‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ

। ಕಳೆದ ವಾರದಿಂದ ।

ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ ” ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್ ಮೂವಿನಾ?” ಇನ್ನೂ ಕೆಲವರು, “ಓ ಅವಾರ್ಡ್ ಮೂವಿನಾ” ಅಂತಾ ಕೇಳುವಾಗ ಮನಸ್ಸಿನಲ್ಲಿಯೇ ನಗುತ್ತಾ “ನಾನು ಹಾಗೇನೂ ಅಂದುಕೊಂಡಿಲ್ಲಾ ಒಂದು ಸಿನೆಮಾ ಮಾಡುತ್ತಿದ್ದೇನೆ ಅಷ್ಟೇ ಸಿನೆಮಾ ಆದಮೇಲೆ ನೀವೇ ಹೇಳಿ ಆರ್ಟಾ? ಕಮರ್ಷಿಯಲ್ಲಾ? ಅಂತಾ” ಎಂದು ಹೇಳಿ ನಗುತ್ತಿದ್ದೆ…

ಆದರೆ ಹೇಳಿದಷ್ಟು ಸುಲಭವಲ್ಲ ,ಈ ಆರ್ಟ್, ಕಮರ್ಷಿಯಲ್ ಎಂಬ ಹಣೆಪಟ್ಟಿಗಳಿಂದ ಬಿಡಿಸಿಕೊಳ್ಳುವುದು ಮತ್ತು ಇವೆರಡರ ನಡುವಿನ ಸೇತುವೆಯ ಮೇಲೆ ನಡೆಯುವುದು….

ಕಮರ್ಷಿಯಲ್ ಸಿನೆಮಾ ನೋಡುವ ಮಂದಿ ಎಷ್ಟು ಫೈಟ್ಸ್ ಇದೆ? ಸಾಂಗ್ಸ್ ಎಷ್ಟು ? ಲವ್ ಸ್ಟೋರಿನಾ ಅಂದರೆ,… ಆರ್ಟ್ ಮೂವಿಗಳನ್ನೇ ನೋಡುವ ಮಂದಿ, ಎಲ್ಲಾ ಓಕೆ ಹಾಡುಗಳು ಇರಬಾರದಿತ್ತು ಅನ್ನುತ್ತಾರೆ… ಇಂತಾ ಸಿನೆಮಾ ಹೀಗೇ ಇರಬೇಕೆಂಬ ನಿಯಮಗಳಿವೆಯಾ? ಇದ್ದರೂ ಅದು ಕನ್ನಡ ಸಿನೆಮಾಗಳಿಗೆ ಮಾತ್ರ ಸೀಮಿತವೇ? ..

ನಾನು ಸಿನೆಮಾ ಮಾಡುವಾಗ ಇದ್ದ ಉದ್ದೇಶ….ಒಂದು ಕೃತಿಯನ್ನು ಒಬ್ಬ ಪ್ರೇಕ್ಷಕನಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು ಎಂದಷ್ಟೇ.. ಅದಕ್ಕಾಗಿ ಆ ಒಂದು ಕೃತಿ ಏನು ಬೇಡುತ್ತದೆಯೋ ಅದನ್ನು ಮಾಡಬೇಕಲ್ಲವೇ… ನಾನು ಮಾಡಿರುವುದೂ ಅಷ್ಟೇ.. ನಮ್ಮ ಸಿನೆಮಾ ರಿಲೀಸ್ ಆದ ನಂತರ ಈ ಲಾಕ್ ಡೌನ್ ನಲ್ಲಿ ಇಂತಹದ್ದೇ ಆಶಯವುಳ್ಳ ಬೇರೆ ಬೇರೆ ಭಾಷೆಯ ಎಷ್ಟೋ ಸಿನೆಮಾಗಳನ್ನು ನೋಡಿದ್ದೇನೆ (ವಿಶೇಷವಾಗಿ ಮಲಯಾಳಂ)…

ಅವು ಅದ್ಭುತ ಸಿನೆಮಾಗಳೇ ವಿನಃ ಆರ್ಟೋ, ಕಮರ್ಷಿಯಲ್ಲೋ ಗೊತ್ತಿಲ್ಲಾ… ಮಲಯಾಳಂನ ‘ಅಯ್ಯಪ್ಪನುಂ ಕೋಶಿಯಂ’ ಇರಬಹುದು, ‘ತೋಟಪ್ಪನ್’ ಇರಬಹುದು. ಇವೆಲ್ಲದರಲ್ಲೂ ಹಾಡುಗಳಿವೆ ಹಾಗಾದರೆ ಇವನ್ನು ಕಮರ್ಷಿಯಲ್ ಎನ್ನಲಾಗುತ್ತದೆಯೇ.? ಹೀಗೊಂದು ಚರ್ಚೆಯ ನಡುವೆಯೇ ನಾನು ನಿರ್ಧರಿಸಿದ್ದು, ನನ್ನ ಸಿನೆಮಾದಲ್ಲಿ ದೃಶ್ಯಗಳು ಸಾಧ್ಯವಾದಷ್ಟೂ ಸಹಜವಾಗಿರಬೇಕು, ಆರ್ಟ್ ಸಿನೆಮಾ ಆಗಬೇಕೆಂದು emotions ಕಡಿಮೆ ಮಾಡುವುದಾಗಲೀ, ಕಮರ್ಷಿಯಲ್ ಆಗಬೇಕೆಂದು ಜಾಸ್ತಿ ಮಾಡುವುದಾಗಲೀ ಮಾಡಬಾರದೆಂಬ ನಿಯಮದಲ್ಲಿಯೇ ರೂಪುಗೊಂಡವಳು “ಅಮ್ಮಚ್ಚಿ”

ಆದರೆ ಈ ರೂಪ ತಾಳುವ ಹಾದಿ ಅಷ್ಟು ಸುಗಮವಾಗಿರಲಿಲ್ಲ, ಆರ್ಟು ಕಮರ್ಷಿಯಲ್ ನ ನಡುವಿನ ತಂತಿಯ ಮೇಲೆ ನಾವು ನಡೆದದ್ದಲ್ಲದೆ ನಮ್ಮೆಲ್ಲಾ ಟೆಕ್ನಿಷಿಯನ್ ಗಳನ್ನು ನಡೆಸಬೇಕಾಯಿತು…

ಹಾಡುಗಳು ಬೇಕು ಆದರೆ ಹೇಗೆ ? ದೃಶ್ಯಕ್ಕೆ ಪೂರಕವಾಗಿ, ಕೇಳಲು ಇಂಪಾಗಿ, ಕಣ್ಣಿಗೆ ತಂಪಾಗಿ… ಹಾಗೇ ರೀ ರೆಕಾರ್ಡಿಂಗ್ ಕೂಡಾ… ಸಾಮಾನ್ಯವಾಗಿ ಆರ್ಟ್ ಮೂವಿಗಳಲ್ಲಿ ರೀ ರೆಕಾರ್ಡಿಂಗ್ ಇರುವುದೇ ಬಹು ವಿರಳ… ಕಮರ್ಷಿಯಲ್ ನಲ್ಲಿ ಅದರದ್ದೇ ಅಬ್ಬರ.. ಇವೆರಡರ ನಡುವಿನ ಹಿನ್ನೆಲೆ ಸಂಗೀತ ನೀಡುವುದು ನಮ್ಮ “ಸಂಗೀತ್ ಥಾಮಸ್” ಸರ್ ಗೆ ಬಹು ದೊಡ್ಡ ಸವಾಲಾಗಿತ್ತು.

ಪ್ರತಿ ರೀಲ್ ನ ರೀ ರೆಕಾರ್ಡಿಂಗ್ ಮುಗಿದ ಕೂಡಲೆ ನಾನು ಮತ್ತು ಶೆಟ್ರು ಅವರ ಮನೆಗೆ ಹೋಗಿ ಅದನ್ನು ನೋಡಿ ಕರೆಕ್ಷನ್ಸ್ ಬರೆದು ಅವರಿಗೆ ತಿಳಿಸಿ ಮತ್ತೆ ಅವರು ಅದನ್ನು ಸರಿ ಮಾಡಿದ ಕೂಡಲೇ ಮತ್ತೆ ಹೋಗಿ ನೋಡುವುದು ಹೀಗೆ….ಕಡೆ ಕಡೆಗೆ ನಮ್ಮೊಡನೆಯೇ ತಂತಿಯ ಮೇಲೆ ನಡೆಯಲು ಕಲಿತ ಸಂಗೀತ್ ಸರ್ ನಾವು ಹೇಳುವ ಮೊದಲೇ ನಮ್ಮ ಆಶಯಕ್ಕೆ ಹೋಲುವಂತಹ ಸಂಗೀತ ನೀಡುತ್ತಿದ್ದರು.

ಇಲ್ಲೊಂದು ಘಟನೆ ನೆನಪಾಗುತ್ತದೆ. ಶೂಟಿಂಗ್ ಸಮಯದಲ್ಲಿ ನಮ್ಮ ಜೊತೆಗೇ ಇದ್ದ ಎಡಿಟರ್ ಹರೀಶ್ ಮತ್ತು ನವೀನ್ ಅವರು ಸೇರಿ ಪುಟ್ಟಮ್ಮತ್ತೆ ತಾಯಿಯನ್ನು ಬಾವಿಗೆಸೆಯುವ ದೃಶ್ಯವನ್ನು ಎಡಿಟ್ ಮಾಡಿ ತಮಿಳಿನ “ಚಿನ್ನ ತಾಯವಳ್” ಹಾಡನ್ನು ಹಿನ್ನೆಲೆ ಸಂಗೀತವಾಗಿ ಬಳಸಿ ನಮಗೆಲ್ಲಾ ತೋರಿಸಿಬಿಟ್ಟಿದ್ದರು ಆ ಹಾಡು ಆ ದೃಶ್ಯಕ್ಕೆ ಎಷ್ಟು ಸೂಟ್ ಆಗಿತ್ತೆಂದರೆ ಆ ಹಾಡಿನ ಒರಿಜಿನಲ್ ದೃಶ್ಯಕ್ಕಿಂತಾ ನಮ್ಮ ಸಿನೆಮಾದ ದೃಶ್ಯ ಚೆನ್ನಾಗಿ ಹೊಂದಿಕೆಯಾಗಿಬಿಟ್ಟಿತ್ತು…

ಅದನ್ನು ನೋಡಿದ್ದ ನಮಗೆ ರೀ ರೆಕಾರ್ಡಿಂಗ್ ಸಮಯದಲ್ಲಿ ಆ ದೃಷ್ಯಕ್ಕೆ ಎಂತಾ ಸಂಗೀತ ಸೇರಿಸಿದರೂ ಒಪ್ಪಿಗೆಯಾಗುತ್ತಿಲ್ಲ…. ಆದರೆ ಕಡೆಗೆ, “ಸಮೀರ್” ಅವರ ಅದ್ಭುತವಾದ ಕೊಳಲಿನ ಹಿನ್ನೆಲೆ ಸಂಗೀತ ದೃಶ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ಸುಳ್ಳಲ್ಲ…

ಮತ್ತೊಂದು ಬಹು ಸವಾಲಿನ ದೃಶ್ಯವೆಂದರೆ ದೀಪಾವಳಿ ಹಬ್ಬದ ತಯಾರಿಯ ಮಾಂಟೇಜ್ ಶಾಟ್ ಗಳು ಹಲವಾರು ಪ್ರಯತ್ನಗಳ ನಂತರ ಕೊನೆಗೂ ಅದಕ್ಕೆ ಶಿವು ಅವರ ವಿವಿಧ ತಾಳವಾದ್ಯಗಳ ಸಂಗೀತಕ್ಕೆ ಸಮೀರ್ ಅವರ ಕೊಳಲೂ ಸೇರಿಕೊಂಡು ದೃಶ್ಯದ ಅಂದವನ್ನು ಇಮ್ಮಡಿಗೊಳಿಸಿತು…

ಹೀಗೇ, ಹಿನ್ನೆಲೆ ಸಂಗೀತದ ಈ ಪಯಣ ಬಹುಶಃ ಒಂದು ತಿಂಗಳೇ ಆಗಿರಬಹುದು.. ಎಷ್ಟೋ ವಿಮರ್ಷೆಗಳಲ್ಲಿ ನಮ್ಮ ಸಿನೆಮಾದ ಹಿನ್ನೆಲೆ ಸಂಗೀತದ ಬಗ್ಗೆ ವಿಶೇಷವಾಗಿ ಪ್ರಶಂಸೆಗಳು ಬಂದಾಗ, ಸಂಗಿತ್ ಸರ್ ಅವರೊಂದಿಗಿನ ಆ ಇಡೀ ಪಯಣ ಒಮ್ಮೆಲೇ ಕಣ್ಣ ಮುಂದೆ ಬಂದು ಹೋಗುತ್ತಿತ್ತು…
ಇದೇ ಡಿಟ್ಟೋ ಡಿಟ್ಟೋ ಅನುಭವ ಸೌಂಡ್ ಎಫೆಕ್ಟ್ಸ್ ನಲ್ಲಿಯೂ ಕೂಡಾ..

ಇದೆಲ್ಲವೂ ಆದದ್ದು ಕರಿಸುಬ್ಬು ಅವರ ಬಾಲಾಜಿ ಸ್ಟುಡಿಯೋದಲ್ಲಿ..ಕರಿಸುಬ್ಬು ಅವರು ನಾಟಕದ ಹಿನ್ನೆಲೆಯವರಾದ್ದರಿಂದ ನಮ್ಮ ಅಭಿರುಚಿ ಅವರಿಗೆ ತಿಳಿದಿದ್ದು, ಇಂತಹ ನಮ್ಮ ಬೇಡಿಕೆಗಳಿಗೆ ಸಾಕಷ್ಟು ಸಹಕಾರ ನೀಡಿದ್ದು ನಮ್ಮ ಪುಣ್ಯ..ಹಾಗೇ ಎಡಿಟಿಂಗ್ ಕೂಡಾ….ಅದಾಗಲೇ “ಮಫ್ತಿ” ಸಿನೆಮಾದ ಎಡಿಟಿಂಗ್ ಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದರೂ “ಅಮ್ಮಚ್ಚಿ” ಗಾಗಿ ಹರೀಶ್ ವಿಶೇಷ ಆಸ್ತೆ ವಹಿಸಿದ್ದು “ಅಮ್ಮಚ್ಚಿ”ಯ ಭಾಗ್ಯ

ನಮ್ಮ ಅಭಿರುಚಿಗೆ ತಕ್ಕನಾಗಿದ್ದ ಹರೀಶ್ ಅವರ ಅಭಿರುಚಿ ಮತ್ತು ಅವರ ಜ್ಞಾನ ಮತ್ತವರ ವಿನಯ ಎಲ್ಲವೂ ನಮಗೆ ಸಿಕ್ಕ ದೊಡ್ಡ ಅಸೆಟ್ ಅಂದರೆ ಖಂಡಿತ ಉತ್ಪ್ರೇಕ್ಷೆಯಲ್ಲ…..ಇನ್ನು ಡಿ ಐ ಅಂತೂ ನಮ್ಮ ಡಿ . ಓ .ಪಿ ನವೀನ್ ವಿಶೇಷ ಕಾಳಜಿಯಿಂದ ಮಾಡಿಸಿದ್ದು, “ಅಮ್ಮಚ್ಚಿ”ಯನ್ನು ಎಂಭತ್ತರ ದಶಕಕ್ಕೆ ಕೊಂಡೊಯ್ಯುವಲ್ಲಿ ಸಹಾಯ ಮಾಡಿತ್ತು…ಸಿ

ನೆಮಾದಲ್ಲಿ ಒಂದೊಂದು ದೃಶ್ಯದ ಒಂದೊಂದು ಫ್ರೇಮ್ ಕೂಡಾ ಎಷ್ಟು ಮುಖ್ಯವೋ ಹಾಗೇ ಟೈಟಲ್ ಕಾರ್ಡ್ ಕೂಡಾ ಅಷ್ಟೇ ಮುಖ್ಯವೆಂಬುದು ನಮ್ಮ ಅಭಿಪ್ರಾಯ.. ಹಾಗಾಗಿ ಟೈಟಲ್ ಕಾರ್ಡ್ ನ ಅಕ್ಷರಗಳ ಫಾಂಟ್ ನಿಂದಾ ಹಿಡಿದು ಅವುಗಳ ಪ್ಲೇಸ್ ಮೆಂಟ್ ಕೂಡಾ ಹೀಗೇ ಇರಬೇಕೆಂದು ಮಾಡಿಸುವ ಹಂತದಲ್ಲಿ, ಹರೀಶ್, ತಿಲಕ್ ಮತ್ತು ಮೈತ್ರಿ ಶ್ರೀನಿವಾಸ್ ಅವರಿಗೆ ತೊಂದರೆ ಕೊಟ್ಟದ್ದು ಅಷ್ಟಿಷ್ಟಲ್ಲ..

ನಮ್ಮೊಂದಿಗೆ ಅಮ್ಮಚ್ಚಿಯ ಪಯಣದಲ್ಲಿ ಜೊತೆಗೂಡಿದ ಇಂತಹ ಅನೇಕ ಪಯಣಿಗರು ನಮ್ಮೊಡನಿದ್ದಾರೆ….. ಇವರೆಲ್ಲರಿಗೂ ನಾವು ಕೊಟ್ಟದ್ದೆಷ್ಟೋ ಗೊತ್ತಿಲ್ಲ , ಆದರೆ, ಪಡೆದದ್ದಂತೂ ಲೆಕ್ಕವಿಲ್ಲದಷ್ಟು… ಎರಡು ತಿಂಗಳೊಳಗೆ , ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಎಲ್ಲವನ್ನೂ ಮುಗಿಸಿ ರಿಲೀಸ್ ಆಗಿಬಿಡುವ ಸಿನೆಮಾಗಳ ಮಧ್ಯೆ ಗಡಿಬಿಡಿ ಇಲ್ಲದೇ, ಸರಾಗವಾಗಿ, ಸಮಾಧಾನವಾಗಿ ಬಿಡುಗಡೆಗೆ ಸಿಧ್ದಳಾದಳು “ಅಮ್ಮಚ್ಚಿ”..

ಇಷ್ಟಾದರೂ ನಮ್ಮ ಸಿನೆಮಾ ಎಲ್ಲದರಲ್ಲೂ ನೂರಕ್ಕೆ ನೂರು ಸರಿಯೆಂಬ ಭ್ರಮೆ ನಮ್ಮದಲ್ಲ ಆದರೆ ಪ್ರತಿಯೊಂದು ಹಂತದಲ್ಲೂ ಅತ್ಯಂತ ನಿಷ್ಟೆಯಿಂದ, ಆಸೆಯಿಂದ ಕೆಲಸ ಮಾಡಿರುವುದಂತೂ ಸತ್ಯ. ಒಂದು ಮಗುವಿನ ಬೆಳವಣಿಗೆಯ ಪ್ರತಿ ಹಂತವನ್ನೂ ತಂದೆ, ತಾಯಿ ಅನುಭವಿಸುವ ರೀತಿ.. ಕಷ್ಟವಾದರೂ ಇಷ್ಟಪಡುವ ರೀತಿಯದು..

ಇಂತಾ ಅಪರಿಮಿತ ಪ್ರೀತಿಯಿಂದ ಕಟ್ಟಿದ “ಅಮ್ಮಚ್ಚಿ” ಯ ಮೊದಲ ಕಾಪಿ ತಯಾರಾದಾಗ ಹೊಸದೊಂದು ಅನುಭವ ಖುಷಿ, ಆತಂಕಗಳ ಮಿಶ್ರ ಭಾವ..ಆದಷ್ಟು‌ ಬೇಗ ನಮ್ಮವರಿಗೆ ತೋರಿಸಬೇಕೆಂಬ ತುಡಿತ.. ಅಂತೆಯೇ ನಮ್ಮ ಕೆಲ ಹಿತೈಶಿಗಳಿಗೆ ಮತ್ತು ಕಲಾವಿದರು ಮತ್ತು ತಂತ್ರಜ್ಞರಿಗಾಗಿ , ಒಂದು ಪ್ರದರ್ಶನ ಎಸ್. ಆರ್. ವಿ. ಥಿಯೇಟರ್ ನಲ್ಲಿ ಆಯೋಜಿಸಿದ್ದಾಯಿತು… ಶೂಟಿಂಗ್ ನ ಮೊದಲ‌ದಿನದಂತೆ ಅಂದೂ ಕೂಡಾ ಏನೋ‌ ಒಂದು ರೀತಿ ನಿರಾಳ ಭಾವ ನನ್ನದು. ಬಂದವರೆಲ್ಲಾ ಬಾಯ್ತುಂಬಾ ಹೊಗಳಿದರು….ಮನತುಂಬಿ ಹರಸಿದರು ಆದರೂ ಸಣ್ಣ ಆತಂಕ. ಎಷ್ಟೇ ಆದರೂ ನಮ್ಮವರಲ್ಲವೇ…

ಕೊನೆಗೆ, ರಂಗ ನಿರ್ದೇಶಕ ಮತ್ತು ನಮ್ಮ ಆತ್ಮೀಯರಾದ ಶಶಿಧರ್ ಭಾರೀಘಾಟ್ ಅವರು ಒಂದೇ ಮಾತಿನಲ್ಲಿ “ಯಾವಾಗಾರೀ ರಿಲೀಸ್ ಬೇಗ ಮಾಡಿಬಿಡಿ” ಅಂದಾಗ ಅಬ್ಬಾ ನಾವು ಗೆದ್ದೆವು ಅನಿಸಿದ್ದರ ಜೊತೆಗೆ ರಿಲೀಸ್ ಮಾಡುವ ನಮ್ಮ ಯೋಚನೆಗೆ ಪುಷ್ಟಿ ಸಿಕ್ಕಿತು..

ಹೌದು ನಮ್ಮ ಕನಸೂ ಅದೇ ಅಲ್ಲವೇ! ಸಿನೆಮಾ ರಿಲೀಸ್ ಆಗಲೇಬೇಕು…. ಸಿನೆಮಾ ಮಾಡುವುದೇ ಜನ ನೋಡಲೆಂದು… ಹತ್ತಾರು ಫೆಸ್ಟಿವಲ್ ಗಳಿಗೆ ಕಳುಹಿಸಿ ಒಂದೆರಡು ಅವಾರ್ಡ್ ತೆಗೆದುಕೊಂಡು ಡಬ್ಬದಲ್ಲಿಟ್ಟು ನಮ್ಮ ಸ್ನೇಹಿತರು ನೆಂಟರಿಗೆ ಸಿನೆಮಾ ತೋರಿಸಿ , ಸೈ ಎನಿಸಿಕೊಂಡು ನಿರ್ದೇಶಕಿ ಎಂಬ ವಿಸಿಟಿಂಗ್ ಕಾರ್ಡ್ ಮಾಡಿಸಿಕೊಳ್ಳುವ ಉದ್ದೇಶವಂತೂ ಖಂಡಿತಾ ನಮ್ಮದಲ್ಲಾ… ಜನ ಸಿನೆಮಾ ನೋಡಬೇಕು… ನೋಡಿ, ನಮ್ಮ ಕನಸನ್ನು ನನಸಾಗಿಸಬೇಕು..

ಕನಸುಗಳೇನೋ ಬೆಟ್ಟದಷ್ಟು,.. ನನಸಾಗುವುದು ಸುಲಭವೇ?

ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಗಳಿಗಿಂತಾ ದೊಡ್ಡ ಸಾಹಸವೆಂದರೆ, ಸಿನೆಮಾವನ್ನು ರಿಲೀಸ್ ಮಾಡುವುದು, ನಾವು ಸಿನೆಮಾದ ಬಡ್ಜೆಟ್ ಮಾಡುವಾಗ ರಿಲೀಸ್ ಮಾಡಬೇಕೆಂದು ಕನಸಿದ್ದೆವೇ ಹೊರತು ಹೇಗೆ? ಎಂದು ಅದರ ಬಗ್ಗೆ ಯೋಚಿಸಿಯೇ ಇರಲಿಲ್ಲ ಆದರೆ, ಸಿನೆಮಾದ ಒಟ್ಟು ಬಡ್ಜೆಟ್ ನ ಕಾಲುಭಾಗದಷ್ಟು ಹಣ ರಿಲೀಸ್ ಗೆ ಬೇಕಾಗುತ್ತದೆ ಎಂಬ ಅರಿವಾಗುವಷ್ಟರಲ್ಲಿ ನಿರ್ಮಾಪಕರು ತಮ್ಮಿಂದ ಸಾಧ್ಯವಾದಷ್ಟು ಹಣವನ್ನು ನೀಡಿಯಾಗಿತ್ತು. ಮತ್ತೆ ಅವರನ್ನು ಕೇಳುವುದಾರೂ ಹೇಗೆ?

ಈ ಸಂಕಷ್ಟದ ಘಳಿಗೆಯಲ್ಲಿ ನಮ್ಮ ಕನಸುಗಳನ್ನು ಸಕಾರಗೊಳಿಸಲು ನಮ್ಮೊಡನೆ ಬಂದವರು ನಮ್ಮ ಹಿತೈಶಿಗಳಾದ ಮುಂಬೈನ ವಿಶ್ವನಾಥ ಶೆಟ್ಟರು.. ಅವರ ಸಹಾಯದಿಂದ ಸಿನೆಮಾ ರಿಲೀಸ್ ಮಾಡುವ ಧೈರ್ಯ ಮಾಡಿದೆವು….ರಿಲೀಸ್ ಮಾಡುವ ಆಸೆ ಮತ್ತು ಧೈರ್ಯವಿದ್ದರಷ್ಟೇ ಸಾಕೇ? ಒಂದು ಸಿನೆಮಾ ರಿಲೀಸ್ ಮಾಡಲು?….

ನಿಜ ಇಷ್ಟು ಮಾತ್ರ ಸಾಲುವುದಿಲ್ಲ.. ಆದರೆ ಇಷ್ಟಿದ್ದರೆ ಮತ್ತೆಲ್ಲಾ ಸಾಧ್ಯ ಎಂಬುದು ನಮಗೆ ತೋರಿಸಿಕೊಟ್ಟಿದ್ದು “ಅಮ್ಮಚ್ಚಿ ” ಯ ರಿಲೀಸ್ ನ ಅನುಭವ.. ಆ ಅನುಭವದ ಪಯಣ ಮುಂದಿನ ಸಂಚಿಕೆಯಲ್ಲಿ….

‍ಲೇಖಕರು avadhi

November 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: