ವೆಂಕಟೇಶ ಮುದಗಲ್
ಜನನಿ ತಾನೆ ಮೊದಲ ಗುರುವು ಎಂಬ ಉಕ್ತಿ ಅಕ್ಷರಶ: ನಮ್ಮಮ್ಮ ಸೀತಾಬಾಯಿ ಮುದಗಲ್ ಅವರಿಗೆ ಅನ್ವಯಿಸುತ್ತದೆ.
ನಮ್ಮಪ್ಪ ಮುದಗಲ್ ರಾಘವೇಂದ್ರರಾವ್ ವೃತ್ತಿಯಿಂದ ಶಿಕ್ಷಕರಾದರೂ ನಮ್ಮ ಪಾಲಿಗೆ ಅವರು ಒಲುಮೆ ತುಂಬಿದ ಎಂದೂ ಬತ್ತದ ಒರತೆ.
ಅದರೆ, ಅಮ್ಮ ಮಾತ್ರ ಓದಿನ ವಿಷಯದಲ್ಲಿ ವಜ್ರ ಹೃದಯಿ.
ಅವರ ಹೊಡೆತದಿಂದ ಪಾರಾಗಲು ಶ್ರದ್ಧೆಯಿಂದ ಓದಿ ಪಾಠ ಒಪ್ಪಿಸುವುದು ನಮಗಿದ್ದ ಏಕೈಕ ಆಯ್ಕೆ. ಅಮ್ಮನ ಹೊಡೆತಗಳಿಗೆ ಬ್ರೆಕ್ ಬೀಳುತ್ತಿದ್ದುದು ಆಗಾಗ ಮುದಗಲ್ ಗೆ ನಮ್ಮ ದೊಡ್ಡಮ್ಮ ಬಂದಾಗ ಮಾತ್ರ. ‘ಹಿಂಗ್ಯಾಕ ಹೊಡಿತಿಯೇ ಸೀತಾ’ ಎಂದು ತಂಗಿಯನ್ನು ಗದರಿ ಸುಮ್ಮನಾಗಿಸುತ್ತಿದ್ದರು.
ಈ ಮಧ್ಯಂತರ ಸುಖ ದೊಡ್ಡಮ್ಮ ಮರಳಿದೊಡನೆ ಮಾಯವಾಗುತ್ತಿತ್ತು. ‘ನೀವು ಉಢಾಳರಾಗದೆ ಕಲಿತು ಅನ್ನಕ್ಕ ಹತ್ತಗೊಳ್ರಿ ಅಂತಾ ನಾ ಬಡಿಯೋದು’ ಎಂದು ತಬ್ಬಿಕೊಂಡು ಅಳುತ್ತಿರುವ ದೃಶ್ಯ ಮರೆಯಲಾಗದು.
ಆಮೇಲೆ,ಅಮ್ಮನ ಅನುಕಂಪದ ಟ್ರೀಟ್, ಹುರಿದ ಶೆಂಗಾ ಮತ್ತು ಬೆಲ್ಲ ಏಟಿನ ನೋವನ್ನು ಮರೆಸುತ್ತಿತ್ತು.
ಅಮ್ಮನ ಏಟುಗಳು ತೋರಿದ ದಾರಿದೀಪಗಳಿಂದ ನಾವು ಐದು ಮಕ್ಕಳು ಜವಾಬ್ದಾರಿಯುತ ಸ್ಥಾನ ಗಳಿಸಿ ಬದುಕು ಸಾಗಿಸುತ್ತಿದ್ದೇವೆ.
ನಮ್ಮ ಇಂದಿನ ಸ್ಥಿತಿ ನೋಡಿ ಹಿರಿ ಹಿರಿ ಹಿಗ್ಗುವ ಅಪ್ಪ ಅಮ್ಮ ಇಬ್ಬರು ವೈಕುಂಠವಾಸಿಗಳಾಗಿದ್ದಾರೆ. ಅಪ್ಪನ ಪ್ರೀತಿ, ಅಮ್ಮನ ಏಟುಗಳು ನಮಗೆ ಕಲಿಸಿದ ಪಾಠ ಅಷ್ಟಿಷ್ಟಲ್ಲ. ನನ್ನ ಪ್ರಕಾರ ಅಮ್ಮ ಬರೀ ದೇವರು ಮಾತ್ರ ಅಲ್ಲ ಮಾರ್ಗದರ್ಶಿ ಸಹ ಹೌದು.
ನಿಮ್ಮ ವಿಶ್ವಾಸಿ,
ವೆಂಕಟೇಶ ಮುದಗಲ್





0 Comments