ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನಂತಹ ಅಕ್ಕ..

‘ಅಮ್ಮನ ದಿನ’ಕ್ಕಾಗಿ ಖ್ಯಾತ ಕವಯತ್ರಿ ರಂಜನಿ ಪ್ರಭು ಅವರು ತಮ್ಮ ಅಮ್ಮನಂತಹ ಅಕ್ಕ ರಾಜಲಕ್ಷ್ಮಿ ಸೀತಾರಾಮ್ ಬಗ್ಗೆ ಬರೆದಿದ್ದಾರೆ. ಇವು ಕವಿತೆಗಳಲ್ಲ, ಇತ್ತೀಚೆಗೆ ತಾನೇ ತನ್ನ ಅಕ್ಕನನ್ನು ಕಳೆದುಕೊಂಡದ್ದಕ್ಕಾಗಿ ಸುರಿಸಿದ ಕಣ್ಣೀರ ಹನಿಗಳು..


“ನೋವಿನ ಮಿಡಿತಗಳು”

ರಂಜಿನಿ ಪ್ರಭು

**

1.

ತಿಂಗಳಾಯಿತು ಅಮ್ಮನಂಥಾ ಅಕ್ಕನನ್ನು ಕಳೆದುಕೊಂಡು
ವಿಷದೊಳಗೆ ಅದ್ದಿದ
ಬಿಸಿ ದಬ್ಬಣವನ್ನು
ಎದೆಯಾಳಕ್ಕೆ ಚುಚ್ಚಿದಂತೆ ನೋವು


2.

ನನ್ನ ಹೆಸರನ್ನು
ಅಕ್ಕರೆಯಿಂದ ಕರೆಯುತ್ತಿದ್ದ ದನಿ
ಮನೆಗೆ ಬರಲೇ ಇಲ್ಲವಲ್ಲೇ ಎಂದು
ಕೇಳುತ್ತಿದ್ದ ಆದನಿ
ಇನ್ನಿಲ್ಲ…
ಸಂಭ್ರಮದಲಿ ಮನೆಬಾಗಿಲ ತೆರೆದು
ಮುಗುಳ್ನಗುತ್ತಿದ್ದ
ಆ ಮುಖ ಇನ್ನಿಲ್ಲ
ಬಿಸಿಬಿಸಿ ಅನ್ನವನು
ನಾಕಾರು ರುಚಿಯೊಡನೆ
ಬಡಿಸುತ್ತಿದ್ದ ಆ
ಅಮೃತ ಹಸ್ತ ಇನ್ನಿಲ್ಲ
ಇಡಿಯಾದ ಆ ಜೀವ
ಹಿಡಿ ಬೂದಿಯಾಗಿ ಬಿಟ್ಟುದನ್ನು ನಂಬುವುದು ಹೇಗೆ?

3.

ನನ್ನಕ್ಕ ಹೋರಾಟ ನಡೆಸಿದ ಧೀರೆ
ಬದುಕಿನೊಡನೆಯೂ
ಸಾವಿನೊಡನೆಯೂ..
ತಾನು ಗೆಲ್ಲುವ ಭರವಸೆ ಕೊಟ್ಟು
ನನ್ನನ್ನು ಊರಿಗೆ ಕಳಿಸಿಕೊಟ್ಟಳು ಕೈ ಬೀಸಿ
ನಾನು ಮರಳುವ ಮುಂಚೆ ಕಾಣದೂರಿಗೇ
ತೆರಳಿಬಿಟ್ಟಳು ಕೈಬೀಸಿ

4.

ಕಳೆದುಕೊಂಡ ದುಃಖಕ್ಕಿಂತ
ಕಳೆದುಕೊಂಡ ರೀತಿ
ಕರುಳು ಹಿಂಡುತ್ತಿದೆ
ಸರಳ ಸಾತ್ವಿಕ ಸಂತೃಪ್ತ ಜೀವ
ಅಷ್ಟೊಂದು ಯಾತನೆಗೆ ಒಳಗಾಗಬೇಕೆ?
ನೀಲಾಂಜನದೆದುರು
ಕುಳಿತು ಲಲಿತಾ ಸಹಸ್ರನಾಮ ಓದುವಾಗ ನಿರಾಳ
ನಡೆದುಬಿಡಬೇಕಿತ್ತು
ದೇವಿಯ ಮಡಿಲಿಗೆ

5.

ಸದಾ…ಗಡಿಬಿಡಿ
ಸಡಗರದಿಂದ ಜೀವನವ ಪ್ರೀತಿಸುತ್ತಾ
ಇದ್ದ ಅವಳು
ನಿಧಾ..ನ ಮಂದಗತಿ
ಹೊಂದುತ್ತಾ
ಕಡೆದಿನಗಳಲ್ಲಿ
ಪೂರ್ತಿ ಮಲಗಿಬಿಟ್ಟಳಲ್ಲಾ!!
ಆಗ ಅವಳ ಅಂತರಂಗದಲ್ಲಿ
ಏನೆಲ್ಲ ಅಲೆಗಳು
ಎದ್ದಿರಬಹುದೆಂದು
ನೆನೆದಂತೆಲ್ಲ
ಕುಸಿಯುತ್ತೇನೆ ನಾನು


6.

ಲಂಡನ್ನಿನಲ್ಲಿ
ಡಿಸೆಂಬರ್ ಜನವರಿಯ
ನಡುಗು ಚಳಿ
ಮುಗಿದಾಗೊಮ್ಮೆ
ಒಂದೆರಡು ದಿನ
ಬೆಚ್ಚನೆಯ ಬಿಸಿಲು
ನಾಲ್ಕಾರು ಟೊಂಗೆಗಳಲ್ಲಿ
ಚೂರು ಚಿಗುರು ಹೂವೂ ಕಾಣುತ್ತವೆ
ಆದರದು ಚೈತ್ರವಲ್ಲ
ಅದನ್ನು” fools spring “ಎನ್ನುತ್ತಾರೆ.
ಭ್ರಮೆಗಳ ಈ ಬದುಕೂ ಬರೀ
“fools spring” ಅಲ್ಲವೇ?

‍ಲೇಖಕರು avadhi

12 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading