ಜವಾಬು ಕೊಡದೇ ಬದುಕಿದವಳು
ಯದುಗಳ ಶ್ರೇಷ್ಠ ಶೂರಸೇನನ ಮಗಳವಳು
ಕುಂತಿ ಭೋಜನಿಗೆ ದತ್ತು ಹೋಗಿ ಕುಂತಿಯಾದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಮದುವೆಗೆ ಮುನ್ನವೇ ಮಗುವ ಪಡೆದವಳು
ಪಡೆದ ಮಗುವ ತೊರೆದು ಬಿಟ್ಟವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ತನ್ನ ಸಂಗಾತಿಯ ತಾನೇ ಆರಿಸಿಕೊಂಡವಳು
ಆರಿಸಿಕೊಂಡವನ ಶಾಪವನ್ನೂ ಒಪ್ಪಿಕೊಂಡವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಮತ್ತೆ ದೇವತೆಗಳಿಂದ ಹೆತ್ತವಳು
ಹೆತ್ತ ರೀತಿಗಾಗಿ ಹತ್ತು ಮಾತುಗಳ ಕೇಳಿದಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ತನ್ನ ತನಯರ ಹಕ್ಕಿಗಾಗಿ ಬಡಿದಾಡಿದವಳು
ಅದಕಾಗಿ,ಬಿಟ್ಟ ಹಾದಿಯ ಮತ್ತೆ ತುಳಿದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಒಂದು ಹೆಣ್ಣ ಐದು ಭಾಗ ಮಾಡಿದವಳು
ಲೋಕದೆಲ್ಲ ನಿಯಮ ಮೀರಿದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಮಗನಿಗಿಂತ ಸೊಸೆ ಮೇಲೆಂದ ಏಕೈಕ ಅತ್ತೆಯವಳು
ಅತ್ತೆಯ ಸೆರಗಿನಲಿ ಅಮ್ಮನಾದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಎಲ್ಲ ಬಗೆಯ ಧರ್ಮ ಗೆಲ್ಲಲೆಂದವಳು
ನಿಯತಿ ಮೀರಿ ನಡೆಯಲಾಗದೆಂದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಕಾಮಧೇನು ಮುಂದೆ ನಿಂತಾಗ ಕಷ್ಟ ಕೇಳಿದವಳು
ಕಷ್ಟದಲಿ ನಿನ್ನ ನೆನಪಿರಲೆಂದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಸಾರ್ವಭೌಮ ಮಗನ ಸಿಂಹಾಸನ ದಾಟಿದವಳು
ವಾನಪ್ರಸ್ಥಕೂ ತನ್ನಂತೆಯೇ ನಡೆದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ಬದುಕ ಮೂಸೆಯಲ್ಲಿ ಪೂರ್ಣ ಬೆಂದವಳು
ಮತ್ತೆ ಅಗ್ನಿಗಾಹುತಿಯಾದವಳು
ಅವಳಾವ ಕಷ್ಟಕೂ ಅಂಜಲಿಲ್ಲ
ಲೋಕಕುತ್ತರ ಕೊಡಲಿಲ್ಲ
ನಂಬುವವರಿಗೆ ಕಾರಣ ಬೇಕಿಲ್ಲ
ನಂಬದವರು ಕಾರಣಗಳನೂ ನಂಬಲ್ಲ
ಅದಕವಳುತ್ತರ ಕೊಡಲಿಲ್ಲ








“ನಂಬುವವರಿಗೆ ಕಾರಣ ಬೇಕಿಲ್ಲ; ನಂಬದವರು ಕಾರಣಗಳನೂ ನಂಬಲ್ಲ” -Nice!
ಪ್ರಬುದ್ಧ ಕವಿತೆ. ಆದರೆ ಯಾರು ಬರೆದದ್ದು? ಕವಿಯ ಹೆಸರೇ ಇಲ್ಲವಲ್ಲ?
ಬ್ಲಾಗ್ ಬರಹಗಳಿಗೆ ಅಡಿಟಿಪ್ಪಣಿ ಕೊಡುವುದೊಳಿತು. ಮಾಹಿತಿ ಬಳಸಿಕೊಳ್ಳುವಾಗ ಸುಲಭವಾಗುತ್ತದೆ.