ಅಗ್ರಸೇನ ಕಿ ಬಾವೋಲಿ
ಅಮೀರ್ ಖಾನ್ ‘ಪಿ.ಕೆ’ ಸಿನೆಮಾದಲ್ಲಿ ಈ ಬಾವಿಯನ್ನೆ ಮನೆ ಮಾಡಿಕೊಂಡಿದ್ದ ! ಸಿನೆಮಾ ತೆರೆಕಂಡ ನಂತರ ಈ ಸ್ಥಳ ಪ್ರಸಿದ್ಧವಾಯಿತು. ಈ ಬಾವಿಯೊಳಗೆ ಸಲೀಸಾಗಿ ಇಳಿದುಹೋಗಬಹುದು! ಮೆಟ್ಟಿಲ ಮೇಲೆ ಆರಾಮಾಗಿ ಕುಳಿತುಕೊಳ್ಳಬಹುದು ! ಸಾಕಾಯ್ತು ಎನಿಸಿದರೆ ಉದ್ದಗೆ ಮಲಗಬಹುದು! ಬೃಹದಾಕಾರದಲ್ಲಿರುವ ಬಾವಿಗೆ ನೂರಾರು ಮೆಟ್ಟಿಲುಗಳು!
ಈ ಬಾವಿ ಇರುವುದು ನವದೆಹಲಿಯ ಹ್ಯಾಲಿ ರೋಡಿನಲ್ಲಿ. ಹೆಸರು ‘ಅಗ್ರಸೇನ ಕಿ ಬಾವೊಲಿ’. ‘ಬಾವೋಲಿ’ ಎಂದರೆ ಬಾವಿ ಎಂದರ್ಥ. ಈ ರೀತಿಯ ಮೆಟ್ಟಿಲುಗಳಿರುವ ಬಾವಿಯನ್ನು ಹಿಂದಿಯಲ್ಲಿ ‘ಬಾವ್ಡಿ’, ಮರಾಠಿಯಲ್ಲಿ ‘ಬಾರವ್’, ಗುಜರಾತಿಯಲ್ಲಿ ‘ವಾವ್’, ಕನ್ನಡದಲ್ಲಿ ‘ಕಲ್ಯಾಣಿ’ ಅಥವಾ ‘ಪುಷ್ಕರಿಣಿ’ ಎಂದು ಕರೆಯಲಾಗುತ್ತದೆ. ಪುಷ್ಕರಿಣಿ, ಕಲ್ಯಾಣಿ ಎಂದ ತಕ್ಷಣ ಇದು ದೇವಸ್ಥಾನವಿದ್ದಲ್ಲಿ ಮಾತ್ರ ಇರಬೇಕು ಎಂಬುದೇನಿಲ್ಲ. ಅಂತರ್ಜಲ ಇರುವಲ್ಲಿ ಬಾವಿಯನ್ನು ತೆಗೆದು ಅದೇ ಬಾವಿಯನ್ನು ಮಳೆ ನೀರಿನ ಸಂಗ್ರಹದ ಉದ್ಧೇಶಕ್ಕಾಗಿ ನಿರ್ಮಿಸಲಾದ ವಿವಿದೋದ್ಧೇಶದ ಬಾವಿ ಇವು. ಬೇಸಿಗೆಯಲ್ಲಿ ನೀರು ಕೆಳಕ್ಕೆ ಹೋದಂತೆ ಬಾವಿಯೊಳಗೆ ಸಲೀಸಾಗಿ ಇಳಿಯುತ್ತಾ ಹೋಗಿ ನೀರನ್ನು ತೆಗೆದುಕೊಂಡು ಬರಬಹುದಾದಷ್ಟು ಅಗಲವಾದ ಮೆಟ್ಟಿಲುಗಳು ಈ ಬಾವಿಗಿದೆ.
ಭಾರತದಲ್ಲಿ ಪ್ರಸಿದ್ಧವಾದ ಸುಮಾರಷ್ಟು ಮೆಟ್ಟಿಲು ಬಾವಿಗಳಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರಕಾರ ಮೆಟ್ಟಿಲು ಬಾವಿಗಳ ಮೊದಲ ಉಲ್ಲೇಖ ಸಿಗುವುದೆಂದರೆ ಸಿಂಧು ನಾಗರಿಕತೆಯ ಸಮಯದಲ್ಲಿ. ದೋಲವೀರಾದಲ್ಲಿದ್ದ ಮೆಟ್ಟಿಲಿನ ಬಾವಿ ಇದಕ್ಕೆ ಸಾಕ್ಷವಾಗಿದೆ. ಮೆಹಂಜದಾರೋದಲ್ಲಿ ಇಟ್ಟಿಗೆಗಳಿಂದ ನಿರ್ಮಿತವಾದ ಈಜುಕೊಳವು ಇದೇ ಮಾದರಿಯದ್ದಾಗಿದೆ. ಇನ್ನು ಕರ್ನಾಟಕಕ್ಕೆ ಬಂದರೆ ಚಾಲುಕ್ಯರ ಕಾಲದಲ್ಲಿ ಗದಗದ ಲಕ್ಕುಂಡಿಯಲ್ಲಿ ನಿರ್ಮಿತವಾದ 101 ಮೆಟ್ಟಿಲಿನ ಕಲ್ಯಾಣಿ ಪ್ರಮುಖವಾದುದ್ದು. ಇದನ್ನು ‘ಮುಸ್ಕಿನ ಬಾವಿ’ ಎಂತಲೂ ಕರೆಯುತ್ತಾರೆ. ಹಂಪಿಯ ಕಲ್ಯಾಣಿ ಇದಕ್ಕಿಂತ ಚಿಕ್ಕದಾದರು ಕರ್ನಾಟಕದ ಮೆಟ್ಟಿಲು ಬಾವಿಗಳಲ್ಲಿ ಎರಡನೆ ಪ್ರಮುಖ ಸ್ಥಾನ ಪಡೆಯುತ್ತದೆ. ಇಂದಿಗೂ ಜೀವಂತವಿರುವ ವಾಸ್ತುಶಿಲ್ಪದ ಅಮೋಘ ಚಿತ್ರಣಕ್ಕೆ ಸಾಕ್ಷಿಯಾಗಿರುವ ಭಾರತದ ಪ್ರಮುಖ ಮೆಟ್ಟಿಲು ಬಾವಿಗಳೆಂದರೆ, ಚಾಂದ್ ಬಾವೊರಿ ರಾಜಸ್ಥಾನ್, ಅಡಾಲಜ್ ನಿ ವಾವ್ ಗುಜರಾತ್, ಮೊಧೇರಾ ಗುಜರಾತ್, ರಾಣಿ ಕಿ ವಾವ್ ಗುಜರಾತ್, ದಾದಾ ಹರೀರ್ ವಾವ್ ಗುಜರಾತ್, ದೆಹಲಿಯಲ್ಲಿನ ಮೆಹ್ರೋಲಿಯ ಅನಂಗತಲ್, ಗಂಢಕ್ ಮತ್ತು ರಜೋನ್ ಕಿ ಬಾವೋಲಿ ಎಂಬ ಮೂರು ಬಾವೋಲಿಗಳು ಐತಿಹಾಸಿಕವಾಗಿ ಪ್ರಮುಖವಾಗಿವೆ.
ಅಗ್ರಸೇನನದ ಬಾವೊಲಿಯು ದೆಹಲಿಯ ಜಂತ್ ಮಂತರ್ ಮತ್ತು ಕನೌಟ್ ಪ್ಲೇಸ್ ಗೆ ಹತ್ತಿರವಾಗಿದ್ದು, ಕ್ರಿಸ್ತಪೂರ್ವ 3124 ರಲ್ಲಿ ಮಹಾಭಾರತ ಕಾಲದ ರಾಜ ಅಗ್ರಸೇನ ಕಟ್ಟಿಸಿದ್ದರಿಂದ ಬಾವಿಯನ್ನು ಅಗ್ರಸೇನನ ಹೆಸರಿನಿಂದ ಕರೆಯಲಾಗುತ್ತದೆ. ಬಾವಿಯ ಹೊರ ದ್ವಾರದಲ್ಲಿ ಕಲ್ಲಿನ ಮೇಲೆ ಬರೆದ ಪ್ರಕಾರ ಅಗ್ರಸೇನನೆ ಈ ಬಾವಿಯ ನಿರ್ಮಾಪಕ. ಆದರೆ ಈ ಬಗ್ಗೆ ಖಚಿತತೆ ಯಾರಿಗೂ ಇಲ್ಲ. ತದ ನಂತರ 14 ನೇ ಶತಮಾನದಲ್ಲಿ ಅಗರ್ವಾಲ್ ಸಮುದಾಯದವರು ಇದನ್ನು ಮರುನಿರ್ಮಾಣ ಮಾಡಿದ್ದಾರೆ ಎಂದು ಅಗರವಾಲ್ ಕವಿಯೊಬ್ಬರು ಹೇಳಿದ್ದಾರೆ. ದೆಹಲಿಯಲ್ಲಿ ಮೆಟ್ಟಿಲು ಬಾವಿಗಳ ಸಂಖ್ಯೆ ಒಂದು ಕಾಲಕ್ಕೆ ಗಣನೀಯ ಪ್ರಮಾಣದಲ್ಲಿ ಇದ್ದು ಆ ನಂತರ ನಗರ ನಿರ್ಮಾಣ ಮಾಡುವಾಗ ಎಲ್ಲಾ ಮುಚ್ಚಿ ಹೋಗಿವೆ. ಈಗ ದೆಹಲಿಯಲ್ಲಿ ಉಳಿದಿರುವ ಬಾವೋಲಿಗಳೆಂದರೆ ಮೆಹ್ರೋಲಿಯ ಮೂರು ಬಾವೋಲಿ ಮತ್ತು ಅಗ್ರಸೇನನ ಬಾವೋಲಿ. 1958 ರ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ರಕ್ಷಣಾ ಕಾಯಿದೆಗನುಗುಣವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಕ್ಷಣೆಯಡಿ ಅಗ್ರಸೇನ ಬಾವೋಲಿ ನಿರ್ವಹಿಸಲ್ಪಡುತ್ತದೆ. ಬಾವೋಲಿ ವಾರದ ಪೂರ್ತಿ ದಿನಗಳು ಪ್ರವಾಸಿಗರಿಗೆ ನೋಡಲು ಲಭ್ಯವಿರುತ್ತದೆ. 1958 ರ ಕಾಯಿದೆಯ ನಂತರವೂ 2002 ರವರೆಗೆ ದೆಹಲಿಯ ಜನ ಇದನ್ನು ಕಸದ ತಿಪ್ಪೆ ಮಾಡಿದ್ದು ಆ ನಂತರವಷ್ಟೆ ಈ ಸ್ಥಳ ಗುರುತಿಸಲ್ಪಟ್ಟಿದ್ದು.
ಈಗ ದೆಹಲಿಯಲ್ಲಿ ಉಳಿದಿರುವ ಮೆಹ್ರೋಲಿಯ ಅನಂಗತಲ್ ಮತ್ತು ಅಗ್ರಸೇನ ಬಾವೋಲಿಯ ಪ್ರಮುಖ ವಿಶೇಷವೆಂದರೆ 10 ನೇ ಶತಮಾನದಲ್ಲಿ ಎರಡನೆ ಅನಂಗಪಾಲ ಮೆಹ್ರೋಲಿಯ ಮೆಟ್ಟಿಲು ಬಾವಿಯನ್ನು ನಿರ್ಮಿಸಿದ ಮತ್ತು ಮೂರನೆ ಅನಂಗಪಾಲನ ಆಸ್ಥಾನದಲ್ಲಿದ್ದ ನತ್ತಲ್ ಸಾಹು ಎಂಬ ಅಗರವಾಲ್ ವ್ಯಾಪಾರಿ ಮತ್ತು ಮಂತ್ರಿ ಅಗ್ರಸೇನ ಬಾವೋಲಿಯನ್ನು ಜೀರ್ಣೋದ್ದಾರ ಮಾಡಿಸಿದ. ಈ ಎರಡೂ ಕಾರ್ಯಗಳು ಕೂಡ ನಡೆದಿದ್ದು ತೋಮರರ ಆಳ್ವಿಕೆಯಲ್ಲಿ ಎಂಬುದು ವಿಶೇಷ.
ಈ ಬಾವೊಲಿಯ ವಿವಿದೋದ್ಧೇಶವೆಂದರೆ ಕೇವಲ ನೀರು ಸಂಗ್ರಹಕ್ಕಾಗಿಯಷ್ಟೆ ಅಲ್ಲ ಹೆಣ್ಣು ಮಕ್ಕಳ ಹರಟೆಯ ಸ್ಥಳವೂ ಕೂಡ ಆಗಿತ್ತು, ನೀರಿಗೆ ಬಂದವರು ಹಾಗೆ ಹರಟೆಹೊಡೆಯುತ್ತಾ ಕೂರುತ್ತಿದ್ದರು. ಹಾಗೆಯೆ ಗಂಡಸರ ಪಂಚಾಯ್ತಿ ಕಟ್ಟೆಯು ಕೂಡ ಆಗಿದ್ದು, ನಾರ್ವಜನಿಕ ಕಟ್ಟೆ ಪಂಚಾಯ್ತಿ ಜಾಗವೂ ಕೂಡ ಆಗಿತ್ತು ಎಂದು ಇತಿಹಾಸ ಹೇಳುತ್ತದೆ. ಅಲ್ಲಿನ ವಿಸ್ತಾರವಾದ ಜಾಗ ನೋಡಿದರೆ ಇದೆಲ್ಲ ಇದ್ದಿರಬಹುದು ಎನಿಸುತ್ತದೆ.
ಅಗ್ರಸೇನ ಬಾವೋಲಿಯ ವಾಸ್ತುಶಿಲ್ಪ ರಚನೆ ಮತ್ತು ಬಾಳಿಕೆಯ ಕಾರಣದಿಂದ ಅದ್ಭುತವಾಗಿದೆ. ಬಾವಿಯನ್ನು ಸಂಪೂರ್ಣವಾಗಿ ‘ರಬ್ಬಲ್ ಮಾನ್ಸೋರಿ’ ಎಂಬ ಕಲ್ಲಿನಿಂದ ಕಟ್ಟಲಾಗಿದ್ದು, ಬಾವಿ 60 ಮೀಟರ್ ಉದ್ದ, 15 ಮೀಟರ್ ಅಗಲವಿದ್ದು, 103 ಮೆಟ್ಟಿಲುಗಳಿವೆ. ಬಾವಿ ಆಯತಾಕಾರದಲ್ಲಿ ಇದ್ದು ಬಲ ಮತ್ತು ಎಡಕ್ಕೆ ಸಣ್ಣ ಸಣ್ಣ ಕಮಾನುಗಳಿವೆ. ಬಾವಿಯ ಮೆಟ್ಟಿಲುಗಳನ್ನು ಮೂರು ಭಾಗವಾಗಿ ವಿಭಾಗಿಸಬಹುದು. ಮೊದಲನೆ ಹಂತ ಅಗಲ, ಎರಡನೆಯದು ಸ್ವಲ್ಪ ಕಿರಿದಾಗುತ್ತದೆ, ಮೂರನೆಯದು ಇನ್ನೂ ಸ್ವಲ್ಪ ಕಿರಿದಾಗುತ್ತಾ ಬಾವಿಯ ಆಳವನ್ನು ತಲುಪುತ್ತದೆ. ಈಗ ಬಾವಿಯಲ್ಲಿ ನೀರಿಲ್ಲದಿದ್ದರಿಂದ ಸಂಪೂರ್ಣ ಒಳಕ್ಕೆ ಹೊಕ್ಕು ಹೋದರೆ ಪಾರಿವಾಳ ಮತ್ತು ಬಾವೋಲಿಯ ಹಿಕ್ಕೆ, ರೆಕ್ಕೆ, ಪುಕ್ಕದ ವಾಸನೆ.
‘ಕೆರೆಗೆ ಹಾರ’ದ ಭಾಗೀರಥಿಯ ಕತೆಯಂತೆ ಇಲ್ಲಿಯೂ ಬಾವಿ ತುಂಬದಿದ್ದಾಗ ಯಾರಾದರೂ ಬಾವೊಲಿಗೆ ಹಾರಿ ಪ್ರಾಣ ಕಳೆದುಕೊಂಡರೆ ಬಾವಿ ತುಂಬುತ್ತದೆ ಎಂಬ ನಂಬಿಕೆಯು ಇತ್ತಂತೆ. ಅದರ ಹೊರತಾಗಿ ಬಾವಿಯಲ್ಲಿನ ಕಪ್ಪು ನೀರಿಗೆ ಆಕರ್ಷಿತರಾಗಿ ಕೂಡ ಪ್ರಾಣ ಕಳೆದುಕೊಂಡಿದ್ದಾರಂತೆ. ಬಾವಿಯ ಒಳಗೆ ಹೊರಗೆ ಮರದಲ್ಲಿ ಬಾವಲಿಗಳು ಜೋತು ಬಿದ್ದಿರುತ್ತವೆ. ಪಾರಿವಾಳಗಳು ಗುಟುರ್ ಹಾಕುತ್ತಿರುತ್ತವೆ. ಬಾವಿಗೆ ಹಾರಿ ಸತ್ತವರ ಆತ್ಮಗಳು ಬಾವಲಿಗಳಾಗಿ ಪಾರಿವಾಳಗಳಾಗಿ ಜನ್ಮ ತಾಳಿವೆ ಎಂಬುದು ಊಹಿತವಾದರೂ ಈ ಊಹೆಗಳ ಮೇಲೆಯೆ ಅಗ್ರಸೇನ ಬಾವೋಲಿಯ ಹಾರರ್ ಕತೆಗಳು, ಹಾರರ್ ವಿಡಿಯೋಗಳು ಕೂಡ ಬಂದಿವೆ.
ಅಮಿರ್ ಖಾನ್ ನ ‘ಪಿ.ಕೆ’ ಸಿನೆಮಾ, ಸಲ್ಮಾನ್ ಖಾನ್ ನ ‘ಸುಲ್ತಾನ್’ ಮತ್ತು ಶ್ರಿದೇವಿಯ ಹಾರರ್ ಸಿನೆಮಾ ‘ಮಾಮ್’ ನ ಶೂಟಿಂಗ್, ಮಾಡೆಲ್ ಗಳ ಫೋಟೋಶೂಟ್ ಗಳು ಇಲ್ಲಿ ನಡೆದಿವೆ. ದೆಹಲಿಯ ಅಂತರ್ಜಲ ಮಟ್ಟ ಹೆಚ್ಚಲು ಈ ಬಾವಿಗಳು ಮುಖ್ಯವಾಗಿದ್ದವು.
ಇದೆಲ್ಲಕ್ಕಿಂತ ಮುಖ್ಯವಾಗಿ ಅಂತರ್ಜಲಮಟ್ಟ ಇಳಿಯುತ್ತಿರುವ ಸಂದರ್ಭದಲ್ಲಿ ಮಳೆ ನೀರಿನ ಸಂಗ್ರಹಕ್ಕಾಗಿ ಈ ಬಾವಿಗಳು ಚರ್ಚಿತವಾಗುತ್ತಿವೆ. ಆಗಿನವರ ಮುನ್ನೋಟದ ಚಿಂತನೆಗಳಿಗಾಗಿ ಅಧ್ಯಯನದ ದೃಷ್ಟಿಯಿಂದ ಮೆಟ್ಟಿಲು ಬಾವಿಗಳು ಮುಖ್ಯವಾಗಿವೆ.
Nice write up Chaitrika
ಮಾಹಿತಿ ಪೂರ್ಣವಾದ ಲೇಖನ
Nice sister
Bhala chennagide mam nimma baraha informative