ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮರೇಶ ನುಗಡೋಣಿ ಕಥಾ ಸಂಕಲನದ ಒಂದು ಕತೆಯ ಸುತ್ತ…

ಕೇಡಿನ ಬೇರುಗಳನ್ನು ಹುಡುಕುತ್ತ…

ಜಿ ಪಿ ಬಸವರಾಜು

ಬಾಲ್ಯದ ಆ ದಿನಗಳಲ್ಲಿ ನಾವು ಸುತ್ತಾಡದ ಜಾಗಗಳೇ ಇಲ್ಲವೇನೋ ಎನ್ನುವಂತಿತ್ತು. ಹೊಲ ಗದ್ದೆಗಳು, ಬಯಲು ಸೀಮೆಯ ಕುರುಚಲು ಕಾಡುಗಳು, ಮಾವಿನ ತೋಪುಗಳು, ಕೆರೆ ಕಾಲುವೆಗಳು, ಬಟಾ ಬಯಲುಗಳು. ಯಾರು ಯಾರದೋ ಹೊಲಗಳು; ಅಲ್ಲಿ ಬೆಳೆದು ನಿಂತ ಫಸಲು. ನಾವು ಹುಡುಕುತ್ತಿದ್ದುದು ತಿನ್ನುವ ಪದಾರ್ಥಗಳಿಗಾಗಿ. ಎಂಥದೋ ಹಣ್ಣು, ಎಂಥದೋ ಕಾಯಿ. ವಿಷದ ಕಾಯಿಗಳೂ ಇರುತ್ತಿದ್ದವು. ಅವುಗಳನ್ನು ತಿಂದರೆ ಸತ್ತು ಹೋಗುತ್ತಾರೆಂದೂ ಹೇಳುತ್ತಿದ್ದರು. ಅದು ವಿಷವೊ, ಅಮೃತವೊ, ನಮಗೆ ಹೇಗೆ ತಿಳಿಯಬೇಕು. ಎಲ್ಲವನ್ನೂ ಪರೀಕ್ಷಿಸಲು ನಮಗೆ ನಮ್ಮ ನಾಲಗೆಗಳೇ ಪ್ರಮಾಣ. ನಾಲಗೆ ತಿರಸ್ಕರಿಸಿದ್ದನ್ನು ನಾವು ತಿನ್ನುತ್ತಿರಲಿಲ್ಲ.
ಈಗ ಹಿಂತಿರುಗಿ ನೋಡುವಾಗ ಸೋಜಿಗವಾಗುತ್ತದೆ. ವಿಷದ ಕಾಯಿಗಳೂ ನಮ್ಮ ಮಣ್ಣಿನಲ್ಲಿ ಬೆಳೆಯುತ್ತಿದ್ದವು. ಭೂಮಿ ಯಾವುದನ್ನೂ ನಿರಾಕರಿಸುವುದಿಲ್ಲ. ತನ್ನ ಒಡಲಿಗೆ ಬಿದ್ದ ಎಲ್ಲ ಬೀಜಗಳನ್ನೂ ಅದು ಪೊರೆಯುತ್ತದೆ. ಬೀಜ ಮೊಳೆಯಬೇಕು; ಬೇರಿಳಿಸಬೇಕು; ಎಲೆ ಹೂವು ಕಚ್ಚಿ ಅದು ಕಾಯಿ ಹಣ್ಣಾಗಿ ಫಲಿಸಬೇಕು. ಆ ಹಣ್ಣಿನೊಳಗೆ ಮತ್ತೆ ಬೀಜಗಳು. ಅವು ವಿಷದ ಸಂತಾನವೇ. ಆದರೂ ಭೂಮಿ ಎಲ್ಲವನ್ನೂ ಪೊರೆಯುತ್ತದೆ. ಅದಕ್ಕೆ ಅಮೃತವೂ, ವಿಷವೂ ಒಂದೇ. ಪೊರೆಯುವುದು ಅದರ ಗುಣ.
ಒಳಿತು, ಕೆಡುಕು ಎಲ್ಲವೂ ಭೂಮಿಯ ಒಡಲಲ್ಲಿವೆ. ಪ್ರಕೃತಿಯಲ್ಲಿಯೇ ಹಾಗಿದೆ. ಅದು ಕೇಡನ್ನೂ ಬಲ್ಲದು; ಒಳಿತನ್ನೋ ತಿಳಿದಿದೆ. ಪ್ರಾಣಿಗಳೂ ಹಾಗೆಯೇ; ಎರಡನ್ನೋ ತಮ್ಮೊಳಗೆ ಅಡಗಿಸಿಕೊಂಡಿವೆ. ಮನುಷ್ಯ ಮಾತ್ರ ತನ್ನ ಅರಿವಿನ ಕಾರಣದಿಂದಾಗಿ ಇವೆರಡನ್ನು ಪ್ರತ್ಯೇಕಿಸಿ ನೋಡಬಲ್ಲ. ಕೇಡನ್ನು ದೂರವಿರಿಸುತ್ತ, ತನ್ನನ್ನು ತಾನು ಕಾಪಾಡಿಕೊಳ್ಳಬಲ್ಲ. ಹಾಗೆಂದು ಭಾವಿಸುವಾಗಲೇ, ಕೇಡಿನ ಕೈ ಮೇಲಾಗಿ ಅವನನ್ನೇ ನುಂಗಿಹಾಕುವುದನ್ನೂ ನಾವು ಕಾಣುತ್ತೇವೆ.
ಕೇಡಿನ ಅರಿವು ಒಂದು ಸಮಾಜಕ್ಕೆ ಇಲ್ಲದೆ ಹೋದರೆ ಅದು ಸರ್ವನಾಶ ಹೊಂದಬಲ್ಲದು. ಕೇಡಿನ ಕೈ ಮೇಲಾದ ಸಮಾಜದಲ್ಲಿ ಯಾರಿಗೂ ರಕ್ಷಣೆ ಎಂಬುದು ಇರುವುದಿಲ್ಲ. ಮೌಲ್ಯ, ನೀತಿ ಗಾಳಿಗೆ ತೂರಿ ಹೋಗಿರುತ್ತವೆ. ಕಲೆ ಮತ್ತು ಸಾಹಿತ್ಯಗಳು ಮನುಷ್ಯನಲ್ಲಿರುವ ಈ ಅರಿವು ಮರೆಯಾಗದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಲೇ ಇರುತ್ತವೆ. ಒಳಿತು-ಕೆಡುಕುಗಳ ಅರಿವಿಲ್ಲದೆ ಹೋದ ಮನುಷ್ಯ ಕಾಡುಪ್ರಾಣಿಯಂತೆಯೇ ವರ್ತಿಸುತ್ತಾನೆ. ಮನುಷ್ಯನ ಒಳ ಎಚ್ಚರವನ್ನು ಕಾಯುತ್ತ, ಅವನನ್ನು ಮನುಷ್ಯನನ್ನಾಗಿ ಮಾಡುವುದರ ಕಡೆಗೆ ಸಾಹಿತ್ಯ ಮತ್ತು ಕಲೆಗಳು ತುಡಿಯುತ್ತಲೇ ಇರುತ್ತವೆ. ಈ ತುಡಿತವನ್ನು ತಿಳಿಯುವ ಓದುಗ, ನೋಡುಗ ತನ್ನ ಒಳ ಅರಿವನ್ನು ಎಚ್ಚರದ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳಲು ನೋಡುತ್ತಾನೆ. ಈ ಕಾರಣಕ್ಕಾಗಿ ಪ್ರತಿಯೊಂದು ಸಮಾಜಕ್ಕೂ ಸಾಹಿತ್ಯ, ಕಲೆಗಳು ಮುಖ್ಯವಾಗುತ್ತವೆ. ಅವುಗಳನ್ನು ತಿರಸ್ಕರಿಸಿದ ಸಮಾಜ ಸರಿಯಾದ ದಿಕ್ಕಿನಲ್ಲಿ ನಡೆಯುವುದು ಸಾಧ್ಯವಿಲ್ಲದ ಮಾತಾಗುತ್ತದೆ.
ಸಾಹಿತ್ಯ, ಕಲೆಗಳಲ್ಲಿ ಕೆಡುಕನ್ನು ಕಾಣಿಸುವುದು ಸುಲಭದ ಕೆಲಸವಲ್ಲ. ಕಲೆ, ಸಾಹಿತ್ಯದ ದೇಹದೊಳಗೇ ಅದು ಜೀವದಂತೆ ಬಂದು ಸೇರಿಕೊಳ್ಳಬೇಕು. ಇಲ್ಲವಾದರೆ ಕಲೆ ಅಥವಾ ಸಾಹಿತ್ಯ ಕೆಡುಕಿನ ಬಗೆಗಿನ ಪ್ರವಚನವಾಗಿ ಜನ ಅವುಗಳ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡುಬಿಡುತ್ತಾರೆ.
ಇತ್ತೀಚೆಗೆ ನಾನು ಓದಿದ ಒಂದು ಕತೆಯನ್ನು ಇಲ್ಲ್ಲಿ ಪ್ರಸ್ತಾಪಿಸಬೇಕು. ಈ ಕಥೆ ಎಷ್ಟೊಂದು ಅದ್ಭುತ ರೀತಿಯಲ್ಲಿ ಕೇಡಿನ ಇರುವಿಕೆಯನ್ನು ಕಾಣಿಸುತ್ತದೆ! ಕೇಡು ಎಂಬುದು ತಾನೇತಾನಾಗಿ ಎಲ್ಲಿಯೋ ಇರುವುದಿಲ್ಲ. ಹುಟ್ಟಿನ ಜೊತೆ ಸಾವು ಇರುವಂತೆ, ಒಳಿತಿನ ಜೊತೆ ಕೇಡೂ ಇರುತ್ತದೆ. ಆದರೆ ನಾವು ಕೇಡನ್ನು ಕಾಣುವ ಗೋಜಿಗೇ ಹೋಗುವುದಿಲ್ಲ. ಅಥವಾ ಅದನ್ನು ತಿಳಿಯುವ ಪ್ರಯತ್ನ ಮಾಡಿದಾಗೆಲ್ಲ ಅದು ಬೇರೆ ಎಲ್ಲಿಯೋ ಇರುತ್ತದೆ ಎಂಬ ಕಲ್ಪನೆಯಲ್ಲಿಯೇ ಇರುತ್ತೇವೆ.

ಈಗಾಗಲೇ ಪ್ರಸಿದ್ಧ ಕತೆಗಾರರಾಗಿರುವ ಅಮರೇಶ ನುಗಡೋಣಿ ಅವರ ಹೊಸ ಕಥಾ ಸಂಕಲನ ‘ಒಡಲ ಹಂಗು’ವಿನಲ್ಲಿ ನಾನು ಪ್ರಸ್ತಾಪಿಸುತ್ತಿರುವ ಈ ಕತೆ ಇದೆ. ಇದರ ಹೆಸರೇ: ‘ಬೆಳಕೂ ಅದೆ, ಕತ್ತಲೆಯೂ ಅದೆ.’ ಹೌದು ಬೆಳಕೂ ಅದೇ, ಕತ್ತಲೆಯೂ ಅದೇ. ಈ ಕತೆಯ ನಾಯಕ ಎಂಥ ಮುಗ್ಧ; ಎಂಥ ಒರಟ; ಅಪ್ಪಟ ಹಳ್ಳಿಯ ಮನುಷ್ಯ. ಹಳ್ಳಿಯ ಆಸಾಮಿ ಎಂದಕೂಡಲೇ ನಮ್ಮ ಕಲ್ಪನೆ ಹೇಗೆ ಹರಡಿಕೊಳ್ಳುತ್ತದೆ ನೋಡಿ: ಅವನು ಒಳ್ಳೆಯವನು, ಯಾರಿಗೂ ಕೇಡು ಬಗೆಯಲಾರದವನು; ಕೇಡಿನ ಕಲ್ಪನೆಯೂ ಅವನಿಗೆ ಬರುವುದಿಲ್ಲ.
ಇದೆಲ್ಲವೂ ನಿಜ ಎನ್ನುವಂತೆ ಈ ಕತೆ, ಈ ನಾಯಕನನ್ನು ಇಂಥ ನೆಲೆಯಲ್ಲಿಯೇ ಚಿತ್ರಿಸುತ್ತಾ ಹೋಗುತ್ತದೆ. ಹಳ್ಳಿಯಲ್ಲಿ ಸಾಕಷ್ಟು ಭೂಮಿ ಇರುವ, ಆಸ್ತಿ ಇರುವ ಇವನ ಗತ್ತು, ಬದುಕಿನ ಶೈಲಿ, ಜೊತೆಗೆ ನಯಗಾರಿಕೆಯನ್ನು ಅರಿಯದ ಸೀದಾಸಾದಾ ನಡವಳಿಕೆ ಇತ್ಯಾದಿ. ಇವನಿಗೊಬ್ಬಳು ಹೆಂಡತಿ ಸಿಗುತ್ತಾಳೆ. ಇವಳು ಥೇಟ್ ಮಾಡ್ರ್ರನ್; ಜೊತೆಗೆ ಬಿಂದಾಸ್. ಯಾರಿಗೂ, ಯಾವುದಕ್ಕೂ ಸೊಪ್ಪು ಹಾಕದ ಹುಡುಗಿ; ಮುಕ್ತವಾಗಿ ಬದುಕಬೇಕೆಂಬ ಹಂಬಲದ ಹುಡುಗಿ; ಯಾವ ಚೌಕಟ್ಟಿಗೂ ಸಿಕ್ಕದ ವ್ಯಕ್ತಿತ್ವದವಳು. ಇಷ್ಟು ಹೇಳಿದರೆ ಸಾಕು, ಇವಳ ಇಡೀ ಪಾತ್ರವನ್ನು ಓದುಗರು ಕಣ್ಮುಂದೆ ತಂದುಕೊಳ್ಳಬಲ್ಲರು.
ಈ ದಂಪತಿಗೆ ಮಕ್ಕಳಾಗುವುದಿಲ್ಲ. ನಾಯಕ ಮಕ್ಕಳು ಬೇಕೆಂದ. ಯಾಕೆ ಎಂದು ಹೆಂಡತಿ ಕೇಳುತ್ತಾಳೆ. ‘ಯಾಕಂದ್ರ.. ನನ್ನ ಆಸ್ತಿ ಯಾರಿಗೆ?’ ‘ನನ್ಗೆ ಆಸ್ತಿ, ಅಂತಸ್ತು ಇಲ್ಲ’ ಎನ್ನುತ್ತಾಳೆ ಆಕೆ. ‘ಆಸ್ತಿಗೆ ಮಕ್ಕಳು ಬೇಕು, ಇನ್ನೊಂದು ಮದುವೆ ಮಾಡಿಕೊ, ನಾನು ಬರೆದು ಕೊಡುತ್ತೇನೆ’ ಎನ್ನುತ್ತಾಳೆ ಆಕೆ. ಅದಕ್ಕೆ ಅವನು ಒಪ್ಪುವುದಿಲ್ಲ. ಡಾಕ್ಟರ್ ಬಳಿ ತಪಾಸಣೆಯ ಪ್ರಶ್ನೆ ಬರುತ್ತದೆ. ಅವಳು ಒಪ್ಪುವುದಿಲ್ಲ. ಅವಳು ಕೊಡುವ ಕಾರಣ: ದೋಷ ಯಾರಲ್ಲಿದ್ದರೂ ಅವರು ಕುಗ್ಗಿ ಹೋಗುತ್ತಾರೆ.
ಕೊನೆಗೂ ದೋಷ ಅವನಲ್ಲಿರುವುದು ತಿಳಿಯುತ್ತದೆ. ಅವನು ಕುಗ್ಗದಂತೆ ಅವಳು ನೋಡಿಕೊಳ್ಳುತ್ತಾಳೆ. ಮಕ್ಕಳಾಗುವುದಕ್ಕೆ ಚಿಕಿತ್ಸೆಯೂ ನಡೆಯುತ್ತದೆ. ಆದರೂ ಮಕ್ಕಳಾಗುವುದಿಲ್ಲ.
ಈ ಕತೆ ನಿಧಾನಕ್ಕೆ ಸಾಗುತ್ತದೆ. ವಿವರಗಳು ಉದ್ದವಾದವೇನೋ ಎಂದೂ ಅನಿಸುವಷ್ಟು ಕತೆ ಲಂಬಿಸುತ್ತದೆ. ಆದರೆ ಈ ಕತೆಯ ಕೊನೆ ಝಗ್ಗನೆ ಬೆಳಗುತ್ತದೆ. ಈ ಬೆಳಕು ಹಿಂದಿನ ಎಲ್ಲ ವಿವರಗಳ ಮೇಲೆ ಬಿದ್ದು ಇಡೀ ಕತೆ ಹೊಸ ಅರ್ಥವಿನ್ಯಾಸವನ್ನು ಪಡೆದುಕೊಳ್ಳುತ್ತದೆ.
ಈ ನಾಯಕ ಕೊನೆಯ ಪ್ರಯತ್ನವಾಗಿ ತನ್ನ ಹಳ್ಳಿಯ ಖಾಜಿಯ ಬಳಿಗೆ ಹೋಗುತ್ತಾನೆ. ಈ ಖಾಜಿ ಸಂತಾನ ಬಳ್ಳಿಗಾಗಿ ಎಲ್ಲೆಲ್ಲಿಯೋ ಅಲೆದು ಕೊನೆಗೂ ಅದನ್ನು ಪತ್ತೆಹಚ್ಚಿ ಔಷಧಿ ತಯಾರಿಸಿ, ತನ್ನ ದಣಿಗೆ ಕುಡಿಸುತ್ತಾನೆ. ಆದರೂ ನಾಯಕನಿಗೆ ಮಕ್ಕಳಾಗುವುದಿಲ್ಲ. ಈ ಮಧ್ಯೆ ಕಾಲ ಉರುಳುತ್ತದೆ. ಸಂಬಂಧಗಳಲ್ಲಿ ಏರುಪೇರಾಗುತ್ತದೆ. ನಾಯಕಿ ‘ಅಡ್ಡದಾರಿಯಿಂದ ಫಲ ಪಡೀಬೇಕಂತ ಮಾಡ್ಯಾಳ’ ಎಂಬ ಸುದ್ದಿ ನಾಯಕನಿಗೆ ಬಂದಿದೆ; ಅದು ಅವನಲ್ಲಿ ಅನುಮಾನದ ಬೀಜವನ್ನು ಬಿತ್ತಿ ಅದು ಸಮೃದ್ಧವಾಗಿ ಬೆಳೆದಿದೆ. ಇದರ ಫಲವಾಗಿಯೇ ಅವನು ಮತ್ತೊಮ್ಮೆ ತನ್ನ ಹಳ್ಳಿಯ ಖಾಜಿಯ ಬಳಿಗೆ ಬಂದಿದ್ದಾನೆ. ಈ ಬಾರಿ ಅವನ ಬೇಡಿಕೆ ಸಂತಾನ ಫಲಕ್ಕಾಗಿ ಅಲ್ಲ. ಸಂತಾನಫಲಕ್ಕೆ ಔಷಧಿ ಇರುವುದಾದರೆ, ಅದರ ನಾಶಕ್ಕೂ ಔಷಧಿ ಇರಲೇ ಬೇಕಲ್ಲ ಎಂಬುದು ನಾಯಕನ ತರ್ಕ. ಸಂತಾನ ಎಂದೂ ಸಾಧ್ಯವಾಗದ ಔಷಧಿಯನ್ನು ತನ್ನ ಹೆಂಡತಿಗೆ ಕೊಡಿಸಬೇಕು ಎಂಬುದು ಅವನ ಒಳ ಹುನ್ನಾರ. ಇದು ಸಂತಾನದ ಫಲ ಎಂದು ನಂಬಿಸಿ ಸಂತಾನ ನಾಶದ ಔಷಧಿಯನ್ನು ಕುಡಿಸು ಎಂದು ಖಾಜಿಯನ್ನು ಕೋರುತ್ತಾನೆ. ಈ ಕೇಡನ್ನು ಅರ್ಥಮಾಡಿಕೊಂಡ ಖಾಜಿ ಪಟ್ಟಂತ ಎದ್ದು, ‘ಮಾಫ್ ಕರೋ ಅಲ್ಲಾ! ಮಾಫ್ ಕರೋ ದಣಿ’ ಎಂದವನೇ ತೆನೆತುಂಬಿದ ಪಯಿರಿನ ನಡುವೆ ಗಾಳಿಯಂತೆ ಹರಿದು ಹೋದ.
ಈ ಕೇಡು ಎಲ್ಲಿತ್ತು ಎಂಬುದನ್ನು ಹುಡುಕಬೇಕಾಗಿಲ್ಲ.
ಈಗ ಎಲ್ಲಿದೆ? ಎಂದು ಹುಡುಕುತ್ತ ಹೋದರೆ ನಮ್ಮ ಸುತ್ತಲೇ ಬೀಡುಬಿಟ್ಟಿದೆ. ಕೆಪಿಎಸ್ಸಿ ಹಗರಣದ ಭ್ರಷ್ಟಾಚಾರದಲ್ಲಿಯೇ, ಅಥವಾ ಅದನ್ನು ಬೆಂಬಲಿಸುವ ರಾಜಕಾರಣದಲ್ಲಿಯೇ; ಅಥವಾ ತನ್ನ ಒಡಲಲ್ಲೇ ಅದನ್ನೆಲ್ಲ ಇಟ್ಟುಕೊಂಡು ಕೆಲವರತ್ತ ಮಾತ್ರ ಬೆರಳು ತೋರಿಸುವ ನಮ್ಮೆಲ್ಲರಲ್ಲಿಯೇ? ನಮ್ಮೆಲ್ಲರ ಒಳ್ಳೆಯತನದ ಜೊತೆಜೊತೆಯಲ್ಲಿಯೇ ಈ ಕೇಡಿನ ಬೇರುಗಳು ಹೆಣೆದುಕೊಂಡಿವೆಯೇ?
ಈ ಕತೆ ಅದನ್ನು ತೋರಿಸುತ್ತದೆ-ಸೂಕ್ಷ್ಮವಾಗಿ, ಕಲಾತ್ಮಕವಾಗಿ.
ಈ ಕೇಡು ಎಲ್ಲ ಕಾಲಕ್ಕೂ ಎಲ್ಲ ವ್ಯಕ್ತಿಗಳಿಗೂ, ಸಮಾಜಗಳಿಗೂ ದೊಡ್ಡ ಸವಾಲು. ಇದರೊಂದಿಗೆ ಸೆಣಸುತ್ತ, ಸೋಲುತ್ತ, ಗೆಲುವಿಗಾಗಿ ಹಂಬಲಿಸುತ್ತ, ಆಗೊಮ್ಮೆ ಈಗೊಮ್ಮೆ ಗೆಲ್ಲುತ್ತ ಸಾಗುವುದೇ ಜೀವನ. ಕೇಡನ್ನು ಕಂಡೊಡನೆ, ‘ಮಾಫ್ ಕರೋ ಅಲ್ಲಾ!’ ಎಂದು ಗಾಳಿಯಂತೆ ಹೋಗಿಬಿಡಬಲ್ಲ ಖಾಜಿ ಎಲ್ಲ ಸಮಾಜದಲ್ಲೂ ಇರುತ್ತಾನೆ. ಖಾಜಿ ವ್ಯಕ್ತಿಯಾಗಿಯೇ ಇರಬೇಕೆಂದೇನಿಲ್ಲ; ಮೌಲ್ಯಕ್ಕೊಂದು ರೂಪಕವಾಗಿಯೂ ಅವನಿರಬಹುದು. ಈ ನಂಬಿಕೆಯೇ ನಮ್ಮನ್ನು ಮುನ್ನಡೆಸಬೇಕು.
ಸೌಜನ್ಯ : ಸಂಯುಕ್ತ ಕರ್ನಾಟಕ

‍ಲೇಖಕರು G

25 August, 2014

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Anil Talikoti

    ತುಂಬ ಆಪ್ತವಾದ ಬರಹ -ಒಂದು ಕಥೆಯನ್ನು ಹೇಗೆ ಬಗೆಯಬೇಕು, ಅರ್ಥೈಸಿಕೊಳ್ಳಬೇಕು ಎನ್ನುವದಕ್ಕೆ ಮಾದರಿಯಾದ ಬರಹ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading