
ಬಿದಲೋಟಿ ರಂಗನಾಥ್
ಮೊನ್ನೆ ಕ್ಯಾನ್ವಾಸ್ ಗೆಂದು ಹೋಗಿದ್ದೆ
ವೈದಿಕ ಹಕ್ಕಿಗಳ ಬಾಗಿಲಿಗೆ
ನಡುಮನೆಯಲ್ಲಿ ಯಾರೋ ನಡೆದು ಹೋದ
ಹೆಜ್ಜೆಗಳ ಮೇಲೆ ಮಿಂಚಿನಂತಹ ಹೊಳಪು
ನೋಡುತ್ತಲೇ ನಿಂತು ಬಿಟ್ಟೆ ಸುಮಾರು ಹೊತ್ತು ಅಲ್ಲೆ.
ಕರುಳು ಬಾಧಿಸುತ್ತಲೇಯಿತ್ತು
ಮುಟ್ಟಿ ಹಣೆಕೊಡಬೆಕೆಂದು ಆ ಹೆಜ್ಜೆಗೆ
ತವಕಿಸುತ್ತಲೇಲೆಯಿತ್ತು ಮನಸು
ಯಾವುದೋ ಸೆಳೆತದ ಹುರಿ ಬಿಗಿಯಾಗಿ.
ಆದರೆ, ಅದನ್ನು ಮುಟ್ಟಲು
ನಾನು ಒಳಗೋಗಬೇಕು
ಬಿಟ್ಟುಕೊಳ್ಳದ ಕುಬ್ಜಮನಸು ಅವರದು
ಒಳಗಿಂದ ಮಂತ್ರಗಳು ಕೇಳುತ್ತಲೇ ಇವೆ ಒಂದೇ ಸಮನೆ…
ಹೆಜ್ಜೆಗುರುತು ಹೋಮಕುಂಡಕ್ಕೆ ಗಾಳಿಯಾಗಿದೆ
ಹಚ್ಚುತ್ತಲೇಯಿದ್ದಾರೆ ಹೊಟ್ಟೆಯ ದಾರ ಸರಿಮಾಡಿಕೊಳ್ಳುತ್ತ…
ನಮ್ಮ ತಾತಂದಿರು ಮಾರಿದ
ಹೊಲಮಾಳದ ಬೋರಿನ ನೀರು
ಅವರ ಚೆಂಬಲ್ಲಿ.
ಬಿಟ್ಟ ಕುಂಬಳಕಾಯಿ, ಎಳನೀರು, ಸೌದೆತುಂಡುಗಳು
ಎಣ್ಣೆಕಾಳುಗಳು ಕುಂಡದ ಪಕ್ಕದಲ್ಲಿ
ಆದರೂ ಮನೆ ಮೈಲಿಗೆಯಲ್ಲ
ಮನವ ಬಿಟ್ಟು.!
ಎದ್ದು ನೋಡುತ್ತಾನೆ ವೈದಿಕ,
ಹೆಜ್ಜೆಗುರುತೆಂಬ ಕನ್ನಡಿಯಲ್ಲಿ
ಅಂಬೇಡ್ಕರ್ ಭಾವ ಚಿತ್ರ!
ಅಯ್ಯಯ್ಯೋ ಮೈಲಿಗೆಯೆಂದು
ಆ ಮಹಾತ್ಮನ ಹೆಜ್ಜೆಗುರುತ
ಉಜ್ಜಿತೊಳೆಯಲು ಹೋದರೆ,
ಮನೆತುಂಬಾ ಮೂಡಿದವು ನೂರಾರು
ಅಂಬೇಡ್ಕರ್ ಹೆಜ್ಜೆಗಳು
ಎಲ್ಲಿ ಹೆಜ್ಜೆ, ಕೈಯಿಟ್ಟರಲ್ಲೇ ಹೆಜ್ಜೆಗಳು
ನಾನೋ ಒಳಗೆಲ್ಲಾ ಕುಣಿದು ಕುಪ್ಪಳಿಸಿ
ಬೊಗಸೆಯೊಡ್ಡಿದೆ
ಅಂಬೇಡ್ಕರ್ ಹೆಜ್ಜೆಗಳು ಬೋಗಸೆ ತುಂಬಿದವು
ಒಂದೊಂದೆ ಹೆಜ್ಜೆಯ
ಜಾತಿಮನಸುಗಳ ಮನೆಗೆ ಬಿಟ್ಟು
ಖುಷಿಯ ಗಂಟನು ಹೊತ್ತು ಬಂದೆ.





0 Comments