ಮೂಲ – ರಾಜೇಶ್ ಜೋಷಿ (ಹಿಂದಿ)

ಸಮಕಾಲೀನ ಹಿಂದಿ ಸಾಹಿತ್ಯದ ಒಬ್ಬ ಮಹತ್ವಪೂರ್ಣ ಕವಿಯಾದ ರಾಜೇಶ್ ಜೋಷಿಯವರು, 1946 ಇಸವಿಯ ಜುಲೈ 18-ರಂದು ಮಧ್ಯಪ್ರದೇಶದ ನರಸಿಂಹಗಢದಲ್ಲಿ ಜನಿಸಿದರು. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಕೆಲ ಸಮಯ ಪತ್ರಕರ್ತರಾಗಿ ಮತ್ತು ನಂತರ ಕೆಲವು ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡಿದರು. ಅವರು ವಾತಾಯಾನ್, ಲಹರ್, ಪಹಲ್, ಧರ್ಮಯುಗ್, ಸಪ್ತಾಹಿಕ್ ಹಿಂದೂಸ್ತಾನ್, ಸಾರಿಕಾ, ಇತ್ಯಾದಿ ಪತ್ರಿಕೆಗಳಿಗೆ ಸ್ವತಂತ್ರ ಬರಹಗಾರರಾಗಿ ತಮ್ಮ ಸಾಹಿತ್ಯಿಕ ಜೀವನವನ್ನು ಪ್ರಾರಂಭಿಸಿದರು ಹಾಗೂ ನಂತರ ನಯಾ ವಿಕಲ್ಪ್, ನಯಾ ಪಥ್ ಮತ್ತು ವರ್ತಮಾನ್ ಸಾಹಿತ್ಯ್ ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದರು.
ರಾಜೇಶ್ ಜೋಷಿಯವರ ಕವಿತೆಗಳು ಆಳವಾದ ಸಾಮಾಜಿಕ ಅರ್ಥವನ್ನು ಹೊಂದಿವೆ. ಜೀವನದ ಬಿಕ್ಕಟ್ಟಿನ ನಡುವೆಯೂ ಅವು ಆಳವಾದ ನಂಬಿಕೆಯನ್ನು ಹುಟ್ಟುಹಾಕುತ್ತವೆ. ಅವರ ಕವಿತೆಗಳು ಅನ್ಯೋನ್ಯತೆ ಮತ್ತು ಲಯದಿಂದ ತುಂಬಿದೆ, ಜೊತೆಗೆ ಮಾನವೀಯತೆಯನ್ನು ಕಾಪಾಡುವ ನಿರಂತರ ಹೋರಾಟದಿಂದ ಕೂಡಿದೆ. ರಾಜೇಶ್ ಜೋಷಿಯವರಿಗೆ ವಿಶ್ವ ವಿನಾಶದ ಬೆದರಿಕೆ ಹೆಚ್ಚು ಕಾಣಿಸಿಕೊಂಡಂತೆ, ಜೀವನದ ಸಾಧ್ಯತೆಗಳನ್ನು ಅನ್ವೇಷಿಸಲು ಅವರು ಹೆಚ್ಚು ಹತಾಶರಾಗಿ ಕಾಣುತ್ತಾರೆ.
ಅವರ ರಾಜಕೀಯ ಕವಿತೆಗಳು ಸೂಕ್ಷ್ಮತೆ ಮತ್ತು ಪರಿಷ್ಕರಣೆಯನ್ನು ಉದಾಹರಿಸುತ್ತವೆ. ಈ ಕವಿತೆಗಳು ಸಮಯ, ಸ್ಥಳ ಮತ್ತು ಚಲನೆಗಳ ಅಸ್ಪರ್ಶ ಉಲ್ಲೇಖಗಳಿಂದ ತುಂಬಿವೆ ಹಾಗೂ ಈ ಕವಿತೆಗಳಲ್ಲಿ ಸಮಯದ ಪ್ರಜ್ಞೆ ಆಳವಾಗಿ ಮತ್ತು ಆತ್ಮೀಯವಾಗಿದೆ; ತಮ್ಮ ಮಾನವೀಯತೆಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತವೆ. ಸಾಮಾಜಿಕ ವಾಸ್ತವವು ಅವರ ಕವಿತೆಗಳಲ್ಲಿ ಆಳವಾಗಿ ಹುದುಗಿದೆ. ಜೀವನದ ಬಿಕ್ಕಟ್ಟುಗಳ ನಡುವೆಯೂ ಅವರು ಆಳವಾದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಬಾಲ್ಯದ ನೆನಪುಗಳು, ಸನ್ನಿವೇಶಗಳು ಮತ್ತು ಪ್ರಸಂಗಗಳಿಂದ ಅವರ ಕವಿತೆಗಳು ಸಮೃದ್ಧವಾಗಿವೆ. ಸ್ಥಳೀಯತೆ ಅವರ ಕಾವ್ಯದ ಮಹತ್ವದ ಅಂಶವಾಗಿದ್ದು, ಅವರ ಕವಿತೆಗಳು ನಮ್ಮನ್ನು ಸ್ಥಳೀಯ ಉಪಭಾಷೆಗಳು, ಮನಸ್ಥಿತಿಗಳು ಮತ್ತು ವಾತಾವರಣಗಳೊಂದಿಗೆ ಪರಿಚಯಿಸುತ್ತವೆ.
ಅವರು ಈಗ ತಮ್ಮ ಬದ್ಧತೆಯನ್ನು ಮೊಂಡುತನವಾಗಿ ಮುನ್ನೆಲೆಗೆ ತಂದಿದ್ದಾರೆ. ಅವರೇ ಹೇಳಿದಂತೆ, “…ಈ ಕಾಲದ ವಿರೋಧಾಭಾಸಗಳು ಮತ್ತು ವಿಡಂಬನೆಗಳನ್ನು ವ್ಯಕ್ತಪಡಿಸಲು ಮತ್ತು ಪ್ರತಿರೋಧದ ಹೊಸ ಸಾಧನಗಳನ್ನು ಹುಡುಕಲು ಇರುವ ಚಡಪಡಿಕೆ ನನ್ನ ಸಮಗ್ರ ಕಾವ್ಯದ ಕೇಂದ್ರ ಕಾಳಜಿಯಾಗಿದೆ! ಇದರಲ್ಲಿ ಆಗಾಗ್ಗೆ ನಿರಾಶೆಯೂ ಉಂಟಾಗುತ್ತದೆ ಮತ್ತು ಕೆಲವೊಮ್ಮೂ ದುಃಖವೂ ಸಹ, ಆದರೆ ಸಾಮಾನ್ಯ ಜನರು ಹೊಂದಿರುವ ಅತಿ ದೊಡ್ಡ ಹಾಗೂ ಅತ್ಯಂತ ಪ್ರಬಲವಾದ ಶಕ್ತಿಯನ್ನು ಅಥವಾ ಅತಿ ದೊಡ್ಡ ವೈಫಲ್ಯವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ, ಅದೇ ಅವರ ಮೊಂಡುತನ.”
ಏಕ್ ದಿನ ಬೋಲೇಂಗೆ ಪೇಡ್ (ಒಂದು ದಿನ ಮರಗಳು ಮಾತನಾಡುತ್ತವೆ), ಮಿಟ್ಟಿ ಕಾ ಚೆಹ್ರಾ (ಮಣ್ಣಿನ ಮುಖ), ನೇಪಥ್ಯ ಮೇಂ ಹಂಸಿ (ನೇಪಥ್ಯದಲ್ಲಿ ನಗೆ), ದೋ ಪಂಕ್ತಿಯೋಂ ಕೆ ಬೀಚ್ (ಎರಡು ಸಾಲುಗಳ ಮಧ್ಯೆ), ಮತ್ತು ಜಿದ್” (ಹಠ) ಇವರ ಕವನ ಸಂಕಲನಗಳು ಹಾಗೂ ಗೇಂದ್ ನಿರಾಲೀ ಮಿಟ್ಠೂ ಕಿ (ಮಿಟ್ಠೂವಿನ ವಿಶಿಷ್ಟ ಚೆಂಡು) ಇವರು ರಚಿಸಿದ ಮಕ್ಕಳ ಕವಿತೆಗಳ ಸಂಕಲನ. ಸೋಮವಾರ್ ಔರ್ ಅನ್ಯ್ ಕಹಾನಿಯಾಂ (ಸೋಮವಾರ ಮತ್ತು ಇತರ ಕಥೆಗಳು) ಮತ್ತು ಕಪಿಲ್ ಕಾ ಪೇಡ್ (ಕಪಿಲನ ಮರ) ಜೋಷಿಯವರು ಪ್ರಕಟಿಸಿದ ಎರಡು ಕಥಾ ಸಂಕಲನಗಳು. ಜಾದು ಜಂಗಲ್, ಅಚ್ಛೇ ಆದ್ಮಿ, ಕಹತ ಕಬೀರ್, ಟಂಕರಾ ಕಾ ಗಾನಾ, ಮತ್ತು ತುಕ್ಕೆ ಪರ್ ತುಕ್ಕಾ ಇವರು ರಚಿಸಿದ ನಾಟಕಗಳಾಗಿವೆ. ಏಕ್ ಕವಿ ಕೀ ನೋಟ್ಬುಕ್ ಮತ್ತು ಏಕ್ ಕವಿ ಕೀ ದೂಸರೀ ನೋಟ್ಬುಕ್ ಎಂಬ ಎರಡು ವಿಮರ್ಶಾತ್ಮಕ ಟಿಪ್ಪಣಿಗಳ ಸಂಗ್ರಹಗಳನ್ನು ಸಹ ಪ್ರಕಟಿಸಿದ್ದಾರೆ. ಇದಲ್ಲದೆ, ಅವರು ಭೂಮಿ ಕಿ ಕಲ್ಪತರು ಯಹ ಭೀ ಎಂಬ ಶೀರ್ಷಿಕೆಯ ಭರ್ತೃಹರಿಯ ಕವಿತೆಗಳ ರೂಪಾಂತರವನ್ನು ಮತ್ತು ಪತ್ಲೂನ್ ಪಹಿನಾ ಬಾದಲ್ ಎಂಬ ಶೀರ್ಷಿಕೆಯ ರಶಿಯಾದ ಕವಿ ಮಾಯಕೋವ್ಸ್ಕಿಯವರ ಕವಿತೆಗಳ ಅನುವಾದಿತ ಸಂಕಲನವನ್ನೂ ಪ್ರಕಟಿಸಿದ್ದಾರೆ. ಅವರು ಹಲವಾರು ಕಿರುಚಿತ್ರಗಳಿಗೆ ಚಿತ್ರಕಥೆಗಳನ್ನು ಸಹ ಬರೆದಿದ್ದಾರೆ.
ದೋ ಪಂಕ್ತಿಯೋಂ ಕೆ ಬೀಚ್ ಕವನ ಸಂಕಲನಕ್ಕಾಗಿ ಅವರಿಗೆ 2002-ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಯಿತು, ಜತೆಗೆ ಮುಕ್ತಿಬೋಧ್ ಪುರಸ್ಕಾರ್, ಮಾಖನ್ ಲಾಲ್ ಚತುರ್ವೇದಿ ಪುರಸ್ಕಾರ್, ಶ್ರೀಕಾಂತ್ ವರ್ಮಾ ಸ್ಮೃತಿ ಸಮ್ಮಾನ್, ಮಧ್ಯಪ್ರದೇಶ ಸರ್ಕಾರದ ಶಿಖರ್ ಸಮ್ಮಾನ್ ಮತ್ತು ಇತರ ಸಾಹಿತ್ಯ ಪ್ರಶಸ್ತಿಗಳಿಂದಲೂ ಸನ್ಮಾನಿತರಾಗಿದ್ದಾರೆ.
—-
ಕನ್ನಡಕ್ಕೆ : ಎಸ್. ಜಯಶ್ರೀನಿವಾಸ ರಾವ್
ಎಸ್. ಜಯಶ್ರೀನಿವಾಸ ರಾವ್ ಅವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ ಪದ್ಯಗಳನ್ನು ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ವಿರಚಿತ ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು ಹಾಗೂ ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನಕ್ಕಾಗಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.
ಕೇರೂರ ವಾಸುದೇವಾಚಾರ್ಯರ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಸ್ವರಚಿತ ಶರ್ಲಾಕ್ ಹೋಮ್ಸ್ ಕತೆಯನ್ನು ಹಾಗೂ ದೀಪಾ ಹಿರೇಗುತ್ತಿಯವರ ತಪ್ತ ಎಂಬ ಕತೆಯನ್ನು ಸಹ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಕನ್ನಡದ ಮೇರು ಕವಿ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ,’ ‘ಮ್ಯೂಜ಼್ ಇಂಡಿಯ,’ ಹಾಗೂ ‘ಮೈದಾನಂ’-ನಲ್ಲಿ ಪ್ರಕಟವಾಗಿವೆ.
ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದ ಮಾಡಿದ ಖ್ಯಾತ ವಿದೇಶಿ ಕವಿಗಳ ಕವನಗಳು ಕನ್ನಡ ಸಾಹಿತ್ಯ ಪತ್ರಿಕೆಗಳಾದ ಭಾಷಾ ಭಾರತಿ, ಅವಧಿ, ಕೆಂಡಸಂಪಿಗೆ, ಋತುಮಾನ, ಅಕ್ಷರ ಸಂಗಾತ, ಹಾಗೂ ಮಿಂಚುಳ್ಳಿ-ಯಲ್ಲಿ ಪ್ರಕಟವಾಗಿವೆ.
ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದಿಸಿದ ಪೋಲಂಡ್ ದೇಶದ ಕವನಗಳ ಸಂಕಲನ, “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು’,” ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ಏಪ್ರಿಲ್ 2022-ರಲ್ಲಿ ಪ್ರಕಟಿಸಿತು. “ಬಾಲ್ಟಿಕ್ ಕಡಲ ಗಾಳಿ” ಎಂಬ ಹೆಸರಿನಲ್ಲಿ ಇವರು ಕನ್ನಡಕ್ಕೆ ಅನುವಾದ ಮಾಡಿದ ಎಸ್ಟೋನಿಯಾ, ಲ್ಯಾಟ್ವಿಯಾ, ಹಾಗೂ ಲಿಥುವೇನಿಯಾ ದೇಶದ ಕವನಗಳ ಸಂಕಲನವನ್ನು ಮಸ್ಕಿಯ ಬಂಡಾರ ಪ್ರಕಾಶನವು ಡಿಸೆಂಬರ್ 2024-ರಲ್ಲಿ ಪ್ರಕಟಿಸಿತು.
‘ದ ಹಿಂದು’ ದಿನಪತ್ರಿಕೆಯು ಇವರು ಇಂಗ್ಲಿಷಿನಲ್ಲಿ ಬರೆದ ಕನ್ನಡ ಅರುಣೋದಯ ಸಾಹಿತ್ಯದ ಮೇಲಿನ 15 ಲೇಖನಗಳ ಸರಣಿಯನ್ನು ಜನವರಿ-ಡಿಸೆಂಬರ್ 2020-ರ ಅವಧಿಯಲ್ಲಿ ಪ್ರಕಟಿಸಿತ್ತು. ಜಯಶ್ರೀನಿವಾಸ ರಾವ್ ಅವರು ಕನ್ನಡ ಅರುಣೋದಯ ಸಾಹಿತ್ಯ ಹಾಗೂ ಅನುವಾದ ವಿಷಯಗಳ ಬಗ್ಗೆ ಬರೆದ ಪ್ರಬಂಧಗಳು ದೇಶದ ಹೆಸರಾಂತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಹೈದರಾಬಾದಿನ CIEFL-ನಲ್ಲಿ (ಈಗ The EFL University) PGDES ಹಾಗೂ M.Phil. ಪದವಿಗಳನ್ನು ಪಡೆದು, ಅದೇ ವಿಶ್ವವಿದ್ಯಾಲಯದಲ್ಲಿ ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003-ರಲ್ಲಿ PhD ಪದವಿ ಪಡೆದವರು.
—
೧. ಕವಿಯ ಕೆಲಸ (ಮೂಲ – ಕವಿ ಕಾ ಕಾಮ್)
ನೋಡುವಾಗ ಅನೇಕ ಸಲ ಸುಲಭವೆಂದು ಕಾಣುತ್ತದೆ.
ಒಂದು ಕವಿಗೆ ಮಾಡಬೇಕಾಗುತ್ತದೆ ಇಂತಹ ಹಲವು ಜಟಿಲ ಕೆಲಸಗಳನ್ನು,
ಉದಾಹರಣೆಗೆ, ಹಲವಾರು ಕಷ್ಟದ ಕೆಲಸಗಳಲ್ಲಿ ಒಂದು ಕಷ್ಟದ ಕೆಲಸವೇನೆಂದರೆ
ನದಿಗಳ ಜುಳುಜುಳು ನಾದಗಳನ್ನು ಅನುವಾದ ಮಾಡುವುದು,
ಮರಗಳ ಮರ್ಮರಗಳನ್ನು ಹಾಗೂ
ಸಾವಿರ ಜಾತಿಯ ಹಕ್ಕಿಗಳ ಚಿಲಿಪಿಲಿಗಳನ್ನು ಅನುವಾದ ಮಾಡುವುದು.
ಬೆಟ್ಟಗಳ ಹಾಗೂ ಬಯಲುಗಳ, ಇವೆರಡರ ಭಾಷೆಗಳೇ ದುರ್ಗಮವಾಗಿರುತ್ತೆ.
ಕಣ್ಣೀರುಗಳಿಗೆ ನಮ್ಮ ಭಾಷೆಗಳಲ್ಲಿ ಎಂದೂ ಸಿಗುವುದಿಲ್ಲ
ಅಷ್ಟೇ ಪಾರದರ್ಶಕವಾದ ಪದಗಳು.
ಮೂಕ ಮನುಜರ ದುಃಖ ಮತ್ತು ಕೋಪಗಳಿಗೆ ಕವಿ ಹುಡುಕಬೇಕಾಗುತ್ತದೆ
ನಿಖರವಾದ ಹಾಗೂ ಅಷ್ಡೇ ತಾಪಭರಿತ ಪದಗಳು.
ಮತ್ತೆ ಮೌನಕ್ಕಾಗಿ ಹುಡುಕಿ ತೆಗೆಯಬೇಕು ಅಂತಹ ಒಂದು ಪದ,
ಆ ಪದವ ಬರೆದಾದ ನಂತರವೂ ಅದು ಮೌನವಾಗಿಯೇ ಇದೆ ಅಂತನಿಸಬೇಕು.
ಇದಕ್ಕೆಲ್ಲಾ ಬಲು ನವಿರಾದ ಕೌಶಲ್ಯ ಬೇಕು,
ಮತ್ತೆ ಇದು ಒಬ್ಬ ಕವಿಯಿಂದ ಮಾತ್ರ ಸಾಧ್ಯವಾಗುವಂತಹ ಕೆಲಸ!
೨.ಅಪೂರ್ಣ ಕವಿತೆಗಳು (ಮೂಲ: ಅಧೂರೀ ಕವಿತಾಯೇಂ)
ಅಪೂರ್ಣ ಕವಿತೆಗಳು ನೋಡುತ್ತಿರುತ್ತವೆ ಎವೆಯಿಕ್ಕದೆ
ತಮ್ಮ ಕೊನೆಯ ಸಾಲಿನ ನಂತರ
ಹಾಳೆಯಲ್ಲಿ ಉಳಿದಿರುವ ಖಾಲಿ ಜಾಗವನ್ನು,
ನಿರೀಕ್ಷೆಯಲ್ಲಿರುತ್ತವೆ ಅಪೂರ್ಣ ಕವಿತೆಗಳು
ಇಂದಲ್ಲ ನಾಳೆ ಪೂರ್ಣಗೊಳ್ಳುತ್ತವೆಂದು,
ಎಲ್ಲೋ ಯಾವುದೋ ಕವಿತೆಯೊಂದರಲ್ಲಿ
ಉಪಯೋಗವಾಗುವುದು ಅವುಗಳ ಸಾಲುಗಳೆಂದು.
ಬಹಳ ದಿನಗಳವರೆಗೆ ಅವಾಗಾವಾಗ ಅವು ಬಂದು
ನನ್ನ ಬಾಗಿಲನ್ನು ಬಡಿಯುತ್ತಿದ್ದವು,
ನಾವು ಇಲ್ಲೇ ಅಕ್ಕಪಕ್ಕದಲ್ಲೇ ಇದ್ದೇವೆಂದು ನನಗೆ ನೆನಪಿಸುತ್ತಿರುವಂತೆ!
ಬಹುಶಃ ಅಸೂಯೆಯಿಂದ ಇರಬೇಕು, ಹಲವು ಬಾರಿ ಅವು
ಹೊಸ ಕವಿತೆಗಳನ್ನು ಬರುವುದರಿಂದ ತಡೆಯುತ್ತವೆ.
ಒಂದು ಹೊಸ ಸಾಲು ಬರುವುದರಲ್ಲಿರುವಾಗ
ಅದನ್ನು ಪಕ್ಕಕ್ಕೆ ತಳ್ಳಿ ಬೇಗನೆ ಮುಂದಕ್ಕೆ ಬಂದು ನಿಲ್ಲುತ್ತದೆ
ಯಾವುದೋ ಮರೆತುಹೋದ ಅಪೂರ್ಣ ಕವಿತೆಯೊಂದು.
ಹುಲ್ಲುಗಾವಲಿನಲ್ಲಿ ಎಲ್ಲೋ ದಾರಿತಪ್ಪಿದ ಆಕಳುಗಳು ಅವು,
ದಾರಿ ಹುಡುಕುತ್ತಾ ಒಂದು ದಿನ ಮರಳಿ ಬಂದು
ಮುಚ್ಚಿದ ಬಾಗಿಲುಗಳ ಹೊರಗೆ ಬೊಬ್ಬಿಡುತ್ತವೆ.
ಅತೃಪ್ತ ಆತ್ಮಗಳು ಇವು, ನನ್ನ ಸುತ್ತಮುತ್ತ ಸುಳಿದಾಡುತ್ತಿರುತ್ತವೆ.
ಆದರೆ ಯಾವಾಗಲೂ ಹೀಗೆ ಅಗುವುದಿಲ್ಲ,
ಕೆಲವೊಮ್ಮೆ ಅವು ಬಿದ್ದಿರುತ್ತವೆ ಹಾಳೆಯ ಯಾವುದೋ ಮೂಲೆಯಲ್ಲಿ ಸದ್ದಿಲ್ಲದೆ,
ದಿನಗಟ್ಟಲೆ, ತಿಂಗಳುಗಟ್ಟಲೆ, ಕೆಲವು ಸಲವಂತೂ ಜೀವನಪರ್ಯಂತ,
ನಮ್ಮ ವಿಸ್ಮೃತಿಗಳ ಒಳಗೆ ನುಗ್ಗಿ ಎಲ್ಲೋ ಅಡಗಿಕೊಳ್ಳುತ್ತವೆ ಅವು.
ಬಹಳ ಸಲವಂತೂ ಮತ್ತೆ ಮತ್ತೆ ಕರೆಯಬೇಕಾಗುತ್ತದೆ,
ಆದರೂ ಅವು ಬರಲ್ಲ.
ತಾವು ಅಪೂರ್ಣರೆನ್ನುವ ಭಾವನೆ ಅಥವಾ ತಮ್ಮ ಅಪೂರ್ಣತೆಯ ದರ್ಪ
ಅವನ್ನು ಎಷ್ಟು ಹಠಮಾರಿಗಳನ್ನಾಗಿ ಮಾಡುತ್ತವೆಂದರೆ
ತಮ್ಮ ಜಾಗಗಳಿಂದ ಒಂಚೂರೂ ಕದಲಲ್ಲ ಅವು.
ಅವು ಏನೂ ಹೇಳಲ್ಲ, ಆದರೆ, ನಾವು ಹೀಗೆ ಅರ್ಧಂಬರ್ಧವೇ ಲೇಸು
ಎಂದು ಹೇಳುವಂತೆ ಅನಿಸುತ್ತದೆ.
ಅದ್ಯಾವ ಕವಿತೆಯದು ಇಡಿ ಇಡಿಯಾಗಿ ಧರೆಗೆ ಇಳಿದು ಬಂದಿರುವುದು,
ಹಾಗೆ ಹೀಗೆ ಮಾಡಿ ತುಸು ಕೂಡಿ ಕಳೆದು ಪುರ್ಣವಾಗುತ್ತೆ
ಅಥವಾ ಪೂರ್ಣವಾದಂತೆ ಮಾಡಿಸಲಾಗುತ್ತೆ.
ಹೇಗೂ ಈ ಲೋಕದಲ್ಲಿ ಅಪೂರ್ಣ ಕವಿತೆಗಳ ಸಂಖ್ಯೆಯೇ ಅತಿ ಹೆಚ್ಚು.
ಸಂಪೂರ್ಣ ಕವಿತೆಗಳಲ್ಲೂ ಎಲ್ಲೋ ಉಳಿದೇ ಇರುತ್ತೆ
ಒಂದು ತರಹದ ಅಪೂರ್ಣತೆ,
ಪ್ರತಿಯೊಂದು ಪೂರ್ಣ ಕವಿತೆ ಬರೆಯಲು ಬಯಸುವಳು
ಇನ್ನೊಬ್ಬ ಕವಿ ಇನ್ನೊಂದು ತರಹ.
ಆದರೆ ತಮಾಷೆ ಏನೆಂದರೆ ಹೀಗೆ ಮಾಡಿಯೂ ಮೊದಲ ಕವಿಗಾಗಲಿ
ಇನ್ನೊಬ್ಬ ಕವಿಗಾಗಲಿ ತೃಪ್ತಿ ಎಂಬುದಿಲ್ಲ.
ಪ್ರತಿಯೊಬ್ಬ ಕವಿಗೆ ಯಾವಾಗಲೂ ಅನಿಸುತ್ತಿರುತ್ತೆ
ಕವಿತೆಯಲ್ಲಿ ಎಲ್ಲೋ ಏನೋ ಬಿಟ್ಟುಹೋಗಿದೆಯೆಂದು
ಇರಬೇಕಾದದ್ದು … ಇರಬಹುದಾದದ್ದು.
೩.ಎರಡು ಸಾಲುಗಳ ಮಧ್ಯೆ (ಮೂಲ: ದೊ ಪಂಕ್ತಿಯೋಂ ಕೆ ಬೀಚ್)
ಕವಿತೆಯ ಎರಡು ಸಾಲುಗಳ ಮಧ್ಯೆ ಇರುವ
ಯಾವಾಗಲೂ ಖಾಲಿ ಖಾಲಿಯಾಗಿ ಕಾಣುವ ಆ ಜಾಗ ನಾನು.
ಇಲ್ಲಿ ಕವಿಯ ಅದೃಶ್ಯ ನೆರಳು ಸುಳಿದಾಡುತ್ತಿರುತ್ತೆ ಆಗಾಗ್ಗೆ.
ಕವಿಯ ಬ್ರಹ್ಮಾಂಡದ ಒಂದು ಗುಪ್ತ ಆಕಾಶಗಂಗೆ ನಾನು,
ಪದಗಳು ಇಲ್ಲಿ ಬರುವುದಕ್ಕೆ ಹಿಂಜರಿಯುತ್ತವೆ ಅನೇಕವೇಳೆ.
ಅವಸರದಲ್ಲಿ ಬಿಟ್ಟುಹೋದ ಸಹಾಯಕ ಕ್ರಿಯಾಪದವೋ ಅಥವಾ ಪದವೋ
ಕೆಲವೊಮ್ಮೆ ಎದ್ದು ಬಂದು ಯಾವುದೋ ದಡದಲ್ಲಿ ಹೋಗಿ ಕೂತುಬಿಡುತ್ತೆ.
ಅನುಸ್ವಾರಗಳು ಹಾಗೂ ಕೆಲವು ಒತ್ತಕ್ಷರಗಳು ನನ್ನ ಎಲ್ಲೆಗಳಿಂದ ಇಣುಕುತ್ತಲಿರುತ್ತವೆ,
ಪದಗಳ ಮೂಲಕ ಸೋಸಿ ಬೀಳುತ್ತಲಿರುತ್ತವೆ ಇಲ್ಲಿ ಬಹಳಷ್ಟು ಧ್ವನಿಗಳು.
ಕೆಲವೊಮ್ಮೆ ಪದಗಳ ಎಂತೆಂತಹ ಅರ್ಥಗಳು ಇಲ್ಲಿ ದಾರಿತಪ್ಪಿ
ಬರುತ್ತವೆ ನೋಡಿ,
ಎಷ್ಟೋ ವರ್ಷಗಳ ಹಿಂದೆ ತಮ್ಮ ಮನೆಗಳನ್ನು ಬಿಟ್ಟು ಓಡಿ ಹೋದ
ಕಿಡಿಗೇಡಿ ಮಕ್ಕಳ ತರಹ.
ನಾನು ಕಾಣಿಸುವ ಹಾಗೆ
ಅಂತಹ ಅಚಲವಾದ ಅಂತಹ ನಿರ್ವಿಕಾರವಾದ ಜಾಗ ಅಲ್ಲ ನಾನು,
ಮಾತುಕತೆಗಳ ಮಧ್ಯೆ ಇದ್ದಕ್ಕಿದ್ದಂತೆ ಬರುವ ಮೌನ ನಾನು,
ಈಜುತ್ತಲಿರುತ್ತವೆ ಅದರಲ್ಲಿ ಮಾತುಗಳಲ್ಲಿ ಬಿಟ್ಟುಹೋದ ತುಣುಕುಗಳು.
ನನ್ನ ಬೀದಿಗಳಿಂದ ಹಲವು ಗುಪ್ತರಸ್ತೆಗಳು ಹೊರಹೊಮ್ಮುತ್ತವೆ,
ಕೊಂಡೊಯ್ಯುಬಲ್ಲವು ಅವು
ಎಲ್ಲರಿಂದ ಮರೆಸಿಟ್ಟ ಕವಿಯ ಒಂದು ಅಜ್ಞಾತ ಲೋಕದ ತನಕ.
ಈ ಗಡಿಯಿಲ್ಲದ ಅರಣ್ಯದಲ್ಲಿ ಕುಣಿಯುತ್ತಿವೆ
ಎಷ್ಟೊಂದು ಅಪರಿಚಿತ ಆಕಾರಗಳು.
ಪದಗಳ ಎತ್ತರದ ಗೋಡೆಗಳ ನಡುವೆ ಕಾಣುವ ತೆರೆದ ಆಕಾಶ ನಾನು,
ಕವಿಯ ಆಶಯಗಳ ಹದ್ದುಗಳು ಇಲ್ಲಿ ಹಾರುತ್ತಿರುತ್ತವೆ ದೀರ್ಘ ಯಾನದಲ್ಲಿ.
ಎಂತೆಂತಹ ಸುರಂಗಗಳು ಅಡಗಿವೆ ಇಲ್ಲಿ ಅದೃಶ್ಯದ ತೆರೆಯ ಹಿಂದೆ,
ತಮ್ಮ ಗುಪ್ತ ದಾರಿಗಳ ಮೂಲಕ
ಕರೆದೊಯ್ಯುತ್ತವೆ ಅವು ಪದಗಳ ಉಗಮ-ಕತೆಗಳ ತನಕ.
ನಿನ್ನ ಮೆಟ್ಟುಗಳನ್ನು ಹೊರಗೆ ಬಿಟ್ಟು ಬಾ ಒಳ ಬರುವ ಮುನ್ನ,
ನಿನ್ನ ಪಾದಗಳ ಯಾವ ಸದ್ದೂ ಕೇಳಿಸಬಾರದು.
ಹೊರಗಿನ ಸಣ್ಣದೊಂದು ಸದ್ದು ಸಹ ನಾಶಗೊಳಿಸುತ್ತೆ ಸಂಪುರ್ಣವಾಗಿ
ನನ್ನ ಈ ಮಾಂತ್ರಿಕ ಮಂತ್ರಜಪವನ್ನು!
೪. ಅಜ್ಜನ ಸೈಕಲ್(ಮೂಲ: ನಾನಾ ಕೀ ಸಾಯಿಕಿಲ್)
ನನಗಿಂತ ಮುಂಚೆ ನನ್ನ ಮಾಂವ ಓಡಿಸಿದ್ದ ಇದನ್ನು ಕೊನೆಯ ಸಲ.
ಎಷ್ಟೋ ವರ್ಷ ಕಳೆದುಹೋಗಿದೆ ಆತ ವಿದೇಶಕ್ಕೆ ಹೋಗಿ,
ಆಗಿನಿಂದ ಇದು ಕೆಲಸಕ್ಕೆ ಬಾರದೆ ಹೀಗೇ ಬಿದ್ದಿದೆ!
ಅಜ್ಜ ಇದನ್ನು ಕೊಂಡಿದ್ದರು ಕಾಲೇಜು ಸೇರಿದ ಹೊಸತರಲ್ಲಿ.
ಅಜ್ಜಿ ನನ್ನನ್ನು ಅಷ್ಟಾಗಿ ಪ್ರೀತಿಸುತ್ತಿರಲಿಲ್ಲ,
ಆದರೆ ಒಂದು ದಿನ ಅವರು ಈ ಸೈಕಲ್ಲನ್ನು ನನಗೆ ಕೊಟ್ಟರು,
ರಿಪೇರಿ ಮಾಡಿಸಿ ನೀನೇ ಓಡಿಸು ಇದನ್ನು ಎಂದರು!
ಅಜ್ಜ ಡಾಕ್ಟರ್ ಆದಾಗ ಇದೇ ಸೈಕಲ್ಲನ್ನು
ಓಡಿಸಿಕೊಂಡು ಆಸ್ಪತ್ರೆಗೆ ಹೋಗುತ್ತಿದ್ದರು.
ತಲೆಮಾರುಗಳಿಂದ ಹೀಗೇ ಹಸ್ತಾಂತರವಾಗುತ್ತಿತ್ತು
ವಸ್ತುಗಳು, ರೂಢಿಗಳು ಮತ್ತು ದನಿಗಳು!
ಅನೇಕ ಸಲ ಅಮ್ಮ ಥೇಟ್ ಅಜ್ಜಿಯ ಹಾಗೆ ಕಾಣುತ್ತಿದ್ದಳು,
ಮತ್ತೆ ಅಪ್ಪ ಅವರ ಅಪ್ಪನ ಹಾಗೆ, ಆ ನಿಲಿವಂಗಿ ಧರಿಸಿದಾಗ.
ಸೈಕಲ್ ಓಡಿಸುವಾಗ ನಾನು ಅಜ್ಜನ ಹಾಗೆ ಕಾಣುತ್ತಿರಲಿಲ್ಲ,
ನನ್ನ ದನಿ ನನ್ನ ಅಪ್ಪನ ದನಿಯನ್ನು ಬಹಳಷ್ಟು ಹೋಲುತ್ತಿತ್ತು,
ಮತ್ತೆ ನನ್ನ ಮೂಗು ನನ್ನ ಅಜ್ಜಿಯ ಮೂಗಿನ ಹಾಗಿತ್ತು.
ಸುಮಾರು ಸಲ ತಿಂಗಳಿನ ಸ್ಟೈಪೆಂಡ್ ಹಣವನ್ನು
ಖರ್ಚು ಮಾಡುತ್ತಿದ್ದೆ ಈ ಸೈಕಲ್ಲಿನ ಮೇಲೆ,
ಒಂದೊಂದಾಗಿ ಬದಲಿಸಿದೆ ಇದರ ಎಲ್ಲಾ ಭಾಗಗಳನ್ನು, ಇದರ ಬಣ್ಣವನ್ನು.
ಈಗ ಇದನ್ನು ನೋಡಿ ಯಾರಿಂದಲೂ ಹೇಳಲಾಗದು
ಇದು ಒಂದೊಮ್ಮೆ ಅಜ್ಜ ಓಡಿಸುತ್ತಿದ್ದ ಅದೇ ಸೈಕಲ್ಲೆಂದು.
ಆದರೆ ಇಂದಿಗೂ ಎಲ್ಲರೂ ಇದನ್ನು
ಅಜ್ಜನ ಸೈಕಲ್ ಎಂದೇ ಕರೆಯುತ್ತಾರೆ!
ಅಜ್ಜ ಹೋಗಿ ಎಷ್ಟೊಂದು ವರ್ಷ ಕಳೆದಿದೆ,
ಅಜ್ಜನನ್ನು ಹೋಲುವಂತಹದ್ದು ನನ್ನಲ್ಲಿ ಏನೇನೂ ಇಲ್ಲ.
ಆದರೆ ನಮ್ಮ ಊರಿಗೆ ಹೋದಾಗಲೆಲ್ಲ ಎಲ್ಲರೂ ಹೇಳುವುದು ಇದನ್ನೇ,
ಡಾಕ್ಟರ್ ಸಾಹೇಬರ ಮೊಮ್ಮಗ ಬಂದಿದ್ದಾನೆಂದು.
ಪುರ್ವಜರ ಗುರುತಿನಿಂದಲೇ ನಮ್ಮನ್ನು ಸಹ ಕರೆಯುತ್ತಾರೆ,
ನಮ್ಮ ದನಿಗಳಲ್ಲಿ ಬದುಕುಳಿದಿವೆ
ನಮ್ಮ ಪೂರ್ವಜರ ಪ್ರತಿಧ್ವನಿಗಳು!
೫. ಕವಿ, ಚಂದಿರ, ಹಾಗೂ ಬೆಕ್ಕುಗಳು(ಮೂಲ: ಚಾಂದ್ ಔರ್ ಬಿಲ್ಲಿಯಾಂ)
ಮನಸ್ಸಿನ ಒಂದು ತುಂಡಿನಿಂದ ಚಂದಿರನನ್ನು ಮಾಡಲಾಯಿತು,
ಎರಡನೆಯ ತುಂಡಿನಿಂದ ಬೆಕ್ಕುಗಳನ್ನು.
ಮನಸ್ಸಿನಂತೆಯೇ ಅವುಗಳ ಪಾಲಿಗೂ ಬಂತು ಅಲೆದಾಟ.
ಮೊದಲೇ, ಅವು ಸಾಕುಪ್ರಾಣಿಗಳಾಗುವುದಿಲ್ಲ,
ಒಂದುವೇಳೆ ಆದರೂ ಸಹ ಅವುಗಳನ್ನು ನಂಬುವುದು ಕಷ್ಟ.
ಸದ್ದು ಮಾಡುವುದಿಲ್ಲ ಅವುಗಳ ಪಾದಗಳು,
ಹಸಿರು ಚಾಲಾಕಿನಿಂದ ಮಾಡಲಾದ ಅವುಗಳ ಕಣ್ಣುಗಳು,
ಕತ್ತಲಲ್ಲಿ ಹೊಳೆಯುತ್ತವೆ.
ಚಂದಿರನೆಂಬ ಭ್ರಮೆಯಲ್ಲಿ ಪಾತ್ರೆಯಲ್ಲಿಟ್ಟ ಹಾಲನ್ನು ಕುಡಿದುಬಿಡುತ್ತವೆ.
ಮನಸ್ಸಿನ ಒಂದು ಭಾಗದಿಂದ ಚಂದಿರನನ್ನು ಮಾಡಲಾಯಿತು,
ಎರಡನೆಯ ಭಾಗದಿಂದ ಬೆಕ್ಕುಗಳನ್ನು.
ಚಂದಿರನ ಪಾಲಿಗೆ ಅಮರತ್ವ ಬಂತು,
ಬೆಕ್ಕುಗಳ ಪಾಲಿಗೆ ಸಾವು.
ಆದ್ದರಿಂದಲೆ ಇವು ಅನೇಕಸಲ ಚಂದಿರನ ಜತೆ
ಹರಟುತ್ತಿರುವ ಕವಿಯ ರಸ್ತೆಗೆ ಅಡ್ಡಬರುತ್ತವೆ.
ಹೀಗೆ, ಕವಿತೆಯಲ್ಲಿ ಸಂಶಯದ ಜನ್ಮವಾಯಿತು.
ತಮ್ಮ ನವಜಾತ ಮರಿಗಳನ್ನು ತಮ್ಮ ಹಲ್ಲುಗಳ ನಡುವೆ
ಎಷ್ಟು ಮೃದುವಾಗಿ ಹಿಡಿದುಕೊಂಡು ಒಂದು ತಾಣದಿಂದ
ಇನ್ನೊಂದು ತಾಣಕ್ಕೆ ಕರಕೊಂಡು ಹೋಗುತ್ತವೆಂದರೆ
ಭಾಷೆಯನ್ನು ಬಳಸುವ ಸೂತ್ರವನ್ನು ಅವು ಕವಿಗಳಿಗೆ
ಹೇಳಿಕೊಡುತ್ತಿರಬಹುದೇನೋ ಎಂದನಿಸುತ್ತದೆ.
೬.ಎರಡು ಪುಟ್ಟ ಸಾಕ್ಸುಗಳು(ಮೂಲ: ದೊ ನನ್ಹೆ ಮೋಜೆ)
ಹಳೆಯ ಬಟ್ಟೆಗಳ ಪೆಟ್ಟಿಗೆಯಿಂದ ವಸ್ತುಗಳನ್ನು ತೆಗೆಯುವಾಗ
ಇದ್ದಕ್ಕಿದ್ದಂತೆ ಪ್ರಕಟವಾದವು
ಉಣ್ಣೆಯ ಆ ಎರಡು ಪುಟ್ಟ ಸಾಕ್ಸುಗಳು.
ನೆನಪಾದವು ಆ ದಿನಗಳು, ಮದ್ಯಾಹ್ನದ ಆ ಉಗುರುಬಿಸಿಲಿನಲ್ಲಿ ಕೂತು
ನಡು ನಡುವೆ ತನ್ನ ಹೊಟ್ಟೆಯನ್ನು ನೋಡುತ್ತಾ
ಮನದಲ್ಲೇ ನಸುನಗುತ್ತಿರುವ ಹೆಂಡತಿ
ಇವನ್ನು ಹೆಣೆಯುತ್ತಿದ್ದಳು.
ಆ ದಿನಗಳ ಮಾತಿದು ಆಗ ಹುಟ್ಟುವವಳಿದ್ದಳು
ನಮ್ಮ ಮೊದಲ ಮಗಳು.
ಇಷ್ಟು ವರುಷಗಳ ನಂತರ ಕಾಣಿಸಿಕೊಂಡಿವೆ ಈ ಸಾಕ್ಸುಗಳು ಇದ್ದಕ್ಕಿದ್ದಂತೆ,
ಇದ್ದಕ್ಕಿದ್ದಂತೆ ಬಾಲ್ಯದ ಯಾವುದೋ ವಿಷಯ ನೆನಪಾದಂತೆ.
ಎಷ್ಟು ಪುಟ್ಟದಾಗಿವೆ ಈ ಸಾಕ್ಸುಗಳೆಂದರೆ
ಆಶ್ಚರ್ಯದಲ್ಲಿ ಮುಳುಗಿದೆ ನನ್ನ ಮಗಳ ಮುಖ,
ಇಷ್ಟು ಪುಟ್ಟದಾಗಿದ್ದವಾ ನನ್ನ ಪಾದಗಳು ಒಮ್ಮೆ ಎಂಬಂತೆ.
ತುಂಬಾ ಸಣ್ಣ ಹಾಗೂ ಸಾಧಾರಣ ವಸ್ತುಗಳಲ್ಲೇ ಉಳಿದಿವೆ ಬಹುಶಃ
ಇಷ್ಟೊಂದು ಆತ್ಮೀಯತೆ, ಇಂತಹ ಕಚಗುಳಿ …
ಅವೆರಡೂ ಬರೇ ಪುಟ್ಟ ಪುಟ್ಟ ಸಾಕ್ಸುಗಳಾ ಅಥವಾ ಹದಿಮೂರು ವರ್ಷಗಳ
ಹಿಂದಿನ ಮಧ್ಯಾಹ್ನಕ್ಕೆ ನನ್ನನ್ನು ಕರೆದುಕೊಂಡು ಬಂದಿರುವ ಭೂತಕಾಲದ ಪಾದಗಳಾ?
ಎಷ್ಟು ಸುಲಭವಾಗಿ ಇಷ್ಟೊಂದು ದೂರವನ್ನು ದಾಟಿ ಬರುತ್ತದೆ
ಎರಡು ಪುಟ್ಟ ಪುಟ್ಟ ಸಾಕ್ಸುಗಳಲ್ಲಿ ತಂಗಿರುವ
ಎರಡು ಪುಟ್ಟ ಪಾದಗಳ ಪರಿಮಳ!






ಶ್ರೀ ಜಯಶ್ರೀನಿವಾಸ ರಾವ್ ಸರ್,
ಅಪೂರ್ಣ ಕವಿತೆಗಳು ನನ್ನದೇ ಕವಿತೆ ಅನಿಸಿತು. ನನ್ನ ಇಂತಹವುಗಳನ್ನು ಅರ್ಧಂಬರ್ದ ಸಾಲುಗಳು ಎಂಬ ಶೀರ್ಷಿಕೆಯಡಿ ಅವಧಿಯಲ್ಲಿ ಪ್ರಕಟಿಸಿದ್ದೆ. ಹಾಯ್ಕುಗಳು ಬಹುಶಃ ಹೀಗೆಯೇ ಹುಟ್ಟಿರಬೇಕು.
ನಿಮ್ಮ ಬಹಳಷ್ಟು ಅನುವಾದಿತ ಕವಿತೆಗಳನ್ನು, ಹಲವು ಸಲ ನನ್ನ ಆ ದಿನವನ್ನು ಸಂಪೂರ್ಣಗೊಳಿಸಿವೆ.
ರಾ. ಬಂದೋಳ್