ಶ್ರೀಕಲಾ ಡಿ ಎಸ್

ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸಿದ್ದಾಪುರದತ್ತ ತೆರಳುವಾಗ 20 ಕಿ.ಮೀ.ನಲ್ಲಿ ತಾಳಗುಪ್ಪ ಎಂಬ ಊರಿದೆ. ಇದು ಕೊನೆಯ ರೈಲ್ವೇ ಸ್ಟೇಶನ್ ಎಂದೇ ಪ್ರಸಿದ್ಧ. ಇದು ನಮ್ಮೂರು. ಹಳ್ಳಿಯೂ ಅಲ್ಲದ ನಗರವೂ ಅಲ್ಲದ ಸೆಮಿ ಅರ್ಬನ್ ಊರು.
ಮನೆಯ ಪಕ್ಕದಲ್ಲೇ ಒಂದು ಗರ್ವ್ ಮೆಂಟ್ ಶಾಲೆ ಇದೆ. ಒಂದರಿಂದ ಐದರ ತನಕ ತರಗತಿಗಳಿವೆ. ಆರು ವರ್ಷಗಳ ಹಿಂದೆ ಮದುವೆ ಆದಾಗ ಶಾಲಾ ಮಕ್ಕಳಿಗೆ ಲಾಡು ಹಂಚಿ ಬಂದಿದ್ದೆ. ಆಮೇಲೆ ಒಂದೇ ಒಂದು ಬಾರಿಯೂ ಶಾಲೆಯ ಒಳಗೆ ಹೋಗಿರಲಿಲ್ಲ. ಆ ಮಕ್ಕಳು ‘ಜನಗಣ ಮನ ಅಧಿನಾಯಕ’ ಹಾಡುವಾಗ ನೆಟ್ಟಗೆ ನಿಂತು ಕೇಳಿಸಿಕೊಳ್ಳುವುದು ಊರಿಗೆ ಹೋದಾಗೆಲ್ಲಾ ನನ್ನ ಮತ್ತು ಮಗರಾಯನ ತಪ್ಪದ ಕೆಲಸವಾಗಿತ್ತು.
ಇವತ್ತು ಸಾರ್ಥಕನಿಗೆ ಅದೇನು ಉಮೇದು ಬಂತೋ? ಜಮಗಣಮನ ಹೇಳುವುದನ್ನು ಕೇಳುತ್ತಲೇ ಆ ಶಾಲೆಗೆ ಹೋಗೋಣ ಎಂದು ನನ್ನ ಎಳೆದೊಯ್ದ. ಅಲ್ಲಿರುವ ಟೀಚರ್ ಗಳು ಪ್ರೀತಿಯಿಂದ ಬರಮಾಡಿಕೊಂಡರು. ಸಾರ್ಥಕನ ಬೆಂಗಳೂರ ಶಾಲೆಯಲ್ಲಿ ತಪ್ಪಿಯೂ ಇಂಥಹ ಅವಕಾಶಗಳು ಸಿಗದಲ್ಲ? ಹಾಗಾಗಿ ನನಗೆ ಒಳಹೋಗಲೂ ಏನೋ ಇರಿಸುಮುರಿಸು. ಬೆಂಗಳೂರ ಬಹುತೇಕ ಶಾಲೆಗಳಲ್ಲಿ ಮಕ್ಕಳ ತರಗತಿ ಹೇಗಿದೆ ಎನ್ನುವುದು ತಿಳಿಯುವುದೇ ಇಲ್ಲ!
ಎರಡನೇ ತರಗತಿಯೊಳಗೆ ನಮ್ಮನ್ನು ಕರೆದು ಕೂರಿಸಿದರು. ಸಾರ್ಥಕ ಮಕ್ಕಳ ಜೊತೆ ಕೂತ. ನನಗೆ ಮಕ್ಕಳ ಎದುರಿನ ಟೀಚರ್ ಕೂರುವ ಬೆಂಚ್. ಒಂದೊಂದೇ ಮಕ್ಕಳ ಹೆಸರು ಕೇಳಿದೆ. ಸಾರ್ಥಕನನ್ನ ಎಲ್ಲರೂ ಬೆರಗುಗಣ್ಣಿಂದ ಮಾತನಾಡಿಸಿದರು. ಆ ಮಕ್ಕಳ ನೋಡುತ್ತಿದ್ದಂತೆ ನನಗೊಂದು ಕಥೆ ಹೇಳೋಣ ಎನಿಸಿತು.
ಟೀಚರ್ ಬಳಿ ‘ಈ ಮಕ್ಕಳಿಗೆ ನಾನು ಕಥೆ ಹೇಳಬಹುದಾ?’ ಅಂತ ಕೇಳಿದೆ. ಅವರು ಖುಷಿಯಿಂದಲೇ ಸರಿ ಎಂದವರು, ಎಲ್ಲಾ ಮಕ್ಕಳನ್ನು ಒಂದೆಡೆ ಸೇರಿಸಿದರು. ನಾನೊಂದು ಇರುವೆ- ಪಾರಿವಾಳದ ಪುಟ್ಟ ನೀತಿ ಕಥೆ ಹೇಳಿದೆ. ಮಕ್ಕಳಿಗೆಲ್ಲಾ ಹಿರಿಹಿರಿ ಹಿಗ್ಗು. ಸಾರ್ಥಕನೂ ಕೂತು ಕಥೆ ಕೇಳಿದ. ‘ಅಮ್ಮಾ,, ಇನ್ನೊಂದು ಕೃಷ್ಣ ಕಥೆ ಹೇಳು ಇವ್ರಿಗೆ’ ಅಂತ ಐಡಿಯಾ ಬೇರೆ ಕೊಟ್ಟ!
ಅಂತೂ ಕಥೆ ಹೇಳಿ ಮುಗಿಸಿ ಮಕ್ಕಳಿಗೆಲ್ಲಾ ಟಾಟಾ ಮಾಡಿ ಬರುವಾಗ ಅವರ ಕಣ್ಣಲ್ಲಿದ್ದ ಮಿನುಗು ನನ್ನನ್ನು ಸಂಪೂರ್ಣ ಆವರಿಸಿತ್ತು. ಬದುಕು ಇಂತಹ ಘಳಿಗೆಯಲ್ಲೇ ಸುಂದರ ಎನಿಸುವುದಲ್ಲವೇ?







0 Comments