ಗಿರೀಶ್ ಕಾಸರವಳ್ಳಿ ಅವರಿಗೆ ಮತ್ತೊಂದು ಸಲಾಮ್!

ಅಭಯ ಸಿಂಹ

ನಾನು ಮಂಗಳೂರಿನಲ್ಲಿ ಡಿಗ್ರಿ ಓದುತ್ತಿದ್ದ ಸಮಯ. ಆಗ ಅಲ್ಲಿ ಗಿರೀಶ್ ಕಾಸರವಳ್ಳಿಯವರು ತಮ್ಮ ಚಿತ್ರವೊಂದಕ್ಕೆ ಚಿತ್ರೀಕರಣ ನಡೆಸುತ್ತಿದ್ದರು. ನನ್ನ ತಂದೆ ಅಶೋಕವರ್ಧನ, ತಮ್ಮ ಪರಿಚಯದವರ ಮೂಲಕ ಕಾಸರವಳ್ಳಿಯವರನ್ನು ಮನೆಗೆ ಆಹ್ವಾನಿಸಿದ್ದರು.

ನಮ್ಮ ಮನೆಯಲ್ಲಿ ‘ದ್ವೀಪ’ ಚಿತ್ರದ ಪ್ರದರ್ಶನ ಹಾಗೂ ಕೆಲವು ಆಪ್ತರೊಂದಿಗೆ ಕಾಸರವಳ್ಳಿಯವರ ಮಾತುಕತೆ ಏರ್ಪಾಡಾಗಿತ್ತು. ಕಾಸರವಳ್ಳಿ, ತಮ್ಮ ಚಿತ್ರೀಕರಣದ ನಡುವೆಯೂ, ನಮ್ಮ ಮನೆಗೆ ಬಂದು, ಮಾತುಕತೆ ನಡೆಸಿ, ನಮ್ಮ ಮನಸ್ಸುಗಳನ್ನರಳಿಸಿ ಹೋಗಿದ್ದರು. ಹಾಗೆ ನಾನು ಮೊದಲ ಬಾರಿಗೆ ಕಾಸರವಳ್ಳಿಯವರನ್ನು ಕಂಡದ್ದು.

ನಾನಿನ್ನೂ ಚಲನಚಿತ್ರ ಅಭ್ಯಾಸದಲ್ಲಿ ಆಗಷ್ಟೇ ಕಣ್ಣುಬಿಡುತ್ತಿದ್ದೆ. ಕಾಸರವಳ್ಳಿಯವರ ಚಿತ್ರದಲ್ಲಿನ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಹಂಬಲ. ದ್ವೀಪ ಚಿತ್ರದಲ್ಲಿ ನಾಗಿ ಹಾಗೂ ಗಣಪನ ಮಧ್ಯದಲ್ಲಿ ಕೃಷ್ಣ ಎನ್ನುವ ಪಾತ್ರ ಬರುತ್ತದೆ. ಈ ಪಾತ್ರದಿಂದಾಗಿ ಗಂಡ-ಹೆಂಡತಿಯರು ಒಂದು ದ್ವೀಪವಾಗುವ ಸುಂದರ ಕಲ್ಪನೆಯಿದೆ.

 

ಇಲ್ಲಿ ಒಂದು ದೃಶ್ಯ ಬರುತ್ತದೆ, ಗಣಪ ಸಿಟ್ಟಿನಲ್ಲಿ ಕುಳಿತಿರುತ್ತಾನೆ. ಅಲ್ಲಿಗೆ ಬರುವ ನಾಗಿಯ ತಂದೆ, ಗಂಡ-ಹೆಂಡಿರ ಮಧ್ಯ ಏನಾಯಿತು ಎಂದು ಕೇಳುತ್ತಾನೆ. ಅದಕ್ಕೆ ಗಣಪ, ಕೃಷ್ಣನನ್ನು ಕೇಳಿ ಎನ್ನುತ್ತಾನೆ. ಆ ಸಂದರ್ಭದಲ್ಲಿಯೇ, ಕೃಷ್ಣನ ಅನುಗ್ರಹ ಸ್ವೀಕರಿಸುತ್ತಿರುವ ಹೆಂಗಸೊಬ್ಬಳ ಚಿತ್ರ ಒಂದು ಹಿಂದೆ ಗೋಡೆಯಲ್ಲಿ ನೇತುಹಾಕಲಾಗಿತ್ತು. ಇದನ್ನು ನೋಡಿ, ನಾಗಿ, ಕೃಷ್ಣನ ಅಧೀನಕ್ಕೊಳಗಾದ ಪರಸ್ತ್ರೀಯಂತೆ ನನಗೆ ಕಾಣಿಸಿತ್ತು.

ನಾನು ಕಾಸರವಳ್ಳಿಯವರನ್ನು ಕೇಳಿದೆ, ಇದು ನಿಮ್ಮ ಮಿಸ್-ಎನ್-ಸೆನ್ ಭಾಗವೇ ಎಂದು. ಒಂದರೆಕ್ಷಣ ಯೋಚಿಸಿದ ಕಾಸರವಳ್ಳಿಯವರು, ಇಲ್ಲ, ಅಲ್ಲಿ ಗೋಡೆ ಒಡೆದಿತ್ತು, ಮುಚ್ಚಲು ಕಲಾ ನಿರ್ದೇಶಕರಿಗೇ ಏನೋ ಕ್ಯಾಲೆಂಡರ್ ಹಾಕಲು ಹೇಳಿದ್ದೆ. ಅವರು ಹಾಕಿರಬೇಕು. ನನಗೆ ನೆನಪಿಲ್ಲ ಎಂದು ಬಿಟ್ಟರು. ನನಗೆ ಸ್ವಲ್ಪ ಪೆಚ್ಚಾದರೂ, ಇಲ್ಲದಿರುವ ಅರ್ಥಗಳನ್ನು ಕಲ್ಪಿಸಿ ಹೇಳುವ, ಆರೋಪಿಸಿ ಹೇಳುವ ನಿರ್ದೇಶಕರು ಇರುವ ಈ ಸಮಯದಲ್ಲಿ, ಗಿರೀಶ್ ಕಾಸರವಳ್ಳಿಯವರ ಸರಳತೆ, ನಿಜ ನನ್ನನ್ನು ತುಂಬಾ ಪ್ರಭಾವಿಸಿತ್ತು.

ಕಾಸರವಳ್ಳಿಯವರು ನಿರ್ದೇಶನ ಮಾಡುವುದನ್ನು ನೋಡುವ ಕುತೂಹಲ ನನ್ನಲ್ಲಿತ್ತು. ಹೀಗಾಗಿ ಅವರ ‘ಗುಲಾಬಿ ಟಾಕೀಸ್’ ಚಿತ್ರೀಕರಣ ನೋಡಲು ಹೋಗಬಹುದೇನೋ ಎಂದು ಅವರ ಒಪ್ಪಿಗೆ ಪಡೆಯಲು ಮಂಗಳೂರಲ್ಲಿ ಅವರು ತಂಗಿದ್ದ ಹೋಟೇಲಿಗೆ ಹೋದೆ.

ವಿಶ್ವ ವಿಖ್ಯಾತ ನಿರ್ದೇಶಕ ಒಂದು ಸಣ್ಣ ಹೋಟೇಲಿನ, ಸಣ್ಣ ಕೋಣೆಯಲ್ಲಿ ಕುಳಿತು ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಎರಡು ನಿಮಿಷ ಕೂರಿಸಿ, ಪ್ರೀತಿಯಿಂದ ಮಾತನಾಡಿ ಕಳಿಸಿದರು. ಚಿತ್ರೀಕರಣಕ್ಕೆ ಬರಲು ಹೇಳಿದರು. ಅಲ್ಲಿಗೆ ಹೋದರೆ, ಕುರ್ಚಿಯಲ್ಲಿ ಕುಳಿತು ‘ಆಕ್ಷನ್ – ಕಟ್’ ಎಂದು ಅಬ್ಬರಿಸುವ ಯಾವುದೇ ಗಲಭೆಯಿಲ್ಲ.

ಕಾಸರವಳ್ಳಿಯವರು, ಅತ್ತಿಂದಿತ್ತ ಓಡಾಡುತ್ತಾ, ರಾಮಚಂದ್ರರೊಂದಿಗೆ ಮೆಲುದನಿಯಲ್ಲಿ ಏನೋ ಮಾತನಾಡುತ್ತಾ ಕೆಲಸ ಮಾಡುತ್ತಿದ್ದರು. ರಾಮಚಂದ್ರ ಹಾಗೂ ಕಾಸರವಳ್ಳಿಯವರನ್ನು ನೋಡಿದರೆ, ಅವರಿಬ್ಬರೂ ಎಂಥಾ ಮಹಾನ್ ಪ್ರತಿಭೆ ಎನ್ನುವ ಯಾವುದೇ ರೀತಿಯ ಪ್ರದರ್ಶನವಿಲ್ಲ! ಚಿತ್ರೀಕರಣದ ರೋಚಕತೆಯ ಬಗ್ಗೆ ನನಗೆ ಆಗ ಸ್ವಲ್ಪ ನಿರಾಸೆಯೇ ಉಂಟಾದರೂ, ಜೀವನ ಪಾಠವಾಗಿ ಅದು ಬಹಳ ಮಹತ್ವದ ಪಾಠವಾಗಿತ್ತು.

ಮುಂದೆ ಪೂನಾದ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಾನು ಸಿನೆಮಾ ನಿರ್ದೇಶನ ಕಲಿಯುವಾಗಲೂ, ಕಾಸರವಳ್ಳಿಯವರು ಓದಿದ ಸಿನೆಮಾ ಶಾಲೆಯಲ್ಲೇ ನಾನು ಓದುತ್ತಿದ್ದೇನೆ ಎನ್ನುವ ಪ್ರಜ್ಞೆ ನನ್ನನ್ನು ಸದಾ ಎಚ್ಚರಿಸುತ್ತಿತ್ತು. ಮುಂದೆ ಅವರನ್ನು ಸಮೀಪದಿಂದ ನೋಡುವ, ಅವರೊಂದಿಗೆ ಚರ್ಚಿಸುವ, ಕಲಿಯುವ ಸಾಕಷ್ಟು ಅವಕಾಶಗಳು ದೊರೆಯಲಾರಂಭಿಸಿದವು.

ಕಾಸರವಳ್ಳಿಯವರು ಸದಾ ಹಿರಿಯಣ್ಣನಂತೆ ನಿಂತು, ತಮ್ಮ ಶಿಷ್ಯನಂತೆ, ನನ್ನನ್ನು ನಡೆಸಿಕೊಂಡು, ಪ್ರೀತಿ ತೋರಿಸುತ್ತಾ ಬಂದರು. ನಾನು ಬೆಂಗಳೂರಿಗೆ ಬಂದಾಗ, ಕಾಸರವಳ್ಳಿಯವರು ಹಾಗೂ ಅವರ ಗೆಳೆಯರು ಸೇರಿ ನಡೆಸುತ್ತಿದ್ದ, ಸಿನೆಮಾ ಪ್ರದರ್ಶನಗಳಲ್ಲಿ, ಚರ್ಚೆಗಳಲ್ಲಿ, ನನ್ನನ್ನೂ ಸೇರಿಸಿಕೊಂಡರು. ಪರಿಚಯ ಈಗ ಗೌರವಪೂರ್ಣ ಸಲಿಗೆಯಾಗಿ ಬೆಳೆಯಿತು. ಅವರು ಸಿನೆಮಾ ನಿರ್ದೇಶಕರಾಗಿ ಎಂಥಾ ಮೇರು ಪ್ರತಿಭೆಯೋ, ವೈಯಕ್ತಿಕವಾಗಿಯೂ ಅಷ್ಟೇ ದೊಡ್ಡ ಹೃದಯದ ಮನುಷ್ಯ.

ಕಳೆದ ವರ್ಷ, ಉತ್ತರಾಖಂಡ್ ನಲ್ಲಿ ನಡೆದ ಸೋನಾಪಾನಿ ಚಿತ್ರೋತ್ಸವದಲ್ಲಿ, ಮೂರು ದಿನ, ಕಾಸರವಳ್ಳಿಯವರೊಂದಿಗೆ ಇರುವ ಅವಕಾಶ ಸಿಕ್ಕಿತ್ತು. ಅಲ್ಲಿನ ಚುಮು-ಚುಮು ಚಳಿಯಲ್ಲಿ, ಕಾಸರವಳ್ಳಿಯವರು ಕಾಫಿ ಹುಡುಕುತ್ತಿದ್ದರು. ಬೆಟ್ಟದ ಮೂಲೆಯಲ್ಲಿ ನಾವಿದ್ದ ಹೋಟೇಲ್ ಮಾತ್ರ ಅಲ್ಲಿ ಇದ್ದದ್ದು. ಹೀಗಾಗಿ, ಅಲ್ಲಿ ಕಾಫಿ ನಾವೇ ಮಾಡಿಕೊಳ್ಳಬೇಕಿತ್ತು.

ಗುರು ಸೇವೆಗೆ ನನಗೆ ಇದೇ ಅವಕಾಶ ಎಂದು, ಅವರಿಗೆ ಕಾಫಿ ಮಾಡಿಕೊಡುವ ನೆಪದಲ್ಲಿ, ಅವರೊಂದಿಗೆ ಕುಳಿತು ಮಾತನಾಡುತ್ತಿದ್ದೆ. ಅವರ ಸಿನೆಮಾ ಕುರಿತಾದ ನೋಟಗಳ ಜೊತೆಯಲ್ಲೇ, ಅವರ ವೃತ್ತಿ ಜೀವನದ ಕುರಿತಾಗಿ ಅವರು ಸಾಕಷ್ಟು ಮಾತನಾಡಿದರು. ವಿರಾಮದ ವೇಳೆಯಲ್ಲಿ, ಅವರ ಕೋಣೆಯಾಚೆ ಕುಳಿತು, ಬಲಪಂಥೀಯ ಚಿಂತನೆಯ ಯಾವುದೋ ಪುಸ್ತಕ ಓದುತ್ತಿದ್ದರು.

ಯಾವ ಪುಸ್ತಕ ಓದುತ್ತಿದ್ದೀರಿ ಸರ್? ಎಂದು ಕುತೂಹಲದಿಂದ ಕೇಳಿದಾಗ, ಬಲಪಂಥೀಯರು ಗಾಂಧಿಯನ್ನು ಹೇಗೆ ಕಂಡಿದ್ದಾರೆ ಎನ್ನುವ ಬಗ್ಗೆ ಓದುತ್ತಿದ್ದೇನೆ ಎಂದರು. ಹಾಗೆ ಮಾತು, ಕಾಸರವಳ್ಳಿಯವರು ತಮ್ಮ ಸಿನೆಮಾಗಳಲ್ಲಿ ಗಾಂಧಿಯನ್ನು ಧ್ಯಾನಿಸುತ್ತಿರುವ ವಿಷಯದ ಕಡೆಗೆ ಹರಿಯಿತು. ಅವರು, ಹೇಗೆ ಗಾಂಧಿಯನ್ನು ಇಂದಿನ ಸನ್ನಿವೇಶದಲ್ಲಿ ಕಾಣುತ್ತಿದ್ದಾರೆ ಎನ್ನುವುದು ಒಬ್ಬ ಕಲಾವಿದ, ತನ್ನ ಕಾಲಕ್ಕೆ ಹೇಗೆ ಸ್ಪಂದಿಸಬಹುದು ಎನ್ನುವುದಕ್ಕೆ ಅದ್ಭುತ ಉದಾಹರಣೆ.

ಗಾಂಧಿಯನ್ನು ಒಬ್ಬ ಮನುಷ್ಯನಾಗಿ ಕಾಣುತ್ತಲೇ, ಅವರನ್ನು ಒಂದು ಸಿದ್ಧಾಂತದ ಪ್ರತಿಪಾದಕನಾಗಿಯೂ ಕಾಣುವುದು, ವ್ಯಕ್ತಿ ಹಾಗೂ ಸಿದ್ಧಾಂತದ ನಡುವಿನ ಕೊಡು-ಕೊಳ್ಳುವಿಕೆಯನ್ನು ಕಾಣುವುದು ಕಾಸರವಳ್ಳಿಯವರ ಗಾಂಧೀ ಧ್ಯಾನದ ಫಲಶ್ರುತಿಯಾಗಿ ನನಗೆ ಕಾಣಿಸುತ್ತದೆ. ಅವರು, ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕಾದ ಸಂದರ್ಭಗಳಲ್ಲಿ ಸದಾ ಗಟ್ಟಿ ಧ್ವನಿಯಾದವರು. ಆದರೆ ಅವರ ಧ್ವನಿ ಸದಾ, ಸಾತ್ವಿಕವಾದದ್ದಾಗಿತ್ತು. ಈ ಸಾತ್ವಿಕತೆಯಲ್ಲಿ ನಾನು ಕಾಸರವಳ್ಳಿಯವರು ಧ್ಯಾನಿಸುವ ಗಾಂಧಿಯನ್ನು ನಾನು ಕಂಡಿದ್ದೇನೆ.

ಸಿನೆಮಾ ಕಲಾವಿದನಾಗಿ ನನಗೆ ಗಿರೀಶ್ ಕಾಸರವಳ್ಳಿಯವರಲ್ಲಿ ಕಾಣುವ ಒಂದು ಪ್ರಭಲ ಅಸ್ತ್ರ, ಅವರಿಗೆ ಮಾಧ್ಯಮದ ಮೇಲೆ ಇರುವ ನಿಯಂತ್ರಣ. ಕಾಸರವಳ್ಳಿಯವರ ಓದುವಿಕೆ ವಿಸ್ತಾರವಾದದ್ದು. ಆದರೆ, ಆ ವಿಸ್ತಾರ ಅವರ ಸಿನೆಮಾ ಬಿಂಬ ನಿರ್ಮಾಣದಲ್ಲಿ (ಈಡಿಯಮ್) ಎಂದೂ ತೊಡಕಾಗವುದಿಲ್ಲ. ಇಂದು ಕನ್ನಡದಲ್ಲಿ ರೂಪುಗೊಳ್ಳುವ ಹೆಚ್ಚಿನ ಚಲನಚಿತ್ರಗಳಲ್ಲಿ, ರೂಪಕಗಳು, ಒಂದೋ ಸಾಹಿತ್ಯಿಕ ರೂಪಕಗಳಾಗಿರುತ್ತವೆ. ಅಥವಾ ಅವು ವಾಚ್ಯವಾಗಿರುತ್ತವೆ.

ಕಾಸರವಳ್ಳಿಯವರು ಇದಕ್ಕೆ ಅಪವಾದ. ಸಿನೆಮಾ ಮಾಧ್ಯಮದ್ದೇ ಆದ ರೂಪಕಗಳನ್ನು ರೂಪಿಸುವಲ್ಲಿ, ಅವುಗಳ ಧ್ವನಿಯನ್ನು ಪ್ರೇಕ್ಷಕರಿಗೆ ಅರ್ಥವಾಗುವಂತೆ ನಿರೂಪಿಸುವುದರಲ್ಲಿ ಕಾಸರವಳ್ಳಿಯವರು ಪ್ರತಿಬಾರಿಯೂ ಯಶಸ್ವಿಯಾಗಿದ್ದಾರೆ. ಇದಕ್ಕಾಗಿಯೇ, ಅವರ ಬಿಂಬ ನಿರ್ಮಾಣದ ಕೆಲಸ ಒಂದು ಕುಸುರಿ ಕೆಲಸದಂತೆ ಕಾಣಿಸುತ್ತದೆ.

ಎಷ್ಟೋ ಬಾರಿ ನಟ-ನಟಿಯರಿಂದ ಅವರು ನಿರ್ದಿಷ್ಟ ಚಲನೆ, ವೇಗ ಇತ್ಯಾದಿಗಳನ್ನು ಅಪೇಕ್ಷಿಸುತ್ತಾರೆ. ಇದು ನಟರಾದವರಿಗೆ ಅವರ ಅಭಿವ್ಯಕ್ತಿಯ ನಿಯಂತ್ರಣದಂತೆ ಕಾಣಬಹುದೇನೋ, ಆದರೆ, ಅದು ಕಾಸರವಳ್ಳಿಯವರ ಅಭಿವ್ಯಕ್ತಿಯ ಕ್ರಮವಾಗಿ ನಾನು ಕಾಣುತ್ತೇನೆ. ಇದರಂತೆಯೇ, ಅವರ ಚಿತ್ರಗಳಲ್ಲಿರುವ ಅಪರಿಪೂರ್ಣತೆಯ ಕಲ್ಪನೆ ನನ್ನನ್ನು ಸದಾ ಪ್ರಭಾವಿಸಿದೆ.

ಸಿನೆಮಾ ವ್ಯಾಕರಣದೊಳಗೆ ಇರುತ್ತಲೇ, ಅವರು ಒಂದು ಅಪೂರ್ಣತೆಯ ಭಾವವನ್ನು ರೂಪಿಸುತ್ತಿರುತ್ತಾರೆ. ಇದು ಕಾಸರವಳ್ಳಿಯವರು ನಿಜ ಜೀವನದ ಅಪರಿಪೂರ್ಣತೆಗೆ, ನಮ್ಮೊಳಗಿನ ಸಂಘರ್ಷಗಳಿಗೆ ಹಿಡಿದ ಕನ್ನಡಿಯಾಗಿ ನನಗೆ ಕಂಡಿದೆ. ಹಾಗೆಯೇ, ಇದು ಕಾಸರವಳ್ಳಿಯವರು, ಒಬ್ಬ ಕಲಾವಿದನಾಗಿ ತಮ್ಮದೇ ಸಿನೆಮಾ ನಿರ್ಮಾಣದ ಚೌಕಟ್ಟನ್ನು ಮೀರುವ ಪ್ರಯತ್ನವಾಗಿಯೂ ನಾನು ಕಂಡಿದ್ದೇನೆ.

ಈ ವಿಷಯವನ್ನು ನಾನು ಮೊದಲು ಗಮನಿಸಿದಾಗ, ಕನ್ನಡದಲ್ಲಿ ಇದೊಂದು ಹೊಸ ರೀತಿಯ ಪ್ರಯತ್ನ ಎಂದು ಅನ್ನಿಸಿ, ಅದನ್ನು ಕಾಸರವಳ್ಳಿಯವರೊಂದಿಗೆ ಮಾತನಾಡಬೇಕು ಎನಿಸಿತು. ಆದರೆ, ನೇರವಾಗಿ ಅವರೊಂದಿಗೆ ಮಾತನಾಡಲು ಸ್ವಲ್ಪ ಅಳುಕು. ಹೀಗಾಗಿ, ಅವರಿಗೆ ಒಂದು ಇ-ಮೇಲ್ ಹಾಕಿದೆ. ನನ್ನ ಗಮನಿಸುವಿಕೆಯನ್ನೂ, ಸಂಶಯಗಳನ್ನೂ ಅವರಿಗೆ ಬರೆದು, ಉದ್ಧಟತನವಾಗಿದ್ದರೆ ಕ್ಷಮಿಸಿ ಸರ್ ಎಂದು ವಿನಂತಿಸಿದ್ದೆ.

ಕಾಸರವಳ್ಳಿಯವರ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ. ತೀರಾ ತಪ್ಪಾಯಿತೇನೋ ಎಂದು ನಾನು ಸುಮ್ಮನಾದೆ. ಕೆಲವು ದಿನಗಳ ನಂತರ ಕಾಸರವಳ್ಳಿಯವರು ಭೇಟಿಯಾದಾಗ, ಆತ್ಮೀಯವಾಗಿ ಕೂರಿಸಿ, ನನ್ನ ಸಂಶಯಗಳನ್ನು ಪರಿಹರಿಸಿ, ವಿವರಿಸಿ ಕಳಿಸಿದ್ದರು.

ಗಿರೀಶ್ ಕಾಸರವಳ್ಳಿಯವರ ಸಿನೆಮಾ ನಿರ್ಮಾಣಗಳಲ್ಲಿ ಸಾಕಷ್ಟು ಚರ್ಚೆಯಾಗಿರುವುದು ಅವರ ಅಳವಡಿಕೆಯ ಕ್ರಮ. ಮೂಲ ಕಥೆಯನ್ನು ನೆಪವಾಗಿ ಬಳಸುತ್ತಾ, ಅದರ ಮೇಲೆ ಹೊಸತೇ ಕಟ್ಟೋಣವೊಂದನ್ನು ಕಟ್ಟುವುದು ಕಾಸರವಳ್ಳಿಯವರ ವಿಶೇಷತೆ. ಈ ಕಥನ ಕ್ರಮ, ನೇರವಾದ ಸಾಹಿತ್ಯ – ಸಿನೆಮಾ ಅಳವಡಿಕೆಯಲ್ಲ. ಹಾಗೇ, ಅದು ಕಥೆಯಷ್ಟೇ ಬಳಸುತ್ತಾ, ಹೊಸತೇ ಪಾತ್ರ, ಸನ್ನಿವೇಶಗಳ ಮೂಲಕ ನಡೆಸುವ ಕಥಾನಕವೂ ಆಗಿರುವುದಿಲ್ಲ.

ಕಾಸರವಳ್ಳಿಯವರ ಕಥನ, ಇವೆರಡರ ನಡುವಿನಲ್ಲಿ ಹರಿಯುವ ಒಂದು ನಿರೂಪಣೆಯಾಗಿರುತ್ತದೆ. ಇಂದು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಅನುಭವಾತ್ಮಕ ನಿರೂಪಣಾ ಕ್ರಮ (ಎಕ್ಸ್ ಪೀರಿಯೆನ್ಶಿಯಲ್ ನರೇಟಿವ್) ಕ್ರಮವಾಗಿ ನನಗೆ ಇದು ಕಾಣಿಸುತ್ತದೆ. ಇಲ್ಲಿ ಕಾಸರವಳ್ಳಿಯವರು ಕಥೆಯ ಮೂಲಕ ಚಿತ್ರದ ಓಟವನ್ನು ಕಟ್ಟಿದರೂ, ಆತ್ಮವನ್ನು ಬಂಧಿಸುವುದು ಅವರ ಕಥನ ಕ್ರಮದಲ್ಲಿ ಎಂದು ನನ್ನ ನಂಬಿಕೆ. ಕೇವಲ ಕಥೆಯಲ್ಲಿ ಕಳೆದುಹೋಗುವ ಪ್ರೇಕ್ಷಕರು, ಧ್ವನಿಯನ್ನು ತಪ್ಪಿಸಿಕೊಳ್ಳದಂತೆ ಕಾಸರವಳ್ಳಿಯವರು ಈ ಮೂಲಕ ಎಚ್ಚರವಹಿಸುತ್ತಾರೆ. ಹೀಗಾಗಿಯೇ ಅವರ ಅಳವಡಿಕೆಯ ಕ್ರಮ ವಿಶಿಷ್ಟವಾದದ್ದು.

ಇತ್ತೀಚೆಗೆ ನನ್ನ ‘ಪಡ್ಡಾಯಿ’ ಚಿತ್ರದ ‘ಚಿತ್ರಕಥೆ ಹಾಗೂ ಚಿತ್ರ ಕಟ್ಟಿದ ಕಥೆ’ ಎನ್ನುವ ಪುಸ್ತಕವನ್ನು ‘ಅಕ್ಷರ ಪ್ರಕಾಶನ’ದವರು ಪ್ರಕಟಿಸಿದ್ದರು. ಗಿರೀಶ್ ಕಾಸರವಳ್ಳಿಯವರು, ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದುಕೊಟ್ಟದ್ದಲ್ಲದೇ, ಪುಸ್ತಕದ ಬಿಡುಗಡೆಗೂ ಬಂದು ಹರಸಿದ್ದರು. ಅಂದು ಅವರು, ಚಿತ್ರವನ್ನು ಕಟ್ಟುವ, ಕಥೆಗಳನ್ನು ಅಳವಡಿಸುವ ಕುರಿತಾಗಿ ಬಹಳ ಸುಂದರ ಉಪನ್ಯಾಸವನ್ನು ನೀಡಿದ್ದರು.

ಗಿರೀಶ್ ಕಾಸರವಳ್ಳಿಯವರ ಕೃತಿಗಳಲ್ಲಿ ಕಂಡದ್ದು, ಅವರಿಂದ ಕಲಿತದ್ದು ಸಾಕಷ್ಟಿದೆ. ಕಾಸರವಳ್ಳಿಯವರಿಗೆ ಎಪ್ಪತ್ತು ವರ್ಷ ತುಂಬಿದೆ! ಅವರು ತಮ್ಮ ಹೊಸ ಸಿನೆಮಾವನ್ನು ಈಗಷ್ಟೇ ಮುಗಿಸಿದ್ದಾರೆ. ಅವರು ನನ್ನಂಥಾ ಎಷ್ಟೋ ಯುವಕರಿಗೆ ಆದರ್ಶವಾಗಿದ್ದಾರೆ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಕನ್ನಡ ಸಿನೆಮಾಕ್ಕೆ, ಕನ್ನಡಕ್ಕೆ, ಕನ್ನಡಿಗರಿಗೆ ಹೆಮ್ಮೆ ತಂದಿತ್ತವರು ಇವರು. ಈ ಸಿನೆಮಾ ಗುರುವಿಗೆ, ಅವರ ಎಪ್ಪತ್ತನೇ ಹುಟ್ಟಿದ ದಿನದ ಶುಭಾಶಯಗಳು. ಇದೇ ನೆಪದಲ್ಲಿ ಅವರಿಗೆ ಮತ್ತೊಂದು ಸಲಾಮ್!

।’ಉದಯವಾಣಿ’ಯಲ್ಲಿ ಈ ಪ್ರಕಟವಾಗಿದ್ದ ಬರಹದ ವಿಸ್ತೃತ ರೂಪ ।

‍ಲೇಖಕರು

December 8, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: