ಲಾಫಿಂಗ್ ಬುದ್ಧ
ಡಾ.ಲಕ್ಷ್ಮಣ. ವಿ.ಎ
ಅಣುಬಾಂಬು ಬಿದ್ದ ಶಹರಿನಲಿ
ಮಲಗಿದಂತಿದೆ ಬೀದಿ ಸ್ಮಶಾನದ
ಮೇಲೆ.
ಕೆಂಡ ನುಂಗಿದ ಹಾದಿಗಳ ಸಂತೈಸಲೆಂದೆ
ದೈವದಂತ ಇಳಿದ ಮಳೆ
ಈಗಷ್ಟೇ ನಿಂತಿದೆ
ತಣ್ಣಗಾದಂತೆ ತೋರಿದರೂ ಎಲ್ಲ
ಯಾವುದೂ ತಂಪಿಲ್ಲ ಇಲ್ಲಿ
ಶಾಂತ ಸಾಗರದ ಒಡಲೊಳಗೆಲ್ಲೊ
ಅಡಗಿದೆ ಕುದಿವ ಲಾವಾರಸ.
ತಿಳಿಯುವುದಿಲ್ಲ ಅದು ಬರುವತನಕ
ವಾರ್ತೆಗಳಲ್ಲಿಯ ಸಾವು ಕೇವಲ
ಸುದ್ದಿ ಮಾತ್ರ ಮರಣ
ನಮ್ಮ ಮನೆಯ ಕದ ತಟ್ಟುವವರೆಗು.
ಹೆಗಲಮೇಲೆ ಅಣುಗಡಿಯಾರ ಹೊತ್ತು
ನಿಂತ ಪುಟ್ಟ ದೇವರಂತವನೊಬ್ಬನ
ನೆರಳು ಬಿಂಬ ನೀರಿನೊಳಗೆ
ಕಾಲ ಕ್ಷಣ ಕಾಲ ನಿಂತಿದೆ ಸ್ತಬ್ಧ ಚಿತ್ರದಂತೆ.
ಶಹರಿನ ಹಾವು ತಿರುವು
ರಸ್ತೆಗಳಲಿ ಅವನ ದಾರಿ ಯಾವುದು ?
ಎಷ್ಟೊಂದು ಎತ್ತರದ ಗೋಡೆಗಳ
ಹಾಯಬೇಕಿದೆ ಇಲ್ಲಿ ಈ ಸಂತೆಯೊಳಗೆ
ಗಡಿಯ ಗೋಡೆ ಜಾತಿಯ ಗೋಡೆ
ಮೇಲು ಕೀಳು ಕಪ್ಪು ಬಿಳುಪು
ಭಾಷೆ ಪರಭಾಷೆ
ಮೂಗನಿಗೊಬ್ಬನಿಗಿಲ್ಲ ನೋಡಿ ಭಾಷೆಯ ಗೊಡವೆ
ಚಿಟಿಕೆಯಾಡಿಸಬಹುದೆ ಹೀಗೆ
ನನ್ನದೆಯೊಳಗೆ ಗಡಿಯಾರದ ಮೂರು
ಮತ್ತೊಂದು ಮುಳ್ಳುಗಳು.
ಶುದ್ಧ ವೈಶಾಖ ಪೂರ್ಣಿಮೆಯ ದಿನ
ಪೋಖ್ರಾನಿನಲಿ ಒಮ್ಮೆ ಬುದ್ಧ ನಕ್ಕ
ಮತ್ತೊಮ್ಮೆ ನಕ್ಕ ಮಗದೊಮ್ಮೆ ನಕ್ಕ
ಹೀಗೆ ಜಾಗತಿಕ ಭೂಪಟದ ಅಕ್ಷಾಂಶ ರೇಖಾಂಶದ
ಮೇಲೆ ಅದೆಷ್ಟು ಸಲ ಕಳ್ಳ ನಗೆಯ
ಲೆಕ್ಕ
ಶ್ರಾವಸ್ತಿಯ ಕಾರಣಿಕನೂ ಬರೆದಿಲ್ಲ.
ಪೃಥ್ವಿ ಆಕಾಶ ಅಗ್ನಿ ಮಿಸೈಲುಗಳೆಂಬ
ಬುದ್ಧನ ಹೊಸ ಅವತಾರದ ವಿಶೇಷ
ಸ್ಮೈಲುಗಳು ಮಾರ್ಕೇಟಿನಲಿ.
ಅತಳ ವಿತಳ ರಸತಳ ಪಾತಾಳಕ್ಕಿಳಿದು
ಬಿಟ್ಟರೂ ಬಿಡದು ಈ ಅಣುಬಂಧ.
ಹೀಗೆ ಶಾಂತಿಯ ಸೋಗು ಹಾಕಿ
ಅಣುಸಿಡಿತಲೆಗಳಲ್ಲಿ
ಅಡಗಿ ಕುಳಿತಿರುವ ಸಾವಿನ ದಿಕ್ಕು
ಗುರುತಿಸುವದು ತಥಾಗತನಿಗೂ ಗೊತ್ತಿಲ್ಲ
ಕುರಿಯ ವೇಷದಲಿರುವ ತೋಳವ
ಗುರುತಿಸುವದಾದರೂ ಹೇಗೆ ?
ಈಜಿಪ್ಟ್, ಇರಾಕ್, ಸಿರಿಯಾ ಟರ್ಕಿಯ
ಬಾಲ ದೇವರುಗಳ
ನಡುವಿಗೆ ಟಿಕ್ ಟಿಕ್ ಸದ್ದಿನ ಮಾನವಬಾಂಬಿನ ಗಡಿಯಾರ ಕಟ್ಟಿ ಮೊದಲು
ಈಜಲು ಕಲಿಸುತ್ತಾರೆ ನೈಲ ನದಿಯೊಳಗೆ
ಆಮೇಲೆ ಜನನಿಬಿಡ ಸಂತೆಯೊಳಗೆ
ಹುತಾತ್ಮರಾಗಿಸುತ್ತಾರೆ.
ಎಷ್ಟು ತೊಳೆದರೂ ಹಸನಾಗದ
ಜಿಹಾದಿನ
ರಕ್ತ ಸಿಕ್ತ ಕೈಗಳು.
ಇನ್ನೊಂದು ಕಾಲ ಚಕ್ರ ಉರುಳಿದೆ
ಮೂರು ಮುಳ್ಳಿನ
ಗಡಿಯಾರದೊಳಗೆ
ಸಮಯ ಸರಿಯುತಿದೆ ಸೆರಗೊಳಗಿನ ಕೆಂಡದೊಂದಿಗೆ
ಪುಟ್ಟ ದೇವರು ನಿಂತಿದ್ದಾನೆ ಹಾಗೆ
ಎದುರಿಗಿರುವ ಎತ್ತರದ ಗೋಡೆಗಳ
ಹಾರಲೋ , ಒಡೆಯಲೋ ಅಥವ
ಅದೇ ಗೋಡೆಗಳಿಗೆ ತಲೆ ಚಚ್ಚಿಕೊಂಡು ಸಾಯಲೋ ಎಂಬ ಹತಾಶೆಯಲಿ.





0 Comments