‘ಪಾರ್ಲರ್ ಕಿಟಕಿಯಿಂದ’ ಜಯಂತ್ ಕಾಯ್ಕಿಣಿ ಇಣುಕಿದರು..

ಜಯಂತ್ ಕಾಯ್ಕಿಣಿ

make up kitಬಹು ಅಂತಸ್ತಿನ ಕಟ್ಟಡ ಅದು

ಅದರ ನಾಲ್ಕನೆ ಅಂತಸ್ತಿನಲ್ಲಿದೆ ಈ ಬ್ಯೂಟಿಪಾರ್ಲರು.

ಇದಕ್ಕೊಂದೇ ದೊಡ್ಡ ಕಿಟಕಿ.

ಕೆಳಗೆ ರಸ್ತೆಯಲ್ಲಿ ನಡೆವ ಜನ ಹೆಮ್ಮೆಯಿಂದ ಈ ಕಟ್ಟಡದ ಎತ್ತರ ನೋಡುತ್ತ ತಮ್ಮ ವೇಗವನ್ನು ಕಳೆದುಕೊಳ್ಳುತ್ತಿರುವಾಗಲೇ ಇಲ್ಲಿ ಉತ್ಕಂಠಿತ ಪೋರಿಯೊಬ್ಬಳ ಆರ್ತಮುಖಕ್ಕೆ ಬ್ರೈಡಲ್ ಮೇಕಪ್ ನಡೀತಿದೆ.

 

ಇಲ್ಲಿಂದ ನೇರ ಮದುವೆ ರಿಜಿಸ್ಟ್ರೇಶನ್ ಆಫೀಸಿಗೆ ಓಡಲಿದ್ದಾಳೆ ಅವಳು… ಕೆಳಗೆ ಬೈಕಿನ ಮೇಲೆ ಕೂತೇ ಕಾಯುತ್ತಿರುವ ಹೊಸ ಶರ್ಟಿನ ಉದ್ವಿಗ್ನ ಮದುಮಗನೊಂದಿಗೆ.

ತನ್ನ ಧೈರ್ಯಕ್ಕೆ ತಾನೇ ಹೆದರಿದಂತಿದ್ದಾನೆ ಅವನು. ಅವನನ್ನು ಸಂತೈಸುವ ಶಕ್ತಿ ಗೋಡೆಯ ಯಾವ ಬೃಹತ್ ಪೋಸ್ಟರುಗಳಿಗೂ ಈಗ ಇಲ್ಲ!

ಇದ್ದಲ್ಲೆ ಮತ್ತೆ ಮತ್ತೆ ಹಿಂದಿರುಗಿ ನೋಡುತ್ತಿದ್ದಾರೆ ಇಬ್ಬರೂ, ಅಗೋಚರ ಸೈನ್ಯವೊಂದು ಬೆನ್ನಟ್ಟಿ ಬರುತ್ತಿರುವಂತೆ.

ಅಲ್ಲಾಡಬೇಡಾ ಹಾಳಾಗುತ್ತದೆ!

flying manನಿನ್ನ ಈ ಹುಬ್ಬಿನ ಇರಾದೆಗೆ ಕುಣಿಯಬೇಕು ನಿನ್ನ ಹೀರೋ ನಾಳೆಯಿಂದ.. ಹಾಗೆ ಚೂಪಾಗಿಸುತ್ತೇನೆ. ಅದನ್ನು.. ಅಲ್ಲಾಡಬೇಡಾ-ಬೆದರಿಸುತ್ತಿದ್ದಾಳೆ ಬ್ಯೂಟಿಶಿಯನ್-ಅಶೋಕ ವನದಲ್ಲಿ ಸೀತೆಯ ಪಕ್ಕ ಕೂತ ತಾಟಕಿಯಂತೆ…

ಹೆರಿಗೆ ಕೋಣೆಯಲ್ಲಿ ಹೆರಿಗೆಗೆ ತಳ್ಳುವ ಆಯಾಳಂತೆ ‘ಹೆದರಬೇಡ… ನೋಡು… ನೋಡು ಈ ಕಿಟಕಿಯಿಂದ ದೂರದ ಸಿಟಿ ಮಾರ್ಕೆಟ್ ಕಾಣುತ್ತದೆ. ರಿಲ್ಯಾಕ್ಸ್.. ರಿಲ್ಯಾಕ್ಸ್ …’ ಅನ್ನುತ್ತಾಳೆ.

 

ಇಂಥದೇ ಒಂದು ಬಿಸಿಲಿನ ಅಪವೇಳೆಯಲ್ಲಿ ಕದ್ದು ಪಿಕ್ಚರಿಗೆ ಹೋದಂತೆ, ಇಂದು ಇನ್ನೇನು ಹದಿನೈದು ನಿಮಿಷದಲ್ಲಿ ತನ್ನ ಹೊಸದೊಂದು ದೈನಿಕ ಧಾರಾವಾಹಿಯಲ್ಲಿ ಕಾಲಿಡಲಿದ್ದಾಳೆ ಇವಳು. ಇಲ್ಲ ಈ ಪಾರ್ಲರಿನ ಈ ಯಾವ ಸಾಲುಗನ್ನಡಿಗಳಿಗೂ ಅವಳನ್ನು ಸಂತೈಸುವ ಶಕ್ತಿ ಇಲ್ಲ. ಅವು ಗ್ಯಾಸ್ಸ್ಟವ್, ಹ್ಯಾಂಗರು, ಬಕೆಟ್, ಹಿಂಡಿಟ್ಟ ಬಟ್ಟೆಗಳನ್ನು ಅಡಗಿಸಿಡುವಲ್ಲೇ ನಿರತವಾಗಿವೆ. ಒಂದೊಂದು ಕನ್ನಡಿಯಲ್ಲೂ ಒಂದೊಂದು ನಸುಗತ್ತಲ ಬಿಡಾರ. ಅಗುಳಿ ನಿಲ್ಲದ ಬಾಗಿಲು. ಪುಟ್ಟ ಪ್ಲಾಸ್ಟಿಕ್ ಕರಂಡಕದಲ್ಲಿ ಸುರುಳಿ ಸುತ್ತಿ ಕೂತಿರುವ ಮಂಗಳಸೂತ್ರದ ತುಂಬ ಸವೆದ ಸೇಫ್ಟಿ ಪಿನ್ನುಗಳು. ಈ ಪಾರ್ಲರ್ನ ಈ ದೊಡ್ಡ ಒಂಟಿ ಕಿಟಕಿಯಿದೆಯಲ್ಲ, ಅಲ್ಲಿಂದ ಬಗ್ಗಿ ನೋಡಿದರೆ, ಬಲ್ಲವರು ‘ಸಮಾಜ’ ಅಂತ ಕರೀತಾರಲ್ಲ, ಅದು ಬೀದಿಯಲ್ಲಿ ಕೆಳಗೆ ಓಡಾಡುವುದನ್ನು ನೋಡಬಹುದು. ಬಲ್ಲವರ ಪ್ರಕಾರ ಇದು ಹೊರಗೇ ಇರುತ್ತದೆ. ಬಾಗಿಲು ಹಾಕಿಕೊಂಡರೆ ನಿಂತೇ ಹೋಗುವ ಟ್ರಾಫಿಕ್ ಸದ್ದಿನಂತೆ.. ಅಥವಾ

‘ಪುಕ್ಕಟೆ ಫೇಶಿಯಲ್ ಮಾಡ್ತೇವೆ ಬಾರೋ…’ ಎಂದರೂ ಎಂದೂ ಒಳಗೆ ಬರದೆ ಬೀದಿಯಲ್ಲೆ ಆಡಿಕೊಂಡಿರುವ ಚಂದ್ರನಂತೆ…

ಅರೇ! ಮನೇನೂ ಅಲ್ಲೆಲ್ಲೋ ದೂರದಲ್ಲಿದೆ. ಕನ್ನಡಿಯಾಚೆಯ ಕನ್ನಡಿಯ ಬೆನ್ನಲ್ಲಿ…ಸಮಾಜವೂ ಹೊರಗಿದೆ ಅಲ್ಲೆಲ್ಲೊ… ಜಿನಸಿ ತರಕಾರಿ ಚೌಕಾಶಿ ಮಾಡುತ್ತ, ವಾರ್ಡುಗಳ ಹೊರಗೆ, ಆಪರೇಶನ್ ಥಿಯೇಟರಿನ ಹೊರಗೆ, ರೇಷನ್ ಅಂಗಡಿಯ ಹೊರಗೆ… ಕಾಯುತ್ತ… ಹಾಗಾದರೆ ಇಲ್ಲೇನಿದೆ? ಕೇವಲ ಪ್ರಸಾದನ ಸಾಮಗ್ರಿ! ಬಣ್ಣದ ಹೇರ್ ಡೈ, ಕರ್ಲಿಂಗ್ ಬ್ರಶ್ಶು, ರೋಮಗಳ ಹೆರೆದು ನಾಜೂಕುಗೊಳಿಸುವ ನಯದ ತಂತ್ರ. ಒಂದು ನಿರಂತರ ಶಾಶ್ವತ ಮಹಾ ದೈನಿಕ ಧಾರಾವಾಹಿಯ ಪಾತ್ರಗಳ ಸಜ್ಜು ಕೋಣೆ ಇದು… ಡೈಲಾಗೇ ಸಿಕ್ಕಿಲ್ಲವಲ್ಲ ಇನ್ನೂ….

‘ಸೊಪ್ಪು, ಸೊಪ್ಪು, ಹರಿವೇ ಸೊಪ್ಪು’-ಯಾರ ಡೈಲಾಗನ್ನು ಯಾರೋ ಕೂಗುತ್ತಿದ್ದಾರೆ ದೂರದಲ್ಲಿ…

‘‘ನಮ್ಮ ಯಜಮಾನ್ರಿಗೆ ಬೆಳಗ್ಗೆ ಮಾಡಿದ ಪಲ್ಯ.. ರಾತ್ರಿ ಆಗೋದೇ ಇಲ್ಲ’’ ಯಾರು ಬರೆದರು ಈ ದಡ್ಡ ಡೈಲಾಗನ್ನು! ತಮ್ಮ ತಮ್ಮ ಮಡದಿಯರಿಂದ ಯಜಮಾನ್ರು ಅಂತ ಕರೆಸಿಕೊಂಡು ಹೆಮ್ಮೆಪಡುವ ಮೂರ್ಖ ಪುರುಷರು. ಅವರನ್ನು ಹಾಗೆ ಕರೆದೇ ತಮ್ಮನ್ನು ಒಡೆತನದ ವಸ್ತುಗಳನ್ನಾಗಿಸಿ ಗಿರವಿಗಿಟ್ಟುಕೊಂಡ ಮೂಕ ಮಹಿಳೆಯರು -ಇರೋತನಕ- ಈ ‘ಪವರ್ ಕಟ್’ ತಪ್ಪಿದ್ದಲ್ಲ ಬಿಡಿ. ಹೀಗಾಗಿ ಲಿಫ್ಟ್ ನಡೀತಿಲ್ಲ ಈಗ.

coinsನಾಲ್ಕು ಮಹಡಿ ಹತ್ತಿ ಬಂದಾಗ, ಬಂದವರ ಕತ್ತಿನ ಮೇಲೆ ಮುಖವೇ ಇರುವುದಿಲ್ಲ. ಇನ್ನು ಬ್ಲೀಚಿಂಗ್ ಎಲ್ಲಿಂದ ಮಾಡೋದು.

ನೋಡಿ, ಈ ನಿತ್ಯ ಕೆಲಸದ ಪುಟ್ಟ ಪೋರ, ಬಾಲ ಕಾರ್ಮಿಕ ಈ ವಿಶಾಲ ಕಿಟಕಿಯ ಗಾಜುಗಳನ್ನು ಹೇಗೆ ಎಚ್ಚರದಿಂದ ಹೊರಗೆ ಬಾಗಿ ಒರೆಸುತ್ತಿದ್ದಾನೆ…

ಈ ರೆಡೀ ಮದುಮಗಳು ‘ಏಯ್ ಬಗ್ಗಬೇಡಾ ಹುಷಾರು’ ಎಂದು ಎಚ್ಚರಿಕೆ ನೀಡುತ್ತಿದ್ದಾಗಲೇ ಒಂದೇ ಕೈಯಿಂದ ಬಿಲ್ಲಿನಂತೆ ಬಾಗಿ ಬಾಗಿ ಬಳುಕಿ ಆತ ಉಜ್ಜುತ್ತಿದ್ದಾಗಲೇ… ‘ಯಪ್ಪಾ!  ಅಂಥ ಅವನ ಆರ್ತ ಉದ್ಗಾರಕ್ಕಿಂತ ಹಗುರಾಗಿ ಅವನಿಗರಿವಾಗುವ ಮುನ್ನವೇ… ಅವನ ಜೇಬಿನಿಂದ ಒಂದು ರೂಪಾಯಿಯ ನಾಣ್ಯವು ಜಾರಿ ಸ್ಲೊ ಮೋಶನ್ನಲ್ಲಿ ಕೆಳಗೆ… ಒಂದೊಂದೇ ಅಂತಸ್ತು ದಾಟುತ್ತ… ಕೆಳಗಿನ ಬೀದಿಯಲ್ಲಿ ಚಲಿಸುತ್ತಿರುವ ಸಮಾಜದ ಮೇಲೆ… ಇನ್ನೇನು… ಬೀಳುತ್ತಿದೆ… ಅಷ್ಟರಲ್ಲಿ ಅದನ್ನೇ ದಿಟ್ಟಿಸಿದ ಪೋರ ದಿಗ್ಗೆಂದು ಈ ಕಡೆ ಚಿಮ್ಮಿ, ಒಂದೇ ಉಸುರಿನಲ್ಲಿ ಬಿಟ್ಟ ಬಾಣದಂತೆ.. ನಾಲ್ಕು ಅಂತಸ್ತಿನ ಮೆಟ್ಟಿಲುಗಳನ್ನು ಸೂಪರ್ಮ್ಯಾನ್ನಂತೆ.. ಓಡುತ್ತ ದಾಟಿ ಕಣ್ಣಾಚೆಯ ಆ ಸಮಾಜವೆಂಬ ಸಮುದ್ರದ ಅಲೆಗಳಲ್ಲಿ ಈಜಿ ಆಳದಿಂದ, ಅಪಾರ ಕೌಶಲ್ಯದಿಂದ ಆ ನಾಣ್ಯವನ್ನು ಮುತ್ತಿನಂತೆ ಹೆಕ್ಕಿ ಮತ್ತೆ ನಾಲ್ಕೂ ಅಂತಸ್ತನ್ನು… ಬೆಳಕಿನ ವೇಗದಲ್ಲಿ ಏರಿ ಎದುರು ನಿಂತು ಪುಟ್ಟ ದೇವರಂತೆ ಅಂಗೈ ಚಾಚಿ ನೋಡಿ- ಎಂದು ತೋರಿಸಿ ಏದುಸಿರಲ್ಲಿ ನಗುತ್ತಿದ್ದಾನೆ. ಎಲ್ಲವನ್ನು, ಬಲ್ಲವರೇ, ಅಂದಾಜಿದ್ದರೆ, ಧೈರ್ಯವಿದ್ದರೆ ಹೇಳಿ ನೋಡುವಾ-ಈ ನಾಣ್ಯದ ಬೆಲೆಯೆಷ್ಟು?

‍ಲೇಖಕರು Admin

February 20, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. sangeetha raviraj

    ತುಂಬಾ ಅಂದ್ರೆ ತುಂಬಾನೆ ಚೆನ್ನಾಗಿದೆ ಬರಹ. ಬಹಳ ಇಷ್ಟವಾಯಿತು ನಂಗೆ

    ಪ್ರತಿಕ್ರಿಯೆ
  2. ರಘುನಂದನ ಕೆ

    ಆಹಾ… ಸಮಾಜ ಎನ್ನುವ ಟ್ರಾಫಿಕ್ ಸದ್ದಿನಾಚೆ, ಮೆಲ್ಲನೆ ಮನದೊಳಗೆ ಸೇರಿದೆ ಬರಹ,
    ಬಹಳ ದಿನಗಳ ನಂತರ ಮತ್ತೆ ಬೊಗಸೆಯಲ್ಲಿ ಮಳೆ ಸುರಿದಂತೆ…

    ಪ್ರತಿಕ್ರಿಯೆ
  3. Ahalya Ballal

    ಮೊದಲು ಓದಿದಾಗಲೂ ಇಷ್ಟವಾಗಿತ್ತು. ಈಗಲೂ.

    ಪ್ರತಿಕ್ರಿಯೆ
  4. samyuktha

    Thrilled by reading it….!
    ಓದಿ ಇದರ ಗುಂಗಲ್ಲೇ ಇದ್ದೆ. ಸುಮ್ಮನೇ ಇದನ್ನು ಮುಂದುವರೆಸೋಣ ಎಂದೆನಿಸಿ…. ಅನಿಸಿದ್ದು ಬರೆದಿದ್ದೇನೆ.
    ತಪ್ಪೆನಿಸಿದರೆ ಬೇಸರಿಸಬೇಡಿ 🙂



    ಕಣ್ಣತುಂಬ ಕನಸ ಹೊತ್ತಿರುವ, ಬೆದರಿದ ಜೀವದ ಗೊಂಬೆ ಆ ಮದುಮಗಳು, ಪ್ಲಾಸ್ಟಿಕ್ಕಿನ ಬಾರ್ಬಿಯಾಗುವ ತಯಾರಿಯಲ್ಲೇ ಮುಖ ನಿರ್ಮಮವಾಗಿ ಆ ಬ್ಯೂಟಿಶಿಯನ್ ಕೈಯಲ್ಲಿಟ್ಟು ಗಾಜೊರೆಸುವ ಹುಡುಗನನ್ನೇ ನೋಡುತ್ತಿರುವಾಗ, ಪಕ್ಕದ ಕಮ್ಫ಼ರ್ಟ್ ಸೀಟಿನ ಮೇಲೆ ಥ್ರೆಡ್ಡಿಂಗ್ ಮಾಡಿಸಿಕೊಳ್ಳಲು ಕಾಯುತ್ತಿದ್ದ ಮಧ್ಯವಯಸ್ಕ ಹೆಂಗಸೊಬ್ಬಳು ಇವಳನ್ನು ಗಮನಿಸುತ್ತಾಳೆ.

    ಈಕೆ ಅವಳ ತೀಡುತ್ತಿದ್ದ ಹುಬ್ಬಿನಡಿಯ ಇರಾದೆಗಳ ತಣ್ಣನೆಯ ಪಳೆಯುಳಿಕೆಯಾಗಿದ್ದಳು. ನಾಲ್ಕು ಮಹಡಿ ಏರಲಾಗದೆ ಲಿಫ಼್ಟಿಗಾಗಿ ಕಾಯುತ್ತಾ ನಿಂತಾಗ, ಕರೆಂಟಿಲ್ಲವೆಂದು ತಿಳಿದು, ನಿಧಾನವಾಗಿ ಒಂದೊಂದೇ ಮೆಟ್ಟಿಲೇರುತ್ತಾ ಒಂದಂತಸ್ತು ಏರಿದ ಕೂಡಲೇ, ಕರೆಂಟು ಬಂದದ್ದು ತಿಳಿದು, ಲಿಫ಼್ಟಿನ ಮೂಲಕ ಬೇಗ ಪಾರ್ಲರಿಗೆ ಸೇರಿ… ಏ.ಸಿಯ ರಿಮೋಟನ್ನು ಒತ್ತಿ ಒಂದೆರಡಂಕಿ ಹೆಚ್ಚಿಸಿ, ಉಸ್ ಎಂದು ಕೂತಿದ್ದಳು. ಘಳಿಗೆಗೊಮ್ಮೆ ಪುಸುಕ್ ಎಂದು ಘಮಿಸುವ ಸೆಂಟನ್ನು ಎರಚುವ ಮೇಜಿನ ಮೇಲಿನ ಪುಟಾಣಿ ಡಬ್ಬದೆದುರಿಗೇ ಕೆಳಗೆ, ಅಷ್ಟೇನೂ ಫ಼್ರೆಶ್ ಎನಿಸದ ಹರಿವೇ ಸೊಪ್ಪಿನ ಬುಟ್ಟಿಯನ್ನು ಬಿಳೀ ಬಣ್ಣದ ಬಟ್ಟೆಯಲ್ಲಿ ಮುಚ್ಚಿಟ್ಟಿದ್ದಾಳೆ. ಮನೆಯೂಟವನ್ನೇ ಮಾಡದ ಮಗ, ಅರ್ಜೆಂಟಾಗಿ ಕೆಲಸದ ಮೇಲೆ ಡೆಲ್ಲಿಗೆ ಹೊರಡಬೇಕಾದ ಗಂಡ, ಮೀಟಿಂಗಿಗೆ ಅರ್ಧ ತಯಾರಾದ ಪ್ರೆಸೆಂಟೇಶನ್ನೂ, ನಿನ್ನೆಯಷ್ಟೇ ಓದಿಸಿಕೊಂಡು ತೂಫ಼ಾನಿನಲ್ಲಿ ಸಿಲುಕಿಸಿದ ಜಯಂತರ ತೂಫ಼ಾನ್ ಮೇಲ್, ಎಲ್ಲವೂ, ಆ ಸೆಂಟಿನ ಘಮಲು ಮತ್ತು ಹರಿವೇ ಸೊಪ್ಪಿನ ಹಸಿ ಸೊಗಡಿನ ಬೆರಕೆ ಉಂಟುಮಾಡಿದ ವಿಚಿತ್ರ ವಾಸನೆಯಲ್ಲಿ ಹಾಗೇ ತೇಲಿಬಂದು ಹೋದ ನೆನಪಿನ ಅಲೆ.

    ಅವಳಿಗೆ ಕಿಟಕಿಯಾಚೆಗಿನ ಬಿಸಿಲು, ಒಣ ಹವೆ, ಸಿಗ್ನಲ್ಲಿನ ಭರಾಟೆ ಯಾವುದೂ ಹೊಸತಲ್ಲ! ಕಂಡಿದ್ದಾಳೆ, ಉಂಡಿದ್ದಾಳೆ, ಈಗ ಕಾಣಿಸದೆ ಮರೆಮಾಚಿಸಲು ಪಾರ್ಲರಿನಲ್ಲಿ ಯತ್ನಿಸುತ್ತಿದ್ದಾಳೆ. ಹೊಸ ಮದುಮಗಳ ಕಣ್ಣ ಸಿಗ್ಗಿನ ಬೆಳಕು ಇವಳ ಹೊಕ್ಕಳ ಹಾಯ್ದು, ಬಿಸಿಲ ಝಳಪಿಗೆ ಹೊಳೆಯುತ್ತಿರುವ ತನ್ನ ಬಿಳಿಗೂದಲ ನೇರ ಗೆರೆಯನ್ನು ಕನ್ನಡಿ ನೆನಪಿಸುತ್ತದೆ.
    ಆ ಹೊಸ ಹುಡುಗಿಯ ಸಂಭ್ರಮದ ಪರಿಗೆ ಇವಳ ನಿರ್ಭಾವುಕ ನೆರಳು ತಾಕದಂತೆ ಇವರಿಬ್ಬರ ನಡುವೆ ನಿಂತ ಬ್ಯೂಟಿಶಿಯನ್ “ಮೇಡಮ್ ಇನ್ನು ಫ಼ೈವ್ ಮಿನಿಟ್ಸ್, ಬಂದೆ” ಎಂದು ಎಚ್ಚರಿಸುತ್ತಾಳೆ. ಕೆಡವಿದ ಲಹರಿಯನ್ನು ತೊರೆದು, ಆಲ್ಮೋಸ್ಟ್ ತಯಾರಾದ ಮದುಮಗಳ ಕಡೆ ಕನ್ನಡಿಯಲ್ಲೇ ನೋಡಿ ಒಂದು ಸಣ್ಣ ನಗೆ ಬೀರುತ್ತಾಳೆ. ಸುಂದರ ಪುತ್ಥಳಿಯಂತೆ ತಯಾರಾದ ಆಕೆ, ನಾಲ್ಕು ಮಹಡಿ ಕೆಳಗಿರುವ ಅವಳ ಹುಡುಗನಿಗೆ, “ಇಗೋ ಆಯ್ತು ಬಂದೇ…” ಎಂದು ಜೊತೆಗೆ ನಾಚಿ ನಗುವ ಸ್ಮೈಲಿ ಹಾಕಿ ಮೆಸೇಜು ಕಳಿಸಿ…ಕನ್ನಡಿಯಲ್ಲಿ ತನ್ನನ್ನೇ ನೋಡಿ ಸಂಭ್ರಮದಿಂದ ರಮಿಸಿಕೊಳ್ಳುತ್ತಾಳೆ. ಸಾಧಾರಣ ಹುಡುಗಿಯನ್ನು ಸುಂದರ ಮದುಮಗಳನ್ನಾಗಿಸಿದ್ದು ಆ ಬ್ಯೂಟಿಶಿಯನ್ನೇ ಎಂದು ಅವಳಿಗೆ ಖಚಿತವಾಗಿ ಆ ಕ್ಷಣಕ್ಕೆ ಅವಳೊಬ್ಬಳು ಗಂಧರ್ವ ಕಿನ್ನರಿಯಾಗಿ ಕಾಣಿಸಿ “ಥ್ಯಾಂಕ್ಯೂ…” ಎಂದು ಧೀರ್ಘವೆಳೆಯುತ್ತಾಳೆ.

    ಗೋಡೆಯಗಲಕ್ಕೂ ಹರಿದಿದ್ದ ಆರಡಿ ಉದ್ದದ ಕನ್ನಡಿಯಲ್ಲಿ….ಇವರಿಬ್ಬರೂ, ಬ್ಯೂಟೀಶಿಯನ್ನೂ, ಹಿಂದಿರುವ ಅಗಲದ ಕಿಟಕಿಯಾಚೆಗಿನ ನಗರದ ಮೆಟ್ರೋ ರೈಲೂ ಎಲ್ಲವನ್ನೂ ಒಟ್ಟಿಗೇ ಸುಮ್ಮನೇ ನೋಡುತ್ತಾ ಕೂತ ಆಕೆಯ ಭುಜವನ್ನು ಹಿಡಿದು, “ಬರೀ ಐಬ್ರೋ ಸಾಕಾ ಆಂಟೀ, ಫ಼ೇಶಿಯಲ್ ಮಾಡಿಸಿಕೊಳ್ಳಿ, ಸ್ಕಿನ್ ತುಂಬಾ ಡ್ರೈ ಆಗಿದೆ” ಎನ್ನುತ್ತಾ, ತುಟಿಗಳ ನಡುವೆ ದಾರ ಹಿಡಿಯುತ್ತಾಳೆ ಬ್ಯೂಟಿಶಿಯನ್. ಕಿಟಕಿಯ ಗಾಜೊರೆಸುವ ಹುಡುಗ ನಾಲ್ಕು ಮೆಟ್ಟಿಲು ಇಳಿದು ಹತ್ತಿ ಬಂದ ಮಿಂಚಿನ ವೇಗದಲ್ಲೇ ಅವರೆದುರಿಗಿದ್ದ ಕನ್ನಡಿಗೆ ಸೋಪಿನ ನೀರೆರಚುತ್ತಾ ಒರೆಸುತ್ತಾ ಮಸುಕಾಗಿಸುತ್ತಾನೆ. ಕನ್ನಡೀಯ ಮೇಲೆ ಚಕಚಕನೆಂದು ಹರಿಯುವ ಆ ಹುಡುಗನ ಕೈಯ ಚುರುಕು ಹೆಚ್ಚು ವೇಗವೋ, ಕಿಟಕಿಯಾಚೆಗಿನ ಜಗತ್ತನ್ನು ಬೇಗ ಮೆಟ್ಟಿಲಿಳಿದು ಸೇರುತ್ತಿರುವ ಆ ಹುಡುಗಿಯ ಸಡವರ ಹೆಚ್ಚು ವೇಗವೋ ತಿಳಿಯದೆ ಈ ಹೆಂಗಸು ಕಣ್ಣು ಮುಚ್ಚಿ ಕಂಫ಼ರ್ಟ್ ಸೀಟಿಗೊರಗಿ, ಸಿದ್ಧಳೆಂಬಂತೆ ಹುಬ್ಬು ಮೇಲೇರಿಸುತ್ತಾಳೆ…

    ಪ್ರತಿಕ್ರಿಯೆ
  5. ಜೀವ ಮುಳ್ಳೂರು

    ನಿಮ್ಮ ರೂಪಕ ಶಕ್ತಿಗೊಂದು ಸಲಾಮ್…..

    ಪ್ರತಿಕ್ರಿಯೆ
  6. lakshmi

    Double thrilled..!!
    ಸಿಗ್ಗಿನ ಮದುಮಗಳು ಬಾಗುವ ಬಿಲ್ಲಿನ ಪೋರನ ನಿಸ್ತೇಜಳಾಗಿ ದಿಟ್ಟಿಸಿದಳೋ ಮನದ ಆತಂಕಕ್ಕೆ ಇನ್ನಷ್ಟು ಆತಂಕವ ಬೆರಸಿ ನೋಡಿದಳೋ ಅವಳಿಗದು ಹೊರ ಜಗತ್ತಷ್ಟೆ.. ಜಗತ್ತು ಕಟ್ಟಡದ ಕೆಳಗೆ ಓಡುತ್ತಿದೆ ಪುರುಸೊತ್ತಿಲ್ಲದೆ.ಇವಳಿಲ್ಲಿ ಹೊಸ ಜಗತ್ತಿಗೆ ಕಾಲಿಡಲು ತಯಾರಾದರೂ ಆಗುತ್ತಿದ್ದರೂ ಅದೇನದು ಬೇಸರ..ಸಾಲದೆಂಬಂತೆ ಕಿಟಕಿಯಾಚೆ ಮೆಟ್ರೋ ರೈಲು,ಒಳಗೆ ಲಿಫ್ಟು ದೃಷ್ಟಾಂತಕ್ಕೆ.ರಾಕೆಟ್ಟಿನ ವೇಗದಲ್ಲಿ ನಾಣ್ಯ ತರಲು ಹೋದ ಹುಡುಗನಿಗ್ಯಾರೋ ಹತ್ತಿರದವರು ನೀಡಿರಬೇಕು ನಾಣ್ಯವ ತಮ್ಮ ನೆನಪಿಗೆ ..ಬಹುಶಃ ಬೆಲೆ ಕಟ್ಟಲಾಗದೇನೊ..ಅದಕೆ ಮೆಟ್ಟಿಲು ಹತ್ತಿ ಬರುವಾಗಷ್ಟು ತೃಪ್ತಿ ಮತ್ತೆ ಸಿಕ್ಕಿದ್ದಕ್ಕೆ,ದಕ್ಕಿದ್ದಕ್ಕೆ..

    ಪ್ರತಿಕ್ರಿಯೆ
  7. Sangeeta Kalmane

    ಆಹಾ!ಅದೆಷ್ಟು ಸುಂದರ ಅವಳ ಅವಸ್ಥೆ. ಓದಿ ನಡೆದ ಹಳೆ ಘಟನೆ ನೆಪಿಗೆ ಬಂತು. ಈ ಕಥೆ ಮುಂದುವರೆಸುವ ಸಣ್ಣ ಪ್ರಯತ್ನ.
    ————–
    ಲಂಗು ಲಗಾಮಿಲ್ಲದ ಯೌವ್ವನದ ಹುಚ್ಚು ಹೊಳೆಯಲ್ಲಿ ಅಂಟಿಕೊಂಡ ಮನದನ್ನನ ವಿಷಯ ಮುಚ್ಚಿಟ್ಟು ಮನೆಯವರ ಒತ್ತಾಯಕ್ಕೆ ಮಣಿದು ಅವರು ತೋರಿದ ಹುಡುಗನ ಜೊತೆ ಎಂಗೇಜಮೆಂಟ ಮಾಡಿಕೊಂಡು ಕಣ್ ತಪ್ಪಿಸಿ ಕಾಲಿಗೆ ಬುದ್ಧಿ ಹೇಳಿ ಸುಯ್ಯ…. ಅಂತ ಇನಿಯನ ಬೈಕ್ ಹತ್ತಿ ಬಂದೆ ಬ್ಯೂಟಿಪಾಲ೯ರ ಮಾಯಾಂಗನೆ ಕೈಯಲ್ಲಿ ತಗಲಾಕೊಂಡೆ. ಕುಚಿ೯ ಆಕಡೆ ಈ ಕಡೆ ತನಗೆ ಬೇಕಾದಂತೆ ತಿರುಗಿಸುತ್ತಾಳೆ ನನ್ನ ಗಿರಗಿಟ್ಟಿ ಗೊಂಬೆ ಮಾಡ್ತಿದ್ದಾಳೆ. ಮೊನ್ನೆ ತಾನೆ ರೆಡಿ ಮಾಡಿದ್ರಲ್ಲ ಎಲ್ಲ ಸೇರಕಂಡು ಪಟ್ಟದ ಗೊಂಬೆ ಅಂದ್ರು ಕಂಡವರು. ಈಗೇನು ಅನ್ನಬಹುದು. ಎಲ್ಲರ ಮುಖ ಬಾಡಿಹೋದ ಹರಿವೆ ಸೊಪ್ಪಾಗಿರಬೇಕು. ನನಗೊ ಕಾಲೆಲ್ಲ ತರ ತರ ನಡುಗುತ್ತಿದೆ. ಓಡಿ ಹೋಗಿ ರಿಜಿಸ್ಟರ್ ಮ್ಯಾರೇಜು. ಅಯ್ಯೋ ಅಮ್ಮ, ಇರಮ್ಮ ನಿನ್ನ ಹುಬ್ಬು ಒಳ್ಳೆ ಬಾಣದಾಗೆ ಮಾಡಿ ಇನಿಯನ ಕಣ್ ಸೆಳೆಯೋದು ಬ್ಯಾಡ್ವಾ. ಕಿರುಗಣ್ಣು ಹಾಯಿಸಿದಾಗೊ ಕಾಣೊ ಆ ಹುಡುಗನ ಕೈನಲ್ಲಿ ಸಿಕ್ಕಿರೋದು ನಾಕಾಣೆ. ಇಷ್ಟು ಪರದಾಡೊ ಬದುಕಿಗೆ ಮಾಡಿದ ಪಾಪ ತೊಳಿಲಿ ಅಂತ ಕೋಟಿ ತೀಥ೯ದಲ್ಲಿ ಮಿಂದೆದ್ದು.ಓಡಿಬಂದೆನಲ್ಲ. ನಲ್ಲನ ಬೈಕೇರಿ ನಾ ಬೇಗ ಹೋಗಬೇಕು . ಇವಳ.ಕೈಚಳಕ್ಕಿಂತ ನನ್ನ ಮನಸ್ಸು ಜೋರಾಗಿ ಓಡ್ತಿದೆ. ಬಿಟ್ಟಾಕು ಹುಡುಗ ಜೀವದ ಭಯ ಬಿಟ್ಟು ನಾಕಾಣೆ ಹಿಡಿಯೊ ಕಸರತ್ತು ಇನ್ನ್ಮೇಲೆ ನಾ ಕೊಡುವೆ ಮತ್ತೊಂದಾಣೆ. ಊಹಿಸ್ರೆಲಾ ಇದೆಷ್ಟು ಆಣೆ?

    ಪ್ರತಿಕ್ರಿಯೆ
  8. ವೀರೇಶಕುಮಾರ ಬೆಟಗೇರಿ

    ಸರ್ ನಿಮ್ಮ ರೂಪಕ ಅತ್ಯದ್ಬುತ ಸರ್ , ಇದನ್ನು ಮುಂದುವರೆಸಿದ ಸಂಯುಕ್ತರವರ ಕಲ್ಪನೆಯು ಚನ್ನಾಗಿದೆ ಅದನ್ನೇ ಮುಂದುವರೆಸೋಣ ಎಂದೆನಿಸಿ ಬರೆದಿದ್ದೇನೆ.

    ಈ ಹೆಂಗಸು ಕಣ್ಣು ಮುಚ್ಚಿ ಕಂಫ಼ರ್ಟ್ ಸೀಟಿಗೊರಗಿ, ಸಿದ್ಧಳೆಂಬಂತೆ ಹುಬ್ಬು ಮೇಲೇರಿಸುತ್ತಾಳೆ… ಹಾಗೇ ಕಣ್ಣು ಮುಚ್ಚಿದ್ದಾಳೆ ಒಮ್ಮೆಲೇ ಪಾಲ೵ರ್ನ ಬೆಡಗಿ ಬರೀ ಐಬ್ರೋ ಸಾಕಾ ಆಂಟೀ, ಫ಼ೇಶಿಯಲ್ ಮಾಡಿಸಿಕೊಳ್ಳಿ, ಸ್ಕಿನ್ ತುಂಬಾ ಡ್ರೈ ಆಗಿದೆ” ಎಂದು ಇನ್ನೊಮ್ಮೆ ಕಿವಿಯಲ್ಲಿ ಉದಿದಂತಾದಾಗ ಬಾಯಿಯಲ್ಲಿನ ನಾಲಿಗೆ ತನ್ನಷ್ಟಕ್ಕೆ ತಾನೇ ಹೇಳಿತ್ತು. ಜೊಂಡು ಕಟ್ಟಿದ ಅಂಟಿಯ ಕೆನ್ನೆಯನ್ನು ಬ್ಯೂಟಿಪಾಲ೵ರನವಳು ಮುಟ್ಟಿದಾಗ ಹದಿನಾರರ ಹರೆಯದಲ್ಲಿ ನನ್ನ ಅಜ್ಜಿ ಕೆನ್ನೆಗೆ ಸವರಿದ್ದ ಅರಿಷಣದಿಂದಾಗಿ ವಯಸ್ಸು 50 ತ್ತಾದರೂ ಬ್ಯೂಟಿ ಬಾಡದಂತಿತ್ತು. ನಾನು ಇನ್ನು ಸುಂದರವಾಗಿಯೇ ಇರುತ್ತದ್ದೇ ಸಮುದ್ರದಂತ ಸಮಾಜದಲ್ಲಿ ಬರಿ ಸಮಸ್ಯೆ ಎಂಬ ಅಲೆಗಳ ಜೊತೆ ಈಜಾಡಿ ಹೀಗಾಗಿದ್ದೇನೆ. ಏನವನ ವಯ್ಯಾರ ಆ ದಿನಗಳಲ್ಲಿ ಅವನೇ ನನ್ನ ಹೀರೋ ಹಳೆ ಬಜಾಜ ಚೇತಕ್ಕ ಹತ್ತಿ ಕೊಂಡು ಬಂದರೆ ನೋಡುವದೇ ಸಂಬ್ರಮ ಆ ದಿನಗಳೇ ಹಾಗೆ … ಕಣ್ಣು ಬಿಟ್ಟಾಗ ನಾಲ್ಕ ಅಂತಸ್ತಿನ ಮೇಲಿರುವ ನೆನಪಾಯಿತು. ನಾನು ಮೊದಲು ಕೆಳ ಅಂತಸ್ತಿನಲ್ಲಿದ್ದೇ ಹಳೆ ಚೇತಕ್ಕ ಗಾಡಿ ಬಿಟ್ಟು ಮಾರುತಿ 800 ಕಾರು ಏರಿದಾಲೇ ಸಮಾಜದ ಅಂತಸ್ತಿನ ಒಂದೊಂದೆ ಮೆಟ್ಟಿಲು ಏರಿದ್ದು. ಕಾಲಡಿಯಲ್ಲಿ ನೆಲಹಾಸು ಒರೆಸುವ ಹುಡುಗ ಕನ್ನಡಿ ಮುಗಿಸಿ ನೆಲಕ್ಕೆ ಕೈಹಾಕಿದ್ದ ಹುಡುಗನ ಕೈಚಳಕದಿಂದ ನೆಲವೆಷ್ಟು ಶುಬ್ರವಾಗಿದೆ ಎಂದೆನಿಸಿತು. ಹಾ ಹತ್ತಿಯ ಹಣ್ಣಿನಂತೆ ಈ ಬದುಕು ಹಳೆ ಚೆತಕ್ಕ ಗಾಡಿ ಬಿಟ್ಟಿದ್ದಕ್ಕೆ ಈ ಸಮಾಜ ನನ್ನನ್ನ ನಾಲ್ಕು ಸಂಘ ಸಂಸ್ಥೆಗಳಿಗೆ ಅಧ್ಯಕ್ಷೆ ನಾಯಕಿಯನ್ನು ಮಾಡಿರುವದು ಯಾಕಂದರೆ ದುಡ್ಡಿದೆಯಲ್ಲಾ ಕೆಳಗೇನೆ ಇರಲಿ ನೆಲಹಾಸು ಶುಬ್ರವಾಗಿದೆಯಲ್ಲಾ ಅನಿಸಿತು. ಕಾಯುವ ಹುಡಗಿನಿಗಾಗಿ ಮೆಟ್ಟಲಿನಿಂದ ಇಳಿಯುತ್ತದ್ದ ಸುಂದರಿಯನ್ನು ನೋಡಿದ ಮಧುಮಗ ಲಿಪ್ಟ ಎಂದು ಸನ್ನೆ ಮಾಡಿದ .. ದೂರದವಳು ಹತ್ತಿರ ಬಂದು ಕರೆಂಟು ಇಲ್ಲಾ ಎಂದಳು ಮರು ಮಾತಾಡದೆ ಬೈಕ್ ಮೇಲ್ಹೇರಿಕೊಂಡು ಹೊರಟ.. ಬಿನ್ನಾಣದ ಚಲುವೆಗೆ ಪರಮಾಶ್ಚಯ೵ ಪಾಲ೵ರನ ಬೆಡಗಿ ಬೊಂಬೆಯಂತೆ ಸಿಂಗಾರ ಮಾಡಿ ಕಳುಹಿಸಿದ್ದರು ನನ್ನವ ನನ್ನ ನೋಡಿ ಹೊಗಳಿಕೆಯ ಮಾತೇಕೆ ಆಡಲಿಲ್ಲ.. ಸಮಾಜವೆಂಬ ರಬಸದ ನೀರನ್ನು ಸೀಳಿ ತನ್ನವನ ಬೈಕು ಮುನ್ನುಗ್ಗತ್ತಿದೆ. ಅದಕ್ಕೆನು ಗೊತ್ತು ಮಾಲಿಕನ ಹುಡುಗಿ ಬೇಸರದಿಂದ ಇರುವಳೆಂದು, ನಡುವೆ ಸಿಗುವ ಕೆರೆ ಕೆರೆಯಲ್ಲಿ ಬಿರು ಬಿಸಲಿಗೆ ಈಜಾಡುವ ಅರೆನಗ್ನ ದೇಹಳನ್ನು ನೋಡಿದರು ಕಣ್ಣ ಮನಸ್ಸು ತನ್ನವನ ಹೊಗಳಿಕೆ ಮಾತುಗಳಿಗೆ ಕಾಯುತ್ತಲಿತ್ತು. ಕಣ್ಣು ಬಿಟ್ಟಾಗ 50ರ ಹರೆಯ ಈಗ 35ಕ್ಕೆ ಜಾರಿದಂತಿದೆ. ಯಾರಾದರೂ ಸರಿ ಹಾಗೆ ಬಿದ್ದು ಬಿಡತಾರೆ ಕೋಟ್ಯಾಧಿಶ್ವರರು. ಆದರೂ ನನಗೆ ಈಗೆನು ಕಮ್ಮಿ. ನಾನು ಕೆಟ್ಟವಳಲ್ಲ ನನ್ನ ಸಮಾಜ ಹೀಗೆ ಮಾಡಿದೆ ಆದರೆ ನನಗೆ ಸ್ವಲ್ಪ ಆಸೆ ಚೆತಕ್ ಗಾಡಿ ಹತ್ತಿದರೆ ಯಾರು ಮಾಯಾ೵ದೆ ಕೊಡತಾರೆ ಅದೇ ಈಗ ಜಾಗ್ವಾರ. ಏನೆ ನೀವಿಬ್ರೂ ಎಲ್ಲಿ ಹೋಗಿದ್ರಿ ಮೇಕಪ್ ಮಾಡಿಸಿಕೊಂಡು ಬರತೀನಿ ಅಂತ ತಾನೆ.. ಇದ್ದಕ್ಕಿದ್ದಂತೆ ಮಧುಮಗಳಾಗುವವಳಿಗೆ ಒಳಗೋಳಗೆ ಅನುಮಾನ ನನ್ನ ಮೇಕಪ್ ಏನಾಯಿತು. ಪಟ್ಟನೇ ನೆನಪಾದಾಗಿ ಮನಸ್ಸು ತನ್ನ ವಿರುದ್ದವಾಗಿಯೇ ನಿಂತಿತ್ತು. ಲಿಪ್ಟ ಇಲ್ಲಾ ನಾಲ್ಕು ಅಂತಸ್ತು ಇಳಿದಾಗ ಬಣ್ಣ ಕರಗಿ ಅಸಲಿಯತ್ತು ಹಾಗೇ ಮೂಡಿತ್ತ. 35ರ ಹರಯ ಲಿಪ್ಟ ಇಲ್ಲದಿದ್ದಾಗ ಮತ್ತೇ 50ತ್ತೇ ಆಗಿತ್ತು.

    ಪ್ರತಿಕ್ರಿಯೆ
  9. J.S.Ganjekar

    ಸರ್ ನಿಮ್ಮ ರೂಪಕ ಅತ್ಯದ್ಬುತ! ಬಹಳ ಇಷ್ಟವಾಯಿತು. ಕೊನೆಯಲ್ಲಿ ಧೈರ್ಯವಿದ್ದರೆ ಹೇಳಿ ನೋಡುವಾ-ಈ ನಾಣ್ಯದ ಬೆಲೆಯೆಷ್ಟು?ತುಂಬಾ ಸೊಗಸಾಗಿ ಮುಕ್ತಾಯ ಮಾಡಿದಿರಿ. ನಿಮ್ಮ ರೂಪಕ ಶಕ್ತಿ ಅದ್ಭುತ.

    ಪ್ರತಿಕ್ರಿಯೆ
  10. ಸಂತೋಷ್ ತಿಮ್ಮೊಟ್ಟು

    ಪ್ರತೀ ಪದಗಳಲ್ಲೂ ಜೀವಂತಿಕೆ ಇದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: