ಜಿ ಪಿ ಬಸವರಾಜು
ಎಲ್ಲೆಲ್ಲೂ ಅತ್ಯಾಚಾರಗಳ ಸುದ್ದಿಯೇ ಕೇಳಿಬರುತ್ತಿರುವ ಕರ್ನಾಟಕ ಅಷ್ಟೊಂದು ಹೀನ ಮಟ್ಟಕ್ಕೆ ಇಳಿದಿರುವ ರಾಜ್ಯವೇ? ಇಲ್ಲಿ ಮುಗ್ಧರು, ಮಕ್ಕಳು, ಒಂಟಿ ಮಹಿಳೆಯರು, ಅಂಗವಿಕಲೆಯರು, ವೃದ್ಧರು-ಇಂಥ ಯಾರೂ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಿಲ್ಲವೇ? ಈ ರಾಜ್ಯದಲ್ಲಿದ್ದ ಸಜ್ಜನಿಕೆ, ಸುಸಂಸ್ಕೃತ ನಡೆ ಎಲ್ಲಿ ಹೋದವು? ಅಥವಾ ಅವೆಲ್ಲ ಇದ್ದದ್ದು ಸುಳ್ಳೆ? ಇಡೀ ಭಾರತದಲ್ಲಿ ಕರ್ನಾಟಕ ಮಾತ್ರ ಇಂಥ ಅಧೋಗತಿಗೆ ಇಳಿದಿದೆಯೇ?
ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್ಸಿಆರ್ಬಿ) ನೀಡುವ ಅಂಕಿ ಅಂಶಗಳ ಪ್ರಕಾರ ಅತ್ಯಾಚಾರದಲ್ಲಿ ಕನರ್ಾಟಕಕ್ಕೆ ಮೊದಲ ಸ್ಥಾನ ಸಿಕ್ಕುವುದಿಲ್ಲ. ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ ಮತ್ತು ಉತ್ತರ ಪ್ರದೇಶಗಳು ಪೈಪೋಟಿಯಲ್ಲಿವೆ. ಇಡೀ ರಾಷ್ಟ್ರದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಈ ಮೇಲಿನ ರಾಜ್ಯಗಳ ಕೊಡುಗೆ ಶೇ.40 ರಷ್ಟು.
ದೆಹಲಿಯಲ್ಲಿ 2012ರ ಡಿಸೆಂಬರ್ನಲ್ಲಿ ನಡೆದ ನಿರ್ಭಯ ಪ್ರಕರಣ ಇಡೀ ರಾಷ್ಟ್ರದಲ್ಲಿ ಕೋಲಾಹಲವನ್ನು ಎಬ್ಬಿಸಿತು. ಜನ ಬೆಚ್ಚಿಬೀಳುವಂತೆ ಮಾಡಿತು. ಇದರಿಂದ ನಾಡು ಎಚ್ಚರಗೊಂಡಿತೇ? ಹಾಗೇನೂ ಕಾಣುವುದಿಲ್ಲ. ನಂತರದ ವರ್ಷ, ಅಂದರೆ 2013ರ ಅತ್ಯಾಚಾರ ಪ್ರಕರಣಗಳಲ್ಲಿ ಶೇ 60 ರಷ್ಟು ಹೆಚ್ಚಳ ಕಾಣಿಸಿದೆ ಎಂದು ಎನ್ಸಿಆರ್ಬಿ ಹೇಳುತ್ತದೆ.
ವಸ್ತುಸ್ಥಿತಿ ಏನು? ಎಲ್ಲ ಅತ್ಯಾಚಾರ ಪ್ರಕರಣಗಳು ಬಯಲಿಗೆ ಬರುವುದಿಲ್ಲ. ಅತ್ಯಂತ ಘೋರವಾದ, ಅಮಾನುಷವಾದ, ಪ್ರತಿಯೊಬ್ಬ ಮಾನವಂತನೂ ತಲೆತಗ್ಗಿಸಿಬೇಕಾದ ಈ ಅತ್ಯಾಚಾರ ಸಂಗತಿಗಳು ಮುಚ್ಚಿಹೋಗುವ ಸಂಭವವೇ ಹೆಚ್ಚು. ಅತ್ಯಾಚಾರಕ್ಕೆ ಒಳಗಾದ ಮುಗ್ಧರಿಗಾಗುವ ಆಘಾತ, ಸಮಾಜದಲ್ಲಿ ಅವರನ್ನು ನೋಡುವ ರೀತಿ, ಅವರ ಭವಿಷ್ಯದ ಸವಾಲುಗಳು ಇತ್ಯಾದಿ ಹಲವಾರು ಕಾರಣಗಳಿಂದಾಗಿ ಇಂಥ ಪ್ರಕರಣಗಳು ಪೊಲೀಸರ ಬಳಿಗೆ ಬರುವುದೇ ಅಪರೂಪ. ದೂರುಗಳನ್ನು ತರುವ ಪೊಲೀಸ್ ಠಾಣೆಗಳಾದರೂ ಸುರಕ್ಷಿತ ಜಾಗಗಳೇ?
ಹೀಗಾಗಿ ಭಾರತದಲ್ಲಿ ವರದಿಯಾಗುವ ಅತ್ಯಾಚಾರ ಪ್ರಕರಣಗಳಿಗಿಂತ ವರದಿಯಾಗದೇ, ದೂರು ದಾಖಲಾಗದೇ ಉಳಿಯುವ ಪ್ರಕರಣಗಳು ಹೆಚ್ಚು. ಈ ನಾಡಿನಲ್ಲಿ ಅತ್ಯಾಚಾರಕ್ಕೆ ಒಳಗಾಗುವವರು ಹೆಚ್ಚಾಗಿ 18 ವರ್ಷದ ಒಳಗಿನವರೇ. ಅತ್ಯಾಚಾರಕ್ಕೆ ಒಳಗಾಗುವ ಪ್ರತಿ ಹತ್ತು ಜನರಲ್ಲಿ ಒಬ್ಬರು 14 ವರ್ಷದ ಒಳಗಿವರು ಎಂಬುದೂ ಅತ್ಯಂತ ನೋವಿನ ಸಂಗತಿ.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಭಾರತಕ್ಕೆ ಜಗತ್ತಿನಲ್ಲಿ ಮೂರನೇ ಸ್ಥಾನವಿದೆ. ಹಾಗಾದರೆ ಮೊದಲ ಸ್ಥಾನದ ‘ಗೌರವ’ವನ್ನು ಪಡೆದ ಮಹಾನ್ ರಾಷ್ಟ್ರ ಯಾವುದು? ಅನುಮಾನವೇ ಬೇಡ, ಅದು ಅಮೆರಿಕ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿರುವ ಸಾಂಪ್ರದಾಯಿಕ ಕಟ್ಟುಪಾಡುಗಳು, ಕುಟುಂಬ ವ್ಯವಸ್ಥೆಯಲ್ಲಿನ ಉಸಿರು ಬಿಗಿಹಿಡಿದು ಬದುಕಬೇಕಾದ ಪರಿಸ್ಥಿತಿ, ಲೈಂಗಿಕ ವಿಚಾರಗಳಲ್ಲಿನ ಮುಚ್ಚುಮರೆ ಈ ಅತ್ಯಾಚಾರ ಪ್ರಕರಣಗಳ ಹೆಚ್ಚಳದ ಹಿಂದೆ ಕೆಲಸ ಮಾಡುತ್ತಿರಬಹುದೇ ಎಂಬ ವಿಶ್ಲೇಷಣೆಗೆ ಹೆಚ್ಚು ಬೆಲೆ ಇದ್ದಂತಿಲ್ಲ. ಯಾಕೆಂದರೆ ಅಮೆರಿಕವನ್ನು ಮುಕ್ತ ರಾಷ್ಟ್ರ ಎಂದು ಹೇಳಲಾಗುತ್ತಿದೆ. ಅಲ್ಲಿ ಲೈಂಗಿಕ ತಿಳುವಳಿಕೆಯೂ ಹೆಚ್ಚು. ಮಕ್ಕಳು ಅಲ್ಲಿ ಈ ವಿಚಾರದಲ್ಲಿ ಮುಗ್ಧರಾಗಿರುವುದಿಲ್ಲ. ಆದರೂ ಅಲ್ಲೇಕೆ ಹೆಚ್ಚು ಅತ್ಯಾಚಾರಗಳು ನಡೆಯುತ್ತಿವೆ? ಇದು ಆಳ ಅಧ್ಯಯನಕ್ಕೆ ಅವಕಾಶ ಕೊಡುವ ವಿಚಾರವಾಗಬಲ್ಲದು.

ನಿರ್ಭಯ ಪ್ರಕರಣ ಮಾಧ್ಯಮಗಳಲ್ಲಿ ಪಡೆದುಕೊಂಡ ಪ್ರಚಾರದಿಂದ ಪ್ರಯೋಜವೇನಾಯಿತು? ನಂತರದ ಬೆಳವಣಿಗೆಗಳಿಂದ ಜನ ಸಮುದಾಯಕ್ಕೆ ದೊರಕಿದ ಪ್ರಯೋಜನವೇನು? ಒಂದಿಷ್ಟು ಧೈರ್ಯ, ಒಂದಿಷ್ಟು ತಿಳುವಳಿಕೆ ಅತ್ಯಾಚಾರಕ್ಕೊಳಗಾದವರಲ್ಲಿ ಬಂದಿರಬೇಕು. ಮುಚ್ಚಿಹೋಗುತ್ತಿದ್ದ ಪ್ರಕರಣಗಳು ಬಯಲಿಗೆ ಬಂದಿವೆ; ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇಲ್ಲವಾದರೆ ಇಂಥ ಪ್ರಕರಣಗಳಲ್ಲಿ ಶೇ 60 ರಷ್ಟು ಹೆಚ್ಚಳ ಹೇಗೆ ಸಾಧ್ಯ?
ಇಂಥ ಅಮಾನುಷ ಕೃತ್ಯವನ್ನು ತಡೆಯುವುದು ಹೇಗೆ? ಅನೇಕರಿಗೆ ಈ ಪ್ರಶ್ನೆ ಸರಳವಾಗಿರುವಂತೆ ಕಾಣಿಸುತ್ತಿದೆ. ಅದಕ್ಕಾಗಿಯೇ ಗುಂಡು ಹೊಡೆದಂತೆ ಉತ್ತರಗಳು ಬರುತ್ತಿವೆ. ಹೆಚ್ಚಾಗಿ ರಾಜಕಾರಣಿಗಳೇ ಈ ಉತ್ತರವನ್ನು ನೀಡುತ್ತಿದ್ದಾರೆ. ಎಲ್ಲರ ಉತ್ತರ ಒಂದೇ ರೀತಿ ಇರುವಂತಿದೆ: ‘ಅತ್ಯಾಚಾರಿಗಳಿಗೆ ಕಂಡಲ್ಲಿ ಗುಂಡಿಕ್ಕಿ.’ ‘ಗಲ್ಲಿಗೇರಿಸಿ.’ ‘ಮರಣದಂಡನೆ ಕೊಡಿ.’
ಪ್ರಶ್ನೆ ಇರುವುದು ಯಾರಿಗೆ ಗುಂಡಿಕ್ಕುವುದು? ಅತ್ಯಾಚಾರಿಗಳು ಎಲ್ಲಿದ್ದಾರೆ? ಎಲ್ಲದಕ್ಕೂ ಸುಲಭ ಉತ್ತರವನ್ನು ಕೊಡುತ್ತಿರುವ ರಾಜಕಾರಣಿಗಳನ್ನೇ ನೋಡಿ: ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಎಷ್ಟೊಂದು ಜನ ನಮ್ಮ ಪ್ರತಿನಿಧಿಗಳಾಗಿ ಶಾಸನಗಳನ್ನು ರೂಪಿಸುವ ಜಾಗದಲ್ಲಿ ಕೂತಿದ್ದಾರಲ್ಲಾ! ಶಾಸನ ಸಭೆಗಳಲ್ಲಿ ಗಂಭೀರ ಚಚರ್ೆಗಳು, ವಿಚಾರ ಮಂಥನಗಳು ನಡೆಯುವ ಹೊತ್ತಿನಲ್ಲಿ ಮೊಬೈಲ್ನಲ್ಲಿ, ಇಂಟರ್ನೆಟ್ ಬಳಸಿ ಲೈಂಗಿಕ ಚಿತ್ರಗಳನ್ನು, ವೀಡಿಯೋಗಳನ್ನು ನೋಡಿ ಮೈಮರೆಯುವ ಶಾಸಕರು, ಸಂಸತ್ಸದಸ್ಯರು ನಮ್ಮ ಪ್ರತಿನಿಧಿಗಳಲ್ಲವೇ?
ನಾವೆಲ್ಲ ಇನ್ನೂ ಬಲವಾಗಿ ನಂಬಿಕೊಂಡಿರುವ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಾಚಾರಿಗಳು ಇಲ್ಲವೇ? ವೃತ್ತಿಗೆ ಅದೇ ತಾನೇ ಕಾಲಿಟ್ಟ ಯುವತಿಯರಿಗೆ ಲೈಂಗಿಕ ಕಿರುಕುಳ ಕೊಡುವ, ಅವರನ್ನು ಕಾಡಿ ಎಳೆ ಹರೆಯದ ಮನಸ್ಸುಗಳನ್ನು ಮುರಿಯುವ ನ್ಯಾಯಾಧೀಶರು, ಹಿರಿಯ ವಕೀಲರು ನಮ್ಮ ಈ ವ್ಯವಸ್ಥೆಯಲ್ಲಿ ಇಲ್ಲವೇ? ಹಲವಾರು ಪ್ರಕರಣಗಳು ವರದಿಯಾಗಿವೆಯಲ್ಲ.
ಪತ್ರಕರ್ತರಲ್ಲಿ? ಸಾಹಿತಿಗಳಲ್ಲಿ? ಬುದ್ಧಿಜೀವಿಗಳಲ್ಲಿ? ಅನೇಕರು ಈಗಾಗಲೇ ಅತ್ಯಾಚಾರ ಪ್ರಕರಣಗಳ ಆರೋಪ ಹೊತ್ತು ಕಂಬಿ ಎಣಿಸುತ್ತಿದ್ದಾರಲ್ಲಾ.
ಇನ್ನು ಅಧ್ಯಾಪಕರು? ಅವರೇ ಈಗ ಹೆಚ್ಚು ಸುದ್ದಿಯಲ್ಲಿರುವವರು. ಏನೂ ಅರಿಯದ, ತೀರ ಎಳೆಯ ಮಕ್ಕಳ ಮೇಲೆ ರಾಕ್ಷಸರಂತೆ ಎರಗುವ ಈ ಅಧ್ಯಾಪಕರು ಇಲ್ಲದ ಶಿಕ್ಷಣ ವ್ಯವಸ್ಥೆ ಎಲ್ಲಿದೆ?
ಪೊಲೀಸರು? ಇವರನ್ನು ಕಂಡರೇ ಜನ ಬೆಚ್ಚಿಬೀಳುತ್ತಾರಲ್ಲಾ?
ಧಾರ್ಮಿಕ ಮುಖಂಡರು? ಅಧ್ಯಾತ್ಮ, ಯೋಗ, ಸಂಗೀತಗಳ ಮೂಲಕ ಬೇರೊಂದು ಲೋಕದ ಹಾದಿಯನ್ನು ತೋರಿಸುವ ಗುರುಗಳು? ಇಂಥ ಬಹುಪಾಲು ಆಶ್ರಮಗಳು ರಾಸಲೀಲೆಯ ಕೇಂದ್ರಗಳಲ್ಲವೇ? ಇಂಥ ‘ಗುರು’ಗಳ ಬಳಿಗೆ ರಾಜಕಾರಣಿಗಳ, ಸಿನಿಮಾ ನಟನಟಿಯರ, ಹಣದ ಚೀಲ ಹಿಡಿದವರ ಹಿಂಡೇ ಹೋಗುತ್ತಿದೆಯಲ್ಲಾ!
ಈಗ ಹೇಳಿ, ಯಾರಿಗೆ ಗುಂಡಿಕ್ಕುವುದು? ಒಬ್ಬನಿಗೆ ಗುರಿ ಇಟ್ಟರೆ, ಅವನ ಹಿಂದೆ ಎಷ್ಟೊಂದು ಜನ ಇದ್ದಾರಲ್ಲಾ.
ಅತ್ಯಂತ ಹೇಯ ಪ್ರಕರಣಗಳು ವರದಿಯಾದಾಗ ನಮ್ಮ ರಾಜಕಾರಣಿಗಳು ಆಡುವ ಮಾತುಗಳೂ ರೋಚಕವಾಗಿರುತ್ತವೆ. ‘ಭಗವಂತನೇ ಭೂಮಿಗೆ ಅವತರಿಸಿ ಬಂದರೂ ಇಲ್ಲಿನ (ಉತ್ತರ ಪ್ರದೇಶ) ಅತ್ಯಾಚಾರಗಳನ್ನು ತಡೆಯಲು ಸಾಧ್ಯವಿಲ್ಲ’ ಎಂದು ಉತ್ತರ ಪ್ರದೇಶದ ರಾಜ್ಯಪಾಲರೇ ಹೇಳಿದರು. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗರ ಹೇಳಿಕೆಯಂತೂ: ‘ಹುಡುಗರು ಹುಡುಗರೇ, ಅವರು ತಪ್ಪು ಮಾಡುತ್ತಾರೆ.’
ಅತ್ಯಾಚಾರ ಪ್ರಕರಣಗಳು ಜೋರಾಗಿ ಗದ್ದಲ ಏಳಿಸಿ, ಸಾರ್ವಜನಿಕರ ಸಿಟ್ಟು ಮುಗಿಲುಮುಟ್ಟಿದಾಗ ಸಕರ್ಾರಗಳು ಪ್ರಕಟಿಸುವ ಕಾರ್ಯಕ್ರಮಗಳೆನೋ ಗಂಭೀರವಾಗಿರುತ್ತವೆ. ಆದರೆ ಅವುಗಳ ಕಾರ್ಯಸಾಧ್ಯತೆ? ನಿರ್ಭಯ ಪ್ರಕರಣದ ನಂತರ ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ದೇಶದ ಉದ್ದಗಲಕ್ಕೂ 660 ‘ನಿರ್ಭಯ ಕೇಂದ್ರ’ಗಳನ್ನು ಸ್ಥಾಪಿಸುವುದಾಗಿ ಹೇಳಿತು. ರಾಷ್ಟ್ರದಲ್ಲಿರುವ 640 ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು, ಜೊತೆಗೆ ಇನ್ನೂ 20 ಹೆಚ್ಚಿನ ನಿರ್ಭಯ ಕೇಂದ್ರಗಳು ಆರಂಭವಾಗುತ್ತವೆ ಎಂದು ಹೇಳಿತು. ಸುಮಾರು 477 ಕೋಟಿ ವೆಚ್ಚದ ಈ ಯೋಜನೆಯನ್ನು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕಾರ್ಯರೂಪಕ್ಕೆ ತರುತ್ತದೆ ಎಂದೂ ಸಾರಿತು.
‘ನಿರ್ಭಯ ಕೇಂದ್ರ’ ಅತ್ಯಾಚಾರ, ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ ಇತ್ಯಾದಿ ಈ ಬಗೆಯ ಪ್ರಕರಣಗಳಲ್ಲಿ ನೊಂದವರು ಬರಬಹುದಾದ ಜಾಗ ಇದು. ಅವರಿಗೆ ನ್ಯಾಯ, ರಕ್ಷಣೆ, ಮಾನಸಿಕ ಧೈರ್ಯ, ತಾತ್ಕಾಲಿಕ ಸೂರು, ಕಾನೂನಿನ ನೆರವು, ವೈದ್ಯಕೀಯ ಸೌಲಭ್ಯ ಎಲ್ಲವೂ ಇಲ್ಲಿ ಸಿಕ್ಕಬೇಕು ಎಂಬುದು ಆಶಯ. ಇದಕ್ಕೆ ದೊಡ್ಡ ಪ್ರಮಾಣದ ಹಣ ಬೇಕಾಗುತ್ತದೆ. ಜೊತೆಗೆ ವಕೀಲರು, ವೈದ್ಯರು, ಮನೋವಿಜ್ಞಾನಿಗಳು, ಸಾಮಾಜಿಕ ಕಾರ್ಯಕರ್ತರು ಇತ್ಯಾದಿ ಲಕ್ಷಾಂತರ ಸಿಬ್ಬಂದಿಯ ನೇಮಕವೂ ಆಗಬೇಕಾಗುತ್ತದೆ. ಅಷ್ಟೊಂದು ಸುಲಭದಲ್ಲಿ ಇದೆಲ್ಲ ಕಾರ್ಯಗತಗೊಳ್ಳುತ್ತದೆಯೇ?
ಅತ್ಯಾಚಾರದಲ್ಲಿ ನೊಂದವರಿಗೆ ಈಗಿರುವ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಷ್ಟು ತ್ವರಿತವಾಗಿ ಪರಿಹಾರ ಸಿಕ್ಕುತ್ತದೆ ಎಂಬುದನ್ನೇ ಗಮನಿಸಿ. 2013ರಲ್ಲಿ ನ್ಯಾಯಾಲಯಗಳ ಮುಂದೆ ಬಂದ ಪ್ರಕರಣಗಳಲ್ಲಿ ವಿಚಾರಣೆ ಪೂರ್ತಿಯಾಗಿರುವ ಪ್ರಕರಣಗಳ ಸಂಖ್ಯೆ ಶೇ 15.3 ರಷ್ಟು ಮಾತ್ರ. ಅಂದರೆ ಸುಮಾರು ಶೇ 85 ರಷ್ಟು ಪ್ರಕರಣಗಳು ಬಾಕಿ ಉಳಿದಿವೆ. ವಿಚಾರಣೆ ಮುಗಿದ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವ ಪ್ರಕರಣಗಳು ಶೇ 31.5 ರಷ್ಟು. ಇದಕ್ಕೆ ಕಾರಣ ಪೋಷಕರು ತಮ್ಮ ಮಕ್ಕಳನ್ನು ನ್ಯಾಯಾಲಯಕ್ಕೆ ಕರೆದುತರಲು ಹಿಂದೇಟು ಹಾಕುತ್ತಿರುವುದು; ಅತ್ಯಾಚಾರದಿಂದ ಮಾನಸಿಕವಾಗಿ ಆಘಾತಕ್ಕೀಡಾದ ಮಕ್ಕಳು ಗೊಂದಲಕಾರೀ ಹೇಳಿಕೆಗಳನ್ನು ನೀಡುವುದು-ಇವೆಲ್ಲ ಆರೋಪಿಯನ್ನು ಅಪರಾಧಿಯಾಗಿ ಮಾಡುವಲ್ಲಿ ಇರುವ ಅಡಚಣೆಗಳು.
2012ರಲ್ಲಿ ಕೇಂದ್ರ ಸಕರ್ಾರ ಮಕ್ಕಳನ್ನು ಅತ್ಯಾಚಾರದಿಂದ ರಕ್ಷಿಸುವುದಕ್ಕಾಗಿ ವಿಶೇಷ ಕಾಯಿದೆಯೊಂದನ್ನು ರೂಪಿಸಿತು. ಇದನ್ನು ‘ಪೊಸ್ಕೊ’ ಎಂದು ಸಂಕ್ಷಿಪ್ತವಾಗಿ ಹೇಳುತ್ತಾರೆ. ಈ ಕಾಯಿದೆಯನ್ನು ಜಾರಿಗೆ ತಂದನಂತರ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಿದವೆಂಬ ವ್ಯಂಗ್ಯವೂ ನಮ್ಮ ಸಮಾಜದಲ್ಲಿದೆ. ಈ ಕಾಯಿದೆಯ ಸೆಕ್ಷನ್ 28ರ ಪ್ರಕಾರ ರಾಜ್ಯ ಸಕರ್ಾರಗಳು, ಲೈಂಗಿಕ ಅಪರಾಧಗಳ ವಿಚಾರಣೆ ತ್ವರಿತಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಹೊಣೆಯನ್ನು ಹೊರಬೇಕಾಗುತ್ತದೆ. ರಾಜ್ಯ ಸಕರ್ಾರಗಳು ಈ ಕರ್ತವ್ಯವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಕೊಟ್ಯಂತರ ರೂಪಾಯಿಗಳ ಖರ್ಚು, ಲಕ್ಷಾಂತರ ಹುದ್ದೆಗಳ ಸೃಷ್ಟಿ ಮತ್ತು ನೇಮಕಾತಿ ಇತ್ಯಾದಿ ಎಲ್ಲವೂ ನಡೆಯಬೇಕಾಗುತ್ತದೆ. ನ್ಯಾಯಾಲಯಗಳ ಕಟ್ಟಡಗಳ ವಿಸ್ತರಣೆಯೂ ಆಗಬೇಕಾಗುತ್ತದೆ.
ರಾಜಕಾರಣಿಗಳು ನೀಡುವ ಭರವಸೆಗಳು ಪೊಳ್ಳಾಗುವುದರ ಹಿಂದಿನ ಕಾರಣಗಳು ಇಲ್ಲಿರುತ್ತವೆ. ಅವರ ನಿಷ್ಠೆಯೂ ಪ್ರಶ್ನಿಸುವಂತಿರುತ್ತದೆ.
ಇಡೀ ಸಮಾಜ ಇಂಥ ಸಮಸ್ಯೆಗಳ ಆಳಕ್ಕಿಳಿದು ಚಿಂತಿಸಬೇಕು; ಆಗ ನಿಜವಾದ ಪರಿಹಾರದ ದಾರಿಗಳು ಕಾಣಬಹುದು. ಇಲ್ಲವಾದರೆ ಗುಂಡಿಕ್ಕುವ ಹೇಳಿಕೆಗಳು ನಿರಾಯಾಸವಾಗಿ ಹೊಮ್ಮುತ್ತಲೇ ಇರುತ್ತವೆ.



ಮಾನ್ಯರೇ, ಇದೊಂದು ರೀತಿಯ ಸಾಮಾಜಿಕ ಪಿಡುಗು ಎನ್ನಬಹುದು. ಅತ್ಯಾಚಾರ ಎಂದರೆ ಅತ್ಯಾಚಾರವೇ, ಅದರ ಬಗ್ಗೆ ನಮ್ಮ ದೇಶದಲ್ಲಿ ಎಷ್ಟು ರಾಜ್ಯದಲ್ಲಿ ಎಷ್ಟು ಎಂಬುದನ್ನು ಲೆಕ್ಕಹಾಕುವುದು ಸರಿಯಲ್ಲ. ಇದನ್ನು ತೊಡೆಯಲು ಟೀಮ್ ವರ್ಕ್ ಎಂದು ಹೇಳಬಹುದು. ಅದರಲ್ಲೂ ಮುಖ್ಯವಾಗಿ, ತಪ್ಪಿತಸ್ತರಿಗೆ ಶಿಕ್ಷೆ ನೀಡಲು ನಮ್ಮ ಪೊಲೀಸರು ಮನಸ್ಸು ಮಾಡಿದರೆ, ಒಂದೆರಡು ದಿನಗಳಲ್ಲಿ ಹತೋಟಿಗೆ ತರಬಹುದು. ಈ ಬಗ್ಗೆ ಪ್ರಾಮಾಣಿಕವಾಗಿ,ಮುಕ್ತವಾಗಿ ಕಾರ್ಯ ನಿರ್ವಹಿಸಲು ಬಿಡಬೇಕಷ್ಟೇ. ಒಬ್ಬ ಅತ್ಯಾಚಾರಿಗೆ ಶಿಕ್ಷೆ ಆಗುವುದು ಬಿಡುವುದು ಅವರ ಕೈಯ್ಯಲ್ಲಿರುತ್ತದೆ. ದೂರು,ಸಾಕ್ಷಾಧಾರಗಳು, ಸಾಕ್ಷಿಗಳ ಕಲೆ ಹಾಕುವುದರಿಂದ ಇದು ಸಾಧ್ಯ.ಇಂತಹ ಪ್ರಕರಣಗಳನ್ನು ಪೊಲೀಸರು ಚಾಲೆಂಜ್ ಆಗಿ ತೆಗೆದುಕೊಳ್ಳಬೇಕು.ಇದಕ್ಕೆ ಸರಕಾರ ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕಷ್ಟೇ