ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂತೆ ಕಂತೆ..

ಪಿ ಬಿ ಪ್ರಸನ್ನ

ಕನಸು ಕಾಣಬೇಕಂತೆ ದಿವ್ಯ

ಸಾಧಾರಣವಲ್ಲ ಭವ್ಯ

ಕಾವ್ಯ ಕಟ್ಟುವ

ಒಂದೊಮ್ಮೆ ಕಪ್ಪು ಬಿಳುಪಿನ

ಕನಸು ಕಂಡರೂ

ಅವ ಬಣ್ಣಗಳ ಬಳಿಯುವನಂತೆ

 

ಆಗಾಗ ಹೊಸೆಯಬೇಕಂತೆ

ಅವ ಮೆಚ್ಚುವ ಕಾವ್ಯ

ಇರದೆ ಒಂದೇ ಒಂದು

ಅಪಶಬ್ದ

ಹೊಂದಿಸಲು ಆಗುವಂತೆ ರಾಗ ಸರಾಗ

ಕೂಡುವಂತೆ ತಾಳ ಮೇಳ

ಸರ್ವಾಧಿಕಾರಿಯ ಹೂವಿನಂಥ ಫರ್ಮಾನು !

 

ತಡೆಯಿರಿ ಕೊಂಚ

ಹಾಗೆಂದ ಮಾತ್ರಕ್ಕೆ

ಗೆರೆಯ ಮೀರಿ

ಎಲ್ಲರೊಳಗೆ ಒಂದಾಗುವಂತಿಲ್ಲ

ದೇಹವನಷ್ಟೇ ಕೊಂಚ  ಬಾಲ್ಕನಿಯಲಿ ತೋರಿ

ಅವರಿವರಿಗೆ ಮುಖಾ ಮುಖಿಯಾಗಿ

ಮತ್ತೆ ಪುಸಕ್ಕನೆ ಒಳಗೇ ಕೂತು

ಕವಿತೆಗೆ ಕಾವು ಕೊಡುತ್ತಿರಬೇಕಂತೆ

 

ಕನಸ ಕಾಣುತ್ತ ಕವಿತೆ ಬರೆಯಲು

ಕಣ್ಣ ಮುಚ್ಚಿದೆ

ಹಾಲಲಿ ಅದ್ದಿದ ಬಟ್ಟೆ ಚುಂಗನು

ಚೀಪುತ್ತ ಪೈಪಿನಲಿ ಮಗು ಮಲಗಿದೆ

ಲಾಲಿ ಹಾಡುವವರಿಲ್ಲ

 

ಗಂಜಿಗೆ ಕುದಿವ

ರೊಟ್ಟಿಗೆ ಸುಡುವ

ಜೀವಗಳು ಪಾಳಿ ಹಚ್ಚಿದ್ದಾವೆ

 

ತಮ್ಮ ಠಾವನು ಮರೆತು

ಮತ್ತೊಂದು ಗೂಡ ಕಾಣದೇ

ಅರಮನೆಯ ಬಾಗಿಲ ಬಳಿಯೇ

ಜೀವಗಳು ಅಡ್ಡವಾಗಿವೆ

 

ಸಲೀಸು ಬತ್ತಲಾಗುತ್ತವೆ ಅವು

ಒಂದು ಸಣ್ಣ ಇಷಾರೆಗೆ

 

ಅಲ್ಲ

ಅವು ಯಾವುವೂ ಪಾಡಲ್ಲವಂತೆ

ಅವರೇ ಕೆರಕೊಂಡು ಎಬ್ಬಿಸಿದ  ಗುಳ್ಳೆಗಳಂತೆ

ಗುಳ್ಳೆಯೆದ್ದ ಮೇಲೆ ಕೀವು

ನೋವು ಆಮೇಲೆ ಸಾವು

ಸಹಜವೇ ಅಂತೆ

 

ತಲೆಕೆಡಿಸಿಕೊಳ್ಳಬೇಡಿ

ಕನಸು ಕಾಣಿ

ಎನ್ನುತ್ತಲೇ ಇದ್ದಾನೆ ಸರ್ವಾಧಿಕಾರಿ

 

ಸಾಯಲಿ

ನನಗೆ  ನಿದ್ದೆಯೇ ಬರುವುದಿಲ್ಲ  !

‍ಲೇಖಕರು avadhi

12 May, 2020

1 Comment

  1. Prakash B L

    ಸರ್ಪ, ಪದ್ಯಗಳ ಸಾಲುಗಳು ಒತ್ತಾಗಿರಲಿ. ಒಂದು ನುಡಿಯ (stanza ) ನಂತರ space ಇಟ್ಟರಾಯಿತು. ಅಲ್ಲವೇ ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading