ಪದ್ಯಕ್ಕೆ ಹೆಸರಿಡಲು ಮನಸ್ಸಾಗುತ್ತಿಲ್ಲ…
-ಪ್ರವರ ಕೊಟ್ಟೂರು
ಚಳಿಗಾಲದ ಎಲೆಗಳಂತೆ
ಉದುರಿ ಹೋಗುವ
ಬದುಕು ಅದೆಷ್ಟು ಹೋರಾಟ,
ಗರಿಕೆಯಡಿಯ
ಮಣ್ಣು ಕೆದಕಿದರೆ
ಅರ್ದಂಬರ್ದ ತಲೆ ಬುರುಡೆಗಳು,
ಮೊದಲ ರಾತ್ರಿಗೆ ಹಾಕಿದ ಹೂವುಗಳು
ಬೆಳಗಿಗೆ ಬಾಡಿವೆ,
ಇಬ್ಬರೂ ಹಾಸಿಗೆಯಲ್ಲಿ ಮುದ್ದೆ
ಮುಗಿದೇ ಹೋಯ್ತು
ಹೂವೊಂದ ಬಿಟ್ಟು ಮಿಕ್ಕದ್ದೆಲ್ಲಾ
ಮತ್ತೆ ಮತ್ತೆ ಸಪ್ಪೆ,
ಗೋಡೆಗೆ ಆನಿಕೊಂಡ ದೇವರು
ದಣಿದಿದ್ದಾನೆ.
ಗಾಳಿಯಲ್ಲೊಂದು ಅಭ್ಯಂಗ ಸ್ನಾನ,
ಬೆರಳುಗಳ ತಾಕಿಸುತ
ಉಚ್ವಾಸ ನಿಚ್ವಾಸ,
ಎದೆ ನಿದ್ರಿಸುವಂತಿಲ್ಲ
ಕಣ್ಣು, ಆರಿದ ಪ್ರಣತಿ
ಮನಸ್ಸು ಕತ್ತಲ ಗುಲಾಮ
ಸಣ್ಣ ಪುಟ್ಟ ಹೆಜ್ಜೆಗಳಲ್ಲಿ
ಕಳೆದು ಹೋದ ರೊಕ್ಕ,
ಕಿಸೆಯಡಿ ತೂತಾಗಿದೆ ,
ಬಿಡಿ, ಎಲ್ಲರಿಗಿದ್ದಂತಿದೆ.
ಮೇಲೆ ಹಾಕಿದ್ದು ಕೆಳಗಿನಿಂದ
ಉದುರಿ ಹೋಗದೆ ಏನು!
ಅನ್ವೇಷಣೆಗಳು ನಡೆದಿವೆ
ತೂತು ಮುಚ್ಚಲು,
ಒಳ ತೂರಲೂ ಬಾರದು
ಹೊರ ಬರಲೂ ಬಾರದು,
ಹಾಗೇನಾದರೂ ಆದರೆ ಕಾಕತಾಳೀಯವೇ
ಸರಿ,
ಸುಮ್ಮನೆ ಸ್ಖಲ್ಲಿಸುವ ಉಸಿರು
ನೋಡು, ಕಣ್ಣೀರಿನಲ್ಲಿ ಅದ್ದಿ
ಬಿಡಿಸಿದವು
ವರ್ಣಮಯವಾಗಿಲ್ಲವೇ?
ತುಂಬಾ ಬೆಲೆ ಕಟ್ಟಲೇ ಬೇಡಿ,
ಕ್ಷಣಿಕ ಚಿತ್ರ
ಮತ್ತೆಂದು ಕಾಣಿಸಿಕೊಳ್ಳುವುದಿಲ್ಲ,
ಬೇಕೆಂದರೆ ಮತ್ತೆ ಮತ್ತೆ ಅಳಿಸು







nice…
nice….
Ondu Modern art thara kavana Enenanno tilisuteide. Good Luck
‘ಗರಿಕೆಯಡಿಯ ಮಣ್ಣು ಕೆದಕಿದರೆ…..’- ಕವಿತೆ ಧ್ವನಿಸುತ್ತದೆ.