ಇದನ್ನೆಲ್ಲ ಹೇಗೆ ಹೇಳಲಿ ಅನ್ನುವುದು ನನ್ನ ಪ್ರಶ್ನೆ ಮತ್ತು ಉತ್ತರ
ನೈನಾ ಆರ್. ಕಣ್ಣನ್
ನನಗೆ ಮಾತು ಬೇಕು. ಪ್ರೀತಿ ಬೇಕು. ತುಂಬ ತುಂಬ ಹರಟಬೇಕು. ನನ್ನೊಳಗಿರುವುದನ್ನೆಲ್ಲ ಹೇಳಿಕೊಳ್ಳಬೇಕು. ಅದಕ್ಕೊಬ್ಬ ಗೆಳತಿಯೋ ಗೆಳೆಯನೋ ಬೇಕು. ಮಕ್ಕಳ ಜೊತೆ ನಾನು ಮಾತಾಡಲಾರೆ. ನನ್ನ ಮಗ ನನಗಿಂತ ಮುಂದಿದ್ದಾನೆ. ಗಂಡನ ಜೊತೆ ಅದನ್ನೆಲ್ಲ ಹೇಳಿಕೊಳ್ಳಲಾರೆ. ಅವನಿಗೆ ಆಸಕ್ತಿಯಿಲ್ಲ. ಪಕ್ಕದ ಮನೆಯಾಕೆಯ ಜೊತೆ ಹಂಚಿಕೊಳ್ಳಲಾರೆ. ನನ್ನ ಗುಟ್ಟುಗಳು ಅವಳಿಗೆ ತಿಳಿಯುವುದು ನನಗೆ ಬೇಕಿಲ್ಲ. ಬೇರೆ ಯಾರಲ್ಲಾದರೂ ಹೇಳಿಕೊಳ್ಳಬೇಕು ಅನ್ನಿಸುತ್ತದೆ.
ಮನೆಯಲ್ಲಿ ಬೇರೆ ಯಾರೂ ಇಲ್ಲ.
ಅದಕ್ಕೆ ನಾನು ಗೆಳೆಯರನ್ನು ಹುಡುಕಿಕೊಂಡು ಹೋಗುತ್ತೇನೆ. ಗೆಳೆಯರು ಯಾವ ರೂಪದಲ್ಲಾದರೂ ಸಿಗಬಹುದು. ಆಟೋ ಡ್ರೈವರ್, ವಾಚ್ಮನ್, ಹಾಲು ಹಾಕುವ ಹುಡುಗ, ಪಾತ್ರೆ ತೊಳೆಯಲು ಬರುವಾಕೆ, ಬಸ್ ಕಂಡಕ್ಟರ್, ಶೆಟ್ಟರ ಅಂಗಡಿಯ ಹುಡುಗ- ಹೀಗೆ ಯಾರು ಬೇಕಿದ್ದರೂ ಆಗಬಹುದು. ಒಂದಷ್ಟು ಮಾತಾಡುವುದಕ್ಕೆ, ಹರಟುವುದಕ್ಕೆ, ಕನಸುಗಳನ್ನು ಹರವುವುದಕ್ಕೆ, ಕಲ್ಪನೆಗಳ ಮೋಡ ಕಟ್ಟುವುದಕ್ಕೆ, ವರ್ತಮಾನವನ್ನು ಮರೆಯುವುದಕ್ಕೆ.
ನಾನು ಪತ್ರಿಕೆ ಓದುವುದಿಲ್ಲ. ಅದು ನನ್ನನ್ನು ಕಳೆದುಕೊಳ್ಳುವ ಹಾಗೆ ಮಾಡುತ್ತದೆ. ಟೀವಿ ನೋಡುವುದಿಲ್ಲ, ಅದು ಸುಳ್ಳು ಹೇಳುತ್ತದೆ. ನಾಟಕ ಮತ್ತೊಂದು ಲೋಕಕ್ಕೆ ಒಯ್ದು ನನ್ನನ್ನು ಮತ್ತಷ್ಟು ವ್ಯಾಮೋಹಿಯನ್ನಾಗಿ ಮಾಡುತ್ತದೆ. ನನ್ನ ಆಶೆಗಳು ಧಗಧಗಿಸುವಂತೆ ಮಾಡುತ್ತದೆ. ಸಿನಿಮಾ ನೋಡಿದಾಗೆಲ್ಲ ನಿರಾಶೆ. ಯಾರೋ ಹೆಣೆದ ಜಾಣತನದ ಕತೆಯಂತೆ ಅದು. ಮ್ಯಾಜಿಕ್ಕು ಮಾಡುವ ಜಾದೂಗಾರನಂತೆ. ಆ ಕ್ಷಣ ಆಹಾ ಅನ್ನುವ ಬೆರಗು. ಆಮೇಲೆ ಏನೂ ಅನ್ನಿಸುವುದೇ ಇಲ್ಲ. ನಿಜಕ್ಕೂ ಮನಸ್ಸಿಗೇನು ಬೇಕು ಅಂತ ಕೇಳಿಕೊಂಡರೆ ಉತ್ತರ ಇಲ್ಲ.
ನಮ್ಮನೆಯ ವಿಶಾಲವಾದ ಹಜಾರದಲ್ಲಿ ಓಡಾಡುತ್ತಿದ್ದಾಗ ಹೀಗೆಲ್ಲ ಅನ್ನಿಸುತ್ತಲೇ ಇರಲಿಲ್ಲ. ಆ ಜಗತ್ತಿನಲ್ಲಿ ನಾನು ಒಂಟಿಯಾಗಿ ಇರಬಲ್ಲವಳಾಗಿದ್ದೆ. ಅಲ್ಲಿ ಗೋಡೆಯೂ ಇರಲಿಲ್ಲ, ಬೇಲಿಯೂ ಇರಲಿಲ್ಲ. ಹೇಳಿಕೊಡುವವಳೂ ಇರಲಿಲ್ಲ, ಹೇಳುವವಳೂ ಇರಲಿಲ್ಲ. ಕಾಲ ಸುಮ್ಮನೆ ಸರಿಯುತ್ತಿತ್ತು, ಮನೆ ಮುಂದಿನ ತೊರೆಯ ಹಾಗೆ. ಆಮೇಲೆ ಅಣೆಕಟ್ಟು ಕಟ್ಟಿಸಿಕೊಂಡಂತೆ ತೊರೆ ವಿಶಾಲವಾಯಿತು, ಕಾಡು ನುಂಗಿತು, ಮನೆ ನುಂಗಿತು. ಎಷ್ಟೋ ಮಂದಿ ನಿರ್ವಸಿತರಾದರು, ನೆಲೆ ಕಳಕೊಂಡರು. ತಮ್ಮ ತಮ್ಮ ದೇವರುಗಳನ್ನು ಬಿಟ್ಟು ಮತ್ತೆಲ್ಲಿಗೋ ಬಂದು ಪುನರ್ವಸತಿ ಕಂಡುಕೊಂಡರು. ಹೊಸ ಮನೆ, ಹೊಸ ಕೆಲಸ, ಹೊಸ ಪರಿಸರ. ಆದರೆ ಅಲ್ಲೇನೋ ಕಳಕೊಂಡೆವು ಅನ್ನುವ ನಿರಂತರ ಭಾವ. ಅದನ್ನು ಮೀರುವುದಕ್ಕೆ ಮಾತು ಬೇಕಾಯಿತು.
ಹೀಗೆಲ್ಲ ಹೇಳುವುದರಿಂದ ನಾನೇನೋ ಹುಡುಕುತ್ತಿದ್ದೇನೆ ಅಂತ ನಿಮಗನ್ನಿಸಬಹುದು. ಖಂಡಿತಾ ಇಲ್ಲ, ನನಗೆ ಹುಡುಕಾಟದಲ್ಲಿ ನಂಬಿಕೆಯಿಂದ. ಹುಡುಕುವುದರಿಂದ ಅದೇನು ಸಿಗುತ್ತದೆ ಹೇಳಿ. ಸತ್ಯಭಾಮೆಯ ಮಾತ್ಸರ್ಯವೇ ನಂಗಿಷ್ಟ. ರುಕ್ಮಿಣಿಯ ವಾತ್ಸಲ್ಯ ಬೋರು ಹೊಡೆಸುತ್ತದೆ. ರುಕ್ಮಿಣಿ ಯಾರನ್ನು ಬೇಕಿದ್ದರೂ ಮದುವೆಯಾಗಿ ಸುಖವಾಗಿರುತ್ತಿದ್ದಳು. ಸತ್ಯಭಾಮೆ ಹಾಗಲ್ಲ, ಅವಳಿಗೆ ಆಯ್ಕೆಗಳಿದ್ದವು. ನನಗೆ ರುಕ್ಮಿಣಿಯಾಗು ಅಂತ ಅಮ್ಮ ಪದೇ ಪದೇ ಹೇಳುತ್ತಿದ್ದರು. ನಾನು ಅದಕ್ಕಾಗಿಯೇ ಆ ವ್ಯಕ್ತಿತ್ವವನ್ನು ವಿರೋಧಿಸುತ್ತಾ ಹೋದೆ. ಸತ್ಯಭಾಮೆ ಪೀಡಿಸಿದಂತೆ ಪೀಡಿಸಿದರೆ ಅದನ್ನು ಅರ್ಥಮಾಡಿಕೊಳ್ಳಬಲ್ಲ ಕೃಷ್ಣ ಮಾತ್ರ ಸಿಗಲಿಲ್ಲ.
ತುಲಾಭಾರ ಮಾಡಿ ಅವನನ್ನು ಗೆಲ್ಲಲಾರೆ ನಾನು. ಆಗ ನಾನು ಸೋಲುತ್ತೇನೆಂದು ಗೊತ್ತು. ಅವನನ್ನು ಗೆಲ್ಲಲು ಹೊರಡುವುದೇ ನನ್ನ ಸೋಲಿನ ಆರಂಭ. ಅವನು ನನ್ನನ್ನು ಗೆಲ್ಲಲು ಯತ್ನಿಸಬೇಕು. ಆದರೆ ಅವನು ಆಗಲೇ ನನ್ನನ್ನು ಗೆದ್ದಾಗಿದೆ ಅಂದುಕೊಂಡಿದ್ದಾನೆ. ಈಗವನು ಗೆಲ್ಲಬೇಕಾಗಿರುವುದು ಜಗತ್ತನ್ನು. ಅದು ಸಂಪತ್ತಿನ ಮೂಲಕ, ದೊಡ್ಡ ಮನೆಯ ಮೂಲಕ, ಲಕ್ಷಾಂತರ ರುಪಾಯಿಯ ಕಾರಿನ ಮೂಲಕ, ಕ್ಲಬ್ಬುಗಳ ಮೆಂಬರ್ಶಿಪ್ಪುಗಳ ಮೂಲಕ. ನಾನು ಅವನನ್ನು ನೋಡಿ ನಗುತ್ತಾ ಹೇಳುತ್ತೇನೆ. ನೀನು ವರುಷಕ್ಕೆ ಐದು ಕೋಟಿ ದುಡಿಯುತ್ತಿ ಅಂತ ಹೆಮ್ಮೆಪಟ್ಟರೆ, ದಿನಕ್ಕೊಂದು ಕೋಟಿ ದುಡಿಯುವ ಶ್ರೀಮಂತ ಮತ್ತೆಲ್ಲೋ ಇರುತ್ತಾನೆ. ಅದು ನನ್ನನ್ನು ರೋಮಾಂಚಗೊಳಿಸುವುದಿಲ್ಲ. ನನ್ನ ನಿರೀಕ್ಷೆಗಳೇ ಬೇರೆ. ನೀನು ಕೂದಲಿಗೆ ಹಚ್ಚುವ ಬಣ್ಣ, ಪಾಲಿಷ್ ಮಾಡಿಕೊಂಡ ಶೂ, ಬ್ರಾಂಡೆಡ್ ಬಟ್ಟೆಬರೆ, ವಿದೇಶಿ ವಾಚು- ಇವೆಲ್ಲಕ್ಕೆ ನಾನು ಸೋಲಲಾರೆ. ನನಗೆ ಮಾತು ಬೇಕು. ನೀನೋ ಮೌನವಾದಿ.
ನಾನೇನೆ ಮಾತಿಗೆ ಮರುಳಾದೆನೋ ಗೊತ್ತಿಲ್ಲ. ನಾನು ಕತೆ ಬರೆಯಬಹುದಾಗಿತ್ತು, ಕವಿತೆ ಬರೆದು ಹೇಳಿಕೊಳ್ಳಬಹುದಿತ್ತು. ನಾಟಕ ಆಡಿ ನಿಸೂರಾಗಬಹುದಿತ್ತು. ಅವೆಲ್ಲವೂ ಬದುಕಿನ ಪ್ರತಿಬಿಂಬ ಅಷ್ಟೇ. ಇಡೀ ದಿನ ನಾಟಕ ಆಡಲಾರೆ, ಪದ್ಯ ತಿದ್ದಲಾರೆ, ಕಥೆ ಗೀಚಲಾರೆ. ಆ ಮಧ್ಯಂತರದಲ್ಲೊಂದು ಬಿಡುವಿದೆ. ಆ ಬಿಡುವಿನಲ್ಲಿ ನನಗೆ ಮತ್ತೇನೋ ಬೇಕು ಅನ್ನುವುದು ಹೊಳೆಯುತ್ತದೆ. ನನ್ನ ಚೇಷ್ಟೆಗಳಿಂದ ನಾನು ಯಾರನ್ನೂ ಗೆಲ್ಲಬಾರದು. ನಾನಿರುವುದು ರಂಜಿಸಲಿಕ್ಕಲ್ಲ, ನಾನು ಇರುವಂತೆಯೇ ಇರಬೇಕು. ಇದ್ದಾಗಲೇ ಮೆಚ್ಚುಗೆ ಆಗಬೇಕು. ಮೆಚ್ಚಿಸಿಕೊಳ್ಳುವುದು ಕೂಡ ಒಂದು ಹಂಬಲ. ಸುಮ್ಮನಿದ್ದೂ ಮೆಚ್ಚಿಸಿಕೊಳ್ಳಬಲ್ಲೆ ಎಂಬುದು ಅಹಂಕಾರ. ಅದರ ನಡುವೆ ಮಾತಿನ ಮರುಳು.
ಗೊತ್ತಿಲ್ಲದಂತೆಯೇ ನಾನು ಮಾತಲ್ಲಿ ಲೀನವಾಗುತ್ತೇನೆ. ಮಾತಾಗುತ್ತೇನೆ. ನನ್ನ ಅಸ್ತಿತ್ವವಿರುವುದೇ ಆಡುವ ಪದಗಳಲ್ಲಿ ಎಂಬಂತೆ ಪದವಾಗುತ್ತೇನೆ. ಹರಟೆಯಲ್ಲ, ಸುದ್ದಿಯಲ್ಲ, ಮಾಹಿತಿಯಲ್ಲ, ಅದರಾಚೆಗೇನೋ ಒಂದು ಶ್ಲೋಕದಂಥ ಮಾತು, ಶ್ಲೇಷೆಯಂಥ ಅರ್ಥ, ಕ್ಲೀಷೆಯಾಗದ ಸಾಲು ಸಿಕ್ಕೀತೆಂದು ಹಂಬಲಿಸುತ್ತೇನೆ. ಮಾತು ಮಾತಾಗಿಯೇ ಉಳಿಯುತ್ತದೆ. ಸೇತುವೆಗಳನ್ನು ಕಟ್ಟುವುದು ದಾಟುವುದಕ್ಕೆಂದು. ಅದು ಅಣೆಕಟ್ಟಲ್ಲ, ನೀರೂ ಹರಿಯುತ್ತಿರುತ್ತದೆ, ಮಂದಿಯೂ ದಾಟುತ್ತಿರುತ್ತಾರೆ. ಎರಡೂ ಸರಾಗವಾದಾಗ ನದಿಯೂ ನೆಮ್ಮದಿ, ದಾಟುವವರಿಗೂ ಸಂಭ್ರಮ.
ಕಟ್ಟೆಯೊಡೆಯದೇ ಇರಬೇಕು ಅಂದರೆ ಸೇತುವೆಯೇ ಬೇಕು. ಅದಕ್ಕೊಂದು ಕಮಾನು, ಬದಿಯಲ್ಲಿ ಕೂರುವುದಕ್ಕೊಂದು ಕಟ್ಟೆ. ಬೀಸಿ ಬರುವ ಗಾಳಿ. ಗಾಳಿಗೊಂದು ಕಂಪು. ಫಳಕ್ಕನೆ ಮಿಂಚಿ ಮರೆಯಾಗುವ ಮೀನು, ಅದಕ್ಕೆಂದೇ ಕಾಯುವ ಮಿಂಚುಳ್ಳಿ, ಎರಡು ಬದಿಯಲ್ಲೂ ಬಿದಿರ ಮೆಳೆ, ಅದರ ನೆರಳು.
ಇದನ್ನೆಲ್ಲ ಹೇಗೆ ಹೇಳಲಿ ಅನ್ನುವುದು ನನ್ನ ಪ್ರಶ್ನೆ.
ಮತ್ತು ಉತ್ತರ.







ಮಾತುಗಳ ಬಗ್ಗೆ ಬೇಸರ ಮಾಡಿಕೊಂಡ ಸಮಯದಲ್ಲಿ ಮಾತನ್ನು ಮೆಚ್ಚಲೇಬೇಕಾದ ಸುಂದರ ಲೇಖನ.ಖುಷಿಯಾಯ್ತು.ತುಂಬಾ ಸಲೀಸಾದ ಬರಹ.(ಸಲೀಸಾಗಿ ಬರೆಯುವುದು ಕಷ್ಟ ಅನ್ನುವುದು ನನ್ನ ಅಭಿಪ್ರಾಯ).ಧನ್ಯವಾದಗಳು.
ಇಷ್ಟೊಳ್ಳೆ ಬರಹಕ್ಕೆ ಮಾತುಗಳಲ್ಲಿ ಏನಾದರೂ ಹೇಳಬೇಕೆನಿಸಿತ್ತು, ಮಾತು ಬೇಕಿತ್ತು ಆದರೆ ಮಾತಿಲ್ಲದೆಯೂ ಹೇಳಬಹುದೇನೋ ಅಂದುಕೊಳ್ಳುತ್ತಾ ಬರೆದೆ…
ಇಷ್ಟವಾಯಿತು.
Nanna maathannella neevu yaavaaga kelisi kondiri ……?
ಮಾತಿನ ಬಗೆಗೆ ಮಾತು ಮರೆಸುವಂತಹ ಚಂದದ ಬರಹ…ಇಷ್ಟವಾಯಿತು…