ದೇವರ ವಿಷಯದಲ್ಲಿ ನನ್ನ ವೈಚಾರಿಕತೆ ಏನೇ ಇದ್ದರೂ ಅಪ್ಪ-ಅವ್ವನ ನಂಬಿಕೆಗೆ ಯಾವತ್ತೂ ಎದುರಾಡಿಲ್ಲ ಎನ್ನುವುದು ಒಂದು ಕಾರಣವಾದರೆ ಕಾರ್ತೀಕದಲ್ಲಿ ಅವ್ವ ಹಚ್ಚಿಡುವ ಹಣತೆಯ ಬೆಳಕು ನನ್ನನ್ನು ಪರವಶಗೊಳಿಸುತ್ತದೆ ಎನ್ನುವ ಇನ್ನೊಂದು ಕಾರಣಕ್ಕೇ ನಾನು ಕಾರ್ತೀಕ ಕಡೆ ಸೋಮವಾರ ಅಪ್ಪನ ಅಂಗಿಯ ಚುಂಗು ಹಿಡಿದು ಮನೆದೇವರಿಗೆ ಹೋಗುವುದು.
ಮಸಾರಿ ಹೊಲ ದಾಟಿಯೇ ದೇವರಿಗೆ ಹೋಗಬೇಕಾದ ಕಾರಣಕ್ಕೆ ಅವ್ವನ ಸೀರೆಯಂಚಿನ ಚುಕ್ಕಿ ಚಿತ್ತಾರದಂತೆ ನೆನಪುಗಳ ಮೆರವಣಿಗೆ. ಚಿಕ್ಕವಳಿದ್ದಾಗ ಈ ಹೊಲಕ್ಕೆ ಬಂದರೆ ಉಡಿಯಲ್ಲಿ ಮಣ್ಣು ತುಂಬಿ ಎತ್ತಿ ಹಾಕುವ ಆಟ. ಒಂದೇ ಒಂದು ದಿನ ಮಣ್ಣಲ್ಲಿ ಆಡಬೇಡ ಎನ್ನದ ಅಪ್ಪ-ಕಾಕಂದಿರ ಮಣ್ಣ ಪ್ರೀತಿ, ನಿನ್ನ ನೆನಪುಗಳು ಎಷ್ಟೊಂದು ಜೀವಂತ.
ಒಮ್ಮೆ ನಿನ್ನ ಬೆಳೆ, ಹಕ್ಕಿ, ಗಾಳಿ ಎಲ್ಲ ನೋಡಬೇಕು ಎಂದವನ ನಲ್ಮೆ, ನಾನು ಓಡಾಡಿದ ಜಾಗ, ತೋಟ, ಮನೆ ಎಲ್ಲ ತೋರಿಸಬೇಕು ಬಂದು ಹೋಗು ‘ಒಲವೇ’ ಎಂದು ಕರೆದವನ ಬಲ್ಮೆ, ನೆನಪಾದಾಗಲೆಲ್ಲ ದೀಪದ ಕುಡಿಯಂಥ ವ್ಯಾಮೋಹದ ಹೆಣ್ಣಿನ ಕಣ್ಣ ನೀಲಾಂಜನದಿಂದ ಮನ ಬೆಳಗುತ್ತದೆ ಅಷ್ಟು ಸಾಕು ಎಂದ ಭವವಿಧುರನ ಸುಟ್ಟುಸಿರು, ನಿನ್ನ ಕಣ್ಣ ಬೆಳಕನ್ನು ನೆನಪಿಸಿದ ಮಿಣಿ ಮಿಣಿ ದೀಪಗಳು, ನಿನ್ನ ಶಾಲೆ, ನಿನ್ನಕ್ಕನ ಮಗಳು ಹುಟ್ಟಿದ ದಿನ ಎಲ್ಲೋ ಮಾಂತ್ರಿಕ ಲೋಕದಲ್ಲಿ ಸಂಚರಿಸಿದಂತೆ.
ಚಿತ್ರ ಬಿಡಿಸಲು ಹೊಸ ಪ್ರತಿಮೆಗಳು ಸಿಕ್ಕವು ನೋಡೇ, ನಾನೆಳೆವ ರೇಖೆಗಳಲ್ಲಿ ನೀ ಮೂಡಬೇಕು ಎಂದವನ ಒಲುಮೆಯೆಂದರೆ ದೀಪದ ಮಿಣುಮಿಣುಕಿನಲ್ಲಿ ಚಿಕ್ಕೀ ಮಳೀ ಸುರಿದಂತೆ.
ನಾನು ನಡೆಯಲು ಬಯಸಿದ ದಾರಿಯ ಬಗ್ಗೆ ಪ್ರಶ್ನೆಗಳನ್ನ ಕೇಳದೆ, ಬೇಕು ಎಂದ ಹಾಗೆ ಬದುಕುವ ಸ್ವಾತಂತ್ರ್ಯ ಕೊಟ್ಟು, “ಹೀಗೆ ಜೀವಿಸುವ ಕನಸನ್ನು ನನಸಾಗಿಸಿಕೊಳ್ಳುವ ಸಾಧ್ಯತೆಯೇ ಜೀವನದೆಡೆಗಿನ ಆಸಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದಾದರೆ ಹೋಗಿ ತಲುಪುವ ಸ್ಥಳದವರೆಗೆ ಎಷ್ಟೇ ಕತ್ತಲಿದ್ದರೂ ನಿನ್ನ ಜೀವನ ಪ್ರೀತಿ ನಂದದಿರಲಿ,” ಎಂದು ಹರಸಿದ ಅಪ್ಪನ ಮಾತುಗಳ ಬೆಳಕು ನಿತ್ಯ ದೀವಳಿಗೆ ನನ್ನ ಪಾಲಿಗೆ.
ಅಪ್ಪ ಏನನ್ನೂ ಯಾವತ್ತೂ ನನ್ನ ಮೇಲೆ ಬಲವಂತವಾಗಿ ಹೇರಿಲ್ಲ. ಮದುವೆ ವಿಷಯದಲ್ಲೂ ಒಲ್ಲೆ ಎಂದಾಗ ಇಂದಲ್ಲ ನಾಳೆ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಾಳೆ ಎಂದು ಸುಮ್ಮನಾಗಿದ್ದರು.
ಎಷ್ಟು ದಿನ ಕಳೆದರೂ ಉಭ-ಶುಭ ಎನ್ನದ್ದನ್ನು ನೋಡಿ ಮದುವೆ ಆಗು ಸಣ್ಣೀ ಎಂದಾಗ, ಈ ಮದುವೆ ಎನ್ನುವ ವ್ಯವಸ್ಥೆಯ ಭಾಗವಾಗುವುದು ನನಗೆ ಸಹಜವೆನಿಸುತ್ತಿಲ್ಲ. ನಂಗೆ ನನ್ನದೇ ಆದ ಬದುಕು ಬೇಕು. ಅತ್ಯುತ್ತಮ ಸಾಹಿತ್ಯ ಓದಬೇಕು, ಸ್ಪ್ಯಾನಿಷ್ ಬ್ಯಾಂಡ್‌ನಲ್ಲಿ ವಯೋಲಿನ್ ನುಡಿಸಬೇಕು, ಮಹಾಬಲಿಪುರಂ ಮರಳ ದಂಡೆಯ ಮೇಲೆ ಅಕ್ಕನ ಮಕ್ಕಳೊಂದಿಗೆ ಇನ್ನೊಮ್ಮೆ ಬಾಲ್ಯದಾಟ ಆಡಬೇಕು.
ಮತ್ತೇ, ನನ್ನ ಸ್ವಾತಂತ್ರ್ಯವನ್ನು ನನಗಿಂತ ಹೆಚ್ಚಾಗಿ ಪ್ರೀತಿಸುವ ನಿಮ್ಮಂಥ, ಬಾಲ್ಯ ಸ್ನೇಹಿತರಂತಹ ಇನ್ನೊಬ್ಬ ಹುಡುಗ ಸಿಗುತ್ತಾನೆ ಎನ್ನುವ ಕಲ್ಪನೆಯೇ ನನಗಿಲ್ಲ, ಎಂದು ಅಲವತ್ತುಕೊಂಡೆ ದೀನಳಾಗಿ.
ಅಂದು ನೆತ್ತಿ ಸವರಿ ಹೆಗಲ ಮೇಲೆ ವಸ್ತ್ರ ಹಾಕಿಕೊಂಡು ಎದ್ದು ನಡೆದು, ಇಂದಿನವರೆಗೆ ಈ ಬಗ್ಗೆ ಚಕಾರವೆತ್ತದ ಅಪ್ಪ ನನಗೆ ಮೌನ ಪ್ರಾರ್ಥನೆಯಂತೆ, ಮನದ ಧೈರ್ಯದಂತೆ ಕಾಣುತ್ತಾರೆ. ಮನೆಯಲ್ಲಿ ಚಿಕ್ಕವಳಾದ ಕಾರಣ ಅಪ್ಪ-ಅವ್ವನ ಏಕಾಂತವನ್ನು ತುಸು ಹೆಚ್ಚೇ ಕಂಡಿದ್ದೇನೆ.
ಅವಶ್ಯಕತೆ ಇಲ್ಲ ಎಂದರೆ ಮಾತೇ ಆಡದ ಅಪ್ಪನ ಮೌನ, ತಾಯಿ ಹತ್ತಿರ ಕೆಲವು ವಿಷಯಗಳನ್ನು ಹೇಳಿಲ್ಲದಿರಬಹುದು ಆದರೆ ಗಂಡನ ಹತ್ತಿರ ಏನನ್ನೂ ಹೇಳದೆ ಉಳಿದಿಲ್ಲ, ನನ್ನ ಗಂಡ ನನಗೆ ತಾಯಿಗಿಂತಲೂ ಹೆಚ್ಚೆಂದ, ಅವ್ವನ ಮಾತು. ಹೊಲದ ಕೆಲಸಗಳನ್ನು ಮುಗಿಸಿ ಬಂದು ಮಳೆಗಾಲದ ಮಧ್ಯಾಹ್ನಗಳಲ್ಲಿ ದಿವಾನಾ ಮೇಲೆ ದಿಂಬಿಗೊರಗಿ ಕುಳಿತು ಪುಸ್ತಕ ಓದುತ್ತಿದ್ದ ಅಪ್ಪ, ಇನ್ನೊಂದು ತುದಿಯಲ್ಲಿ ಕುಳಿತು ಅಡುಗೆಗೆ ಬೇಕಾದುದನ್ನು ಅಚ್ಚುಕಟ್ಟು ಮಾಡಿಕೊಳ್ಳುತ್ತಿದ್ದ ಅವ್ವನ ಚಿತ್ರ ಕಣ್ಣಿನೊಳಗಿನ ಗೊಂಬಿಯಂತೆ ಎದೆಯೊಳಗೆ ನಟ್ಟಿದೆ.
ಮದುವೆ ಅಗತ್ಯವಲ್ಲ ಅನುಭೂತಿ ಎನ್ನುವಂತೆ ಕಾಡುವ ಇಂಥ ಮೌನಸಾಂಗತ್ಯದ ಇನ್ನೊಂದು ದೃಶ್ಯಕಾವ್ಯವನ್ನು ಕಾಣಲು ಮನ ಹಂಬಲಿಸುತ್ತಲೇ ಇದೆ.
ಎಷ್ಟೊಳ್ಳೆ ಡ್ರೆಸ್ ಮಾಡಿಕೊಂಡಿರುತ್ತೇನೆ ಒಂದೇ ಒಂದು ದಿನವೂ ಚೆನ್ನಾಗಿ ಕಾಣ್ತೀ ಎನ್ನದ ಗಂಡನ ಅತಿ ಒಳ್ಳೆಯತನವನ್ನು ಹೇಳಿ ಬಿಕ್ಕುವ ಬಾಲ್ಯ ಸ್ನೇಹಿತೆ, ಮದುವೆಯಾಯಿತು ಮಕ್ಕಳಾಯಿತು ಮನೆ ಕಟ್ಟಿಸುವುದು ಅಥವಾ ಕೆಲಸವೊಂದೇ ಜೀವನ ಎನ್ನುವಂತೆ ವರ್ತಿಸುವ ಕಸಿನ್ಸ್‌ಗಳು, ಬಯಸಿದಾಗ ಸಿಗದ ಗಂಡನ ಸಾಮೀಪ್ಯ ನೆನೆದು ಕೊರಗುವ ಅವರ ಹೆಂಡತಿಯರನ್ನು ನೋಡುವಾಗ ಸುಖಿ ಸಂಸಾರ ಎನ್ನುವುದಕ್ಕೆ ಬೇಕಾದ ಅರ್ಹತೆಗಳಿದ್ದು ಬದುಕಿಗೆ ಅಧಿಕೃತ ಸಾಂಸ್ಥಿಕ ಸಂಬಂಧದಾಚೆಯೂ (Institutionalized relationship) ಬೇರೊಂದು ಆಯಾಮದ ಅಗತ್ಯವಿದೆ ಎನ್ನುವಂತೆ ವರ್ತಿಸಿ, ಅನೌಪಚಾರಿಕ ನೆಲೆಯಲ್ಲಿ ಅರ್ಥಪೂರ್ಣ ಸಂಬಂಧಕ್ಕಾಗಿ ತಡಕಾಡುವ ಸ್ನೇಹಿತ/ಸ್ನೇಹಿತೆಯರನ್ನು ನೋಡುವಾಗ ಮದುವೆಯ ಮೆರಿಟ್ ಅಂಶಗಳಿಗಿಂತ, ಡಿಮೆರಿಟ್ ಅಂಶಗಳೇ ಎದ್ದು ಕಂಡು ಈ ದಾರಿಯೇ ಇಂಥದ್ದಾದರೆ ಇವೆಲ್ಲ ನನಗೆ ಭಾರವಾದ ಬಾಲ ಎಂದೇ ಅನಿಸುತ್ತದೆ.
ಹೀಗೆ ಕೊನೆಯಿಲ್ಲದ ಯೋಚನೆಗಳ ಹೆದ್ದಾರಿಯಲ್ಲಿ ದಿಕ್ಕು-ದೆಶೆ ಇಲ್ಲದೆ ಅಲೆಯುವಾಗ ಇದ್ದಕ್ಕಿದ್ದಂತೆ ನನಗೆ ಬೇಕಾಗಿರುವುದೇನು? ಎನ್ನುವ ಯಕ್ಷಪ್ರಶ್ನೆಯೊಂದು ಸಾವಿರದೊಂದನೆ ಸಲ ಮನದಲ್ಲಿ ಮೂಡುತ್ತದೆ. ಅದಕ್ಕೆ ಮತ್ತದೇ, ಕಾಣದ ಮುಖ ಮನಸಿಗೆ ಪ್ರಿಯವಾಗಿದೆ ಎನ್ನುವಂತೆ ವರ್ಚುವಲ್ ಹುಡುಕಾಟವೊಂದಕ್ಕೆ ಜೋತು ಬೀಳಬೇಕೆನಿಸುವ ಉತ್ತರ.
ಮನಸಿನ ಎಂತಹ ಮ್ಲಾನತೆ, ಗೊಂದಲವನ್ನಾದರೂ ಹೊಡೆದೋಡಿಸುವ ಸಾಧನ ನನ್ನ ಮಟ್ಟಿಗೆ ಇದೊಂದೇ ಏನೋ! ಸ್ವಲ್ಪ ದಿನಗಳ ಹಿಂದೆ ಚಿತ್ರಕಲಾ ಪ್ರದರ್ಶನವೊಂದರ ನೇರ ಪ್ರಸಾರ ನೋಡುತ್ತಿದ್ದವಳಿಗೆ ವರ್ಣ ಸಂಯೋಜನೆಯಿಂದ ಏಕ್ದಂ ಇಷ್ಟವಾದವನ ನಂಬರ್ ಹುಡುಕಿ ಟೆಕ್ಸ್ಟ್ ಮಾಡಿದೆ.
ನನ್ನೊಳಗಿನ ವೈಬ್ರೆಷನ್ ಏಕಕಾಲದಲ್ಲಿ ಅಲ್ಲಿಗೂ ತಲುಪಿ ಮಧ್ಯರಾತ್ರಿಯಲ್ಲಿ typing… ಎಂದು ಜೀವಂತವಾದ ಹಸುರಕ್ಷಗಳ ಮೇಲೆ ಮೋಹ ಮೂಡಿದ್ದು ಸುಳ್ಳಲ್ಲ. ಮೈದಾಳಿದ ಭೇಟಿಯ ಬಯಕೆಗೆ ರಾತ್ರಿಯೇ ಪ್ರಶಸ್ತವೆನಿಸಿತು. ಮನೆ ಮುಂದಿನ ರಸ್ತೆ ಕೊನೆಯಲ್ಲಿ ನಿಂತು, ಎಲ್ಲಿದ್ದೀ? ಎನ್ನುವ ಕರೆಗೆ ಪ್ರತಿಕ್ರಿಯಿಸುವಾಗ ‘ನಾ ನೋಡ್ತಿದ್ದೇನೆ, ರೋಡ್ ಕ್ರಾಸ್ ಮಾಡಿ ಎಡಕ್ಕೆ ತಿರುಗು’ ಎಂದವನ ಎದುರು ನಿಂತರೆ ‘ಒಂದು ರೌಂಡ್ ಹೋಗಿ ಬರೋಣ ಬಾ’ ಎನ್ನುವ ಆಹ್ವಾನ.
ಸ್ವಲ್ಪ ದೂರ ಹೋದ ಮೇಲೆ, ‘ಒಂದು ಲಾಂಗ್ ಡ್ರೈವ್?’ ಎಂದ. “ಛಲೋ” ಎಂದವಳಿಗೆ ಎಲ್ಲಿಗೆ ಹೋಗುತ್ತೇವೆ ಎನ್ನುವುದರ ಬಗ್ಗೆ ಆತಂಕವಿರಲಿಲ್ಲ, ಎಲ್ಲಿ ನಿಲ್ಲುತ್ತೇವೆ ಎನ್ನುವ ಕುರಿತು ಪ್ರಶ್ನೆಗಳೂ ಇರಲಿಲ್ಲ.
ಮಧ್ಯರಾತ್ರಿಯವರೆಗೆ ತಿರುಗುತ್ತಿದ್ದೆವು. ಹಂಪ್ಸ್‌ನಲ್ಲಿ ಮೊದಲ ಸಲ ಆಸರೆಗೆ ತೋಳು ಹಿಡಿದೆ. ಥಂಡಿಗಾಳಿಯ ತಿರುಗಾಟದಲ್ಲಿ ಹುಟ್ಟಿದ ಮೈಚಳಿಗೆ ಬೆನ್ನುಹುರಿಯಲ್ಲಿ ಸಣ್ಣಗೆ ನಡುಕ. ನಟ್ಟಿರುಳಿನಲ್ಲಿ ಭುಜದ ಮೇಲೆ ಗದ್ದವಿಟ್ಟು ಹರಟುತ್ತಿದ್ದವಳನ್ನು ನೋಡಲು ಗಾಡಿಯ ಬಲಗಡೆ ಕನ್ನಡಿ ಸರಿಪಡಿಸಿದವನಿಗೆ ಕಂಡಿದ್ದು ನನ್ನ ತುಟಿಯಂಚಿನ ನಗು, ಮೂಗುತಿಯ ಮಿಂಚು, ಕಣ್ಣಲ್ಲಿ ಹುಚ್ಚೆದ್ದ ಹೊಂಗನಸು.
ವಾಪಸ್ಸು ಬರುವಾಗ ಮನೆ ಹಿಂದಿನ ನಿರ್ಜನ ಸರ್ವೀಸ್ ರಸ್ತೆಯ ಗಿಡದ ಕೆಳಗಡೆ ಗಾಡಿ ನಿಲ್ಲಿಸಿ, ಬದುಕಲ್ಲಿ ಇಂತಹ ಅನಿರೀಕ್ಷಿತ ಖುಷಿಗಳು ಅಕ್ಷಯವಾಗಲಿ ಎಂದು ತೋಳು ಬಳಸಿ, ಬೈತಲೆಗೆ ತುಟಿಯೊತ್ತಿ ಕಳುಹಿಸಿಕೊಟ್ಟ. ಋತಚಿನ್ಮಯಿಯೇ ಹೇಳಿದಂತಿರುವ ಮುಂಗಾರಿನಿರುಳಿನ ಹುಚ್ಚುಹೊಳೆಯಂತಹ ಹುಡುಗಿಯ ಒಲವ ಕತೆ ಮುಂದೇನಾಯ್ತು ಎಂದು ಕೇಳಬೇಡಿ! ತಿಳಿವಳಿಕೆ ಬಂದ ದಿನದಿಂದ ಕಂಡಿದ್ದ ಹೀಗೊಂದು ಲೇಟ್ ನೈಟ್ ರೈಡಿನ ಕನಸು ನನಸಾಯಿತಷ್ಟೇ!!
ಶ್ರೀನಿವಾಸ ಪ್ರಭು ಅಂಕಣ: ಅನಿರುದ್ಧನ ‘ಜಾಮಿಂಗ್ ಸೆಷನ್ಸ್’ ಮತ್ತು ‘ಸಾಮಿ’..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...
0 ಪ್ರತಿಕ್ರಿಯೆಗಳು