ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಣೆ

ಅನಿತಾ ಪಿ. ತಾಕೊಡೆ

**

ಎಲ್ಲವನೂ ಬದಲಿಸಬಹುದು 

ದಿನ, ಋತುಮಾನಗಳ ಅನುಸಂಧಾನವನು

ಸಣ್ಣ ಕೂಗಿಗೂ ದನಿಯಾಗಿ ನಡೆದ ಹೆಜ್ಜೆಗಳನು

ನಿರ್ವಚನೀಯದಲಿ ಬೆಚ್ಚಗೆ ಕಾಯ್ದಿರಿಸಿಕೊಂಡ ನಗುವನೂ

 ಹೇಳಹೆಸರಿಲ್ಲದಂತಾಗುವುದು

ವರುಷವೇರಿ ಮಧುರತೆಯ ಸಾರಿದ ಅರಿಕೆ ಅಹವಾಲುಗಳು

ಎಲ್ಲ ಅವನಿಚ್ಛೆಯೆಂದು ಶಿವನ ಧನ್ಯತೆಯಿಂದ ನೆನೆದ ದಿನಗಳು

ಭಾವ ಪ್ರವಾಹದ ನಾವೆಯಲಿ ಜೀವನದಿ ದಾಟುವ ಕನಸುಗಳೂ

ನಿಡಿದಾದ ಬೆಟ್ಟಗಳ ಇಕ್ಕಟ್ಟಿನ ಹಾದಿಯಲಿ

ಮಾತಿಗೊಂದು ಆಣೆ ಬಂದು ಹೋಗುತಿರುವಾಗ

ಯಾವುದಾದರೊಂದು ಒಪ್ಪಿತವಾದರದುವೇ ವೇದವಾಕ್ಯವಾಗಿ 

ಉಳಿದವು ಮರೆವಿನ ಪರಿಧಿಯೊಳಸೇರಿ ಶೂನ್ಯವಾಗುವುದು

ಆಣೆಯೆಂಬುದು ಎಷ್ಟು ನಿಷ್ಟುರವಾದಿ..!

ಮೋಡಗಳು ವರ್ಷಧಾರೆಯಾಗಿಯೂ ಭುವಿಯ ಸೇರದಂತೆ

ವನಸುಮವರಳಿ ನಳನಳಿಸದಂತೆ

ರೆಕ್ಕೆ ಬಲಿತ ಹಕ್ಕಿಯು ತಂಗಾಳಿಯಲಿ ವಿಹರಿಸದಂತೆ…!

ಆಣೆಗೂ  ಯಮನಿಯಮಗಳುಂಟು

 ಒಡಂಬಡಿಕೆಯ ಹಾದಿಯ ತಪ್ಪಿಸುವುದುಂಟು

ನಗೆಯ ತೊಟ್ಟಿಲನು ತೋಯಿಸುವ ಯುಕ್ತಿಯುಂಟು

ಮನೋಲ್ಲಾಸದ ಹೆಣಿಗೆಯನು ಸಡಿಲಿಸುವ ಕಟುತನವುಂಟು

ಕೆಲವೊಮ್ಮೆ ಆಣೆಯೂ ಜಾತಿವಾದಿಯಾಗಿ

ಸ್ವಕೀಯ ಪರಕೀಯವಾದಗಳಲಿ ಗೆದ್ದುಬಂದು

 ಅನುಕೂಲಶಾಸ್ತ್ರದ ಪಾಠ ಹೇಳುವುದುಂಟು

ಆಗ ಇಟ್ಟಾಣೆಯೇ ನಿತ್ಯ ಸತ್ಯವಾದ ತಿರುಗಿನಲಿ

ಮನುಷ್ಯರೂ.. ಮನುಷ್ಯ ಸಂಬಂಧಗಳೂ..!

‍ಲೇಖಕರು Admin MM

28 February, 2024

2 Comments

  1. ಸಂದೀಪ್ ಕುಮಾರ್

    ತುಂಭಾ ಚೆನ್ನಾಗಿದೆ .

  2. ಸಂದೀಪ್ ಕುಮಾರ್

    Very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading