(ನಿನ್ನೆಯಿಂದ)
11
ವೈದ್ಯಕೀಯ ಸೌಲಭ್ಯ ಮತ್ತು ವಿಮಾ ನೀತಿಗಳು
ಅಮೆರಿಕದಲ್ಲಿ ವೈದ್ಯಕೀಯ ಸೌಲಭ್ಯ ಮತ್ತು ವಿಮೆ ಜೊತೆ ಜೊತೆಯಲ್ಲೇ ಸಾಗುತ್ತದೆ. ಇಲ್ಲಿ ವಿಮೆಯಿಲ್ಲದೆ ವೈದ್ಯರು ಬಳಿಗೆ ಹೋದರೆ ತೆರಬೇಕಾದ ಶುಲ್ಕ ಸುಮಾರು ಹತ್ತು ಪಟ್ಟಿನಷ್ಟು ಹೆಚ್ಚು. ಹಾಗಾಗಿ ಪ್ರತಿಯೊಬ್ಬರೂ ವಿಮೆಯನ್ನು ಪಡೆದುಕೊಳ್ಳುವುದು ಇಲ್ಲಿ ಒಂದು ರೀತಿಯಲ್ಲಿ ಕಡ್ಡಾಯವೇ ಆಗಿದೆ. ಹತ್ತು ಜನಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ತನ್ನ ನೌಕರರ ವಿಮೆಯ ಕಂತಿನ ಬಹಳಷ್ಟು ಭಾಗವನ್ನು ತಾನು ಹೊರುತ್ತದೆ.
ಸ್ವಂತ ವ್ಯವಹಾರವಿರುವವರ ವಿಮೆಯ ಹೊಣೆ ಅವರ ಮೇಲೇ. ಈ ವಿಮೆಯಲ್ಲೂ ಮೂರು ಬಗೆಗಳಿವೆ. ಮೊದಲನೆಯದಾಗಿ ಕೆಲವು ಪ್ರತಿಷ್ಠಿತ ಆಸ್ಪತ್ರೆಗಳ ಜಾಲಗಳು ತಮ್ಮದೇ ವಿಮೆಯ ಸೌಲಭ್ಯ ನೀಡುತ್ತದೆ. ಆ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳುವ ಎಲ್ಲ ಸೇವೆಗಳಿಗೂ ಈ ವಿಮೆಯು ಲಭ್ಯವಾಗುತ್ತದೆ. ಎರಡನೆಯ ಬಗೆಯಲ್ಲಿ ನಮ್ಮಲ್ಲಿನಂತೆ ಹಲವು ವಿಮಾ ಕಂಪನಿಗಳು ಅನೇಕ ಬಗೆಯ ವಿಮೆಗಳನ್ನು ನೀಡುತ್ತವೆ. ಆ ಕಂಪನಿಗಳೇ ಆಸ್ಪತ್ರೆಗಳೊಂದಿಗೆ ಕರಾರು ಮಾಡಿಕೊಂಡಿರುತ್ತವೆ.
ಈ ಕಂಪನಿಯೊಂದಿಗೆ ನೋಂದಾಯಿಸಿಕೊಂಡ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳುವ ಚಿಕಿತ್ಸೆಗೆ ಈ ವಿಮಾಸೌಲಭ್ಯ ಸಿಗುತ್ತದೆ. ಮೂರನೆಯದಾಗಿ ಕೆಲವು ಸ್ವಂತ ವೈದ್ಯಾಲಯಗಳನ್ನು ಹೊಂದಿರುವ ವೈದ್ಯರು ಕೆಲವು ವಿಮಾ ಕಂಪನಿಗಳೊಂದಿಗೆ ಕರಾರು ಮಾಡಿಕೊಂಡು ತಮ್ಮಲ್ಲಿ ಬರುವ ರೋಗಿಗಳಿಗೆ ತಮ್ಮ ಕಡೆಯಿಂದ ಇಂತಹ ವಿಮೆಯ ಸೌಲಭ್ಯವನ್ನು ನೀಡುತ್ತಾರೆ. ಒಟ್ಟಿನಲ್ಲಿ ಎಷ್ಟು ಮೊತ್ತಕ್ಕೆ, ಎಂತಹ ವಿಮೆಯನ್ನು ಪಡೆದುಕೊಳ್ಳಬೇಕೆನ್ನುವುದು ಅವರವರ ಅವಶ್ಯಕತೆ ಮತ್ತು ಇಚ್ಛೆಗೆ ಬಿಟ್ಟಿದ್ದು. ಇಲ್ಲದಿದ್ದರೆ ದಂಡವಾಗಿ ಹಣ ಕೊಡುವ ಹಣೆಬರಹ ಕಟ್ಟಿಟ್ಟಿದ್ದು!
ಇಲ್ಲಿ ದೇಶದ ಉದ್ದಗಲಕ್ಕೂ ಹಲವು ಆಸ್ಪತ್ರೆಗಳ ಜಾಲಗಳು ಹರಡಿಕೊಂಡಿರುತ್ತವೆ. ಅವುಗಳಿರುವ ಸ್ಥಳಗಳು, ಆ ಆಸ್ಪತ್ರೆಗಳು ಯಾವ ಯಾವ ವಿಮೆಯನ್ನು ಒಪ್ಪಿಕೊಳ್ಳುತ್ತವೆ ಎಂಬ ವಿವರಗಳು, ಪ್ರತಿಯೊಂದು ಶಾಖೆಯಲ್ಲೂ ಸೇವೆ ಸಲ್ಲಿಸುತ್ತಿರುವ ವೈದ್ಯರ ವಿವರಗಳು, ಅವರ ಬಗ್ಗೆ ಅವರ ನೆರವನ್ನು ಪಡೆದುಕೊಂಡ ಜನರ ಅಭಿಪ್ರಾಯಗಳು. ಇಂತಹ ಎಲ್ಲ ಮಾಹಿತಿಗಳೂ ಜಾಲತಾಣದಲ್ಲಿ ದೊರೆಯುತ್ತವೆ. ಇವುಗಳ ತೌಲನಿಕ ಅಧ್ಯಯನ ಮಾಡಿಕೊಂಡು ಇಲ್ಲಿನ ಜನರು ತಮಗೆ ಹೊಂದುವ ವಿಮಾ ಸೌಲಭ್ಯವನ್ನು ಖರೀದಿಸುತ್ತಾರೆ.
ಇಡೀ ದೇಶದ ಯಾವುದೇ ಭಾಗದಲ್ಲಿದ್ದಾಗಲೂ, ವಿಮೆಯ ವಿವರಗಳನ್ನು ನೀಡಿ ತನ್ನ ಆಯ್ಕೆಯ ಜಾಲದ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿ ಚಿಕಿತ್ಸೆ ಪಡೆದುಕೊಳ್ಳಬಹುದು. ಕೆಲವು ಪ್ರಾಣಾಂತಿಕವಾದ ಸನ್ನಿವೇಶಗಳಲ್ಲಿ ಆತನ ವಿಮೆಗೆ ಒಳಪಡದ ಆಸ್ಪತ್ರೆಗೆ ಹೋದರೂ ಅಗತ್ಯವಾದ ಚಿಕಿತ್ಸೆ ನೀಡಿದ ನಂತರ ಅವನ ಯಾವುದೇ ವಿಮೆಯಿಂದ ಆಸ್ಪತ್ರೆಯು ಹಣವನ್ನು ಪಡೆದುಕೊಳ್ಳುವಂತ ಸೌಲಭ್ಯವೂ ಇದೆ.
ಇಲ್ಲಿನ ವೈದ್ಯರು ಯಾವುದೇ ಚಿಕಿತ್ಸೆ ನೀಡುವುದಾದರೂ ಸಂಪೂರ್ಣ ತಪಾಸಣೆಯಿಲ್ಲದೆ ನೀಡುವುದಿಲ್ಲ. ಇಂತಹ ಪ್ರತಿಯೊಂದು ಆಸ್ಪತ್ರೆಯ ಭೇಟಿಗೂ, ವೆಚ್ಚದ ಒಂದು ಸಣ್ಣ ಭಾಗವನ್ನು ರೋಗಿ ಭರಿಸಬೇಕು; ಮತ್ತು ಹೆಚ್ಚಿನ ಭಾಗವನ್ನು ವಿಮೆ ಪೂರೈಸುತ್ತದೆ. ತಪಾಸಣೆಯ ನಂತರ ವೈದ್ಯರು ಯಾವುದೇ ಔಷಧಿಯನ್ನು ಸೂಚಿಸಿದರೂ, ಅದರ ಜೊತೆಯಲ್ಲೇ ಅದರ ಅಡ್ಡ ಪರಿಣಾಮಗಳ ಒಂದು ಉದ್ದನೆಯ ಪಟ್ಟಿಯನ್ನು ನೀಡುತ್ತಾರೆ. ಯಾವುದನ್ನು ರೋಗಿ ಅಲಕ್ಷಿಸಬಹುದು, ಯಾವುದಕ್ಕೆ ತಕ್ಷಣ ವೈದ್ಯರನ್ನು ಯಾವ ರೀತಿಯಲ್ಲಿ (ಮೇಲ್/ಫೋನ್ ಮುಖಾಂತರವೋ, ಮುಖತಃ ಭೇಟಿಯೋ) ಸಂಪರ್ಕಿಸಬೇಕು ಎಲ್ಲವನ್ನೂ ಲಿಖಿತ ರೂಪದಲ್ಲಿ ನೀಡಿರುತ್ತಾರೆ.
ಸಣ್ಣ-ಪುಟ್ಟ ಜ್ವರ, ಕೆಮ್ಮು, ನೆಗಡಿ ಇಂತಹ ಖಾಯಿಲೆಗಳಿಗೆ ಔಷಧಿಯನ್ನು ತಕ್ಷಣವೇ ನೀಡುವುದಿಲ್ಲ. ಆಹಾರ, ವಿಶ್ರಾಂತಿ ಮತ್ತು ತೆಗೆದುಕೊಳ್ಳಬೇಕಾದ ಜಾಗರೂಕತೆಗಳನ್ನು ಸೂಚಿಸಿ ಕಳುಹಿಸುತ್ತಾರೆ. ಯಾವುದಕ್ಕೂ ಬಗ್ಗದ ಸ್ಥಿತಿಯಾದರೆ ಮಾತ್ರ ಔಷಧಿಯನ್ನು ಸೂಚಿಸುತ್ತಾರೆ. ಇಲ್ಲಿನ ಕಾನೂನು ವ್ಯವಸ್ಥೆ ವಕೀಲರ ಸಾಮ್ರಾಜ್ಯವೇ ಆಗಿದೆ. ಎಷ್ಟೇ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಿದ್ದರೂ, ವೈದ್ಯಕೀಯ ಉಪಚಾರದಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಆಗುವ ಯಾವುದೇ ಸಣ್ಣ ಲೋಪಕ್ಕೂ ವೈದ್ಯರು ತೆರಬೇಕಾದ ಬೆಲೆ ವಿಪರೀತದ್ದು.
ಆದ್ದರಿಂದ ಇಲ್ಲಿನ ವೈದ್ಯರು ಇಂತಹ ಸನ್ನಿವೇಶಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬೇಕಾದ ವಿಮೆಯನ್ನು ಅವರು ಕೆಲಸ ಮಾಡುತ್ತಿರುವ ವೈದ್ಯಕೀಯ ಸಂಸ್ಥೆಯು ಅವರ ಪರವಾಗಿ ಪಡೆದುಕೊಂಡಿರುತ್ತದೆ. ಸ್ವಂತ ವೈದ್ಯಾಲಯವನ್ನು ಹೊಂದಿರುವ ವೈದ್ಯರು ಮಾತ್ರ ಇಂತಹ ವಿಮೆಯನ್ನು ತಾವೇ ಪಡೆದುಕೊಳ್ಳಬೇಕು.
ಇಲ್ಲಿನ ವೈದ್ಯರೂ ಹಾಗೂ ವೈದ್ಯ ವೃತ್ತಿಗೆ ಪೂರಕವಾದ ಸೇವೆಯನ್ನು ನೀಡುವವರು ಎರಡು ವರ್ಷಗಳಿಗೆ ಒಮ್ಮೆ ತಮ್ಮ ವೃತ್ತಿಗೆ, ವಿಷಯಕ್ಕೆ ಸಂಬಂಧಿಸಿದ ನಿರ್ದಿಷ್ಟ ಅವಧಿಯ ಪರೀಕ್ಷೆಯನ್ನು ಜಾಲತಾಣದಲ್ಲಿ ಪಡೆದುಕೊಳ್ಳಬೇಕು. ಅಷ್ಟು ಗಂಟೆಗಳಲ್ಲಿ ಇಂತಿಷ್ಟು ಸಮಯದ ಲಿಖಿತ ಪರೀಕ್ಷೆಗಳು, ಇಂತಿಷ್ಟು ಸಮಯದ ವರ್ಕ್ ಶಾಪ್‌ಗಳು, ಸೆಮಿನಾರ್‌ಗಳು ಹಾಗೂ ತರಬೇತಿಗಳನ್ನು ಪಡೆದುಕೊಳ್ಳಲೇಬೇಕೆಂಬ ನಿಯಮವಿದೆ. ಇವನ್ನು ಪೂರೈಸಲಾರದವರ ಕೆಲಸದ ಪರವಾನಗಿಯು ರದ್ದಾಗಿಹೋಗುತ್ತದೆ.
ಹಾಗಾಗಿ ಯಾವುದೋ ಕಾಲದಲ್ಲಿ ಪರೀಕ್ಷೆ ಪಾಸು ಮಾಡಿ ಬಂದವರು, ಇತ್ತೀಚಿನ ಹೊಸ ಹೊಸ ಬೆಳವಣಿಗೆಯನ್ನು ತಮ್ಮದಾಗಿಸಿಕೊಳ್ಳದೇ ವೃತ್ತಿಯನ್ನು ಮುಂದುವರಿಸಲಾಗದು.
ಇಲ್ಲಿನ ದೂರದರ್ಶನದಲ್ಲಿ ಎಷ್ಟೋ ಖಾಯಿಲೆಗಳಿಗೆ ಬಂದಿರುವ ಹೊಸ ಹೊಸ ಔಷಧಿಗಳನ್ನು ಕುರಿತು ಹಲವು ಕಂಪನಿಗಳ ಜಾಹೀರಾತುಗಳು ಬರುತ್ತಿರುತ್ತವೆ. ಅವುಗಳಿಂದ ರೋಗಿಗಳಿಗಾಗುವ ಉಪಕಾರವನ್ನು ಹೇಳುತ್ತಿರುವಾಗಲೇ, ಅಡ್ಡ ಪರಿಣಾಮವನ್ನು ಕುರಿತೂ ಹೇಳುತ್ತವೆ. ಇಂತಹ ಜಾಹೀರಾತನ್ನು ನೀಡುವ ಕಂಪನಿಗಳಿಗೂ ವಕೀಲರೆಂಬ ನಕ್ಷತ್ರಿಕರ ಕಾಟ ತಪ್ಪಿದ್ದಲ್ಲ.
ಹಾಗಾಗಿ ತಮ್ಮ ಜಾಹೀರಾತಿನಲ್ಲಿ ತಪ್ಪದೇ ಇಂತಹ ಯಾವುದೇ ಔಷಧಿಯನ್ನು ರೋಗಿಗಳು ತಮ್ಮ ವೈದ್ಯರ ಸಲಹೆ ಇಲ್ಲದೆ ಉಪಯೋಗಿಸಬಾರದು ಎನ್ನುವ ಸೂಚನೆಯನ್ನೂ ಕಡ್ಡಾಯವಾಗಿ ನೀಡುತ್ತವೆ. ಇಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ಕಾಪಾಡಿಕೊಳ್ಳುವಲ್ಲಿ ಪರಿಣಿತರೇ!!.
ಬೇರೆ ದೇಶದಿಂದ ಅಮೆರಿಕಕ್ಕೆ ಬರುವ ಪ್ರವಾಸಿಗರೆಲ್ಲರೂ ವಿಮೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕು. ಹಾಗೆಂದು ಇವರು ಸಣ್ಣ-ಪುಟ್ಟ ಕಾರಣಗಳಿಗೆ ವೈದ್ಯರ ಬಳಿ ಓಡಲಾಗದು. ಅವರು ತೆಗೆದುಕೊಂಡಿರುವ ವಿಮೆಯನ್ನು ಉಪಯೋಗಿಸಿಕೊಳ್ಳಬೇಕೆಂದರೆ, ಆ ವಿಮೆಯನ್ನು ಒಪ್ಪಿಕೊಳ್ಳುವ ಆಸ್ಪತ್ರೆಯನ್ನು ಮಾತ್ರ ಸಂದರ್ಶಿಸಬಹುದು.
ರೋಗಿಯ ಸಂಪೂರ್ಣ ರೋಗ ಚರಿತ್ರೆ ಗೊತ್ತಿಲ್ಲದೆ ಇಲ್ಲಿನ ವೈದ್ಯರು ಯಾವ ಚಿಕಿತ್ಸೆಯನ್ನೂ, ಸಲಹೆಯನ್ನೂ ನೀಡುವುದಿಲ್ಲ. ಹಾಗೂ ಸಂಪರ್ಕಿಸಬೇಕಾದ ಸಂದರ್ಭ ಒದಗಿದಲ್ಲಿ ಅವರ ಆಸ್ಪತ್ರೆಯ ವೆಚ್ಚದ ಅಲ್ಪ ಭಾಗವನ್ನು ಮಾತ್ರ ವಿಮೆ ಭರಿಸುತ್ತದೆ; ಹೆಚ್ಚಿನ ಭಾಗವನ್ನು ರೋಗಿಗಳೇ ನೀಡಬೇಕು. ಇಲ್ಲಿನ ವೈದ್ಯಕೀಯ ಸೌಲಭ್ಯ ಅತ್ಯಂತ ತುಟ್ಟಿಯಾದ್ದರಿಂದ ಸುಲಭಕ್ಕೆ ಪ್ರವಾಸಿಗರು ಇಲ್ಲಿನ ವೈದ್ಯರನ್ನು ಸಂಪರ್ಕಿಸುವುದಿಲ್ಲ. ಆದರೆ ತುರ್ತು ಸನ್ನಿವೇಶಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಯಾವುದೇ ಹಿಂಜರಿಕೆ ಪಡಬೇಕಾದ್ದಿಲ್ಲ. ದುಬಾರಿ ವೆಚ್ಛ ಭರಿಸಬೇಕಾಗುತ್ತದೆ ಅಷ್ಟೇ!
ಪರದೆ ಜಾರುವಾಗ..
ನಾವು ಚಿಕ್ಕವರಿದ್ದಾಗ ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಹೊರದೇಶಕ್ಕೆ ಹೋಗಿ ಬಂದರೆಂದು ಕೇಳುತ್ತಿದ್ದೆವು. ರಾಜಕಾರಣಿಗಳನ್ನು ಬಿಟ್ಟರೆ, ಹಾಗೆ ಹೋಗುತ್ತಿದ್ದವರೆಲ್ಲಾ ಅತ್ಯಂತ ಉನ್ನತ ಹುದ್ದೆಯಲ್ಲಿರುತ್ತಿದ್ದವರು, ತಮ್ಮ ಕಛೇರಿಯೋ, ಸಂಸ್ಥೆಯೋ ಪ್ರಯಾಣದ ವೆಚ್ಚವನ್ನು ಭರಿಸಿದರೆ ಮಾತ್ರ ಹೋಗುತ್ತಿದ್ದವರು. ಇಲ್ಲವೇ ಬಹುಮಟ್ಟಿಗೆ ಸಿರಿವಂತರ ಮಕ್ಕಳಾದ ವೈದ್ಯರೋ, ಇಂಜಿನಿಯರ್‌ಗಳೋ, ವಕೀಲರೋ ತಮ್ಮ ಉನ್ನತ ವ್ಯಾಸಂಗಕ್ಕೆ ತೆರಳುತ್ತಿದ್ದರು. ಇಂಥವರ ಸಂಖ್ಯೆಯೂ ಬೆರಳೆಣಿಕೆಯಷ್ಟು.
ತಮ್ಮ ಅನುಭವಗಳನ್ನು ಅವರೇನಾದರೂ ಹೇಳಿದರೆ ಅದು ಈ ಲೋಕದ ಕತೆಯಲ್ಲ; ಯಾವುದೋ ಲೋಕದ್ದು ಎನ್ನುವಂತೆ ನಮಗೆ ಭಾಸವಾಗುತ್ತಿತ್ತು. ಹಾಗೆ ಹೋಗಿಬಂದವರನ್ನು ಕಂಡರೆ ನಮಗೆ ಏನೋ ಒಂದು ರೀತಿಯ ಭಯ ಮಿಶ್ರಿತ ಗೌರವ. ಅಂಥವರನ್ನು ಮಾತನಾಡಿಸಲೂ ಹಿಂದೇಟು. ಆದರೆ ಇಂದು ಹಲವು ಬಹುರಾಷ್ಟ್ರೀಯ ಕಂಪನಿಗಳು ನಮ್ಮಲ್ಲಿ ಹಬ್ಬಿಕೊಂಡಿರುವಾಗ, ಕಂಪನಿಯ ವತಿಯಿಂದ ಕೆಲಸದ ಮೇಲೆ ಕಳಿಸುವಾಗ ಇಲ್ಲಿನ ಹಲವರಿಗೆ ಹೊರದೇಶಕ್ಕೆ ಹೋಗುವುದು ಅನಿವಾರ್ಯವೂ ಆಗಿದೆ. ಕೆಲವರಿಗೆ ಇದೊಂದು ಒಳ್ಳೆಯ ಅವಕಾಶವೂ ಆಗಿದೆ. ಒಂದಷ್ಟು ಕಾಲ ಅಲ್ಲಿದ್ದು ಸಂಪಾದಿಸಿಕೊಂಡು ಬರಬಹುದೆಂಬ ಚಿಂತನೆಯೂ ಇದೆ.
ನಾವು ಕಾಲೇಜಿನ ಓದನ್ನು ಮುಗಿಸುವ ಸಮಯದಲ್ಲಿ ಹೀಗೆ ವಿದೇಶಕ್ಕೆ ಹೋಗುವವರ ಸಂಖ್ಯೆ ಸ್ವಲ್ಪ ಮಟ್ಟಿಗೆ ಹೆಚ್ಚಿದ್ದರೂ, ಇಂದಿನಂತೆ ಮನೆಗೊಬ್ಬರಾದರೂ ಹೋಗಿರುತ್ತಾರೆ ಎನ್ನುವ ಪರಿಸ್ಥಿತಿ ಇರಲಿಲ್ಲ. ಈಗ ‘ಇಷ್ಟೆಲ್ಲಾ ಇದ್ದರೂ, ಇನ್ನೂ ಇಲ್ಲೇ ಏಕಿದ್ದಾರೆ?’ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊರದೇಶಗಳಲ್ಲಿ ಓದುವವರಿಗೆ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯಗಳೂ ಸಾಕಷ್ಟಿವೆ. ಹಾಗಾಗಿ ಬರಿಯ ಸಿರಿವಂತರ ತುತ್ತಾಗಿದ್ದ ‘ವಿದೇಶದಲ್ಲಿ ಓದುವ ಕನಸು’ ಇಂದು ಶ್ರೀಸಾಮಾನ್ಯನಿಗೂ ಸಾಧ್ಯವಾಗುತ್ತಿದೆ. ಅದರಲ್ಲೂ ಅಮೆರಿಕದಲ್ಲಿ ಓದುವ, ಓದಿಸುವ ಹಲವರ ಕನಸು ಇಂದು ಸಾಕಾರವಾಗುತ್ತಿದೆ. ಇಲ್ಲಿ ಲಕ್ಷಗಟ್ಟಲೇ ಸಾಲವನ್ನು ಮಾಡಿ ಓದಿದ ಮೇಲೆ, ಆ ಸಾಲವನ್ನು ತೀರಿಸಲು ಡಾಲರ್‌ಗಳ ಸಂಪಾದನೆ ಅನಿವಾರ್ಯವಾಗುತ್ತದೆ. ಸಾಲ ತೀರುವ ಹೊತ್ತಿಗೆ ಮದುವೆ, ಮಕ್ಕಳಾಗಿ ಅವರ ಅಲ್ಲಿನ ಜೀವನ ಒಂದು ಹಂತಕ್ಕೆ ತಲುಪಿ, ಬರಲಾಗದ ಸ್ಥಿತಿಗೆ ತಲುಪಿರುತ್ತಾರೆ. ಇದೊಂದು ಮಾಂತ್ರಿಕ ಚಕ್ರವ್ಯೂಹ. ಇದರ ಒಳಹೊಗಲು ದಾರಿಯಿದೆ; ಹೊರಬರುವ ನಿಶ್ಚಯವಿರುವವರು, ಸಂಕಲ್ಪವಿರುವವರು, ಸಾಧ್ಯ ಮಾಡಿಕೊಳ್ಳುವವರು ಮಾತ್ರ ಕೆಲವರೇ.
ಏನೇ ಆದರೂ, ಪರಿಸ್ಥಿತಿಯ ಜೊತೆಗೆ ನಾವೂ ಓಡುತ್ತಿರಬೇಕೇ ಹೊರತು ನಿಲ್ಲಲಂತೂ ಆಗದು. ನಮ್ಮ ದೇಶದ ಇಂದಿನ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳು ನಮ್ಮಲ್ಲಿನ ಪ್ರತಿಭೆಗಳ ಸದುಪಯೋಗವನ್ನು ಮಾಡಿಕೊಳ್ಳುವಲ್ಲಿ ದಯನೀಯವಾಗಿ ಸೋತಿವೆ. ‘ಪ್ರತಿಭಾ ಪಲಾಯನ’ ಎಂದು ಕರೆಯುತ್ತೇವೆ; ಆದರೆ ನಿಜವಾದ ಪ್ರತಿಭಾವಂತರೆಲ್ಲರಿಗೂ ನಮ್ಮಲ್ಲಿ ಅವಕಾಶಗಳು ಸಿಗುತ್ತಿವೆಯೇ? ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗುವ ಕಡೆ ಒಲಿಯುವುದು ಸಹಜವೇ.
ಹೀಗಿರುವಾಗ ಅವರನ್ನು ಅನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಇದು ಇಂದಿನ ವ್ಯವಸ್ಥೆ; ಇದನ್ನು ನಾವು ಒಪ್ಪಿಕೊಳ್ಳಬೇಕು, ಇದಕ್ಕೆ ಹೊಂದಿಕೊಳ್ಳಬೇಕು. ‘ಎಲ್ಲಾದರು ಇರು, ಎಂತಾದರು ಇರು, ಮನದಲ್ಲಿ ಭಾರತೀಯನಾಗಿರು, ನೀ ಸುಖವಾಗಿರು’ ಎಂದು ಹರಸುತ್ತಿರಬೇಕು; ಹಾರೈಸುತ್ತಿರಬೇಕು. ಬಂದಾಗೊಮ್ಮೆ ಅಕ್ಕರೆಯ ಹೊಳೆ ಹರಿಸುತ್ತಿರಬೇಕು; ಕರೆದಾಗಲೊಮ್ಮೆ ಹೋಗಿ ಅವರ ಜೀವನ ರೀತಿಯನ್ನು ಕಂಡು ಸಂತೋಷ ಪಟ್ಟು ಬರಬೇಕು.
ಹೀಗೆಯೇ ಮಗಳ ಜೀವನವನ್ನು ಕಂಡು ಸಂತೋಷ ಪಟ್ಟು ಬರಲೆಂದು ಹೋದ ನಾವು ಅಮೆರಿಕದಲ್ಲಿ ಒಟ್ಟು ತೊಂಭತ್ತೆರಡು ದಿನಗಳನ್ನು ಕಳೆದೆವು. ಮಗಳು ಕೆಲಸ ಮಾಡುವ ಶಾಲೆಗೆ ಬೇಸಿಗೆಯ ರಜವಿದ್ದುದರಿಂದ ಅಷ್ಟೂ ದಿನಗಳು ನಮಗೆ ಕಳೆದದ್ದು ತಿಳಿಯದಂತೆ ಊರು ಸುತ್ತುತ್ತಾ, ದಿನವೂ ಹೊಸದರಂತೆ ಏನಾದರೂ ಒಂದನ್ನು ನೋಡಿ ಬರುತ್ತಿದ್ದೆವು. ಬಹಳಷ್ಟು ಮಾತಾಡಲು ಸಮಯವಿತ್ತು. ಅಲ್ಲಿನ ಜನಜೀವನದ ಬಗ್ಗೆ ತಿಳಿಯಲು ಸಾಕಷ್ಟು ಅವಕಾಶವಾಯಿತು.
ನಾವು ಕೇಳುವ ಸಣ್ಣ ಪುಟ್ಟ ವಿಷಯಗಳನ್ನು ಕೂಡ ಮಗಳು, ಅಳಿಯ ಆಸ್ಥೆಯಿಂದ ವಿವರಿಸುತ್ತಿದ್ದರು. ನಮ್ಮ ಕುತೂಹಲಕ್ಕೆ ಉತ್ತರ ತಕ್ಷಣವೇ ದೊರೆಯುತ್ತಿದ್ದುದರಿಂದ ಎಲ್ಲದರಲ್ಲೂ ಒಂದು ಹೊಸತನ್ನು ಕಾಣುತ್ತಿದ್ದೆವು. ಇದರಿಂದ ನಿಜಕ್ಕೂ ನಮ್ಮ ಅನುಭವದ ಹರಹು ಸಾಕಷ್ಟು ವಿಸ್ತಾರವಾಯಿತು.
ಸಿಂಗಪೂರ್ ನಗರ ಪ್ರದಕ್ಷಿಣೆ
ವಾಪಸ್ಸು ಭಾರತಕ್ಕೆ ಹಿಂತಿರುಗುವಾಗ ಮರಳಿ ಸಿಂಗಪೂರ್ ಏರ್‌ಲೈನ್ಸ್ ವಿಮಾನದಲ್ಲೇ ಪಯಣಿಸಿದೆವು. ಹಾಂಗ್‌ಕಾಂಗ್‌ನಿಂದ ಸಿಂಗಪೂರಿಗೆ ಬಂದ ಮೇಲೆ ಬೆಂಗಳೂರಿನ ಪ್ರಯಾಣಕ್ಕೆ ಎಂಟು ಗಂಟೆಗಳ ಸಮಯ ವಿರಾಮವಿತ್ತು. ಆ ಸಮಯದಲ್ಲಿ ವಿಮಾನ ನಿಲ್ದಾಣದವರೇ ಆಯೋಜಿಸಿರುವ ಸಿಂಗಪೂರ್ ನಗರ ಯಾತ್ರೆಯಲ್ಲಿ ಪಾಲ್ಗೊಂಡೆವು.
ಖರ್ಚಿಗೆ ಇಪ್ಪತ್ತು ಸಿಂಗಪೂರ್ ಡಾಲರ್‌ಗಳನ್ನಿತ್ತು, ಮೂರು, ಮೂರೂವರೆ ಗಂಟೆಗಳಲ್ಲಿ ಇಡೀ ಸಿಂಗಪೂರಿನ ಒಂದು ಸಿಂಹಾವಲೋಕನವನ್ನು ಮಾಡಿಸುತ್ತಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಒಂದು ಡಾಕ್ಯುಮೆಂಟರಿ ಚಿತ್ರದಲ್ಲಿ ನೋಡಿದಂತೆ ನಾವೂ ಸಿಂಗಪೂರ್ ನಗರವನ್ನು ನೋಡಿ ಬಂದೆವು.
ಪ್ರಯಾಣದ ಕಡೆಯ ಹಂತವಾಗಿ ಸಿಂಗಪೂರ್‌ನಿಂದ ಬೆಂಗಳೂರಿನ ವಿಮಾನವನ್ನು ಹತ್ತಿದೆವು. ಕುಳಿತ ಕೆಲವೇ ಕ್ಷಣಗಳಲ್ಲಿ ಸ್ವಾಗತ ಕನ್ನಡದಲ್ಲಿ… “ಏ…!” ಎಂದು ಕಿರುಚುವಷ್ಟು ಸಂತೋಷವಾಯಿತು. ಸ್ವಲ್ಪ ಹೊತ್ತಿನಲ್ಲೇ ಗಗನಸಖಿ ಊಟದ ವಿವರಣೆಗಳ ಸಣ್ಣ ಪುಸ್ತಕವನ್ನು ಎಲ್ಲರಿಗೂ ನೀಡುತ್ತಾ ಹೋದಳು. ಅದರ ಉತ್ತರಾರ್ಧದ ಪುಟಗಳು ಕನ್ನಡದಲ್ಲಿ ಅಚ್ಚಾಗಿತ್ತು. ಅಲ್ಪ ಸ್ವಲ್ಪ ವ್ಯಾಕರಣ ದೋಷಗಳಿದ್ದರೂ, ಅವರ ಪ್ರಯತ್ನಕ್ಕಾಗಿ ನಿಜಕ್ಕೂ ಅಭಿಮಾನವೆನಿಸಿತು.
ಕರ್ನಾಟಕದಲ್ಲಿಯೇ ಇದಕ್ಕಿಂತ ಅಧ್ವಾನವಾಗಿ ಬರೆಯುವವರು ಇರುವಾಗ ಇವರು ಕ್ಷಮಾರ್ಹರು ಎನಿಸಿತು. ಮತ್ತೊಮ್ಮೆ ಆ ಸುಂದರಿ ಎದುರು ಬಂದಾಗ ಕೇಳಿದೆ “ಇದನ್ನು ನನ್ನೊಂದಿಗೆ ತೆಗೆದುಕೊಂಡು ಹೋಗಬಹುದೆ? ನಮ್ಮ ಭಾಷೆಯಲ್ಲಿ ಮುದ್ರಿಸಿದ್ದೀರಿ. ನನಗೆ ತುಂಬಾ ಸಂತೋಷವಾಯಿತು” ಎಂದೆ. ಮೊದಲೇ ಚಿಂಗಿ ಸುಂದರಿ. ಅವರ ಪ್ರಯತ್ನವನ್ನು ನಾನು ಹೊಗಳಿದ್ದು ಕೇಳಿ ಅವಳಿಗೆ ಅದೆಷ್ಟು ಸಂತೋಷವಾಯಿತೆಂದರೆ, ತನ್ನ ಅಂದವಾದ ಬಾಯಿಯನ್ನು ಕಿವಿಯವರೆಗೆ ಹಿಗ್ಗಿಸುತ್ತಾ “Really?! Definitely you can take” (“ನಿಜವಾಗಲೂ! ಖಂಡಿತಾ ತೆಗೆದುಕೊಂಡು ಹೋಗಿ”) ಎಂದು ಆ ಕೋಗಿಲೆ ಉಲಿಯಿತು.
ಆ ಕಿರುಪುಸ್ತಿಕೆಯನ್ನೆತ್ತಿಕೊಂಡು ಕೈಚೀಲಕ್ಕೆ ಹಾಕಿಕೊಂಡೆ. ಸ್ವಲ್ಪ ಹೊತ್ತಿನ ನಂತರ ಅವರ ಕಂಪನಿಯ ಹಲವು ಮಾರಾಟದ ವಸ್ತುಗಳ ಬಗ್ಗೆ ಜಾಹೀರಾತು ನೀಡುತ್ತಾ “Those who want can buy” (“ಯಾರ‍್ಯಾರಿಗೆ ಇಷ್ಟವಾಗಿದೆಯೋ ಅವರು ಕೊಳ್ಳಬಹುದು”) ಎಂದು ವಿನಂತಿಸಿಕೊಂಡರು. ನನಗದರಲ್ಲಿ ಏನೂ ಆಸಕ್ತಿ ಇಲ್ಲದಿದ್ದುದರಿಂದ ಸರಿಯಾಗಿ ಕೇಳಿಸಿಕೊಳ್ಳಲೂ ಹೋಗಲಿಲ್ಲ.
ಸ್ವಲ್ಪ ಹೊತ್ತಿನಲ್ಲೇ ಅದೇ ಚಿಂಗಿ ಸುಂದರಿ ನನ್ನ ಬಳಿ ಬಂದು, ಒಂದು ಪುಟ್ಟ ಕಾಗದದ ಕೈಚೀಲವನ್ನು ನನ್ನ ಕೈಗಿತ್ತು “This is for you” (“ಇದು ನಿಮಗೆ”) ಎಂದು ಹೇಳಿ, ನಕ್ಕು ಹೊರಟಳು. ನನಗೆ ಹಿಂದು ಮುಂದು ಅರ್ಥವಾಗಲಿಲ್ಲ. ಅವಳು ಕೊಟ್ಟ ಚೀಲ ತೆರೆದು ನೋಡಿದೆ. ಅದರಲ್ಲಿ ಮೂರು ಪ್ಯಾಕೆಟ್ ಕಾರ್ಡ್ಸ್ ಮತ್ತು ಒಂದಷ್ಟು ಪೆನ್ನುಗಳು ಇದ್ದವು. ಇವರು “ಇದೂ ಮಾರಾಟದ ತಂತ್ರವೇನೋ. ಎಷ್ಟು ದುಡ್ಡು ಕೊಡಬೇಕೋ ಕೇಳಿ ನೋಡು” ಎಂದರು.
ಅವಳು ಮತ್ತೆ ಈ ದಾರಿಯಲ್ಲಿ ಬರುವ ತನಕ ಕಾದಿದ್ದು ಕೇಳಿದೆ. ಈ ಬಾರಿ ಇನ್ನೂ ಸುಂದರವಾಗಿ ಬಾಯಿಯೊಂದಿಗೆ ಕಣ್ಣಲ್ಲೂ ನಗೆ ತುಳುಕಿಸುತ್ತಾ “Not for money. A small gesture from our side” (“ದುಡ್ಡಿಗಾಗಿ ಅಲ್ಲ; ನಮ್ಮ ಕಡೆಯಿಂದ ಒಂದು ಸಣ್ಣ ಆದರದ ಕಾಣಿಕೆ”) ಎನ್ನುತ್ತಾ ಹೆಗಲು ತಟ್ಟಿ ಹೊರಟು ಹೋದಳು. “ಎಲೈ ನನ್ನ ತಾಯ್ನುಡಿಯೇ…! ನಿನ್ನನ್ನು ಕಂಡು ನಾನು ಹಿಗ್ಗಿದ್ದಕ್ಕೇ ನನಗೆ ಉಡುಗೊರೆಯೇ..?” ಮನಸ್ಸು ಅಭಿಮಾನದಿಂದ ಬೀಗಿತು.
ಬೆಂಗಳೂರಿನ ನೆಲದಲ್ಲಿಳಿದಾಗ ಒಂದು ಕನಸಿನ ಲೋಕದಿಂದ ನನ್ನ ತಾಯ್ನಾಡಿಗೆ ಬಂದಂಥ ಅನುಭವವಾಗಿತ್ತು. ‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ…’ ಅಲ್ಲವೇ ಮತ್ತೆ!! ‘ಮೇಲೆ ಹಾರಿ ನಿನ್ನ ಸೆಳೆತ ಮೀರಿ, ನಿರ್ಭಾರ ಸ್ಥಿತಿಗೆ ತಲುಪಿ ಬ್ರಹ್ಮಾಂಡವನ್ನೇ ಬೆದಕಿ, ಇಂಧನ ತೀರಲು ಬಂದೇ ಬರುವೆನು ಮತ್ತೆ ನಿನ್ನ ತೊಡೆಗೆ. ಮೂರ್ತ ಪ್ರೇಮದೆಡೆಗೆ…’ ಲಕ್ಷ್ಮಣರಾಯರ ಕವಿತೆಯ ಸಾಲುಗಳನ್ನು ಮನದೊಳಗೇ ಗುನುಗುತ್ತಾ ವಿಮಾನ ನಿಲ್ದಾಣದ ಹೊರಗೆ ನಮಗಾಗಿ ಕಾಯುತ್ತಿದ್ದ ಮಗಳ ಮತ್ತು ತಂಗಿಯ ಕುಟುಂಬದವರ ಪ್ರೀತಿಯ ಅಬ್ಬರದಲ್ಲಿ ಮುಳುಗಿ ಧನ್ಯರಾದೆವು!
ನಾನು ಎದ್ದು ನಿಲ್ಲಲೂ, ಎರಡು ಹೆಜ್ಜೆ ನಡೆಯಲೂ ಕಷ್ಟಪಡುತ್ತಿದ್ದ ಕಾಲದಲ್ಲಿ ನೇಪಾಳದ ಪ್ರವಾಸವನ್ನು ಮಾಡಿ ಬಂದಿದ್ದೆ. ಅದು ನನ್ನ ಜೀವನದ ಮಹತ್ವದ ಸಾಧನೆ ಎಂದೇ ತಿಳಿದುಕೊಂಡಿದ್ದೆ. ಆಗ ವಿಶ್ವ ಪರ್ಯಟಣೆ ಮಾಡುವ ಉತ್ಸಾಹ ಇದ್ದಿತ್ತಾದರೂ, ಮುಂದೊಂದು ದಿನ ಅಮೆರಿಕ ದೇಶವನ್ನು ಸುತ್ತಿ ಬರುತ್ತೇನೆಂಬ ಕನಸೂ ಇರಲಿಲ್ಲ.
ಇದನ್ನು ನಾನು ಪ್ರವಾಸ ಕಥನವೆಂದು ಕರೆಯುವುದಿಲ್ಲ. ಇದು ಪ್ರವಾಸದ ಅನುಭವ ಕಥನ. ಚಿಕ್ಕಂದಿನಲ್ಲಿ ಕನಸಿನಲ್ಲೂ ಕಾಣದಿದ್ದ ಒಂದು ದೇಶವನ್ನು ನನ್ನ ಇಂದಿನ ಆರೋಗ್ಯ ಸ್ಥಿತಿಯಲ್ಲಿ ಇಷ್ಟು ದಿನಗಳು ಸುತ್ತಿ ಬಂದದ್ದೇ ಒಂದು ಪವಾಡವೆಂದುಕೊಂಡಿದ್ದೇನೆ. ಈ ಪವಾಡಕ್ಕೆ ಕಾರಣವಾದ ನನ್ನ ಇಡೀ ಕುಟುಂಬ ವರ್ಗಕ್ಕೆ ನಾನು ಹೇಗೆ ಕೃತಜ್ಞತೆ ಸಲ್ಲಿಸಲಿ?!
Wah pratiyondannu bidade odide . Nimma pravasa kathana sundaravaagi moodi banthu madam.
ಬರಹ ಮತ್ತು ಕಾಳಜಿ ಚೆನ್ನಾಗಿದೆ