ಪರಿತ್ಯಕ್ತ
ಲಕ್ಷ್ಮೀಕಾಂತ ಇಟ್ನಾಳ
ಸಂಜೆಯೊಂದು ಕಣ್ಣು ಪಿಳುಕಿಸುತ್ತ ಮಂದವಾಗಿ ಸಾಯುತ್ತಿರುವಾಗ
ಊರ ಅಗಸಿಯಾಚೆಯ ಮಠದ ಹಿಂದೆ
ಕಟ್ಟೆಯ ಮೇಲೆ ಕುಳಿತು ಮೆಲ್ಲಗೆ ಪಾರ್ಸಲ್ ಬಿಚ್ಚಿದೆ,
ತಂದ ತುಸು ಹುರಿಗಾಳು ಮೆಲ್ಲುತ್ತ,
‘ಪೆಟ್ ಬಾಟಲಿ’ ತೆಗೆದು ಗ್ಲಾಸ್ಲ್ಲಿ ಸುರುವಿಕೊಂಡೆ,
ಬದುಕಿನ ಈ ಹೆಣಗಾಟ ಮರೆಯಲು ಬಯಸಿ!
ಒಡಕು ಧ್ವನಿಯಲ್ಲಿ ಕೂಗುತ್ತ ಕಾಗೆಯೊಂದು ಕಾಳಿನಾಸೆಗೆ ತುಸು ದೂರವೇ ಹಾರಿ ಕೂತಿತು,
ಎಸೆದೆ, ಅದರತ್ತ ತುಸು, ಸಮೀಪವೇ ಬಂತು ಇನ್ನಷ್ಟು!
ದಿಟ್ಟಿಸಿ ನೋಡಿದವನಿಗೆ ಕಾಗೆಯ ಕಣ್ಣಲ್ಲಿ ” ಅರೆ ಏನಿದು,’ಅಪ್ಪ”!
‘ಅಪ್ಪ, ನೀನಿಲ್ಲಿ’ ಗಾಭರಿಸಿದೆ, ಸುರೆ ಮುಚ್ಚಿಕೊಂಡೆ,
‘ ನಿನ್ನ ನೋಡಿ ಬಂದೆ’ ಎಂದ

ಇದೇ ಸುರೆಯಲ್ಲವೇ? ಕುಡಿದು ಬಂದ ಈ ಅಪ್ಪನನ್ನು ನನ್ನಿಂದ ಹೊರಹಾಕಿಸಿದ್ದು ಅಂದು,
ಮಾಗಿಯ ಗಡಗಡ ಛಳಿಯ ರಾತ್ರಿಯಲ್ಲಿ
ನಡುಗುತ್ತ ಗೂಡುಗಾಲಲ್ಲಿ ಕಟ್ಟೆಮೇಲೆ ಬಿದ್ದವನಿಗೆ ಬೆಳಿಗ್ಗೆ ಏಳಲೂ ತ್ರಾಣವಿರಲಿಲ್ಲ!
ಪಿಟ್ಟೆನ್ನದೆ ಹಳ್ಳಿಗೆ ಹೊರಟು ನಿಂತಿದ್ದ ಮರುದಿನ, ತನ್ನ ಸಣ್ಣ ಗಂಟಿನೊಂದಿಗೆ,
ನನ್ನ ಎದೆ ಒಡೆದು ಗಳ ಗಳ ಅತ್ತುಬಿಟ್ಟಿದ್ದೆ!
ಹೆಗಲ ಮೇಲೆ ಆಡಿಸಿದ್ದೆನಲ್ಲೋ ನಿನಗೆ
ಎಂಟಾನುಯೆಂಟು ದಿನ ತೊಡೆಯ ಮೇಲೆ ಹಾಕ್ಕೊಂಡು
ಕಣ್ಣು ಪಿಳುಕಿಸದೇ ಕುಂತಿದ್ದೆನಲ್ಲೋ,
ಜಗತ್ತೆಲ್ಲಾ .. ಉಳಿಯೋದಿಲ್ಲವೆಂದರೂ, ಉಸಿರು ಬಿಗಿ ಹಿಡಿದು ಕಾದಿದ್ದೆ!
ಹೆಣಗಿ, ಹೈರಾಣಾಗಿ, ಹಣ್ಣಾಗಿರುವೆ ಮಾರಾಯಾ,
ನೆಮ್ಮದಿಯ ನಿದ್ದೆಗಾಗಿ,
ಒಂದು ‘ಡ್ರಾಮು’ ಹಾಕ್ಕೊಂಡು ಬಂದರೆ ಹೊರದಬ್ಬಿ ಬಿಟ್ಟೆಯಲ್ಲೊ,
ಕಿಸನ್ಯಾಳಾ? ನೊಂದು, ಹಿಡಿಯಷ್ಟು ಕುಗ್ಗಿದ್ದ ಅಪ್ಪ
ನಿರುತ್ತರನಾಗಿದ್ದೆ,
ಮೈಯೆಲ್ಲಾ ಪೊರೆ ಬಂದ ದಿನಗಳವು!
ಎಲ್ಲಾ ತಿಳಿದಂತಿದ್ದ ನನಗೆ ಏನೂ ತಿಳಿದಿರಲಿಲ್ಲ
ಏನೂ ಅರಿಯದಂತಿದ್ದ ಅಪ್ಪ ಎಲ್ಲವನ್ನೂ ಅರಿತಿದ್ದ!
ಕಾಗೆ ಮರೆಯಾದರೂ, ಅಪ್ಪ ಮರೆಯಾಗಲಿಲ್ಲ
‘ಮಾಪು’ ಬದಲಾದರೂ, ಸುರೆ ಬದಲಾಗಲಿಲ್ಲ!
ಕಳ್ಳೆ ಮಳ್ಳೆ ಆಡಿಸಿದ್ದ ಅಪ್ಪ , ನಿಶೆಯೊಂದಿಗೆ ನನ್ನೊಡನೆೆ ಬಂದ!
ನನ್ನ ಕಿವಿಯೂದಿ, ನನ್ನದೇ ಹೆಗಲ ಮೇಲಿಟ್ಟು ಗುಂಡು ಹೊಡೆದವರು ಯಾರೋ!
ಅಪ್ಪನ ಕಣ್ಣ ಗೊಂಬೆಯಲ್ಲಿ ಕುಳಿತ ಅಪರಾಧಿ ಮಾತ್ರ ನಾನು!
ರಾತ್ರಿ ನನಗಾಗಿ ಬಾಗಿಲು ದಯಾಭಿಕ್ಷೆಯಂತೆ ತೆರೆಯುತ್ತದೆ,
ಕೇಳಿದಂತೆನಿಸುತ್ತದೆ ನನಗೆ, ಹೊರಗೆ ಅಪ್ಪ ನಿಂತು,
‘ಈಗ ನಿನಗೂ ಹಾಗೆ ಮಾಡಿದರೆ?’
ಬದುಕಿದ್ದೇನೆ ಸಾಯುತ್ತ, ಪರಿತ್ಯಕ್ತನಾಗಿ
ವೃತ ಭಂಗಿತ ಸನ್ಯಾಸಿಯಂತೆ,
ವಲ್ಮೀಕದೊಳು ವೆಜ್ಜಮಾಡಿ
ವೇಣಿಯೊಳು ಹೊದ್ದು ಮಲಗುತ್ತೇನೆ,
ಏಕಾಂಗಿಯಾಗಿ!
ಏಕಾಂತವನ್ನು!
ಅದೇ ಅಪ್ಪನ ಸಾನಿಧ್ಯಕ್ಕಾಗಿ ಹಪಹಪಿಸಿ!






ಅರ್ಥಪೂರ್ಣ ಕವಿತೆ..
ವಲ್ಮೀಕದೊಳು ವೆಜ್ಜಮಾಡಿ
ವೇಣಿಯೊಳು ಹೊದ್ದು ಮಲಗುತ್ತೇನೆ,
ಏಕಾಂಗಿಯಾಗಿ!
ಏಕಾಂತವನ್ನು!
ಮೆಚ್ಚುಗೆಯಾದ ಸಾಲುಗಳು….
nice..good one..! pore banda dinagaLu avu..kaadida saalu..!!shubhavaagali sir..!!!!