ಅಮೃತಾ ಹೆಗಡೆ ಅಂಕಣ- ಆವತ್ತು ಅಲ್ಲಿ ಆವರಿಸಿತ್ತು.. ಭಯ ಬೆರೆತ ವಿಶೇಷ ಶಿಸ್ತು…

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

18

ಅದೊಂದು ಶನಿವಾರ. ಅದಾಗಲೇ ನಾನು ಪಿ.ಎ.ಡಿ.ಸಿ ಸ್ಕೂಲ್‌ ಸೇರಿ ಮೂರು ವಾರಗಳು ಸಂಪನ್ನಗೊಂಡಿದ್ದವು. ಆವತ್ತು ಬೆಳಗ್ಗೆ ಸ್ಕೂಲ್‌ಗೆ ಹೋಗಿದ್ದೇ, ಸ್ಕೂಲ್‌ನ ವಾತಾವರಣದಲ್ಲೇನೋ ಬದಲಾವಣೆ ಕಂಡೆ. ನಮ್ಮ ಶಾಲೆಯ ಗೇಟ್‌ನ್ನ ದಾಟಿಕೊಂಡು , ಕಾಂಪೌಂಡ್‌ನ ಒಳಗೊಂದು ಕಾರು ನಿಂತಿತ್ತು. ಗಂಟೇ ಬಾರಿಸಲು ಇನ್ನು ಹತ್ತೇ ಹತ್ತೇ ನಿಮಿಷಗಳಿದ್ದರೂ ದಿನನಿತ್ಯವಿರುತ್ತಿದ್ದ ಮಕ್ಕಳ ಕಲರವ ಆವತ್ತಿರಲಿಲ್ಲ. ಶಾಲೆಯ ವರಾಂಡದಲ್ಲೂ ಗದ್ದಲವಿರಲಿಲ್ಲ. ವರಾಂಡದಲ್ಲಿ ಎಲ್ಲ ಅಮ್ಮಂದಿರುವ ತಮ್ಮತಮ್ಮ ಮಕ್ಕಳ ಜತೆ ಗುನು ಗುನು ಮಾತನಾಡುತ್ತಾ, ಓಡಲು ಬಿಡದೆ ಮಕ್ಕಳನ್ನ ಹಿಡಿದುಕೊಂಡೇ ಸಾಲಾಗಿ ಶಿಸ್ತಿನಿಂದ ಕುಳಿತಿದ್ದರು. ಚಪ್ಪಲಿ ಇಡುವ ಜಾಗದಲ್ಲಿಯೂ ಕೂಡ, ಇನ್ನಷ್ಟು ಓರಣವಾಗಿ ಜೋಡಿಸಿರುವ ಚಪ್ಪಲಿಗಳನ್ನು ಕಂಡೆ. ಈ ವಾತಾವರಣ ನೋಡುತ್ತಿದ್ದಂತೆ ನನಗೆ ನನ್ನ ಬಾಲ್ಯ ನೆನಪಾಗಿತ್ತು. ನಮ್ಮ ಸರ್ಕಾರಿ ಸ್ಕೂಲ್‌ಗೆ ತಿಂಗಳಿಗೊಮ್ಮೆ ನಡೆಯುತ್ತಿದ್ದ ಇನ್ಸ್‌ಪೆಕ್ಷನ್‌ದಿನ, ಇದೇ ವಾತಾವರಣವಿರುತ್ತಿತ್ತು. ಶಿಸ್ತು ಶಿಸ್ತು ಶಿಸ್ತು. ಆವತ್ತು ಭಯ ಬೆರೆತ ವಿಶೇಷ ಶಿಸ್ತು ನಮ್ಮನ್ನು ಆವರಿಸಿಕೊಂಡಿರುತ್ತಿತ್ತು. ಅದನ್ನೇ ಇಲ್ಲೂ ಕಂಡಿದ್ದೆ.

ಆಗಲೇ ಹೊಳೆದುಹೋಯ್ತು ನನಗೆ, ನಿನ್ನೆಯೇ ನನ್ನಂಥ ಹೊಸ ಅಮ್ಮಂದಿರನ್ನು ಕರೆದು ಎಚ್ಚರಿಸಲಾಗಿತ್ತು. ‘ನಾಳೆ ರತ್ನಾ ಆಂಟೀ, ಸ್ಕೂಲ್‌ಗೆ ಬರುತ್ತಿದ್ದಾರೆ. ಹೊಸ ಮಕ್ಕಳ ಅಮ್ಮಂದಿರೆಲ್ಲ ನೀವು ಮಾಡಿರುವ ಎಲ್ಲ ಪುಸ್ತಕಗಳನ್ನೂ ತೆಗೆದುಕೊಂಡು ಬನ್ನಿ. ಮತ್ತೊಂದು ಸಲ ಎಲ್ಲವನ್ನೂ ಪರಿಶೀಲಿಸಿ ಕಾಗುಣಿತವೆಲ್ಲ ಸರಿಯಾಗಿದೆಯಾ ನೋಡಿಕೊಳ್ಳಿ.’ ಆ ಎಚ್ಚರಿಕೆ ನೆನಪಾದದ್ದೇ ನನ್ನ ಬ್ಯಾಗ್‌ನ್ನೊಮ್ಮೆ ಮುಟ್ಟಿ ನೋಡಿಕೊಂಡೆ. ಮರೆತಿರಲಿಲ್ಲ ನಾನು.

ಎಲ್ಲ ಪುಸ್ತಕಗಳನ್ನೂ ತುಂಬಿಕೊಂಡೇ ಬಂದಿದ್ದೆ. ಚಪ್ಪಲಿ ಬಿಚ್ಚಿಟ್ಟು, ಅಥರ್ವನನ್ನ ಎತ್ತಿಕೊಂಡೇ ಸೀದಾ ಪ್ರಾರ್ಥನೆಯ ಕೊಠಡಿಯತ್ತ ನಡೆದೆ. ಕುಳಿತಿದ್ದ ಹಿರಿಯ ತಾಯಿಯೊಬ್ಬರು ನನಗೆ ಕೇಳಿಸುವಂತೆ ಮೆಲುವಾಗಿ ಹೇಳಿದರು. ‘ಅಥರ್ವ ಅಮ್ಮಾ.. ಮಗುವನ್ನ ಎತ್ತಿಕೊಂಡು ಹೋಗಬೇಡಿ. ನಡೆಸಿಕೊಂಡೇ ಹೋಗಿ. ರತ್ನಾ ಆಂಟೀ ಬಂದಿದ್ದಾರೆ !’

ಪ್ರಾರ್ಥನೆ ಮುಗಿದಿದ್ದೇ, ಎಲ್ಲರೂ ಅಲ್ಲೇ ಕುಳಿತೆವು. ಹೊಸದಾಗಿ ಶಾಲೆಗೆ ಸೇರಿದ್ದ ಮಕ್ಕಳ ತಾಯಂದಿರೆಲ್ಲ ನಮ್ಮ ನಮ್ಮ ಮಕ್ಕಳೊಂದಿಗೆ ಒಂದೇ ಕಡೆ ಕುಳಿತಿದ್ದೆವು. ಎಲ್ಲರ ನಡುವೆಯೂ ಗುಸು ಗುಸು ಪಿಸು ಪಿಸು ಮಾತುಗಳು ಕೇಳಿಬರುತ್ತಿದ್ದವು. ಹಿರಿಯ ತಾಯಂದಿರ ಮುಖದಲ್ಲಿಯೂ ಕೂಡ ಧಾವಂತ ಎದ್ದು ಕಾಣುತ್ತಿತ್ತು. ನಾನು ಶಾಲೆಗೆ ಸೇರಿದಾಗಿನಿಂದ ರತ್ನಾ ಆಂಟಿಯವರ ಬಗ್ಗೆ ಒಬ್ಬರಲ್ಲಾ ಒಬ್ಬರು ಮಾತನಾಡುವುದನ್ನು ಕೇಳುತ್ತಲೇ ಇದ್ದೆ. ಪಿ.ಎ.ಡಿ.ಸಿ ಶಾಲೆಯ ಆರಂಭ ಕಾಲದಲ್ಲಿಯೇ ತಮ್ಮ ಮಗನಿಗೆ ಮಾತು ಕಲಿಸಿ, ಮಗುವಿಗೆ ಭವ್ಯ ಭವಿಷ್ಯ ರೂಪಿಸಿದ್ದಲ್ಲದೇ ಈ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಕಥೆ ಕೇಳಿದ್ದೆ. ಪ್ರತಿ ಹದಿನೈದು- ಇಪ್ಪತ್ತು ದಿನಗಳಿಗೊಮ್ಮೆ ಸ್ಕೂಲ್‌ಗೆ ಭೇಟಿ ನೀಡಿ. ಅಮ್ಮಂದಿರಿಗೆ ಸಲಹೆಗಳನ್ನು ಕೊಟ್ಟು, ಮಕ್ಕಳ ಅಭಿವೃದ್ಧಿ ಅಳೆದು, ಸ್ಕೂಲ್‌ನ ಆಗು ಹೋಗುಗಳನ್ನು ತಿಳಿದುಕೊಳ್ಳುವ ರತ್ನಾ ಆಂಟೀ ಎಂದರೆ ಅದೇನೋ ವಿಶೇಷ ಗೌರವ ಈ ಸ್ಕೂಲ್‌ನೊಳಗಿದೆ ಎಂಬುದು ಅದಾಗಲೇ ಅರ್ಥವಾಗಿತ್ತು ನನಗೆ.

ನಾನಂತೂ ಅವರನ್ನ ಪ್ರತ್ಯಕ್ಷವಾಗಿ ನೋಡಲು ಕಾತರಿಸುತ್ತಿದ್ದೆ. ಪ್ರಾರ್ಥನೆ ಮುಗಿದಿದ್ದೇ , ನಸು ನಗುವಿನೊಂದಿಗೆ ತಿಳಿ ಹಳದಿ ಬಣ್ಣದ ಸೀರಿಯುಟ್ಟ ಲಕ್ಷಣವಂತೆಯೊಬ್ಬರು ಕೊಠಡಿಯ ಒಳಹೊಕ್ಕರು. ಅವರೇ ಪಿ.ಎ.ಡಿ.ಸಿ ಸ್ಕೂಲ್‌ನ ಕಾರ್ಯದರ್ಶಿ, ಹಿರಿಯ ತಾಯಿ ಶಿಕ್ಷಕಿ, ರತ್ನಾ ಶೆಟ್ಟಿ..! ನಾವೆಲ್ಲ ಎದ್ದು ನಿಂತು ಅವರಿಗೆ ಗೌರವ ಸೂಚಿಸಿದೆವು. ‘ಹಾಂ. ಕೂತ್ಕೊಳಿ’ ಅನ್ನುತ್ತಾ ಎಲ್ಲರನ್ನೂ ದಿಟ್ಟಿಸಿದರು. ‘ಮಕ್ಕಳನ್ನೆಲ್ಲ ಮಡಿಲಿನಿಂದ ಇಳಿಸಿ, ನಿಮ್ಮ ಮುಂದೆ ಕೂರಿಸಿಕೊಳ್ಳಿ.’ ಚಿಕ್ಕಮಕ್ಕಳ ಅಮ್ಮಂದಿರನ್ನೇ ನೋಡಿ ಹೇಳಿದರು. ನಾನು ಅಥರ್ವನನ್ನ ಮಡಿಲಿನಿಂದ ಇಳಿಸಿ ನನ್ನ ಮುಂದೆ ಕೂರಿಸಿಕೊಂಡೆ.

‘ನಿಮ್‌ನಿಮ್‌ ಮಕ್ಳಿಗೆ ಬರೆಯೋಕೆ ಪುಸ್ತಕ ಪೆನ್ಸಿಲ್ಲು ಕೊಡಿ. ಚಿಕ್ಕಮಕ್ಕಳೆಲ್ಲ ಗೀಚ್ಕೊಂತಾ ಇರ್ಲಿ. ದೊಡ್ಡ ಮಕ್ಕಳಿಗೆ ಬರೆಯಲು ಹೇಳಿ. ಅಮ್ಮಂದಿರೆಲ್ಲ ಈ ಕಡೆ ಗಮನ ಕೊಡಿ’ ಗಟ್ಟಿಯಾದ ಧ್ವನಿ..! ಅವರ ಧ್ವನಿ, ಮುಖಚರ್ಯೆಯಲ್ಲೇ ಅವರಲ್ಲಿರುವ ಆತ್ಮವಿಶ್ವಾಸ, ಛಲ ಎದ್ದು ಕಾಣುತ್ತಿತ್ತು.

ಅವರು ಮಾತು ಶುರುವಾಗುವುದಕ್ಕೂ ಮೊದಲು, ನಮ್ಮಂಥ ಹೊಸದಾಗಿ ದಾಖಲಾದ ಮಕ್ಕಳು, ತಾಯಂದಿರನ್ನು ಮಾತನಾಡಿಸುವುದು ಅವರ ವಾಡಿಕೆಯಂತೆ. ನಮ್ಮನ್ನು ನೋಡುತ್ತಿದ್ದಂತೆ ‘ಹೊಸಬರಾ ನೀವೆಲ್ಲಾ..?’ ನಮ್ಮೆನ್ನೆಲ್ಲ ಗಮನಿಸುತ್ತಾ ಕೇಳಿದ್ದರು. ‘ಹೂಂ. ಆಂಟೀ’ ಅಂದೆವು ಮೆಲು ದನಿಯಲ್ಲಿ. ರತ್ನಾ ಆಂಟೀಯವರನ್ನ ಭೇಟಿ ಮಾಡದ ಹೊಸಬರಲ್ಲಿ ನನ್ನನ್ನೂ ಸೇರಿಸಿ ಇನ್ನೂ ಇಬ್ಬರು ತಾಯಂದಿರುವ ಇದ್ದರು ಅಷ್ಟೆ.

‘ಮಗೂಗೆ ಎಷ್ಟು ವರ್ಷ..? ಎಲ್ಲಿಂದ ಬಂದಿದ್ದೀರಿ..? ಎಲ್ಲಿ ಟೆಸ್ಟ್‌ಮಾಡಿಸಿದ್ದೀರಿ..? ಹಿಯರಿಂಗ್‌ಲಾಸ್‌ ಎಷ್ಟಿದೆ..? ಎಲ್ಲವನ್ನೂ ಒಬ್ಬೊಬ್ಬರೇ ಹೇಳಿ ನಿಮ್ಮ ಪರಿಚಯ ಮಾಡಿಕೊಳ್ಳಿ.’ ದೃಢ ದನಿಯ ಆಜ್ಞೆಯಿತ್ತರು. ಮೊದಲ ಸಾಲಿನಲ್ಲಿಯೇ ಕುಳಿತಿದ್ದ ನಾನೇ ಮೊದಲು ಪರಿಚಯಿಸಿಕೊಂಡೆ. ಪಕ್ಕದಲ್ಲಿಯೇ ನಿಂತಿದ್ದ ನಮ್ಮ ಶಾಲೆಯ ಶಿಕ್ಷಕಿಯೊಬ್ಬರ ಹತ್ತಿರ ‘ಮಗು ಎಷ್ಟು ಚೂಟಿ ಇದ್ದಾನೆ ನೋಡಿ..’ ಎಂದು ಅಥರ್ವನನ್ನ ತೋರಿಸುತ್ತಾ ಹೇಳಿದ್ದು ಕೇಳಿಸಿತ್ತು ನನಗೆ.

ಹೊಸಬರನ್ನೆಲ್ಲರನ್ನೂ ಪರಿಚಯಿಸಿಕೊಂಡ ನಂತರ. ರತ್ನಾ ಆಂಟಿ ಮಾತು ಆರಂಭಿಸಿದರು. ‘ಇವತ್ತು ನಾನು ಮೊದಲು, ಹೊಸ ತಾಯಂದಿರಿಗೆ ಸಲಹೆ ಕೊಡ್ತೀನಿ. ನಿಮ್ಮ ನಿಮ್ಮ ಮಕ್ಕಳ ಹಿಯರಿಂಗ್‌ ಏಡ್‌ಗಳನ್ನೆಲ್ಲ ಹೇಗೆ ಜೋಪಾನ ಮಾಡಬೇಕು ಅನ್ನೋದು ಗೊತ್ತಿದೆಯಾ ನಿಮಗೆ..?’ ಪ್ರಶ್ನಿಸಿದರು. ‘ಹಾಂ ಆಂಟೀ’ ಅಂದೆವು ಒಕ್ಕೊರಲಾಗಿ. ‘ಯಾರಾದರೂ ಹೇಳಿ ನೋಡೋಣ’ ಎಂದು ಸೀನಿಯರ್‌ತಾಯಿಯೊಬ್ಬರನ್ನು ಕರೆದು ಹೇಳಲು ಹೇಳಿದರು. ಅವರು ಹೇಳಿದ್ದನ್ನ ಆಗಾಗ ಸರಿ ಮಾಡುತ್ತಾ, ಮತ್ತೊಮ್ಮೆ ತಾವೂ ಹೇಳಿ, ನಮಗೆಲ್ಲ ಅರ್ಥವಾಗಿದೆ ಎಂಬುದನ್ನ ಖಾತರಿ ಪಡಿಸಿಕೊಂಡರು.

ಸ್ವರಗಳನ್ನ ಎಷ್ಟು ದೀರ್ಘವಾಗಿ ಹೇಳಿಸಬೇಕು ಎಂಬುದನ್ನ ಹೇಳಿಯೇ ತೋರಿಸಿದರು. ಅಬ್ಬಾ..! ಎಂಥ ಧ್ವನಿ. ರತ್ನಾ ಆಂಟೀ ಮಾತನಾಡುತ್ತಿದ್ದಾಗ, ನಮ್ಮ ನಮ್ಮ ಮಕ್ಕಳು ಕೂಡ ಅವಾಕ್ಕಾಗಿ ಅವರನ್ನೇ ನೋಡುತ್ತಿದ್ದರು. ನಿಜಕ್ಕೂ ಅವರಲ್ಲೇನೋ ತೇಜಸ್ಸಿದೆ ಅನ್ನಿಸೋಕೆ ಶುರುವಾಗಿತ್ತು ನನಗೆ. ‘ಪ್ರತಿದಿನ ಕನಿಷ್ಠ ಐದು ಬಾರಿಯಾದರೂ ಮಗುವಿಗೆ ಇಷ್ಟೇ ದೀರ್ಘವಾಗಿ ಸ್ವರ ಹೇಳಿಸಬೇಕು.’ ಗೊತ್ತಾಯ್ತಾ..? ಅಂದರು ನಮ್ಮನ್ನೆಲ್ಲ ನೋಡಿ. ಆಯ್ತು ಆಂಟೀ ಅಂದೆವು ಒಕ್ಕೊರಲಿನಿಂದ.

‘ಮಕ್ಳಿಗೆ ಆಜ್ಞೆಗಳನ್ನ ಮಾಡಿಸ್ತಿದೀರಾ ಅಲ್ವಾ..?’ ಕೇಳಿದರು ನನ್ನನ್ನೇ ನೋಡಿ. ‘ಹೌದು ಆಂಟೀ ಮಾಡಿಸ್ತಿದೀವಿ’ ಮೆಲ್ಲಗೆ ಹೇಳಿದೆ. ಏನೇನ್‌ ಆಜ್ಞೆ ಮಾಡಿಸ್ತೀರಾ ಮಕ್ಳಿಗೆ ಹೇಳಿ ನೋಡೋಣ ಅಂದುಬಿಟ್ಟರು. ಅಂಜುತ್ತಲೇ ಎದ್ದು ಅಥರ್ವನನ್ನ ಕರೆದುಕೊಂಡು ಹೋಗಿ ನಿಂತೆ. ‘ನಿಂತುಕೋ, ಕುಳಿತುಕೋ, ಓಡು, ನಡೆದಾಡು, ಕೊಡು,..’ ಆಜ್ಷೆಗಳನ್ನೆಲ್ಲ ಅಥರ್ವನಿಗೆ ಹೇಳಿದೆ, ಅವನು ನನ್ನ ಅಭಿನಯವನ್ನ ನೋಡಿ ಅದರಂತೇ ಮಾಡಲು ಪ್ರಯತ್ನಪಟ್ಟ. ನಿಲ್ಲಿಸುವಂತೆ ಕೈಮಾಡಿದರು. ನಾನು ಸುಮ್ಮನಾದೆ. ಅಥರ್ವ ಓಡಿಹೋಗಿ ಪುಷ್ಕರ್‌ ಹತ್ತಿರ ಕುಳಿತುಬಿಟ್ಟ.

ಹಿರಿಯ ತಾಯಿಯೊಬ್ಬರನ್ನು ಕರೆದು, ‘ಆಜ್ಞೆ ಹೇಗೆ ಮಾಡಿಸಬೇಕು ಅಂತ ತೋರ್ಸಿ ಇವ್ರಿಗೆ. ನಿಮ್‌ ಮಗನ್ನ ಕರ್ಕೊಂಡ್‌ಬನ್ನಿ ಇಲ್ಲಿಗೆ’ ಅಂದರು. ಆ ಅಮ್ಮ ತನ್ನ ಐದುವರ್ಷದ ಮಗನ ಬಳಿ ಆಜ್ಞೆಗಳನ್ನು ಮಾಡಿಸಿದರು. ‘ಓಡು’ ಅನ್ನುತ್ತಿದ್ದಂತೆ ಮಗು ಓಡಿ ತೋರಿಸಿತು. ‘ಮಲಗು’ ಎನ್ನುತ್ತಿದ್ದಂತೆ ಮಗು ಮಲಗಿ ತೋರಿಸಿತು. ‘ಕುಪ್ಪಳಿಸು’ ‘ಬಗ್ಗು’ ‘ತಲೆ ಎತ್ತು’ ‘ಮೂಗಿನ ಮೇಲೆ ಬೆರಳಿಡು’ ಇನ್ನೂ ಏನೇನೋ ಆಜ್ಞೆಗಳು ಆ ಮಗು ಮಾಡುತ್ತಿತ್ತು. ಆದರೆ ಅದರ ಅಮ್ಮ ಮಗುವಿಗೆ ಅಭಿನಯಿಸಿ ಹೇಳುತ್ತಿರಲಿಲ್ಲ. ತಟಸ್ಥವಾಗಿ ಕುಳಿತು ಆಜ್ಞೆಗಳನ್ನ ಹೇಳುತ್ತಿದ್ದರು ಅಷ್ಟೆ. ಮಗು ಅವರ ಅಮ್ಮನ ಮಾತು ಕೇಳಿಸಿಕೊಂಡು ಆಜ್ಞೆಯನ್ನು ಪಾಲಿಸುತ್ತಿತ್ತು.

‘ಹಾಂ ಅರ್ಥವಾಯಿತಾ..? ಓಡು ಅನ್ನುತ್ತಾ ನೀವೇ ಓಡಿ ತೋರಿಸಿಬಿಟ್ಟರೆ, ಮಗು ಬರೀ ನಿಮ್ಮ ಅಭಿನಯವನ್ನೇ ಗುರುತಿಸಿ ಆಜ್ಞೆಗಳನ್ನ ಮಾಡಿಬಿಡುತ್ತೆ. ಅಭಿನಯಿಸದೆ ಹೇಳಬೇಕು. ಕೇಳಿಸಿಕೊಂಡೇ ಮಗು ಆಜ್ಞೆಯನ್ನ ಅರ್ಥ ಮಾಡಿಕೊಳ್ಳಬೇಕು. ಮಗುವಿಗೆ ಆಜ್ಞೆ ಕಲಿಸುವಾಗ ಅಭಿನಯಿಸಿ ತೋರಿಸಿ ಪರವಾಗಿಲ್ಲ. ಮಗುವಿಗೆ ಅರ್ಥವಾಗಿದ್ದು ಖಾತ್ರಿಯಾದಮೇಲೆ ಪುನಃ ಪುನಃ ನೀವು ಅಭಿನಯಿಸಬೇಡಿ. ದಿನಕ್ಕೆ ಒಂದಾಂದರೂ ಹೊಸ ಆಜ್ಞೆಯನ್ನು ಮಗುವಿಗೆ ನೀವು ಕಲಿಸಲೇಬೇಕು. ಆಜ್ಞೆಗಳು ಭಾಷೆಯ ಜೀವಾಳ. ಎಷ್ಟು ಆಜ್ಞೆಗಳನ್ನು ಮಗು ಅರ್ಥಮಾಡಿಕೊಳ್ಳುತ್ತೋ ಅಷ್ಟು ಬೇಗ ಅದಕ್ಕೆ ಭಾಷೆ ಅರ್ಥವಾಗೋಕೆ ಆರಂಭವಾಗುತ್ತೆ. ನಾನು ಇನ್ನೊಂದು ಸಲ ಬರುವವರೆಗೆ ನೀವೆಲ್ಲ ಎಷ್ಟು ಆಜ್ಞೆಗಳನ್ನ ನಿಮ್ಮ ಮಕ್ಕಳಿಗೆ ಕಲಿಸುತ್ತಿರೋ ನೋಡೋಣ’ ನಮಗೆಲ್ಲ ಹೊಸ ಸವಾಲು ಕೊಟ್ಟರು ರತ್ನಾ ಆಂಟಿ.

ಆಜ್ಞೆಗಳಿಗೆ ಅಷ್ಟೊಂದು ಪ್ರಾಮುಖ್ಯತೆಯಿದೆ ಎಂಬುದು ತಿಳಿದಿದ್ದೇ ಆವತ್ತು ನನಗೆ. ಇನ್ನೂ ಹಲವು ಸಲಹೆಗಳನ್ನು, ಟ್ರಿಕ್‌ಗಳನ್ನು ಆಂಟೀ ನಮಗೆ ಹೇಳಿಕೊಟ್ಟಿದ್ದರು. ಎಲ್ಲವನ್ನೂ ಪುಸ್ತಕದಲ್ಲಿ ನೋಟ್‌ಮಾಡಿಕೊಂಡಿದ್ದೆ. ಆಗಷ್ಟೇ ಇಂಪ್ಲಾಂಟ್‌ಮಾಡಿಸಿಕೊಂಡು ಬಂದಿದ್ದ ಮಕ್ಕಳ ಅಮ್ಮಂದಿರಿಗೆ, ಈಗಾಗಲೇ ಶಾಲೆ ಸೇರಿ ಎರಡು ವರ್ಷಗಳು ಕಳೆದಿರುವ ತಾಯಂದಿರಿಗೆ, ಇನ್ನೇನು ನಾರ್ಮಲ್‌ ಶಾಲೆಗಳಿಗೆ ಸೇರಲು ಸಿದ್ಧಗೊಂಡಿರುವ ದೊಡ್ಡ ಮಕ್ಕಳ ಅಮ್ಮಂದಿರಿಗೆ ಎಲ್ಲರಿಗೂ ಪ್ರತ್ಯೇಕವಾಗಿ ಸಲಹೆ ಕೊಟ್ಟರು. ಅಷ್ಟೇ ಅಲ್ಲ, ಇಂಗ್ಲೀಷ್‌ನಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳ ಬಳಿ ಇಂಗ್ಲೀಷ್‌ನಲ್ಲೇ, ಹಿಂದಿಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು ತಾಯಂದಿರ ಬಳಿ ಹಿಂದಿಯಲ್ಲೇ ಮಾತನಾಡಿದ್ದರು.

ರತ್ನಾ ಆಂಟೀಯವರ ಗಂಭೀರ ವ್ಯಕ್ತಿತ್ವ, ನಿಲುವು, ಗಟ್ಟಿ ಮಾತು ನಮ್ಮಲ್ಲಿ ಸ್ವಲ್ಪ ಭಯಹುಟ್ಟಿಸಿದ್ದು ಸತ್ಯವೇ ಆದರೂ, ಅವರಲ್ಲಿಯ ಕಾಳಜಿ, ಅಕ್ಕರೆ, ಎಲ್ಲವನ್ನೂ ಸರಳವಾಗಿ ಅರ್ಥಮಾಡಿಸುವ ಛಾತಿ ನಮ್ಮೆಲ್ಲರಲ್ಲೂ ಹೊಸ ಉತ್ಸಾಹ ಮೂಡಿಸಿದ್ದಂತೂ ಸುಳ್ಳಲ್ಲ.

ರತ್ನಾ ಆಂಟೀಯವರ ಮಾತುಗಳನ್ನೇ ಮೆಲುಕು ಹಾಕುತ್ತಾ ಮನೆಕಡೆ ಹೆಜ್ಜೆಹಾಕುತ್ತಿದ್ದೆ.
‘ಅಥರ್ವಅಮ್ಮಾ.. ನಿಮ್‌ಮಗ ಎಷ್ಟು ಆಬ್ಜೆಕ್ಟ್ ಕೊಡ್ತಾನೆ ಈಗ .?’ ಎಂಬ ದನಿಯೊಂದು ನನ್ನ ಬೆನ್ನಹಿಂದೆ ಕೇಳಿ ಬಂತು. ತಿರುಗಿ ನೋಡಿದರೆ, ನಮ್ಮದೇ ಶಾಲೆಯ ಸೀನಿಯರ್‌ ತಾಯಿ. ‘ಇನ್ನೂ ಮೂರೇ ಆಬ್ಜೆಕ್ಟು ರೀ..’ ಅಂದೆ ಸ್ವಲ್ಪ ಬೇಸರದಿಂದಲೇ ನಗುತ್ತಾ. ‘ಅಯ್ಯೋ.. ಆಗ್ಲಿ ಬಿಡಿ. ಇನ್ನೂ ನೀವ್‌ ಬಂದು ತಿಂಗಳೂ ಆಗಿಲ್ಲ, ಆಗಲೇ ಮೂರು ಆಬ್ಜೆಕ್ಟ್‌ ಕೊಡೋದನ್ನ ಕಲ್ತುಕೊಂಡಿದಾನಲ.. ಖುಷಿ ಪಡಿ. ಇನ್ನೂ ಎರಡು ಆಬ್ಜೆಕ್ಟ್ ಜಾಸ್ತಿ ಮಾಡಿ’ ಅನ್ನುತ್ತಲೇ ನನ್ನ ಸೊಂಟದ ಮೇಲೆ ಕೂತಿದ್ದ ಅಥರ್ವನ ಕೆನ್ನೆಯನ್ನು ಪ್ರೀತಿಯಿಂದ ಸವರಿ, ತಮ್ಮ ಮಗಳೊಂದಿಗೆ ಮಾತನಾಡುತ್ತಾ ನಮ್ಮನ್ನ ಹಿಂದಿಕ್ಕಿ ಮುಂದಾದರು ಅವರು. ಐದು ವರ್ಷದ ಅವರ ಮಗಳು ಕತ್ತು ತಿರುಗಿಸಿ ನಮ್ಮನೇ ನೋಡಿ ನಗುತ್ತಾ, ತನ್ನಮ್ಮನೊಂದಿಗೆ ಹೆಜ್ಜೆ ಹಾಕುತ್ತಲೇ ಟಾಟಾ ಅಂದಳು. ಅಥರ್ವನ ಕೈಯ್ಯಲ್ಲೂ ಟಾಟಾ ಮಾಡಿಸಿ ಟಾಟಾ ಎಂದು ನಾನೇ ಹೇಳಿದೆ. ಅವನೂ ನನ್ನ ಬಾಯಿ ನೋಡ್ತಾ ಗಂಟಲಿನಿಂದ ಶಬ್ಧ ಹೊರಡಿಸಿದ್ದ.

ಆ ಶಾಲೆಯ ವಾತಾವರಣಕ್ಕೆ ನಾವಿಬ್ಬರೂ ಒಗ್ಗಿಕೊಂಡಾಗಿತ್ತು. ನನಗೂ ಒಬ್ಬ ಚಿಕ್ಕ ಮಗುವನ್ನೇ ಪಾಠಕ್ಕೆ ಕೊಟ್ಟಿದ್ದರು. ಅಥರ್ವ ಪಾಠಕ್ಕೆ ಕುಳಿತ ಸಂದರ್ಭದಲ್ಲಿ ನಾನು ಕೂಡ ಮತ್ತೊಂದು ಮಗುವಿಗೆ ಪಾಠ ಮಾಡುತ್ತಿದ್ದೆ. ಆ ಮಗು ಕೂಡ ನನ್ನ ಮಗನದೇ ಹಂತದಲ್ಲಿದ್ದ ಕಾರಣ, ಕಲಿಸುವುದರಲ್ಲೇನೂ ವ್ಯತ್ಯಾಸವಾಗುತ್ತಿರಲಿಲ್ಲ. ಮನೆಯಲ್ಲಿ ಅಥರ್ವನಿಗೆ ನಾನೇನು ಪಾಠ ಮಾಡುತ್ತೇನೋ.. ಅದನ್ನೇ ಶಾಲೆಯಲ್ಲಿ ಈ ಮಗುವಿಗೆ ಮಾಡುತ್ತಿದ್ದೆ ಅಷ್ಟೆ.

ಪಿ.ಎ.ಡಿ.ಸಿ ಸ್ಕೂಲ್‌ಗೆ ಸೇರಿಕೊಂಡ ಮಗು ಮೊದಲು ಎಷ್ಟು ಸಾಧ್ಯವೋ ಅಷ್ಟು ವಸ್ತುಗಳ ಬಗ್ಗೆ ತಿಳಿದುಕೊಳ್ಳಬೇಕು. ಇಪ್ಪತ್ತೈದಾದರೂ ವಸ್ತುಗಳನ್ನ ಗುರುತಿಸುವುದನ್ನ ಕಲಿತು, ಹೇಳುವುದಕ್ಕೂ ಕಲಿತಮೇಲೆಯೇ ಮಗು ಮುಂದಿನ ಹಂತಕ್ಕೆ ಹೋಗಲು ಸಾಧ್ಯ. ಕಿವಿ ಕೇಳುವ ಸಾಮಾನ್ಯ ಮಗುವಿಗೆ, ನಾವು ಪಟ್ಟು ಹಿಡಿದರೆ, ಒಂದೇ ದಿನದಲ್ಲಿ ಇಪ್ಪತ್ತೈದು ವಸ್ತುಗಳನ್ನ ತೋರಿಸಿ ಕಲಿಸಿಬಿಡಬಹುದೇನೋ. ಆದರೆ ಕಿವುಡು ಮಕ್ಕಳಿಗೆ ಕಲಿಸುವುದು ಅಷ್ಟು ಸುಲಭವಲ್ಲ ಅನ್ನೋ ವ್ಯತ್ಯಾಸದ ಅನುಭವಾಗಿತ್ತು. ನಮ್ಮ ಬಾಯಿ ತೋರಿಸಿ, ಬಾಯಿಂದ ಹೊರಡುವ ಅಕ್ಷರಗಳ ಪರಿಚಯ ಮಾಡಿಸುತ್ತಾ, ಗಂಟಲಿನ ತರಂಗಗಳನ್ನ ಅವರು ಗಮನಿಸುವಂತೆ ಮಾಡುತ್ತಾ, ಒಂದೊಂದೇ ಅಕ್ಷರಗಳನ್ನ ಕಲಿಸಿ ಕಲಿಸಿ ಶಬ್ಧಗಳನ್ನ ಪರಿಚಯಿಸಬೇಕು ಎಂಬುದೆಲ್ಲ ನನಗೆ ಅರ್ಥವಾಗತೊಡಗಿತ್ತು. ಅಂತೂ ಇಂತೂ ಒಂದು ತಿಂಗಳಿಗೆ ನಾನು ಮೂರು ವಸ್ತುಗಳನ್ನು ಕೊಡಲು ನನ್ನ ಮಗನಿಗೆ ಕಲಿಸಿದ್ದೆ.

ಸ್ಕೂಲ್‌ನ ನಿಯಮದಂತೆ 25 ಆಬ್ಜೆಕ್ಟ್‌ಗಳ ಚಿತ್ರಗಳನ್ನು ಅಂಟಿಸಿ ಆಬ್ಜೆಕ್ಟ್‌ಪುಸ್ತ ಮಾಡಿದ್ದೆ. ಅದರಲ್ಲಿರುವ ಮೊದಲ ಮೂರು ವಸ್ತುಗಳೇ, ಬಾಲ್‌, ಎಲೆ, ಹೂವು. ಅಥರ್ವನ ಎದರಿಗೆ ಒಂದು ಪುಟ್ಟ ಬಾಲ್‌, ಪ್ಲಾಸ್ಟಿಕ್‌ನ ಒಂದು ಎಲೆ, ಹೂವು ಹರಡಿಟ್ಟು, ಅವನ ಮುಖ ಎತ್ತಿ ನನ್ನ ಮುಖವನ್ನೇ ತೋರಿಸುತ್ತಾ ನಿಧಾನವಾಗಿ “ಬಾ…ಲ್‌ಕೊಡು” ಎಂದರೆ ತನ್ನ ಮುಂದಿದ್ದ ಬಾಲ್‌ನ್ನ ಎತ್ತಿ ನನ್ನ ಕೈಗಿಡುತ್ತಿದ್ದ. ಹಾಗೇ ಎಲೆ ಮತ್ತು ಹೂವನ್ನೂ ಕೊಡುತ್ತಿದ್ದ. ದಿನಕ್ಕೆ ಕನಿಷ್ಠ ನಾಲ್ಕೈದು ಬಾರಿ ತಿರುಗಾಮುರಗ ಇವುಗಳನ್ನೇ ತೋರಿಸಿ ಕಲಿಸುತ್ತಿರುವುದರಿಂದ ಆ ಮೂರನ್ನ ಅವನು ನನ್ನ ಬಾಯಿ ನೋಡಿಯೇ ಗುರುತು ಹಚ್ಚುತ್ತಿದ್ದ. ಆದರೆ, ಬಾಲ್‌ ಮುಟ್ಟು, ಬಾಲ್‌ ತೋರಿಸು, ಬಾಲ್‌ ಎಸೆ, ಬಾಲ್‌ ಉರುಳಿಸು ಅನ್ನೋದನ್ನ ಅಭಿನಯಿಸಿ ಹೇಳಿದರೆ ಮಾತ್ರ ಅವನಿಗೆ ತಿಳಿಯುತ್ತಿತ್ತೇ ಹೊರತು, ಅಭಿನಯಿಸದೇ ತಟಸ್ಥವಾಗಿ ಕುಳಿತು ಹೇಳಿದರೆ ಅವನು ಬಾಲ್‌ ಅನ್ನೋದನ್ನ ಮಾತ್ರ ಗುರುತಿಸಿ ಬಾಲ್‌ ಎತ್ತಿ ಕೊಟ್ಟುಬಿಡುತ್ತಿದ್ದ. ಈ ಕಾರಣಕ್ಕಾಗಿ ನಾವು ತಾಯಂದಿರೆಲ್ಲ ನಮ್ಮ ನಮ್ಮ ಮಕ್ಕಳ ಬಗ್ಗೆ ಮಾತನಾಡಿಕೊಳ್ಳುವಾಗ , ಮಕ್ಕಳು ಎಷ್ಟು ಆಬ್ಜೆಕ್ಟ್‌ಗಳನ್ನ ಗುರುತಿಸುತ್ತಾರೆ, ಎಂಬ ಮಾತುಕತೆ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿತ್ತು.

ಹಾಗೇಯೇ ಪ್ರಾಣಿ, ಪಕ್ಷಿ, ವಾಹನಗಳ ಹೆಸರುಗಳನ್ನೂ ಕೂಡ ಬಾಯಿಯ ಚಲನೆ ನೋಡಿ ನಾನು ಏನು ಹೇಳುತ್ತಿದ್ದೇನೆ ಎಂಬುದನ್ನ ಅಂದಾಜಿಸುತ್ತಿದ್ದ. ಉದಾಹರಣೆಗಾಗಿ ನಾಯಿಯ ಚಿತ್ರ ತೋರಿಸಿ ‘ಇದು ನಾಯಿ’ ಎಂದು ಹೇಳಿಕೊಟ್ಟರೆ ತಾನೂ ತನ್ನ ಬಾಯಿಯನ್ನು ಅಗಲಿಸಿ “ಆ…” ಅಂದು ತುಟಿ ಸ್ವಲ್ಪ ಹಿಗ್ಗಿಸಿ ಬಾಯಿ ಮುಚ್ಚಿಬಿಡುತ್ತಿದ್ದ. ’ನಾಯಿ’ ಶಬ್ಧದ ಬದಲಾಗಿ ಆಯಿ, ಕಾಯಿ ಅಂದರೂ ಅವನು ನಾಯಿ ಎಂದೇ ಅರ್ಥ ಮಾಡಿಕೊಳ್ಳುತ್ತಿದ್ದನಾದರೂ, ತಾನು ಗಂಟಲಿನಲ್ಲೇನೋ ಶಬ್ಧ ಹೊರಡಿಸಬೇಕು ಎಂಬುದು ಅವನಿಗೆ ಅರ್ಥವಾಗಿತ್ತು. ನಾನೇನೇ ಹೇಳಿಕೊಟ್ಟರು ನನ್ನ ತುಟಿಯನ್ನೇ ನೋಡಿ ತಾನೂ ಅನುಕರಿಸಿ ಗಂಟಲಿನಿಂದ ಶಬ್ಧಹೊರಡಿಸುತ್ತಿದ್ದ.

ಪ್ರಾಣಿ ಪಕ್ಷಿ ವಾಹನಗಳ ಹೆಸರು ಹೇಳುವುದಕ್ಕಿಂತಲೂ ಅದು ಶಬ್ಧ ಮಾಡುವುದನ್ನು ಅನುಕರಿಸಿದರೆ ಬಹುಬೇಗ ಪತ್ತೆ ಹಚ್ಚಿಬಿಡುತ್ತಿದ್ದ. ಬೌಬೌ ಎಲ್ಲಿದೆ ಅಂತ ಕೇಳಿದರೆ ಥಟ್ಟನೇ ನಾಯಿಯನ್ನ ತೋರಿಸುತ್ತಿದ್ದ. ‘ಊ…..’ ಎಲ್ಲಿದೆ ಎಂದರೆ ರೈಲಿನ ಚಿತ್ರ ತೋರಿಸಿಬಿಡುತ್ತಿದ್ದ. ಹಾಗೇ, ಮಿಯಾಂ, ಅಂಬಾ, ಕ್ಕೊಕ್ಕೋ ಎಂದರೆ, ಅವೆಲ್ಲ ಯಾವ್ಯಾವ ಪ್ರಾಣಿಯ ಶಬ್ಧಗಳು ಅನ್ನೋದನ್ನ ನನ್ನ ಮುಖಾಭಿನಯ ನೋಡಿಯೇ ಚುರುಕಾಗಿ ಅಂದಾಜಿಸಿಬಿಡುತ್ತಿದ್ದ.

ಅದೇ ರೀತಿ ಸಮಯ ಸಿಕ್ಕಾಗೆಲ್ಲ ಸ್ವರಗಳನ್ನ ಹೇಳಿಸಿ ಹೇಳಿಸಿ ಅಥರ್ವ ಈಗ ಒಟ್ಟೂ ನಾಲ್ಕು ಸ್ವರಗಳನ್ನ ಹೇಳುತ್ತಿದ್ದ. ಆ, ಊ, ಅಂ ಸ್ವರಗಳನ್ನ ಸ್ಕೂಲ್‌ಗೆ ಬರುವುದಕ್ಕೂ ಮುಂಚೆಯೇ ಕಲಿತಿದ್ದನಲ್ಲ, ಈಗ ಈ ಒಂದು ತಿಂಗಳಿನಲ್ಲಿ ’ಓ’ ಅನ್ನುವುದೂ ಬಂದಿತ್ತು. ಓ ಸ್ವರ ಅಥರ್ವ ಬಾಯಲ್ಲಿ ಬಂದ ವಿಚಾರವನ್ನ ನಮ್ಮ ಗುಂಪಿನ ಎಲ್ಲ ತಾಯಿಯರಿಗೆ ಹೇಳಿ ಖುಷಿಪಟ್ಟಿದ್ದೆ. ಒಂದೊಂದು ಸ್ವರವೂ ಒಂದೊಂದು ಮೈಲಿಗಲ್ಲು ನಮ್ಮೆಲ್ಲರ ಪಾಲಿಗೆ..! ಈ ಎಲ್ಲ ಬೆಳವಣಿಗೆಯಾಗಿದ್ದು ಕೂಡ ನಾವು ಶಾಲೆಗೆ ಸೇರಿದಮೇಲೆಯೇ, ಹೀಗಾಗಿ ಒಂದಲ್ಲಾ ಒಂದು ದಿನ ಅಥರ್ವನೂ ಮಾತನಾಡಿಯೇ ಆಡುತ್ತಾನೆ ಎಂಬ ವಿಶ್ವಾಸ ನಿಧಾನವಾಗಿ ಹೆಚ್ಚುತ್ತಿತ್ತು.

ನೂರಿನ್ನೂರು ಹೆಂಗಸರೇ ತುಂಬಿರುವ ಆ ಶಾಲೆಯಲ್ಲಿ ಸಂಸಾರದ ವಿಷಯವಾಗಲೇ, ಗಾಸಿಪ್‌ಗಳಾಗಲೀ, ಹೊಸರುಚಿಯ ಸಲಹೆಗಳಾಗಲೀ, ಧಾರಾವಾಹಿ-ಸಿನಿಮಾಗಳ ಬಗ್ಗೆಯಾಗಲೀ ಯಾರ‍್ಯಾರೂ ಮಾತನಾಡುತ್ತಲೇ ಇರಲಿಲ್ಲ. ಅವರಾಯಿತು ಅವರ ಮಕ್ಕಳ ಕಲಿಕೆಯಾಯಿತು. ಅಷ್ಟೆ. ಹೀಗಾಗಿ ರಸ್ತೆಯಲ್ಲಿ ಸಿಕ್ಕಾಗಲೂ ಆ ಸೀನಿಯರ್‌ತಾಯಿ ನನ್ನ ಬಳಿ ಪಾಠದ ವಿಷಯವನ್ನೇ ಕೇಳಿದ್ದಳು. ಎಲ್ಲರಿಗೂ ಅವರವರ ಮಕ್ಕಳು ಮಾತನಾಡಬೇಕಾಗಿದೆ ಅಷ್ಟೆ. ಈ ಜಗತ್ತಿನಲ್ಲಿ ಏನು ಬೇಕಾದರೂ ಘಟಿಸಿ ಹೋಗಲಿ. ಅದೆಲ್ಲವೂ ಈ ತಾಯಿಯರ ಪಾಲಿಗೆ ಗೌಣ. ಅವರವರ ಮಗುವೇ ಅವರವರ ಜಗತ್ತು. ನಿಧಾನವಾಗಿ ನನ್ನಲ್ಲೂ ಈ ಬದಲಾವಣೆಯಾಗುತ್ತಿದ್ದದ್ದು ನನ್ನ ಗಮನಕ್ಕೇ ಬಂದಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: