ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅತಿ ವೇಗದಲ್ಲಿ ಓಡುತ್ತಿರುವ ಜಗತ್ತಿನಲ್ಲಿ…’ – ಜಿ ಪಿ ಬಸವರಾಜು ಬರೀತಾರೆ

ಒಡೆದ ಮನುಷ್ಯನ ಸವಾಲು

ಅದು ಜೇನುಕುರುಬರ ಹಾಡಿ. ಹಾಡಿಯ ಜನರೆಲ್ಲ ಸೇರಿದ್ದಾರೆ. ದೇವರಗುಡ್ಡ ಮೈದುಂಬಿದ್ದಾನೆ. ಗುಡ್ಡನ ಮುಂದೆ ಕುಳಿತಿರುವ ಮಹಿಳೆಯನ್ನು ಹಿಡಿದು ಕೂಡಿಸಲಾಗಿದೆ. ಅವಳು ಯಾರ ನಿಯಂತ್ರಣಕ್ಕೂ ಸಿಕ್ಕುತ್ತಿಲ್ಲ. ಅವಳ ಮಾತುಗಳು ಇಡೀ ಕಾಡಿನ ಮೌನವನ್ನು ಸೀಳುತ್ತಿವೆ. ಸುತ್ತ ಕುಳಿತವರೆಲ್ಲ ಶಾಂತವಾಗಿಯೇ ಇದ್ದಾರೆ. ಅವರು ಇಂಥ ಎಷ್ಟೋ ಪ್ರಸಂಗಗಳನ್ನು ಕಂಡವರಿರಬೇಕು. ದೇವರ ಗುಡ್ಡ ತನ್ನ ಬುಂಡೆಯ ನಾದವನ್ನು ನಿರಂತರವಾಗಿ ಹೊಮ್ಮಿಸುತ್ತಿದ್ದಾನೆ. ಆತ ಅದರಲ್ಲಿ ಎಷ್ಟು ಮುಳುಗಿಹೋಗಿದ್ದಾನೆಂದರೆ, ತನ್ನ ಎದುರು ಕುಳಿತ ಮಹಿಳೆ, ಅವಳ ತಾರಕದಲ್ಲಿರುವ ಧ್ವನಿ ಯಾವುದೂ ಆತನ ಒಳಪ್ರಪಂಚವನ್ನು ಪ್ರವೇಶಿಸುವುದೇ ಇಲ್ಲ; ಆತನ ಧ್ಯಾನ ಕೇಂದ್ರ ಕದಲುವುದೇ ಇಲ್ಲ.
ಅಲ್ಲಿ ಕಾಲ ನಿಧಾನಕ್ಕೆ ತೆವಳುತ್ತಿದೆ. ಯಾರೂ ಕಾಲಕ್ಕೆ ಬದ್ಧರಾಗಿಲ್ಲ. ರಾತ್ರಿಯು ಬೆಳೆದು ಆಕಾಶದಲ್ಲಿ ಚಿಕ್ಕೆಗಳು ಮಿನುಗಿ, ಕಾಡಿನ ಗಾಳಿ ಭಾರವಾಗಿ ತನ್ನ ಚಲನೆಯನ್ನು ಮಂದಗೊಳಿಸಿದೆ. ಗುಡ್ಡನ ಬುಂಡೆಯ ನಾದ ತರಂಗ ತರಂಗವಾಗಿ ಆವರಿಸುತ್ತ, ಮಹಿಳೆಯ ಗದ್ದಲ ಇಷ್ಟಿಷ್ಟೆ ಕರಗುತ್ತಿದೆ. ಕೊನೆಗೊಮ್ಮೆ ಅದು ನಿಂತುಹೋಗುತ್ತದೆ. ಅವಳು ದಣಿದಳೆ? ಅಥವಾ ಬುಂಡೆಯ ನಾದದಲ್ಲಿ ಒಂದಾಗಿ ಹೋದಳೇ? ಅಂತೂ ಅವಳು ಇಲ್ಲವಾಗಿ ಗುಡ್ಡನೊಬ್ಬನೇ ಎಲ್ಲವನ್ನೂ ಆವರಿಸಿಕೊಂಡಂತೆ ಕಾಣಿಸುತ್ತದೆ. ಅವನ ನಾದ ತಾನೇ ತಾನಾಗಿ ತರಂಗಗಳನ್ನು ಏಳಿಸುತ್ತಿದೆ.
ಗಾಳಿಹೊಕ್ಕ ಅವಳು ಈಗ ಸಂಪೂರ್ಣ ಗುಡ್ಡನ ವಶವಾಗಿದ್ದಾಳೆ. ಗುಡ್ಡ ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ. ಗುಡ್ಡನ ಆಣತಿಯಂತೆ ನಡೆದುಕೊಳ್ಳುತ್ತಾಳೆ. ಅವಳ ಸಂಕಷ್ಟ ನೀಗುತ್ತದೆ. ಅವಳೀಗ ಸಾಮಾನ್ಯ ಸ್ಥಿತಿಗೆ ಮರಳಿ ಬರುತ್ತಾಳೆ. ಅವಳ ಮನಸ್ಸು ತಿಳಿಯಾಗುತ್ತದೆ; ದೇಹ ಹಗುರಾಗುತ್ತದೆ.
ಗುಡ್ಡ ಮಾಡಿದ್ದೇನು? ಅವನು ಕೊಟ್ಟ ಮದ್ದು ಯಾವುದು? ಈ ಪ್ರಶ್ನೆಗಳಿಗೆ ಸುಲಭ ಉತ್ತರ ಸಿಕ್ಕುವುದಿಲ್ಲ. ಹಾಡಿಯ ಜನ ಇಂಥ ಪ್ರಶ್ನೆಗಳನ್ನು ಕೇಳುವುದಿಲ್ಲ; ಉತ್ತರವನ್ನು ಯಾರಿಂದಲೂ ಬಯಸುವುದಿಲ್ಲ. ಮಹಿಳೆಯ ಮನದಾಳಕ್ಕಿಳಿದು ಹುಡುಕಿದ ಗುಡ್ಡನಿಗೆ ಅಲ್ಲಿಯ ನೋವು ಗೊತ್ತು; ಅಲ್ಲಿನ ಸಂಗತಿಗಳು ಗೊತ್ತು. ಆ ನೋವಿಗೆ ಆತನ ಮಾತುಗಳು ನೀಡಿದ ಸಮಾಧಾನವೇ ಮದ್ದಾಗಿರಬಹುದೇ?
ಜೇನುಕುರಬರಿರಲಿ ಅಥವಾ ಯಾವುದೇ ಬುಡಕಟ್ಟಿನ ಜನರಿರಲಿ, ಅವರಿಗೆ ಇಂಥ ನೂರಾರು ದಾರಿಗಳು ಗೊತ್ತು. ಅವುಗಳನ್ನವರು ವಿವರಿಸಿ ಹೇಳಲಾರರು. ಆದರೆ ಆ ದಾರಿಗಳನ್ನು ಬಳಸಿ ತಮ್ಮ ನೋವುಗಳನ್ನು ಉಪಶಮನ ಮಾಡಿಕೊಳ್ಳುತ್ತಾರೆ. ಅದು ದೇಹದ ನೋವಿರಲಿ, ಮನಸ್ಸಿನ ನೋವಿರಲಿ ಅವರು ಪರಿಹರಿಸಿಕೊಳ್ಳಬಲ್ಲರು. ಅವರಿಗೆ ದೇಹ ಮತ್ತು ಮನಸ್ಸು ಬೇರೆ ಬೇರೆ ಅಲ್ಲ. ಮನುಷ್ಯನನ್ನು ಅವರು ನೋಡುವುದು ಇಡಿಯಾಗಿಯೇ; ಅವರು ಬದುಕುವುದೂ ಇಡಿಯಾಗಿಯೇ.
ಇವತ್ತು ನಮ್ಮ ಆಧುನಿಕ ಜಗತ್ತು ಬುಡಕಟ್ಟು ಜನರ ಜಗತ್ತಿನಂತಿಲ್ಲ; ಒಡೆದು ಹೋಳಾಗಿದೆ. ನಮ್ಮ ನಂಬಿಕೆಗಳು ತುಂಡಾಗಿವೆ; ನಮ್ಮ ಶ್ರದ್ಧೆ ಕಲಕಿದೆ. ಆಧುನಿಕ ಶೋಧಗಳು ನಮಗೆ ಎಲ್ಲವನ್ನೂ ತಂದುಕೊಡುತ್ತವೆ ಎಂಬ ವಿಶ್ವಾಸದಲ್ಲಿ ಹೊರಟ ಮನುಷ್ಯ ಇವತ್ತು ಹುಡುಕಿಕೊಂಡಿರುವ ದಾರಿಗಳು ಸಾವಿರಾರು. ಹಲವು ಪ್ರಯೋಜನಗಳು ಈ ದಾರಿಯಲ್ಲಿ ಸಿಕ್ಕಿವೆ. ಮನುಷ್ಯನ ನೋವುಗಳನ್ನು ಇವು ಶಮನಗೊಳಿಸಿರುವುದೂ ನಿಜ. ಆದರೆ ಈ ಆಧುನಿಕ ವಿಧಾನವೇ ಎಲ್ಲವನ್ನೂ ಪರಿಹರಿಸಿದಂತೆಯೂ ಕಾಣುವುದಿಲ್ಲ. ಇಲ್ಲವಾದರೆ ಮನುಷ್ಯ ಈ ಆಧುನಿಕ ಜ್ಞಾನವನ್ನು ಅನುಮಾನದಿಂದ ನೋಡುವ ಪ್ರಮೇಯವೇ ಬರುತ್ತಿರಲಿಲ್ಲ. ಅಂತೂ ಅವನ ಸಂದೇಹ ಶುರುವಾಗಿದೆ. ಅದಕ್ಕಾಗಿಯೇ ಅವನ ನೋಟ ಬೇರೆಡೆಗೆ ಹೊರಳಿದೆ. ಇದನ್ನೇ ನಾವು ಇವತ್ತು ‘ಬದಲಿ ಮಾರ್ಗ’, ‘ಪರ್ಯಾಯ ಚಿಂತನೆ’ ಎಂದು ಕರೆಯುತ್ತಿದ್ದೇವೆ. ನಮ್ಮ ಹಿಂದಿನವರು, ಸಾವಿರಾರು ವರ್ಷಗಳ ಕಾಲ ಬದುಕಿಬಂದಿರುವ ವಿಧಾನದಲ್ಲಿಯೇ ನಮ್ಮ ನೋವಿಗೆ ಶಮನ ಇರುವಂತೆಯೂ ಕಾಣಿಸುತ್ತಿದೆ. ಇದಕ್ಕಾಗಿಯೇ ನಾವಿಂದು ನಮ್ಮ ಪೂವರ್ಿಕರ ಹಾದಿಯಲ್ಲಿ ಮತ್ತೆ ಹೆಜ್ಜೆಹಾಕಲು ನೋಡುತ್ತಿದ್ದೇವೆ. ಅವರ ಊಟ, ಉಪಚಾರ, ಬದುಕಿನ ರೀತಿ ನೀತಿಗಳು, ಅವರ ನೆಮ್ಮದಿಯ ತಾಣಗಳು ಹೀಗೆ ಎಲ್ಲವನ್ನೂ ಮತ್ತೆ ನೋಡುತ್ತ, ಅವುಗಳಲ್ಲಿ ಮತ್ತೆ ನಮ್ಮ ವಿಶ್ವಾಸವನ್ನು ಕುದುರಿಸಿಕೊಳ್ಳಲು ನೋಡುತ್ತಿದ್ದೇವೆ.
ಪಶ್ಚಿಮದ ಜಗತ್ತು ಕೂಡಾ ಆಧುನಿಕ ಜೀವನ ಪದ್ಧತಿಯಲ್ಲಿ ತನ್ನ ಪೂರ್ಣ ವಿಶ್ವಾಸವನ್ನು ಕಳೆದುಕೊಂಡಿರುವಂತಿದೆ. ಅವರ ಹುಡುಕಾಟವೂ ಹಳೆಯದರ ಬಗೆಗೇ. ಹೀಗಾಗಿಯೇ ಅವರು ಭಾರತದಂಥ ಪ್ರಾಚೀನ ರಾಷ್ಟ್ರಗಳನ್ನು ಹುಡುಕಿ ಹೊರಟಿದ್ದಾರೆ. ಈ ಪ್ರಾಚೀನ ರಾಷ್ಟ್ರಗಳಲ್ಲಿ ಉಳಿದುಕೊಂಡು ಬಂದಿರುವ ವಿದ್ಯೆಗಳಲ್ಲಿ, ಜೀವನ ವಿಧಾನಗಳಲ್ಲಿ ಅವರು ನಂಬಿಕೆಯನ್ನು ಕಂಡುಕೊಳ್ಳುತ್ತಿದ್ದಾರೆ. ಹೀಗಾಗಿಯೇ ನಮ್ಮ ಯೋಗ, ಆಯುರ್ವೇದ, ಸಂಗೀತ ಮೊದಲಾದ ಸಂಗತಿಗಳು ಅವರಿಗೆ ಆಸಕ್ತಿಯ ಕೇಂದ್ರಗಳಾಗಿವೆ. ವಿಪರ್ಯಾಸವೆಂದರೆ ಆಧುನಿಕ ಭಾರತದ ನಗರಗಳಲ್ಲಿ, ಪಟ್ಟಣ ಪ್ರದೇಶಗಳಲ್ಲಿ ಪಾಶ್ಚಿಮಾತ್ಯರು ಹುಡುಕುತ್ತಿರುವ ಸಂಗತಿಗಳು ಇಲ್ಲ. ಇವೂ ಬದಲಾಗಿವೆ; ಆಧುನಿಕಗೊಂಡಿವೆ. ಹಳೆಯದನ್ನು ಕಳೆದುಕೊಂಡು, ಹೊಸದನ್ನು ಪಡೆಯಲಾಗದ ತ್ರಿಶಂಕು ಸ್ಥಿತಿಯಲ್ಲಿವೆ.
ಹಾಗಾದರೆ ನಿಜವಾದ ಪ್ರಾಚೀನ ಭಾರತ ಎಲ್ಲಿದೆ? ಅದು ಸಣ್ಣ ಸಣ್ಣ ಸಮುದಾಯಗಳಲ್ಲಿ, ಬುಡಕಟ್ಟುಗಳಲ್ಲಿ, ಇನ್ನೂ ಆಧುನಿಕ ಬದುಕಿಗೆ ತನ್ನನ್ನು ಪೂರ್ಣವಾಗಿ ಒಪ್ಪಿಸಿಕೊಳ್ಳದ ಪಂಗಡಗಳಲ್ಲಿ ಇರುವಂತಿದೆ. ಈ ಪಂಗಡಗಳ ಜನ ಈಗಲೂ ಹಳೆಯ ಜೀವನ ಶೈಲಿಯಲ್ಲಿಯೇ ಬದುಕುತ್ತಿದ್ದಾರೆ. ಆಧುನಿಕತೆ ಅವರನ್ನು ಮುಟ್ಟಿಲ್ಲವೆಂದಲ್ಲ. ಆದರೆ ಅದು ಅವರ ನಂಬಿಕೆಗಳನ್ನು, ಜೀವನ ವಿಧಾನವನ್ನು ಪೂರ್ಣವಾಗಿ ಒಡೆದಿಲ್ಲ. ಅವರ ದೇಹ ಮತ್ತು ಮನಸ್ಸುಗಳು ಇನ್ನೂ ಇಡಿಯಾಗಿಯೇ ಇವೆ. ಹೀಗಾಗಿಯೇ ಅವರ ಕಾಯಿಲೆಗಳನ್ನು ಅಜ್ಜಿಯ ಮದ್ದು ಗುಣಪಡಿಸಬಲ್ಲದು. ಇನ್ನೂ ಮೌಢ್ಯವಾಗಿಯೇ ಕಾಣುವ ಅನೇಕ ಆಚರಣೆಗಳಲ್ಲಿ ಅವರು ಪೂರ್ಣ ತಲ್ಲೀನತೆಯಿಂದ ಭಾಗವಹಿಸಲು ಸಾಧ್ಯವಾಗಿದೆ.
ಆಧುನಿಕ ಮನುಷ್ಯ ಒಡೆದ ಮನುಷ್ಯ. ಅವನಿಗೆ ಮನಸ್ಸು ಮತ್ತು ದೇಹ ಬೇರೆಬೇರೆ. ದೇಹದಲ್ಲಿನ ನೋವನ್ನು ಹುಡುಕುವ ವೈದ್ಯನಿಗೆ ರೋಗಿಯ ಮನಸ್ಸಿನ ತೊಂದರೆ ಕಾಣುವುದಿಲ್ಲ. ಮನಸ್ಸನ್ನು ಕಾಣಲು ಹೊರಡುವ ವೈದ್ಯನಿಗೆ ರೋಗಿಯ ದೇಹ ಕಾಣಿಸುವುದಿಲ್ಲ. ನಮ್ಮ ವೈದ್ಯರ ಪರಿಣತಿ ಎಷ್ಟು ಆಳವಾಗಿದೆ ಎಂದರೆ ಅವರಿಗೆ ದೇಹ ಮತ್ತು ಮನಸ್ಸುಗಳು ಇಡಿಯಾಗಿ ಕಾಣಿಸುವುದೇ ಇಲ್ಲ. ಅವು ಬೇರೆ ಬೇರೆಯೇ. ನಮ್ಮ ಪೂವರ್ಿಕರಿಗೆ, ಅವರ ಜೀವನ ವಿಧಾನಕ್ಕೆ, ಅವರು ನೀಡುತ್ತಿದ್ದ ಮದ್ದಿಗೆ ಮನುಷ್ಯನ ದೇಹ ಮತ್ತು ಮನಸ್ಸುಗಳು ಬೇರೆಬೇರೆಯಾಗಿರಲಿಲ್ಲ.
ಮನುಷ್ಯನನ್ನು ಇಡಿಯಾಗಿ ನೋಡಲು ಸಾಧ್ಯವಾಗದ ಯಾವುದೇ ವಿಧಾನವೂ ಅವನಿಗೆ ನೆಮ್ಮದಿಯನ್ನು ತರಲಾರದು. ನಾವು ಬದಲಿ ಆಹಾರವನ್ನು ಹುಡುಕುತ್ತಿದ್ದೇವೆ; ಬದಲಿ ಬೆಳೆಗಳನ್ನು, ಆಹಾರ ಧಾನ್ಯಗಳನ್ನು ಹುಡುಕುತ್ತಿದ್ದೇವೆ. ಬದಲಿ ವೈದ್ಯ ಪದ್ಧತಿಗಳನ್ನೂ ನಾವು ನೋಡುತ್ತಿದ್ದೇವೆ. ಇವುಗಳಲ್ಲಿ ಪೂರ್ಣ ನಂಬಿಕೆ ಸಾಧ್ಯವಾಗದಿದ್ದರೂ, ನಮಗೆ ಶಮನ ನೀಡುವ ದಾರಿಗಳು ಇಲ್ಲಿರಬಹುದೇ ಎಂದು ಹುಡುಕುತ್ತಿದ್ದೇವೆ. ಇಷ್ಟಕ್ಕೆ ಮಾತ್ರ ಸೀಮಿತ ನಮ್ಮ ಚಿಂತನೆ. ಉಳಿದಂತೆ ಎಲ್ಲ ವಿಚಾರದಲ್ಲಿಯೂ ನಾವು ಆಧುನಿಕರೇ. ನಾವು ಬದುಕುವ ವಿಧಾನ ಸಂಪೂರ್ಣವಾಗಿ ಆಧುನಿಕವಾಗಿರುತ್ತದೆ. ನಮ್ಮ ಇಡೀ ಜಗತ್ತೇ ಆಧುನಿಕ. ನಮ್ಮ ಮನಸ್ಸು ಮತ್ತು ದೇಹಗಳನ್ನು ಒಂದಾಗಿ ಬೆಸೆಯುವ, ಎರಡೂ ಸೇರಿದ ಮನುಷ್ಯನನ್ನು ಇಡಿಯಾಗಿ ಒಂದು ವಿಭಿನ್ನವಾದ ಚಿಂತನೆಗೆ ಒಡ್ಡುವ ಪ್ರಯತ್ನಕ್ಕೆ ನಾವು ತೊಡಗುವುದೇ ಇಲ್ಲ. ಅಥವಾ ನಾವು ಕಟ್ಟಿಕೊಂಡ, ನಂಬಿಕೆ ಇಟ್ಟುಕೊಂಡ ಆಧುನಿಕ ಬದುಕೇ ನಮಗೆ ಇಂಥ ಅವಕಾಶವನ್ನು ಒದಗಿಸಿಕೊಡುವುದಿಲ್ಲ. ನಮ್ಮ ಬದುಕನ್ನು ನೆಮ್ಮದಿಯತ್ತ ಕೊಂಡೊಯ್ಯುವ ಇನ್ನೊಂದು ಜೀವನ ವಿಧಾನದ ಬಗ್ಗೆ ಪೂರ್ಣವಾಗಿ ತೊಡಗಿಕೊಂಡು ಚಿಂತಿಸುವುದಕ್ಕೇ ನಮಗೆ ಸಮಯವಿಲ್ಲ. ಸಮಯವಿಲ್ಲದ ಜಗತ್ತನ್ನು ನಾವು ಕಟ್ಟಿಕೊಂಡಿದ್ದೇವೆ. ಅದರೊಳಗೆ ಉಸಿರಾಡುವುದಕ್ಕೂ ನಮಗೆ ಸಮಯ ಸಾಕಾಗುವುದಿಲ್ಲ ಎಂಬ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಇಂಥ ಸನ್ನಿವೇಶದಲ್ಲಿ ಬದಲಿ ದಾರಿ ಎನ್ನುವುದು ಕೇವಲ ಶೋಕಿಯಾಗುವ ಅಪಾಯ ಇರುತ್ತದೆ. ಒಡೆದ ಮನುಷ್ಯನ ಪ್ರಯತ್ನ ಎಷ್ಟೇ ಪ್ರಾಮಾಣಿಕವಾಗಿದ್ದರೂ, ಅದಕ್ಕೆ ಒಂದು ಸಮಗ್ರತೆ ದೊರೆಯುವುದೇ ಇಲ್ಲ. ಹೀಗಾಗಿ ಅವನ ಪರ್ಯಾಯಗಳೆಲ್ಲ ಶೋಕಿಯಾಗಿಯೇ ಕಾಣಿಸುವುದು ಅನಿವಾರ್ಯವಾಗುತ್ತದೆ.
ಈ ಶೋಕಿಗಳನ್ನು ದಾಟಿ, ನಿಜವಾದ ಹೊಸದೊಂದು ಬದಲಿ ದಾರಿಯನ್ನು ಹುಡುಕಿಕೊಳ್ಳುವುದು ಹೇಗೆ? ಮನುಷ್ಯ ಮೊದಲು ತನ್ನ ಧಾವಂತದ ಓಟವನ್ನು ನಿಲ್ಲಿಸಬೇಕು. ಅತಿ ವೇಗದಲ್ಲಿ ಓಡುತ್ತಿರುವ ಜಗತ್ತಿನಲ್ಲಿ ನಿಂತ ಮನುಷ್ಯ ತನ್ನ ಓಟವನ್ನು ಕಡಿದುಕೊಳ್ಳುವುದೂ ಕಷ್ಟದ ಮಾತೇ. ಆಧುನಿಕ ನೆಹರೂ ಯುಗದಲ್ಲಿದ್ದ ಅನೇಕರಿಗೆ ಗಾಂಧೀಜಿ ಪುರಾತನ ವ್ಯಕ್ತಿಯಂತೆ ಕಂಡದ್ದರ ಹಿಂದೆ ಈ ಎಲ್ಲ ಸಂಗತಿಗಳಿವೆ. ಪುರಾತನ ಎನಿಸಿದ್ದ ಗಾಂಧೀಜಿಯೇ ಇವತ್ತು ನಮಗೆಲ್ಲ ಆಪ್ತವಾಗುತ್ತಿದ್ದಾರೆ. ಅವರ ಜೀವನ ಶೈಲಿ, ಬದುಕುವ ವಿಧಾನಗಳು ಮತ್ತೆ ನಮಗೆಲ್ಲ ಬೇಕೆನಿಸುತ್ತಿವೆ. ಗಾಂಧೀಜಿಯವರಲ್ಲಿ ನಮ್ಮ ಪುರಾತನ ಭಾರತವಿದೆ. ಈ ಸತ್ಯ ನಿಧಾನವಾಗಿಯಾದರೂ ನಮಗೆ ತಿಳಿಯಬೇಕಾಗಿದೆ. ಆಗ ಆಧುನಿಕ ಮನುಷ್ಯನಿಗೆ ನೆಮ್ಮದಿಯ ಬದುಕು ದಕ್ಕಬಹುದು.
(ಸೌಜನ್ಯ: ಸಂಯುಕ್ತ ಕರ್ನಾಟಕ)
 

‍ಲೇಖಕರು avadhi

24 August, 2013

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading