ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂದಿಗೂ.. ಇಂದಿಗೂ..

ಅಡುಗೆ ಮನೆಗೆ ಒಂದೇ ಕಿಟಕಿ

ಸದಾಶಿವ ಸೊರಟೂರು

ಶಹರ ಬೆಳಕಿನ ಬಾಗಿಲಿಕ್ಕೊಂಡು
ಹೋಗಿ
ನಕ್ಷತ್ರಗಳನ್ನು ಹಾಸಿಕೊಂಡರೂ
ಅಡುಗೆ ಮನೆಯ
ಕದ ತೆರೆದೇ ಇದೆ..

ರಸ್ತೆಗಳು ತಣ್ಣಗಿವೆ ಮರೆತು
ಗಾಲಿಯ ಸದ್ದೂ
ಈ ತರಕಾರಿಗಳದೆ ವರಾತ
ಎಂದು ನಿಲ್ಲುವುದೊ
ಈ ಮಿಕ್ಸಿ ಗ್ರೆಂಡರ್ ಗಳ ಕಾಟ..

ಹಗಲಿನ ಬದುಕಿಗೆ
ನಡೆಯುತ್ತದೆ
ಇಲ್ಲೇ ತಾಲಿಮು
ಬೇಕು ಬೇಡಗಳ ಪಟ್ಟಿ
ಬೆನ್ನು ನೋವು ತಿಂಗಳ ಮುಟ್ಟು
ಕರೆದು ಕಳಿಸುವ
ಗೋಳು
ಉಳಿದದ್ದೆ ತಿನ್ನುವ ಬಾಳು..

ಈ ಅಡುಗೆ ಮನೆ ಯಾಕೆ ಮಲಗುವುದಿಲ್ಲ..
ಕಾಫಿಯಿಂದ ಹಿಡಿದು
ಉಳಿದು ಸಾರು ಉಕ್ಕಿಸುವವರೆಗೂ
ಸದಾ ಗಿಜಿಗಿಜಿ
ಅರೆಕ್ಷಣವಾದರೂ ಮಲಗಿದ್ದರೆ
ನಾನೂ ಎಲ್ಲಾ
ತೊರೆದು ಬುದ್ದನೊ ಬಸವನೊ
ಆಗಿ ಬಿಡುತ್ತಿದ್ದೆ..

ಇಲ್ಲಿಂದ ಹಾಲ್.. ಅಲ್ಲಿಂದ ವರಾಂಡ
ಬಾಗಿಲು ತೆರೆದರೆ ಅಂಗಳ
ಹದಿನಾರು ಚುಕ್ಕಿಯ ರಂಗೋಲಿ
ಒಳಗೆ ಬಂದರೆ ಕೈ ಬೀಸುವ ಬಾಲ್ಕಾನಿ..
ಆಹಾ
ನೋಡಿ ನನ್ನದು ಎಷ್ಟು ದೊಡ್ಡ ಜಗತ್ತು..

ಹಾಂ,
ಎಲ್ಲಾ ಮುಗಿಸಿ ಬಟ್ಟಲು ಕಾಫಿ
ಹಿಡಿದು ಕೂತಾಗ
ದಿಗ್ಗನೆ ನೆನಪಾಗುತ್ತದೆ
ಫ್ರಿಡ್ಜಿನಲ್ಲಿ ನಿನ್ನೆ ಇಟ್ಟ ಮಲ್ಲಿಗೆ..

ಮಲ್ಲಿಗೆ ಮುಡಿದು ನಾನು ನಾಚಬೇಕಿತ್ತು
ಆದರೆ ಈಗ ಅದು ನನ್ನ ನೋಡಿ ನಗುತ್ತದೆ..

ತಂಪಾಗಿ ಇಟ್ಟ ಮಲ್ಲಿಗೆ ಇರುತ್ತದೆ
ಹಾಗೆ
ಬೆಳಗ್ಗೆಯಷ್ಟೆ ಬಿಡಿಸಿಟ್ಟಂತೆ
ಎಷ್ಟು ದಿನವಿಟ್ಟರೂ;
ನನ್ನ ಹಾಗೆ..!

ಇದನ್ನು ನಾನು ಮುಡಿಯಲಿಲ್ಲ
ಅವನು
ನನ್ನ ಮೂಡಿಯಲಿಲ್ಲ
ಮಿಕ್ಸಿಯೂ ತಿರುಗುತ್ತದೆ
ಭೂಮಿಯ ತಿರುಗುತ್ತದೆ
ಅಡುಗೆ ಮನೆಗೆ ಮಾತ್ರ ಒಂದೇ ಕಿಟಕಿ
ಅಂದಿಗೂ
ಇಂದಿಗೂ

‍ಲೇಖಕರು Admin

28 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading