ್ ಕ್ರೀಮ್ ಅಂಗಡಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿದ್ದ ಸಹಾಯಕಿಗೆ ಆತ ನನ್ನನ್ನು ’ನನ್ನ ಸರ್ ಇವರು’ ಎಂದು ಪರಿಚಯಿಸಿದ. ಆಗ ಆಕೆ ’ಇವರನ್ನು ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದ ನೋಡಿದ್ದೇನೆ, ಇವರಮ್ಮ ನನ್ನ ಟೀಚರ್, ನನ್ನ ಅತ್ಯಂತ ಪ್ರೀತಿಯ ಟೀಚರ್’ ಎಂದಿದ್ದರು. ಆಗ ನನ್ನ ಕಣ್ಣುಗಳಲ್ಲಿದ್ದ ಹೊಳಪು ಸೂರ್ಯನನ್ನೂ ನಾಚಿಸಿತ್ತು. ಎಲ್ಲೋ ಯಾವುದೋ ಕೆಲಸದಲ್ಲಿದ್ದಾಗ ಯಾರೋ ಅಪರಿಚಿತರು ಬಂದು ತಮ್ಮನ್ನು ಪರಿಚಯಿಸಿಕೊಂಡಿದ್ದಿದ್ದೆ, ಅಮ್ಮನನ್ನು ವಿಚಾರಿಸಿಕೊಂಡಿದ್ದಿದೆ, ನಮಗೆ ಪ್ರೀತಿಯಿಂಡ ಪಾಥ ಕಲಿಸಿದ ಟೀಚರ್ ಎಂದು ಅಮ್ಮನನ್ನು ನೆನೆಸಿಕೊಂಡಿದ್ದಿದೆ.
ಯಾವುದೇ ಮಗ ಅಥವಾ ಮಗಳಿಗೆ ಅವರು ಅಮ್ಮನಿಂದ ಏನು ಕಲಿತರು ಎನ್ನುವುದನ್ನು ಪದಗಳಲ್ಲಿ ಹೇಳುವುದು ಕಷ್ಟ. ಆದರೆ ಅಮ್ಮ ರಿಟೈರ್ ಆಗುತ್ತಿರುವ ಈ ದಿನ ನಾನು ಒಬ್ಬ ವಿದ್ಯಾರ್ಥಿಯಾಗಿ, ನಂತರ ನಾನೇ ಒಬ್ಬ ಟೀಚರ್ ಆಗಿ ಅಮ್ಮನ ಜೀವನದಿಂದ ಏನು ಕಲಿತೆ ಎಂದು ನೋಡುತ್ತಿದ್ದೇನೆ. ಆ ಕಲಿಕೆ ಇಲ್ಲದಿದ್ದರೆ ನಾನು ಮನುಷ್ಯನಾಗಿ ಸೋತಿರುತ್ತಿದ್ದೆ, ಮಾನವೀಯತೆಯನ್ನು ಕಲಿಯುತ್ತಿರಲಿಲ್ಲ. ಅಮ್ಮ ಮತ್ತು ಅಮ್ಮನ ಶಾಲೆ ನನ್ನನ್ನು ವಾಸ್ತವತೆಯ ಲೋಕಕ್ಕೆ ಕರೆದೊಯ್ದ ಹಾದಿಯಾಗಿತ್ತು.
ಅಮ್ಮನಿಗೆ ನಾನು ವಿಧೇಯತೆಯಿಂದ ತಲೆಬಾಗಿ ನಮಿಸುತ್ತೇನೆ.


Hrudaya sprushi…. Tayeegintha Devarilla………Guruvigintha Banduvilla……
”ನನ್ನಮ್ಮನ ಶಾಲೆಯ ಅನುಭವಗಳು ನನಗೆ ಮಾನವೀಯ ಬದುಕನ್ನು ಕಲಿಸಿಕೊಟ್ಟವು,” ಎಂಬ ವಾಕ್ಯ ನನ್ನ ಮನಸ್ಸನ್ನು ತಟ್ಟಿತು ಸಂವರ್ತ ಸಾಹಿಲ್. ಅಮ್ಮನನ್ನು ಅದೆಷ್ಟು ಚೆನಾಗಿ ಚಿತ್ರಿಸಿದ್ದೀರಿ ನೀವು ! ಹೃದ್ಯ ಬರವಣಿಗೆ. ನಿಮಗೆ ಹ್ಯಾಟ್ಸಾಫ್.
ಸದಾ ಕಾಡುವ ಬಾಲ್ಯಕ್ಕೆ ನಿಮ್ಮ ಬರಹ ಕರೆದುಕೊಂಡು ಹೋಯಿತು,,,,, ನಾನು ಓದಿದ ಹಳ್ಳಿಯ ಶಾಲೆ,,, ಅಲ್ಲಿನ ಮುದ್ದು ಗುರುಗಳು, ಪುಟಾಣಿ ನಾವುಗಳು, ಎಲ್ಲವೂ ಪಕ್ಕದಲ್ಲಿಯೇ ಕುಳಿತಿರುವಂತೆ ಭಾಸವಾಯಿತು,
ಬರಹಕ್ಕಾಗಿ ಧನ್ಯವಾದಗಳು
ಸಂವರ್ತ ಸಾಹಿಲ್ರಿಗೆ ವಂದನೆಗಳು
ಮನ ತಟ್ಟುವ ಬರಹ ನಿಮ್ಮ ಅಮ್ಮನ ಕುರಿತ ನಿಮ್ಮ ಪ್ರೀತಿಯ ಸಾರವನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟಿದ್ದೀರಿ.
ಪ್ರಿಯ ಸಾಹಿಲ್ ಅವರೇ
ನಿಮ್ಮ ಲೇಖನ ಓದಿ ಮನ ಕಲಕಿತು. ಇಂಥ ಒಳ್ಳೆಯ ಟೀಚರ್ಸ್ ಇರುವುದರಿಂದಲೇ ನಮ್ಮ ದೇಶ ಮುನ್ನಡೆಯುತ್ತಿದೆ.
ನಿವೃತ್ತರಾಗಲಿರುವ ನಿಮ್ಮ ಅಮ್ಮನಿಗೆ ನನ್ನ ನಮಸ್ಕಾರಗಳು ಮತ್ತು ಶುಭಾಕಾಂಕ್ಷೆಗಳು!
ಕೆ.ವಿ.ತಿರುಮಲೇಶ್
Beautiful!
Ahalya Ballal
Wah..Athmeeya ,chinthanege olapadisuva baraha…..