ಬಾಬಸಾಹೇಬ

ಕೆ ಮುರಳಿ ಮೋಹನ್ ಕಾಟಿ
ಮೊನ್ನೆ ನೀವು ಸಿಕ್ಕಿದ್ರಲ್ಲ
ಆಗ ಹೇಳೋದು ಮರೆತಿದ್ದೆ
ನೀವು ನೆಟ್ಟ ಮರದ ಹಣ್ಣು
ಹುಳಿ ಕಿತ್ತು ಉಪ್ಪಿನ ಕಾಯಿ ಮಾಡಿದ್ದೆ
ಸಿಹಿ ಕಿತ್ತು ಊರಿಗೆಲ್ಲ ಹಂಚಿದ್ದೆ
ನೀವು ನೆಟ್ಟ ಬಳ್ಳಿಯ
ಏರಿ
ಮೇಲೆ
ಕುಳಿತ ಹುಡುಗಿಯರು
ಸ್ವಾಭಿಮಾನದ ಗೆಜ್ಜೆ ಕಟ್ಟಿದ್ದಾರೆ
ಸಮಾನತೆಯ ತಾಳಕೆ ಹೆಜ್ಜೆ ಹಾಕಿದ್ದಾರೆ
ನೀವು ಊರಿಗೆ ಹೋದಾಗ ಕರೆ ತಂದ
ಹುಡುಗರು
ಹೊಂಗೆಯ ನೆರಳವರು
ಆಲದಂತೆ ಹಬ್ಬಿದ್ದಾರೆ
ಕನಸುಗಳ ಕಟ್ಟಿದ್ದಾರೆ
ಕಾಡಿನಂತೆ.
ಸಾವಿರಾರು ನದಿ,ತೊರೆ,ಹಳ್ಳಗಳು
ಹರಿದಿವೆ
ಕೊಳೆ ತೊಳೆದಿವೆ
ಪೈರು – ಪಚ್ಚೆ ಬೆಳೆದಿವೆ
ನಡುವೆ ಬಂದ ಕಳೆ ಕೀಳಲು
ಅಗ್ನಿಹಂಸಗಳು ಹಾರಾಡಿವೆ
ಅವುಗಳ ನೆರಳು ನಿಮ್ಮದೇ
ಪ್ರತಿರೂಪದಂತಿವೆ.
ನಿಮ್ಮ ನಿಲುವು
ನಮ್ಮ ನೆಲದ
ಪ್ರೇಮ ದೀಪವಾಗಿದೆ
ಒಲವ ಅಲೆಯು
ಎಲ್ಲರೆದೆಯ ಉಸಿರಾಗಿದೆ.





0 Comments