ವಿ ಚಲಪತಿ
ಎಲ್ಲಿಂದಲೋ ಬಂದವರು ಎದೆಯ ಸೀಳಿ
ರಕ್ತಚೆಲ್ಲಿ ಮಾಯವಾಗಿ ಹೋದರು
ಉದರ ವಾಸ್ತವಕೆ ಏಣಿ ಹಾಕಿ ರಂಗೋಲಿ
ಬಿಡಿಸುವ ಮುನ್ನವೇ ಚುಕ್ಕೆಗಳನ್ನು
ಒಂದೊಂದಾಗಿ ಹೆಕ್ಕಿ ಹೋದರು
ವಿಧಿಯಾಟಕ್ಕೂ ಲೋಕದ ನಾಟಕಕ್ಕೂ
ಬೆರಗಾಗದೇ ದಿನ ಎಣಿಕೆ ಮತ್ತಿಗೆ
ಹುಚ್ಚೆಬ್ಬಿಸಿ ತೆರೆದಷ್ಟೂ ಮೆರೆದು
ಬಾ ಎಂಬ ಬಂಧನಗಳ ಕೊಲೆ ಮಾಡಿ
ಕಣ್ಣಿನ ರೆಪ್ಪೆಗೆ ಬೀಗ ಜಡಿದು ಹೋದರು
ಸಾವೇ ಕೊನೆಯೆಂದು ತಿಳಿದ ಅತೃಪ್ತ
ಮನಗಳ ಕೊರಳಿಗೆ ಉರುಳು ಬಿಗಿದು
ತೃಪ್ತಿಯೆಂಬ ಮೆದು ಟೊಂಗೆಯ ತೋರಿಸಿ
ಸತ್ತ ಕನಸುಗಳ ದಾರಿಗೆ ಮಣ್ಣೆರಚಿ
ಮತ್ತೆಂದೂ ಬಾರದಂತೆ ಮೆರೆದು ಹೋದರು
ಇಲ್ಲೊಬ್ಬ ರಾಮಾಯಣದ ಮೆಟ್ಟಿಲತ್ತಿ
ಮಹಾಭಾರತದೊಳಗೆ ಇಳಿಯುವ ಮುನ್ನವೇ
ಕಲಿಯುಗದ ಕಾಲವನ್ನು ಕಳೆದುಕೊಂಡ
ಇವ ತನ್ನಿಂದ ಎಲ್ಲವ ಕಳೆದುಕೊಳ್ಳುವುದ
ನೋಡಿಯೇ ಇನ್ನೆಷ್ಟೋ ಮಂದಿ ಕಾಲದ
ಜೊತೆ ಕೇಕೆ ಹಾಕಿ ಹೋದರು
ಹುಚ್ಚನ ಕನಸುಗಳಲಿ ತಮ್ಮ ಜೋಳಿಗೆ
ತುಂಬಿಸುವವರ ನಡುವೆ ಚಿಂದಿ ಆಯುವವನ
ಹೊಟ್ಟೆಯ ಬಟ್ಟಲಲಿ ಪ್ರತಿಬಿಂಬಿಸಿದ
ಚಂದ್ರನ ಚೂರಿಗೂ ಚೂರಿ ಹಾಕುವವರ
ನೋಡಿ ಇನ್ಯಾರೋ ಮೌನದಲಿ ಹಾದು ಹೋದರು
ನವಿಲುಗರಿಯ ಕಣ್ಣುಗಳಲಿ ಕಣ್ಣೀರನ್ನು
ಹುಡುಕುವವರ ಕಣ್ಣೀರಿಗೂ ಗೊತ್ತಾಗಲಿಲ್ಲ
ತನ್ನವರ ಕಣ್ಣಲಿ ಮುಸಲಧಾರೆಯಂತೆ
ಹರಿದ ಕಣ್ಣೀರಿನ ಮರ್ಮದೊರೆತೆಯು
ಮತ್ತ್ಯಾರೋ ಇದನ್ನೆನೆದು ಕಣ್ಣೀರಾಕಿ ಹೋದರು
ಎಲ್ಲವೂ ಇಲ್ಲದೇ, ಇಲ್ಲದೇ ಎಲ್ಲವೂ
ಸಾಗುವ ಅರೆಕ್ಷಣಗಳ ನಡುವೆ
ನಾವೆಲ್ಲಾ ಇದ್ದೇವೆ, ಇದ್ದೇವೆ ಅಷ್ಟೇ
ಹಾಗಿದ್ದು ಎಂತೆಂತವರೋ ಇದ್ದಿರಬೇಕು
ಅಂತವರ ನಡುವೆ ಇಂತವರು ಇದ್ದಿರಬೇಕು






Wow!!! Splendid… absolute treat….. Thank you so much for sharing
Tq