ಗೀತಾ ಹೆಗ್ಡೆ ಕಲ್ಮನೆ
ಈ ಷಹರದ
ಅಂದವಾದ ದೊಡ್ಡ ಮನೆಯ
ನನ್ನದೆಂಬ ಅಹಮಿನಲ್ಲಿ
ಗೋಡೆಗೆ ಆತುಕೊಂಡು
ಚಾ ಕುಡಿಯೋದರಲ್ಲಿ ಮಜಾ ಇಲ್ಲ ಕಂಡ್ರೀ….
ಬೆಳ್ಳಂಬೆಳಗ್ಗೆ ಸೊರ ಸೊರ
ಕರೆದ ನೊರೆ ನೊರೆ ಹಾಲು
ಅಮ್ಮನ ಕೈಯ್ಯಾರೆ
ನೊರೆ ಸರಿಸಿ ಸೋಸಿ
ತನ್ನ ಬಗ್ಗಿದ ಸೊಂಟ ನೆಟ್ಟಗೆ ಮಾಡಲ್ಲಾಗ್ದೇ ಇದ್ರೂವಾ
“ಮಗಾ ಅಪರೂಪಕ್ಕೆ ಬಂಜೆ ತಗ
ಅಲ್ಲೆಂತಾನಮನಿ ಹಾಲ ಏನ
ಇಕ ಆ ಮಾಡಿದ್ದ ಮಂದನ್ನ ಚಹಾ
ಕುಡದ್ನೋಡು ಬಿಸೀ ಇದ್ಜೇ
ಹುಷಾರು ಕಡಿಗೆ ಬಾಯ್ ಸುಟ್ಟೋತು ಹೇಳಡಾ”
ಆ ಅಮ್ಮನ ಕಾಳಜಿಯು
ಉದ್ದನೆ ಲೋಟದ ತುಂಬಾ ತುಳುಕಿ
ಹಾಗೆ ಗಂಟಲು ಸವರುತ್ತ ಇಳಿವಾಗ
ಆಹಾ! ಅದೇನು ಸುಃಖ
ಅದೇನು ಕಿಕ್ಕು….

ಈಗೆಲ್ಲಿ ಆ ದಿನಗಳು
ಆ ಚಹಾ
ಆ ಮಮ್ಮಲ ಮರುಗುವಿಕೆ
ಧಿಮ್ಮನೆದ್ದು ಓಡಿ ಬಿಡಬೇಕೆನ್ನುವ
ಆ ತವರ ಸೆಳೆತ
ಕಟು ವಾಸ್ತವದಲ್ಲಿ
ಮೈ ಮನವೆಲ್ಲ ಆವರಿಸುತ್ತ
ಮಟ ಮಟ ಮಧ್ಯಾಹ್ನದುರಿಬಿಸಿಲಲ್ಲೂ
ಹೊಂಬಾಳೆಯ ಚಿಗುರಷ್ಟು ತಂಪು
ಇದೇ ಅಲ್ಲವೇ ಕರುಳ ಸೆಳೆತ…
ಈಗಲೂ
ನೆನಪಾಗಲು ರುಚಿಸದು
ಅಮ್ಮನಿಲ್ಲದ ಚಹಾ ಬರೀ ಸಪ್ಪೆ
ಎಮ್ಮೆ ಕುಡಿವ ಕಲ್ಗಚ್ಚು!






0 Comments
Trackbacks/Pingbacks