ಅನಾವಶ್ಯಕ ಚರ್ಚೆ ಇಲ್ಲಿಗೆ ಬಿಟ್ಟುಬಿಡಿ..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು ಮತ್ತು ಮಹಾಂತೇಶ ನವಲಕಲ್ ಕಥೆಗಳನ್ನು ವಾಚಿಸಿದ್ದರು.

ಈ ಕುರಿತು ಕೆ ಎಂ ವಿಶ್ವನಾಥ ಮರತೂರ ಅವರು ಬರೆದ ಸಮೀಕ್ಷಾ ಬರಹ ‘ಅವಧಿ’ಯಲ್ಲಿ ಪ್ರಕಟವಾಗಿತ್ತು. ಅದು ಇಲ್ಲಿದೆ-

ಇದಕ್ಕೆ ಕಥೆಗಾರ ಮಹಾಂತೇಶ ನವಲಕಲ್ ಅವರು ಪ್ರತಿಕ್ರಿಯೆ ನೀಡಿದರು. ಅದು ಇಲ್ಲಿದೆ

ಮತ್ತೊಬ್ಬ ಕಥೆಗಾರ, ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ ಬಸವರಾಜ ಡೋಣೂರು ಅವರು ಬರೆದ ಪ್ರತಿಕ್ರಿಯೆ ಇಲ್ಲಿವೆ.

ಈಗ ಕಥೆಗಾರ್ತಿ, ಕಾರ್ಯಕ್ರಮದಲ್ಲಿ ಅತಿಥಿಯೊಬ್ಬರಲ್ಲಾದ ಸಂಧ್ಯಾ ಹೊನಗುಂಟಿಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ

ಸಂಧ್ಯಾ ಹೊನಗುಂಟಿಕರ್ 

ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಗುಲಬರ್ಗಾದಲ್ಲಿ ಆಯೋಜಿಸಿದ  ಕಥಾ ವಾಚನ ಕಾರ್ಯಕ್ರಮದಲ್ಲಿ ಆದ ಗೊಂದಲಕ್ಕೆ  ಸಮಯದ ಕೊರತೆ ಕಾರಣ  ಎಂದೇ ಹೇಳಬಹುದು.

ಏಕೆಂದರೆ ಇಡೀ ಕಾರ್ಯಕ್ರಮದಲ್ಲಿ ನಾನು ಮತ್ತು ಜ್ಯೋತಿ ಕುಲಕರ್ಣಿ  ಹೆಚ್ಚು ಕಡಿಮೆ ಉತ್ಸವ ಮೂರ್ತಿಗಳಾಗಿ ಕುಳಿತಿದ್ದೇವು. ಪ್ರಶ್ನೆ  ಕೇಳಲೂ ವೇದಿಕೆಯ ಮೇಲೆ ಕೂಡುವ ಅವಶ್ಯಕತೆ  ಇರಲಿಲ್ಲ.

ಕಾರ್ಯಕ್ರಮದ ಆಯೋಜಕರಾದ ನಿರಗುಡಿ ಅವರು ನಾನು ಮತ್ತು ಜ್ಯೋತಿಯವರು ಮಹಾಂತೇಶ್ ನವಲಕಲ್ ಅವರ ಕಥೆಯ ಕುರಿತು ಮಾತ್ರ   ಸಂವಾದ ಮಾಡಬೇಕೆಂದು ಹೇಳಿದ್ದರು. ಹಾಗಾಗಿ ಬಸವರಾಜ ಡೋಣೂರ ಅವರ ಕಥೆಯ ಬಗ್ಗೆ ನಮಗೆ ಮಾತನಾಡಲು ಯಾವ ಅವಕಾಶವಿಲ್ಲದಾಯಿತು.

ನವಲಕಲ್ ಅವರ ‘ಅಶ್ವಗಂಧದ ಹಾದಿ’ ಈ ಕಥೆ ನಾನು ಈ ಮೊದಲೇ ಓದಿದ್ದು ನಾನು ಮೆಚ್ಚಿದ ಅವರ ಅನೇಕ ಕಥೆಗಳಲ್ಲಿ ಇದೂ ಕೂಡ ಒಂದು. ಅಂದು ಸಭೆಯಲ್ಲಿ ಹಿಂದೆ ಕುಳಿತಂತಹ ವಿದ್ಯಾರ್ಥಿಗಳಿಗೆ “ಈ ಕಥೆ ನಿಮಗೇ ಅರ್ಥವಾಯಿತೇ?” ಎಂದು ಕೇಳಿದ ಕಾರಣವೇನೆಂದರೆ ಮಹಾಂತೇಶ್ ಅವರ ಕಥೆಗಳು ಒಂದು ಓದಿಗೆ ಅಥವಾ ಕೇಳುವುದಕ್ಕೆ ದಕ್ಕುವಂಥದ್ದಲ್ಲ, ಅದನ್ನು ಧ್ಯಾನಸ್ಥ ಸ್ಥಿತಿಯಿಂದ ಅಧ್ಯಯನ ಮಾಡಿ, ಮನನ ಮಾಡಿಕೊಂಡು ಜೀರ್ಣಿಸಿಕೊಂಡ ನಂತರ ಒಂದು ಅದ್ಭುತವಾದ ಹೊಳವು ಸಿಗುತ್ತದೆ ಎಂದು ಹೇಳಿದ್ದೆ.

ಅವರ ಕಥೆಗಳು ತುಂಬ ಗಹನವಾದ ವಿಷಯವನ್ನು ಅಡಗಿಸಿಕೊಂಡಿದ್ದು ಬಡಪಟ್ಟಿಗೆ ಸಿಗುವುದಿಲ್ಲ ಎಂದಿದ್ದೆ. ಅಷ್ಟೇ ಅಲ್ಲ, ಅವರ ಕಥೆಗಳು ಕೂಡ  ನನ್ನ ನೆಚ್ಚಿನ ಸಿನಿಮಾ ನಿರ್ದೇಶಕ ಉಪೇಂದ್ರ ಅವರ ಚಲನಚಿತ್ರಗಳಂತೆ ‘ಬುದ್ಧಿವಂತರಿಗೆ ಮಾತ್ರ’   ಎಂದೂ ಕೂಡ ಹೇಳಿದ್ದೆ.
ನವಲಕಲ್ ಅವರ ಕಥೆಗಳು ಕೇವಲ ನೆನಪಿನಲ್ಲಿ, ಹಳಹಳಿಕೆಯಲ್ಲಿ ತೊಳಲಾಡದೆ ವಾಸ್ತವದ ಸಂಗತಿಗಳನ್ನು, ಜಾಗತಿಕರಣದ ಸಮಸ್ಯೆಗಳನ್ನು ಎತ್ತಿ ಹಿಡಿದು ಓದುಗರನ್ನು ಕಾಡುತ್ತವೆ  ಎಂದೂ ಹೇಳಿದ್ದೆ. ಹುಟ್ಟಿದ ಊರಿನಲ್ಲಿ ಅಥವಾ ಸ್ಥಳೀಯ ನೆಲದಲ್ಲಿ  ಅವರ ಕತೆಗಳು ಹುಟ್ಟುವುದಿಲ್ಲ ಅವು ಬ್ಯಾಂಕಾಕಿನಲ್ಲಿ, ಥೈಲ್ಯಾಂಡಿನಲ್ಲಿ ಅಥವಾ ಸಾಬರಮತಿಯಲ್ಲಿ (ಪ್ರಸ್ತುತ ಕಥೆ) ಕಲ್ಕತ್ತಾದಲ್ಲಿ ಮೂಡುತ್ತವೆ. ಸಂಘರ್ಷಣೆ ಉಂಟುಮಾಡುತ್ತವೆ. ಆದರೆ ಸಮಸ್ಯೆ ಮಾತ್ರ ಈ ನೆಲದ್ದೇ ಆಗಿರುತ್ತದೆ, ಇಲ್ಲಿಯದೇ ತಾಕಲಾಟಗಳಾಗಿರುತ್ತವೆ, ಇಲ್ಲಿಯದೇ ತಲ್ಲಣಗಳಿರುತ್ತವೆ ಎಂದು ಹೇಳಿದ್ದೆ.

ಯಾವ ರೀತಿ ಗಾಳಿಪಟ ವಿಶಾಲವಾದ ಬಾನಿನಲ್ಲಿ ಮೂಲವನ್ನು ಬಿಟ್ಟು ಹಾರುವಂತೆ ತೋರುತ್ತದೆ ಆದರೆ ಅದರ ಸೂತ್ರ  ಮಾತ್ರ ಮೂಲದಲ್ಲೇ ಬಂಧಿಸಿಕೊಂಡಿರುತ್ತದೆ ಎಂಬ ಉದಾಹರಣೆ ನೀಡಿದ್ದೆ. ಈ ಕಥೆಯ ಬಗ್ಗೆ ನನ್ನಲ್ಲಿ ಪ್ರಶ್ನೆಗಳಿಲ್ಲ, ಕಥೆಯ ಪರವಾಗಿಯೇ ಮಾತನಾಡಬಯಸುತ್ತೇನೆ ಎಂದಿದ್ದೆ.

ಶ್ರೀ  ಶಂಕ್ರಯ್ಯ ಘಂಟಿ ಮತ್ತಿತರರು ತಂತ್ರ, ಸಂಭಾಷಣೆ, ಪಾತ್ರಗಳ ಬಗ್ಗೆ ಅಭಿಪ್ರಾಯ ಹೇಳಿದಾಗ ನಾನು “ಹೌದು, ಅದೆಲ್ಲ ಇದ್ದರೆ ಕಥೆಗೆ ಇನ್ನಷ್ಟು  ಪುಷ್ಟಿ ಸಿಗುತಿತ್ತು” ಎಂದು ಹೇಳಿದೆ. ಅಲ್ಲದೆ ಸೇತುರಾಂ ಅವರ ‘ನಾವಲ್ಲ’ ಕತೆ ತುಂಬ ಪುಟ್ಟ  ಕತೆಯಾಗಿದ್ದು ಯಾವ ಶೈಲಿ, ತಂತ್ರಕ್ಕೆ ಒಳಪಡದೆ ಏಕಾಂಕ ನಾಟಕದ ಸಂಭಾಷಣೆಯಂತೆ ಇದ್ದು ಅತ್ಯಂತ ತೀವ್ರ ಪರಿಣಾಮವನ್ನು ಬೀರಿದೆ. ಈ ರೀತಿಯ ಪ್ರಯೋಗಗಳು ಕಥೆಗಾರರು ಮಾಡುತ್ತಾರೆ ಎಂದೂ ಅಭಿಪ್ರಾಯ ಪಟ್ಟೆನಲ್ಲದೆ ಅಶ್ವಗಂಧದ ಕಥೆಯ ಈ ರೀತಿಯ ಪ್ರಯೋಗವನ್ನು ನಾನು ಒಪ್ಪಿಕೊಂಡಿದ್ದೇನೆ ಸಹ.

ಜ್ಯೋತಿ ಕುಲಕರ್ಣಿ ಅವರು “ಮಹಾಂತೇಶ್ ಬಹಳ ಅತೃಪ್ತ “ಎಂದು ಹೇಳಿದಾಗ ನಾನು “ಹೌದು, ಸಂದರ್ಭಗಳ ಬಗ್ಗೆ, ವ್ಯವಸ್ಥೆಯ ಬಗ್ಗೆ, ಸಮಾಧಾನವಿಲ್ಲದಾಗ, ನೆಮ್ಮದಿ ಇಲ್ಲದಾಗ ಅತೃಪ್ತರಾದಾಗಲೇ ಸಮಸ್ಯೆಗಳು ಎದ್ದು ಕಾಣುತ್ತವೆ. ಅವುಗಳ ಬಗ್ಗೆ ಚಿಂತನ ನಡೆಯುತ್ತದೆ. ಆ ಕಾಡುವಿಕೆಯೇ ಕಥೆಗಳಾಗುತ್ತವೆ  ಅಲ್ಲದೆ  ಅದನ್ನು ಅಭಿವ್ಯಕ್ತಿಸಿದಾಗ ಸಮಸ್ಯೆ ಆ ಕ್ಷಣಕ್ಕೆ ಬಗೆಹರಿಯದಿದ್ದರೂ ನಾವೂ ಸ್ವಲ್ಪಮಟ್ಟಿಗೆ  ಆ ತಲ್ಲಣದಿಂದ  ಮುಕ್ತರಾಗುತ್ತೇವೆ ಎಂದು ಹೇಳಿದ್ದೆ. ಅಂದಿನ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಪ್ರಭಾಕರ್ ನಿಂಬರ್ಗಿ ಅವರು ಕೂಡ ಇದನ್ನೇ ಹೇಳಿದ್ದರು.

ಈ ಕಾರ್ಯಕ್ರಮದ ಮುಗಿದ ತಕ್ಷಣವೇ  ನನಗನಿಸಿದ್ದು ಇಂಥ ಒಳ್ಳೆಯ ಕಥೆಯ ಬಗ್ಗೆ ಉತ್ತಮ ಚರ್ಚೆ, ಸಂವಾದ ಆಗದೇ ಇದ್ದದ್ದು ಸಮಯದ ಅಭಾವದಿಂದ. ಹಾಗಾಗಿ ಈ ಕಥೆಯ ಬಗ್ಗೆ ಒಂದು ಲೇಖನ ಬರೆಯಬೇಕು ಎಂದುಕೊಂಡಿದ್ದೆ .

ಆದರೆ ಅದೇಕೋ ಆ ಕಾರ್ಯಕ್ರಮದ ಬಗ್ಗೆ ಮಹಾಂತೇಶ್ ಅವರಿಗೆ ಮೊದಲಿಗೆ ಸ್ವಲ್ಪ  ಹಿಂಜರಿಕೆ ಇರುವುದರಿಂದ ಅವರಿಗೆ ಅಪಾರ್ಥವಾಗಿದೆಯೆಂದೆನಿಸುತ್ತಿದೆ.

ಮಹಾಂತೇಶ ಸರ್, ಅಂದಿನ ಕಾರ್ಯಕ್ರಮ  ಯಾವುದೇ ದುರುದ್ದೇಶದಿಂದ  ಆಯೋಜಿಸಿಲ್ಲ. ನೀವು ಈ  ಭಾಗದ ಹೆಮ್ಮೆಯ ಕತೆಗಾರ, ನಾಟಕಕಾರ. ನಿಮ್ಮ ಬುದ್ಧ ಗಂಟೆಯ ಸದ್ದು ನನಗೆ ತುಂಬ ವಯಕ್ತಿಕವಾಗಿ ಕಾಡುತ್ತಿರುತ್ತದೆ. ಭಾರತ ಭಾಗ್ಯವಿಧಾತ ಕತೆಯನ್ನು ನಮ್ಮ  ರಾಜ್ಯದ ಎಲ್ಲ ಮಂತ್ರಿಗಳ ಮುಂದೆ ಓದಬೇಕೆನಿಸುವುದು. ನಿಮ್ಮ ಕಥೆಗಳ ವಸ್ತುಗಳ ಹರಹು ದೊಡ್ಡದಾಗಿದ್ದು ಅದರ  ಕ್ಯಾನ್ವಾಸ್ ಬಹಳ ಬಣ್ಣಗಳಿಂದ ಕೂಡಿದೆ.

ಕೇಶವ ಮಳಗಿಯವರಂತೆ ಅವರ ಕಥಾವಸ್ತುಗಳು ದೇಶದ ಉದ್ದಗಲಕ್ಕೂ ಓಡಾಡುತ್ತ  ಹರಡಿಕೊಂಡಿರುತ್ತವೆ.  ನಮ್ಮ ಕಲಬುರಗಿಯ ಅಂದಿನ  ಕಾರ್ಯಕ್ರಮದ  ಸಂಘಟಕರು ತುಂಬ ಪ್ರೀತಿಯಿಂದ ತಮ್ಮನ್ನು ಕಾಣುವರಲ್ಲದೆ ಹೊರಗಿನವರನ್ನೇ ತುಂಬ ವಿಶ್ವಾಸದಿಂದ, ಪ್ರೀತಿಯಿಂದ ಮನದೊಳಗಿಟ್ಟುಕೊಂಡು ಗೌರವಿಸುವಾಗ ನಮ್ಮ ಕಲಬುರ್ಗಿ ಜನ ನಿಮ್ಮನ್ನು ಹೇಗೆ ಬಿಟ್ಟುಕೊಟ್ಟಾರು.

ನಿಮ್ಮಂತಹ ಸೂಕ್ಷ್ಮ, ಸಜ್ಜನ ಸಹೃದಯರ ಬಗ್ಗೆ ಯಾರಿಗೂ  ಯಾವ ರೀತಿಯಲ್ಲೂ ಭೇಧ, ದ್ವೇಷ, ಭಿನ್ನಾಭಿಪ್ರಾಯಗಳಿರಲು  ಸಾಧ್ಯವಿಲ್ಲ. ಅಂದು ಯಾರಲ್ಲೂ ನಿಮ್ಮ ಕಥೆಗಳ ಬಗ್ಗೆ ನಕಾರಾತ್ಮ ಭಾವವಿರಲಿಲ್ಲ.

ವಿಶ್ವನಾಥ ಮರತೂರ ಅವರೆ, ಅಂದಿನ ಕಾರ್ಯಕ್ರಮದ ವಿಷಯ ನೀವು  emedialine ಮೂಲಕ ಅನೇಕ ಪ್ರಶ್ನೆ , ಚರ್ಚೆ ಮಾಡಿದ್ದು ಅದಕ್ಕೆ ನಾನು ಸಣ್ಣ ಕತೆಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿದ್ದೆ. ನಮಗೆ ನಮ್ಮ ಮಿತಿಯ ಬಗ್ಗೆ ಅರಿವಿರಬೇಕು. ತಿಳಿದುಕೊಳ್ಳುವ ಉತ್ಸಾಹವೇನೋ ಸರಿ, ಆದರೆ ಪೂರ್ಣವಾಗಿ ಅರಿತುಕೊಳ್ಳದೆ ಅಪ್ರಸಂಗಿಕವಾಗಿ ವಾದಿಸುವುದು ಶೋಭೆಯಲ್ಲ.

ನೀವು ನಮ್ಮ ಭಾಗದ ಉತ್ಸಾಹಿ ಯುವಕರಾಗಿದ್ದು ನಮ್ಮ ಭಾಗದ  ಎಲ್ಲ ಕತೆಗಾರರ ರಾಜಪುರೋಹಿತ್, ಸಗರ ಕೃಷ್ಟಾಚಾರ್, ಶಾಂತರಸ, ಗೀತಾ ನಾಗಭೂಷಣ, ಸೂಗಯ್ಯಾ ಹಿರೇಮಠ, ಸರಿತಾ ಕುಸಮಾಕರ ದೇಸಾಯಿ ಮುಂತಾದವರ (ಡೋಣೂರು, ಡಾ. ಪೋತೆ, ನವಲ್ಕಲ್, ಸುಬ್ಬರಾವ್ ಕುಲಕರ್ಣಿ, ಜ್ಯೋತಿ ಕುಲಕರ್ಣಿ  ಅವರನ್ನೊಳಗೊಂಡಂತೆ) ಅವರ ಕತೆಗಳನ್ನೆಲ್ಲ ಓದಿಕೊಳ್ಳಿ.

ಚರ್ಚೆ, ಸಂವಾದ ಮಾಡುವುದು ತಪ್ಪಲ್ಲ, ಟೀಕೆ ಮಾಡುವುದು ತಪ್ಪು. ವಿಮರ್ಶೆಗೆ ಅಧ್ಯಯನ  ಬೇಕು. ನಿಮ್ಮ ಅಪಕ್ವ ತಿಳುವಳಿಕೆಯಿಂದ ಸಣ್ಣ ಕತೆಯ ಅಂದಿನ ಕಾರ್ಯಕ್ರಮದ  ಬಗ್ಗೆ ವಿನಾಕಾರಣ ಗೊಂದಲ , ಅನುಮಾನಗಳನ್ನು ಮೂಡಿಸಿದ್ದೀರಿ. ನಾನು ಸಹಾನುಭೂತಿಯಿಂದ ಎರಡನೆ ಬಾರಿ ಹೇಳುತ್ತಿರುವೆ. ಅನಾವಶ್ಯಕ ಚರ್ಚೆ ಇಲ್ಲಿಗೆ ಬಿಟ್ಟುಬಿಡಿ.

ಇಲ್ಲಿ ನಾನು ಮೇಲೆ ಪ್ರಸ್ತುತಪಡಿಸಿರುವ ಸಂಗತಿಗೆ ವಿಭಿನ್ನವಾಗಿ ಅಂದು ಸಭೆಯಲ್ಲಿ ನಾನು ಮಾತನಾಡಿದ್ದರೆ ಅದನ್ನು ಗಮನಿಸಿದವರು ಇಲ್ಲಿ ತಿಳಿಸಬಹುದು  ಎಂದು ನನ್ನ  ವಿನಂತಿ.

‍ಲೇಖಕರು avadhi

August 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: