ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಪಾಲಿಗೆ ಅದೊಂದು ಭಾವಚಿತ್ರವಾಗಿತ್ತು ಮಾತ್ರ..

‘ಅಮ್ಮ ತ್ರಿವೇಣಿ’ಯ ಅನ್ವೇಷಣೆಯಲ್ಲಿ…..!

meera shankar

ಮೀರಾ ಶಂಕರ್

ನಾನು ಎಲ್ಲೇ ಹೋದರೂ, `ಅವಳು ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿಯವರ ಮಗಳು’ ಅಂತ ಪರಿಚಯ ಮಾಡಿಕೊಟ್ಟಾಗ ಎಲ್ಲರೂ ನನ್ನನ್ನು ಬೆರಗುಗಣ್ಣಿನಿಂದಲೇ ನೋಡುತ್ತಿದ್ದರು. ಕೆಲವರಿಗೆ ನನ್ನನ್ನು ಕಂಡರೆ ಪ್ರೀತಿ, ಕರುಣೆ ಉಕ್ಕಿ ಬರುತ್ತಿತ್ತು. ಚಿಕ್ಕವಳಿದ್ದ ನನ್ನನ್ನು ಎಲ್ಲರೂ ಪ್ರೀತಿಯಿಂದ ಕಾಣುತ್ತಿದ್ದರು, ಕೆನ್ನೆಗಳನ್ನು ಹಿಂಡುತ್ತಿದ್ದರು. ಅವರ ಪ್ರೀತಿ, ಕರುಣೆಯನ್ನು ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧತೆ ಆ ಚಿಕ್ಕವಯಸ್ಸಿಗೆ ಇನ್ನೂ ನನಗೆ ಬಂದಿರಲಿಲ್ಲ.

ಹೊಸಬರನ್ನು ಕಂಡಾಗ ವರ್ತಿಸುವ ಎಲ್ಲಾ ಮಕ್ಕಳಂತಯೇ ನನ್ನ ವರ್ತನೆಯೂ ಸಹ ಆಗಿತ್ತು. ಯಾರಾದರೂ ಅಪರಿಚಿತರು ಪ್ರೀತಿಯಿಂದ ನನ್ನ ಗಲ್ಲಗಳನ್ನು ಸವರಲು ಬಂದರೆ, ಅವರಿಂದ ಒಮ್ಮೊಮ್ಮೆ ಕೋಪಿಸಿಕೊಂಡು ದೂರ ಸರಿಯುತ್ತಿದ್ದೆ, ತುಂಬಾ ಮುದ್ದು ಮಾಡಿದಾಗ ಮಾತ್ರ ನನ್ನ ಮುಖವನ್ನು ಸವರಲು ಬಿಡುತ್ತಿದ್ದೆ. `ಅವರು ನನ್ನನ್ನು ತ್ರಿವೇಣಿ ಮಗಳು’ ಅಂತ ಗುರುತಿಸಿದರೂ, ನನಗೆ `ತ್ರಿವೇಣಿ’ ಯಾರು ಅನ್ನುವುದೇ ಗೊತ್ತಿರಲಿಲ್ಲ. ನನ್ನ ಮೇಲಿನ ಅವರ ಗಮನ ವಿಶೇಷವೆನಿಸುತ್ತಿರಲಿಲ್ಲ. ಏಕೆಂದರೆ ನನಗೆ ಬುದ್ಧಿ ಬಂದಾಗಿನಿಂದಲೂ ಇದು ಅಭ್ಯಾಸವಾಗಿಬಿಟ್ಟಿತ್ತು. ಆ ಕಾರಣದಿಂದ ನಾನೇನು ಗರ್ವಪಟ್ಟಿರಲಿಲ್ಲ.

ammana nenapu book2ನಾನು ಹುಟ್ಟಿದಾಗಿನಿಂದ ನನ್ನನ್ನು ಎತ್ತಿ ಆಡಿಸಿ ಬೆಳೆಸಿದ ನನ್ನ ಅಜ್ಜಿ ತಂಗಮ್ಮ, ಅಂದರೆ ನನ್ನ ಅಮ್ಮನ ತಾಯಿಯನ್ನೇ ನಾನು ಅಮ್ಮನೆಂದು ತಿಳಿದುಕೊಂಡಿದ್ದೆ. ನಾನು ಕಣ್ಣುಬಿಟ್ಟಾಗಿನಿಂದಲೂ, ಅವಳ ಆಸರೆಯಲ್ಲೇ ಬೆಳೆದಿದ್ದರಿಂದ ಅದು ಸ್ವಾಭಾವಿಕ ಕೂಡ. ಆಕೆ ನನಗೆ ಅಜ್ಜಿಯಾಗಿದ್ದರೂ, ಈ ಪ್ರಪಂಚವನ್ನು ಕಣ್ಣುಬಿಟ್ಟು ನೋಡಿದಾಗಿನಿಂದ ನನ್ನನ್ನು ಮುದ್ದಿಸಿ, ಸಾಕಿ ಬೆಳೆಸಿದ್ದರಿಂದ ಅಜ್ಜಿಯೇ ನನ್ನ ತಾಯಿ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಳು. ಎಷ್ಟೋ ಬಾರಿ ನನ್ನ ಅಜ್ಜಿ ಕಣ್ಣಲ್ಲಿ ನೀರು ತುಂಬಿಕೊಂಡು ಮನೆಯಲ್ಲಿದ್ದ ಕಪ್ಪು ಬಿಳುಪಿನ ದೊಡ್ಡ ಫೋಟೋದಲ್ಲಿ ಮಂದಹಾಸ ಬೀರುತ್ತಿದ್ದ ಹೆಂಗಸನ್ನು ತೋರಿಸಿ `ನೋಡು ನಿನ್ನ ಅಮ್ಮ’ ಅಂತ ಹೇಳುತ್ತಿದ್ದಳು. ಅದು ತ್ರಿವೇಣಿಯ ಭಾವಚಿತ್ರವಾಗಿತ್ತು ಅಂತ ಬಿಡಿಸಿ ಹೇಳಬೇಕಾಗಿಲ್ಲ. ಅಮ್ಮನ ಫೋಟೋ ನೋಡಿದಾಗಲೂ ನನಗೇನು ಅನಿಸುತ್ತಿರಲಿಲ್ಲ. ಏಕೆಂದರೆ ನನ್ನ ಪಾಲಿಗೆ ಅದೊಂದು ಭಾವಚಿತ್ರವಾಗಿತ್ತು ಮಾತ್ರ. ನಾನೆಂದೂ ಆ ಭಾವಚಿತ್ರದಲ್ಲಿದ್ದ ಹೆಂಗಸಿನ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಜೀವಂತವಾಗಿರುವ ವ್ಯಕ್ತಿಯನ್ನು ಮುಟ್ಟಿ, ಅವರ ಇರುವಿಕೆಯನ್ನು ಅನುಭವಿಸುವಂತೆ, ಫೋಟೋದಲ್ಲಿದ್ದ ಅಮ್ಮನನ್ನು ಮುಟ್ಟಿ, ಅವಳ ಇರುವಿಕೆ, ಅವಳ ಪ್ರೀತಿ, ಕಾಳಜಿ, ಆಪ್ತತೆಯನ್ನು ಅನುಭವಿಸಲಾಗದಿದ್ದ ಮೇಲೆ ಅದರ ಪ್ರಯೋಜನವೇನು ಅನ್ನುವುದು ನನ್ನ ಪ್ರಶ್ನೆಯಾಗಿತ್ತು. ಆಕೆ ಜೀವಂತವಾಗಿದ್ದರೆ ಅವಳನ್ನು ನಾನು ನೋಡಬಹುದಾಗಿತ್ತು, ಅಜ್ಜಿಯ ಜೊತೆ ಆಡಿದಂತೆ ಅವಳ ಮಡಿಲಲ್ಲಿ ಆಟವಾಡಬಹುದಿತ್ತು, ಮುದ್ದಾಡಬಹುದಿತ್ತು. ಇದ್ಯಾವ ಸುಖವನ್ನು ನೀಡದ ಆಕೆಯ ಆ ಭಾವಚಿತ್ರದ ಬಗ್ಗೆ ನನಗೆ ಅಷ್ಟೇ ನಿರ್ಲಿಪ್ತತೆ…! ಮಕ್ಕಳಿಗೆ ಚಿತ್ರಗಳಲ್ಲಿರುವ ದೇವರನ್ನು ತೋರಿಸಿ ಇವನು ರಾಮ, ಈಕೆ ಪಾರ್ವತಿ, ಈತ ಗಣಪತಿ ಅಂತ ಹೇಳುವಷ್ಟೇ ಅರ್ಥಹೀನವಾಗಿತ್ತು. ನನ್ನಮ್ಮ ನನಗೆ ದೇವರಷ್ಟೇ ಅಪರಿಚಿತ, ಅಗೋಚರವಾಗಿದ್ದ ವ್ಯಕ್ತಿ ಅಷ್ಟೇ…!

ನನ್ನನ್ನು ಬೆಳೆಸಿದ ಅಜ್ಜಿಯನ್ನೇ ನಾನು ಅಮ್ಮನೆಂದುಕೊಂಡಿದ್ದರಿಂದ ಆಕೆಯ ಬಿಳಿ ಕೂದಲನ್ನು ನೋಡಿದಾಗಲೆಲ್ಲಾ, ಚಿಕ್ಕ ಹುಡುಗಿಯ ದೃಷ್ಟಿಕೋನದಿಂದ ನಾನು ಯೋಚಿಸುತ್ತಿದ್ದೇನೆಂದರೆ, ನನ್ನ ಜೊತೆಗಿದ್ದ ಎಲ್ಲ ಸಹಪಾಠಿಗಳ ತಾಯಂದಿರ ಕಪ್ಪು ಕೂದಲಂತೆ ನನ್ನ ಅಮ್ಮನ ಕೂದಲು ಏಕೆ ಕಪ್ಪಗಿಲ್ಲ? ಇದನ್ನು ಸಹಪಾಠಿಗಳ ಜೊತೆ ಹೇಳಿಕೊಳ್ಳಲು ಏನೋ ಮುಜುಗರ. ನಾನು ಬೆಳೆದಂತೆಲ್ಲಾ ನನ್ನ ಜೀವನ ಸಾಮಾನ್ಯರಂತಿಲ್ಲ ಅನ್ನುವುದು ನನಗೆ ಮನವರಿಕೆಯಾಗತೊಡಗಿತ್ತು. ನಮ್ಮ ಕುಟುಂಬದ ಕಾರ್ಯಕ್ರಮಗಳಲ್ಲಿ, ಮದುವೆ ಮನೆಗಳಲ್ಲಿ, ಬೇರೆ ಬೇರೆ ಕೂಟಗಳಲ್ಲಿ ನಾನು ಭಾಗಿಯಾದಾಗ, ನನ್ನನ್ನು ನೋಡಿದವರೆಲ್ಲಾ `ಜನಪ್ರಿಯ ಕಾದಂಬರಿಗಾರ್ತಿ ತ್ರಿವೇಣಿ ಮಗಳು’ ಅಂತ ಗುರುತು ಹಿಡಿದು ಮಾತನಾಡಿಸುತ್ತಿದ್ದರು.

ನನ್ನನ್ನು ಕನಿಕರದಿಂದ ದುಃಖದಿಂದ ನೋಡುವವರೇ ಹೆಚ್ಚಾಗಿದ್ದರು. ಕೆಲವರು ನನ್ನನ್ನು ನೋಡಿದಾಗಲೆಲ್ಲಾ ಒಳಗೊಳಗೆ ಗುಸುಗುಸು ಅನ್ನುತ್ತಿದ್ದರು. ನನ್ನ ಎದುರಿಗೆ ಮಾತನಾಡಬಾರದು ಅಂತ ಬೇರೆ ಕಡೆ ಹೋಗಿ ನನ್ನನ್ನು ನೋಡುತ್ತಾ ಏನೇನೋ ಮಾತನಾಡುತ್ತಿದ್ದರು. ನಾನು ಹುಟ್ಟಿದ ಹತ್ತೇ ದಿನಕ್ಕೆ ಅಮ್ಮ ತೀರಿಕೊಂಡಿದ್ದಳು ಅಂತ ಮಾತನಾಡಿಕೊಳ್ಳುತ್ತಿದ್ದರು. ಆದರೆ ಇದ್ಯಾವುದೂ ನನಗೆ ಬಾಧಿಸುತ್ತಿರಲಿಲ್ಲ. ಏಕೆಂದರೆ ಈ ಸಂಗತಿ ಒಂದು ಪ್ರಾಯದವರೆಗೂ ನನಗೆ ಅರ್ಥವಾಗಿರಲಿಲ್ಲ. ಆದರೆ ನಾನು ಬೆಳೆದಂತೆ ಈ ಕಟುಸತ್ಯ ನನಗೆ ಅರ್ಥವಾಗತೊಡಗಿತು.

`ತಾಯಿಯ ಮುಖವನ್ನು ಕೂಡ ನೋಡದ ದೌರ್ಭಾಗ್ಯ ಈ ಹುಡುಗಿಗೆ ಬರಬಾರದಿತ್ತು, ಅಂತ ಒಳಗೊಳಗೆ ಮಾತನಾಡುತ್ತಿದ್ದರು. ಕೆಲವರು ಅದನ್ನು ನನಗೆ ಕೇಳುವಂತೆ, ನೇರವಾಗಿಯೇ ಹೇಳಿದ್ದುಂಟು. `ತಾಯಿಯ ಜೀವವನ್ನೇ ತೆಗೆದುಕೊಂಡ ನತದೃಷ್ಟ ಕೂಸು’ ಅಂತಲೂ ಮೆಲ್ಲಗೆ ನನ್ನನ್ನು ನೋಡಿ ಹೇಳಿದ್ದುಂಟು. ನನ್ನನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದ ಜನರು ಅಮ್ಮನನ್ನು, ಆಕೆಯ ಕಾದಂಬರಿಗಳನ್ನು, ಆಕೆಯೊಂದಿಗಿನ ಒಡನಾಟವನ್ನು ನನ್ನೆದುರು ಪದೇ ಪದೇ ನೆನಪಿಸಿಕೊಂಡು, `ಇಂತಹ ಮಹಾನ್ ಸಾಧಕಿಯ ಮಗಳು ನೀನು’ ಅಂತ ಹೇಳುತ್ತಿದ್ದರು.

ನಾನು ಬೆಳೆದಂತೆಲ್ಲಾ ನನ್ನ ಬದುಕಿನ ವೈಚಿತ್ರ್ಯ ಅರ್ಥವಾಗತೊಡಗಿತು. ಈ ಸತ್ಯ ನನಗೆ ಅರಿವಾದ ದಿನ, ನನ್ನ ಜೀವನದ ಅತ್ಯಂತ ಕೆಟ್ಟದಿನವಾಗಿತ್ತು. ಆನಂತರ ನಾನು ನೆಮ್ಮದಿಯನ್ನು ಕಳೆದುಕೊಂಡೆ. ಆ ನನ್ನ ಪರಿಸ್ಥಿತಿಯನ್ನು ವ್ಯಗ್ರತೆಯಿಂದ ಕೂಡಿದ ಮನಸ್ಸು, `ಯಾರೋ ನನಗೆ ವಿಶ್ವಾಸ ದ್ರೋಹ ಮಾಡಿದ್ದಾರೆ, ಗಾಯದ ಮೇಲೆ ಬರೆ ಎಳೆದಿದ್ದಾರೆ’ ಅನ್ನುವ ರೀತಿ ಬಣ್ಣಿಸಬಹುದಾಗಿತ್ತು. ಅಪ್ಪ-ಅಮ್ಮನ ಪ್ರೀತಿಯಲ್ಲಿ ಅನೇಕ ವರ್ಷಗಳ ಕಾಲ ಬೆಳೆದ ಮಗುವಿಗೆ ಒಂದು ದಿನ ತಾನು ಅಪ್ಪ-ಅಮ್ಮನ ರಕ್ತದಿಂದ ಹುಟ್ಟಿದ ಮಗುವಲ್ಲ, ತನ್ನನ್ನು ಇವರು ಸಾಕುತ್ತಿದ್ದಾರೆ ಅನ್ನುವ ಸತ್ಯ ಅರಿವಾದಾಗ ಆಗುವ ನೋವು, ಮಾನಸಿಕ ಯಾತನೆ, ಸಂಕಟ ನನ್ನದಾಗಿತ್ತು. ನನ್ನ ಮಾನಸಿಕ ತೊಳಲಾಟವನ್ನು ಯಾರಿಗೂ ಹೇಳಿಕೊಳ್ಳುವಂತೆಯೂ ಇರಲಿಲ್ಲ. ನಾನೊಬ್ಬಳೇ ಅಂತಮರ್ುಖಿಯಾಗಿ ಅನುಭವಿಸಬೇಕಿತ್ತಷ್ಟೇ.

triveniನಾನು ಕಾಣದ ಅಮ್ಮನನ್ನು ಎಲ್ಲರೂ ಪ್ರೀತಿಸುತ್ತಿದ್ದಾರೆ, ಗಂಟೆಗಟ್ಟಲೇ ಗುಣಗಾನ ಮಾಡುತ್ತಾರೆ, ಅವಳ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಆದರೆ ನನಗೆ ಏಕೆ ಅಮ್ಮನ ಪ್ರೀತಿ ಸಿಗಲಿಲ್ಲ, ಆಕೆಯ ವಾತ್ಸಲ್ಯದ ಅಪ್ಪುಗೆ ಸಿಗಲಿಲ್ಲ ಅಂತ ಅನಿಸುತ್ತಿತ್ತು. ಆಕೆಯ ಭಾವಚಿತ್ರವನ್ನು ನೋಡುತ್ತಾ ಸದಾ ಕುಳಿತಿರುತ್ತಿದ್ದೆ. ಮೊನಾಲಿಸಾಳ ಮುಖದ ಮಂದಹಾಸ ಆಕೆಯದು. ಯಾವ ದಿಕ್ಕಿನಿಂದ ನೋಡಿದರೂ, ನಾನು ಹತ್ತಿರವಿದ್ದರೂ, ದೂರದಲ್ಲಿದ್ದರೂ, ನನ್ನನ್ನೇ ನೋಡುತ್ತಿದ್ದಾಳೆ ಅನ್ನುವಷ್ಟರ ಮಟ್ಟಿಗೆ ಭಾವನಾತ್ಮಕವಾಗಿ ನಾನು ಅಮ್ಮನ ಭಾವಚಿತ್ರದೊಂದಿಗೆ ಸಂಬಂಧ ಕಲ್ಪಿಸಿಕೊಳ್ಳತೊಡಗಿದೆ.

ತ್ರಿವೇಣಿ ಕನ್ನಡದ ಜನಪ್ರಿಯ ಲೇಖಕಿಯಾಗಿ, ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದವರು. ಆದರೆ ನನಗೆ ಆಕೆ ಜನಪ್ರಿಯ ಕಾದಂಬರಿಗಾರ್ತಿಯಾಗಿ, ಕಥೆಗಾರ್ತಿಯಾಗಿ ಬೇಕಿರಲಿಲ್ಲ. ಅಮ್ಮನ ನಿಜವಾದ ಪ್ರೀತಿ, ವಾತ್ಸಲ್ಯವನ್ನು ನಾನು ಅನುಭವಿಸಬೇಕು ಎಂದು ನನ್ನ ಹೃದಯ ಸದಾ ಹಂಬಲಿಸುತ್ತಿತ್ತು. ನನ್ನ ಅಮ್ಮ ಜೀವನದಲ್ಲಿ ಎಂದೂ ನನಗೆ ಸಿಗಲಾರಳು, ನನ್ನ ಜೊತೆ ಇರಲಾರಳು ಅನ್ನುವ ಸತ್ಯ ತಿಳಿದ ಕ್ಷಣ ನನಗೆ ಈ ಜಗತ್ತೇ ಶೂನ್ಯವೆನಿಸಿಬಿಟ್ಟಿತ್ತು. ಇದು ನನ್ನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತಂದಿಟ್ಟಿತ್ತು. ಇದಕ್ಕಾಗಿ ನಾನು ದೇವರನ್ನು ದೂಷಿಸತೊಡಗಿದೆ. ಕೆಲವೊಮ್ಮೆ ದೇವರ ಮೇಲಿನ ಸಿಟ್ಟಿನಂತೆ, ನನ್ನ ಮೇಲೂ ಸಿಟ್ಟು ಬರುತ್ತಿತ್ತು. ನಾನೆಂಥ ದೌರ್ಭಾಗ್ಯವಂತೆ !

ನಂತರ ನಾನು ಅಮ್ಮನ ಹುಡುಕಾಟವನ್ನು ಪ್ರಾರಂಭಿಸಿದೆ ; ಆಕೆ ಬರೆದ ಎಲ್ಲ ಕಾದಂಬರಿಗಳು ಮತ್ತು ಸಣ್ಣಕತೆಗಳನ್ನು ಓದುವ ಮೂಲಕ. ಯಾರು ನನ್ನ ನಿಜವಾದ ತಾಯಿ? ಆಕೆಯ ಯೋಚನೆಗಳೇನು? ಆ ಯೋಚನೆಗಳಿಗೆ ಆಕೆ ನೀಡುತ್ತಿದ್ದ ಕಾರಣಗಳು, ಆಕೆ ಯಾವುದನ್ನು ಇಷ್ಟಪಡುತ್ತಿದ್ದಳು…. ಎಲ್ಲವನ್ನೂ ನಾನು ಅರ್ಥಮಾಡಿಕೊಳ್ಳುತ್ತಾ ಹೋದೆ. ಸುಮಾರು 50 ವರ್ಷಗಳ ಹಿಂದೆಯೇ ಆಕೆ ಬರೆದಿದ್ದ ಕ್ರಾಂತಿಕಾರಕ ಕಥೆಗಳೆಂದರೆ ಈಗಲೂ ನನಗೆ ಇಷ್ಟ. ಎಷ್ಟೋ ಬಾರಿ ಆಕೆಯ ಕಥೆಗಳಲ್ಲಿನ ಸ್ತ್ರೀಪಾತ್ರಗಳನ್ನು ಅರ್ಥಮಾಡಿಕೊಳ್ಳುತ್ತಾ, ನಾನೂ ಅದರಿಂದ ಪ್ರಭಾವಿತಳಾಗಿ ರೂಪುಗೊಂಡೆನೋ ಅಥವಾ ನನ್ನೊಳಗಿನ ಸ್ವರೂಪವೇ ಆ ರೀತಿಯೋ ಅನ್ನುವುದು ನನಗೆ ಗೊತ್ತಿಲ್ಲ. ಆದರೆ ನನ್ನ ಆಲೋಚನೆಗಳು ಎಲ್ಲರಿಗಿಂತಲೂ ವಿಭಿನ್ನವಾಗಿದ್ದವು ಅನ್ನುವುದು ಸತ್ಯ.

ಈಗ `ಕಾದಂಬರಿಗಾರ್ತಿ ತ್ರಿವೇಣಿ’ ಹಾಗೂ `ನನ್ನಮ್ಮ ತ್ರಿವೇಣಿ’ ಇಬ್ಬರನ್ನೂ ಅನ್ವೇಷಣೆ ಮಾಡುವ ಕಾಲ ಬಂದಿತ್ತು. ಅಮ್ಮನೊಂದಿಗೆ ವೈಯಕ್ತಿಕವಾಗಿ ಪರಿಚಯವಿದ್ದವರು, ಒಡನಾಡಿದವರು, ಆಕೆಯ ಕುಟುಂಬದವರು, ಸಂಬಂಧಿಕರು, ಸ್ನೇಹಿತರನ್ನು ಹುಡುಕಾಡಿದೆ. ಇವರೆಲ್ಲರ ಹತ್ತಿರ ನಾನು ಅಮ್ಮನ ಬಗ್ಗೆ ನನಗೆ ಕುತೂಹಲಕಾರಿಯೆನಿಸುತ್ತಿದ್ದ, ನಾನು ತಿಳಿದುಕೊಳ್ಳಬೇಕೆಂದು ಅಂದುಕೊಂಡಿದ್ದ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅಮ್ಮನ ಸ್ವಭಾವ ಹೇಗಿತ್ತು? ಆಕೆ ಹೇಗೆ ಮಾತನಾಡುತ್ತಿದ್ದಳು? ಆಕೆಯ ಅನಾರೋಗ್ಯಕ್ಕೆ ಕಾರಣವೇನು? ಆಕೆಯ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಕಾರಣವಾದರೂ ಏನಿದ್ದೀತು? ಯಾವುದೇ ಹೊಸ ಕಾದಂಬರಿ ಅಥವಾ ಬರವಣಿಗೆ ಪ್ರಾರಂಭಿಸುವ ಮುನ್ನ ಯಾವ ರೀತಿ ಅದರ ಬಗ್ಗೆ ಸಂಶೋಧನೆ ಮಾಡುತ್ತಿದ್ದಳು. ಇಂತಹ ಹಲವು ಪ್ರಶ್ನೆಗಳನ್ನು ಅಮ್ಮನ ಜೊತೆ ಒಡನಾಡಿದವರ ಹತ್ತಿರ ಕೇಳುತ್ತಲೇ ಇರುತ್ತಿದ್ದೆ. ಆ ಮೂಲಕ ಅಮ್ಮನ ಅಂತರಾಳವನ್ನು ಪ್ರವೇಶಿಸಬೇಕು ಅನ್ನುವ ಬಯಕೆಯಿತ್ತಷ್ಟೇ. ಹೀಗೆ ಅಮ್ಮನ ಅಂತರಂಗವನ್ನು ಅರ್ಥ ಮಾಡಿಕೊಳ್ಳುತ್ತಾ ಹೋದೆ.

ಅಮ್ಮನ ಜನ್ಮನಾಮ ಭಾಗೀರಥಿ ಎಂದಿತ್ತು. ಆದರೆ ದಾಖಲೆಗಳಲ್ಲಿ ಆಕೆಯ ಹೆಸರು `ಅನಸೂಯ’ ಅಂತ ನಮೂದಿಸಲಾಗಿತ್ತು. ಅಮ್ಮ ಪದವಿ ಶಿಕ್ಷಣ ಮುಗಿಸಿ, ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡ ಮೇಲೆ `ತ್ರಿವೇಣಿ’ ಎಂಬ ಹೆಸರಿನಲ್ಲಿ ಕತೆ, ಕಾದಂಬರಿಗಳನ್ನು ಬರೆಯಲಿಕ್ಕೆ ಪ್ರಾರಂಭಿಸಿದ್ದಳು. ಆ ಕಾವ್ಯನಾಮ ಇಟ್ಟುಕೊಳ್ಳಲಿಕ್ಕೆ ಒಂದು ಪ್ರೇರಣೆಯೂ ಇತ್ತು. ಮಹಾತ್ಮ್ಮಾ ಗಾಂಧೀಜಿ ಚಿತಾಭಸ್ಮವನ್ನು ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲಾಯಿತು ಅನ್ನುವ ಸುದ್ದಿಯನ್ನು ಕೇಳಿದಾಗ, ಅದರಲ್ಲಿ ತ್ರಿವೇಣಿ ಅನ್ನುವ ಹೆಸರು ಬಹುಬೇಗ ಅಮ್ಮನನ್ನು ಆಕರ್ಷಿಸಿತ್ತು. ಮುಂದೇ ಅದೇ ಹೆಸರನ್ನು ತಮ್ಮ ಸಾಹಿತ್ಯಿಕ ಬರವಣಿಗೆಗೆ ಬಳಸಿಕೊಂಡು `ತ್ರಿವೇಣಿ’ ಹೆಸರಿನಲ್ಲಿ ಜನಪ್ರಿಯ ಕಾದಂಬರಿಗಾರ್ತಿಯಾದರು. ಅತಿ ಕಡಿಮೆ ವಯಸ್ಸಿನಲ್ಲೇ ಸುಮಾರು 21 ಕಾದಂಬರಿ ಮತ್ತು ಮೂರು ಕಥಾಸಂಕಲನಗಳನ್ನು ಬರೆದಿರುವುದು ತ್ರಿವೇಣಿಯವರ ದೊಡ್ಡ ಸಾಧನೆಯೆಂದು ಕನ್ನಡದ ಸಾರಸ್ವತ ಲೋಕ ಇಂದಿಗೂ ಬಣ್ಣಿಸುತ್ತದೆ. ಅಮ್ಮನ ಸಾಹಿತ್ಯಿಕ ಚಟುವಟಿಕೆ ಮತ್ತು ಸಾಧನೆಯ ಬಗ್ಗೆ ಅಮೂರ್ತ ಅಭಿಮಾನ ನನ್ನಲ್ಲಿದೆ.

ಅಮ್ಮನ ಕೊನೆಯ ತಮ್ಮ ಮೈಸೂರಿನಲ್ಲಿ ನೆಲೆಸಿರುವ ರಂಗನಾಥ್, ಅಮ್ಮನ ಬಗ್ಗೆ ಕೆಲವು ವಿಚಾರಗಳನ್ನು ಹೇಳಿದ್ದರು. ಅವರು ಕಂಡ ಹಾಗೆ, ಅಮ್ಮನಿಗೆ ಮಕ್ಕಳೆಂದರೆ ಪಂಚಪ್ರಾಣ, ವಿಶೇಷವಾಗಿ ಬಡ ಮಕ್ಕಳೆಂದರೆ ಆಕೆಗೆ ವಿಪರೀತ ಕಾಳಜಿ. ಎಷ್ಟೋ ಬಾರಿ ಅವರ ಶಾಲೆಯ ಫೀಸನ್ನು ಕೂಡ ಕಟ್ಟಿಬಿಡುತ್ತಿದ್ದಳು. ಸುಳ್ಳು ಹೇಳುವುದು, ಸಣ್ಣಬುದ್ಧಿ ತೋರಿಸುವುದನ್ನು ಕಂಡರೆ ಆಕೆಗೆ ಆಗುತ್ತಿರಲಿಲ್ಲ. ಯಾರಾದರೂ ಸುಖಾಸುಮ್ಮನೇ ಸುಳ್ಳು ಹೇಳಿದರೆ ಆಕೆಗೆ ಸಿಟ್ಟು ನೆತ್ತಿಗೇರುತ್ತಿತ್ತು. ಪುಸ್ತಕಗಳನ್ನು ಓದಿ ಹಿಂತಿರುಗಿಸುತ್ತೇವೆ ಅಂತ ಹೇಳಿ ತೆಗೆದುಕೊಂಡು ಹೋದ ಪುಸ್ತಕಗಳನ್ನು ಹಿಂದಿರುಗಿಸದವರ ಮೇಲೂ ವಿಪರೀತ ಬೇಸರಪಡುತ್ತಿದ್ದಳು. ಎಲ್ಲ ಸೃಜನಶೀಲ ಬರಹಗಾರರಂತೆ, ಆಕೆಗೂ ಕೂಡ ಮಾನಸಿಕ ಗೊಂದಲಗಳು, ಮನಸ್ಸು ಸರಿ ಇಲ್ಲದೇ ಇರುವಂತಹದ್ದು, ಮೂಡ್ ಹಾಳುಮಾಡಿಕೊಳ್ಳುವಂತಹದ್ದು ಆಗುತ್ತಲೇ ಇರುತ್ತಿತ್ತು. ಕೆಲವೊಮ್ಮೆ ತನ್ನ ಕೈಸೋಲುವವರೆಗೂ ಪುಟ್ಟಗಟ್ಟಲೇ ಬರೆಯುತ್ತಿದ್ದಳು. ಕೆಲವೊಮ್ಮೆ ಅನೇಕ ದಿನಗಳವರೆಗೆ ಏನನ್ನೂ ಬರೆಯುತ್ತಿರಲಿಲ್ಲ. ಸುದೀರ್ಘವಾಗಿ ಕಾಡುತ್ತಿದ್ದ ಆಸ್ತಮಾ ಖಾಯಿಲೆ ಅವರ ದೇಹವನ್ನು ವಿಪರೀತ ಬಳಲುವಂತೆ ಮಾಡುತ್ತಿತ್ತು. ಇದರಿಂದಾಗಿ ಬಿಎ ಪದವಿಯ ನಂತರ ಒಂದು ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿ, ಆನಂತರ ಅನಾರೋಗ್ಯ ಸಮಸ್ಯೆಯಿಂದಾಗಿ ಮುಂದುವರೆಯಲಿಲ್ಲ. ಆಯಾ ಕಾಲದಲ್ಲಿ ಆಸ್ತಮಾ ಖಾಯಿಲೆ ಉಲ್ಬಣಗೊಳ್ಳುತ್ತಿತ್ತು. ಇದರಿಂದಾಗಿ ನಿದ್ದೆ ಇಲ್ಲದೇ ಎಷ್ಟೋ ರಾತ್ರಿಗಳನ್ನು ಕಳೆಯುತ್ತಿದ್ದಳು. ಹಾಸಿಗೆಯಲ್ಲಿ ನರಳುತ್ತಲೇ ದಿನಗಳನ್ನು ದೂಡುತ್ತಿದ್ದಳು. ತನಗಿರುವ ಖಾಯಿಲೆಯ ಬಗ್ಗೆ ಮಾನಸಿಕವಾಗಿ ಅಷ್ಟೇ ನೋವನ್ನು ಅನುಭವಿಸುತ್ತಿದ್ದಳು.

ಒಮ್ಮೆ ತ್ರಿವೇಣಿ ತಮ್ಮ ಕುಟುಂಬದವರ ಜೊತೆ ಸಿನಿಮಾ ನೋಡಲಿಕ್ಕೆ ಥಿಯೇಟರ್ಗೆ ಹೋಗಿದ್ದಳು. ಸಿನಿಮಾದಲ್ಲಿ ಒಂದು ದೃಶ್ಯವಿತ್ತು. ವಿಲನ್ ನಾಯಕನ ಜೊತೆ ಹೊಡೆದಾಡುತ್ತಾ, ಕೊನೆಗೆ ಆತನ ಮುಖಕ್ಕೆ ಮಣ್ಣನ್ನು ಎರಚುತ್ತಾನೆ. ಈ ದೃಶ್ಯವನ್ನು ಕ್ಯಾಮೆರಾ ಎದುರಿಗೆ ಮಣ್ಣನ್ನು ಎರಚಿದಂತೆ ಶೂಟ್ ಮಾಡಲಾಗಿತ್ತು. ಹಾಗಾಗಿ ಸಿನಿಮಾ ನೋಡುವಾಗ ಆ ಮಣ್ಣು ತನ್ನ ಮೇಲೆ ಎರಚಿದೆ ಅನ್ನುವ ರೀತಿ ಭಾಸವಾಗಿ, ತ್ರಿವೇಣಿಗೆ ಈ ದೃಶ್ಯ ನೋಡಿದಾಕ್ಷಣ ವಿಪರೀತ ಸೀನತೊಡಗಿದಳು. ಮೊದಲೇ ದೂಳೆಂದರೆ ಆಗದ ಆಕೆಗೆ, ಕೇವಲ ರೀಲ್ನಲ್ಲಿದ್ದ ಆ ದೃಶ್ಯವನ್ನು ನೋಡುತ್ತಲೇ ನಿಜವಾಗಿಯೂ ತನಗೆ ಯಾರೋ ಮಣ್ಣು ಮುಖಕ್ಕೆ ಎಸೆದರು ಅನ್ನುವಂತೆ ಮಾನಸಿಕವಾಗಿ ಅನಿಸಿತ್ತು. ಹೀಗೆ ತ್ರಿವೇಣಿ ಅನಾರೋಗ್ಯದ ಸಮಸ್ಯೆಯಿಂದಾಗಿ ಮಾನಸಿಕವಾಗಿ ಕುಗ್ಗಿಹೋಗಿದ್ದಳು. ತನಗಿರುವ ಅನಾರೋಗ್ಯದ ನಡುವೆಯೂ, ತನ್ನನ್ನು ನೋಡಲು ಇಲ್ಲವೇ ತನ್ನ ಮನೆಗೆ ಸಮಸ್ಯೆ, ಕಷ್ಟ ಅಂತ ಹೇಳಿಕೊಂಡು ಯಾರೇ ಬಂದರೂ, ಅವರ ಕಷ್ಟಸುಖಗಳನ್ನು ವಿಚಾರಿಸುತ್ತಿದ್ದಳು. ಅದಕ್ಕೆ ಪರಿಹಾರವನ್ನು ಕೂಡ ತಿಳಿಸುತ್ತಿದ್ದಳು. ಬೇರೆಯವರ ಕಷ್ಟವನ್ನು ಸುಲಭವಾಗಿ ಗ್ರಹಿಸುತ್ತಿದ್ದಳು. ಅವರು ಅನುಭವಿಸಿದ ಬಡತನ, ಕಷ್ಟಗಳನ್ನು ಕೇಳಿಕೊಂಡು, ಅದನ್ನು ತಾನೇ ಅನುಭವಿಸಿದಂತೆ ಬರೆಯುತ್ತಿದ್ದಳು.

`ಅವಳ ಮನೆ’ ಕಾದಂಬರಿಯಲ್ಲಿ ಬಡತನದ ಕಷ್ಟನಷ್ಟಗಳನ್ನು, ಅದರ ಸೂಕ್ಷ್ಮವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಳು. ಆಕೆಯ ಅನೇಕ ಕಾದಂಬರಿಗಳಲ್ಲಿ ಬಡವರ ಭಾವನೆ, ಅವರ ಕಷ್ಟನಷ್ಟಗಳನ್ನು ಅತ್ಯಂತ ನೈಜವಾಗಿ ಬರೆದಿರುವುದನ್ನು ನಾವೆಲ್ಲಾ ಕಾಣಬಹುದು. ಅದು ತ್ರಿವೇಣಿ ಬರವಣಿಗೆಯ ಸತ್ವವಾಗಿತ್ತು. ತನ್ನ ಕಾದಂಬರಿ ಗಳನ್ನು ಓದಿದ ವಿಮರ್ಶಕರು ಮತ್ತು ಓದುಗರ ಅಭಿಪ್ರಾಯಗಳನ್ನು ಸಮಾನವಾಗಿ ಸ್ವೀಕರಿಸುತ್ತಿದ್ದಳು. ಹೊಗಳಿದಾಗ ಖುಷಿಯಾಗುವುದು, ಟೀಕಿಸಿದಾಗ ಕುಗ್ಗುವುದು ಆಕೆಯ ಸ್ವಭಾವವಲ್ಲ. ಇದಕ್ಕೆ ಇನ್ನೊಂದು ಘಟನೆಯನ್ನು ಸ್ಮರಿಸಿಕೊಳ್ಳಬಹುದು. ಒಮ್ಮೆ ತ್ರಿವೇಣಿ ಮುಂಬೈಯಿಂದ ಮೈಸೂರಿಗೆ ಟ್ರೇನ್ನಲ್ಲಿ ಬರುವಾಗ ಆಕೆಯ ಪಕ್ಕ ಕೂತಿದ್ದ ಒಬ್ಬ ಕನ್ನಡಿಗ ಪ್ರಯಾಣಿಕನಿಗೆ, ‘ತ್ರಿವೇಣಿ ಕಾದಂಬರಿಗಳನ್ನು ಓದಿದ್ದೀರಾ?’ ಅಂತ ಕೇಳಿದರಂತೆ. ಅವರ ಪ್ರಶ್ನೆಗೆ ಆ ಪ್ರಯಾಣಿಕ ಸುಮಾರು ಒಂದು ಗಂಟೆಯ ಕಾಲ ತ್ರಿವೇಣಿ ಕಾದಂಬರಿಗಳಲ್ಲಿನ ಋಣಾತ್ಮಕ ಅಂಶಗಳನ್ನು ತೆಗಳಿದ. ಆಕೆಯ ಕಾದಂಬರಿಗಳಲ್ಲಿ ಮನರಂಜನೆ ಇಲ್ಲ. ಓದುಗರಿಗೆ ಬೇಕಾದ ವಿಷಯ ಖಂಡಿತ ಇಲ್ಲವೇ ಇಲ್ಲ ಅಂತ ವಾದಿಸಿದ. ಅವನ ಮಾತುಗಳನ್ನು ಶಾಂತವಾಗಿ ಕೇಳುತ್ತಿದ್ದ ತ್ರಿವೇಣಿ ಕೊನೆಯವರೆಗೂ ಆ ಪ್ರಯಾಣಿಕನಿಗೆ ತನ್ನ ಪರಿಚಯ ಮಾಡಿಕೊಳ್ಳಲೇ ಇಲ್ಲ. ಆದರೆ ಮನೆಗೆ ಬಂದ ಮೇಲೆ ಆ ಘಟನೆಯನ್ನು ನೆನಪಿಸಿಕೊಂಡು ತುಂಬಾ ಸಂತೋಷಪಟ್ಟು ಹೊಟ್ಟೆ ಹುಣ್ಣಾಗುವಂತೆ ನಕ್ಕಳು. ಆ ಪ್ರಯಾಣಿಕ ನೀಡಿದ ತನ್ನ ಅಭಿಪ್ರಾಯವನ್ನು ಧನಾತ್ಮಕವಾಗಿ ತೆಗೆದುಕೊಂಡು, ತನ್ನ ಬರವಣಿಗೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ನಿರ್ಧರಿಸಿದಳಂತೆ.

`ತ್ರಿವೇಣಿ ಒಬ್ಬ ಸದ್ಗೃಹಿಣಿ, ಜೊತೆಗೆ ಒಳ್ಳೆಯ ಮನಸ್ಸಿನವಳಾಗಿದ್ದಳು. ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಮೌನಕ್ಕೆ ಹೆಚ್ಚು ಪ್ರಾಧಾನ್ಯ ನೀಡುತ್ತಿದ್ದಳು’ ಅಂತ ಅಮ್ಮನ ಸ್ನೇಹಿತೆ ವಿಶಾಲಾಕ್ಷ್ಮಮ್ಮ ಮತ್ತು ಹತ್ತಿರದ ಸಂಬಂಧಿಕರಾದ ಸುಮಿತ್ರಮ್ಮ ತ್ರಿವೇಣಿ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಳ್ಳುತ್ತಾರೆ. ಅವರು ನೋಡಿರುವ ಪ್ರಕಾರ, `ತ್ರಿವೇಣಿ ಎಷ್ಟು ಭಾವುಕಳೋ, ಅಷ್ಟೇ ಶಾಂತವಾಗಿರುತ್ತಿದ್ದಳು. ಮಕ್ಕಳೊಂದಿಗೆ ತುಂಬಾ ಆತ್ಮೀಯವಾಗಿ ಬೆರೆಯುತ್ತಾ ಆಕೆಯೂ ಮಗುವಾಗಿಬಿಡುತ್ತಿದ್ದಳು. ಬೇರೆಯವರು ಮಾತನಾಡುವಾಗ ಅವರನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಅವರ ಮುಖದಲ್ಲಿನ ಭಾವನೆಗಳು, ಹಾವಭಾವಗಳು ಆಕೆಗೆ ಆಸಕ್ತಿಯನ್ನು ಹುಟ್ಟಿಸುತ್ತಿದ್ದವು. ಇದು ಕೂಡ ಆಕೆಯ ಕಾದಂಬರಿಗಳಲ್ಲಿನ ಪಾತ್ರಗಳ ಸೂಕ್ಷ್ಮತೆಗೆ ಸಹಾಯವಾಗುತ್ತಿತ್ತು. ತನ್ನೊಂದಿಗೆ ಕಷ್ಟಸುಖಗಳನ್ನು ಹಂಚಿಕೊಳ್ಳುವ ವ್ಯಕ್ತಿಗಳು ಮತ್ತು ಕಷ್ಟದಲ್ಲಿರುವವರ ಸ್ಥಾನದಲ್ಲಿ ನಿಂತು, ಅವರ ಅಂತರಂಗದ ನೋವನ್ನು ಅರ್ಥಮಾಡಿಕೊಳ್ಳಲು ಆಕೆ ಪ್ರಯತ್ನಿಸುತ್ತಿದ್ದಳು.

ಮನಃಶಾಸ್ತ್ರದಲ್ಲಿ ಚಿನ್ನದ ಪದಕವನ್ನು ಪಡೆದಿದ್ದ ಆಕೆ ಜನರ ಮಾನಸಿಕ ತೊಳಲಾಟವನ್ನು ಸುಲಭವಾಗಿ ಅರ್ಥಮಾಡಿಕೊಂಡು ಅವರ ಜೊತೆ ಮಾತುಕತೆಯನ್ನು ನಡೆಸುತ್ತಿದ್ದಳು. ಇದಕ್ಕೆ ಆಕೆ ಓದಿದ ಮನಃಶಾಸ್ತ್ರ ಕೂಡ ಸಹಾಯ ಮಾಡಿರಬಹುದು. ಹೊರಗಡೆ ಹೋದಾಗ, ಬಸ್ ಟ್ರೇನ್ಗಳಲ್ಲಿ ಪ್ರಯಾಣ ಮಾಡುವಾಗ, ಜೊತೆಗಿರುವ ಜನರನ್ನು, ಅವರ ಮನಸಿನ ತೊಳಲಾಟಗಳನ್ನು ಅರ್ಥಮಾಡಿಕೊಳ್ಳಲು ಅವರನ್ನು ಸೂಕ್ಷ್ಮವಾಗಿ ನೋಡುತ್ತಿದ್ದಳು. ಅವರ ಮಾತು ಹಾವಾಭಿನಯ, ವ್ಯಕ್ತಿತ್ವ, ದೇಹಭಾಷೆ ಎಲ್ಲವೂ ಆಕೆಯ ಕಾದಂಬರಿಗಳಲ್ಲಿನ ಪಾತ್ರಗಳ ನೈಜತೆಗೆ ಕಾರಣವಾಗಿರಬಹುದು’.

ತ್ರಿವೇಣಿಯ ಮದುವೆ ಪ್ರಸಂಗ ಕೂಡ ಸ್ವಾರಸ್ಯಕರವಾಗಿತ್ತು ಅಂತ ಅಮ್ಮನ ಹಿರಿಯ ಅಕ್ಕ ಪ್ರಭಾವತಿ ಹೇಳಿದ ಫಟನೆ ಇಲ್ಲಿ ಪ್ರಸ್ತುತವೆನಿಸುತ್ತದೆ. ನನ್ನ ಮದುವೆ ಆಗಲೇ ನಿಶ್ಚಯವಾಗಿತ್ತು. ಆ ಸಮಯದಲ್ಲಿ ನಾನು, ಹತ್ತಿರದ ಸಂಬಂಧಿ ಶಂಕರ್ ಮತ್ತು ತ್ರಿವೇಣಿ ಮನೆಯ ಹೊರಗಡೆ ಕುಳಿತು ಮಾತನಾಡುವಾಗ, `ಅಕ್ಕನ ಮದುವೆ ನಿಶ್ಚಯವಾಯ್ತು, ಇನ್ನು ನಿನ್ನ ಮದುವೆ ಯಾವಾಗ?’ ಅಂತ ಶಂಕರ್, ತ್ರಿವೇಣಿಯನ್ನು ರೇಗಿಸಿಬಿಟ್ಟ. ಆ ಮಾತನ್ನು ಕೇಳಿ ತ್ರಿವೇಣಿ ಬೇಸರಗೊಂಡು ಅಲ್ಲಿಂದ ಎದ್ದು ಹೊರಟು ಹೋದಳು. ತಾನು ಹೇಳಿದ್ದು ಆಕೆಗೆ ಬೇಸರ ತರಿಸಿದೆ ಅಂತ ಅರಿತ ಶಂಕರ್, ತ್ರಿವೇಣಿ ಇದ್ದ ಕಡೆಗೆ ಹೋಗಿ, ಅವಳ ಬೇಸರಕ್ಕೆ ಕಾರಣ ಕೇಳಿದ. ‘ತಾನು ಆಸ್ತಮಾ ಖಾಯಿಲೆ ಇರುವವಳು, ತನ್ನನ್ನು ಯಾರು ಮದುವೆಯಾಗುತ್ತಾರೆ ಅಂತ ಗೊತ್ತಿದ್ದರೂ, ನನ್ನನ್ನು ರೇಗಿಸುತ್ತಿಯಾ’ ಅಂತ ಹೇಳಿದಾಗ, ಶಂಕರ್ ತಾನು ಹೇಳಿದ್ದು ತಪ್ಪು ಅಂತ ಅರಿವಾಗಿ, ಆ ಕ್ಷಣವೇ ತ್ರಿವೇಣಿಯ ಹತ್ತಿರ ಕ್ಷಮೆ ಕೇಳಿದರು.

`ಆಸ್ತಮಾ ಖಾಯಿಲೆ ಇರುವವರು ಯಾಕೆ ಮದುವೆಯಾಗಬಾರದು? ಖಂಡಿತ ನೀನು ಮದುವೆಯಾಗಬೇಕು’ ಅಂತ ಒತ್ತಾಯ ಮಾಡಿದಾಗ, ‘ಖಾಯಿಲೆ ಇರುವ ನನ್ನಂಥವಳನ್ನು ಮದುವೆಯಾಗಲಿಕ್ಕೆ ಯಾರು ಮುಂದೆ ಬರುತ್ತಾರೆ’ ಅಂತ ತ್ರಿವೇಣಿ ಪ್ರಶ್ನಿಸಿದರು. ಶಂಕರ್ ಆ ಕ್ಷಣವೇ ತಾನೇ ಮದುವೆಯಾಗುವುದಾಗಿ ತಿಳಿಸಿಬಿಟ್ಟ ಹಾಗೂ ಎಲ್ಲರನ್ನೂ ಒಪ್ಪಿಸಿ ತ್ರಿವೇಣಿಯನ್ನು ಮದುವೆ ಯಾಗಿಯೇಬಿಟ್ಟ. ಮುಂದೆ ಆಕೆಯ ಎಲ್ಲ ಸಾಧನೆಯ ಹಿಂದೆ ಶಂಕರ್ ಬೆನ್ನಲುಬಾಗಿದ್ದ, ಅಂತಹ ದೊಡ್ಡ ಮನಸ್ಸು ಅವನದ್ದು”.

`ತಮ್ಮ ಕುಟುಂಬದಲ್ಲಿ ಹೆಚ್ಚಿನವರು ಬರಹಗಾರರಾಗಿ ಜನಪ್ರಿಯರಾಗಿದ್ದಾರೆ, ಸಾಹಿತ್ಯದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ನಮ್ಮ ದೊಡ್ಡಪ್ಪ ಬಿಎಂಶ್ರೀ, ಚಿಕ್ಕಮ್ಮ ವಾಣಿ ಇವರೆಲ್ಲಾ ಆಗಿನ ಕಾಲದಲ್ಲಿ ಜನಪ್ರಿಯ ಸಾಹಿತಿಗಳಾಗಿ ಗುರುತಿಸಿಕೊಂಡಿದ್ದರಿಂದ ತ್ರಿವೇಣಿ ಕೂಡ ಆ ನಿಟ್ಟಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲಿಕ್ಕೆ ದೊಡ್ಡಮ್ಮ ಮತ್ತು ಚಿಕ್ಕಮ್ಮ ಕೂಡ ಪರೋಕ್ಷವಾಗಿ ಪ್ರೇರಣೆಯಾಗಿದ್ದರು’ ಎಂಬುದನ್ನು ಅವರ ತಂಗಿ ಆರ್ಯಾಂಭಾ ಪಟ್ಟಾಭಿ ನೆನಪಿಸಿಕೊಳ್ಳುತ್ತಾರೆ. ತ್ರಿವೇಣಿ ಮೂಲತಃ ಮನಃಶಾಸ್ತ್ರದ ವಿದ್ಯಾರ್ಥಿಯಾಗಿದ್ದರಿಂದ, ತನ್ನ ಕಾದಂಬರಿಯಲ್ಲಿ ಈ ಅಂಶವನ್ನು ಅತ್ಯಂತ ಪರಿಣಾಮಕಾರಿಯಾಗಿ ಬರೆಯಲಿಕ್ಕೆ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದರು. ನಿಮ್ಹಾನ್ಸ್ಗೆ ಭೇಟಿ ನೀಡಿ ಅತೀ ಸೂಕ್ಷ್ಮ ವಿವರಣೆ ಹಾಗೂ ಗ್ರಹಿಕೆಯಿಂದ ತಳಪಾಯ ಹಾಕಿ ರಚಿಸಿದ ಸಣ್ಣ ಕಥೆಗಳ ಸಂಕಲನ `ಮುಚ್ಚಿದ ಬಾಗಿಲು’. ಚಿತ್ತಸ್ವಾಸ್ಥ್ಯ ಕಳೆದುಕೊಂಡಿದ್ದ ಅಲ್ಲಿನ ರೋಗಿಗಳ ಮನೋ ವಿಶ್ಲೇಷಣೆ ಹಾಗೂ ಅಧ್ಯಯನ ಮಾಡಿ ಬರೆದ ಸಂಕಲನ. `ಶರಪಂಜರ’ ಮತ್ತು `ಬೆಕ್ಕಿನ ಕಣ್ಣು’ ಕಾದಂಬರಿಗಳಲ್ಲಿ ಮನೋರೋಗಕ್ಕೆ ತ್ರಿವೇಣಿ ಕಂಡುಕೊಂಡ ಕಾರಣಗಳನ್ನು ತುಂಬಾ ಸ್ಪಷ್ಟವಾಗಿ ಬರೆದಿದ್ದಾರೆ. ನಾನು ಅರ್ಥಮಾಡಿಕೊಂಡಂತೆ ತ್ರಿವೇಣಿ ಕಾದಂಬರಿಗಳಲ್ಲಿ ನೀತಿಬೋಧನೆ ಮಾಡುತ್ತಿರಲಿಲ್ಲ. ತಮ್ಮ ಬರವಣಿಗೆಯ ಮೂಲಕ ಯಾರಿಗೂ ನೋವುಂಟು ಮಾಡದೇ, ಸಮಾಜದ ಅನ್ಯಾಯಗಳನ್ನು, ಅದರಲ್ಲೂ ಹೆಂಗಸರು ಅನುಭವಿಸುವ ಯಾತನೆಗಳನ್ನು ಕನ್ನಡಿ ಹಿಡಿದು ತೋರಿಸಿದ್ದಾರೆ.

ಅಮ್ಮನ ಬಗ್ಗೆ ಎಲ್ಲರೂ ಮಾತನಾಡುವುದನ್ನು ಕೇಳಿದಾಗ, ಈಗ ನನಗೆ ತುಂಬಾ ಖುಷಿಯಾಗುತ್ತದೆ. ನನ್ನ ಅಮ್ಮ ಯಾರು? ಅವಳ ಮನಸ್ಸು ಎಂತಹದ್ದು? ಎನ್ನುವ ಅವಳ ಹುಡುಕಾಟವನ್ನು ನಾನು ಅವಳ ಕಥೆ, ಕಾದಂಬರಿಗಳನ್ನು ಓದುವ ಮೂಲಕ ಅರ್ಥಮಾಡಿಕೊಳ್ಳುತ್ತಾ ಹೋದೆ. ಬೇರೆಯವರು ಅಮ್ಮನ ಬಗ್ಗೆ ಹೇಳಿದ್ದೆಲ್ಲವೂ ಈಗ ನನಗೆ ನಿಜವೆನಿಸುತ್ತಿದೆ. ಅಮ್ಮನ ವ್ಯಕ್ತಿತ್ವವೂ ಆಕೆಯ ಬರವಣಿಗೆಯಷ್ಟೇ ಶ್ರೇಷ್ಠವಾಗಿತ್ತು ಅನ್ನುವುದು ನಾನು ಕಂಡುಕೊಂಡ ಸತ್ಯ. ಅಮ್ಮನ ಖಾಸಗಿ ಡೈರಿಯನ್ನು ನಾನು ಓದಿದಾಗ ತಿಳಿದದ್ದು: ಆಕೆ ಯಾವುದೇ ಕಥೆ, ಕಾದಂಬರಿ ಬರೆಯುವ ಮುನ್ನ ಅದಕ್ಕೆ ಸಂಬಂಧಿಸಿದಂತೆ ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದಳು. ಕಥೆಯ ಸಾರಾಂಶವನ್ನು ಮತ್ತು ತಾನು ಮುಂದೆ ಬರೆಯಬೇಕೆಂದಿರುವ ಕಥಾವಸ್ತುವನ್ನು ಡೈರಿಯಲ್ಲಿ ಬರೆಯುವ ರೂಢಿ ಇಟ್ಟುಕೊಂಡಿದ್ದಳು. ಅಮ್ಮನ ಡೈರಿ, ಆಕೆಯ ಬರವಣಿಗೆ ಪೂರ್ವ ತಯಾರಿಗೆ ಸಾಕ್ಷಿಯಾಗಿತ್ತು. ನಾನು ಕೂಡ ಏನಾದರೂ ಬರೆಯುವ ಮುನ್ನ ಟಿಪ್ಟಣಿ ಮಾಡಿಕೊಳ್ಳುತ್ತೇನೆ. ಎಲ್ಲೋ ಒಂದು ಕಡೆ ನನಗೆ ಅರಿವಿಲ್ಲದೇ ಅಮ್ಮನ ಈ ಗುಣ ನನಗೂ ಬಂದಿರಬಹುದು ಅನ್ನುವ ಸಣ್ಣ ಖುಷಿ !

ಕನ್ನಡ ಸಾಹಿತ್ಯ ಲೋಕ ತ್ರಿವೇಣಿಯವರನ್ನು ಕಳೆದುಕೊಂಡು ಸುಮಾರು ಐವತ್ತು ವರ್ಷಗಳಾಗುತ್ತ ಬಂದಿದೆ. ಇಂದಿಗೂ ಆಕೆಯ ಕಾದಂಬರಿಗಳು ಜನಪ್ರಿಯವಾಗಿವೆ. ಅಸಂಖ್ಯ ಅಭಿಮಾನಿಗಳು, ಓದುಗರು ಇಂದಿಗೂ ಇದ್ದಾರೆ. ಆಕೆಯ ಕಥೆಗಳು, ಕಾದಂಬರಿಗಳು 40 ವರ್ಷಗಳ ಹಿಂದೆಯೂ ಸಿನಿಮಾ ಆಗಿವೆ, ಈಗಲೂ ಸಿನಿಮಾ ಆಗಲಿಕ್ಕೆ ಅಷ್ಟೇ ಅರ್ಹತೆಯನ್ನು ಹೊಂದಿವೆ. ಇದನ್ನು ನೋಡಿದಾಗ ಅಮ್ಮ ಆಯ್ದುಕೊಳ್ಳುತ್ತಿದ್ದ ಕಥಾವಸ್ತು ಇಂದಿಗೂ ಎಷ್ಟು ಪ್ರಸ್ತುತವೆನಿಸುತ್ತದೆ ಅನ್ನುವುದು ನನಗೆ ಮನವರಿಕೆಯಾಗಿದೆ. ಎಷ್ಟೋ ಜನರ ಜೀವನದ ಮೇಲೆ ಅವಳ ಕ್ರಾಂತಿಕಾರಿ ಕಥಾವಸ್ತುಗಳು ಪರಿಣಾಮ ಬೀರಿವೆ. ಇಂತಹ ಮಹಾನ್ ಲೇಖಕಿ, ಕಾದಂಬರಿಗಾರ್ತಿ ತ್ರಿವೇಣಿಯ ಮಗಳು ಅಂತ ಹೇಳಲಿಕ್ಕೆ ನನಗೆ ಅಭಿಮಾನವಿದೆ, ಹೆಮ್ಮೆಯಿದೆ. ಇವತ್ತಿಗೂ ತ್ರಿವೇಣಿ ಮಗಳು ಅಂದಾಕ್ಷಣ ಜನರು ತೋರಿಸುವ ಪ್ರೀತಿ, ಆದರವನ್ನು ನೋಡಿದರೆ, ನಾನು ಅದಕ್ಕೆ ಅರ್ಹಳಲ್ಲ ಅನಿಸಿದರೂ, ಅಭಿಮಾನಿಗಳ ಪ್ರೀತಿ ನೋಡಿ ಕಣ್ಣು ಹನಿಗೂಡುತ್ತದೆ.

ನನ್ನ ತಾಯಿಯನ್ನು ಆಕೆಯ ಪುಸ್ತಕಗಳಲ್ಲಿ ಕಂಡೆ ; ಅವಳ ಪ್ರೀತಿ ನನಗೆ ಸಿಗಲಿಲ್ಲ ಅಂತ ಎಷ್ಟೋ ಬಾರಿ ಕಣ್ಣೀರು ಹಾಕಿದ್ದಿದೆ. ತ್ರಿವೇಣಿ ಕಥೆ ಕಾದಂಬರಿಗಳನ್ನು ಓದಿ ನಾವೂ ಪ್ರಭಾವಿತರಾಗಿ ಬರವಣಿಗೆ ಪ್ರಾರಂಭಿಸಿದೆವು ಅಂತ ಹೇಳುವವರ ಕಣ್ಣುಗಳಲ್ಲಿ ಅಮ್ಮ ನನಗೆ ಕಾಣಿಸುತ್ತಾಳೆ. ಆಗ ನಾನು ಅಮ್ಮನ ಬಗ್ಗೆ ಭಾವಪರವಶಳಾಗುತ್ತೇನೆ, ವಿನೀತಗೊಳ್ಳುತ್ತೇನೆ. ಅಮ್ಮನ ಸಾಹಿತ್ಯಿಕ ಚಟುವಟಿಕೆಗಳ ಕುರಿತ ವೇದಿಕೆಗಳು, ವಿಚಾರ ವಿಮರ್ಶೆಗಳಲ್ಲಿ ನಾನು ಭಾಗಿಯಾದಾಗ ಆಕೆಯ ಬದುಕಿನ ಬಗ್ಗೆ ವಿದ್ವಾಂಸರು, ಲೇಖಕಿಯರು ಮಾತನಾಡುವಾಗ ಅಮ್ಮ ನನ್ನ ಜೊತೆಯಿರುವಂತೆ ಭಾಸವಾಗುತ್ತದೆ. ಅವಳ ಪುಸ್ತಕಗಳನ್ನು ವಿಮರ್ಶೆ ಮಾಡಿದಾಗ, ಅಲ್ಲಿ ಬರುವ ಪಾತ್ರಗಳನ್ನು ಓದಿದಾಗ ನನಗನ್ನಿಸುವುದು, ತ್ರಿವೇಣಿ ಕೇವಲ ತಾಯಿ ಮಾತ್ರವಲ್ಲದೇ, ನನಗೆ ಒಬ್ಬ ಒಳ್ಳೆಯ ಸ್ನೇಹಿತೆಯಾಗಿ, ಮಾರ್ಗದರ್ಶಿಯಾಗಿ ಇರುತ್ತಿದ್ದಳೇನೋ ! ನಮ್ಮಿಬ್ಬರ ಮಧ್ಯೆ ತಲೆಮಾರಿನ ಕಂದಕ ಬರದೇ ನನ್ನನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳುತ್ತಿದ್ದಳೇನೋ?

ಅಮ್ಮ ಕೇವಲ 35ನೇ ವರ್ಷಕ್ಕೆ ತೀರಿಕೊಂಡಳು ಅನ್ನುವುದು ನಿಜಕ್ಕೂ ನಂಬಲಾಗದ ಸಂಗತಿ. ಎಲ್ಲರೂ ತಿಳಿದುಕೊಂಡಿರುವ ಹಾಗೆ ಆಕೆ ಹೃದಯಾಘಾತ ಅಥವಾ ಗರ್ಭಸ್ರಾವದ ಬೇನೆಯಿಂದ ತೀರಿಕೊಂಡಿಲ್ಲ ; `ಪಲ್ಮನರಿ ಎಂಬಾಲಿಸಂ’ ಎಂಬ ಕಾರಣದಿಂದ ತೀರಿಕೊಂಡಳು ಅನ್ನುವುದು ಇತ್ತೀಚೆಗೆ ನಾನು ತಿಳಿದುಕೊಂಡ ಸತ್ಯ. ಆ ದಿನ ನನ್ನ ಅಜ್ಜಿ ಆಸ್ಪತ್ರೆಗೆ ಹೋಗಿ ತಿಂಡಿಕೊಟ್ಟು ಮನೆಗೆ ವಾಪಾಸ್ ಆಗಿದ್ದರು. ನಮ್ಮ ಸಂಬಂಧಿಕರೊಬ್ಬರು ಅವರ ಜೊತೆಗಿದ್ದರು. ಅಮ್ಮ ಖುಚರ್ಿಯಲ್ಲಿ ಹಿಂದಕ್ಕೆ ಒರಗಿ ಕುಳಿತಿದ್ದಳು. ಅವಳನ್ನು ಎಬ್ಬಿಸಲು ಹೆಸರು ಕರೆದಾಗ ಉತ್ತರ ಬರಲಿಲ್ಲವೆಂದು ಅಲುಗಾಡಿಸಿದಾಗ ಅವಳ ತಲೆ ಪಕ್ಕಕ್ಕೆ ವಾಲಿತು. ಅಮ್ಮ ಒಂದೇ ಒಂದು ಶಬ್ದ ಮಾಡದೇ, ನರಳಾಟವಿಲ್ಲದೇ, ಶಾಂತವಾಗಿ ಈ ಪ್ರಪಂಚವನ್ನು ತೊರೆದಿದ್ದಳು. ಅವಳ ದೇಹವನ್ನು ಎಡಬಿಡದೇ ಕಾಡುತ್ತಿದ್ದ ಆಸ್ತಮಾ ಖಾಯಿಲೆಯ ಜೊತೆ ಒಂದೊಂದು ಉಸಿರಿಗೂ ಜೀವನ ಪೂತರ್ಿ ಸೆಣಸಾಡಿ ಅಲ್ಪವಯಸ್ಸಿಗೆ ಸೋತು ಹೋದಳು. ಕೊನೆಗೂ ಅವಳ ದೇಹದ ಯಾತನೆ ಅಂತ್ಯವಾಯಿತು. ಜುಲೈ 29, 1963 ರಂದು ಆಕೆ ತೀರಿಕೊಂಡಳು. ಅಮ್ಮನ ಹೆರಿಗೆ ಮಾಡಿದ್ದ ಡಾಕ್ಟರ್ ಸ್ಟೀವನ್ಸ್ರನ್ನು ಮೈಸೂರಿನ ಮಹಾರಾಣಿ ಪ್ರತ್ಯೇಕವಾಗಿ ಬರಹೇಳಿ `ಏನಾಯಿತು? ಹೇಗಾಯಿತು?’ ಅಂತ ವಿಚಾರಿಸಿದ್ದರಂತೆ. ಇಂತಹ ಮಹಾನ್ ಕಾದಂಬರಿಗಾತರ್ಿಯನ್ನು ಕಳೆದುಕೊಂಡ ಕನರ್ಾಟಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಹಾರಾಣಿ ಹೇಳಿದರಂತೆ.

ಎಲ್ಲರೂ ತಮ್ಮ ತಾಯಿಯ ಸ್ಪರ್ಶ ಸುಖವನ್ನು ಅನುಭವಿಸುವಂತೆ, ನಾನು ಆಕೆಯ ಸ್ಪರ್ಶವನ್ನು ಅನುಭವಿಸಲೇ ಇಲ್ಲ. ನನ್ನನ್ನು ಕೊರೆಯುತ್ತಿದ್ದ ಈ ಕೊರಗು ಹಾಗೂ ಅಶಾಂತಿ ಅಂತಿಮವಾಗಿ ನನ್ನ ಮಗಳು ಹುಟ್ಟಿದ ಮೇಲೆ ದೂರವಾಗಿದೆ. ನನ್ನ ಅಮ್ಮ, ಮಗಳ ರೂಪದಲ್ಲಿ ನನಗೆ ಜನಿಸಿದ್ದಾಳೆ. ಅಮ್ಮ ಇದ್ದಿದ್ದರೆ ನನ್ನ ಮೇಲೆ ತೋರುತ್ತಿದ್ದ ಪ್ರೀತಿ, ವಾತ್ಸಲ್ಯ, ಕಾಳಜಿ, ಕರುಣೆ ಎಲ್ಲವನ್ನೂ ನನಗೆ ಆಕೆ ತೋರುತ್ತಿದ್ದಾಳೆ.

‍ಲೇಖಕರು Admin

9 May, 2016

1 Comment

  1. padma bhat

    e baraha odidaaga kanninalli neerannu hididittukollalu saadyavaagale illa..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading