ರಾಜಶೇಖರ್ ಶಕುಂತಲಾ
ಅದು 2018ರ ಜುಲೈ 15.. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಸುರಿಯುತ್ತಿದ್ದ ಮಳೆಯಲ್ಲಿ ಸಂಭ್ರಮ ಮೇಳೈಸಿತ್ತು. ಕಪ್ಪು ಮೋಡಗಳು ಸುರಿಸುತ್ತಿದ್ದ ಮಳೆಯಲ್ಲಿ ನೀಲಿ ಬಟ್ಟೆ ತೊಟ್ಟು ನೆನೆಯುತ್ತಿದ್ದ ಹುಡುಗರು ನಿಜ ಅರ್ಥದಲ್ಲೂ ಫುಟ್ಬಾಲ್ ಜಗತ್ತಿನ ಚಾಂಪಿಯನ್ಗಳೇ ಆಗಿದ್ರು. ಆಫ್ರಿಕಾ, ಅರಬ್ ಮತ್ತು ಯುರೋಪ್ ದೇಶಗಳಿಂದ ಫುಟ್ಬಾಲ್ ಪ್ರತಿಭೆಗಳನ್ನು ಹೆಕ್ಕಿ ತೆಗೆದ್ರೆ, ಎಂತಹ ಅದ್ಭುತ ತಂಡ ಸೃಷ್ಟಿಯಾಗಬಹುದೋ ಅಂತಹದ್ದೇ ತಂಡ ಫ್ರಾನ್ಸ್ ಹೆಸರಿನಲ್ಲಿ ಆಡಿತ್ತು, ಜಗತ್ತನ್ನು ಗೆದ್ದಿತ್ತು. ಕ್ರೋವೇಷಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೋಲು ಹೊಡೆದು ಜಗತ್ತೇ ಬೆರಗುಗಣ್ಣಿನಿಂದ ತನ್ನತ್ತ ನೋಡುವಂತೆ ಮಾಡಿದ್ದ ಕೈಲಿಯನ್ ಬಾಪೆ ಎನ್ನುವ ಬಾಲಕ ಅಲ್ಲ ಅಲ್ಲ ವಿಶ್ವಚಾಂಪಿಯನ್ ಅಟಗಾರ, ಫ್ರಾನ್ಸ್ ತಂಡದ ನಿಜವಾದ ಶಕ್ತಿಯನ್ನು ಜಗತ್ತಿಗೆ ತೋರಿಸಿದ್ದ.. ಫ್ರಾನ್ಸ್ ಕೇವಲ ಒಂದು ದೇಶದ ತಂಡವಾಗಿರದೆ. ಇಡೀ ಜಗತ್ತಿನ ತಂಡವಾಗಿತ್ತು..
ಸರಿಯಾಗಿ ಒಂದು ವರ್ಷದ ಬಳಿಕ ಅಂದ್ರೆ 2019ರ ಜುಲೈ 14 ರಂದು ಜಗತ್ತು ಇಂತಹದ್ದೇ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಅಂದು ರಷ್ಯಾ ರಾಜಧಾನಿ ಮಾಸ್ಕೋ, ಇಂದು ಇಂಗ್ಲೆಂಡ್ ರಾಜಧಾನಿ ಲಂಡನ್. ಅಂದು ಫುಟ್ಬಾಲ್ ಇಂದು ಕ್ರಿಕೆಟ್. ಆದ್ರೆ, ಗೆಲುವು ಮಾತ್ರ ಇಡೀ ಜಗತ್ತಿನದ್ದು. ಇದು ಇಡೀ ಜಗತ್ತನ್ನೇ ಗೆದ್ದ ಕಥೆಯಲ್ಲ. ಇಡೀ ಜಗತ್ತೇ ಗೆದ್ದ ಕಥೆ. ಜಗತ್ತಿಗೆ ಕ್ರಿಕೆಟ್ ನ ಅ ಆ ಇ ಈ ಕಲಿಸಿಕೊಟ್ಟ ಇಂಗ್ಲೆಂಡ್ ತಂಡಕ್ಕೆ ತಾನು ಚಾಂಪಿಯನ್ ಪಟ್ಟ ಅಲಂಕರಿಸಲು 44 ವರ್ಷಗಳೇ ಬೇಕಾದವು.
ಕೊನೆಗೂ ಇಂಗ್ಲೆಂಡ್ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿದೆ. ಇಂಗ್ಲೆಂಡ್ ಹೆಸರಿನ ತಂಡವೊಂದು ವಿಶ್ವಕಪ್ ಗೆದ್ದಿದೆ. ಆದ್ರೆ, ಗೆಲ್ಲಿಸಿದ್ದು ಇಡೀ ಜಗತ್ತಿನ ಸರ್ವಶ್ರೇಷ್ಠ ಆಟಗಾರರ ಸಮ್ಮಿಲನ. ಇಂಗ್ಲೆಂಡ್ ತಂಡ ವಿಶ್ವ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಬೇರೆ ಬೇರೆ ದೇಶಗಳಲ್ಲಿ ಹುಟ್ಟಿ ಬೆಳೆದು, ಇಂಗ್ಲೆಂಡ್ ತಂಡ ಸೇರಿಕೊಂಡ ಜಗತ್ತಿನ ಚಾಂಪಿಯನ್ ಆಟಗಾರರು.. ಇವರು ನಿಜವಾದ ಅರ್ಥದಲ್ಲೂ ವಿಶ್ವದ ಚಾಂಪಿಯನ್ನರು. ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್. ಅದ್ಭುತ ಆರಂಭಿಕ ಆಟಗಾರ ಜೇಸನ್ ರಾಯ್, ಅಮೋಘ ಆಲ್ರೌಂಡರ್ ಬೆನ್ ಸ್ಟೋಕ್ಸ್.. ಜೋಫ್ರಾ ಆರ್ಚರ್ ಮೂಲತಃ ಇಂಗ್ಲೆಂಡ್ನವರಲ್ಲ ಅಂದ್ರೆ ನೀವು ನಂಬಲೇಬೇಕು.
ನ್ಯೂಜಿಲೆಂಡ್ ತಂಡದ ಎದುರಿನ ಫೈನಲ್ ಪಂದ್ಯದಲ್ಲಿ ಕೊನೆ ಎಸೆತದಲ್ಲಿ ಮಾರ್ಟಿನ್ ಗಪ್ಟಿಲ್ ಗೆ ಕೇವಲ ಒಂದು ರನ್ ಬಿಟ್ಟ ಕೊಟ್ಟ ಜೋಫ್ರಾ ಆರ್ಚರ್ ಸದ್ಯ ಕ್ರಿಕೆಟ್ ಜಗತ್ತಿನ ಮರೆಯಲಾಗದ ಪುಟ. ಈ ಯುವ ಬೌಲರ್ ಕೈಗೆ ಸೂಪರ್ ಓವರ್ ನಲ್ಲಿ ಬೌಲಿಂಗ್ ಕೊಟ್ಟಾಗ ಯಾರಿಗೂ ಅಚ್ಚರಿಯಾಗಲಿಲ್ಲ. ಆದ್ರೆ, ಜೋಫ್ರಾ ಆರ್ಚರ್ ಗೆ ಇಂಗ್ಲೆಂಡ್ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಾಗ ತುಂಬಾ ಜನ ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದ್ರೀಗ, ತಮ್ಮ ಆಯ್ಕೆಯನ್ನ ಆರ್ಚರ್ ಸಮರ್ಥಿಸಿಕೊಂಡಿದ್ದಾರೆ.
ಕ್ರಿಕೆಟ್ ಅಭಿಮಾನಿಗಳಿಗೆ ಜೋಫ್ರಾ ಆರ್ಚರ್ ಎನ್ನುವ ಆಲ್ರೌಂಡರ್ ಆಟಗಾರನ ಪರಿಚಯ ಬೇಕಿಲ್ಲ. ಅನುಭವಿ ಬ್ಯಾಟ್ಸ್ಮನ್ ಹಾಸಿಮ್ ಆಮ್ಲಾ ಮತ್ತು ಆಸ್ಟ್ರೇಲಿಯಾದ ಪ್ರತಿಭಾವಂತ ಬ್ಯಾಟ್ಸ್ಮನ್ ಅಲೆಕ್ಸ್ ಕೇರಿ ಹೆಲ್ಮೇಟ್ಗೆ ಬಡಿದ ಚೆಂಡುಗಳೇ, ಜಾಫ್ರಾ ಆರ್ಚರ್ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದವು. ಬ್ಯಾಟ್ಸ್ಮನ್ಗಳಲ್ಲಿ ಭೀತಿ ಹುಟ್ಟಿಸುವ ಆರ್ಚರ್ ಅವರ 150 ಕಿಲೋಮೀಟರ್ ವೇಗದ ಎಸೆತಗಳು, 80 ರ ದಶಕದ ವಿಶ್ವಚಾಂಪಿಯನ್ ವೆಸ್ಟ್ ಇಂಡೀಸ್ ತಂಡದ ಬೌಲರ್ಗಳನ್ನು ನೆನಪಿಸಿದ್ದು ಸುಳ್ಳಲ್ಲ. ಈ ಆರ್ಚರ್, ಮೂಲತಃ ಇಂಗ್ಲೆಂಡ್ನವರಲ್ಲ.. ಅಂಡರ್ 19 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆರ್ಚರ್, ವೆಸ್ಟ್ ಇಂಡೀಸ್ ಪರ ಆಡಿದ್ದರು.. ಬಾರ್ಬಡೋಸ್ ರಾಷ್ಟ್ರದ ಆರ್ಚರ್, ಮೊದಲು ವೆಸ್ಟ್ ಇಂಡೀಸ್ ಕಿರಿಯರ ತಂಡದ ಭರವಸೆಯ ಆಟಗಾರರನಾಗಿದ್ದ. ಬಳಿಕ ಆತ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದು, ಇಂಗ್ಲೆಂಡ್ ವಿಶ್ವಚಾಂಪಿಯನ್ ಆಗಿದ್ದು, ಪ್ರಮುಖ ಪಂದ್ಯಗಳಲ್ಲಿ ಆರ್ಚರ್ ಮಿಂಚಿದ್ದು, ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಗೆಲ್ಲಿಸಿದ್ದು ಈಗ ಇತಿಹಾಸ.
ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಕೇವಲ 71 ರನ್ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ರೀಸ್ ಬಂದು ಬೆನ್ ಸ್ಟೋಕ್ಸ್ ಕೊನೆ ಎಸೆತದವರಿಗೂ ನ್ಯೂಜಿಲೆಂಡ್ ಬೌಲರ್ ಗಳನ್ನು ದಿಟ್ಟವಾಗಿ ಎದುರಿಸಿದರು. ನ್ಯೂಜಿಲೆಂಡ್ ದಾಳಿಯನ್ನು ಮೆಟ್ಟಿ ನಿಂತರು ಅದರ ಫಲ ಈಗ ಇಂಗ್ಲೆಂಡ್ ತಂಡ ವಿಶ್ವ ಚಾಂಪಿಯನ್…
ಬೆನ್ ಸ್ಟೋಕ್ಸ್ ಯಾರು ಅಂತಾ ಕ್ರಿಕೆಟ್ ಪ್ರಿಯರಿಗೆ ಪರಿಚಯ ಮಾಡಿಕೊಡುವುದು ನಿಜಕ್ಕೂ ಸಮಯ ವ್ಯರ್ಥ. ಐಪಿಎಲ್ನಿಂದ ವಿಶ್ವಕಪ್ ಟೂರ್ನಿಯಲ್ಲಿ ಆತ ಹಿಡಿದ ಕ್ಯಾಚ್ಗಳು, ಸಿಡಿಸಿದ ಸಿಕ್ಸರ್ಗಳು, ಪಡೆದ ವಿಕೆಟ್ಗಳು, ಬೆನ್ ಸ್ಟೋಕ್ಸ್ ಅಂದ್ರೆ ದಿ ಗ್ರೇಟ್ ಆಲ್ರೌಂಡರ್ ಅಂತಾ ಸಾರಿ ಸಾರಿ ಹೇಳುತ್ತಿವೆ. ನ್ಯೂಜಿಲೆಂಡ್ ತಂಡ್ ಎದುರಿನ ಫೈನಲ್ ಪಂದ್ಯದ ಅದ್ಭುತ ಬ್ಯಾಟಿಂಗ್ ಸ್ಟೋಕ್ಸ್ ಆಟಗಾರನನ್ನು ಇಂಗ್ಲೆಂಡ್ ಕ್ರಿಕೆಟ್ ಲೋಕದ ಹೀರೋ.. ಇಂತಹ ಬೆನ್ ಸ್ಟೋಕ್ಸ್, ಮೂಲತಃ ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನವರು. ನ್ಯೂಜಿಲೆಂಡ್ ನಲ್ಲಿ ಹುಟ್ಟಿದ ಹುಡುಗನೊಬ್ಬ ಇಂದು ಅದೇ ನ್ಯೂಜಿಲೆಂಡ್ ತಂಡದ ವಿರುದ್ಧ, ಇಂಗ್ಲೆಂಡ್ ತಂಡದ ಪರ ಅಡಿ ವಿಶ್ವ ಚಾಂಪಿಯನ್ ಆಗಿದ್ದು ಇಂಗ್ಲೆಂಡ್ ಕ್ರಿಕೆಟ್ ನ ಸೊಗಬು….

England’s Jofra Archer
ಇಂಗ್ಲೆಂಡ್ ತಂಡದ ನಾಯಕ ಇಂಗ್ಲೆಂಡ್ ದೇಶದವರಲ್ಲ. ಇಯಾನ್ ಮಾರ್ಗನ್ ಐರ್ಲೆಂಡ್ ಪ್ರಜೆ. ಐರಿಶ್ ಆಟಗಾರ. ಐರ್ಲೆಂಡ್ ತಂಡದಿಂದ್ಲೇ ಇಯಾನ್ ಮಾರ್ಗನ್, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ರು. ಅದು ಇಂಗ್ಲೆಂಡ್ ತಂಡದ ವಿರುದ್ಧವೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಡಿದ್ರು. ಆದ್ರೆ, ಐರ್ಲೆಂಡ್ ತಂಡದ ಪ್ರತಿಭೆಯಾಗಿದ್ದ ಇಯಾನ್ ಮಾರ್ಗನ್, ಅಂತಿಮ ಗುರಿ ಇಂಗ್ಲೆಂಡ್ ತಂಡದ ಜರ್ಸಿಯಲ್ಲಿ ಕ್ರಿಕೆಟ್ ಜಗತ್ತನ್ನು ಗೆಲ್ಲೋದೇ ಆಗಿತ್ತು. ಅದು ಇಂದು ಈಡೇರಿದೆ. ಇಂಗ್ಲೆಂಡ್ ವಿರುದ್ಧವೇ ಬ್ಯಾಟ್ ಬೀಸಿದ್ದ ಆಟಗಾರನೊಬ್ಬ ಅದೇ ಇಂಗ್ಲೆಂಡ್ ತಂಡದ ನಾಯಕನಾಗಿ, ಇಂಗ್ಲೆಂಡ್ ತಂಡಕ್ಕೆ ವಿಶ್ವ ಚಾಂಪಿಯನ್ ಪಟ್ಟ ದೊರಕಿಸಿಕೊಟ್ಟ ಸೋಜಿಗವೊಂದು ಘಟಿಸಿದೆ.
ಆಟವನ್ನು ದೇಶಭಕ್ತಿಯಲ್ಲಿ ತಕ್ಕಡಿಯಲ್ಲಿ ತೂಗುವ, ಕ್ರಿಕೆಟ್ ಆಟವನ್ನು ರಾಷ್ಟ್ರೀಯತೆ ಕಿಂಡಿಯಿಂದ್ಲೇ ಇಣುಕುವ ಬಹುತೇಕ ಭಾರತೀಯರಿಗೆ ಇದು ಕಸಿವಿಸಿ ಉಂಟು ಮಾಡಬಹುದು. ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್, ‘ಗಾಡ್ ಸೇವ್ ದಿ ಕ್ವೀನ್’ ಎನ್ನುವ ಇಂಗ್ಲೆಂಡ್ ರಾಷ್ಟ್ರಗೀತೆಯನ್ನು ಹಾಡಲ್ಲ. ‘ನಾನು ಯಾಕೆ ಇಂಗ್ಲೆಂಡ್ ರಾಷ್ಟ್ರಗೀತೆಯನ್ನು ಹಾಡಲ್ಲ ಅನ್ನೋದು ನನ್ನ ವೈಯಕ್ತಿಕ ನಿರ್ಧಾರ’ ಅಂತಾ ಮಾರ್ಗನ್ ಸ್ಪಷ್ಟವಾಗಿ ಹೇಳ್ತಾರೆ. ಮಾರ್ಗನ್ ತಮ್ಮ ದೇಶದ ರಾಷ್ಟ್ರಗೀತೆಯನ್ನು ಹಾಡುತ್ತಾರೋ ಇಲ್ಲೋ ಅನ್ನೋದು ಇಂಗ್ಲೆಂಡಿಗರಿಗೂ ಬೇಕಿಲ್ಲ. ಕ್ರಿಕೆಟ್ಗೆ ಜನ್ಮ ಕೊಟ್ಟ ಭೂಮಿಯ ಜನರಿಗೆ ಬೇಕಿರೋದು, ಇಯಾನ್ ಮಾರ್ಗನ್ ಚೆನ್ನಾಗಿ ಕ್ರಿಕೆಟ್ ಆಡ್ತಾರೋ ಇಲ್ವೋ ಅನ್ನೋದು ಮಾತ್ರ. ಇದಕ್ಕೆ ಸಾಕ್ಷಿ, ಐರಿಶ್ ಪ್ರಜೆಯೊಬ್ಬ, ಇಂಗ್ಲೆಂಡ್ ರಾಷ್ಟ್ರಗೀತೆಯನ್ನೂ ಉಚ್ಚರಿಸದ ಆಟಗಾರನೊಬ್ಬ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡದ ನಾಯಕ ಅನ್ನೋದು.
ಜೇಸನ್ ರಾಯ್, ಈತನೊಬ್ಬ ಆರಂಭಿಕ ಆಟಗಾರ ಇಂಗ್ಲೆಂಡ್ ತಂಡಕ್ಕೆ ವಾಪಸ್ ಆಗದೆ ಹೋಗಿದ್ರೆ ಬಹುಶಃ ಇಂಗ್ಲೆಂಡ್ ಇಂದು ಚಾಂಪಿಯನ್ ಆಗುತ್ತಿರಲಿಲ್ಲ. ಇತಿಹಾಸ ಸೃಷ್ಟಿಯೂ ಆಗುತ್ತಿರಲಿಲ್ಲ. ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಎದುರಿನ ಸತತ ಎರಡು ಪಂದ್ಯಗಳಲ್ಲಿ ಸೋತಿದ್ದ ಇಂಗ್ಲೆಂಡ್, ವಿಶ್ವಕಪ್ ಟೂರ್ನಿಯಿಂದ ಹೊರಬೀಳೋ ಭೀತಿಗೆ ಸಿಲುಕಿತ್ತು. ಮುಂದಿನ ಎರಡು ಪಂದ್ಯಗಳು ಅಂದ್ರೆ ಭಾರತ ಮತ್ತು ನ್ಯೂಜಿಲೆಂಡ್ ಎದುರಿನ ಕೊನೆಯ ಎರಡು ಪಂದ್ಯಗಳನ್ನು ಇಂಗ್ಲೆಂಡ್ ಗೆಲ್ಲಲೇಬೇಕಾದ ಅನಿರ್ವಾಯತೆ ಸಿಲುಕಿತ್ತು. ಭಾರತದ ವಿರುದ್ಧದ ಪಂದ್ಯದಲ್ಲಿ, ಜಾನಿ ಬೆಸ್ಟೋ ಜೊತೆ ಇನ್ನಿಂಗ್ಸ್ ಆರಂಭಿಸಿದ ಜೇಸನ್ ರಾಯ್, ಆಡಿದ ಆಟವನ್ನ ಕ್ರಿಕೆಟ್ ಜಗತ್ತು ಮರೆಯೋಕೆ ಸಾಧ್ಯಾನಾ?
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಜೇಸನ್ ಆಟ, ಕಳೆಗಟ್ಟಿತ್ತು. ಸತತ ಎರಡು ನಿರ್ಣಾಯಕ ಪಂದ್ಯಗಳಲ್ಲೂ ಜೇಸನ್ ರಾಯ್ ಅದ್ಭುತವಾಗಿ ಬ್ಯಾಟ್ ಬಿಸಿದ್ರು. ಇನ್ನು ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಬೌಲರ್ಗಳನ್ನು ಜೇಸನ್ ರಾಯ್ ದಂಡಿಸಿದ ರೀತಿಯನ್ನು ಮರೆಯೋದುಂಟಾ? ಸೆಮಿಫೈನಲ್ನಂತಹ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್ಗಳ ದಾಳಿಯನ್ನು ಜೇಸನ್ ರಾಯ್ ಅವರಷ್ಟು ಸಮರ್ಥವಾಗಿ ಮೆಟ್ಟಿನಿಂತ ಬ್ಯಾಟ್ಸ್ಮನ್ ಬೇರೆ ಇಲ್ಲವೇನೋ? ಮಿಚೆಲ್ ಸ್ಟಾರ್ಕ್ ಎಸೆದ ಶಾರ್ಟ್ ಪಿಚ್ ಎಸೆತಗಳನ್ನು ಜೇಸನ್ ರಾಯ್, ಬೌಂಡರಿ ಗೆರೆ ದಾಟಿಸಿದ ರೀತಿ ಅಮೋಘ. ಅಂದಹಾಗೆ, ಜೇಸನ್ ರಾಯ್ ಮೂಲತಃ ಇಂಗ್ಲೆಂಡ್ ದೇಶದವರಲ್ಲ. ಜೇಸನ್ ರಾಯ್ ಮೂಲತಃ ದಕ್ಷಿಣ ಆಫ್ರಿಕಾದ ಪ್ರತಿಭೆ.. ಜೇಸನ್ ರಾಯ್ 10 ವರ್ಷದವರಿದ್ದಾಗ, ಇಂಗ್ಲೆಂಡ್ಗೆ ವಲಸೆ ಬಂದಿದ್ದರು.
ಇವರ ಜೊತೆಗೆ ಇಂಗ್ಲೆಂಡ್ ತಂಡದಲ್ಲಿ ಮಿಂಚುತ್ತಿರುವ ಆದಿಲ್ ರಶೀದ್ ಮತ್ತು ಮೊಯಿನ್ ಅಲಿ ಎನ್ನುವ ಅದ್ಭುತ ಆಟಗಾರರು ಪಾಕಿಸ್ತಾನದ ಮೂಲದವರು. ಇಂಗ್ಲೆಂಡ್ ತಂಡದ ಮತ್ತೊಬ್ಬ ಆಟಗಾರ ಟಾಮ್ ಕರ್ರನ್, ದಕ್ಷಿಣ ಆಫ್ರಿಕಾದವರು. ದೇಶ, ದೇಶಭಕ್ತಿ, ಬಣ್ಣ, ಧರ್ಮಗಳ ಸಂಕೋಲೆಗೆ ಸಿಲುಕದೆ ಇಂಗ್ಲೆಂಡ್, ಈ ಎಲ್ಲಾ ಪ್ರತಿಭೆಗಳಿಗೆ ತನ್ನ ಕ್ರಿಕೆಟ್ ತಂಡದಲ್ಲಿ ಸ್ಥಾನ ನೀಡಿದೆ. ನಿಜದ ಅರ್ಥದಲ್ಲಿ ವಿಶ್ವದ ಚಾಂಪಿಯನ್ ಆಗಿದೆ. ಆಟವನ್ನು ದೇಶಭಕ್ತಿಯ ಅಸ್ತ್ರವಾಗಿಯೋ, ಯುದ್ಧದ ಪ್ರತಿರೂಪವಾಗಿಯೋ? ರಾಷ್ಟ್ರದ ಪ್ರತಿಷ್ಠೆಯ ಸಂಕೇತವಾಗಿಯೋ ನೋಡುವ ರೋಗಗ್ರಸ್ಥ ಮನಸ್ಸುಗಳಿಗೆ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ನಿಜಕ್ಕೂ ಔಷಧಿ.
(ಇದರ ಜೊತೆಗೆ ಫ್ರಾನ್ಸ್ ಎನ್ನುವ ಫುಟ್ಬಾಲ್ ಚಾಂಪಿಯನ್ ದೇಶದ ಕಥೆಯನ್ನು ನಿಮಗೆ ಹೇಳಲೇಬೇಕು. ಫ್ರಾನ್ಸ್ ದೇಶ ಫುಟ್ಬಾಲ್ ಜಗತ್ತಿನ ಚಾಂಪಿಯನ್ ಆದ ಕಥೆ ನಿಜಕ್ಕೂ ಅದ್ಭುತ.. ಮತ್ತೊಂದು ಸಾರಿ ಅದನ್ನೂ ಬರೆಯುತ್ತೇನೆ.)






0 Comments