ಕತ್ತಲೆ-ಬೆತ್ತಲೆ (ದೀಪಾವಳಿ-ನರಕಾಸುರ ಬಲಿ)

ಅನಿಲ್ ತಾಳಿಕೋಟೆ/ ನಾರ್ಥ್ ಕ್ಯಾರೊಲಿನ, USA
ಕತ್ತಲೆ ಬೆತ್ತಲೆ ಇರುವದೇ ಬೈ ಡಿಸೈನು
ಬೆಳಕೇಕೆ ಬೇಕು? ಕತ್ತಲೊದ್ದೋಡಿಸಲು
ಬಟ್ಟೆ ಏಕೆ ಬೇಕು -ಬೆತ್ತಲು ಮುಚ್ಚಿಡಲು
ಈಗೆಲ್ಲಾ ಉಲ್ಟಾ-ಪಲ್ಟಾ
ಬೆಳಕು ಬೇಕು – ಹೊನಲು-ನೆರಳಿನಾಟಕ್ಕೆ,
ಷಟರ್ರು, ಬ್ಲೈಂಡು, ಕರ್ಟನ್, ಮೆಶ್ ಗಳಿಂದ
ಮುಚ್ಚಿದ ಕಿಟಕಿಗಳ ತೂರಿ ಬರಲಾಗದ
ಸೊರಗಿದ ಸೂರ್ಯ ಕಿರಣಕ್ಕೆ-
ಉದ್ದಾನುದ್ದುದ್ದ ಕಾಂಕ್ರೀಟ್ ಕಟ್ಟಡಗಳ
ಏರಲಾಗದೆ ಬಸವಳಿದ ಬೆಳಕ ಮಣಿಸಲು.
ಕತ್ತಲು ಹುಡುಕಲು ಹೊರಡಬೇಕಿಗ ಶಹರಗಳಾಚೆ
ದಟ್ಟ ಕಾಡಿನ ಗಟ್ಟಿ ಗವಿಗಳಡಿಗೆ, ಗರ್ಭಗುಡಿಗಳೆಡೆಗೆ
ಬೆತ್ತಲು ಹುಡುಕಲು ನುಗ್ಗಬೇಕು ಶಹರಗಳ
ನಡುಮಧ್ಯಕ್ಕೆ ಹೈ ಕ್ಲಾಸು ಬಾರು, ಕುಣಿತಗಳಂಗಳಕ್ಕೆ
ಎಲ್ಲರೂ ಹೆರುವವರೆ ಆದರೆ ದಾದಿಯರೆಗೆಲ್ಲಿ ಬೆಲೆ?
ಕಮೆಂಟು, ಲೈಕುಗಳ ದಾಂಡಿಗರಲ್ಲಿ ಪ್ರೇಕ್ಷಕ ಬಲಿಪಶು.
ಮತ್ತೆ ಬಂದಿದೆ ದೀಪಾವಳಿ-ನರಕಾಸುರ ಬಲಿ!
ಕತ್ತಲೆ ಓಡಿಸಿದ್ದೇವೆ ನವ ನಗರಗಳಿಂದ, ನರ ನರರಿಂದ
ಹೌದೇ?
ಅಲ್ಲ!
ಕತ್ತಲು-ಬೆತ್ತಲು ಬೈ ಡಿಸೈನು-ಓಡಿಸಲಾರೆವವನ್ನು
ಇಲ್ಲಿಂದ ಒಯ್ದು ಅಲ್ಲಿ ಚೆಲ್ಲಿ
ಅಲ್ಲಿಂದ ತಂದು ಇಲ್ಲಿ ಸುರಿದು
ಅಂತೂ ಇಂತೂ ದೀಪ ಹಚ್ಚಿ
ಕತ್ತಲ ಕಲ್ಪಿಸಿ ಕೊಂದು
ಹಚ್ಚಿ ಸುರ್ ಸುರ ಬತ್ತಿ
ಬೆಳಕಿನ ಮತ್ತೊಂದು ಮಗ್ಗುಲು ಕಂಡು
ಬೆರಗಾಗೋಣ-ಬೇರೆ ದಾರಿ ಇಲ್ಲ.
ಕಾಲ ತಳ್ಳುವ ಜಾಲದ ಬಂಧಿ ಬಿಂದುಗಳು ನಾವು-ನೀವೆಲ್ಲ
ಆದರೂ ಸಾಧ್ಯವೇನೋ ಬಿಂದುಗಳೆಲ್ಲಾ
ಬಂಧುಗಳಾಗಿ ಒಂದೊಂದಾಗಿ ಕೈ ಬೆಸೆದು ನೇರಾನೇರ
ರೇಖೆಗಳಾಗಿ ಬಂಧ ಕಳಚಿ ನೆಗೆಯಲಾಕಾಶಕ್ಕೆ
ಅದಕ್ಕಾಗಿಯಾದರೂ ಬೇಕೆ ಬೇಕು ವರುಷ ವರುಷ
ದೀಪಾವಳಿಯ ಸಡಗರ ಸದಿಚ್ಚೆ ಅನವರತ!





“ಕಾಲ ತಳ್ಳುವ ಜಾಲದ ಬಂಧಿ ಬಿಂದುಗಳು ನಾವು-ನೀವೆಲ್ಲ
ಆದರೂ ಸಾಧ್ಯವೇನೋ ಬಿಂದುಗಳೆಲ್ಲಾ” – ತುಂಬಾ ಚೆನ್ನಾಗಿದೆ