ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅತ್ತಿತ್ತ ಆಡೋ ಜುಮಕಿ ಮುತ್ತಿಟ್ಟು ಕೆನ್ನೆ ಹಿಸುಕಿ..

ರಂಗಭೂಮಿ ಹಾಗೂ ಕ್ಯಾಮೆರಾ ಎರಡನ್ನೂ ಸಮಾನವಾಗಿ ಪ್ರೀತಿಸುವವರು ನಾಗರಾಜ ಸೋಮಯಾಜಿ.

ಇತ್ತೀಚಿಗೆ ತಾನೇ ‘ಫೋಕಸ್’ ಎನ್ನುವ ತಮ್ಮದೇ ಕನಸಿಗೆ ಗರಿ ಕಟ್ಟಿದ್ದಾರೆ.

ಸೋಮಯಾಜಿ ತೆಗೆದ ಒಂದು ಫೋಟೋ ‘ಅವಧಿ’ಯಲ್ಲಿ ಪ್ರಕಟಿಸಿದ್ದೆವು. (ಮೇಲಿನ ಫೋಟೋ)

ಈ ಚಿತ್ರಕ್ಕೆ ಗೀತಾ ಹೆಗ್ಡೆ ಕವಿತೆಯ ಪ್ರತಿಕ್ರಿಯೆ ನೀಡಿದರು. ಅದು ಇಲ್ಲಿದೆ 

ನಂತರ ಕುಸುಮಾ ಪಟೇಲ್ ಕವಿತೆಯ ಮೂಲಕವೇ ತಮ್ಮ ಮನದಾಳವನ್ನು ತೆರೆದಿಟ್ಟರು. ಅದು ಇಲ್ಲಿದೆ 

ಈಗ ವಿಜಯಲಕ್ಷ್ಮಿ ಅವರು ‘ರಂಗಮಂಚ’ಕೆ ಮನಸೋತು ಕುಣಿಯಿತೊಂದು ಕವಿತೆ! ಬರೆದಿದ್ದಾರೆ 

ಓದಿ ನೀವೂ ಕವಿತೆ ಬರೆಯಿರಿ s p vijayalakshmi

ಎಸ್. ಪಿ. ವಿಜಯಲಕ್ಷ್ಮಿ

ಘಲ್ ಘಲ್ಲು ಘಲ್ಲು ಕುಣಿತ
ಥಕಥೈಯ್ಯ ಹೆಜ್ಜೆ ಮಿಡಿತ
ಬಂದಳೋ….ನಾರೀ…ರಂಗಕೇ….
ಸುತ್ತ ನೆರೆದ ಮಂದಿ
ಈ ಸದ್ದಲೀಗ ಬಂದಿ
ಬೆರಗೋ…ಈ…ಬೆಡಗಿಗೇ…

ಸುಳಿಬಾಳೆ ಕೆನ್ನೆಗುಳಿಯು  foot2
ಹಣೆಮೇಲೆ ಕುರುಳಸುಳಿಯು
ನಾಸಿಕದ ತುದಿಯ ತಿದಿಗೆ
ಹಾಲ್ಗೆನ್ನೆ ಕೆಂಡಸಂಪಿಗೆ
ಕಡೆಗಣ್ಣ ಕುಡಿಯ ನೋಟ
ಕೇದಿಗೆಯ ಸುಳಿಯ ಮಾಟ..
ತಿರುತಿರುಗಿ ಮರಳಿ ದುಂಬಿ
ಕಣ್ಣಲ್ಲಿ ಸೆರೆಯ ಆಟ..

ಆ ಶಂಖದಂಥ ಕೊರಳೂ
ಅಲ್ಲೊಂದು ಕೆಂಪು ಹರಳೂ
ಅತ್ತಿತ್ತ ಆಡೋ ಜುಮಕಿ
ಮುತ್ತಿಟ್ಟು ಕೆನ್ನೆ ಹಿಸುಕಿ
ಕೊರಳೇಕೊ ಅತ್ತ ತಿರುಗೀ..
ಬೆನ್ನಲ್ಲಿ ಹೊರೆಯ ಸುರಗೀ..
ಕಾಳ್ಗಪ್ಪು, ಸರಿವ ಕಪ್ಪೂ
ನಾಗರದ ಜಡೆಯ ಹೊಳಪೂ..

ನವಿಲೂರ ನಡಿಗೆ ಹೆಣ್ಣೇ
ಮೈಬಣ್ಣ ಕಿರಣ ಹೊನ್ನೇ
ಈ ಗೆಜ್ಜೆ ಘಲಿರ ನಿನಾದ
ನನ್ನೆದೆಯಲ್ಲಿ ‘ಕುಹೂ’ ನಾದ
ಬೆರಳಿಂದ ಬೆವರ ತೊಡೆದೆ..
ಚಿಗುರೆದೆಯ ಪ್ರೇಮ ಒಡೆದೆ..
ಈ ಹೆಜ್ಜೆ ಕಂಡೆ ನೆನೆದೆ
ಹೀಗಿರುವೆ ತಾನೆ ಮುಗುದೆ…?

ನೀನಾರು ಹೇಳು ಚೆಲುವೆ
ನನ್ನೂಹೆ ದಿಟವೆ ಹೂವೇ..?
ಈ ಭಂಗಿ ಕೆಣಕಿ ನನ್ನಾ
ಕಣ್ಣೆದುರು ಬಿಂಕಬಿನ್ನಾಣಾ
ಕಿರಣಗಳು ಸುಡುವ ಮುನ್ನಾ..
ಮೃದುಮಧುರ ಹೆಜ್ಜೆಯನ್ನಾ..
ಎದ್ದೇಳು ಘಲಿಸಿ ಗೆಜ್ಜೆ
ತೋರೊಮ್ಮೆ ಮೊಗಸಿರಿಯ ಲಜ್ಜೆ ..

‍ಲೇಖಕರು admin

18 August, 2016

1 Comment

  1. ಸುಧಾ ಚಿದಾನಂದ ಗೌಡ

    ಹೆಜ್ಜೆಗೊಂದು ಗೆಜ್ಜೆ ಉಲಿಯಲೆಂದಾಡಿ ಬಂದ ಸ್ವರ
    ಬಣ್ಣದ ಸವಾಲು ಸ್ವೀಕರಿಸಿ ಬೀಗಿ, ನಿನ್ನ ಕಂಗಳಿಗಾಗಿ ಹೊಸ ನೃತ್ಯ
    ನಾದವಾಗಿ ಹೊಕ್ಕಳನಾಭಿ ತೋಳು, ತೊಡೆಗಳ ವ್ಯಾಪಿಸಿ ಇಲ್ಲವಾಗಿಸುವ ರಂಗಸ್ಥಳ ಸಿದ್ಧವಿದೆ ಸನ್ನದ್ಧಳಾಗು
    ನೆನಪಿರಲಿ ನಿನ್ನೆಗೆ, ನಾಳೆ ಕೊಡಲಿರುವ ಉಡುಗೊರೆಗೆ
    ಕಾಯುತಿದೆ ಗೆಜ್ಜೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading