ಅಮ್ಮನಾಗುವುದೆಂದರೆ………..
ರೂಪ ಹಾಸನ್

ಒಲೆಯ ಮೇಲೆ
ಬೆಣ್ಣೆ ಕಾಯಿಸಲು ಪಾತ್ರೆ ಇಟ್ಟಾಗೆಲ್ಲಾ
ಅಮ್ಮನ ಮಾತಿನ ನೆನಪು
ಎಚ್ಚರಿಕೆಯ ಉಪದೇಶದ ಮೆಲುಕು.
.
ಮಗಳೇ ಬೆಣ್ಣೆ ಮುದ್ದೆಯ ಮೂರರಷ್ಟು
ದೊಡ್ಡ ಪಾತ್ರೆಯಲಿ ಕಾಯಲಿಡಬೇಕು
ಬೆಂಕಿ ಕೊಟ್ಟರೆ ಬೆಣ್ಣೆ ಉಕ್ಕುತ್ತದೆ
ತನ್ಮಯತೆಯಲಿ ಕಾಯಬೇಕು.
.
ಬೆಣ್ಣೆ ಹದ ಬೆಂದರಷ್ಟೇ
ಪಕ್ವಗೊಂಡ ತುಪ್ಪ
ಹೆಚ್ಚು ಕಾದರೆ ಸೀಕಲು
ಕಡಿಮೆ ಬೆಂದರೆ ಹಸುಕು
.
ಬೆಣ್ಣೆ ಕಾದು ತುಪ್ಪ ಪಕ್ವಗೊಳುವಾಗ
ಕ್ಷೀಣಿಸುವ ‘ಮಟರ್ ಮಟರ್’ ಸದ್ದು
ಜಡಿ ಮಳೆ ನಿಲ್ಲುತ್ತಾ ಬಂದಂತೆ
ಹದ ತುಪ್ಪದ ಘಮಲು ಎಲ್ಲೆಡೆಗೂ
.
ಅದೆಷ್ಟು ಬಾರಿ ಒಬ್ಬಳೇ
ಬೆಣ್ಣೆ ಕಾಯಿಸಿದ್ದೋ ಲೆಕ್ಕವಿಲ್ಲ
ಆ ಪಿತ್ತ ಈ ಚಿತ್ತದ ಗಡಿಬಿಡಿಯಲ್ಲಿ
ಗಮನವೀಯದೇ ಉಕ್ಕಿಸಿದ್ದೇ ಹೆಚ್ಚು.
.
ಉಳಿದು ಕಾದದ್ದು ಒಮ್ಮೆ ತುಪ್ಪ ಸೀದು
ಮೂಗಿಗಮರುವ ಕಮಟು ವಾಸನೆ
ಇನ್ನೊಮ್ಮೆ ಹಸಿಹಸಿಯಲೇ ಇಳಿಸಿ
ನಾಲ್ಕೇ ದಿನಕ್ಕೆ ಕೆಟ್ಟ ನಾತ.
.
ಯಾವುದು ನಿಜದ ಹದ?
ಪಕ್ವತೆಯ ಗರಿಷ್ಟ ಬಿಂದು?
ನಿರ್ಧಾರದ ಹೊಸ್ತಿಲಲ್ಲಿ ತಪಿಸುವ ತಾಪ
ಕಳಿಯುವಿಕೆಯ ಹುಡುಕಾಟದ ತಪ.
.
ಸಿದ್ಧಿಸಿದಂತೆಲ್ಲಾ, ಬೆಣ್ಣೆ ಉಕ್ಕುವುದಿಲ್ಲ
ಮಾಗುವ ಸದ್ದಿಗೆ ಧ್ಯಾನಿಸಿ
ಸ್ಥಿರಗೊಳ್ಳುತ್ತದೆ ಮನ. ಕರಟುವುದಿಲ್ಲ.
ಹಸುಕಲಾಗುವುದಿಲ್ಲ. ಸದಾ ಹದ ತುಪ್ಪ.
ಅಮ್ಮನಾಗುವುದೆಂದರೆ…………… ಹೀಗೆ. ರೂಪ ಹಾಸನ







ಆಹಾ! ಬೆಳ್ಳಂಬೆಳಗ್ಗೆ ಒಂದು ಒಳ್ಳೆಯ ಕವಿತೆ ಓದಿದ ತೃಪ್ತಿ. ಬೇಂದ್ರೆ ಅಜ್ಜ ಹೇಳುತ್ತಾರೆ ‘ಕವಿತೆ ಕಟ್ಟಲು ನಾನು ಪಕ್ಷಿ ತತ್ತಿಗೆ ಕಾವು ಕೊಟ್ಟು ಕಾಯುವಂತೆ ಕಾಯುತ್ತೇನೆ’ ಎಂದು. ಹಾಗೇ, ಬೆಣ್ಣೆ ಕಾಯಿಸಿ ಗಮನವಿಟ್ಟು ಕಾದ ಕವಿತೆ. ತನ್ಮಯತೆಯಲಿ ಕಾಯಬೇಕು. ಚೆನ್ನಾಗಿದೆ ಅಕ್ಕ… 🙂
ಕವಿತೆ ಖುಷಿ ಆಯಿತು. ಭಾವ ಸಾಂದ್ರತೆಯನ್ನು ಹಂತ ಹಂತವಾಗಿ ಓದುತ್ತಾ ಸಾಗಿದಂತೆ ಅನುಭವಿಸಿದೆ.ಆದರೆ ಅಭಿಪ್ರಾಯಗಳು ಕಾವ್ಯದ ಒಂದು ಧೂಳಿನ ಕಣವನ್ನೂ ಕೂಡ ಕೊಡವಿ ಕೆಳ ಬೀಳಿಸುವುದಿಲ್ಲ.ಒಳಗಿನ ಕವಿಗೆ ಮಾತ್ರ ಧ್ವನಿಸುವ ಈ ಪ್ರಕ್ರಿಯೆ ಸದಾ ಎಚ್ಚರವನ್ನು ತೋರಿಸುವುದು.ನನಗನ್ನಿಸಿದಂತೆ ಮಹಿಳಾ ಕವಯತ್ರಿಯರಲ್ಲಿರುವ ಸಹನೆ ಪುರುಷ ಕವಿಗಳಲ್ಲಿ ಕಂಡು ಬರುತ್ತಿಲ್ಲ. ಬಳಸುವ ಪದಗಳಲ್ಲಿಯೂ ಕೂಡ ಮೃದುತ್ವ ಮಾನವನ ಒಳ ತೋಟಿಯನ್ನು ತಟ್ಟಿ ಮಲಗಿಸುತ್ತಿದೆ. ಈ ಕವಿತೆಯಲ್ಲಿ ಬೆಣ್ಣೆ ಮತ್ತು ಅಮ್ಮ, ಮಗಳ ಸಾಂಸರಿಕ ಜಗತ್ತಿನ ಸೂಕ್ಷ್ಮ ಮಾತುಗಳು ಆಳದಾಳಕ್ಕೆ ಮಾನವನ ಮುಚ್ಚಿದ ಬಾಗಿಲನ್ನು ನವಿರಾಗಿ ತೆರೆದು ಬಿಟ್ಟಿದೆ. ಹೀಗೆ ಎರಡು ದಿನಗಳ ಹಿಂದೆ ನಾನು ನನ್ನ ಬ್ಲಾಗಿನಲ್ಲಿ ಬರೆದ ಕವಿತೆ :”ಮೊದಲ ಹೂವಿನ ತಲೆ ಕತ್ತರಿಸಿದ ರಾತ್ರಿ” ಬರೆದಾಗ ಗತ ಕಾಲದ ಮನೆಗೆ ಹೋಗಿದ್ದೆ. ಅಲ್ಲಿ ಪುರುಷನೊಬ್ಬ ತನ್ನ ಮನೆಯ ಪಳವಳಿಕೆಯನ್ನು ಹುಡುಕಾಡಿದ ಭಾವ ಬಂತು.ಆದರೆ ಕವಯತ್ರಿಯರಲ್ಲಿ ಮೂಡುವ ಭಾವಕ್ಕೂ,ಬಳಸುವ ಪದಕ್ಕೂ ವ್ಯತ್ಯಾಸವನ್ನು ಗಮನಿಸಿದಾಗ ಕಾವ್ಯ ತುಂಬಾ ಸಹನೆಯನ್ನು ಮಹಿಳಾ ಕವಯತ್ರಿಯರಲ್ಲಿ ಢಾಳಾಗಿ ಗೋಚರವಾಗುವುದು.
I have read good poem after along time,simple and meaningful,roopa mam ,i have read your prose lot,but it is sweet surprise to know that you are a good poet too.you are on aright track please keep on writing poems
Its very nice poem. I have habbit of writing poems in kannada when I get time and mood. Keep it up madam
ಅತ್ಯದ್ಭುತವಾದ ಕವಿತೆ. ಬೆಣ್ಣೆಯಿಂದ ತುಪ್ಪ ತೆಗೆದದ್ದು ಅಮ್ಮನ ಪ್ರತಿಮೆಯನ್ನು. ಸರಳವಾದ ಭಾಷೆ ಮತ್ತು ಎದೆಗಿಳಿಯುವ ಕವಿತೆ. ಈ ಕವಿತೆಯ ಅಮ್ಮನೂ ಒಬ್ಬ ತಪಸ್ವಿಯಂತೆ, ಶಿಲ್ಪಿಯಂತೆ, ಮಮಕಾರ ಮೂರ್ತಿಯಂತೆ, ಪ್ರೀತಿಯ ಚಿಲುಮೆಯಂತೆ, ತದೇಕರೂಪು ನನ್ನಮ್ಮನಂತೆಯೇ ಕಂಡಳು. 🙂
-ಪ್ರಸಾದ್.ಡಿ.ವಿ.
nice mam..
ಒಹ್…ಕವಿತೆಯೇನ್ದರೂ ಹೀಗೆ…..
ಮೆಚ್ಚಿಕೊಂಡ ಸಹೃದಯರಿಗೆಲ್ಲಾ ವಂದನೆಗಳು.
ರೂಪ
ಪದ್ಯ ಚೆನ್ನಾಗಿದೆ. ಇಷ್ಟವಾಯಿತು. ನಿಮಗೆ ಅಭಿನಂದನೆಗಳು
dhanyavaadagalu sir.