ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮಂದಿರಿಗೆ ಯಾವುದು ಅಸಾಧ್ಯ?

ಅಕ್ಷತಾ ಕೆ

ದಣಪೆಯಾಚೆ…

ಪಿಕ್ನಿಕ್ ಅನ್ನೋದು ಎಲ್ಲರಿಗೂ ಯಾಕೆ ಇಷ್ಟ ಆಗತ್ತೆ ಎಂದು ತರಗತಿಯೊಂದರಲ್ಲಿ ಕೇಳಿದಾಗ ಒಬ್ಬ ವಿದ್ಯಾರ್ಥಿ ಯಾಕೆಂದರೆ ಪಿಕ್ನಿಕ್ ಅನ್ನೋದು ಶಾರ್ಟ್ ಪಿರಿಯಡ್ ದಾಗಿರತ್ತೆ.. ಮತ್ತೆ ಎಲ್ಲಿಂದ ಹೊರಟಿದ್ದೇವೋ ಅಲ್ಲಿಗೆ ವಾಪಾಸ್ ಬಂದೆ ಬರುತ್ತೇವೆ ಎಂಬ ಖಾತ್ರಿ ಮತ್ತು ವಾಪಾಸ್ ಬರಲೇಬೇಕು ಎಂಬ ಅನಿವಾರ್ಯತೆ ಪಿಕ್ನಿಕ್ ನ ಒಂದೊಂದು ಕ್ಷಣವನ್ನು ಅನುಭವಿಸುವಂತೆ ಪ್ರೇರೇಪಿಸುತ್ತದೆ ಎಂದು ಉತ್ತರಿಸಿದ್ದ.

ಇದೀಗ ಅಮ್ಮಂದಿರ ವರ್ಗಾವಣೆ ಪ್ರಾರಂಭವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಗನ, ಅನಿವಾರ್ಯತೆ ಇದೆ ಅಂತಾದರೆ ಮಗಳ ಮನೆಯಲ್ಲಿ ನೆಲೆಸಲು ಅಮ್ಮಂದಿರು ತೆರಳುತಿದ್ದಾರೆ. ಆದರೆ ಇದರ ಅನುಭವ ಪಿಕ್ನಿಕ್ ನಂತಿಲ್ಲ. ಯಾಕೆಂದರೆ ತಾವೆಲ್ಲಿಂದ ತೆರಳುತಿದ್ದಾರೋ ಅಲ್ಲಿ ತಮ್ಮ ನೆನಪಿಗೊಂದು ಚಿಕ್ಕ ನವಿಲುಗರಿಯನ್ನೂ ಬಿಟ್ಟು ಹೋಗಲು ಅಮ್ಮಂದಿರಿಗೆ ಅವಕಾಶವಿಲ್ಲ ಹಾಗೆಂದು ವಿಧವೆ ಅಮ್ಮನ ಮುಂದಿನ ಬದುಕಿನ ಸಂಪೂರ್ಣ ಜವಾಬ್ದಾರಿ ಹೊತ್ತ ಮಗ ಬಹಳ ಪ್ರೀತಿಯಿಂದಲೇ ಏನೇನಿದೆಯೋ ಎಲ್ಲ ವಿಲೇವಾರಿ ಮಾಡಿ, ಯಾರಿಗಾದ್ರೂ ಏನಾದ್ರೂ ಸಣ್ಣ, ಪುಟ್ಟ ವಸ್ತುಗಳನ್ನು ಕೊಡೋದಿದ್ದರೆ ಕೊಟ್ಟು ಬಂದ್ಬಿಡು ಏನೂ ಬಾಕಿ ಉಳಿಸಿಕೊಳ್ಳಬೇಡ ಮತ್ತೆ ವಾಪಾಸ್ ಹೋಗೋ ಪ್ರಶ್ನೆ ಏನು ಇಲ್ವಲ್ಲ ಎಂದು ಹೇಳಿದ್ದಾನೆ.

castingಕಳೆದ ಒಂದು ದಶಕದಲ್ಲಂತೂ ಪ್ರತಿ ವರ್ಷ ಬೆಂಗಳೂರಿಗೆ ನೆಲೆಸಲು ತೆರಳುವ ಅಮ್ಮಂದಿರ ಸಂಖ್ಯೆ ಹೆಚ್ಚುತಿದೆ. ಇಳಿವಯಸ್ಸಿಗೆ ಕಾಲಿಟ್ಟ ಅಮ್ಮಂದಿರು ತಾವು 30,40 ವರ್ಷ ಬದುಕನ್ನು ಕಟ್ಟಿಕೊಂಡ ಊರು, ಮನೆ ಎಲ್ಲವನ್ನು ಬಿಟ್ಟು ಮಗನ ಹಿಂದೆ ಕಣ್ಣಿ ಕಟ್ಟಿದ ಕರುವಿನಂತೆ ಹಿಂಬಾಲಿಸುತಿದ್ದಾರೆ. ಇಳಿವಯಸಿನಲ್ಲಿ ಗಂಡನನ್ನು ಕಳೆದುಕೊಂಡು ಒಂಟಿಯಾಗಿ ಬದುಕುವ ಪ್ರಶ್ನೆ ಧುತ್ತೆಂದು ಎದುರು ಬಂದಾಗ ಆಸ್ತಿ, ಮನೆ ಎಲ್ಲ ಮಾರಿ ನನ್ನ ಜೊತೆ ಬಂದ್ಬಿಡಮ್ಮ ಎಂಬ ಮಗನ ಮಾತು ಸರಿ ಎಂದೇ ಅನಿಸುತ್ತದೆ.

ಮಲೆನಾಡಿನ ಹಳ್ಳಿ ಮೂಲೆಯಲ್ಲಿ ಸಂಸಾರ ಕಟ್ಟಿಕೊಂಡು, ತೋಟ ಮಾಡಿಕೊಂಡು ಮೂವತ್ತು, ಮೂವತೈದು ವರ್ಷದಿಂದ ಬದುಕುತಿದ್ದ ಹೆಂಗಸರು ಸಹ ಎಲ್ಲ ಮಾರಿ ಬೆಂಗಳೂರಿನಲ್ಲಿ ನೆಲೆಯಾಗಿರುವ ಮಗನ ಮನೆಗೆ ಹೋಗಲು ಒಲವು ತೋರಿಸಿದಾಗ ನನಗೆ ಬಹಳ ಅಚ್ಚರಿಯಾಯಿತು. ಆ ಹೆಂಗಸರು ಹೇಳುವುದು ಅವರಂತೂ ಇಲ್ಲಿಗೆ ಬರುವುದಿಲ್ಲ , ಅದರ ಬದಲಿಗೆ ನಾವೇ ಅಲ್ಲಿಗೆ ಹೋಗಿರೋದೆ ಸರಿ ಅನ್ನಿಸ್ತದೆ.

ಇಲ್ಲ ಅಂದರೆ ವರ್ಷಕ್ಕೊಮ್ಮೆ ಮಕ್ಕಳ ಜೊತೆ ಬರುವ ಮೊಮ್ಮಕ್ಕಳಿಗೆ ನಮ್ಮ ಸಂಪರ್ಕವೇ ಇರುವುದಿಲ್ಲ. ಕುಟುಂಬದಲ್ಲಿ ಪರಸ್ಪರ ಒಂದು ಮೋಹ ಬೆಳೆಯುತ್ತದಲ್ಲ ಅದೇ ಇರುವುದಿಲ್ಲ. ಹೀಗೆ ಹೇಳುವಾಗ ಅಮ್ಮಂದಿರ ನಿರ್ಧಾರ ತುಂಬಾ ಸರಿ ಅನ್ನಿಸ್ತದೆ. ಆದರೆ ಊರಲ್ಲಿ ಆಸ್ತಿ, ಮನೆ ಮಾರಿ ಹಾಕಿ ಬಂದ ಅಮ್ಮಂದಿರು ಸುಖವಾಗಿ, ನೆಮ್ಮದಿಯಿಂದ ಇದ್ದಾರೆಯೇ ಎಂದು ನೋಡಿದರೆ ಹಾಗಿರುವವರ ಸಂಖ್ಯೆ ಬೆರಳೆಣಿಕೆಯಷ್ಟು ಇಲ್ಲ ಎಂದೆ ಹೇಳಬಹುದು. ಆರ್ಥಿಕವಾಗಿ ಮಗನ ಮೇಲೆ ಪೂರ್ತಿ ಅವಲಂಬಿಸಿರುವ ಅಮ್ಮಂದಿರಿರಲಿ ಕೊನೆಗಾಲದಲ್ಲಿ ಗಂಡನ ಪೆನ್ಷನ್ ಹಣ, ಆಸ್ತಿ, ಮನೆ ಮಾರಿದ ಹಣ ಎಂದು ಜೋಪಾನವಾಗಿ ಇಟ್ಟುಕೊಂಡಿರುವ ಅಮ್ಮಂದಿರು ಸಹ ಒಂದು ರೀತಿ ಕೊರಗಿನಲ್ಲಿ, ಅನಿವಾರ್ಯತೆಯಲ್ಲಿ ಅಲ್ಲಿರುವಂತೆ ಕಾಣುತ್ತದೆ ವಿನಃ ಯಾವುದೇ ಸಂತೋಷ ಅಥವಾ ಸಂತೃಪ್ತಿಯಿಂದಲ್ಲ.

ಪತಿ ತೀರಿಹೋದ ಮೇಲೆ ಹಳ್ಳಿಯಲ್ಲಿದ್ದ ಆಸ್ತಿ, ಮನೆ ಎಲ್ಲ ಮಾರಿಕೊಂಡು ಬೆಂಗಳೂರಿಗೆ ಹೋಗಿರುವ ನನ್ನ ಗೆಳತಿಯ ಅಮ್ಮನನ್ನು ಈ ಬಗ್ಗೆ ಕೇಳಿದರೆ ಅವರು ಹೇಳಿದರು 4 ಎಕರೆ ಗದ್ದೆ, 1 ಎಕರೆ ತೋಟವಿತ್ತು, ಮನೆಯನ್ನು ಸೇರಿಸಿ ಎಲ್ಲ ಮಾರಿಬಿಟ್ಟೆ, ಮಗ ಹೇಳಿದ ಅಂತ ಹಾಗೆ ಮಾಡಿದೆ ಮಗ ಸೊಸೆ ಒಳ್ಳೆಯವರೇ ಆದರೆ ಒಂದು ವರ್ಷವಾಯಿತು ಇಲ್ಲಿಗೆ ಬಂದು ಒಮ್ಮೆಯು ಊರಿಗೆ ಹೋಗಲೇ ಇಲ್ಲ. ಹೋಗೋಕೆ ಯಾವ ಕಾರಣವೂ ಇಲ್ಲ. ಆದರೆ ತುಂಬಾ ಸರ್ತಿ ಅನ್ನಿಸೋದು ಮನೆ ಮತ್ತು ಒಂದೆಕ್ರೆ ಆಸ್ತಿಯನ್ನಾದರೂ ಮಾರದೇ ಇಟ್ಕೊಬೇಕಿತ್ತು. ಮನಸು ಬಂದಾಗ ಅಥವಾ ಮನಸು ಕೆಟ್ಟಾಗ ಊರಿಗೆ ಬರಬಹುದಿತ್ತು. ಒಂದು ನೆಲೆ ಅಂತ ಇರ್ತಿತ್ತು.

ಸಮಾಜಶಾಸ್ತ್ರಜ್ಞರಾಗಿರುವ ನನ್ನ ಗೆಳೆಯರೊಬ್ಬರು ಒಂದು ವಿಷಯದ ಬಗ್ಗೆ ನನ್ನ ಗಮನ ಸೆಳೆದರು. ಅವರು ಹೇಳಿದ್ದು ಹೆಂಗಸರು 65,70 ವರ್ಷದವರೆಗೂ ತುಂಬಾ ಚೈತನ್ಯಶಾಲಿಗಳಾಗೆ ಇರುತ್ತಾರೆ. ಸಾಕಷ್ಟು ಕೆಲಸಗಳನ್ನು ಮಾಡಲು ಅವರಿಂದ ಸಾಧ್ಯವಾಗುತ್ತದೆ. ಆದರೆ ಹಳ್ಳಿಯಿಂದ ಒಂದು 55, 60 ವಯಸ್ಸಲ್ಲಿ ಮಗನ ಮನೆಯಲ್ಲಿ ನೆಲೆಸಲು ಬೆಂಗಳೂರಿಗೆ ಬರುತ್ತಾರಲ್ಲ ಅವರಲ್ಲಿ ಹೆಚ್ಚಿನ ಹೆಂಗಸರು ಮಾನಸಿಕವಾಗಿ ತುಂಬಾ ಬಳಲುತ್ತಿರುತ್ತಾರೆ. ಜೊತೆಗೆ ಹಳ್ಳಿಯಲ್ಲಿ ಅವರು ಮಾಡುತಿದ್ದ ಅರ್ಧದಷ್ಟು ಕೆಲಸವನ್ನು ಮಾಡಲು ಅವರಿಂದ ಇಲ್ಲಿ ಸಾದ್ಯವಾಗುತ್ತಿಲ್ಲ. ಯಾವಾಗಲೂ ಒಂದು ರೀತಿಯ ನಾಸ್ಟಾಲ್ಜಿಯಾದಲ್ಲಿರುತ್ತಾರೆ’.

ಯಾಕೆ ಹೀಗಾಗುತ್ತದೆ ಎಂದೆ. ನಿರ್ಧಿಷ್ಟವಾಗಿ ಇದೇ ಕಾರಣ ಎಂದು ಹೇಳುವಂತಿಲ್ಲ ಹಲವು ಹತ್ತು ಕಾರಣಗಳಿವೆ ಆದರೆ ಮುಖ್ಯವಾಗಿ ತಾವು ಬದುಕಿ ಬಾಳಿದ ಊರನ್ನು ಬಿಟ್ಟುಬರುವುದು ಎಷ್ಟೆ ಮಗ\ಮಗಳು ಮೊಮ್ಮಕ್ಕಳ ಹಂಬಲವಿದ್ದರೂ ತುಂಬಾ ಮಾನಸಿಕವಾಗಿ ಹೈರಾಣ ಮಾಡುವಂತದ್ದು, ಹಳ್ಳಿಯಲ್ಲಿ ಸಂಬಂದಿಕರು, ನೆರೆಹೊರೆ, ಅಷ್ಟೇ ಅಲ್ಲದೆ ಮನೆಯ ಆಳುಕಾಳುಗಳೊಂದಿಗೂ ಅಧಿಕಾರಯುತವಾಗಿ ಒಳಗಿನಿಂದ ಸಂಬಂದ ಕಟ್ಟಿಕೊಂಡಿರುತ್ತಾರೆ. ಅದು ಇಲ್ಲಿ ಹೇಗೆ ಸಾಧ್ಯ. ಮನೆ ಕೆಲಸದವಳು ಸಹ ಇಲ್ಲಿ ಪ್ರೊಫೆಶನಲ್ ಆಗಿ ವರ್ತಿಸುತ್ತಿರುತ್ತಾಳೆ. ಇರೋದನ್ನ ಕಾಪಾಡಿಕೊಂಡು ಹೋಗಬಹುದಷ್ಟೆ, ಹೊಸ ಸ್ನೇಹ ಸಂಬಂಧ ಬೆಳೆಸುವ ವಯಸ್ಸು ಇದಲ್ಲ. ಜೊತೆಗೆ ಮಗ, ಸೊಸೆ, ಮೊಮ್ಮಕ್ಕಳ ಲೋಕ ಬೇರೆ ಇರುತ್ತದೆ ಆ ಲೋಕವನ್ನು ಪ್ರವೇಶಿಸಲು ಇವರಿಗೆ ಸಾಧ್ಯವಿಲ್ಲ ಹೀಗಾದಾಗ ಒಂಟಿತನಕ್ಕೆ ಬೀಳುತ್ತಾರೆ, ತಮ್ಮ ಮನಸಿಗೂ ಕಿರಿಕಿರಿ ಮಾಡಿಕೊಂಡು ಉಳಿದವರಿಗೂ ಕಿರಿಕಿರಿ ಅನ್ನಿಸತೊಡಗುತ್ತಾರೆ.

ಇದಕ್ಕೆ ಪರಿಹಾರ ಏನು ಎಂದೆ.

ಅದನ್ನು ಅಮ್ಮಂದಿರೇ ಹುಡುಕಿಕೊಳ್ತಾರೆ ಜಗತ್ತಿನ ಬೆಳವಣಿಗೆಗಳೊಂದಿಗೆ ಮೌನವಾಗಿಯೇ ಅನುಸಂಧಾನ ನಡೆಸುತ್ತಾ ಅದರಲ್ಲಿ ಯಶಸ್ವಿಯು ಆಗುತ್ತಾ ಬಂದಿದ್ದಾರಲ್ಲವೇ ಅಮ್ಮಂದಿರು. ಮಕ್ಕಳ ಟ್ರ್ಯಾಕ್ಗೆ ತಾವೇ ಹೋಗುತ್ತಾ ಆ ಮೂಲಕ ಮಕ್ಕಳನ್ನು ತಮ್ಮ ಟ್ರ್ಯಾಕ್ಗೆ ಎಳೆದಿಟ್ಟು ಕೊಂಡು ಪೊರೆಯುತ್ತಾ ಬಂದಿದ್ದಾರೆ. ಅಮ್ಮಂದಿರಿಗೆ ಯಾವುದು ಅಸಾಧ್ಯ ಎಂದರು.

‍ಲೇಖಕರು avadhi

23 November, 2008

1 Comment

  1. ahalya

    Tumba saamayika, prastuta.Ishtavaitu.Thanks.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading